ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಗೆ ಹೊರಟ ಕರ್ವಾಲೋ

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

ಜರ್ಮನಿಯ ವ್ಯೂರ್ತ್ಸ್ ಬುರ್ಗ್‌ ವಿಶ್ವವಿದ್ಯಾಲಯದ ಇಂಡಾಲಜಿ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದವರು ವಿವೇಕ ರೈ. ಅಲ್ಲಿ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿಯ ವಿಷಯಗಳನ್ನು ಬೋಧಿಸುತ್ತಿದ್ದರು. 2011ರಲ್ಲಿ ಒಮ್ಮೆ ಅಲ್ಲಿನ ವಿಭಾಗದಲ್ಲಿ ಹಿಂದಿ ಪ್ರಾಧಾಪಕಿ ಆಗಿರುವ ಡಾ. ಬಾರ್ಬರ ಲೊಟ್ಜ್ ಅವರೊಡನೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಜರ್ಮನಿಯ ದ್ರೌಪದಿ ವೆರ್ಲಾಗ್ ಎಂಬ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ಕ್ರಿಶ್ಚಿಯನ್ ವೆಯ್ಸ್ ಕೂಡ ಜತೆ ಸೇರಿಕೊಂಡರಂತೆ. ವೆಯ್ಸ್ ಅವರು ಭಾರತೀಯ ಭಾಷೆಗಳ ಕೃತಿಗಳ ಜರ್ಮನ್ ಅನುವಾದದ ಪ್ರಕಟಣೆಗೆ ತಮ್ಮ ಪ್ರಕಾಶನ ಸಂಸ್ಥೆಗೆ 'ದ್ರೌಪದಿ' ಎಂದು ಹೆಸರಿಟ್ಟುಕೊಂಡಿದ್ದಾರೆ. ಈ ಪ್ರಕಾಶನ ಸಂಸ್ಥೆ ಈವರೆಗೆ ಹೆಚ್ಚಾಗಿ ಪ್ರಕಟಿಸಿದ್ದು ಹಿಂದಿ ಕೃತಿಗಳ ಜರ್ಮನ್ ಅನುವಾದಗಳನ್ನು. ಕನ್ನಡ ಗ್ರಂಥಗಳ ಜರ್ಮನ್ ಅನುವಾದವನ್ನು ಪ್ರಕಟಿಸಬಹುದೇ ಎಂದು ವಿವೇಕ ಅವರು ಕೇಳಿದಾಗ 'ಮಹತ್ವದ ಕೃತಿಗಳಿದ್ದರೆ ಸೂಚಿಸಿ, ಕಾದಂಬರಿ ಇದ್ದರೆ ನೋಡೋಣ. ಅದರ ಇಂಗ್ಲಿಷ್ ಅನುವಾದ ಪ್ರಕಟ ಆಗಿದ್ದರೆ ಒಳ್ಳೆಯದು. ಓದಿ, ಬಳಿಕ ಯಾರು ಅನುವಾದ ಮಾಡಬಲ್ಲರು ಎಂದು ಕೂಡಾ ಸಲಹೆ ಕೊಡಿ' ಎಂದರಂತೆ. ಇವರಿಗೆ ರೋಮಾಂಚನ. ರಾತ್ರಿ ಇಡೀ ಯೋಚಿಸಿದ ನಂತರ ಅಂತಿಮವಾಗಿ ಸಿಕ್ಕಿದ್ದು ತೇಜಸ್ವಿ ಬರೆದ 'ಕರ್ವಾಲೊ'. ಮರುದಿನವೇ ಪ್ರಕಾಶಕ ವೆಯ್ಸ್ ಅವರಿಗೆ ಇ– ಮೇಲ್ ಮೂಲಕ 'ಕರ್ವಾಲೊ' ಬಗ್ಗೆ ಸೂಚನೆ ಮತ್ತು ಮಾಹಿತಿ ಕೊಟ್ಟು, ಕೆಲವು ಸಮಯದ ಬಳಿಕ ಅದರ ಇಂಗ್ಲಿಷ್ ಅನುವಾದ ಗ್ರಂಥವನ್ನೂ ಕಳುಹಿಸಿಕೊಟ್ಟರು. ಮುಂದೊಂದು ದಿನ ‘ಕರ್ವಾಲೊ’ದ ಜರ್ಮನ್ ಅನುವಾದ ಗ್ರಂಥದ ಪ್ರಕಾಶನಕ್ಕೆ ತಾನು ಸಿದ್ಧ ಎಂದು ವೆಯ್ಸ್ ತಿಳಿಸಿದರು.

ಅಲ್ಲಿಂದ ಶುರುವಾಯಿತು ಪಯಣ. ಮಲೆನಾಡಿನ ಕಾಡುಗಳು ಕಂಡ ಕನ್ನಡದ ಪಾತ್ರಗಳನ್ನು ವಿದೇಶಿ ನೆಲದಲ್ಲಿ ತಂದು ನಿಲ್ಲಿಸಬೇಕಿತ್ತು. ಅಲ್ಲಿ ಬರಿಯ ಕನ್ನಡ ಇತ್ತು ಎಂದು ಸರಳವಾಗಿ ಹೇಳಿ ಮುಗಿಸಬಹುದೆ? ತೇಜಸ್ವಿ ಅವರ ಕೃತಿಗಳನ್ನು ಓದಲು ಬೇರೆಯದೇ ಮಾನಸಿಕ ಸ್ಥಿತಿ ಬೇಕಾಗುತ್ತದೆ. ಅವರ ಹೆಚ್ಚಿನ ಕೃತಿಗಳಲ್ಲಿ ಪ್ರಕೃತಿಯೂ ಒಂದು ಮುಖ್ಯ ಪಾತ್ರ. ಅದರಲ್ಲೂ ಕರ್ವಾಲೊ ಅತ್ಯಂತ ಸರಳವಾದ ಮತ್ತು ಅತ್ಯಂತ ಸಂಕೀರ್ಣವೂ ಆದ ಕೃತಿ ಎಂದು ಗುರುತಿಸಿಕೊಂಡಿದೆ. ಹೇಗಿತ್ತು ಅನುವಾದದ ಈ ಪಯಣ ಎಂದರೆ ರೈ– ಈ ಕಾದಂಬರಿಯ ಕನ್ನಡ ಭಾಷಾಶೈಲಿಯಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಸಂಭಾಷಣೆಗಳಲ್ಲಿ ಮಲೆನಾಡಿನ ಅಪ್ಪಟ ದೇಸಿ ಕನ್ನಡದ ನುಡಿಗಟ್ಟುಗಳು, ಬೈಗುಳಗಳು ವಿಶೇಷವಾಗಿ ಕಾಣಿಸುತ್ತವೆ. ಕಾದಂಬರಿಯ ನಿರೂಪಣೆಯ ಭಾಗದಲ್ಲಿ ಕೆಲವೊಮ್ಮೆ ವಿಷಯಾನುಸಾರವಾಗಿ ಬಹಳ ಗಂಭೀರವಾದ ಗ್ರಾಂಥಿಕ ಕನ್ನಡದ ಶೈಲಿ ಇದೆ; ಸಂಸ್ಕೃತ ಭೂಯಿಷ್ಠ ಕನ್ನಡ ಶೈಲಿಯೂ ಗಹನವಾದ ವಿವರಗಳನ್ನು ವರ್ಣಿಸಲು ಬಳಕೆಯಾಗಿದೆ. ಪರ್ಯಾಯ ಪದ ಹುಡುಕುವಾಗ ಭಾಷಾವೈಜ್ಞಾನಿಕ ಶಿಫ್ಟ್ ಸಿಗದೆ ಈ ರೀತಿಯ ಬಹುರೂಪಿ ಕನ್ನಡ ಶೈಲಿಯ ವಾಕ್ಯಗಳ ಜರ್ಮನ್ ಅನುವಾದ ಒಂದು ದೊಡ್ಡ ಸವಾಲು ಆಗಿತ್ತು ಎನ್ನುತ್ತಾರೆ.

ರೈ ಅವರು ಮೊದಲು ಕೃತಿಯನ್ನು ಓದಿದ್ದು, ಎಂ.ಎ. ವಿದ್ಯಾರ್ಥಿಗಳಿಗೆ ಅದನ್ನು ಪಾಠ ಕೂಡ ಮಾಡಿದವರು. ಆದರೂ ಮತ್ತೊಮ್ಮೆ ಓದು ಬೇಕಾಗಿತ್ತು. ಕೆಲವು ಬಾರಿ ಇಡಿಯಾಗಿ ಓದಿಕೊಂಡು ಹೋದವರು. ಕನ್ನಡ ಗೊತ್ತಿರುವ ಅವರು ಕನ್ನಡ ಗೊತ್ತಿರುವವರಿಗೆ ಹೇಳುವಾಗ ಕತೆ ಮತ್ತು ಅದರ ಗ್ರಹಿಕೆ ಮುಖ್ಯವಾಗುತ್ತಿತ್ತು. ಆದರೆ ಈಗ ವ್ಯಾಕರಣ, ವಾಕ್ಯರಚನೆಯನ್ನು ವಿಶೇಷವಾಗಿ ಗಮನಿಸಬೇಕಿತ್ತು. ಈಗ ಯಾವ ವಾಕ್ಯವನ್ನೂ ಬಿಡದಂತೆ ಅನುವಾದ ನಡೆದಿದೆ.

ಕತ್ರಿನ್ ಅವರು ಸಂಜೀವ ಸುವರ್ಣರ ಜೊತೆ ಇದ್ದಾಗ, ಯಕ್ಷಗಾನದ ನೃತ್ಯ ಅಭ್ಯಾಸ ಮಾಡಿ, ಪಿಎಚ್. ಡಿ ಪದವಿಗಾಗಿ ಯಕ್ಷಗಾನದ ಬಗ್ಗೆ ಥೀಸಿಸ್ ಕೂಡ ಬರೆದವರು. ರೈ ಮತ್ತು ಕತ್ರಿನ್ ಜೊತೆಯಾಗಿ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದಲ್ಲಿ ಯುರೋಪಿಯನ್ ಅಭ್ಯರ್ಥಿಗಳಿಗೆ ಕನ್ನಡ ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಕರ್ವಾಲೊ ಅನುವಾದದ ಕೆಲಸದಲ್ಲಿ ಜೊತೆಯಾಗಿ ಕನ್ನಡ ಪುಸ್ತಕದ ಸಾಲು ಸಾಲುಗಳನ್ನು ಓದುತ್ತಾ ಅವುಗಳ ವಾಕ್ಯರಚನೆ ಮತ್ತು ಅರ್ಥಛಾಯೆಗಳನ್ನು ಗಮನಿಸುತ್ತಾ ವಿನಿಮಯ ಮಾಡಿಕೊಂಡರು. ಮಲೆನಾಡಿನ ಭಾಷೆ, ಜೀವನ ಸಂಸ್ಕೃತಿಯನ್ನು ಬಿಡಿಬಿಡಿಯಾಗಿ ವಿವರಿಸಬೇಕಿತ್ತು. ಸ್ಥಳೀಯ ಗುಣ ಗ್ರಹಿಸುವುದು ದೊಡ್ಡ ಸವಾಲಾಗಿತ್ತು. ಕತ್ರಿನ್ ಮೂಲ ಕನ್ನಡ ವಾಕ್ಯಗಳನ್ನು ನೇರವಾಗಿ ಜರ್ಮನ್ ಭಾಷೆಗೆ ಅನುವಾದಿಸುತ್ತ ರೈ ಬಳಿ ವಿವರಣೆ ಕೇಳುತ್ತ ಮುಂದುವರಿದರು. ಇಬ್ಬರೂ ಬಹಳ ಬಾರಿ ಜರ್ಮನಿಯಲ್ಲಿ, ಒಮ್ಮೆ ಇಂಗ್ಲೆಂಡಿನಲ್ಲಿ ಒಟ್ಟಿಗೆ ಕುಳಿತು ಮೂಲ ಕೃತಿಯನ್ನು ಓದುತ್ತಾ ಅರ್ಥೈಸುತ್ತಾ ಮುಂದುವರಿದರು. ಇ–ಮೇಲ್‌ಗಳ ನಿರಂತರ ವಿನಿಮಯ ಮಾಡುತ್ತಾ ಮತ್ತೆ ಮತ್ತೆ ತಿದ್ದುತ್ತಾ ಹೋದಂತೆ ಸ್ಪಷ್ಟ ರೂಪ ದೊರೆಯತೊಡಗಿತ್ತು. ಜರ್ಮನ್ ಅನುವಾದದ ಪೂರ್ಣ ಹೊಣೆ ಕತ್ರಿನ್ ಅವರದ್ದು. ಕನ್ನಡದ ಮೂಲಕೃತಿಯ ಅರ್ಥ ವಿವರಣೆ ಬಹುಪಾಲು ರೈ ಅವರದು.

ಅದಾವ ಮೋಹನ ಮುರಳಿ ಕರೆಯಿತೊ ಈ ದೂರ ತೀರಕೆ ಎಂದರೆ, ‘ಅದೇನೊ ವಿವರಿಸಲಾಗದ ಆಕರ್ಷಣೆ ಇತ್ತು. ಇಂಡಾಲಜಿ ಅಭ್ಯಸಿಸಿದ್ದೆ. ಇಲ್ಲಿಯ ವಿವಿಧ ಭಾಷೆ, ಸಂಸ್ಕೃತಿಗಳಲ್ಲಿ ಆಸಕ್ತಿ. ಭಾರತೀಯ ಭಾಷೆಗಳನ್ನು ಅದರಲ್ಲೂ ಆರಂಭದಲ್ಲಿ ಸಂಸ್ಕೃತ ಕಲಿಯುವ ಉತ್ಸಾಹ. ಯುರೋಪಿನ ಭಾಷೆಗಳೊಡನೆ ಇರುವ ಸಂಸ್ಕೃತದ ನಂಟು ಮತ್ತು ದೇವ ಭಾಷೆ ಎಂಬ ಹಣೆಪಟ್ಟಿ ಕಾರಣವಿರಬಹುದು. ನಂತರ ಇತರ ಭಾರತೀಯ ಭಾಷೆಗಳ ವೈವಿಧ್ಯ, ಅವುಗಳಲ್ಲಿದ್ದ ಕಾವ್ಯಾತ್ಮಕ ಗುಣ ಮತ್ತು ಭಾರತೀಯ ಸಂಸ್ಕೃತಿಗಳಿಗೆ ತೆರೆದುಕೊಳ್ಳತೊಡಗಿದ್ದೆ. ಅದರಲ್ಲೂ ದ್ರಾವಿಡ ಭಾಷೆಗಳು ವಿಶೇಷವಾಗಿ ಕನ್ನಡದ ಮೇಲೆ ಪ್ರೀತಿ ಹುಟ್ಟತೊಡಗಿತು. ಕನ್ನಡದ ಭವ್ಯ ಸಾಹಿತ್ಯಿಕ ಚರಿತ್ರೆಯಿಂದ ಪ್ರಭಾವಿತ ಆದೆ’ ಎನ್ನುತ್ತಾರೆ ಕತ್ರಿನ್. ವಚನಗಳು, ಕನ್ನಡ ಮಹಾಕಾವ್ಯಗಳು ಮತ್ತು ಯಕ್ಷಗಾನ ಪ್ರಸಂಗಗಳು ಈಗಲೂ ಅಸ್ತಿತ್ವದಲ್ಲಿವೆ ಎಂಬುದು ಅವರನ್ನು ಸೆಳೆದ ಮುಖ್ಯ ಅಂಶ. ಜರ್ಮನಿಯವರೇ ಆದ ಕತ್ರಿನ್ ಕನ್ನಡದ ನಂಟು 2000ನೇ ಇಸ್ವಿಯಷ್ಟು ಹಿಂದಿನಿಂದ ಆರಂಭವಾದುದು. ಆಗ ಕೇರಳ, ಕರ್ನಾಟಕಕ್ಕೆ ಬಂದವರು. ಕರಾವಳಿಯಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದ ಪ್ರೊ. ಹೈದ್ರೂನ್ ಬ್ರೂಕ್ನರ್ ಬಳಿ ಅಧ್ಯಯನ ಮಾಡಿದ್ದವರು. ಅವರಿಂದಲೇ ಈ ಭಾಗದಲ್ಲಿ ಅಧ್ಯಯನ ನಡೆಸಲು ಪ್ರೋತ್ಸಾಹ ದೊರೆತದ್ದಂತೆ. ಆರಂಭದಲ್ಲಿ ಕರಾವಳಿ ಭಾಗದಲ್ಲಿ ನೆಲೆಸಿದ್ದಾಗ ತುಳು ಮಾತನಾಡಲು ಕಲಿತದ್ದಿದೆ. ನಂತರ ಕನ್ನಡ ಕಲಿತರಾದರೂ ಜನರ ಜೊತೆ ಸಂಪರ್ಕಕ್ಕೆ ಬಂದಂತೆ ಒಂದು ಪದವೂ ಅರ್ಥವಾಗಿರಲಿಲ್ಲವಂತೆ! ಮೈಸೂರು ಕನ್ನಡಕ್ಕೂ ಕರಾವಳಿ ಕನ್ನಡಕ್ಕೂ ಇದ್ದ ವ್ಯತ್ಯಾಸ ದಿಗಿಲು ಮೂಡಿಸಿತ್ತಂತೆ.

ಕ್ರಮೇಣ ವಿವೇಕ ರೈ ಅವರ ಬಳಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಿಯತೊಡಗಿದರು. ಬಳಿಕ ಉಡುಪಿಗೆ ಹೋಗಿ ನೆಲೆಸಿದಾಗ ಸ್ವಲ್ಪ ಸರಾಗ ಸಂವಹನ ಸಾಧ್ಯವಾಯಿತು. ಯಕ್ಷಗಾನ ಕೆಂದ್ರದಲ್ಲಿ ಕಲಿಯುತ್ತ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಕುಟುಂಬದ ಜತೆ ವಾಸಿಸತೊಡಗಿದಾಗ ಕನ್ನಡ ಒಲಿಯಿತು. ಅನೇಕರ ಪರಿಚಯ, ಸ್ನೇಹ, ಹಬ್ಬಗಳೆಲ್ಲ ಆಕರ್ಷಕ ಎನಿಸಿದವು. ಈಗ ಅವರು ಕನ್ನಡ ಕಾದಂಬರಿ ಓದಬಲ್ಲರು.

‘ಕರ್ವಾಲೋ ಓದಿದ್ದೀರಾ?’ ಎಂದರೆ ‘ಓಹೋ’ ಎನ್ನುತ್ತಾರೆ ಕತ್ರಿನ್. ಅದನ್ನು ಅವರು ಗ್ರಹಿಸಿದ್ದು ವಿವಿಧ ಮಜಲುಗಳಲ್ಲಿ ಓದಬಹುದಾದ ಕೃತಿಯಾಗಿ– ಹಾಸ್ಯ, ಸಾಮಾಜಿಕ ವಿವರಣೆ, ವೈಯಕ್ತಿಕ ಸತ್ಯ ಮತ್ತು ಅರ್ಥಗಳ ಅನ್ವೇಷಣೆಯಂತೆ ಹಾಗೂ ವಿಜ್ಞಾನ ಮತ್ತು ಅಧ್ಯಾತ್ಮದ ನಡುವಣ ಘರ್ಷಣೆಯಾಗಿ. ಪ್ರತಿ ಬಾರಿಯ ಓದಿನಲ್ಲೂ ಕೃತಿ ಅವರೊಡನೆ ಬೇರೆಯದೇ ಅಂಶಗಳೊಂದಿಗೆ ಸಂವಾದಿಸುತ್ತದೆ ಎನ್ನುತ್ತಾರೆ. ಹಾಸ್ಯ, ಮೋಜುಗಳಷ್ಟೇ ಆಳವಾದ ಗಾಂಭೀರ್ಯವೂ ಬೆರೆತ ‘ಕರ್ವಾಲೊ’ ಪರಿಸರ– ಮಾನವೀಯತೆಯನ್ನು ಚಿತ್ರಿಸುತ್ತದೆ ಮತ್ತು ಇವುಗಳಲ್ಲಿ ಯಾವ ಅಂಶವೂ ಇಂದಿಗೂ ಮಹತ್ವ ಕಳೆದುಕೊಳ್ಳದೇ ಉಳಿದಿದೆ ಎನ್ನುತ್ತಾರೆ.

ಭಾರತೀಯ ಕೃತಿಗಳು ಇಂಗ್ಲಿಷಿಗೆ ಅನುವಾದವಾಗುವುದು ಸಾಮಾನ್ಯ ಎಂಬಂತೆ ಆಗುತ್ತಿದೆ. ಆದರೆ ಯುರೋಪಿನ ಭಾಷೆಗಳಿಗೆ ಅನುವಾದ ಆಗಿದ್ದು ವಿರಳಾತಿವಿರಳ. ಈ ರೀತಿಯ ನೇರ ಅನುವಾದಗಳನ್ನು ಪ್ರೋತ್ಸಾಹಿಸುವ ಜರ್ಮನಿಯ ಸೊಸೈಟಿಯೊಂದರ ಸದಸ್ಯೆ ಕತ್ರಿನ್. ಹೆಚ್ಚಿನ ಅನುವಾದಕರು ಹಿಂದಿಯಿಂದ ಜರ್ಮನಿಗೆ, ಕೆಲವರು ಮರಾಠಿಯಿಂದ ಅನುವಾದಿಸುವವರು. ದಕ್ಷಿಣ ಭಾರತದ ಭಾಷೆಗಳು ಈ ವಿಚಾರದಲ್ಲಿ ಹಿಂದೆ ಬಿದ್ದಿವೆ. ಆದರೆ ಕೆಲವು ಸಮರ್ಥ ಅನುವಾದಕರು ದ್ರಾವಿಡ ಭಾಷೆಗಳಿಂದಲೂ ಕೃತಿಗಳನ್ನು ಜರ್ಮನಿಗೆ ತರುತ್ತಾರೆ. ಪ್ರೊ.ಎನ್‌.ಟಿ. ಭಟ್‌ ಅವರ ಸಹಾಯದೊಂದಿಗೆ ‘ಅಭಿಮನ್ಯು ಕಾಳಗ’ವನ್ನು, ಅಬ್ದುಲ್ ರಷೀದ್‌ ಅವರ ಸಣ್ಣ ಕತೆಯನ್ನು, ಅನಂತಮೂರ್ತಿ ಅವರ ‘ಆಕಾಶ ಮತ್ತು ಬೆಕ್ಕು’ ಹಾಗೂ ‘ಮೌನಿ’ ಕತೆಗಳನ್ನು ಜರ್ಮನ್‌ಗೆ ಭಾಷಾಂತರಿಸಿದ್ದಾರೆ.

ಯಕ್ಷಗಾನ ಪ್ರಸಂಗಗಳ ಮಧ್ಯಕಾಲೀನ ಕನ್ನಡ ಹಾಗೂ ಆಧುನಿಕ ಕನ್ನಡ ಕೃತಿಗಳ ಮಧ್ಯೆ ಜೀಕಿದ್ದಾರೆ. ‘ಕರ್ವಾಲೊ’ ಕೂಡ ಯಕ್ಷಗಾನ ಪ್ರಸಂಗದ ಅನುವಾದ ಕಾರ್ಯವೈಖರಿಗೆ ಹತ್ತಿರವಾಗಿತ್ತು ಎನ್ನುತ್ತಾರೆ ಕತ್ರಿನ್. ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಅವರು ಅನೇಕ ಬಾರಿ ಹೋಟೆಲ್‌, ರೂಮ್‌, ಅಪಾರ್ಟ್‌ಮೆಂಟ್‌, ಗೆಸ್ಟ್‌ಹೌಸು, ವಿಶ್ವವಿದ್ಯಾಲಯಗಳಲ್ಲಿ ರೈ ಅವರೊಟ್ಟಿಗೆ ಕುಳಿತು ಈ ಕೆಲಸ ಪೂರೈಸಿದ್ದಾರೆ. ತುಂಬ ಸಲ ಮನಬಿಚ್ಚಿ ನಕ್ಕ ಗಳಿಗೆಗಳನ್ನು ನೆನೆಯುತ್ತಾರೆ. ಅಷ್ಟೊಂದು ಹಾಸ್ಯ ಪ್ರಸಂಗಗಳಿವೆಯಲ್ಲ ಅದರಲ್ಲಿ... ಒಂದು ಕಡೆ ನಾಯಿಯ ಕಿವಿಗೆ ಏನೋ ಆಗುತ್ತದೆ. ನಾಯಿಯ ಹೆಸರೂ ಕಿವಿ. ಅಲ್ಲಿ ಸಾಕಷ್ಟು ಮೋಜಿದೆ. ಆದರೆ ಅನುವಾದಕಿಯಾಗಿ, ಕವಿ ಮತ್ತು ಅಧ್ಯಯನಕಾರರಾಗಿ ಅವರನ್ನು ಸೆಳೆದಿದ್ದು ಅಲ್ಲಿನ ನಿರೂಪಕ ಲೇಖಕ ಮತ್ತು ಕರ್ವಾಲೊ ಪಾತ್ರಗಳು. ಹಾವಿನ ಪೊರೆ ತೆಗೆಯುವ ಘಟನೆ ಗ್ರಾಫಿಕ್‌ನಂತೆ ತೋರಿ ಅನುವಾದ ಕಷ್ಟಸಾಧ್ಯ ಎನಿಸಿದ್ದನ್ನು ಹಂಚಿಕೊಳ್ಳುತ್ತಾರೆ. ಎಲ್ಲಕ್ಕಿಂತ ದೊಡ್ಡ ಸವಾಲು ಅದರಲ್ಲಿನ ವಿವಿಧ ಪಾತ್ರಗಳು ಅಭಿವ್ಯಕ್ತಿಗೆ ಹಲವು ವಿಧಗಳನ್ನು ಬಳಸಿರುವುದು. ಭಿನ್ನ ರೀತಿಯ ಮಾತುಗಳನ್ನು ಅನುವಾದಿಸುವಾಗ ಒಂದೇ ಮಟ್ಟದಲ್ಲಿ ನೆಲೆಗೊಳಿಸದಂತೆ ಆದರೆ ಒಟ್ಟಂದದಲ್ಲಿ ನುಡಿಗಟ್ಟುಗಳನ್ನು ನಿರ್ವಹಿಸುವಂತೆ ಅನುವಾದಿಸಬೇಕಿತ್ತು. ಇದೆಲ್ಲದರ ನಡುವೆ ಅಧ್ಯಾತ್ಮದ ಎಳೆ ತಪ್ಪದಂತೆ ಸೂಕ್ತ ದನಿಯ ಏರಿಳಿತವನ್ನೂ ಕಾಣಿಸಬೇಕಿತ್ತು. ಕತ್ರಿನ್ ಅವರಿಗೆ ತೇಜಸ್ವಿ ಅವರಿದ್ದ ಸ್ಥಳ ಪರಿಚಯವಿಲ್ಲ ಆದರೆ ಘಟ್ಟ ಪ್ರದೇಶಗಳು ಇಷ್ಟ.

ಜರ್ಮನ್ ಅನುವಾದದ ಕರಡು ಪ್ರತಿ ಸಿದ್ಧವಾದ ಬಳಿಕ ಕತ್ರಿನ್ ಅದನ್ನು ಇಬ್ಬರು ಜರ್ಮನ್ ಸಾಹಿತಿ ಸಂಶೋಧಕರಿಗೆ ಸಲಹೆಗಳಿಗಾಗಿ ತೋರಿಸಿದ್ದಾರೆ. ಪ್ರೊ. ಹೈದ್ರೂನ್ ಬ್ರೂಕ್ನರ್ ಮತ್ತು ಉರ್ಸುಲ ಆಕ್ರಿಲ್ ಅವರು ಕರಡನ್ನು ಓದಿ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. 2012ರಿಂದಲೇ ಶುರುವಾದರೂ ಮಧ್ಯೆ ಸ್ವಲ್ಪ ಬೇರೆ ಕೆಲಸದತ್ತ ಗಮನಹರಿಸಿ ಅಂತೂ ಇದಕ್ಕೆಂದೇ ಸುಮಾರು ಮೂರು ವರ್ಷ ಮೀಸಲಿಟ್ಟ ನಂತರ ಇದು ಸಾಧ್ಯ ಆಗಿದೆ.

ಭಾರತದ ಕೃತಿಗಳಿಗೆ ಅಲ್ಲಿ ಬಹುದೊಡ್ಡ ಮಾರುಕಟ್ಟೇಯೇನೂ ಇಲ್ಲ, ಆದರೆ ಓದಿದವರು ಇಷ್ಟಪಟ್ಟಿದ್ದಾರೆ. ಭಾರತೀಯ ಭಾಷೆಗಳ ಅರಿವು ಅಲ್ಲಿ ವಿಸ್ತರಿಸುತ್ತಿದೆ ಎನ್ನುತ್ತಾರೆ ಕತ್ರಿನ್. ವೈಜ್ಞಾನಿಕವಾಗಿಯೂ ಸಾಕಷ್ಟು ಪ್ರಗತಿಹೊಂದಿದ ಜರ್ಮನ್ನರು ಈ ನಮ್ಮ ಕನ್ನಡದ ಸೊಗಡನ್ನು ಮುಖ್ಯವಾಗಿ ದೇಸೀ ಅರಿವಿನ ಹಿನ್ನೆಲೆಯಲ್ಲಿ ಹೇಗೆ ಗ್ರಹಿಸುವರೊ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT