l ಚಂದ್ರಾ ಡಿ.ಎ ಪೌರಕಾರ್ಮಿಕರು, ಬೆಂಗಳೂರು
ಮೊದಲ ಸಂಬಳ ಕೈಗೆ ಬಂತಲ್ಲ.. ಅದು ಅತ್ಯಂತ ಸುಖದ ಮತ್ತು ಖುಷಿ ಕ್ಷಣ. ಆ ಸಂಬಳವನ್ನು ಕೈಯಲ್ಲಿ ಹಿಡಿದಾಗ, ಒಂದರೆ ಕ್ಷಣ ಕಣ್ಮುಂದೆ ಮನೆಯ ಪರಿಸ್ಥಿತಿಯೇ ಹಾದು ಹೋಗಿತ್ತು. ಗಂಡನ ಆರೋಗ್ಯ ಕೆಟ್ಟಿತ್ತು. ಒಬ್ಬ ಮಗನಿಗೆ ಓದುವ ಕನಸು. ಇನ್ನೊಬ್ಬನಿಗೆ ಮನೆಯ ಜವಾಬ್ದಾರಿ ಹೊರಬೇಕು ಎಂಬ ಮನಸು. ಅವ ಓದನ್ನು ಮುಂದುವರಿಸಲಿಲ್ಲ. ಸಂಬಳ ಕೈಗೆ ಬಂದಾಗ ನಿರುಮ್ಮಳವಾಗಿ ಔಷಧಿ ಖರೀದಿಸಿ ಸಂಭ್ರಮಿಸಿದ್ದೆ. ನನ್ನ ಮನೆಯ ಸಂಕಷ್ಟಗಳ ಸರಮಾಲೆಗೆ ಕೊನೆ ಎಂಬ ಧೈರ್ಯ ಬಂದಿತ್ತು.
ಸಂಬಳ ಪಡೆದ ದಿನವೇ ಅತ್ಯಂತ ಸಂಭ್ರಮ ಮತ್ತು ಸಮಾಧಾನದ ದಿನ. ದುಡಿಮೆ ಯಾವತ್ತಿದ್ದರೂ ಒಂದು ಬಗೆಯ ಧೈರ್ಯ ನೀಡುತ್ತದೆ ಅಂತನಿಸಿದ್ದು ಅವೊತ್ತೆ...
ಗಂಡ ಪೇಂಟಿಂಗ್ ಕೆಲಸ ಮಾಡ್ತಾರೆ. ಆದರೆ ಸದಾ ಆ ಕೆಲಸ ಸಿಗುವುದಿಲ್ಲ. ಎಲ್ಲವೂ ದುಬಾರಿಯಾಗಿರುವ ಈ ದಿನಗಳಲ್ಲಿ ದುಡಿಯುವುದು ಅತ್ಯಗತ್ಯವಾಗಿತ್ತು. ನನ್ನ ತಂದೆಯೂ ಪೌರಕಾರ್ಮಿಕರಾಗಿದ್ದವರು. ಅವರೇ ಮನೋಸ್ಥೈರ್ಯ ತುಂಬಿದ್ದು. ಯಾವ ಕೆಲಸವೂ ಸಣ್ಣದು ಅಥವಾ ದೊಡ್ಡದಲ್ಲ. ಮನೆ ಸ್ವಚ್ಛ ಇಡುವಂತೆಯೇ ನಮ್ಮ ಬೀದಿಗಳನ್ನು ಸ್ವಚ್ಛ ಇಡುವ ಕೆಲಸವಿದು ಎಂದಿದ್ದರು. ಇದು ಕೆಲಸ ಎನ್ನುವುದಕ್ಕಿಂತಲೂ ಜವಾಬ್ದಾರಿ. ನಮ್ಮೂರನ್ನು ಚೆಂದಗಾಣಿಸುವ ಈ ಜವಾಬ್ದಾರಿಯನ್ನು ಸಂತೋಷದಿಂದಲೇ ಅಪ್ಪಿಕೊಂಡೆ.
ಎಲ್ಲರೂ ದುಡೀತೀವಿ. ಬರುವ ಸಂಬಳದಿಂದ ಅಕ್ಕಿ, ಬೇಳೆ ಕೊಳ್ಳುವಾಗ ಇದು ವೈದ್ಯ ಹಣ, ಶಿಕ್ಷಕರ ದುಡ್ಡು ಎಂದೆಲ್ಲ ಬೇರೆ ಬೇರೆ ಮಾಡುವುದಿಲ್ಲವಲ್ಲ. ಯಾವ ಕೆಲಸ ಮಾಡಿದರೇನು? ಮನೆಗಾಗಿಯೇ ತಾನೆ ದುಡಿಮೆ? ಪ್ರತಿ ಹೆಣ್ಣುಮಗಳೂ ಕೆಲಸ ಮಾಡಬೇಕು. ನಮ್ಮ ಖರ್ಚುಗಳಿಗೆ ಯಾರ ಮುಂದೆಯೂ ಕೈ ಒಡ್ಡಬಾರದು. ಈ ಕೆಲಸ ಧೈರ್ಯ ನೀಡಿದೆ. ಹಣಕ್ಕಿಂತಲೂ ಪರಿಶ್ರಮದಿಂದ ಪಡೆಯುವ ಸಂಬಳ ನೀಡುವ ಧೈರ್ಯ, ಸಂತೋಷ ದೊಡ್ಡದು. ಮಕ್ಕಳನ್ನು ಓದಿಸಿ, ಒಳ್ಳೆ ಮನುಷ್ಯರನ್ನಾಗಿ ಮಾಡಬೇಕು. ಅದೇ ನನ್ನ ಕನಸು...
ನಿರೂಪಣೆ: ರಶ್ಮಿ ಎಸ್.
ಗೀತಾಬಾಯಿ ಚಿತ್ರ: ಫಕ್ರುದ್ದೀನ್ ಎಚ್.
l ಗೀತಾಬಾಯಿ ತರಕಾರಿ ವ್ಯಾಪಾರಿ, ಮಂಗಳೂರು
ಕಾಯಿಪಲ್ಲೆ ಖರೀದಿಗೆ ಬರುವ ಗ್ರಾಹಕರೇ ಖುಷಿಯ ಮೂಲ. ಆದ್ದರಿಂದ ಬೇಗ ಬೇಗ ಮನೆಗೆಲಸ ಮುಗಿಸಿ ಬಂದು ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಕುಳಿತರೆ ಜನರ ಗದ್ದಲದಲ್ಲಿ ಕರಗಿ ಹೋಗುತ್ತೇನೆ.
ತರಕಾರಿ ಆಯ್ದು ಬುಟ್ಟಿಗೆ ಹಾಕುತ್ತ ನೋವು–ನಲಿವಿಗೆ ದನಿಯಾಗುವ, ಕಿವಿಯಾಗುವ ಗ್ರಾಹಕರನ್ನು ಕಂಡಾಗ ದುಃಖ ಕರಗಿ ನಿರುಮ್ಮಳವಾಗುತ್ತೇನೆ. ಹೇಳಿಕೇಳಿ ನಮಗೆ ನಿತ್ಯದ ತುತ್ತು ಕೊಡುವುದೇ ವ್ಯಾಪಾರ. ಬೆಳಿಗ್ಗೆ ಎಂಟಕ್ಕೆ ಶುರುವಾದರೆ ಕತ್ತಲು ಮುಸುಕುವವರೆಗೂ ಮಾರ್ಕೆಟ್ಟೇ ಮನೆ. ಕ್ಯಾರೆಟ್‌ನಂತಹ ಸಿಹಿ ಮನದವರು, ಹಾಗಲಕಾಯಿಯಂತಹ ಕಹಿಯಾದವರು, ಹುಣಸೆ ಹಣ್ಣಿನಂತಹ ಹುಳಿಯವರು–ಹೀಗೆ ವೈವಿಧ್ಯ ಜನರ ಒಡನಾಟ!
ಅಕ್ಕಪಕ್ಕ ನನ್ನಂತೆ ವ್ಯಾಪಾರಕ್ಕೆ ಕುಳಿತ ಅಕ್ಕಂದಿರದೂ ಹೋರಾಟದ ಬದುಕೇ. ಬಡತನ ಹೊದ್ದ ಜೀವಗಳನ್ನು ಸುಖಕ್ಕಿಂತ ಸಂಕಟಗಳೇ ಹೆಚ್ಚು ಆಳುತ್ತವೆ. ಆದರೆ, ಟಾರ್ಪಾಲ್ ಕೆಳಗೆ ತರಕಾರಿ ರಾಶಿಯ ನಡುವೆ ಕುಳಿತಾಗ ನೋವುಗಳನ್ನು ಮರೆತು ತರಕಾರಿಯಂತೆ ಮತ್ತೆ ಹಸಿರಾಗುತ್ತೇನೆ. ಕತ್ತಲಾಗುತ್ತಲೇ ಜೀವನದ ಜಂಜಾಟಗಳಿಗೆ ಜಾರುವ ನನಗೆ, ನಿತ್ಯದ ಬೆಳಗು ಸಂಭ್ರಮ ಹೊತ್ತು ತರುತ್ತದೆ.
ವ್ಯಾಪಾರಕ್ಕೆ ಹೊರಟರೆ ‘ಇವತ್ತೊಂದಿನ ರಜೆ ಮಾಡಿ ನಮ್ಮೊಡನಿದ್ದು ಬಿಡು’ ಎನ್ನುವ ಮಕ್ಕಳು, ಆಗೀಗಲೊಮ್ಮೆ ವ್ಯಾಪಾರಕ್ಕೆ ವಿರಾಮ ಹಾಕಿ, ಎಲ್ಲರೂ ಸೇರಿ ಕಡಲತೀರದ ಮರಳ ರಾಶಿಯ ಮೇಲೆ ಕುಳಿತು ಸೂರ್ಯಾಸ್ತ ನೋಡುವುದು, ಸಂಬಂಧಿಕರ ಮನೆಯ ಮದುವೆಯಲ್ಲಿ ಅಕ್ಕ–ತಂಗಿಯರೆಲ್ಲ ಸೇರಿ ಹರಟುವುದೇ ಬದುಕಿನ ದೊಡ್ಡ ಸಂಭ್ರಮ.
ನಿರೂಪಣೆ: ಸಂಧ್ಯಾ ಹೆಗಡೆ
l ಎಂ.ಚಂದ್ರಮ್ಮ, ಹೂ ಕಟ್ಟುವವರು, ದಾವಣಗೆರೆ
‘ಎಂಟ್ಹತ್ತು ವರ್ಸಗಳಿಂದ ಹೂ ಕಟ್ತಿದ್ದೀನಿ. ಅಂದಿನಿಂದಲೂ ದಿನವೂ ನಂಗೆ ಸಂಭ್ರಮವೇ. ಹೂ ಕೈಗೆ ಬಂದ ಮೇಲೆ ಬದುಕನ್ನು ಸಂತಸವಾಗಿರಿಸಿದೆ. ದಿನಕ್ಕೆ ನಾನೂರು, ಐನೂರು ರೂಪಾಯಿಗಳನ್ನು ಕಾಣುತ್ತಿರುವುದು ಈಗಲೇ. ಹಿಂದಿನವು ನನ್ನ ಬದುಕಿನ ಕರಾಳ ದಿನಗಳು. ಕಣ್ಣೀರಲ್ಲೇ ಕೈತೊಳೆಯುತ್ತಿದ್ದ ದಿನಗಳವು. ಬಡತನವೇ ಮೈಗಂಟಿಸಿಕೊಂಡು ಹುಟ್ಟಿದ ನಾನು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದೆ. ಜಗಳೂರು ಮಿಲ್ ಎದುರಿಗೆ ಮಿಲ್ ಸಾಹುಕಾರರು ಕೊಡುತ್ತಿದ್ದ ತುತ್ತು ಅನ್ನಕ್ಕೆ ಬೆಳಗಿನಿಂದ ಸಂಜೆವರೆಗೂ ಅಕ್ಕ, ತಂಗಿಯರ ಜತೆ ಕಾಯುತ್ತ ಕೂರುತ್ತಿದ್ದೆ. ತಿಂಗಳಿಗೆ 30 ರೂಪಾಯಿ ಸಿಗುತ್ತಿದ್ದ ಕೂಲಿಯಲ್ಲೇ ನನ್ನಮ್ಮ ನಮ್ಮನ್ನು ಸಾಕುತ್ತಿದ್ದಳು. ಮೂರೂ ಹೊತ್ತು ಗಂಜಿ, ಒಮ್ಮೊಮ್ಮೆ ಅದೂ ಇರುತ್ತಿರಲಿಲ್ಲ. ಗಂಜಿ ಇಲ್ಲದಾಗ ಬೀದಿಯಲ್ಲಿ ಹುಟ್ಟುತ್ತಿದ್ದ ಹೊನಗೊನೆ ಸೊಪ್ಪು ತಂದು ಅಮ್ಮ ಬೇಯಿಸಿ ತಿನ್ನಿಸುತ್ತಿದ್ದಳು. ಹೀಗೆ ನನ್ನ ಬಾಲ್ಯ ಸಾಗಿತು. ಸ್ವಲ್ಪ ದೊಡ್ಡವಳಾದ ಮೇಲೆ ಮನೆ ಕೆಲಸಕ್ಕೆ ಹೋಗುತ್ತಿದ್ದೆ.
ಆ ಬಳಿಕ ಹೋಟೆಲ್‌ನಲ್ಲಿ ಪಾತ್ರೆ ತೊಳೆಯಲು ಹೋಗುತ್ತಿದ್ದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ಪಾತ್ರೆ ತಿಕ್ಕೋದೆ ಕೆಲಸ. ಕೈಗೆ ಸಿಗುತ್ತಿದ್ದದ್ದು ತಿಂಗಳಿಗೆ ನೂರೈವತ್ತು ರೂಪಾಯಿ. ಮದುವೆಯಾದ ಮೇಲೂ ಬದುಕೇನು ಹಸನಾಗಲಿಲ್ಲ. ನಾಲ್ಕು ಮಕ್ಕಳು, ಗಂಡ ಲಾರಿ ಡ್ರೈವರ್. ದುಡಿಮೆಯೂ ಅಷ್ಟಕ್ಕಷ್ಟೇ. ಸಂಸಾರದ ನೊಗ ನನ್ನ ಮೇಲೆಯೇ ಬಿತ್ತು. ಮನೆ ಕೆಲಸ ಮಾಡಿ ಮಕ್ಕಳನ್ನೂ ಓದಿಸಿದೆ. ಎಲ್ಲರೂ ಪದವಿ ಮುಗಿಸಿದ್ದಾರೆ. ಮದುವೆಯನ್ನು ಮಾಡಿರುವೆ. ಕಷ್ಟಗಳನ್ನೇ ಕಂಡುಂಡ ನನಗೆ ಹೂವಿನ ಜತೆಗಿನ ಒಡನಾಟ ಸಂಭ್ರಮ ತಂದಿದೆ. ಆರ್ಥಿಕ ಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ. ಗುಡಿಸಲಾದರೂ ಸರಿಯೇ ಸ್ವಂತ ಜಾಗದಲ್ಲಿ ನೆಲೆ ನಿಲ್ಲಬೇಕು ಎನ್ನುವ ಕನಸಿದೆ. ಆ ಕನಸಿನ ಸಾಕಾರಕ್ಕೆ ಇನ್ನಷ್ಟು ದುಡಿಯುವೆ. ದೇವರು ಆಸ್ತಿ ಕೊಡದಿದ್ದರೂ ಆರೋಗ್ಯ ಕೊಟ್ಟಿದ್ದಾನೆ. ಕೈಯಲ್ಲಿ ಶಕ್ತಿ ಇರುವವರೆಗೂ ದುಡಿಯುವೆ.
ನಿರೂಪಣೆ: ಸುಮಾ ಬಿ.
l ದೇವಕಿ ರಾಠೋಡ್, ಅಲೆಮಾರಿ, ಹುಬ್ಬಳ್ಳಿ
ದುಡಿಮೆಗಾಗಿಯೇ ದಾರಿ ಅರಸುತ್ತ ರಾಜಸ್ಥಾನದ ಉದಯಪುರ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಂದಿದ್ದು, ಗಬ್ಬೂರು ಕ್ರಾಸ್ ಸಮೀಪ ಟೆಂಟ್ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ.
ಬಿಳಿ ಸಿಮೆಂಟ್‌ನಲ್ಲಿ ಪ್ರಾಣಿ, ಪಕ್ಷಿ, ದೇವರು, ಮಹನೀಯರ ಮೂರ್ತಿಗಳನ್ನು ಸಿದ್ಧಪಡಿಸುವ ಕಲೆಯನ್ನು ಅಪ್ಪ–ಅಮ್ಮನಿಂದ ಕಲಿತೆ. ಶಾಲೆಗೆ ಹೋಗುವಂತಹ ಸ್ಥಿತಿ ಇರಲಿಲ್ಲ. ಅನ್ನ, ಬಟ್ಟೆಯಂತಹ ಅಗತ್ಯಗಳಿಗಾಗಿ ದುಡಿಯೋದಷ್ಟೇ ಗುರಿಯಾಗಿತ್ತು. ಹಾಗಾಗಿಯೇ 15 ವರ್ಷವಿರುವಾಗಲೇ ಊರೂರು ಅಲೆಯುತ್ತ, ದುಡಿಯಲು ಶುರು ಮಾಡಿದೆ.
ಮನೆಯಲ್ಲಿ ದೀಪಾವಳಿ, ದಸರಾದಂಥ ಹಬ್ಬಗಳೇ ನಮಗೆ ಸಂಭ್ರಮದ ದಿನಗಳು. ದುಡಿಮೆಗೊಂದಷ್ಟು ವಿರಾಮ ನೀಡಿ, ಮನೆ, ಮಕ್ಕಳನ್ನು ನೋಡಲು, ಹಬ್ಬ ಮಾಡಲು ಹೋಗುತ್ತೇನೆ. ತಿಂಗಳುಗಟ್ಟಲೇ ಎಲ್ಲರಿಂದ ದೂರವಿದ್ದು, ಮನೆಗೆ ಮರಳುವಾಗ ಖುಷಿ ದುಪ್ಪಟ್ಟಾಗಿರುತ್ತದೆ. ಕೂಡಿಟ್ಟ ಒಂದಷ್ಟು ಹಣದಲ್ಲಿ ಮನೆಯವರಿಗಾಗಿ ಹೊಸಬಟ್ಟೆ, ತಿಂಡಿ– ತಿನಿಸು ತೆಗೆದುಕೊಂಡು ಹೋಗುತ್ತೇನೆ. ಮಕ್ಕಳು ನನ್ನ ಬರುವಿಕೆಗಾಗಿ ಎದುರು ನೋಡುತ್ತಿರುತ್ತಾರೆ. ಮನೆಗಳಲ್ಲಿ ಮದುವೆ, ನಾಮಕರಣ ಮುಂತಾದ ಕಾರ್ಯಕ್ರಮಗಳಿದ್ದಾಗ ಎಲ್ಲರೂ ಒಂದೆಡೆ ಸೇರುತ್ತೇವೆ. ಬಾಡಿದ ಮುಖ, ಸೊರಗಿದ ದೇಹಕ್ಕೆ ಇಂಥ ದಿನಗಳ ಸಂಭ್ರಮವೇ ಔಷಧ.
ನನಗೆ ಹತ್ತಾರು ಕನಸುಗಳಿವೆ. ಕೆಲವಾದರೂ ಈಡೇರಲಿ ಎಂಬುದಷ್ಟೇ ನನ್ನ ನಿತ್ಯದ ಪ್ರಾರ್ಥನೆ. ನನಗೀಗ 40 ವರ್ಷವಿರಬಹುದು. ಒಬ್ಬ ಮಗ, ಮೂವರು ಹೆಣ್ಮಕ್ಕಳು ಇದ್ದಾರೆ. ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿರುವೆ. ಅವರಾರು ಓದಿಲ್ಲ, ಕೊನೆಯವಳು ಮಾತ್ರ ಓದುತ್ತಿದ್ದಾಳೆ. ನನ್ನಂತೆಯೇ ಆಕೆಯೂ ಇದೇ ಕೆಲಸ ಮಾಡುವಂತಾಗಬಾರದು, ಅವಳು ದೊಡ್ಡ ನೌಕರಿ ಮಾಡುತ್ತ, ಚೆಂದದ ಬದುಕನ್ನು ನಡೆಸಬೇಕು.
ನಿರೂಪಣೆ: ಕಲಾವತಿ ಬೈಚಬಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.