ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಗಾನ ಯಾನದಲ್ಲಿ...

Last Updated 17 ಮಾರ್ಚ್ 2020, 11:31 IST
ಅಕ್ಷರ ಗಾತ್ರ

ಹಾಡೆಂದರೆ ಪುಟ್ಟಪ್ಪನವರಿಗೆ ಪ್ರೀತಿ... ಯಾವುದೇ ಸಮಾರಂಭದಲ್ಲಿ ಜಾನಪದ ಗಾಯಕ ಬಸವಲಿಂಗಯ್ಯ ಇದ್ದರೆ ಒಂದು ಹಾಡು ಹಾಡುವಂತೆ ಆಗ್ರಹಿಸುತ್ತಿದ್ದರು. ಪುಟ್ಟಪ್ಪನವರು ಆಗ್ರಹಿಸಿದರೆ ಅಷ್ಟೇ ಪ್ರೀತಿಯಿಂದ ಹಾಡುತ್ತಿದ್ದರು ಬಸವಲಿಂಗಯ್ಯ. ಹಾಡು ಮುಗಿಯುತ್ತಿದ್ದಂತೆ ಹತ್ತಿರ ಕರೆದು ಬೆನ್ನ ಮೇಲೆ ಕೈಯಾಡಿಸಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಇದೊಂದು ಅಪರೂಪದ ಬಾಂಧವ್ಯ.

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸುತ್ತ ಬಂದಿದ್ದ ಬಹುತೇಕ ಎಲ್ಲ ಹೊರನಾಡು ಕನ್ನಡಿಗರ ಸಮ್ಮೇಳನದಲ್ಲಿ ಬಸವಲಿಂಗಯ್ಯ ಮತ್ತು ನಾನು ಪಾಲ್ಗೊಳ್ಳತ್ತಲೇ ಬಂದಿದ್ದೇವೆ. ಅವರು ಪ್ರಯಾಣವನ್ನು ಅನುಭವಿಸುತ್ತಿದ್ದ ಪರಿ ಅನನ್ಯ.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹತ್ವದ ಕಾರ್ಯಕ್ರಮವೆಂದರೆ ‘ಹೊರನಾಡು ಕನ್ನಡ ಸಮ್ಮೇಳನ’. ನಾಲ್ಕು ಸಮ್ಮೇಳನಗಳಿಗೆ ಅವರೊಂದಿಗೆ ರೈಲು ಪ್ರಯಾಣದ ನೆನಪಿನ ಬುತ್ತಿ ಯಾವಾಗ ಬಿಚ್ಚಿದರೂ ರುಚಿಕರ. ದೆಹಲಿ, ಕಾಶಿ, ಮುಂಬೈ, ಪುದುಚೆರಿ ಮತ್ತು ಅಕ್ಕಲಕೋಟೆ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇವೆ. ರೈಲಿನಲ್ಲಿ ನಮ್ಮ ಹಾಡು, ಚರ್ಚೆ ಇವೆಲ್ಲ ಪ್ರಯಾಣದುದ್ದಕ್ಕೂ ನಡೆಯುತ್ತಲೇ ಇರುತ್ತಿದ್ದವು. ಸಂಪ್ರದಾಯ, ಸೋಬಾನೆ, ಬೀಸುಕಲ್ಲು, ಜೋಗುಳ ಹಬ್ಬದ ಹಾಡುಗಳ ಜೊತೆ ಗೀಗೀ-ಲಾವಣಿ, ತತ್ವಪದ, ರಂಗ ಗೀತೆ, ಭಕ್ತಿ ಗೀತೆಗಳು, ಭಾವ ಗೀತೆಗಳು ಮತ್ತು ಇಡೀ ಜಾನಪದ ರಂಗಭೂಮಿಯ ದೊಡ್ಡಾಟ ಸಣ್ಣಾಟಗಳಸಂಗೀತದೊಂದಿಗೆ ಅವರನ್ನು ರಂಜಿಸುವುದಷ್ಟೇ ಅಲ್ಲ ಇಡೀ ಬೋಗಿಯಲ್ಲಿಯ 100 ಜನ ಕೇಳುವಂತೆ ಹಾಡುವ ಕಂಠ ನನ್ನ ಪತಿ ಬಸವಲಿಂಗಯ್ಯನವರದ್ದು.

ನಾನು ಹಾಡುವ ಸೋಬಾನೆ ಹಾಡಿಗೆ ನನ್ನ ಮತ್ತು ಬಸಲಿಂಗಯ್ಯ ಅವರನ್ನು ಮದುಮಕ್ಕಳನ್ನಾಗಿ ಮಾಡಿದ ಘಟನೆ ಇನ್ನು ನೆನಪಿನಲ್ಲಿದೆ.ದೂರದರ್ಶನದ ನಿರ್ಮಲಾ ಎಲಿಗಾರ, ಮಲ್ಲಿಕಾ ಘಂಟಿ, ಶಶಿಕಲಾ ವಸ್ತ್ರದ ಮತ್ತು ವಿದ್ಯಾವರ್ಧಕ ಸಂಘದ ಎಲ್ಲ ಸಿಬ್ಬಂದಿ ಸೇರಿ ಇಂಥದೊಂದು ದೃಶ್ಯಕ್ಕೆ ಕಾರಣರಾಗಿದ್ದರು. ಪುಟ್ಟಪ್ಪನವರು ಅದನ್ನು ಮನತುಂಬಿ ಅನುಭವಿಸಿದ್ದರು.

ಒಮ್ಮೆ ಹೀಗೆ ಪ್ರಯಾಣ ಮಾಡುತ್ತಿದ್ದಾಗ ಬಸವಲಿಂಗಯ್ಯ ಕುರುಡ ಭಿಕ್ಷುಕನಾಗಿ, ಇನ್ನೊಬ್ಬರು ಅವರ ಕೈ ಹಿಡಿದುಕೊಂಡು ಹಾಡು ಹಾಡುತ್ತ ಬೋಗಿಯ ತುಂಬ ಅಡ್ಡಾಡಿ ಹಲವರಿಂದ ದುಡ್ಡು ಪಡೆದು ಬಂದಿದ್ದು ಇನ್ನೊಂದು ಮರೆಯಲಾರದ ಪ್ರಸಂಗ.

‘ಬೆಳಗಲಿ ಕಲೆಯ ಕಾಂತಿ ಜಗದಿ ಸುದದಿ ಅರುಣ ಕಿರಣದಂತೆ ಅಮಿತ ಖ್ಯಾತಿಯಲ್ಲಿ ಬೆಳಗಲಿ’ ಎಂಬ ನಾಂದಿ, ಶರೀಫರ ‘ಕೇಳೋ ಜಾನಾ ಶಿವಧ್ಯಾನ ಮಾಡಣ್ಣ ನಿನ್ನೊಳಗ ನೀನು ತಿಳದ ನೋಡಣ್ಣ’ ಹಾಡು, ‘ಹುಲಿಯು ಹುಟ್ಟಿತೋ ಕಿತ್ತೂರ ನಾಡಾಗ’ ಸೇರಿದಂತೆ ಹಲವು ಹಾಡುಗಳನ್ನು ಬಸವಲಿಂಗಯ್ಯ ಅವರಿಂದ ಹಾಡಿಸಿ ಸಂತೋಷಪಡುತ್ತಿದ್ದರು. ‘ನೀನು ಗಂಡನ ಹೆಸರು ಒಡಪು ಕಟ್ಟಿ ಹೇಳಬೇಕು’ ಎಂದು ಒತ್ತಾಯಿಸುತ್ತಿದ್ದರು. ಅಷ್ಟು ಹೇಳುತ್ತಿದ್ದಂತೆ‘ಉಪ್ಪಿಟ್ಟು ಉದರ ಭಾಳ, ಉಳ್ಳಾಗಡ್ಡಿಗೆ ಪದರಭಾಳ,ನಮ್ಮವರ ನೆದರು ನನ್ನ ಮ್ಯಾಲ ಭಾಳಂದ್ರ ಭಾಳ.. ಎಂದು ಹೇಳುತ್ತಿದ್ದಂತೆ ‘ಗಂಡನ ಹೆಸರ ಹೇಳವಾ’ ಅಂತ ಒತ್ತಾಯಿಸುತ್ತಿದ್ದರು.

‘ಬಸಲಿಂಗಯ್ಯ ಹಿರೇಮಠರು ಅಂದರ ಜಾನಪದದ ಎನ್ಸೈಕ್ಲೋಪಿಡಿಯಾ ಇದ್ದಂಗ, ಸುಮಾರು 4 ಸಾವಿರ ಹಾಡು ತಮ್ಮ ಮಸ್ತಕದಾಗ ಇಟ್ಟಗೊಂಡಾರ, ಯಾರದ್ರು ಕೇಳಿದ್ರ ಪಟ ಪಟ ನೋಡುದ್ಲೆ ಹಾಡತಾರ’ ಅಂತ ತುಂಬು ಮನಸ್ಸಿನಿಂದ ಹೊಗಳುತ್ತಿದ್ದರು. ಒಟ್ಟಿನಲ್ಲಿ ಪುಟ್ಟಪ್ಪನವರೆಂದರೆ ಪ್ರೀತಿಯ ಗಣಿ ಅವರು.

- ವಿಶ್ವೇಶ್ವರಿ ಹಿರೇಮಠ, ರಂಗನಿರ್ದೇಶಕಿ ಮತ್ತುವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT