ಮಲೆನಾಡಿನ ಸಣ್ಣ ಊರಿನಲ್ಲಿ ಸಾಹಿತ್ಯವನ್ನು ಸಾಗರೋಪಾದಿಯಲ್ಲಿ ಪೋಷಿಸುತ್ತಿರುವ ರವೀಂದ್ರ ಪುಸ್ತಕಾಲಯಕ್ಕೀಗ 60ರ ಸಂಭ್ರಮ. ಕೆಲ ದಶಕಗಳ ಕೆಳಗೆ ಹೊರರಾಜ್ಯಗಳ ಓದುಗರು ಇಲ್ಲಿಂದ ಪುಸ್ತಕ ಎರವಲು ಪಡೆದು ಓದುತ್ತಿದ್ದ ಕಥೆ ವಿಶಿಷ್ಟವಾಗಿದೆ. 18,000ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಈ ಪುಸ್ತಕಾಲಯದ ಬಾಗಿಲು ವರ್ಷಪೂರ್ತಿ ತೆರೆದಿರುತ್ತದೆ. ಜತೆಗೆ ಪುಸ್ತಕ ಪ್ರಕಾಶನದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದೆ...

‘ತುಂಬಾ ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುತ್ತಿದ್ದವರ ಮನೆ ಸಾಗರದಲ್ಲಿತ್ತು. ಒಮ್ಮೆ ನಮ್ಮ ಪುಸ್ತಕಾಲಯಕ್ಕೆ ಬಂದವರು, ತಮಗೆ ಇಷ್ಟವಾದ ಪುಸ್ತಕಗಳನ್ನು ರೈಲಿನಲ್ಲಿ ಆಗಾಗ್ಗೆ ಪಾರ್ಸಲ್ ಮೂಲಕ ಕಳುಹಿಸಿಕೊಡಿ. ನಾನು ಓದಿ ಹಿಂದಕ್ಕೆ ಕಳುಹಿಸಿಕೊಡುತ್ತೇನೆ. ಒಟ್ಟಿಗೆ ಹತ್ತು ಹದಿನೈದು ಪುಸ್ತಕಗಳನ್ನು ಕಳುಹಿಸಿಕೊಡಿ ಎಂದು ವಿನಂತಿಸಿದ್ದರು. ನಾನು ಒಪ್ಪಿಕೊಂಡೆ. ಅವರಿಗೆ ಕಾಲಕಾಲಕ್ಕೆ ಪುಸ್ತಕಗಳನ್ನು ಕಳುಹಿಸಿಕೊಡುತ್ತಿದ್ದೆ. ಹೀಗೆಯೇ ಹಲವು ವರ್ಷಗಳು ನಡೆಯಿತು’ ಎಂದು ಸಾಗರದಲ್ಲಿರುವ ರವೀಂದ್ರ ಪುಸ್ತಕಾಲಯದ ಸ್ಥಾಪಕ ವೈ.ಎ.ದಂತಿ ಖುಷಿಯಿಂದಲೇ ಹೇಳುತ್ತಿದ್ದರು.

ಅವರ ಉತ್ಸಾಹ ತುಸು ಹೆಚ್ಚಾಗಿಯೇ ಇತ್ತು. ಮತ್ತೊಂದು ಪ್ರಸಂಗವನ್ನು ಹೇಳಲು ಶುರು ಮಾಡಿದರು. ಸಾಗರದಲ್ಲಿ ಕೆಲಸ ಮಾಡುತ್ತಿದ್ದ ಫಾರೆಸ್ಟರ್ ಒಬ್ಬರು ಅಜ್ಜಂಪುರಕ್ಕೆ ವರ್ಗವಾದರು. ಅವರು ಅಂಚೆ ಮೂಲಕ ಪುಸ್ತಕಗಳನ್ನು ತರಿಸಿಕೊಂಡು ಓದಿ ಹಿಂದಿರುಗಿಸುತ್ತಿದ್ದರು. ಇದೇ ರೀತಿ ಸಾಗರದಿಂದ ಬೇರೆಡೆಗೆ ವರ್ಗಾವಣೆಯಾಗಿ ಹೋದಾಗಲೂ ನಮ್ಮಿಂದ ಪುಸ್ತಕ ತರಿಸಿಕೊಂಡು ಅದರ ಉಪಯೋಗ ಪಡೆದವರು ಇದ್ದಾರೆ ಎಂದು ನಿದರ್ಶನಗಳ ಸಹಿತ ವಿವರಿಸಿದರು.

ದಂತಿ ಅವರು ಓದುಗರ ಅಭಿಲಾಷೆಗೆ ತಕ್ಕ ಹಾಗೆ ಪುಸ್ತಕಗಳನ್ನು ಒದಗಿಸುತ್ತಿದ್ದರು. ಓದುಗರ ಆಸಕ್ತಿಯನ್ನು ತಿಳಿದು ಅವರಿಗೆ ಹೇಗಾದರೂ ಮಾಡಿ ಪುಸ್ತಕಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು. ಇದೂ ಕೂಡ ದೂರದ ಊರಿನವರು ಇಲ್ಲಿಂದಲೇ ಪುಸ್ತಕಗಳನ್ನು ತರಿಸಿ ಓದುವುದಕ್ಕೆ ಕಾರಣವಿರಬಹುದು.

ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆ ಎಂಬುದು ಸಾಮಾನ್ಯ ಆಕ್ಷೇಪ. ಕೊಂಡೋ, ಕೊಳ್ಳದೆಯೋ ಓದುವವರು ಹೆಚ್ಚಿದಷ್ಟು ಪುಸ್ತಕಗಳ ಪ್ರಕಟಣೆಗೆ ಒಳ್ಳೆಯ ಭವಿಷ್ಯ ಪ್ರಾಪ್ತವಾದೀತು. ಪುಸ್ತಕಗಳನ್ನು ಓದುವವರಿಲ್ಲ, ಕೊಳ್ಳುವವರು ಇಲ್ಲ ಎಂಬ ಮಾತುಗಳ ಮಧ್ಯೆ ಸಾಗರದ ಚಾಮರಾಜಪೇಟೆಯಲ್ಲಿರುವ ರವೀಂದ್ರ ಪುಸ್ತಕಾಲಯವು ಅರವತ್ತು ವರ್ಷಗಳನ್ನು ಪೂರೈಸಿದೆ.

ಆರಂಭವೇ ಸ್ವಾರಸ್ಯಕರ

1960 ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಕಾಲ. ಬೆಳಗಾವಿ ಜಿಲ್ಲೆಯ ಅಥಣಿಯ ಯಲ್ಲಣ್ಣ ಅಪ್ಪಾರಾವ್ ದಂತಿ (ವೈ. ಎ. ದಂತಿ) ಅವರಿಗಿನ್ನೂ ಇಪ್ಪತ್ತೈದರ ಪ್ರಾಯ. ಸಹಾಯಕರಾಗಿ ಕಾರ್ಗಲ್ಗೆ ಬಂದವರು. ಆಗಿನ ಅವರ ವಿದ್ಯಾಭ್ಯಾಸದ ಅರ್ಹತೆಯಿಂದಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾದರು. ಆ ವೇಳೆಗೆ ಪುಟ್ಟ ಊರಾಗಿದ್ದ ಕಾರ್ಗಲ್ನಲ್ಲಿ ದಂತಿ, ವಿದ್ಯಾರ್ಥಿಗಳಿಗಾಗಿ ಹಿಂದಿ ಪಾಠವನ್ನು ಉಚಿತವಾಗಿ ಹೇಳಿಕೊಡುತ್ತಿದ್ದರು. ಶಿಷ್ಯರು ಗುರು ಕಾಣಿಕೆಯಾಗಿ ತ. ರಾ. ಸು ಅವರ ವಿಜಯೋತ್ಸವ ಭಾಗ 1 ಮತ್ತು 2 ಪುಸ್ತಕ ಕೊಟ್ಟರು. ಪುಸ್ತಕ ಪ್ರೇಮಿಯಾಗಿದ್ದ ದಂತಿ ಅವರು ತಾವು ಓದಿದ್ದಲ್ಲದೇ ಇವುಗಳನ್ನು ಎಲ್ಲರೂ ಓದಲಿ ಎಂದು ಆ ಪುಸ್ತಕಗಳೊಂದಿಗೆ ತಾವೇ ಇನ್ನಷ್ಟು ಪುಸ್ತಕಗಳನ್ನು ಖರೀದಿಸಿ ಓದಲು ಒದಗಿಸಿದರು. ಶರಾವತಿ ಪ್ರಾಜೆಕ್ಟ್ ಕೆಲಸ ಮುಗಿದು ಜನವಸತಿ ಕಡಿಮೆ ಆಯಿತು. ಆಗ ಇನ್ನಷ್ಟು ಜನರು ಓದಲಿ ಎಂಬ ಕಾರಣದಿಂದ 1965ರಲ್ಲಿ ಮೂವತ್ತು ಕಿಲೋಮೀಟರ್ ದೂರದ ಸಾಗರ ಪಟ್ಟಣದಲ್ಲಿ ರವೀಂದ್ರ ಪುಸ್ತಕಾಲಯವನ್ನು ತೆರೆದರು. ಪ್ರತಿ ಗುರುವಾರ ಸಾಗರಕ್ಕೆ ಬಂದು ಸಂಜೆ 6.30 ರಿಂದ 8 ರವರೆಗೆ ಹಾಗೂ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ಪುಸ್ತಕಾಲಯ ತೆರೆದು ಸಾಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಓದಿನ ರುಚಿ ಹತ್ತಿಸಿದರು. ಕೂಲಿ ಕೆಲಸಕ್ಕೆ ಹೋಗುವವರೂ ಸಹ ಪುಸ್ತಕಾಲಯಕ್ಕೆ ಬಂದು ಪುಸ್ತಕ ಓದಲು ಕೊಂಡೊಯ್ಯುತ್ತಿದ್ದರು. ಪ್ರತಿ ಭಾನುವಾರ 75 ಕಿಲೋಮೀಟರ್ ದೂರದ ಹೊನ್ನಾವರದಿಂದ ಸಾಗರಕ್ಕೆ ಬಂದು ಪುಸ್ತಕಗಳನ್ನು ಓದಲು ಒಯ್ಯುತ್ತಿದ್ದವರನ್ನು ದಂತಿ ನೆನಪಿಸಿಕೊಳ್ಳುತ್ತಾರೆ.

ಮುಂದೆ ಇವರು ಸಗಟು ಪುಸ್ತಕ ವ್ಯಾಪಾರಿ ಶುರು ಮಾಡಿದರು. ಸುತ್ತಮುತ್ತಲಿನ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲದೇ ದೂರದ ಬೀದರ್ ತುದಿಯಿಂದ ಕಾಸರಗೋಡಿನ ಕಡಂದಲೆವರೆಗೂ ತಲೆಯ ಮೇಲೆ ಪುಸ್ತಕಗಳನ್ನು ಹೊತ್ತು ಮಾರಾಟ ಮಾಡಿದ್ದರು. ಕಹಿ-ಸಿಹಿ ಅನುಭವಗಳ ನಡುವೆ ಪ್ರಕಾಶಕರಾಗಿಯೂ ಸಾಧನೆ ಮಾಡಿರುವುದು ಇವರ ಹೆಗ್ಗಳಿಕೆ. ‘ಇಲ್ಲಿ ಸಿಗುವ ಜ್ಞಾನಾರ್ಜನೆಯ ಪುಸ್ತಕಗಳನ್ನು ಓದಿ ಡಾಕ್ಟರೇಟ್ ಪದವಿ ಪಡೆದವರೂ ಇದ್ದಾರೆ. ದೂರದ ಊರಿನವರು ಓದಲು ಕೇಳಿದ ಪುಸ್ತಕಗಳನ್ನು ಮುಂದಿನ ತಿರುಗಾಟದಲ್ಲಿ ನೆನಪಿಟ್ಟು ಅವರಿಗೆ ಒದಗಿಸುತ್ತಿದ್ದೆ. ಕೇಳಿದವರಿಗೆ ಪುಸ್ತಕ ಕೊಡುವುದೇ ನನ್ನ ಕರ್ತವ್ಯ. ಓದುವವರಿಗೆ ಪುಸ್ತಕ ತಲುಪಿಸಿದ ಮೇಲೆಯೇ ನನಗೆ ಸಮಾಧಾನ, ಸಂತೃಪ್ತಿ. ನನ್ನ ಸೇವೆಯನ್ನು ಕಂಡ ಜನ ಅಲ್ಲಿಗೆ ಹೋದಾಗ ತಮ್ಮ ಮನೆಯ ಸದಸ್ಯರಂತೆ ನನ್ನನ್ನು ಉಪಚಿರಿಸಿದ್ದಾರೆ. ಇದು ನನಗೆ ಸಿಕ್ಕ ದೊಡ್ಡ ಗೌರವ-ಸನ್ಮಾನ’ ಎಂದು ದಂತಿ ಭಾವುಕರಾಗುತ್ತಾರೆ.

ಪುಸ್ತಕಾಲಯದಲ್ಲಿ 18,000ಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್ ಪುಸ್ತಕಗಳು ಇವೆ. ನಾಲ್ಕಾರು ದಶಕಗಳಿಂದಲೂ ಇರುವ ಓದುಗರಿದ್ದಾರೆ. ಪುಸ್ತಕಗಳನ್ನು ಓದಿ ವಾಪಸ್ ಮಾಡದಿರುವ ಪುಸ್ತಕಗಳ ಸಂಖ್ಯೆಯೂ ಸಾಕಷ್ಟಿದೆ. ಅವರಿಗೆ ನೆನಪೋಲೆಗಳನ್ನು ಬರೆದು ಓದು ಚಾಲ್ತಿಯಲ್ಲಿರುವಂತೆ ದಂತಿ ಪ್ರಯತ್ನಿಸುತ್ತಲೇ ಇರುತ್ತಾರೆ. ಪುಸ್ತಕ ಪ್ರೀತಿ ಮತ್ತು ಉದ್ಯಮ ಎರಡನ್ನೂ ಹದವಾಗಿ ಸಂತುಲಿಸಿಕೊಂಡು ತಮ್ಮ ಸುತ್ತಲಿನ ಪರಿಸರದಲ್ಲಿ ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕಿ ಮಕ್ಕಳಂತೆ ಪೋಷಿಸಿಕೊಂಡು ಬಂದಿದ್ದಾರೆ.

ಪುಸ್ತಕಾಲಯದ ಸದಸ್ಯರಾಗಿ ಸದಭಿರುಚಿಯ ಗ್ರಂಥಗಳನ್ನು ಓದಿಕೊಂಡು ಬಂದವರಿದ್ದಾರೆ. ದಂತಿ ತಮ್ಮ ವಾಚಕ ಸದಸ್ಯರ ಹಿತಾಸಕ್ತಿಗಳನ್ನು ಗೌರವಗಳನ್ನು ಕಾಪಾಡಬಲ್ಲವರು. ಮುದ್ರಣ ಪ್ರಪಂಚದಲ್ಲಿ ಮಾನವೀಯ ಸಂಬಂಧವಿರಿಸಿಕೊಂಡು ಇಳಿವಯಸ್ಸಿನಲ್ಲಿಯೂ ಕನ್ನಡ ಪುಸ್ತಕಗಳ ಬಗ್ಗೆ ಅವರಿಗೆ ಇರುವ ಕಾಳಜಿ, ಪ್ರೀತಿ ಅಚ್ಚರಿ ಪಡುವಂತಹದು.

ಸಾಗರದ ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಿ ಈ ಪುಸ್ತಕಾಲಯದ ವತಿಯಿಂದ ಕನ್ನಡದ ಸಾಹಿತ್ಯ ದಿಗ್ಗಜರಾದ ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಗಿರಡ್ಡಿ ಗೋವಿಂದರಾಜು, ವಿ. ಎಂ. ಇನಾಂದಾರ್, ಕೆ.ಶಿವರಾಮ ಕಾರಂತ, ಬಿ. ವಿ. ಕಾರಂತ, ಎಂ.ಕೆ. ಇಂದಿರಾ, ನೀಳಾದೇವಿ, ಪಂಕಜ, ಹಾ. ಮಾ. ನಾಯಕ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ಎಲ್. ಭೈರಪ್ಪ, ಜಿ.ಪಿ. ರಾಜರತ್ನಂ, ಯಂಡಮೂರಿ ವೀರೇಂದ್ರನಾಥ್, ಯು.ಆರ್. ಅನಂತಮೂರ್ತಿ, ಗಂಗೂಬಾಯಿ ಹಾನಗಲ್, ಎಚ್.ಎಸ್. ವೆಂಕಟೇಶಮೂರ್ತಿ ಮೊದಲಾದವರನ್ನು ಆಹ್ವಾನಿಸಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ನಾ. ಡಿಸೋಜಾ ಅವರ ‘ಮುಳುಗಡೆ’, ಸಾಯಿಸುತೆಯವರ 125ನೇ ಹಾಗೂ 150ನೇ ಕೃತಿಗಳು, ಎನ್.ಪಂಕಜ, ಎಂ.ಕೆ. ಇಂದಿರಾ, ಶ್ರೀರಂಗ, ಶ್ರೀನಿವಾಸ ಉಡುಪ, ಭಾರತೀಸುತ, ಟಿ. ಪಿ. ಅಶೋಕ, ಜಯಪ್ರಕಾಶ ಮಾವಿನಕುಳಿ... ಹೀಗೆ ಕನ್ನಡದ ಖ್ಯಾತ ಲೇಖಕರ 195 ಪುಸ್ತಕಗಳನ್ನು ಪ್ರಕಾಶನಗೊಳಿಸಿದ ಕೀರ್ತಿ ರವೀಂದ್ರ ಪುಸ್ತಕಾಲಯದ್ದು.

ಆರು ದಶಕಗಳಲ್ಲಿ ಮನೆಯಲ್ಲಿ ನೆಂಟರಿಷ್ಟರಿರಲಿ, ಅನಾರೋಗ್ಯವಿರಲಿ, ಹಬ್ಬ ಹರಿದಿನವಿರಲಿ 85 ವರ್ಷದ ದಂತಿಯವರು ಪುಸ್ತಕಾಲಯದ ಬಾಗಿಲು ಹಾಕಿದ್ದೇ ಇಲ್ಲ. ಸರ್ಕಾರದ ಸೂಚನೆಯಂತೆ ಕೋವಿಡ್ ಕಾಲದಲ್ಲಿ ಮಾತ್ರ ಬಾಗಿಲು ಹಾಕಿತ್ತು. ಪುಸ್ತಕಗಳನ್ನು ಕೊಳ್ಳಲು ಶಿಕ್ಷಕಿಯಾಗಿದ್ದ ಮಡದಿ ನೀಡಿದ ಆರ್ಥಿಕ ಸಹಾಯವನ್ನು ಮರೆಯದೇ ನೆನಪು ಮಾಡಿಕೊಳ್ಳುವ ದಂತಿ ಅವರು, ‘ಓದುಗರನ್ನು ಖುಷಿ ಪಡಿಸುವುದೇ ನನ್ನ ಗುರಿ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.