ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನಗೆ ಹಾಡಲು ಬರುವುದಿಲ್ಲ...

Last Updated 24 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಎಲ್ಲ ಸಂಗೀತಗಾರರ ಹಿನ್ನೆಲೆಯಲ್ಲಿ ಒಂದು ಸಂಘರ್ಷಮಯ ಬದುಕಿದೆ. ಗುರುಗಳನ್ನು ಹುಡುಕಾಟದ ಕಷ್ಟಪರಂಪರೆ ಒಂದು ಹಂತವಾದರೆ, ಕಲಿಕೆಯ ನಂತರ ಸಂಗೀತ ಕ್ಷೇತ್ರದಲ್ಲಿ ನೆಲೆಕಂಡುಕೊಳ್ಳಲು ನಡೆಸುವ ಹೋರಾಟ ಇನ್ನೊಂದು ಹಂತ. ಸಂಗೀತವನ್ನೇ ನಂಬಿ, ಅದರಿಂದಲೇ ಜೀವನ ಸಾಗಿಸುವ ಅನಿವಾರ್ಯತೆ ಇರುವ ಕಲಾವಿದರ ಬದುಕಂತೂ ಇನ್ನೂ ದಾರುಣ.
 
ಕೆಲವರು ಸಂಗೀತದಿಂದ ಹೊಟ್ಟೆ ತುಂಬುವುದಿಲ್ಲ ಎಂದು ಬೇರೆ ಉದ್ಯೋಗ ಅರಸಿ ಹೋದ ಪ್ರಸಂಗಗಳೂ ಇವೆ. ತೀವ್ರತರ ಅನಾರೋಗ್ಯದಿಂದ ಪಾರಾಗಿ ಬಂದ ಕುಮಾರಗಂಧರ್ವರು ಜೀವವಿಮೆ ಏಜೆಂಟರಾಗಿ ಕೆಲಸ ಮಾಡಿ, ಅದು ತಮ್ಮ ಮನೋಭಾವಕ್ಕೆ ಹೊಂದುವುದಿಲ್ಲವೆಂದು ಅರಿತು ಸಂಗೀತಕ್ಕೆ ಮರಳಿದರು. ಇಂಥ ಅನೇಕ ನಿದರ್ಶನಗಳು ಸಂಗೀತಲೋಕದಲ್ಲಿವೆ. ಪಂ.ಜಿತೇಂದ್ರ ಅಭಿಷೇಕಿಯವರ ಕತೆಯೂ ಇದಕ್ಕೆ ಹೊರತಲ್ಲ.

ಜಿತೇಂದ್ರ ಅಭಿಷೇಕಿ ಗೋವಾದವರು. ಅಲ್ಲಿನ ಸುವಿಖ್ಯಾತ ಮಂಗೇಶಿ ದೇವಾಲಯದಲ್ಲಿ, ದೇವರಿಗೆ ಅಭಿಷೇಕ ಮಾಡುವ ವಿಶೇಷ ಅವಕಾಶ ಇವರ ಮನೆತನದವರಾಗಿತ್ತು. ಆ ಕಾರಣದಿಂದ ಅವರ ಮನೆತನದ ಹೆಸರೇ `ಅಭಿಷೇಕಿ~. ಜಿತೇಂದ್ರರ ತಂದೆ ಕೀರ್ತನೆಗಳನ್ನು ಹಾಡುತ್ತಿದ್ದರು. ಲಘು ಸಂಗೀತದ ವಾತಾವರಣ ಮನೆಯಲ್ಲಿತ್ತು. ಶಾಸ್ತ್ರೀಯ ಸಂಗೀತ ಹಾಡಬಲ್ಲವರು ಯಾರೂ ಇರಲಿಲ್ಲ.
 
ಜಿತೇಂದ್ರ ಅಭಿಷೇಕಿ ತಾವೊಬ್ಬ ಸಂಗೀತಗಾರರಾಗಬೇಕೆಂದು ಕನಸು ಕಂಡವರು. ಸಂಗೀತದ ಬೆನ್ನು ಬಿದ್ದು ಕಷ್ಟಕೋಟಲೆ ಅನುಭವಿಸಿದವರು. ಸಂಗಿತದ ಕಲಿಕೆಯ ದಾಹದಲ್ಲಿ ಹಲವಾರು ಗುರುಗಳಲ್ಲಿ ಶಿಷ್ಯತ್ವವನ್ನು ವಹಿಸಿದರು. ಹಾಗೆಯೇ ತಮಗೆ ತಿಳಿದಿರುವುದನ್ನೆಲ್ಲ ನಿರ್ವಂಚನೆಯಿಂದ ತಮ್ಮ ಶಿಷ್ಯರಿಗೆ ಹೇಳಿಕೊಟ್ಟರು.

ಪದವೀಧರರಾಗಲೆಂದು ಬೆಳಗಾವಿಗೆ ಬಂದರೆ, ಅನಿರೀಕ್ಷಿತವಾಗಿ ಅಮರಿಕೊಂಡ ಟೈಫಾಯಿಡ್‌ನಿಂದ ದನಿಯನ್ನೇ ಕಳೆದುಕೊಂಡರು. ಹಾಡುವುದೇ ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಮಂಗೇಶಿಗೆ ಮರಳಿ, ಸತತ ಸಾಧನೆಯಿಂದ ತಮ್ಮ ದನಿ ಮರಳಿ ಪಡೆದರು!

ಇಂಥ ಛಲವಾದಿ ಪಂ.ಜಗನ್ನಾಥಬುವಾರಲ್ಲಿ ಶಿಷ್ಯವೃತ್ತಿ ಕೈಕೊಂಡು ಪ್ರಬುದ್ಧ ಗಾಯಕರಾಗಿ ರೂಪುಗೊಂಡರು. ಅವರು ಮನೆಯಿಂದ ಹೊರಬಿದ್ದು ಪುಣೆ, ಮುಂಬೈಗಳಲ್ಲಿ ಅಂಡಲೆಯುತ್ತಿದ್ದ ದಿನಗಳಲ್ಲಿ ನಡೆದ ಪ್ರಸಂಗವಿದು.

ಪುಣೆ-ಮುಂಬೈಯಂಥ ಊರುಗಳಲ್ಲಿ ಯಾವುದಾದರೊಂದು ಆದಾಯದ ಮೂಲವನ್ನು ಅರಸಿ, ನೆಲೆಗೊಳ್ಳಲು ಜಿತೇಂದ್ರ ಅಭಿಷೇಕಿ ಪರದಾಡುತ್ತಿದ್ದರು. ಅವರು ತಕ್ಕಮಟ್ಟಿಗೆ ಲೇಖನ ಕಲೆಯನ್ನೂ ರೂಢಿಸಿಕೊಂಡಿದ್ದರು.

ಆಗಾಗ ಪತ್ರಿಕೆಗಳಿಗೆ ಲೇಖನವನ್ನು ಬರೆದು ಅದರಿಂದ ಬಂದ ಆದಾಯದಲ್ಲಿ ಉಸಳ-ಪಾವ ತಿಂದು ದಿನಗಳನ್ನು ತಳ್ಳುತ್ತಿದ್ದರು. ಒಮ್ಮೆ, ಮುಂಬೈಯಲ್ಲಿ ಪತ್ರಿಕೆಯೊಂದರ ಸಂಪಾದಕರನ್ನು ಕಂಡು, ನೌಕರಿಗಾಗಿ ವಿನಂತಿಸಿಕೊಂಡರು. ಅದೇ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನವನ್ನು ಸಂಪಾದಕರಿಗೆ ತೋರಿಸಿದರು. ಇವರ ಪ್ರವರವೆಲ್ಲವನ್ನೂ ಕೇಳಿದ ಸಂಪಾದಕರು-

`ನಿನಗೇನು ಬರುತ್ತದೆ?~ ಎಂದು ಕೇಳಿದರು.
`ನಾನು ಹಾಡುತ್ತೇನೆ~- ಅಭಿಷೇಕಿ ಉತ್ತರಿಸಿದರು.
ಸಂಪಾದಕರು ಹಾಡುವಂತೆ ಸೂಚಿಸಿದರು. ಸಾಥಿದಾರರ ನೆರವಿಲ್ಲದೆ ಅಭಿಷೇಕಿಯವರು ತುಂಬು ಮನಸ್ಸಿನಿಂದ ಆ ಸಂಪಾದಕರ ಮುಂದೆ ಹಾಡಿದರು. ಸಂಪಾದಕರು ಸಂಗೀತಪ್ರಿಯರಿರಬಹುದು, ತಮಗೆ ನೌಕರಿಯನ್ನು ಕೊಡಬಹುದು ಎಂಬ ನಿರೀಕ್ಷೆ ಅಭಿಷೇಕಿ ಅವರದಾಗಿತ್ತು. ಆದರೆ, ಆ ಸಂಪಾದಕರು ಹೇಳಿದ್ದೇನು- `ನಿನಗೆ ಸರಿಯಾಗಿ ಹಾಡಲು ಬರುವುದಿಲ್ಲ. ಹೊರಟು ಹೋಗು~.

ಅಭಿಷೇಕಿಯವರಿಗೆ ನಿರಾಸೆಯಾಯಿತು. ಆದರೆ, ನಂತರದ ಕೆಲವೇ ದಿನಗಳಲ್ಲಿ ಆಕಾಶವಾಣಿಯಲ್ಲಿ ನೌಕರಿ ದೊರೆಯಿತು. ಕಾಲ ಕ್ರಮೇಣ ಅವರೊಬ್ಬ ಜನಪ್ರಿಯ ಗಾಯಕರಾಗಿ ರೂಪುಗೊಂಡರು. ಒಂದುವೇಳೆ, ಆ ಸಂಪಾದಕರೇನಾದರೂ ನೌಕರಿ ಕೊಟ್ಟಿದ್ದರೆ ತಾನು ಈ ಹಂತಕ್ಕೆ ಬರುತ್ತಿರಲಿಲ್ಲವೆಂದು ಅಭಿಷೇಕಿ ಆಗಾಗ ಹೇಳುತ್ತಿದ್ದರು.

ಪತ್ರಿಕೆಯ ದೈನಂದಿನ ಕಲಾಪಗಳ ಒತ್ತಡದಲ್ಲಿ ತಮ್ಮ ಸಂಗೀತಕೃಷಿಗೆ ಅವಕಾಶ ದೊರೆಯುತ್ತಿರಲಿಲ್ಲ, ನೌಕರಿ ಕೊಡದೆ ಸಂಪಾದಕರು ಉಪಕಾರವನ್ನೇ ಮಾಡಿದರೆಂದು ಅವರು ಭಾವಿಸಿದ್ದರು.

ಅಭಿಷೇಕಿ ಅವರಿಗೆ ನೌಕರಿ ನೀಡದ ಅದೇ ಸಂಪಾದಕರು ಮುಂದೊಂದು ದಿನ ಜಿತೇಂದ್ರರ ವಿಶೇಷ ಸಂದರ್ಶನವನ್ನು ಪ್ರಕಟಿಸಿದರು!

ಈ ಬರಹದೊಂದಿಗೆ `ನಾದಲೋಕದ ರಸನಿಮಿಷಗಳು~ ಮಾಲಿಕೆ ಮುಕ್ತಾಯ. -ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT