ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಪಯ್ಯ ಸ್ಲೇಟಣ್ಣರ ಫೈಟಿಂಗು

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಒಂದು ದಿವಸ ಏನಾಯ್ತಪ್ಪ ಅಂದ್ರೆ ಬಳಪಯ್ಯನಿಗೂ ಸ್ಲೇಟಣ್ಣನಿಗೂ ಜೋರು ಜೋರು ಜಗಳ. ಇಬ್ಬರೂ ಶರ್ಟಿನ ಕಾಲರ್ ಮೇಲೆತ್ತಿದ್ದಾರೆ. ಮೀಸೆ ತಿರುವಿಕೊಳ್ತಿದ್ದಾರೆ. ‘ಬಾರೋ ಒಂದು ಕೈ ನೋಡ್ತೀನಿ’ ಅಂತ ಒಬ್ಬರಿಗೊಬ್ಬರು ತೊಡೆ ತಟ್ತಾ ಇದ್ದಾರೆ.

ಸ್ಕೂಲಿಗೆ ಹೊರಟಿದ್ದ ಟುಟ್ಟುವಿಗೆ ಒಂದೇ ಚಿಂತೆ, ಇವರ ಜಗಳ ಬಿಡಿಸೋದು ಹೆಂಗೆ ಅಂತ. ಅಲ್ಲದೆ ಯಾಕೆ ಜಗಳ ಆಡ್ತಿದ್ದಾರೆ ಅಂತಾನೂ ಗೊತ್ತಾಗ್ತಿಲ್ಲ. ಇವರೂ ಹೇಳ್ತಾ ಇಲ್ಲ. ಸುಮ್ಮನೆ ಬೈದಾಡಿದ್ದೇ ಬೈದಾಡಿದ್ದು. ಕಿರುಚಾಡಿದ್ದೇ ಆಡಿದ್ದು.

ಇದ್ದಕ್ಕಿದ್ದಂತೆ ಬಳಪಯ್ಯನಿಗಿಂತಲೂ ಭಾಳ ಗಟ್ಟಿಯಾಗಿದ್ದ ಸ್ಲೇಟಣ್ಣ ಅವನಿಗೆ ಹೊಡೆದೇ ಬಿಟ್ಟ. ಪಾಪ ಬಳಪಯ್ಯನಿಗೆ ತಿರುಗಿಸಿ ಹೊಡಿಯೋಕೆ ಶಕ್ತಿ ಇಲ್ಲ. ಇನ್ನೇನ್ಮಾಡ್ತಾನೆ? ಕುಂಯ್ ಕುಂಯ್ ಅಂತ ರಾಗ ತೆಗೆದ. ಟುಟ್ಟು ನೋಡೋ ತನಕ ನೋಡಿದ, ತಾಳೋ ತನಕ ತಾಳಿದ. ಆಮೇಲೆ ‘ಭಕ್ತ ಪ್ರಹ್ಲಾದ’ ಪಿಕ್ಚರಿನ ಉಗ್ರ ನರಸಿಂಹನ ಥರ ಗರ್ಜಿಸುತ್ತಾ – ‘ಲೋ ಕತ್ತೆಗಳಾ ನೀವ್ಯಾಕೆ ಜಗಳ ಆಡ್ತಿದ್ದೀರಿ ಅನ್ನೋದನ್ನ ಮೊದಲು ಹೇಳಿ ಆಮೇಲೆ ಫೈಟಿಂಗ್ ಆಡಿ’ ಎಂದು ತಲೆ ಚಚ್ಚಿಕೊಂಡ.

ಅಷ್ಟೊತ್ತಿಗಾಗಲೇ ಸುಸ್ತಾಗಿದ್ದ ಬಳಪಯ್ಯನಿಗೆ ಯಾರಾದರೂ ಹೆಲ್ಪ್ ಮಾಡಿದರೇ ಸಾಕು ಅನ್ನಿಸಿತ್ತು. ಟುಟ್ಟುವಿನ ಧ್ವನಿ ಕೇಳಿದ್ದೇ ಜೀವ ಬಂದಂತಾಯ್ತು. ‘ನನ್ನನ್ನೇ ನಾನು ತೇಯ್ದುಕೊಂಡು ಅಕ್ಷರ ಕಲಿಸೋ ರಾವ್ ಬಹದ್ದೂರ್ ಬಳಪ ಸಾಹೇಬರ ವಂಶಕ್ಕೆ ಸೇರಿದವನು ನಾನು. ನಾನಿಲ್ಲದೇ ಯಾರಿಗೂ ಅಕ್ಷರ ಬರೆಯೋಕೆ ಸಾಧ್ಯನೇ ಇಲ್ಲ. ಈ ಸ್ಲೇಟಣ್ಣನಿಗೆ ನನ್ನ ಮಹಿಮೆ ಏನು ಅಂತ ಗೊತ್ತಿಲ್ಲ. ಸುಮ್ಮನೆ ಹೊಟ್ಟೆ ಉರಿ ಅವನಿಗೆ. ಮಾತು ಮಾತಿಗೆ ಫೈಲ್ವಾನ್ ಥರ ಕುಸ್ತಿ ಆಡ್ತಾನೆ. ಈಗ ನೀನೇ ಒಂದು ತೀರ್ಮಾನಕ್ಕೆ ಬಾ. ನಮ್ಮಿಬ್ಬರಲ್ಲಿ ಯಾರು ಗ್ರೇಟು ಹೇಳು?’ ಅಂತ ಎದೆಯುಬ್ಬಿಸಿ ಕೇಳಿದ.

ಸ್ಲೇಟಣ್ಣನೇನೂ ಸುಮ್ಮನೆ ಕೂರಲಿಲ್ಲ. ಮೊದಲೇ ಕಪ್ಪಗಿದ್ದ ಅವನ ಮುಖ ಸಿಟ್ಟಿನಿಂದ ಇನ್ನಷ್ಟು ಕರ್ರಗಾಗಿತ್ತು. ಬೆವರು ಒರೆಸಿಕೊಳ್ಳುತ್ತಾ ಹೇಳಿದ, ‘ಟುಟ್ಟು ನನಗೆ ಯಾರ ಮೇಲೂ ಹೊಟ್ಟೆ ಉರಿ ಇಲ್ಲಪ್ಪ. ನೀವು ಬರೆದಾಗ ಬರೆಸಿಕೊಂಡು, ಗೀಚಿದಾಗ ಗೀಚಿಸಿಕೊಂಡು ತೆಪ್ಪಗೆ ಇರೋ ಒಳ್ಳೆ ಹುಡುಗ ನಾನು. ಈ ಬಳಪಯ್ಯ ನನ್ನನ್ನ ಲೋ ಕರಿಯಾ ಅಂತ ಯಾವಾಗಲೂ ಹಂಗಿಸ್ತಾ ಇರ್ತಾನೆ. ನಾನು ನಿನಗಿಂತ ಬೆಳ್ಳಗಿದ್ದೀನಿ. ನಿನ್ನ ಮೇಲೆ ಇಷ್ಟ ಬಂದಹಾಗೆ ಗೀಚೋ ಶಕ್ತಿ ಇರೋದು ನನಗೆ ಮಾತ್ರ ಅಂತ ಜೋರು ಮಾಡ್ತಾನೆ. ಮೋಟುದ್ದ ಇರೋ ಇವನಿಗೇ ಇಷ್ಟು ಪೊಗರು ಇರಬೇಕಾದ್ರೆ ನನಗೆ ಇನ್ನೆಷ್ಟು ಇರಬೇಡ ಹೇಳು? ಅಲ್ಲಾ ಬರೀ ಇವನದಷ್ಟೇ ತ್ಯಾಗವಾ ನನ್ನದೇನೂ ತ್ಯಾಗ ಇಲ್ಲವಾ ನೀನೇ ಹೇಳು?’ ಎಂದು ಕರ್ಚೀಫಿನಿಂದ ಕಣ್ಣೀರು ಒರೆಸಿಕೊಂಡ.

ಟುಟ್ಟು ನಗುತ್ತ ಬಳಪಯ್ಯನನ್ನು ನಿಧಾನಕ್ಕೆ ಜೇಬಿಗೆ ಹಾಕಿಕೊಂಡ, ಸ್ಲೇಟಣ್ಣನನ್ನು ಬ್ಯಾಗಿನೊಳಗೆ ಸೇಫಾಗಿ ಕೂರಿಸಿಕೊಂಡ. ಸ್ಕೂಲಿನ ಕಡೆ ಹೆಜ್ಜೆ ಹಾಕುತ್ತ, ‘ನೋಡ್ರೋ ನಿಮ್ಮ ಹಾಗೆ ಮೇಧಾವಿಗಳು ಅನ್ನಿಸಿಕೊಂಡ ಮನುಷ್ಯರೂ ಗುದ್ದಾಡ್ತಾ ಇರ್ತಾರೆ. ನಾನು ಕರಿಯ, ನೀನು ಬಿಳಿಯ. ನಿನಗಿಂತ ನಾನೇ ಮೇಲು ಅಂತ ಕೂಗಾಡ್ತಾರೆ. ನಮ್ಮ ಗಾಂಧಿ ತಾತನ ಕತೆ ಗೊತ್ತಲ್ಲ. ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಎಲವೋ ಕರಿಯಾ ಅಂತ ಬಿಳಿಯರು ರೈಲಿನಿಂದ ಹೊರಗೆ ನೂಕಿದರು. ಹಾಗಂತ ಅವರು ಧೈರ್ಯಗೆಡಲಿಲ್ಲ. ಯಾರ ಮೇಲೂ ಹೊಡೆದಾಡಲಿಲ್ಲ.

ಬದಲಿಗೆ ವರ್ಣಭೇದ ಮಾಡುವವರ ವಿರುದ್ಧ ದೊಡ್ಡ ಚಳವಳಿ  ಮಾಡಿದರು. ಬಿಳಿಯರ ಒಳಗಿದ್ದ ಕರಿ ಮನಸ್ಸನ್ನು ಕ್ಲೀನ್ ಮಾಡಿದರು. ಬುದ್ಧ, ಬಸವಣ್ಣ, ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್, ಅಂಬೇಡ್ಕರ್ ಇವರೆಲ್ಲಾ ಮೇಲು ಕೀಳು ಎಂಬ ಕಪ್ಪು ಕತ್ತಲನ್ನು ಹೋಗಲಾಡಿಸಿದವರೇ ಅಂತ ನಮ್ಮ ಮಿಸ್ಸು ಹೇಳ್ತಾ ಇರ್ತಾರೆ. ಅಷ್ಟೇ ಅಲ್ಲ ರಾಗಿಮುದ್ದೆ ನೋಡೋಕೆ ಕಪ್ಪು ಆದ್ರೆ ಅದಕ್ಕಿಂತ ಟೇಸ್ಟು ಬೆಳ್ಳಗಿರೋ ಅನ್ನಕ್ಕೂ ಇಲ್ಲ’ ಎಂದ. ಸ್ಲೇಟಣ್ಣ, ಬಳಪಯ್ಯ ಇಬ್ಬರೂ ಬಾಯಿ ಬಿಟ್ಟುಕೊಂಡು ಟುಟ್ಟು ಮಾತನ್ನು ಕೇಳಿಸಿಕೊಂಡರು.

‘ಆದರೂ ಕರಿ–ಬಿಳಿ ಅನ್ನೋ ಕತ್ತಲು ಇನ್ನೂ ಇದೆ. ಉದಾಹರಣೆಗೆ ನಮ್ಮ ಬಳಪಯ್ಯ. ಅವನ ತ್ಯಾಗ ದೊಡ್ಡದೇ. ಅವನ ಇಡೀ ದೇಹ ಅಕ್ಷರಕ್ಕೆ ಮುಡಿಪಾಗಿದೆ ನಿಜ. ಆದರೆ ಯಾವತ್ತೂ ಬಳಪಯ್ಯ ಸ್ಲೇಟಣ್ಣನ ತ್ಯಾಗವನ್ನು ಮರೀಬಾರದು. ಸ್ಲೇಟು ತನ್ನ ಮೈಯನ್ನು ಬರೆಯೋಕೆ ಕೊಟ್ಟಾಗ ಮಾತ್ರ ಬಳಪಕ್ಕೆ ಬರೆಯೋಕೆ ಸಾಧ್ಯ ಅಲ್ವಾ?’ ಎಂದು ಮಾತು ನಿಲ್ಲಿಸಿದ. ಈಗ ಸ್ಲೇಟಣ್ಣನಿಗೆ ಸ್ವಲ್ಪ ಜಂಭ ಬಂತು. ‘ನೀನಾದ್ರೂ ಹೇಳ್ದಲ್ಲಾ ನಾನೇ ಗ್ರೇಟು ಅಂತ.

ತುಂಬಾ ಥ್ಯಾಂಕ್ಸ್’ ಎಂದು ವಾರೆಗಣ್ಣಿನಿಂದ ಬಳಪಯ್ಯನ ಕಡೆ ನೋಡಿ ನಕ್ಕ. ಆಗ ಟುಟ್ಟು ಬ್ಯಾಗಿನಿಂದ ಅವನನ್ನು ಹೊರಗೆ ತೆಗೆದು ‘ನೋಡು ಸ್ಲೇಟಣ್ಣ. ನೀನು ಗ್ರೇಟು ನಿಜ. ನಿನಗೆ ಬಳಪಯ್ಯನಿಗಿಂತ ಶಕ್ತಿ ಇದೆ ಅನ್ನೋದೂ ನಿಜ. ಆದರೆ ಆ ಬಡಪಾಯಿಗೆ ಬಾರಿಸೋದು ಮಾತ್ರ ಸರಿಯಲ್ಲ. ನೀನು ಅವನ ಮೇಲೆ ಹೊಡೆದಾಡೋದು ಬಿಟ್ಟು ಅವನಿಗೆ ತಿಳಿ ಹೇಳಬೇಕಿತ್ತು ಅಲ್ವಾ?’ ಎಂದ.

ಸ್ವಲ್ಪ ಹೊತ್ತು ಸೈಲೆಂಟಾಗಿದ್ದ ಟುಟ್ಟು ಆಮೇಲೆ, ‘ಅಕ್ಷರ ಗೊತ್ತಿರೋರೆಲ್ಲಾ ವಿದ್ಯಾವಂತರಲ್ಲ ಅನ್ನೋದಕ್ಕೆ ನೀವೇ ಬೆಸ್ಟ್ ಎಕ್ಸಾಂಪಲ್ಲು. ಇನ್ಮೇಲೆ ನೀವು ಸ್ಕೂಲಲ್ಲಿ ಮಕ್ಕಳಿಗೆ ಬರೀ ಅಕ್ಷರ ತಿದ್ದಿಸಿದರೆ ಸಾಕಾಗಲ್ಲ. ಮಿಸ್ ಹೇಳೋ ಪಾಠ ಕೇಳಿ, ವಿದ್ಯೆ ಬುದ್ಧಿ ಹೆಚ್ಚಿಸಿಕೊಳ್ಳಿ’ ಎಂದು ಪ್ರೀತಿಯಿಂದ ಹೇಳಿದ.
ಇದ್ದಕ್ಕಿದ್ದಂತೆ ಸ್ಲೇಟಣ್ಣ, ಬಳಪಯ್ಯ ಒಟ್ಟಿಗೇ ಅಳಲು ಶುರು ಮಾಡಿದರು. ತಮ್ಮ ತಪ್ಪು ಗೊತ್ತಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ‘ಸಾರಿ’ ಕೇಳಿದರು. ಟುಟ್ಟು ಇಬ್ಬರನ್ನೂ ಮುದ್ದಾಡುತ್ತಾ ಚಾಕ್ಲೇಟ್ ಕೊಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT