ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆನಕ’ಗೆ ಸುವರ್ಣ ಸಂಭ್ರಮ

Published 24 ಮಾರ್ಚ್ 2024, 0:10 IST
Last Updated 24 ಮಾರ್ಚ್ 2024, 0:10 IST
ಅಕ್ಷರ ಗಾತ್ರ

‘ಬೆನಕ’…

ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹಲವು ಹೊಸತುಗಳಿಗೆ ನಾಂದಿ ಹಾಡಿದ ರಂಗತಂಡ. ರಂಗ ಜಂಗಮ ಬಿ.ವಿ. ಕಾರಂತ ಅವರ ಸಾರಥ್ಯದಲ್ಲಿ ಆರಂಭವಾದ ತಂಡ ಇಂದಿಗೂ ನಿರಂತರತೆ ಕಾಪಾಡಿಕೊಂಡ ಹೆಗ್ಗಳಿಕೆ ಹೊಂದಿದೆ. 1972ರಲ್ಲಿ ಬೆಂಗಳೂರಿನಲ್ಲಿ ನಡೆದ ಬಯಲು ರಂಗೋತ್ಸವ ಕನ್ನಡ ಹವ್ಯಾಸಿ ರಂಗಭೂಮಿಗೆ ಹೊಸದಿಕ್ಕು ನೀಡಿತು. ಈ ರಂಗೋತ್ಸವದ ಮೂಲಕ ಹವ್ಯಾಸಿ ರಂಗಕ್ಕೆ ಒಂರ್ಥದಲ್ಲಿ ವೃತ್ತಿಪರತೆಯೂ ದಕ್ಕಿತು. ಹೊಸ ಕಥಾವಸ್ತುಗಳ ಹುಡುಕಾಟ, ನಿರ್ದೇಶಕ, ಸಂಘಟಕ, ನೇಪಥ್ಯ ಕಲಾವಿದರನ್ನು ಮುಂಚೂಣಿಗೆ ತಂದ ಕಾಲಘಟ್ಟವಿದು.

ಆಗಷ್ಟೇ ರಾಜಧಾನಿಗೆ ಬಂದಿದ್ದ ಸಾಹಿತಿ ಚಂದ್ರಶೇಖರ ಕಂಬಾರರು, ಒಂದೆಡೆ ಪತ್ರಕರ್ತ ಪಿ. ಲಂಕೇಶ್, ಇನ್ನೊಂದೆಡೆ ರಂಗದಿಗ್ಗಜ ಬಿ.ವಿ. ಕಾರಂತ. ಬಯಲು ರಂಗೋತ್ಸವಕ್ಕಾಗಿ ಒಂದೇ ವರ್ಷದಲ್ಲಿ ‘ಜೋಕುಮಾರಸ್ವಾಮಿ, ಈಡಿಪಸ್, ಸಂಕ್ರಾಂತಿ’–ಹೀಗೆ ಮೂರೂ ನಾಟಕಗಳನ್ನೂ ನಿರ್ದೇಶಿಸಿದವರು ಕಾರಂತರು. ಈ ಕಾಲಘಟ್ಟದಲ್ಲೇ ‘ಬೆನಕ’ಕ್ಕೆ ಮುನ್ನುಡಿ ಬರೆಯಲಾಯಿತು. ‘ಬೆಂಚಿನಾಕ’ ಹೋಗಿ ‘ಬೆನಕ’ವಾಯಿತು.

1972ರಲ್ಲಿ ಭ್ರೂಣಾವಸ್ಥೆಯಲ್ಲಿದ್ದ ‘ಬೆನಕ’ಕ್ಕೆ ಪೂರ್ಣರೂಪ ದೊರೆತದ್ದು 1974ರಲ್ಲಿ. ಇದೀಗ 2024ರಲ್ಲಿ ಸುವರ್ಣ ಸಂಭ್ರಮದಲ್ಲಿರುವ ‘ಬೆನಕ’ ತಂಡವು ಪೂರ್ಣವಾಗಿ ರೂಪುಗೊಳ್ಳುವ ಮೊದಲೇ ‘ಶಕಶೈಲೂಷರು’, ‘ಬೆಂಚಿನಾಕ’ ಹೆಸರಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ರಂಗಭೂಮಿ ಮತ್ತು ಸಿನಿಮಾ ಕಲಾವಿದರನ್ನು ಒಟ್ಟಿಗೆ ಬೆಸೆದಿದ್ದ ತಂಡಕ್ಕೆ ಮೊದಲು ‘ಬೆಂಚಿನಾಕ’ (ಬೆಂಗಳೂರು ಚಿತ್ರ–ನಾಟಕ ಕಲಾವಿದರು) ಎಂಬ ಹೆಸರಿತ್ತು. ತಕ್ಷಣ ಕೇಳಿದರೆ ‘ಬೆಂಕಿಹಾಕ’ ಎಂದಾಗುತ್ತದೆ ಎಂದು ತಮಾಷೆ ಮಾಡಿದ್ದ ಪತ್ರಕರ್ತ ವೈಎನ್ಕೆ ಅವರು ತಂಡಕ್ಕೆ ‘ಬೆನಕ’ (ಬೆಂಗಳೂರು ನಗರ ಕಲಾವಿದರು) ಎಂದು ನಾಮಕರಣ ಮಾಡಿದರು.

ತಿರುಗಾಟದ ಆರಂಭ

ರಂಗ ಚಳವಳಿ ಉಚ್ಚ್ರಾಯದ ಸ್ಥಿತಿಯಲ್ಲಿದ್ದ ಆ ಕಾಲಘಟ್ಟದಲ್ಲಿ ಆರ್. ನಾಗೇಶ್, ಸಿ.ಆರ್. ಸಿಂಹ, ಜೆ.ಲೋಕೇಶ್, ಎನ್‌.ಕೆ.ಮೋಹನ್‌ರಾಂ, ಟಿ.ಎಸ್. ನಾಗಾಭರಣ, ಸುಂದರರಾಜ್, ಶ್ರೀನಿವಾಸ ಕಪ್ಪಣ್ಣ ಸೇರಿದಂತೆ ಹಲವು ರಂಗಕರ್ಮಿಗಳು ಸಕ್ರಿಯರಾಗಿದ್ದರು. 1973ರ ನವೆಂಬರ್/ಡಿಸೆಂಬರ್‌ನಲ್ಲಿ ರಾಜ್ಯದಾದ್ಯಂತ ತಿರುಗಾಟ ಆರಂಭಿಸಿದ್ದ ‘ಬೆನಕ’, ಹವ್ಯಾಸಿ ರಂಗಭೂಮಿಯಲ್ಲಿ ‘ತಿರುಗಾಟ’ಕ್ಕೆ ಚಾಲನೆ ನೀಡಿತು. ಬೆಂಗಳೂರಿನಲ್ಲಿ ಹೊಸ ನಾಟಕ ಆಗುತ್ತಿದೆಯೆಂದರೆ ಅದನ್ನು ವಿವಿಧ ಜಿಲ್ಲೆಗಳಲ್ಲಿ ತೆಗೆದುಕೊಂಡುಹೋಗುವ ಪರಿಪಾಟವಿತ್ತು. ಅಂದು ನಾಟಕವೊಂದು ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ತಕ್ಷಣವೇ ರಾಜ್ಯದ ವಿವಿಧೆಡೆ ಪ್ರದರ್ಶನಕ್ಕೆ ಬುಕ್ ಆಗುತ್ತಿತ್ತು. ‘ಬೆನಕ’ದ ಅನೇಕ ಪ್ರಯೋಗಗಳು ದೆಹಲಿ, ಚಂಡೀಗಢ, ಕೋಲ್ಕತ್ತ, ಭೋಪಾಲ್, ಹೈದರಾಬಾದ್, ಚೆನ್ನೈ, ತಿರುವನಂತಪುರ ಹಾಗೂ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರದರ್ಶನ ಕಂಡವು. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಲ್ಲಿ ತಿರುಗಾಟ ನಡೆಸಿದ್ದು ದಾಖಲೆ.

‘ಆಗಷ್ಟೇ ‘ನೀನಾಸಂ’ ಶುರುವಾಗಿತ್ತು. ಇದರ ಜತೆಗೆ ‘ಬೆನಕ’ದ ಮುಂಚೂಣಿಯಲ್ಲಿದ್ದ ರಂಗಕರ್ಮಿಗಳು ರಂಗಭೂಮಿ ಒಂದು ಶೈಕ್ಷಣಿಕ ವ್ಯವಸ್ಥೆಯಾಗಿ ರೂಪುಗೊಳ್ಳಲು ಅಡಿಪಾಯ ಹಾಕಿದರು. ರಂಗಶಿಕ್ಷಕರನ್ನು ಕಾಲೇಜಿನಲ್ಲಿ ಸೇರಿಸುವ ಚಳವಳಿ ಶುರುವಾಯಿತು. ಆಗ ಸುಮಾರು 200 ರಂಗಶಿಕ್ಷಕರ ನೇಮಕವೂ ಆಯಿತು. ಜೋಕುಮಾರಸ್ವಾಮಿ, ಹಯವದನ, ಸತ್ತವರ ನೆರಳು, ಗೋಕುಲ ನಿರ್ಗಮನ, ಕತ್ತಲೆ ಬೆಳಕು, ತಬರನ ಕಥೆ ಸೇರಿದಂತೆ 45ಕ್ಕೂ ಹೆಚ್ಚಿನ ಮುಖ್ಯ ನಾಟಕಗಳನ್ನು ರಂಗಕ್ಕೆ ತಂದ ಕೀರ್ತಿ ‘ಬೆನಕ’ದ್ದು. ನಟರಂಗ, ರಂಗಸಂಪದ, ಕಲಾಗಂಗೋತ್ರಿ, ಸ್ಪಂದನ, ಸಮುದಾಯ–ಹೀಗೆ ಸಕ್ರಿಯವಾಗಿದ್ದ ಅನೇಕ ತಂಡಗಳ ನಡುವೆ ಆರೋಗ್ಯಕರ, ಸ್ಪರ್ಧಾತ್ಮಕ ಪೈಪೋಟಿ ಇತ್ತು. ತಂಡಗಳು ಬೇರೆಯಾದರೂ ಎಲ್ಲರೂ ಎಲ್ಲ ತಂಡಗಳಲ್ಲೂ ಕೆಲಸ ಮಾಡುತ್ತಿದ್ದೆವು. ‘ಬೆನಕ’ದ ಆಶಯವೇ ಎಲ್ಲೆಡೆ ಇತ್ತು’ ಎನ್ನುತ್ತಾರೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ.

‘ಕಲಾಸಂಪದ’ದಲ್ಲಿ ನಡೆಯುತ್ತಿದ್ದ ‘ಬೆನಕ’ ನಾಟಕಗಳ ತಾಲೀಮುಗಳಲ್ಲಿ ಚಿತ್ರನಟರಾದ ಕಮಲ್ ಹಾಸನ್, ನಾಸಿರುದ್ದೀನ್ ಷಾ, ಓಂ‍ಪುರಿ ಬರುತ್ತಿದ್ದರು. ಬೆಂಗಳೂರಿನಲ್ಲಿ ತಮ್ಮ ಸಿನಿಮಾಗಳ ಶೂಟಿಂಗ್ ಇದ್ದರೆ ಕಮಲ್ ತಪ್ಪದೇ ‘ಬೆನಕ’ಕ್ಕೆ ತಮ್ಮ ಹಾಜರಾತಿ ಹಾಕುತ್ತಿದ್ದರಂತೆ. ಒಮ್ಮೆ ರಜನೀಕಾಂತ್ ಕೂಡಾ ಬಂದಿದ್ದರು.

‘ಜೋಕುಮಾರಸ್ವಾಮಿ’ ನಾಟಕದಲ್ಲಿ ಬಿ.ವಿ. ಕಾರಂತ ಚಂದ್ರಶೇಖರ ಕಂಬಾರ ಸುಂದರರಾಜ್ ನಾಗಿಣಿ ಭರಣ ಮತ್ತಿತರರು
‘ಜೋಕುಮಾರಸ್ವಾಮಿ’ ನಾಟಕದಲ್ಲಿ ಬಿ.ವಿ. ಕಾರಂತ ಚಂದ್ರಶೇಖರ ಕಂಬಾರ ಸುಂದರರಾಜ್ ನಾಗಿಣಿ ಭರಣ ಮತ್ತಿತರರು
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸುಂದರರಾಜ್
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸುಂದರರಾಜ್
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸಹನಟರು
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸಹನಟರು
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸುಂದರರಾಜ್
‘ಹಯವದನ’ ನಾಟಕದಲ್ಲಿ ಬಿ.ವಿ. ಕಾರಂತ ಮತ್ತು ಸುಂದರರಾಜ್
ಕಾರ್ಯಕ್ರಮವೊಂದರಲ್ಲಿ ಬಿ.ವಿ. ಕಾರಂತರನ್ನು ಸನ್ಮಾನಿಸಿದಾಗ... ಜಿ.ವಿ. ಅಯ್ಯರ್ ಟಿ.ಎಸ್. ನಾಗಾಭರಣ ಸಿಜಿಕೆ ಹಾಗೂ ಬಿ.ಎಲ್. ಶಂಕರ್
ಕಾರ್ಯಕ್ರಮವೊಂದರಲ್ಲಿ ಬಿ.ವಿ. ಕಾರಂತರನ್ನು ಸನ್ಮಾನಿಸಿದಾಗ... ಜಿ.ವಿ. ಅಯ್ಯರ್ ಟಿ.ಎಸ್. ನಾಗಾಭರಣ ಸಿಜಿಕೆ ಹಾಗೂ ಬಿ.ಎಲ್. ಶಂಕರ್

‘ಬೆನಕ’ದ ಬೆನ್ನೆಲುಬು

74ರಿಂದ 24ರವರೆಗೆ ಯಶಸ್ವಿಯಾಗಿ ಮುನ್ನಡೆಯುತ್ತಿರುವ ‘ಬೆನಕ’ದ ಬೆನ್ನೆಲುಬಾದವರು ಅನೇಕರು. ಟಿ.ಎಸ್. ರಂಗಾ (ಈಗಿಲ್ಲ), ಚಂದ್ರಕುಮಾರ್ ಸಿಂಗ್, ಟಿ.ಎಸ್. ನಾಗಾಭರಣ, ಸುಂದರ್‌ರಾಜ್ ಹಾಗೂ ಇತರರು ಇಂದಿಗೂ ‘ಬೆನಕ’ದ ಜತೆಗಿದ್ದಾರೆ. ನಿರ್ದೇಶಕಿ ಪ್ರೇಮಾ ಕಾರಂತ ಅವರು ‘ಬೆನಕ’ದಲ್ಲಿ ಮಕ್ಕಳ ವಿಭಾಗವನ್ನೂ ಹುಟ್ಟುಹಾಕಿದರು. ಅನೇಕ ಪ್ರಯೋಗಗಳ ಮೂಲಕ ಚಿಣ್ಣರನ್ನೂ ‘ಬೆನಕ’ ಸೆಳೆಯಿತು.

ಜಿ.ವಿ. ಅಯ್ಯರ್, ಜಿ.ವಿ. ಶಿವಾನಂದ, ಹಿರೇಮಠ್‌, ಬಿ. ಜಯಶ್ರೀ, ಕೋಕಿಲಾ ಮೋಹನ್, ಮಾನು, ಸುರೇಶ್ ಹೆಬ್ಳೀಕರ್, ಕಿಟ್ಟಿ, ವೈಶಾಲಿ ಕಾಸರವಳ್ಳಿ, ಗಿರೀಶ ಕಾಸರವಳ್ಳಿ, ನಾಗಿಣಿ ಭರಣ, ರಮೇಶ್ ಭಟ್, ಸಂಧ್ಯಾ, ಎಡಕಲ್ಲುಗುಡ್ಡದ ಮೇಲೆ ಚಂದ್ರಶೇಖರ್, ಎನ್‌.ಕೆ. ರಾಮಕೃಷ್ಣ, ಟಿ.ಆರ್.ಆರ್. ಚಂದ್ರು, ಅಶೋಕ ಬಾದರದಿ‌ನ್ನಿ, ಕೆ.ಜಿ. ಮಹಾಬಲೇಶ್ವರ, ರತ್ನಮಾಲಾ ಪ್ರಕಾಶ್, ಶ್ರೀನಿವಾಸ ಪ್ರಭು, ಶೋಭಾ ವೆಂಕಟೇಶ್, ವಿದ್ಯಾ ವೆಂಕಟರಾಮ್, ಮೈಕೋ ಮಂಜು, ಖ್ಯಾತನಟ ಯಶ್ (ನವೀನ್‌ಕುಮಾರ್‌ ಗೌಡ) ಸೇರಿದಂತೆ ತಂತ್ರಜ್ಞರು, ನೇಪಥ್ಯ ಕಲಾವಿದರು, ಗಾಯಕರು ಅನೇಕರು ‘ಬೆನಕ’ದ ಗರಡಿಯಲ್ಲಿ ಪಳಗಿದವರು.

‘ಸ್ನೇಹಿತ ಎಡಕಲ್ಲುಗುಡ್ಡದ ಮೇಲೆ ಚಂದ್ರಶೇಖರ್ ಮೂಲಕ ಕಾರಂತರ ‘ಹಯವದನ’ ನಾಟಕದ ಕಪಿಲನ ಪಾತ್ರಕ್ಕೆ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯ ತನಕ ‘ಬೆನಕ’ದೊಂದಿಗೆ ನಂಟು ಮುಂದುವರಿದಿದೆ. ನನ್ನನ್ನು ನಟ, ಗಾಯಕ, ರಂಗಕರ್ಮಿಯನ್ನಾಗಿ ರೂಪಿಸಿದ್ದು ಕಾರಂತರು. ನಾಟಕಕ್ಕೆ ನಮ್ಮ ದುಡ್ಡುಹಾಕಿ ಕೆಲಸ ಮಾಡಬೇಕು. ಬೇರೆಯವರಿಂದ ದುಡ್ಡ ಹಾಕಿಸಬಾರದು ಎಂದು ಕಾರಂತರು ಹೇಳಿದ್ದನ್ನು ಇಂದಿಗೂ ಪಾಲಿಸುತ್ತಿರುವೆ. ಆಗ ಟಿ.ಎಸ್. ರಂಗಾ (ಈಗಿಲ್ಲ) ಆಡಳಿತ, ಸಂಘಟನೆ ಮಾಡುತ್ತಿದ್ದರು. ನಾಗಾಭರಣ ನೇಪಥ್ಯ ನೋಡಿಕೊಳ್ಳುತ್ತಿದ್ದರು. ನಾನು ಫೈನಾನ್ಸ್ ಮಾಡುತ್ತಿದ್ದೆ. ‘ಯಮ ರಂಜನೆ’ ಎನ್ನುವ ನಾಟಕವನ್ನೂ ನಿರ್ದೇಶಿಸಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಖ್ಯಾತ ನಟ ಸುಂದರ್‌ರಾಜ್.

‘ಮೊದಲ ಸಿನಿಮಾಕ್ಕೇ ಸ್ವರ್ಣಕಮಲ ಪ್ರಶಸ್ತಿ ಪಡೆದ ಬಿ.ವಿ. ಕಾರಂತರು ನಿರ್ದಿಷ್ಟವಾಗಿ ಒಂದು ತಂಡ ಕಟ್ಟಲು ಬಯಸಿದವರಲ್ಲ. ರಂಗಭೂಮಿ ಸದಾ ಚಲನಶೀಲವಾಗಿರಬೇಕೆಂಬ ಬಯಕೆ ಅವರದ್ದಾಗಿತ್ತು. ಅವರ ಗರಡಿಯಲ್ಲಿ ಪಳಗಿದವರು ಕಾರಂತರ ಕನಸು ನನಸು ಮಾಡಲು ‘ಬೆನಕ’ದ ಮೂಲಕ ಒಗ್ಗೂಡಿದರು. 1969ರಿಂದ ಕಾರಂತರ ಒಡನಾಟದಲ್ಲಿದ್ದೆ. ನೇಪಥ್ಯ ಕಲಾವಿದನಾಗಿ, ನಿರ್ದೇಶಕನಾಗಿ ಅವರಿಂದ ಕಲಿತದ್ದು ಅಪಾರ. ಸುಂದರ್‌ರಾಜ್, ಚಂದ್ರು, ರಾಮಕೃಷ್ಣ. ನಾಗಿಣಿ ಭರಣ ಅನೇಕರು ಐದು ಜನರೇಷನ್‌ನೊಂದಿಗೆ ಕೆಲಸ ಮಾಡಿದವರು. ಇಂದಿಗೂ ಕಾರ್ಯನಿರತರಾಗಿದ್ದೇವೆ. ನಟನೆ, ನಿರ್ದೇಶನ, ನೇಪಥ್ಯ, ಸಂಗೀತ–ಹೀಗೆ ಅನೇಕ ವಿಭಾಗಗಳಲ್ಲಿ ‘ಬೆನಕ’ದ ಕೊಡುಗೆ ಅನನ್ಯ. ಇಲ್ಲಿದ್ದ ಬಹುತೇಕರು ರಂಗಭೂಮಿ ಸಿನಿಮಾಗಳಲ್ಲಿ ಪ್ರವರ್ಧನಮಾನಕ್ಕೆ ಬಂದರು’ ಎಂದು ಟಿ.ಎಸ್. ನಾಗಾಭರಣ ಹೇಳುತ್ತಾರೆ.

ಕಾರಂತರ ರಂಗಸಂಗೀತವನ್ನು ಪ್ರಚುರಪಡಿಸಲು ‘ಬೆನಕ ಬ್ಯಾಂಡ್‌’ ಕಟ್ಟಲಾಗಿದೆ. ಕಲ್ಪನಾ ನಾಗನಾಥ್, ವಾಸುಕಿ ವೈಭವ್ ಅವರ ಮಾರ್ಗದರ್ಶನದಲ್ಲಿ ಹೊಸಪೀಳಿಗೆಯವರು ಕಾರಂತರ ರಂಗಗೀತೆಗಳನ್ನು ಕಲಿತು ಹಾಡುತ್ತಾರೆ.

‘ಬೆನಕ’ ಎಂಬ ಆಲದಮರದ ನೆರಳಲ್ಲಿ ಬೆಳೆದವರು ನೂರಾರು ಮಂದಿ. ಆ ರಂಗಪಯಣ ಇಂದಿಗೂ ಮುಂದುವರಿಯುತ್ತಿದೆ. ಈಗ ಅದಕ್ಕೆ ಐವತ್ತು, ಮುಂದೆ ನೂರು ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT