ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜ್ಜರ್‌ ಮಹಿಳೆಯರ ಬಾಳಲ್ಲಿ ಹೊಂಬೆಳಕು

ದಾನೀಶ್‌ ಶೌಕತ್‌, ಅಮಾನ್‌ ಭಟ್‌
Published : 1 ಸೆಪ್ಟೆಂಬರ್ 2024, 1:49 IST
Last Updated : 1 ಸೆಪ್ಟೆಂಬರ್ 2024, 1:49 IST
ಫಾಲೋ ಮಾಡಿ
Comments

ಶಾಹಿದಾ ಖಾನಂ, ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುಜ್ಜರ್‌ ಸಮುದಾಯದ ಯುವತಿ. ಇವರು ಕಾಶ್ಮೀರದಲ್ಲಿ ಮೊದಲ ಬುಡಕಟ್ಟು ಮ್ಯೂಸಿಯಂ ತೆರೆಯುವ ಮೂಲಕ ಕಣಿವೆಯಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಗತಕಾಲದ ವಸ್ತುಗಳನ್ನು ಸಂರಕ್ಷಿಸುವ ಜೊತೆಗೆ ಸ್ಥಳೀಯ ಮಹಿಳೆಯರಿಗೆ ಕೌಶಲಗಳನ್ನು ಹೇಳಿಕೊಟ್ಟು ಅವರು ಮತ್ತು ಅವರ ಕುಟುಂಬ ಸಬಲವಾಗುವ ದಾರಿ ತೋರಿಸಿಕೊಡುತ್ತಿದ್ದಾರೆ.

ಕಾಶ್ಮೀರದ ಜನಸಂಖ್ಯೆಯಲ್ಲಿ ಕೇವಲ ಶೇ11.9ರಷ್ಟು ಇರುವ ಗುಜ್ಜರ್‌ ಸಮುದಾಯವು ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ಅರೆ ಅಲೆಮಾರಿಗಳಾಗಿರುವ ಈ ಸಮುದಾಯದ ಜನರು ಕೃಷಿ ಮತ್ತು ಪಶುಸಂಗೋಪನೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಆಧುನಿಕತೆ ಮತ್ತು ಇತರ ಸವಾಲುಗಳಿಂದಾಗಿ ಈ ಬುಡಕಟ್ಟು ಜನರ ಜೀವನ ಸಂಕಷ್ಟದಲ್ಲಿದೆ. ಇದನ್ನು ಗಮನಿಸಿದ ಶಾಹಿದಾ ಖಾನಂ ಅವರು ತಮ್ಮ ಜನರ ಸಂಸ್ಕೃತಿಯನ್ನು ರಕ್ಷಿಸುವ ಪಣ ತೊಟ್ಟು, ಅದಕ್ಕಾಗಿ ಪುಟ್ಟ ಹೆಜ್ಜೆ ಇರಿಸಿದರು.

ತಮ್ಮ ಸಮುದಾಯದ ಸಾಂಪ್ರದಾಯಿಕ ಉಡುಗೆ–ತೊಡುಗೆಗಳು, ಆಭರಣಗಳು, ಕೃಷಿ ಉಪಕರಣಗಳು, ಸಂಗೀತ ಸಾಧನಗಳು ಸೇರಿದಂತೆ ವಿವಿಧ ಕರಕುಶಲ ವಸ್ತುಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಆರಂಭಿಸಿದರು. ಇಲ್ಲಿರುವ ಪ್ರತಿಯೊಂದು ಕರಕುಶಲ ವಸ್ತುಗಳೂ ಗುಜ್ಜರ್‌ ಸಮುದಾಯದ ಜೀವನ ವಿಧಾನವನ್ನು ಸಾರುತ್ತವೆ.

ಶಾಹಿದಾ ಖಾನಂ ಮ್ಯೂಸಿಯಂ ಸ್ಥಾಪಿಸಿ ಸುಮ್ಮನಾಗಲಿಲ್ಲ. ಅದರಲ್ಲಿನ ಪುಟ್ಟ ಕೊಠಡಿಯನ್ನು ಮಹಿಳೆಯರ ತರಬೇತಿ ಕೇಂದ್ರವಾಗಿ ಮಾರ್ಪಡಿಸಿದರು. ಇಲ್ಲಿ ಮಹಿಳೆಯರು ಬಟ್ಟೆ ಹೊಲಿಯುವುದು, ಕುಸುರಿ, ಆಭರಣ ತಯಾರಿಕೆಯನ್ನು ಕಲಿತರು. ಮಹಿಳೆಯರು ತಮ್ಮದೇ ಸಂಸ್ಕೃತಿಯೊಂದಿಗೆ ಬೆರೆಯಲು ಮತ್ತು ಹಣ ಸಂಪಾದಿಸಲು ಈ ಕೌಶಲಗಳಿಂದ ಸಾಧ್ಯವಾಯಿತು. ಇದು ಹಲವು ಮಹಿಳೆಯರ ಬಾಳಿನಲ್ಲಿ ಬಹುದೊಡ್ಡ ಬದಲಾವಣೆ ತಂದಿತು. ಸಾಂಪ್ರದಾಯಿಕ ಕೌಶಲದ ಕಲಿಕೆಯಿಂದಾಗಿ ಇವರೀಗ ಕುಟುಂಬದ ನಿರ್ವಹಣೆಗೆ ನೆರವಾಗುತ್ತಿದ್ದಾರೆ. ಶಾಹಿದಾ ಖಾನಂ ಅವರಿಂದಾಗಿ ಸ್ಥಳೀಯ ಮಹಿಳೆಯರು ವಿವಿಧ ಕೌಶಲಗಳನ್ನು ಕಲಿಯುವುದರ ಜೊತೆಗೆ ಆದಾಯದ ಮೂಲವನ್ನೂ ಕಂಡುಕೊಂಡಿದ್ದಾರೆ.

ಶಾಹಿದಾ ಅವರ ತರಬೇತಿ ಕಾರ್ಯಕ್ರಮದ ಫಲಾನುಭವಿ ತಹಿರಾ ಖಾನಂ ತಮ್ಮ ಜೀವನದಲ್ಲಾದ ಬದಲಾವಣೆಯ ಕತೆಯನ್ನು ಹಂಚಿಕೊಂಡಿದ್ದು ಹೀಗೆ–‘ಬಟ್ಟೆ ಹೊಲಿಯುವ ಕಲಿಕೆಯು ಅದ್ಭುತವಾಗಿತ್ತು. ನಾನೀಗ ಬೇರೆಯವರಿಗೂ ಹೇಳಿಕೊಡುತ್ತಿದ್ದೇನೆ. ಹಣ ಗಳಿಸಲು ಮತ್ತು ಉದ್ಯೋಗ ಹುಡುಕಲು ತುಂಬಾ ಸಹಾಯವಾಯಿತು. ಮತ್ತಷ್ಟು ಹೆಣ್ಣುಮಕ್ಕಳು ಈ ತರಬೇತಿ ಕೇಂದ್ರದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಭಾವಿಸುತ್ತೇನೆ’.

ತಹಿರಾ ಅವರ ಅನುಭವವು ತರಬೇತಿ ಕೇಂದ್ರ ತಂದ ಬದಲಾವಣೆವನ್ನು ಸಾರುತ್ತದೆ. ಅದು ಸಂಪ್ರದಾಯವನ್ನು ಜೀವಂತವಾಗಿ ಇಡುವುದಷ್ಟೇ ಅಲ್ಲದೆ, ಮಹಿಳೆಯರಿಗೆ ಕೌಶಲವನ್ನು ಕಲಿಸಿ ಅವರನ್ನು ಆರ್ಥಿಕವಾಗಿಯೂ ಸಬಲರನ್ನಾಗಿ ಮಾಡಿದೆ.

ಶಾಹಿದಾ ಅವರ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ನಾಯಕರು ಗುರುತಿಸಿದ್ದಾರೆ. ಅವರ ಯೋಜನೆಯನ್ನು ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಸಮಾಗಮದ ಮಾದರಿಯಾಗಿ ಕಂಡಿದ್ದಾರೆ. ‘ಶಾಹಿದಾ ಅವರ ಯೋಜನೆಯು ಸ್ತ್ರೀ ಶಕ್ತಿ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಸಂರಕ್ಷಣೆಯ ಮಹತ್ವವನ್ನು ಸಾರುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಾಹಿದಾ ಅವರು ಮ್ಯೂಸಿಯಂ ಮತ್ತು ತರಬೇತಿ ಕೇಂದ್ರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇನ್ನಷ್ಟು ಮಹಿಳೆಯರನ್ನು ತಲುಪುವ ಮತ್ತು ಕರಕುಶಲ ವಸ್ತುಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಸವಾಲುಗಳನ್ನು ಮೆಟ್ಟಿ ಮುನ್ನಡೆಯುವ ವಿಶ್ವಾಸವೂ ಅವರಿಗಿದೆ.

ಮ್ಯೂಸಿಯಂ ನಮ್ಮ ಇತಿಹಾಸವನ್ನು ಕಾಪಿಡುವ ಮತ್ತು ಯುವ ಜನರಿಗೆ ನಮ್ಮ ಶ್ರೀಮಂತ ಪರಂಪರೆಯ ಮಹತ್ವವನ್ನು ದಾಟಿಸುವ ವಿಧಾನ
ಶಾಹಿದಾ ಖಾನಂ ಮ್ಯೂಸಿಯಂ ರೂವಾರಿ
ಶಾಹಿದಾ ಖಾನಂ
ಶಾಹಿದಾ ಖಾನಂ

ಒಬ್ಬ ವ್ಯಕ್ತಿಯ ಸಣ್ಣ ಪ್ರಯತ್ನದಿಂದ ಮಹತ್ವದ ಸಾಮಾಜಿಕ ಬದಲಾವಣೆ ತರಬಹುದು ಎಂಬುದಕ್ಕೆ ಶಾಹಿದಾ ಖಾನಂ ಅವರ ಪರಿಶ್ರಮವೇ ಸಾಕ್ಷಿ. ಅವರ ಮ್ಯೂಸಿಯಂ ಮತ್ತು ತರಬೇತಿ ಕೇಂದ್ರವು ಗತಕಾಲ ವಸ್ತುಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಉತ್ತಮ ಭವಿಷ್ಯಕ್ಕಾಗಿ ಅವಕಾಶಗಳನ್ನೂ ಸೃಷ್ಟಿಸಿದೆ. ಶಾಹಿದಾ ಅವರ ಸಮರ್ಪಣಾ ಭಾವ ಮತ್ತು ದೂರದೃಷ್ಟಿಯು ಆರ್ಥಿಕ ಸಬಲೀಕರಣದ ಮೂಲಕ ಸಾಂಸ್ಕೃತಿಕ ಸಂರಕ್ಷಣೆಯು ಹೇಗೆ ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದೆ.

ಅನುವಾದ: ಕೀರ್ತಿಕುಮಾರಿ ಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT