ಪ್ರಕೃತಿ ಬರೆದ ಚಿತ್ತಾರಗಳನ್ನೆಲ್ಲ ತುಸು ಮೌನದಲ್ಲಿಯೂ, ತುಸು ಕುಂಚದಲ್ಲಿಯೂ ಇಷ್ಟಿಷ್ಟೆ ಬಣ್ಣ ಬೆರೆಸಿ ಅರ್ಥ ಮಾಡಿಕೊಳ್ಳುವುದು ಕಲೆಯೇ? ಎಂದು ಭಾರತಿ ಸಾಗರ್ ಅವರ ಕಲಾಕೃತಿಗಳನ್ನು ಕಂಡಾಗ ಎನಿಸುವುದು ಸುಳ್ಳಲ್ಲ. ಆಳವಾದ ಮೌನವು ಬರೆಯುವ ಭಾಷ್ಯವು ‘ಭಾರ’ ಎನಿಸುವ ಮಾತುಗಳಿಂದ ಸದಾ ದೂರ. ಭೋರ್ಗರೆಯುವ ಕಡಲಿನಂಥ ಬದುಕಿನಲ್ಲಿ ಆಗಾಗ್ಗೆ ಮೂಡುವ ಮೌನದ ಬಿಂಬಗಳಲ್ಲಿ ಇಣುಕಿದರೆ, ನಮ್ಮೊಳಗೆ ನಾವು ಇಳಿದು, ಕಳೆದು ಹೋಗುವಷ್ಟು ಅರ್ಥವಾಗಬಹುದು. ಆದರೆ, ತೇಲುಮಾತಿನಲ್ಲಿ ಒಡಮೂಡಿದ ಬಿಂಬವು ಒಡಕಲು ಬಿಂಬವಾಗಿ ಚದುರಿ ಹೋಗುವುದೇ ಹೆಚ್ಚು. ಭಾರತಿ ಸಾಗರ್ ಅವರ ಕಲಾಕೃತಿಗಳಲ್ಲಿರುವ ಪಾತ್ರಗಳಲ್ಲಿರುವ ಮೌನದ ಮುದ್ರೆಯೇ ಹೆಚ್ಚು ಮಾತನಾಡುತ್ತದೆ. ಇದು ಈ ಕಲಾಕೃತಿಗಳ ಅಗ್ಗಳಿಕೆ.

ನಿರ್ಭಾವುಕ ಎನಿಸುವ ಹಲವು ಪಾತ್ರಗಳನ್ನು ಆಳಕ್ಕಿಳಿದು ನೋಡಿದಾಗ ಅದು ತನ್ನೊಳಗೆ ಅಡಗಿಸಿಟ್ಟುಕೊಂಡ ಕೋಲಾಹಲವನ್ನೇ ತೆರೆದಿಡುತ್ತದೆ. ಅಷ್ಟು ಸಶಕ್ತ ಪರಿಕಲ್ಪನೆಯಲ್ಲಿ ಭಾರತಿ ಅವರ ಕಲಾಕೃತಿಗಳು ಮೈದಾಳಿವೆ.

ಹಸಿರು ರಾಶಿಯ ಮಧ್ಯೆ ಕುಕ್ಕುರುಗಾಲಿನಲ್ಲಿ ಕುಳಿತ ನೀಳ ದೇಹದ ಹುಡುಗನೊಬ್ಬನ ಆಡದೇ ಉಳಿದ ಮಾತುಗಳನ್ನು, ತುಮುಲಗಳನ್ನು ಬಹಳ ಆಸ್ಥೆಯಿಂದ ಗುಬ್ಬಿಮರಿ ಕೇಳುತ್ತಿರುವಂತೆ ಭಾಸವಾಗುತ್ತದೆ. ಕೇಳ್ಮೆ ಮತ್ತು ತಾಳ್ಮೆ ಎಂಬುದು ಪ್ರಕೃತಿಯ ಸಹಜ ಗುಣಗಳು. ಮನುಷ್ಯ ಸದಾಕಾಲ ಎಲ್ಲರ ಮಧ್ಯೆ ತಾನು ಸುಭಗ ಎಂದು ತೋರ್ಪಡಿಸುವ ಉದ್ದೇಶದಿಂದ ಬಂದ ಗುಣಗಳೇನಲ್ಲ. ಸಹಜವಾಗಿರುವುದು ಎಂದಿಗೂ ಚೆಲುವಾಗಿರುತ್ತದೆ ಮತ್ತು ಅಷ್ಟೆ ದೃಢವಾಗಿರುತ್ತದೆ ಎಂಬುದನ್ನು ನಿರೂಪಿಸುತ್ತದೆ ಈ ಕಲಾಕೃತಿ.

ಇನ್ನೊಂದು ಕಲಾಕೃತಿಯಲ್ಲಿ ಸಂಕಟದಲ್ಲಿರುವ ಶ್ವೇತವಸ್ತ್ರಧಾರಿ ಹೆಣ್ಣೊಬ್ಬಳು ಕಾರ್ಗತ್ತಲ್ಲಿನಂಥ ತನ್ನೊಡಲ ನೋವನ್ನು ತನ್ನ ಕಣ್ಣಿನ ಭಾಷೆಯಲ್ಲಿಯೇ ಶ್ವೇತಬಣ್ಣದ ಹಕ್ಕಿಗೆ ರವಾನಿಸುವಂತೆ ಅನಿಸುತ್ತದೆ. ಬಣ್ಣಗಳು ಇಲ್ಲಿ ಬದುಕಿನ ವೈರುಧ್ಯಗಳನ್ನು ಚಂದಗೆ ಕಟ್ಟಿಕೊಡಲು ಪ್ರಯತ್ನಿಸಿವೆ. ಈ ಕಲಾಕೃತಿಗಳಲ್ಲಿರುವ ಒಟ್ಟು ಸಾಮ್ಯತೆಯೇ ಪ್ರಕೃತಿಯೊಂದಿಗಿನ ಅನುಬಂಧ. ಕೇಳಲು, ಹೇಳಲು ಯಾರು ಇಲ್ಲದ ಅಸಹಾಯಕತೆಯಲ್ಲಿಯೂ ಪ್ರಕೃತಿಯ ವೈವಿಧ್ಯಮಯ ಜೀವಗಳೇ ಜೀವನಾಡಿಗಳಾಗುವುದು ಒಂದು ಬಗೆಯ ಆನಂದಾತೀತವೇ ಆಗಿದೆ. ಅಷ್ಟರಮಟ್ಟಿಗೆ ಪ್ರಕೃತಿ ದಯಾಮಯಿ. ಅದನ್ನು ಕುಂಚ ಭಾಷೆಯಲ್ಲಿ ಹೇಳಿದ್ದಾರೆ ಭಾರತಿ ಅವರು.

ಹಕ್ಕಿ–ಮನುಷ್ಯ, ಮನುಷ್ಯ–ಮರ ಇವು ವಾದಿ–ಸಂವಾದಿಯಾಗಿ ನೋಡುಗರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತವೆ. ಊರ ಹೆಬ್ಬಾಗಿಲಿನ ಮುಂದೆ ನಿಂತ ಕಾಷಾಯ ವಸ್ತ್ರಧಾರಿಯ ಕೈಯಲ್ಲಿ ಹೂವು ಅರಳಿದಂತೆ ಕಾಣುವ ಪಾರಿವಾಳದ ಕಣ್ಣುಗಳು, ಕಾಷಾಯಧಾರಿಯ ಕರುಣಾರಸ ಉಕ್ಕಿಸುವ ಕಣ್ಣುಗಳೆರಡೂ ಧಾವಂತದ ಹಾದಿಯಲ್ಲಿ ಕಳೆದುಕೊಂಡ ‘ಕರುಣಾರಸ’ವನ್ನು ಕಲಾಸಕ್ತರಲ್ಲಿ ನೆನಪಿಸಿದರೆ ಆಶ್ಚರ್ಯವೇನಿಲ್ಲ. ಕಾಫಿಯೋ, ಟೀಯೋ ಅಥವಾ ಕಷಾವಯೋ ಏನನ್ನೋ ಹೀರುತ್ತಿರುವ ಇಬ್ಬರು ತರುಣಿಯರು ತಮ್ಮ ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ಹಲವು ಕಥೆಗಳು, ತುಟಿಯವರೆಗೂ ಬಂದು, ಅವುಗಳನ್ನೆ ಮತ್ತೆ ತಾವೇ ಹೀರಿ, ಒಳಗೆ ಎಳೆದುಕೊಳ್ಳುತ್ತಿದ್ದಾರೇನೋ ಎನ್ನುವಂತೆ ಕಾಣುತ್ತದೆ. ಈ ತರುಣಿಯರ ಸಂಭಾಷಣೆಯನ್ನು ಕದ್ದು ಆಲಿಸುವಂತೆ ಕಾಣುವ ಕೆಲ ಅಸ್ಪಷ್ಟ ನೆರಳುಗಳ ಚಿತ್ರಣವು ಒಟ್ಟು ಕಲಾಕೃತಿಗೆ ನಿಗೂಢ ಸ್ಪರ್ಶವನ್ನು ನೀಡಿದೆ.

ಕಾಗದ ಮತ್ತು ಕ್ಯಾನ್ವಾಸ್ ಮೇಲೆ ಡ್ರೈ ಪೇಸ್ಟಲ್, ಚಾರ್ಕೋಲ್, ಅಕ್ರಿಲ್ ಪಿಗ್ಮೆಂಟ್ಗಳನ್ನು ಬಳಸಿ ಹಲವು ಕಲಾಕೃತಿಗಳನ್ನು ರೂಪಿಸಿದ್ದಾರೆ. ಒಂದೊಂದು ಕಲಾಕೃತಿಯು ಒಂದು ಕಥೆಯ ಸಾರವನ್ನೇ ಅಡಗಿಸಿಟ್ಟುಕೊಂಡಿದೆ. ‘ಪ್ರತಿಬಿಂಬ’ ಕಲಾಕೃತಿಯಲ್ಲಿರುವ ಪಾತ್ರದ ಭಾವಾಭಿವ್ಯಕ್ತಿಯನ್ನು ಬಹಳ ಸೊಗಸಾಗಿ ಮೂಡಿಸಿದ್ದಾರೆ.ಕೊಂಚ ತುಟಿ ಅಗಲಿಸಿ ನಕ್ಕ ನಗು ಮತ್ತೆ ಮತ್ತೆ ಕಲಾಕೃತಿಯನ್ನು ನೋಡುವಂತೆ ಮಾಡುತ್ತದೆ.

76 ವರ್ಷದ ಭಾರತಿ ಸಾಗರ್ ಅವರು ರಚಿಸಿದ 25ಕ್ಕೂ ಅಧಿಕ ಕಲಾಕೃತಿಗಳು ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ಎಂಕೆಎಫ್ ಮ್ಯೂಸಿಯಂ ಆಫ್ ಆರ್ಟ್ಸ್ನಲ್ಲಿ ಜುಲೈ 2ರವರೆಗೆ ಪ್ರದರ್ಶನಗೊಳ್ಳಲಿದೆ.

ಪ್ರಕೃತಿಯೇ ಉತ್ತರ

ಭಾರತಿ ಅವರ ಕಲಾಕೃತಿಗಳ ಒಟ್ಟಂದದ ಸಾರವೇ ಪ್ರಕೃತಿಯೊಳಗೆ ಮನುಷ್ಯ ಮತ್ತು ಮನುಷ್ಯನೊಳಗೆ ಪ್ರಕೃತಿ. ಅವೆರಡೂ ಒಂದನ್ನೊಂದು ಬಿಟ್ಟು ಇರಲಾರವು. ಜಂಜಡದ ಬದುಕು ಒಡ್ಡುವ ಹಲವು ಪ್ರಶ್ನೆಗಳಿಗೆ ಆತ್ಯಂತಿಕವಾಗಿ ಪ್ರಕೃತಿಯೇ ಉತ್ತರ ಎಂಬುದನ್ನು ಇವರ ಕಲಾಕೃತಿಗಳು ನಿರೂಪಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.