ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯೆಂಬ ಅನುಗಾಲದ ಸಂಗಾತಿ

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಈ ಸಲ ಊರಿಗೆ ಹೋದಾಗ ಹೊಳೆಬದಿಗೆ ಹೋಗಿ ಬರಲೇಬೇಕು ಎಂದು ನಿರ್ಧರಿಸಿಕೊಂಡಿದ್ದೇನೆ. ಈ ಮಹಾನಗರದ ಒಣ ಗದ್ದಲದಲ್ಲಿ ಊರನದಿಯ ನೆನಪು ಮನಸ್ಸಲ್ಲಿ ಒದ್ದೊದ್ದೆಯಾಗಿ ಹರಿಯುತ್ತಿದೆ.

ನಮ್ಮೂರ ನದಿಯ ವಿಶೇಷತೆ ಏನಂದ್ರೆ ಬೇಸಿಗೆಯಲ್ಲಿ ಅದನ್ನು ಭೇಟಿಯಾಗಲು ನಾವೇ ಹುಡುಕಿಕೊಂಡು ಹೋಗಬೇಕು. ಆದರೆ ಎರಡು ಮಳೆ ಬಿದ್ದು ನೆಲ ಒದ್ದೆಯಾಯ್ತು ಅಂದ್ರೆ ಅದ್ರ ಖದರ್ರೇ ಬೇರೆ. ನಂಜುಳ್ಳೆಯಂತೆ ತೆವಳುತ್ತ ತೆವಳುತ್ತ ಹರಿಯುತ್ತಿದ್ದವಳು ಒಮ್ಮಿಂದೊಮ್ಮೆಲೇ ಬಿಳಿಹಾವು (ನಾಗರಹಾವು) ಹರಿದಂತೆ ಸಳಸಳ ಹರಿಯತೊಡಗುತ್ತಾಳೆ. ಹುಬ್ಬಳ್ಳಿ ಕಡೆ ಜೋರು ಮಳೆಯಾದರೆ, ಅಲ್ಲಿಯ ಯಾವುದೋ ಕೆರೆ ಒಡೆದರೆ ನಮ್ಮ ಹೊಳೆಯ ಕತೆ ಕೇಳುವುದೇ ಬೇಡ. ಬೇಸಿಗೆಕಾಲದಲ್ಲಿ ತನ್ನಬಳಿ ಬಂದು ಹಂಗಿಸಿದ ಹುಲು ಮಾನವರನ್ನು ಹುಡುಕಿಕೊಂಡು ಊರಿಗೇ ಬಂದುಬಿಡುತ್ತಾಳೆ.

ಅವಳ ಬಗ್ಗೆ ಹೇಳ್ತಾ ಹೋದ್ರೆ ತುಂಬಾ ಇದೆ ಬಿಡಿ. ನಾನೀಗ ಹೇಳಲು ಹೊರಟಿರುವುದು ಬರೀ ಹೊಳೆಯ ಬಗ್ಗೆಯಲ್ಲ. ನನ್ನ ಮತ್ತು ಆ ಹೊಳೆಯ ಸಂಬಂಧದ ಬಗ್ಗೆ.

ಊರ ಬದಿಯಲ್ಲೊಂದು ಹೊಳೆಯಿಲ್ಲದಿದ್ದರೆ ಆ ಊರಿನ ಮಕ್ಕಳು ಬದುಕಿನ ಒಂದು ಆಯಾಮವನ್ನೇ ಕಳೆದುಕೊಳ್ಳುತ್ತಾರೆ ಎಂದು ನನಗೆ ಬಹಳ ಸಲ ಅನ್ನಿಸಿದೆ. ಇದು ಕೊಂಚ ಉತ್ಪ್ರೇಕ್ಷೆ ಅನ್ನಿಸಿದರೂ ನನ್ನ ಪಾಲಿಗಂತೂ ಕೊಂಚವೂ ಹೆಚ್ಚಲ್ಲದ ಸತ್ಯ.

ನಮ್ಮೂರ ನದಿ ನನ್ನ ಪಾಲಿಗೆ ಅನುಗಾಲದ ಸಂಗಾತಿ. ಕ್ಷಣಕ್ಷಣಕ್ಕೂ ಹಳೆತನ್ನು ತೊಳೆದು ಹೊಸತುಗೊಳ್ಳುತ್ತಲೇ ಇರುವ, ಪ್ರತಿ ಭೇಟಿಯಲ್ಲಿಯೂ ನನ್ನೊಳಗೆ ಅರಿವಿನ ಹರಿವನ್ನು ಹರಿಸುವ ನವನವೋನ್ಮೇಷಶಾಲಿನಿ.

ಚಿಕ್ಕಂದಿನಲ್ಲಿ ಬೇಸಿಗೆಯಲ್ಲಿ ಮನೆಗೆ ನೆಂಟರು ಬಂದಾಗ ಅಪ್ಪ ಅವರನ್ನು ಈಜಲು ನದಿಗೆ ಕರೆದುಕೊಂಡು ಹೋಗುತ್ತಿದ್ದ. ಹಾಗೆ ಸುಮಾರು ನೆಂಟರು ಹೊಳೆಯಲ್ಲಿ ಈಜಲಿಕ್ಕೆ ಅಂತಲೇ ಬೇಸಿಗೆಯಲ್ಲಿ ನಮ್ಮ ಮನೆಗೆ ಬರುವುದೂ ಇತ್ತು. ಆಗೆಲ್ಲ ನಾನೂ ಈಜಲು ಬರುತ್ತೇನೆ ಎಂದು ಹಟ ಹಿಡಿಯುತ್ತಿದ್ದೆ. ಒಂದೆರಡು ಸಲ ಹಟಕ್ಕೆ ಮಣಿದು ನನ್ನನ್ನೂ ಕರೆದೊಯ್ದಿದ್ದರು. ನಾನು ಮೊದಲಿಗೆ ನಮ್ಮೂರ ನದಿಯಲ್ಲಿ ಮಿಂದಿದ್ದು, ಮನದಣಿಯೆ ನೆನೆದದ್ದು ಆಗಲೇ.

ಸೊಂಟಮಟ್ಟದ ನೀರಿನಲ್ಲಿ ನಿಂತು ಚಪ್ಪಟೆ ಕಲ್ಲನ್ನು ಆಯ್ದು ನೀರಿನ ಮೇಲ್ಮೈಯಲ್ಲಿ ಕುಪ್ಪಳಿಸುತ್ತಾ ಹೋಗುವಂತೇ ಬೀಸಿ ಒಗೆಯುವ ಆಟವಾಡಿದ್ದು ನಿನ್ನೆಮೊನ್ನೆಯೆಂಬಂತೇ ನೆನಪಿದೆ. ಹಾಗೆ ಕಲ್ಲು ಒಗೆಯುತ್ತೊಗೆಯತ್ತಲೇ ನನ್ನ ಮತ್ತು ಅವಳ ನಡುವೆ ಹೆಸರಿಲ್ಲದ ಸಂಬಂಧವೊಂದು ಬೆಸೆದುಕೊಂಡಿತು.

ಮುಂದೊಂದು ದಿನ ನಾನು ಮನೆಮೂಲೆಯಲ್ಲಿ ಹರಕು ಕಂಬಳಿ ಹಾಸಿಕೊಂಡು ಕಿಬ್ಬೊಟ್ಟೆ ಹಿಡಿದು ನರಳುತ್ತಾ, ಅಮ್ಮ ಮಾಡಿಕೊಟ್ಟ ದಾಸವಾಳ ತನುವನ್ನು ಕುಡಿಯುತ್ತಾ, ಮರೆತು ತಮ್ಮನನ್ನು ಮುಟ್ಟಿ ಬೈಸಿಕೊಳ್ಳುತ್ತಾ, ಕತ್ತಲಲ್ಲಿ ಒಣಹಾಕಿದ ಬಟ್ಟೆಗಳನ್ನು ಪದೇ ಪದೇ ಬದಲಾಯಿಸುವ ಕರ್ಮಗಳಿಗೆ ಮ್ಲಾನಳಾಗಿ ರೋಸಿಹೋಗುತ್ತಾ ‘ದೊಡ್ಡವಳು’ ಆದ ಮೇಲೆ ಅಪ್ಪ ನನ್ನನ್ನು ಈಜಲು ಕರೆದುಕೊಂಡು ಹೋಗುವುದನ್ನು ನಿಲ್ಲಿಸಿದ. ನಾನೇನಾದರೂ ಹಟ ಮಾಡಿದರೂ ಅಮ್ಮ ಕೈಹಿಡಿದು ಜಗ್ಗಿ ಅಡುಗೆಮನೆಗೆ ಕರೆದುಕೊಂಡು ಹೋಗಿ ‘ಶೀ.. ಇಷ್ಟು ದೊಡ್ಡವಳಾಗಿದ್ದಿ. ನಾಚಿಕೆ ಆಗಲ್ವಾ ಗಂಡಸರ ಜೊತೆ ಈಜಲಿಕ್ಕೆ ಹೋಗ್ತೇನೆ ಅಂತಿಯಲ್ಲಾ. ಗಂಡಾಗಿ ಹುಟ್ಟಬೇಕಾಗಿತ್ತು ನೀನು’ ಎಂದು ಬೈಯುತ್ತಿದ್ದಳು. ನನಗೂ ಆಗ ಹಾಗೇ ಅನ್ನಿಸುತ್ತಿತ್ತು. ‘ಗಂಡಾಗಿ ಹುಟ್ಟಬೇಕಾಗಿತ್ತು ನಾನು’.

ಹಾಗಂತ ನನ್ನ ಮತ್ತು ನದಿಯ ಸಂಬಂಧ ಅಲ್ಲಿಗೇ ಮುಗಿಯಲಿಲ್ಲ. ಯಾವಾಗಲಾದರೊಮ್ಮೆ ಅಮ್ಮನ ಜತೆ ಜಗಳವಾಡಿದಾಗ, ಅತಿ ದುಃಖ– ಅತಿ ಸಂತೋಷವಾದಾಗಲೆಲ್ಲ ನದಿಬದಿಗೆ ಹೋಗಿ ಕೂತುಬಿಡುತ್ತಿದ್ದೆ.

ಎಷ್ಟೆಲ್ಲ ರೂಪಗಳಿದ್ದವಳು ಅವಳಿಗೆ.. ಒಂದಷ್ಟು ದೂರ ಎಳೆ ಹುಡುಗಿಯಂತೇ ಸೂರ್ಯನ ಬೆಳಕಿಗೆ ಪಳಪಳ ಹೊಳೆಯುತ್ತ ಜಿಗಿಜಿಗಿದು ಜುಳುಜುಳು ಹರಿಯುತ್ತಿದ್ದವಳು ಮುಂದೆ ಒಮ್ಮಿಂದೊಮ್ಮೆಲೇ ಆಳ ಗಂಭೀರಳಾಗಿಬಿಡುತ್ತಾಳೆ. ಭೋರ್ಗರೆದು ಅಬ್ಬರಿಸುತ್ತಾ ಕೊರಕಲು ದಾಟಿದವಳು ಏಕಾಏಕಿ ಸುಮ್ಮನಾಗಿ ನಿಂತೇ ಬಿಟ್ಟಳೇನೋ ಎಂಬಷ್ಟು ಮಂದಗಮನೆಯಾಗುತ್ತಾಳೆ.

ಅದ್ಯಾವುದೋ ಕಾಡು ಮರದ ನವಿರು ಹೂವು, ಎಲ್ಲಿಂದಲೋ ಬಂದು ಪಳಕ್ಕನೆ ನೀರೊಳಗೆ ಕೊಕ್ಕಿಳಿಸಿ ಮೀನು ಕಚ್ಚಿ ನಭಕ್ಕೆ ಜಿಗಿದ ಮೂರು ಬಣ್ಣದ ರೆಕ್ಕೆಯ ಹಕ್ಕಿ ಎಬ್ಬಿಸಿದ ಅಲೆಯ ಉಂಗುರ, ನೀರಿಗೆ ಸಮಾನಾಂತರವಾಗಿ ಬೆಳೆದ ಕೊಂಬೆಯಲ್ಲಿ ಕುಳಿತು ನದಿಯೊಡಲಲ್ಲಿ ಕಾಲು ಇಳಿಬಿಟ್ಟು ಕೂತಾಗ ಪಾದಕಚ್ಚಿ ಕಚಗುಳಿಯಿಡುವ ಮೀನುಗಳ ಚೆನ್ನಾಟ.. ಉದ್ದ ಗಾಳದ ತುದಿಗೆ ನಂಜುಳ್ಳೆ ಸಿಕ್ಕಿಸಿ ನೀರೊಳಕ್ಕೆ ಇಳಿಬಿಟ್ಟು ಮೂರ್ತಿಯಂತೇ ನಿಶ್ಚಲ ಕೂತ ಸಿದ್ದಿ ಹುಡುಗ.. ಅಬ್ಬ! ಎಷ್ಟೆಲ್ಲ ನೋಟಗಳು ಅವಳೆಡೆಯಲ್ಲಿ.

ದಡದಿಂದ ಮಾರು ದೂರದಲ್ಲಿ ನೀರೊಳಗೆ ನಿಂತು ಆಮರಣಾಂತ ತಪಸ್ಸಿಗೆ ತೊಡಗಿದಂತಿರುವ ಬಂಡೆಯೊಂದಿದೆ. ಅದರ ಮೇಲೆ ಹೊತ್ತು ಗೊತ್ತೆಲ್ಲ ಮೀರಿ ಕುಳಿತಿರುವುದೆಂದರೆ ನಂಗೆ ತುಂಬ ಇಷ್ಟ. ಅಲ್ಲಿ ಕುಳಿತು ತಣ್ಣನೆ ನೀರೊಳಗೆ ಕಾಲು ಇಳಿಬಿಟ್ಟರೆ ತುಂಬ ದಿನಗಳ ನಂತರ ಭೇಟಿಯಾದ ಹಳೆ ಗೆಳತಿಯಂತೆ ತನ್ನ ಜಲ ಹಸ್ತದಿಂದ ಮೃದುವಾಗಿ ನೇವರಿಸುತ್ತಾಳೆ ಅವಳು. ಅಲ್ಲಿಗೆ ನನ್ನೆಲ್ಲ ತಡೆಗಳ ಮುರಿದು ಅವಳೆದುರು ನಾನು ತೆರೆದುಕೊಳ್ಳುತ್ತೇನೆ. ಮನದಣಿಯೆ ಮಾತನಾಡುತ್ತೇನೆ.

ಮನದೊಳಗೆ ಪೂರ್ತಿ ಅರಳುವ ಮೊದಲೇ ಮುದುಡಿ ಹೋದ; ಮುದುಡಿದರೂ ಇನ್ನೂ ಪರಿಮಳ ಬೀರುವ ಸುರಗಿ ಹೂವಿನಂತಹ  ಮೊದಲ ಪ್ರೇಮದಿಂದ ಹಿಡಿದು ಅಂದು ಓದಿದ ಕಾದಂಬರಿಯ ಪುಟಗಳವರೆಗೂ ನಾನು ಏನೇ ಮಾತನಾಡಿದರೂ ಕೊಂಚವೂ ಬೇಸರಿಸದೇ ಕೇಳಿಸಿಕೊಳ್ಳುತ್ತಾಳೆ ನನ್ನೀ ಗೆಳತಿ.. ತ್ಚು.. ಎನ್ನದೇ, ಅನುಕಂಪ ತೋರದೆ ಸುಮ್ಮನೇ ಕೇಳಿಸಿಕೊಳ್ಳುತ್ತಾಳೆ.

ನಾಗರಿಕ–ಅನಾಗರಿಕ, ಸರಿ–ತಪ್ಪು, ನೈತಿಕ–ಅನೈತಿಕ ಇಂಥವೆಲ್ಲ ಲಡಕಾಸಿ ಶಿಥಿಲ ಗಡಿಗಳೆಲ್ಲ ಅವಳ ಸಮ್ಮುಖದಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಕೊಂಚ ಬಾಗಿ ನೋಡಿದಾಗ ತನ್ನ ಮೈಯನ್ನೇ ಕನ್ನಡಿಯಾಗಿಸಿ, ನನ್ನ ನಿಜದ ಮುಖವನ್ನು ಕಾಣಿಸಬಲ್ಲವಳು ಅವಳೊಬ್ಬಳೇ! ಅವಳ ಆ ನವಿರು ನೇವರಿಕೆಯಲ್ಲಿ ನನ್ನ ನಾನು ಹೊಸದಾಗಿ ಕಟ್ಟಿಕೊಂಡು ಮತ್ತೆ ಈ ‘ನಾಗರಿಕ’ ಎಂಬ ಹೆಸರಿನ ನಾಟಕದ ಜಗತ್ತಿಗೆ ಮರಳುತ್ತೇನೆ.

ನಿಜದ ನಾನು ಏನೆಂಬುದು ನನಗಿಂತ ಅವಳಿಗೆ ಹೆಚ್ಚು ಗೊತ್ತು. ಎಲ್ಲ ಹಂಗುಗಳ ಮೀರಿದ ಗೆಳೆತನ ಅವಳೊಂದಿಗೆ ಮಾತ್ರ ಸಾಧ್ಯ ಎಂದು ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ.

ಅದಕ್ಕೆ ಹೇಳಿದ್ದು ಊರ ಬದಿಯಲ್ಲೊಂದು ನದಿಯಿಲ್ಲದಿದ್ದರೆ ಬದುಕಿನ ಒಂದು ಆಯಾಮವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು.
ಬದುಕ ಪಯಣದಲ್ಲಿ ಯಾವಾಗ ನೀರಪಸೆಯಿಲ್ಲದ ರಣಬಿಸಿಲ ನರಕದ ಗಲ್ಲಿಗಳಲ್ಲಿ ಸಿಲುಕಿಕೊಂಡು ನರಳಬೇಕೋ ಯಾರಿಗೆ ಗೊತ್ತು. ಅಂತಹ ಬರಗಾಲದಲ್ಲಿ ಎದೆಯೊಳಗೆ ತಂಪಾಗಿ ಹರಿಯುತ್ತಿರಲು ಇರಬೇಕು ಒಂದು ಗೆಳತಿಯಂತಹ ನದಿ ಅಥವಾ ನದಿಯಂತಹ ಗೆಳತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT