ಸುಗ್ಗಿ ಹಬ್ಬ ಮುಗಿಯುತ್ತಿದ್ದ ಹಾಗೇ ರೈತರು ಭತ್ತ, ದವಸ ಧಾನ್ಯಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಷ್ಟು ಸಂಗ್ರಹಿಸಿಟ್ಟುಕೊಂಡು, ಇನ್ನುಳಿದದ್ದನ್ನು ಮಾರಾಟ ಮಾಡುವುದು ವಾಡಿಕೆ. ಇನ್ನು ಮಳೆಗಾಲಕ್ಕೂ ಮುನ್ನ ಒಂದು ವರ್ಷಕ್ಕೆ ಬೇಕಾಗುವಷ್ಟು ಭತ್ತ ಇತ್ಯಾದಿ ಕಾಳುಗಳನ್ನು ಭದ್ರವಾಗಿ ಹಾಳಾಗದಂತೆ ಸಂರಕ್ಷಿಸಿ ಇಡುವುದು ಒಂದು ಸವಾಲಿನ ಕೆಲಸ.

ಇತ್ತೀಚಿನ ಕೆಲವು ದಶಕಗಳಿಂದ ಬೆಳೆ ಕಾಳುಗಳನ್ನು ಸಂಗ್ರಹಸಿಡುವ ಹಲವಾರು ಡಬ್ಬಗಳು, ಸ್ಟೀಲ್, ಪ್ಲಾಸ್ಟಿಕ್ ಪಾತ್ರೆಗಳು ಸುಲಭವಾಗಿ ಸಿಗುತ್ತಿವೆ. ಆದರೆ ಈ ಮೊದಲು ಒಮ್ಮೆ ಬೆಳೆದ ಬೆಳೆಗಳನ್ನು ಹಲವಾರು ವರ್ಷಗಳು ಕೆಡದಂತೆ ಇಡುವ ಹಲವಾರು ವಿಧಾನಗಳು ಕೃಷಿಕರಿಗೆ ತಿಳಿದಿತ್ತು.

ಅಜ್ಜ-ಅಜ್ಜಿಯರು ಹೇಳುತ್ತಿದ್ದಂತೆ ಬ್ರಿಟಿಷರ ಕಾಲದಲ್ಲಿ ರೇಷನಿಂಗ್ ಎನ್ನುವ ಬರಗಾಲದ ಸಮಯದಲ್ಲಿ ಜನರು ಅಕ್ಕಿಯನ್ನು ಕೆಡದಂತೆ ಸಂಗ್ರಹಿಸಿ ಇಡುತ್ತಿದ್ದ ವಿಧಾನವೇ ಮುಡಿಕಟ್ಟುವುದು, ಕಣಜ ನಿರ್ಮಾಣ ಇತ್ಯಾದಿ.

ಕರಾವಳಿ ಭಾಗದಲ್ಲಿ ಹಿಂದಿನಿಂದಲೂ ಅಕ್ಕಿಯನ್ನು ಕೆಡದಂತೆ ಶೇಖರಿಸಿಡಲು ಒಣ ಹುಲ್ಲಿನಿಂದ ಕಟ್ಟಿಡುವ ಪದ್ಧತಿ ಚಾಲ್ತಿಯಿತ್ತು. ಅದನ್ನೇ ಅಕ್ಕಿ ಮುಡಿ ಎಂದು ಕರೆಯುತ್ತಾರೆ. ಅಕ್ಕಿ ಮುಡಿಯನ್ನು ಕಟ್ಟುವುದು ಒಂದು ನೈಪುಣ್ಯತೆ ಹಾಗೂ ಕೈಚಳಕದ ಕಲೆಯಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗದಲ್ಲಿ ಅಕ್ಕಿಮುಡಿ ಹೆಚ್ಚು ಬಳಕೆಯಲ್ಲಿತ್ತು. ಕರಾವಳಿ ಭಾಗದ ಜನರು ನಿತ್ಯದ ಆಹಾರಕ್ಕಾಗಿ ಅನ್ನವನ್ನೇ ಹೆಚ್ಚು ಅವಲಂಬಿಸಿರುವುದರಿಂದ ಹಾಗೂ ಭತ್ತವನ್ನೇ ಹೆಚ್ಚಾಗಿ ಕೃಷಿ ಮಾಡುವುದರಿಂದ ಭತ್ತದ ಗದ್ದೆಗಳು ಹೆಚ್ಚಾಗಿ ಕಾಣಸಿಗುತ್ತವೆ.

ಹಿಂದೆ ಇಂದಿನ ಹಾಗೇ ಆಧುನಿಕ ಸಂಗ್ರಹಣ ಸಾಧನಗಳು ಇರಲಿಲ್ಲ. ಮಣ್ಣಿನ ಮಡಿಕೆಗಳು, ಮರದ ಡಬ್ಬಗಳು ಹಾಗೂ ಹುಲ್ಲಿನಿಂದ ತಯಾರಿಸಲ್ಪಟ್ಟ ಮುಡಿಗಳೇ ಹೆಚ್ಚು ಬಳಕೆಯಾಗುತ್ತಿದ್ದವು. ಅಕ್ಕಿಯ ಮುಡಿಗಳನ್ನು ಒಂದು ಕೋಣೆಯ ಒಳಗೆ ಭತ್ತದ ಹೊಟ್ಟಿನ ಒಳಗೆ ಇರಿಸುತ್ತಿದ್ದರು. ಗದ್ದೆಗಳಲ್ಲಿ ಬೆಳೆ ಬೆಳೆದು ಅದನ್ನು ಹಡಿ ಮಂಚಕ್ಕೆ ಹೊಡೆದು ಬಿದ್ದ ಭತ್ತವನ್ನು ರಾಶಿ ಮಾಡಿಟ್ಟು ಬೈಹುಲ್ಲನ್ನು ಅಂಗಳದಲ್ಲೇ ಶೇಖರಿಸಿ ಅಕ್ಕಿ ಮುಡಿ ಕಟ್ಟಲಾಗುತ್ತಿತ್ತು.

ಮುಡಿ ಕಟ್ಟುವುದಕ್ಕೆ ಮುಖ್ಯವಾಗಿ ಬೇಕಾಗುವ ಮೂಲ ವಸ್ತು ಬೈಹುಲ್ಲು. ಬೈಹುಲ್ಲಿನಿಂದ ನೇಯ್ದ ಹಗ್ಗ, ಉದ್ದನೆಯ ಬೈಹುಲ್ಲು, ಪುಡಿ ಬೈಹುಲ್ಲುಗಳು ಮುಡಿ ಕಟ್ಟುವುದಕ್ಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪುಣ್ಕೆ ಅಥವಾ ಹುಣಿಸೆಮರದ ಕಲ್ಲೆ ಅಥವಾ ಕುದಂಟಿ. ಅಂತಹ ಮರದ ತುಂಡಿನ ಹೊಡೆತ ಎಲ್ಲ ಸುತ್ತಲಿಂದ ಬಿದ್ದಾಗಲೇ ಬೈಹುಲ್ಲು ಎಡೆ ರಹಿತವಾಗಿ ಒತ್ತಾಗಿ ಸೇರಿ ನಿರ್ವಾತವನ್ನು ಉಂಟುಮಾಡುತ್ತದೆ. ಹಾಗೂ ಒಳಗಿನ ಅಕ್ಕಿ, ಭತ್ತ ಹಾಳಾಗದಂತೆ ವರ್ಷಾನುಗಟ್ಟಲೆ ರಕ್ಷಿಸಲ್ಪಡುತ್ತದೆ.

ಶೇಖರಿಸಿಟ್ಟ ಬೈಹುಲ್ಲಿನಲ್ಲಿ ಸಾಕಷ್ಟು ಹಗ್ಗ ಹೊಸೆದ ತರುವಾಯ ಬಹಳ ಉದ್ದದ ಬೈಹುಲ್ಲಿನ ಒಂದು ಸೂಡಿ ತೆಗೆದುಕೊಂಡು ಅದರ ತಲೆಗೆ ಚಿಕ್ಕ ಬೈಹುಲ್ಲಿನ ಹಗ್ಗದಿಂದ ಕಟ್ಟಿ ಬಹಳ ಸುಂದರವಾಗಿ ವೃತ್ತಾಕಾರದಲ್ಲಿ ನೆಲದಲ್ಲಿ ಬಿಡಿಸಿಟ್ಟು, ಕಟ್ಟಿದ ತಲೆಯನ್ನು, ಒಳಕ್ಕೆ ಬರುವಂತೆ ನೆಲದ ಮೇಲಿಟ್ಟು ತುಳಿದು ಪುಡಿ ಬೈಹುಲ್ಲನ್ನು ಬೇಕಾದಷ್ಟು ಪ್ರಮಾಣದಲ್ಲಿ ವೃತ್ತದ ಒಳಗೆ ಬಿಡಿಸಿಟ್ಟು ಒಂದೊಂದೇ ಕಳಸದ ಅಕ್ಕಿಯನ್ನು ಒಳಕ್ಕೆ ಸುರುವ ಬೇಕು. ಅಕ್ಕಿಯನ್ನು ಸುರುವುತ್ತಿದ್ದಂತೆಯೇ ಸ್ವಲ್ಪ ಸ್ವಲ್ಪವೇ ಒಂದೊಂದೇ ಗಂಟು ಹಾಕಿ ಇರಿಸಿದ್ದ ಬೈಹುಲ್ಲಿನ ಹಗ್ಗವನ್ನು ಎತ್ತರಿಸುತ್ತಾ ಮೂರು ಕಳಸಿಗೆ ಅಕ್ಕಿ ಅಥವಾ ಭತ್ತವನ್ನು ತುಂಬಿಸಬೇಕು.

ಒಂದು ಕಳಸ ಎಂದರೆ 14 ಸೇರು. ಹೀಗೆ 42 ಸೇರು ಅಕ್ಕಿ ಮುಡಿಯಲ್ಲಿ ಹಾಕುವಾಗ ಮೂರು ಬೈಹುಲ್ಲಿನ ಹಗ್ಗದ ವೃತ್ತ ಮುಡಿಯ ಮಧ್ಯದಲ್ಲಿ ಕಟ್ಟಲ್ಪಟ್ಟಿರುತ್ತದೆ. ತರುವಾಯ ಮತ್ತೆ ಮೇಲ್ಗಡೆ ಸ್ವಲ್ಪ ಪುಡಿ ಬೈಹುಲ್ಲನ್ನು ಇಟ್ಟು ಕೆಳಗಿನಿಂದ ಮೇಲಕ್ಕೆ ಇಪ್ಪತ್ತಮೂರುವರೆ ಕೋನದಲ್ಲಿ ಬೈಹುಲ್ಲಿನ ಹಗ್ಗವನ್ನು ಸುಮಾರು ಹದಿನಾರು ಎಳೆಯಲ್ಲಿ ಎಳೆದು ಕಟ್ಟಿಕೊಂಡು ಬರುತ್ತಾ ಕುದಂಟಿಯಿಂದ ಹೊಡೆದು ಸರಿಗೊಳಿಸಿ, ಹದಗೊಳಿಸಿ ಮುಡಿಕಟ್ಟುವ ದೃಶ್ಯ ನಿಜಕ್ಕೂ ಅತ್ಯದ್ಭುತ ಕಲೆಯ ದರ್ಶನ. ಇದು ಸಾಮಾನ್ಯರಿಗೆ ಬರುವ ಕಲೆಯಲ್ಲ. ಇದರಲ್ಲಿ ಎಷ್ಟು ಜಾಣ್ಮೆ ಇದೆಯೋ ಅಷ್ಟೇ ಚಾಕಚಕ್ಯತೆ, ಶ್ರಮ, ತೋಳ್ಬಳವೂ ಅತ್ಯಗತ್ಯ.

ಮುಡಿ ಕಟ್ಟಿ ಸಂಪೂರ್ಣ ಆದ ಬಳಿಕ ಎಲ್ಲೂ ಒಂದೇ ಒಂದು ಬೈಹುಲ್ಲಿನ ತುದಿ ಹೊರಕ್ಕೆ ಬರದಿದ್ದರೆ ಅಂತಹ ಮುಡಿ ಕಟ್ಟಿದಾತ ಅತ್ಯಂತ ನಿಪುಣ ಎಂದೇ ಪರಿಗಣಿಸಲಾಗುತ್ತಿತ್ತು. ‘ಹಿಂದೆಲ್ಲಾ ಮನೆಯ ಎದುರಲ್ಲಿರುವ ಕಣಜವನ್ನು ನೋಡಿಯೇ ಆ ಮನೆಯ, ಮನೆಯವರ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು’ ಎಂದು ದ್ಯಾವಯ್ಯ ಹಳೆಯ ನೆನಪನ್ನು ಹಂಚಿಕೊಳ್ಳುತ್ತಾರೆ.

ಇಂದಿಗೂ ಉಡುಪಿ ಕೃಷ್ಣ ಮಠಕ್ಕೆ ಜಾತ್ರೆ ,ಪರ್ಯಾಯದ ಸಮಯದಲ್ಲಿ ಭಕ್ತರು ಹೊರೆ ಕಾಣಿಕೆಯಾಗಿ ಅಕ್ಕಿ ಮುಡಿಯನ್ನೇ ದೇವರಿಗೆ ಅರ್ಪಿಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ ಕರಾವಳಿಯ ಬಹುತೇಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಆಚರಣೆಯಲ್ಲಿ ಭಕ್ತರು ಅಕ್ಕಿ ಮುಡಿಯನ್ನು ಸಮರ್ಪಿಸುತ್ತಾರೆ.

ಇಂತಹ ಮುಡಿಕಟ್ಟುವ, ಕಣಜ ರಚಿಸುವ ಸುಂದರ ಕಲೆ ಇತ್ತೀಚೆಗೆ ನಶಿಸಿ ಹೋಗುತ್ತಿದೆ. ವಿಭಕ್ತ ಚಿಕ್ಕ ಕುಟುಂಬಗಳ ಕಾರಣ, ಗೋಣಿಚೀಲ ಹಾಗೂ ಪ್ಲಾಸ್ಟಿಕ್ ಚೀಲಗಳ ಉಪಯೋಗದ ಕಾರಣ, ನುರಿತ ಕೈಗಳಿಗೆ ದೊರಕದ ಕೆಲಸದ ಕಾರಣ ಅಂತಹ ನಿಷ್ಣಾತ ಮುಡಿಕಟ್ಟುವವರು ಕೆಲಸವಿಲ್ಲದೆ ಬೇರೆ ಉದ್ಯೋಗದ ಮೊರೆಹೋಗುತ್ತಿದ್ದಾರೆ.

ಎಲ್ಲವೂ ಪ್ಲಾಸ್ಟಿಕ್ ಮಯವಾಗಿರುವ ಇಂದಿನ ದಿನಗಳಲ್ಲಿ ಪ್ರಕೃತಿಗೆ ಪೂರಕವಾದ ಬೈಹುಲ್ಲು, ಮುಡಿಕಟ್ಟುವಿಕೆ, ಕಣಜ ರಚನೆಗಳಂತಹ ಅದ್ಭುತ ದೇಸೀ ಕಲೆ ಅಪರೂಪವಾಗುತ್ತಿದೆ. ಇಂತಹ ಅಪರೂಪದ ಕಲೆಯನ್ನು ಕಲಿಯುವ ಉತ್ಸಾಹವನ್ನು ಯಾರೊಬ್ಬರೂ ತೋರುತ್ತಿಲ್ಲ. ಹಾಗಾಗಿ ಇಂದು ಅಕ್ಕಿ ಮುಡಿಕಟ್ಟುವ ಕಲೆ ನಿಧಾನವಾಗಿ ನಶಿಸಿ ಹೋಗುತ್ತಿದೆ ಎಂಬ ವಿಷಾದ ಕಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.