ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ
ನಾವು ನಿಂತ ನೆಲದೊಡಲಲ್ಲಿ ಏನೇನೋ ಕೌತುಕಗಳು ಅಡಗಿರುತ್ತವೆ. ಅವುಗಳನ್ನು ನೋಡಲು ಬರಿಗಣ್ಣು ಸಾಲದು, ಕೆಲವೊಮ್ಮೆ ಇತಿಹಾಸವನ್ನು ಅರಿಯುವ ಕುತೂಹಲಕರ ಮನಸ್ಸು, ಆಸಕ್ತಿಯೂ ಬೇಕಾಗುತ್ತದೆ. ಏಕೆಂದರೆ, ನಾವು ನಿಂತು ನೋಡುವ ಮಡಿಕೇರಿಯ ರಾಜಾಸೀಟ್‌ ಒಡಲು ಕೂಡ ಇಂತಹದೇ ಅಚ್ಚರಿಯನ್ನು ಇಟ್ಟುಕೊಂಡಿದೆ...

ಇತಿಹಾಸಕ್ಕೂ ಮುನ್ನ... ಪಡುವಣದಲ್ಲಿ ತನ್ನೆಲ್ಲ ಚೆಲುವನ್ನು ಚೆಲ್ಲುತ್ತಾ ಸೂರ್ಯ ಜಾರಿ ಹೋಗುತ್ತಿದ್ದಂತೆ, ಅದನ್ನೇ ದಿಟ್ಟಿಸುತ್ತಾ ಕುಳಿತವರಿಗೆ ತಮ್ಮ ಮನಸ್ಸಿನ ಒತ್ತಡಗಳ ಹೊರೆಯನ್ನು ಕೊಂಚವಾದರೂ ಕೆಳಗೆ ಇಳಿಸಿದಂತಹ ಭಾವನೆ. ಮತ್ತೆ ಕೆಲವರಿಗೆ ಸೂರ್ಯಾಸ್ತದ ವರ್ಣದೋಕುಳಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ತವಕ. ಕೆಂಪು ಉಂಡೆಯಂತಾದ ಸೂರ್ಯನನ್ನು ತಮ್ಮ ಮಧ್ಯದಲ್ಲಿರಿಸಿ ಸೆಲ್ಫಿ ಕ್ಲಿಕ್ಕಿಸುವ ಸರ್ಕಸ್‌ ಜೋಡಿಗಳದ್ದು. ಆಕಾಶದ ಅಂಚಿನಲ್ಲಿ ಕಿರಿದಾದ ಸೂರ್ಯನನ್ನು ತಮ್ಮ ಅಂಗೈನಲ್ಲಿ ಹಿಡಿದಂತೆ ಫೋಟೊ ತೆಗೆಸಿಕೊಳ್ಳುವ ಪ್ರಯತ್ನ ಯುವತಿಯರದ್ದು...

ಹೀಗೆ ನೋಡುತ್ತಾ ಹೋದರೆ ಮಡಿಕೇರಿಯ ರಾಜಾಸೀಟ್‌ನ ಅಂಗಳದಲ್ಲಿ ಪ್ರತಿ ಸಂಜೆಯೂ ನಾನಾ ಬಗೆಯ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಸೂರ್ಯ ಮುಳುಗಿ, ಪಡುವಣದ ಹೊಂಬಣ್ಣವನ್ನು ಮನಸಾರೆ ಅನುಭವಿಸಿ, ಬೀಸುವ ಕುಳಿರ್ಗಾಳಿಗೆ ಮೈಯೊಡ್ಡಿ ಕುಳಿತರೆ ಎದ್ದೇಳಲು ಮನಸ್ಸೇ ಆಗದು. ರಾಜಾಸೀಟ್‌ನ ಸೂರ್ಯಾಸ್ತವೇ ಹಾಗೆ. ಪ್ರತಿ ದಿನವೂ ಹೊಚ್ಚ ಹೊಸತು. ಈ ದಿನವಿದ್ದಂತೆ ಮರು ದಿನವಿಲ್ಲ. ಹತ್ತಿಯ ಉಂಡೆಗಳು ದಿಬ್ಬಣ ಹೊರಟಂತೆ ಸಾಗುವ ಬೆಳ್ಮೋಡಗಳ ಚೆಲುವು ಒಂದು ದಿನವಾದರೆ, ಮೋಡಗಳ ಮರೆ ಇಲ್ಲದೇ ನಿಗಿನಿಗಿ ಉರಿಯುವ ನೇಸರ ಮತ್ತೊಂದು ದಿನ. ಇದ್ದಕ್ಕಿದ್ದಂತೆ ಆವರಿಸಿದ ಮಂಜಿನಲ್ಲಿ ಸೂರ್ಯನೇ ಕಳೆದು ಹೋದ ಅನುಭವ ಮಗದೊಂದು ದಿನ. ನಿತ್ಯವೂ ಒಂದೊಂದು ಬಗೆಯ ದೃಶ್ಯವನ್ನು ಅರಳಿಸುವ ಈ ರಾಜಾಸೀಟ್ ಉದ್ಯಾನ ಪ್ರಕೃತಿ ಪ್ರಿಯರನ್ನು ಮೂಕವಿಸ್ಮಿತಗೊಳಿಸುತ್ತದೆ.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಕಾಣ ಸಿಗುವ ಸೂರ್ಯಾಸ್ತದ ಸೊಬಗು
ಚಿತ್ರ: ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಕಾಣ ಸಿಗುವ ಸೂರ್ಯಾಸ್ತದ ಸೊಬಗು ಚಿತ್ರ: ರಂಗಸ್ವಾಮಿ

ಋತುಮಾನಗಳಿಗೆ ತಕ್ಕಂತೆ ತನ್ನದೇ ಆದ ಆಕರ್ಷಣೆಯನ್ನು ಹೊಂದಿರುವ ಈ ಉದ್ಯಾನ ಪ್ರವಾಸಿಗರಿಗೆ ಬಲು ಇಷ್ಟ. ಬೇಸಿಗೆಯಲ್ಲಿ ಕಾಣಸಿಗುವ ಸೂರ್ಯಾಸ್ತ, ಮುಂಗಾರಿನಲ್ಲಿ ‘ಧೋ’ ಎಂದು ಸುರಿಯುವ ಮಳೆಯಲ್ಲಿ ಸೂರ್ಯನನ್ನೇ ಹುಡುಕಬೇಕಾದ ಸ್ಥಿತಿ, ಕೆಲವೊಮ್ಮೆ ಕೈ ಅಳತೆಯಲ್ಲೇ ಸಾಗುತ್ತಿವೆ ಏನೋ ಎಂದೆನ್ನಿಸುವ ಮೋಡಗಳು, ಗುಡುಗುಡಿಸುವ ಶಬ್ದದೊಂದಿಗೆ ಫಳಾರ್‌ ಎನ್ನುವ ಕೋಲ್ಮಿಂಚುಗಳ ಸೊಬಗು.

ವರ್ಷದ ಕೊನೆಯ ದಿನ ಇಲ್ಲಿ ಕಾಲಿಡಲು ಜಾಗವಿಲ್ಲದಂತಹ ಸ್ಥಿತಿ. ಅಪಾರ ಜನಸ್ತೋಮ ಇಲ್ಲಿಗೆ ಬಂದು ಸೂರ್ಯಾಸ್ತವನ್ನು ಕಣ್ಮನ ತುಂಬಿಕೊಳ್ಳುತ್ತಾರೆ. ಈ ಅಪೂರ್ವ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮಧ್ಯಾಹ್ನವೇ ಗುಡ್ಡದ ತುತ್ತತುದಿಯ ಕಲ್ಲುಬೆಂಚಿನ ಮೇಲೆ ಕಾದು ಕುಳಿತುಕೊಳ್ಳುತ್ತಾರೆ. ಜಾಗ ಸಿಗದವರು ತುದಿಯಲ್ಲಿ ನಿಂತು ಅಪೂರ್ವ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆಕಾಶದ ತುತ್ತತುದಿಯಲ್ಲಿ ರಂಗನ್ನು ಚೆಲ್ಲಿ ನೇಸರ ಮುಳುಗುತ್ತಿದ್ದಂತೆ ಎಲ್ಲರೂ ಒಮ್ಮೆಗೆ ಚಪ್ಪಾಳೆ ತಟ್ಟಿ ಹಳೆಯ ವರ್ಷದ ಕಹಿ ಮರೆತು, ಹೊಸ ವರ್ಷವನ್ನು ಹೊಸ ಬಗೆಯಲ್ಲಿ ಸ್ವಾಗತಿಸಲು ಸನ್ನದ್ಧರಾಗುತ್ತಾರೆ.

ಇಷ್ಟೆಲ್ಲಾ ಅನನ್ಯ ದೃಶ್ಯಕಾವ್ಯಗಳಿಗೆ ಸಾಕ್ಷಿಯಾಗುವ ರಾಜಾಸೀಟ್‌ ಉದ್ಯಾನ ನೂರಾರು ಬ್ರಿಟಿಷರ ದೇಹಗಳನ್ನೂ ತನ್ನೊಳಗಿರಿಸಿಕೊಂಡಿದೆ!

ಮಡಿಕೇರಿಯಲ್ಲಿ ಬ್ರಿಟಿಷರ ಗೋರಿಗಳು ಹೂತು ಹೋಗಿದ್ದು ಕಣ್ಮರೆಯಾಗುವ ಹಂತದಲ್ಲಿವೆ. ಚಿತ್ರ: ರಂಗಸ್ವಾಮಿ
ಮಡಿಕೇರಿಯಲ್ಲಿ ಬ್ರಿಟಿಷರ ಗೋರಿಗಳು ಹೂತು ಹೋಗಿದ್ದು ಕಣ್ಮರೆಯಾಗುವ ಹಂತದಲ್ಲಿವೆ. ಚಿತ್ರ: ರಂಗಸ್ವಾಮಿ

ಇತಿಹಾಸದ ಪುಟಗಳಿಂದ...

ಹೌದು, ಪ್ರಕೃತಿಯ ಅದಮ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ನಿಲ್ಲುವ ಈ ರಾಜಾಸೀಟ್‌ನ ಕೆಲವೇ ಅಡಿಗಳಷ್ಟು ಆಳದಲ್ಲಿ ಬ್ರಿಟಿಷರ ದೇಹಗಳನ್ನು ಹೂಳಲಾಗಿದೆ. ಈ ದೇಹಗಳ ಮೇಲೆ ಚಿಗುರಿರುವ ಹುಲ್ಲು ‘ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು’ ಎಂಬ ಕಗ್ಗದ ಸಾಲುಗಳಿಗೆ ಪ್ರತೀಕವಾಗಿದೆ. ಋತುಚಕ್ರ ತಿರುಗಿದೆ, ನೂರಾರು ಬ್ರಿಟಿಷರು ಚಿರನಿದ್ರೆಗೆ ಸರಿದಿದ್ದ, ಒಂದು ಕಾಲದಲ್ಲಿ ಯಾರೂ ಅತ್ತ ಸುಳಿಯದ ಮಸಣವೊಂದು ಕಾಲಾಂತರದಲ್ಲಿ ಪ್ರಕೃತಿಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಉದ್ಯಾನವಾಗಿದೆ! 

ಕೊಡಗಿನಲ್ಲಿ ಆಳ್ವಿಕೆ ಮಾಡಿದ ರಾಜರು ಇಲ್ಲಿ ನಿಂತು ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ಕಾರಣದಿಂದ ಅಂದಿನಿಂದ ಇಂದಿನವರೆಗೂ ಈ ಎತ್ತರದ ಪ್ರದೇಶವನ್ನು ರಾಜಾಸೀಟ್ ಎಂದೇ ಕರೆಯಲಾಗುತ್ತಿದೆ. ಆದರೆ, ಇಲ್ಲಿನ ಕೊನೆಯ ದೊರೆ ಚಿಕ್ಕ ವೀರರಾಜೇಂದ್ರ ಅವರನ್ನು ಬ್ರಿಟಿಷರು 1834ರಲ್ಲಿ ಪದಚ್ಯುತಗೊಳಿಸಿ ಕೊಡಗನ್ನು ಪ್ರತ್ಯೇಕ ಪ್ರಾಂತ್ಯವಾಗಿ ಪರಿಗಣಿಸಿ, ಫ್ರೇಸರ್ ಎಂಬುವವರನ್ನು ಮೊದಲ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದರು. ಅಲ್ಲಿಂದ ಸ್ವಾತಂತ್ರ್ಯ ಬರುವವರೆಗೂ ಕೊಡಗಿನಲ್ಲಿ ಬ್ರಿಟಿಷರ ನೇರ ಆಡಳಿತ ಮುಂದುವರೆಯಿತು. ಈ 113 ವರ್ಷಗಳಷ್ಟು ಸುದೀರ್ಘ ಕಾಲದ ಬ್ರಿಟಿಷರ ಆಳ್ವಿಕೆಯು ಕೊಡಗನ್ನು ಸಂಪೂರ್ಣವಾಗಿ ಬದಲಾಯಿಸಿತು. ಹಾಗೆಯೇ, ಇಲ್ಲಿದ್ದ ರಾಜಾಸೀಟ್‌ ಪ್ರದೇಶವನ್ನು ಅವರು ಸ್ಮಶಾನವಾಗಿ ಮಾಡಿದರು.

ಆಗ ಇಲ್ಲಿ ನೆಲೆಸಿದ್ದ ನೂರಾರು ಬ್ರಿಟಿಷರು, ಸೈನಿಕರಿಗಾಗಿ ಕೋಟೆಯೊಳಗೆ ಪ್ರತ್ಯೇಕ ಚರ್ಚ್‌ ಅನ್ನು ನಿರ್ಮಿಸಲಾಯಿತು. ಸ್ವಾತಂತ್ರ್ಯ ಬಂದ ಮೇಲೆ ಅವರು ತಾಯ್ನಾಡಿಗೆ ಹೊರಟ ನಂತರ ಸೇಂಟ್ ಮಾರ್ಕ್ಸ್‌ ಚರ್ಚ್‌ ಅನ್ನು 1971ರಲ್ಲಿ ಸರ್ಕಾರಿ ವಸ್ತುಸಂಗ್ರಹಾಲಯವಾಗಿ, ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಮಶಾನವನ್ನು ಇದೇ ಕಾಲಘಟ್ಟದಲ್ಲಿ ರಾಜಾಸೀಟ್ ಉದ್ಯಾನವಾಗಿ ಪರಿವರ್ತಿಸಲಾಯಿತು. ಆದರೆ, ಚರಿತ್ರೆಯ ಈ ಯಾವ ಅಂಶಗಳೂ ವಸ್ತುಸಂಗ್ರಹಾಲಯವಾಗಿ ಬದಲಾದ ಚರ್ಚ್‌ನಲ್ಲಾಗಲಿ, ಉದ್ಯಾನವಾಗಿ ರೂಪಾಂತರಗೊಂಡ ರಾಜಾಸೀಟ್‌ ಸ್ಮಶಾನದಲ್ಲಾಗಲಿ ಪ್ರದರ್ಶಿಸಿಲ್ಲ.

ಮಡಿಕೇರಿಯ ರಾಜಾಸೀಟ್‌ನಿಂದ ಸ್ಥಾಳಾಂತರಗೊಂಡ ಬ್ರಿಷಿಷರ ಗೋರಿಗಳಿರುವ ಸ್ಥಳವನ್ನು ದಶಕಗಳ ಹಿಂದೆ ಸ್ವಚ್ಛಗೊಳಿಸಿದ್ದು.
ಮಡಿಕೇರಿಯ ರಾಜಾಸೀಟ್‌ನಿಂದ ಸ್ಥಾಳಾಂತರಗೊಂಡ ಬ್ರಿಷಿಷರ ಗೋರಿಗಳಿರುವ ಸ್ಥಳವನ್ನು ದಶಕಗಳ ಹಿಂದೆ ಸ್ವಚ್ಛಗೊಳಿಸಿದ್ದು.

ಗೋರಿಗಳ ಸ್ಥಳಾಂತರ: ರಾಜಾಸೀಟ್ ಉದ್ಯಾನದಲ್ಲಿದ್ದ ಗೋರಿಗಳು ಸ್ವಾತಂತ್ರ್ಯ ನಂತರ ಬ್ರಿಟಿಷರಿಲ್ಲದೇ ನಿರ್ವಹಣೆ ಮಾಯವಾಗಿ ಸೊರಗ ತೊಡಗಿದವು. ಮರಳಿ ಈ ಮಸಣವನ್ನು ಉದ್ಯಾನವನ್ನಾಗಿ ಮಾಡಲು 1969ರಲ್ಲಿ ನಿರ್ಧರಿಸಲಾಯಿತು. ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಥಳದಲ್ಲಿ ಅಮೂಲ್ಯ ಶಿಲೆಗಳಿಂದ ನಿರ್ಮಿಸಲಾಗಿದ್ದ ಗೋರಿಗಳನ್ನು ಕಿತ್ತು ಐಟಿಐ ಕಾಲೇಜು ಹಿಂಭಾಗದಲ್ಲಿ ಒಂದು ಕಿಲೊಮೀಟರ್‌ ದೂರದ ಗುಡ್ಡವೊಂದರಲ್ಲಿ ಗೋರಿಗಳನ್ನು ಪುನರ್‌ ನಿರ್ಮಿಸಲಾಯಿತು. ಆದರೆ, ಅಂತ್ಯಸಂಸ್ಕಾರ ಮಾಡಿದ್ದ ಶವ ಹಾಗೂ ಶವಪೆಟ್ಟಿಗೆಗಳನ್ನು ರಾಜಾಸೀಟ್‌ನ ಮಣ್ಣಿನಡಿಯೇ ಬಿಡಲಾಯಿತು. ಅದರ ಮೇಲೆ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಯಿತು.

ರಾಜಾಸೀಟ್ ಉದ್ಯಾನದಿಂದ ತೆರವುಗೊಳಿಸಿದ ಬ್ರಿಟಿಷರ ಗೋರಿಗಳನ್ನು ಇಟ್ಟಿರುವ ಸ್ಥಳ ಈಗ ಕಾಡಿನಂತಾಗಿದೆ. ಮುಳ್ಳುಗಿಡಗಳು, ದಟ್ಟವಾದ ಪೊದೆಗಳು ಬೆಳೆದಿವೆ. ಒಂದೆರಡು ಗೋರಿಗಳನ್ನು ಬಿಟ್ಟರೆ ಉಳಿದವು ಕಾಣಿಸುವುದೇ ಇಲ್ಲ.

ಈಗ ಕೊಡಗಿನಲ್ಲಿ ಆಂಗ್ಲೊ ಇಂಡಿಯನ್ನರು ಇಲ್ಲ. ಮೃತಪಟ್ಟವರ ಮಕ್ಕಳು, ಮೊಮ್ಮಕ್ಕಳೂ ಇಲ್ಲ. ಮಾರ್ಕ್ ಕಬ್ಬನ್‌ ತರಹವೋ, ಲಾರ್ಡ್ ಬೌರಿಂಗ್ ತರಹವೋ ಒಂದಿಷ್ಟು ಮಹತ್ವಪೂರ್ಣ ಕೆಲಸಗಳನ್ನೂ ಇಲ್ಲಿ ಆಳಿದ ಬ್ರಿಟಿಷ್ ಕಮಿಷನರ್‌ಗಳು ಮಾಡಲಿಲ್ಲ. ಹಾಗಾಗಿ, ಜನಮಾನಸದಲ್ಲಿ ಅವರ ನೆನಪುಗಳೂ ಉಳಿದಿಲ್ಲ. ಆದರೆ, ಕೊಡಗು ಸುಶಿಕ್ಷಿತವಾಗಿದೆ ಎಂದರೆ ಅದಕ್ಕೆ ಬ್ರಿಟಿಷರ ಆಳ್ವಿಕೆ ಕಾರಣ ಎನ್ನುವುದನ್ನು ಸ್ಥಳೀಯ ನೆನಪಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲೇ ಪಾಶ್ಚಾತ್ಯ ಶಿಕ್ಷಣ ನೀಡಿದರು. ಕರ್ನಾಟಕ ಪತ್ರಿಕೋದ್ಯಮದ ಹರಿಕಾರ ಹರ್ಮನ್ ಮೊಗ್ಲಿಂಗ್‌, ನಿಘಂಟು ತಜ್ಞ ಫರ್ಡಿನೆಂಟ್ ಕಿಟ್ಟೆಲ್‌ ಅವರು ಕೊಡಗಿನಲ್ಲಿ ಕೆಲಕಾಲ ಇದ್ದು, ತಮ್ಮ ಕನ್ನಡಪರ ಕೆಲಸಗಳನ್ನು ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಆಳಿ, ಅಳಿದು ಹೋದ ಬ್ರಿಟಿಷರನ್ನು ನೆನಪಿಸಿಕೊಳ್ಳಬೇಕಿದೆ ಎಂಬುದು ಇಲ್ಲಿನ ಅನೇಕ ಹಿರಿಯರ ಅಭಿಪ್ರಾಯ.

ಇತಿಹಾಸ ಕೇವಲ ಯುದ್ಧ, ಸಾಮ್ರಾಜ್ಯಗಳ ವಶ, ಪತನ, ವಿಜಯ ದುಂದುಭಿ ಅಷ್ಟೇಅಲ್ಲ. ಕುತೂಹಲಕರ, ಆಸಕ್ತಿಕರ, ಹಲವು ಧರ್ಮ, ಸಂಸ್ಕೃತಿಗಳ ಸಮ್ಮಿಳನದ ಕಥನವೂ ಹೌದು. ಇದಕ್ಕೆ ರಾಜಾಸೀಟ್‌ಗಿಂತ ಉತ್ತಮ ನಿದರ್ಶನಬೇಕೆ?

ಚೆಲುವೆಲ್ಲಾ ತಮ್ಮದೆಂದು ಬೀಗುತ್ತಿರುವ ಹೂಗಳು
ಚೆಲುವೆಲ್ಲಾ ತಮ್ಮದೆಂದು ಬೀಗುತ್ತಿರುವ ಹೂಗಳು

ಮಸಣ ಉದ್ಯಾನವಾಗಿದ್ದು ಸುಲಭದಲ್ಲಲ್ಲ

ಬ್ರಿಟಿಷರ ಸ್ಮಶಾನವಾಗಿದ್ದ ರಾಜಾಸೀಟ್‌ ಅನ್ನು ಉದ್ಯಾನವಾಗಿ ರೂಪಿಸಲು  ಪುರಸಭೆ ಅಧ್ಯಕ್ಷರಾಗಿದ್ದ ಎಂ.ಸಿ.ನಾಣಯ್ಯ ಅಪಾರ ಶ್ರಮ ಹಾಕಿದರು. ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಬ್ರಿಟಿಷರೂ ಇಲ್ಲಿಂದ ತಾಯ್ನಾಡಿಗೆ ತೆರಳಲಿಲ್ಲ. ಇಲ್ಲಿಯೇ ಉಳಿದುಕೊಂಡಿದ್ದ ಆಂಗ್ಲೊಇಂಡಿಯನ್ನರಿಂದ ಭಾರಿ ಪ್ರತಿರೋಧವೇ ವ್ಯಕ್ತವಾಯಿತು. ಆಗ ನಾಣಯ್ಯನವರು ಬ್ರಿಟಿಷ್‌ ಹೈಕಮಿಷನರ್‌ ಅವರೊಂದಿಗೆ ಪತ್ರ ವ್ಯವಹಾರ ನಡೆಸಿ, ಅವರ ಒಪ್ಪಿಗೆ ಪಡೆದೇ ಗೋರಿಗಳನ್ನು ಸ್ಥಳಾಂತರಿಸಿದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ತಮ್ಮ ಪೂರ್ವಜರ ಗೋರಿಗಳನ್ನು ತೆರವುಗೊಳಿಸಿದ್ದನ್ನು ತಿಳಿದು ಆಂಗ್ಲೋ ಇಂಡಿಯನ್ನರ ನಿಯೋಗ ಎಂ.ಸಿ.ನಾಣಯ್ಯ ಅವರ ಮನೆಗೆ ಬಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆಗ ನಾಣಯ್ಯ ಅವರು ಗೋರಿಗಳನ್ನು ಸ್ಥಳಾಂತರಿಸಿದ್ದ ಜಾಗ ನೋಡಿಕೊಂಡು ಮತ್ತೆ ತಮ್ಮ ಬಳಿ ಬರುವಂತೆ ನಿಯೋಗಕ್ಕೆ ಹೇಳುತ್ತಾರೆ.

‘ನಿಯೋಗವು ಗೋರಿಗಳನ್ನು ಸ್ಥಳಾಂತರಿಸಿದ್ದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಅವುಗಳನ್ನು ಶಿಸ್ತುಬದ್ಧವಾಗಿ ಇರಿಸಿದ್ದನ್ನು ಕಂಡು ತೃಪ್ತಿ ವ್ಯಕ್ತಪಡಿಸಿ, ವಾಪಸ್ ತೆರಳಿತು’ ಎಂದು ಎಂ.ಸಿ. ನಾಣಯ್ಯ ಅವರೇ ಹೇಳುತ್ತಾರೆ.

‘ನಾನು ಮಾಡಿದ ಕಾರ್ಯವನ್ನು ಎಲ್ಲೂ ಉಲ್ಲೇಖಿಸುವುದು ಬೇಡ ಎಂದು ಸುಮ್ಮನಿರುವೆ. ಬಹಳ ಪ್ರಯತ್ನಪಟ್ಟು ಗೋರಿಗಳನ್ನು ಸ್ಥಳಾಂತರಿಸಿ ರಾಜಾಸೀಟ್ ಉದ್ಯಾನವನ್ನು ನಿರ್ಮಿಸಲಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ರಾಜಾಸೀಟ್‌ನಲ್ಲಿ ಮಳೆಗಾಲದಲ್ಲಿ ಕಾಣುವ ಪ್ರಕೃತಿ ಸೊಬಗು
ರಾಜಾಸೀಟ್‌ನಲ್ಲಿ ಮಳೆಗಾಲದಲ್ಲಿ ಕಾಣುವ ಪ್ರಕೃತಿ ಸೊಬಗು
ಗೋರಿಗಳಿರುವ ಜಾಗದಲ್ಲಿ ಬೆಳೆದಿರುವ ಮುಳ್ಳುಕಂಟಿ ಗಿಡಗಳನ್ನು ತೆರವುಗೊಳಿಸಿದರೆ ಅಮೂಲ್ಯ ಗೋರಿಗಳನ್ನು ನೋಡಬಹುದು. ಅವುಗಳನ್ನು  ವಿದೇಶಿ ಪ್ರವಾಸಿಗರಿಗೆ ತೋರಿಸುವ ಕೆಲಸ ಮಾಡಿದರೆ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ. ಆಗ ಮಡಿಕೇರಿಗೆ ಮತ್ತೊಂದು ಪ್ರವಾಸಿತಾಣ ಸೇರ್ಪಡೆಯಾಗುತ್ತದೆ. ಸರ್ಕಾರ ಇತ್ತ ಗಮನ ಹರಿಸಬೇಕು.
–ಕೆ.ಟಿ.ಬೇಬಿ ಮ್ಯಾಥ್ಯೂ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕೊಡಗು ಜಿಲ್ಲಾ ಪ್ರಧಾನ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT