ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೇ ನಾಲ್ಕು... ಪುಟ್ಟ ಪುಟ್ಟ ಕಥೆಗಳು

Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

1)ಭೂಕಂಪವಾದ ಊರಿಗೆ ರೈಲು ಹೋಗಲಿಲ್ಲ. ಬೇರೊಂದು ಊರಲ್ಲಿ ಇಳಿದು ಅಲ್ಲಿಗೆ ನಡೆದು ಹೋದೆ. ಮರಗಳು ತಲೆಕೆಳಗಾಗಿ ಬಿದ್ದು ತಮ್ಮ ತುದಿಯಿಂದ ಭೂಕಂಪದ ಭೀಕರತೆಯ ಚಿತ್ರ ಬರೆಯುತ್ತಿದ್ದವು. ಮನೆಗಳು ಚಾವಣಿ ಮತ್ತು ಪಾಯಕ್ಕೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದವು. ಕೆಲವರು ಪೀಡಿತರ ಸೇವೆ ಮಾಡುತ್ತಿದ್ದರು. ಕೆಲವರು ಬಿದ್ದ ಮನೆಗಳಲ್ಲಿ ಕದ್ದು ಓಡಿಹೋಗುತ್ತಿದ್ದರು. ಆಗಲೇ ಹೆಣಗಳ ವಾಸನೆ ಶುರುವಾಗಿತ್ತು. ಹದ್ದುಗಳು ಆಕಾಶದಲ್ಲಿ ಹಾರಾಡತೊಡಗಿದ್ದವು. ಬಾಗಿಲು, ತೀರುಗಳು, ಕಿಟಕಿಗಳು, ಚಿತೆಗಳಾಗಿದ್ದವು. ಅಡುಗೆಗಾಗಿ ತಂದಿದ್ದ ಸೀಮೇಎಣ್ಣೆ ತನ್ನನ್ನು ಅಡುಗೆಗಾಗಿ ಬಳಸಲು ತಂದವರ ಶವಗಳನ್ನು ದಹಿಸಲು ನೆರವಾಗುತ್ತಿತ್ತು.
ಪೂರ್ಣ ನೆಲ ಕಚ್ಚಿದ್ದ ಮನೆಯೊಂದರ ಬಳಿ ಹೋದೆ. ತೀರನ್ನು ಸರಿಸಿ, ಹೆಂಚುಗಳನ್ನು ಆ ಕಡೆ ಎತ್ತಿಟ್ಟೆ. ನನ್ನ ಜೀವವೇ ಬಾಯಿಗೆ ಬಂದಂತಾಯಿತು. ನನ್ನ ಕೈಯೇ ಕಣ್ಣಾಗಿ ಕಣ್ಣಿರು ತೊಟ್ಟಿಕ್ಕಿತು. ಗೋಡೆಯಡಿ ಹಸುವೊಂದು ಬಿದ್ದು ಸತ್ತಿದೆ. ಅದರ ಹೊಟ್ಟೆ ಕೆಳಗೆ ಒಬ್ಬ ಸಿಕ್ಕಿದ್ದಾನೆ. ಪಕ್ಕದಲ್ಲೆ ಮಗುವೊಂದು ಬಿದ್ದಿದೆ. ಇಬ್ಬರ ಕೈಯಲ್ಲೂ ಪಾತ್ರೆ ಇದೆ. ಹಾಲು ಕರೆಯುವಾಗ ಭೂಕಂಪ ಆಗಿದೆ ಎಂದು ಗೊತ್ತಾಯಿತು. ಇನ್ನೊಂದು ಮಗು ಪುಸ್ತಕ ಕೈಯಲ್ಲಿ ಹಿಡಿದೇ ಸತ್ತುಹೋಗಿದೆ. ಪುಸ್ತಕವನ್ನು ಬಿಡಿಸಿ ನೋಡಿದೆ. ಅದೊಂದು ಹಾಡಾಗಿತ್ತು. ಏನೆಂದರೆ-
ಮಣ್ಣಿನ ಹುಂಡಿಯೆ ಬೀಳದಿರು ಜಾರಿ.
ಹಾಕುತಿರುವೆ ಒಂದೊಂದೇ ಪೈಸೆ.
ತುಂಬಿದಾದ ಮೇಲೆ ಜಾತ್ರೆ ನೋಡಬೇಕೆಂಬಾಸೆ.


2)ದಡ ಸವಕಲಾಗುತ್ತಿರುವ ದ್ವೀಪವಿದು. ಭಯಂಕರ ಪ್ರಾಣಿಗಳ ಈ ಸಮುದ್ರದೊಳಗಿರುವ ದೊಡ್ಡದೊಡ್ಡ ಕೇಬಲ್ಲುಗಳು ಕಾಣುತ್ತಿಲ್ಲ. ಬೇರೆ ಬೇರೆ ದೇಶಗಳಿಂದ ವಿದ್ಯುತ್ ಸರಬರಾಜಾಗುತ್ತಿದೆ. ಈ ದ್ವೀಪದ ತುಂಬ ವಿವಿಧ ಕಂಪನಿಗಳ ಟವರ್‌ಗಳು ಮೋಡಗಳ ಬಟ್ಟೆ ಒಣಗಿಹಾಕಿಕೊಂಡು ಕೂತಿವೆ. ಕಾಣದ ದೇಶಗಳಿಂದ ಫೋನ್‌ ರಿಂಗ್‌ ಆಗುತ್ತಿರುತ್ತೆ. ಇಡೀ ದ್ವೀಪ ಸಮುದ್ರದಲ್ಲಿ ಮುಳುಗುವವರೆಗೂ ದ್ವೀಪದ ಮೇಲೆ ಚಕ್ರಗಳು ತಿರುಗುತ್ತಿರುತ್ತವೆ. ಮನೆಗಳನ್ನು ಮುಟ್ಟುತ್ತಿರುತ್ತವೆ. ಮುಳುಗಿದ ಮೇಲೆ ಮನೆಗಳು ಏನಾಗಬಹುದು? ಯಾವುದು ಮುಳುಗಿ ಯಾವುದು ತೇಲಬಹುದು? ಮಂಚಗಳು ಮರದ್ದಾದರೂ ತೇಲುವುದಿಲ್ಲ. ಅವು ಮಾಂಸದ ಸರಪಳಿ ಕಟ್ಟಿಕೊಂಡಿವೆ. ಗಾಯಗೊಂಡ ಪಾಯಗಳಿಗೆ ಬಾಗಿಲು ಕಿಟಕಿಗಳು ಶುಶ್ರೂಷೆ ಮಾಡಲು ಬಯಸುತ್ತಿವೆ. ಗೋಡೆಗಳು ಮತ್ತಷ್ಟು ಗಾಯ ಮಾಡುತ್ತಿವೆ.
ಮೊಬೈಲುಗಳನ್ನು ಟವರ್‌ಗಳು ಬದುಕಿಸುತ್ತಿಲ್ಲ. ಅವೂ ಮುಳುಗುತ್ತಿವೆ. ಅದರಲ್ಲಿರುವ ಸಂಬಂಧದ ಸಾಲುಗಳು ಹೇಳಿಕೊಳ್ಳಲಾಗದ ದುಃಖದ ಬೆರಳುಗಳಲ್ಲಿ ಸಿಲುಕಿವೆ. ಆ ಬೆರಳುಗಳು ನಡುಗುತ್ತಿವೆ. ಭಯ ಮತ್ತು ಅಸಹಾಯಕತೆಯ ಉಂಗುರ ಧರಿಸಿವೆ. ಈ ದ್ವೀಪದಲ್ಲಿ ಎಷ್ಟೊಂದು ಐಷಾರಾಮಿ ಹೋಟೇಲ್‌ಗಳಿವೆ. ಎಷ್ಟೊಂದು ಪ್ರಾರ್ಥನಾ ಕೇಂದ್ರಗಳಿವೆ. ಎಷ್ಟೊಂದು ಮಿಲಿಟರಿ ಹಡಗುಗಳಿವೆ. ಆದರೆ ಅವು ಯಾವೂ ತೇಲುವುದಿಲ್ಲ. ತೇಲಿದರೆ ಕವಿತೆಗಳು ತೇಲಬಹುದು. ಅವಕ್ಕೆ ಮಾತ್ರ ಯುದ್ಧವಿಲ್ಲದ ಭೂಮಿಯ ಹುಡುಕಾಟವಿದೆ.


3)ತೊಟ್ಟಿಲಲ್ಲಿ ರಕ್ತತೊಟ್ಟಿಕ್ಕಿ, ಗಿಲಕಿ ಗಿಲ್ಲಿಕ್ಕಿ, ಜೋಗುಳ ಜಗಳವಾಗಿ,
ಬಾಯಿವರೆಗೆ ಬಂದ ತುತ್ತು ಬಿದ್ದು ದೂಳಾಗಿ, ಕೊರಳ ಸರ ಉಸಿರು ಕಟ್ಟಿಸಿ
ಕುಡಿದ ಔಷಧಿಯೇ ಸಮಾಧಿ ಮಾಡಿದರೂ... ಮಗು ಬದುಕಿತು.
ಆದರೆ
ತಾಯಿ ಭಾಷೆ ಕಲಿಯದೆ
ಸತ್ತು ಹೋಯಿತು.


4)ಏನೋ ಬರೆಯುತ್ತ ಕೂತಿದ್ದೇನೆ. ಹೊರಗೋಡೆ ಯಾರೋ ಕುಟ್ಟುತ್ತಿದ್ದಾರೆ. ನನಗೇಕೆ ಎಂದು ನಾನು ಸುಮ್ಮನೆ ಕೂಡುವಂತಿರಲಿಲ್ಲ. ಏಕೆಂದರೆ ಏಕಾಗ್ರತೆ ಎಗರಿ ಹೋಗುತ್ತಿದ್ದುದಲ್ಲದೆ ಒಳಗೋಡೆಯ ಫೋಟೋಗಳೆಲ್ಲ ಅಲ್ಲಾಡುತ್ತಿದ್ದವು. ಅಟ್ಟದ ಮೇಲಿದ್ದ ಕೇರುವ ಮೊರಗಳು ಧೊಪ್ಪನೆ ಬಿದ್ದವು. ಅಕ್ಕಿಯೆಲ್ಲ ಚೆಲ್ಲಿತು. ಅಕ್ಕಿ ಕಾಳುಗಳು ಈಗಾಗಲೇ ಉದುರಿದ್ದ ಮಣ್ಣುಕಲ್ಲನ್ನು ತಮ್ಮಲ್ಲಿ ಸೇರಿಸಿಕೊಂಡವು.
ಬರೆಯುವುದನ್ನು ನಿಲ್ಲಿಸಿ ಚೆಲ್ಲಿದ ಅಕ್ಕಿ ಎತ್ತಲು ಹೋದೆ. ಮಣ್ಣುಕಲ್ಲೆಲ್ಲ ಸೇರಿ ಅಕ್ಕಿ ವಿರೂಪವಾಯ್ತು. ಎಂಜಲೆಲೆಯ ತೊಟ್ಟಿಯಂತೆ.
ಹೌದು, ಅಕ್ಕಿಯಾರಿಸುವಾಗ ನನಗೆ ಎಂಜಲೆಲೆಗಳ ತೊಟ್ಟಿ ನೆನಪಾಗುತ್ತಿದೆ. ಆ ಮಕ್ಕಳು ಹಾಗೂ ನನಗೆ ಯಾವ ವ್ಯತ್ಯಾಸವೂ ಇಲ್ಲ. ತೊಟ್ಟಿಯಲ್ಲಿ ಬಿದ್ದ ಹಸಿವಿನ ಕೈಗಳು ಎಂಜಲನ್ನು ಎತ್ತಿ ಹೊರಗೆ ನಿಂತ ತಮ್ಮವೇ ಹಸಿದ ಬಾಯಿಗಳಿಗೆ ಕೊಡುತ್ತಿವೆ. ಈಗ ಕೇಳಿದ ಸದ್ದು ಹಸಿದ ಕೈ ಬಾಯಿಗಳ ಸದ್ದೇಇರಬೇಕು ಎಂದು ಓಡಿದೆ. ಕಸದ ತೊಟ್ಟಿವರೆಗೂ. ನಂಬಲಾಗಲಿಲ್ಲ. ಕೈಗಳು ತುಪಾಕಿಗಳಾಗಿ ತೊಟ್ಟಿಯೊಳಗಿಂದ ಈಚೆ ಬರುತ್ತಿವೆ. ಹೊರಗೆ ನಿಂತ ಹಸಿದ ಬಾಯಿಗಳು ಕೈಗಳಾಗಿ ಅವುಗಳನ್ನು ಹಿಡಿಯುತ್ತಿವೆ. ಭಯವಾಗಿ ನಾನು ಓಡಿದೆ... ಓಡಿದೆ... ಆದರೆ... ಎಲ್ಲಿ ನನ್ನ ಮನೆ? ಬಿದ್ದುಹೋಗಿದೆ! ಯಾರೋ ಅಮೀರರು ಹುಟ್ಟು ಹಬ್ಬದ ಆಚರಣೆಗೆ ಕಟ್ಟಿದ್ದ ಶಾಮಿಯಾನ ನನ್ನ ಮನೆಯನ್ನು ಕೆಡವಿತ್ತು. ಎಲ್ಲಿತ್ತೋ ಧೈರ್ಯ, ತಡೆಯಲಾಗಲಿಲ್ಲ. ಜೊತೆಗೆ ತೊಟ್ಟಿ ತುಪಾಕಿಗಳ ಸ್ಫೂರ್ತಿ ಬೇರೆ. ಇಷ್ಟು ಹೊತ್ತೂ ಬರೆಯುತ್ತಿದ್ದ ಪೆನ್ನಿನ ಮುಳ್ಳಿನ ತುದಿಯನ್ನು ಆಕಾಶಕ್ಕೆ ಮುಖ ಮಾಡಿ ಬಾಣದಂತೆ ಎಸೆದು ಬಿಟ್ಟೆ. ನನ್ನಕೋಣೆ ಬಟಾ ಬಯಲಾಗಿತ್ತು. ಮೂಲೆಯಲ್ಲಿ ಸ್ಫೂರ್ತಿಗಾಗಿ ಚಹಾ ಮಾಡಲು ಇಟ್ಟಿದ್ದ ಸ್ಟೌವ್‌ ಇನ್ನೂ ಉರಿಯುತ್ತಿತ್ತು. ಅದನ್ನು ಎತ್ತಿ ಶಾಮಿಯಾನದ ಮೇಲೆ ಎಸೆದೆ. ಶಾಮಿಯಾನ ಹೊತ್ತಿಕೊಂಡು ಧಗಧಗ ಉರಿಯುತ್ತಿದೆ. ಅಮೀರರ ಬಣ್ಣ ಬಣ್ಣದ ಶಾಮಿಯಾನ ಧಗಧಗ ಉರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT