ಗೆಳೆಯರೇ, ಇಡೀ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಸರ್ವ ದ್ರವ್ಯವೂ ಧಾತುಗಳೆಂಬ ಮೂಲಭೂತ ವಸ್ತುಗಳಿಂದಲೇ ಸೃಷ್ಟಿಗೊಂಡಿರುವುದು ನಿಮಗೂ ತಿಳಿದಿದೆ ಅಲ್ಲವೇ? ಗ್ಯಾಲಕ್ಸಿಗಳಿಂದ ಆರಂಭಿಸಿ ನಕ್ಷತ್ರ-ನೀಹಾರಿಕೆಗಳು, ಗ್ರಹ-ಉಪಗ್ರಹಗಳು, ನಾವೂ ಸೇರಿದಂತೆ ಸಕಲ ಸಜೀವಿ-ನಿರ್ಜೀವಿಗಳು ಧಾತುಗಳೆಂಬ ಮೂಲದ್ರವ್ಯಗಳಿಂದಲೇ ನಿರ್ಮಾಣಗೊಂಡಿವೆ.

ಈವರೆಗೆ ಗುರುತಿಸಲ್ಪಟ್ಟಿರುವ ಮೂಲವಸ್ತುಗಳ ಸಂಖ್ಯೆ ಒಂದು ನೂರಾ ಹದಿನಾಲ್ಕು. ಅವುಗಳಲ್ಲಿ 94 ಧಾತುಗಳು ನೈಸರ್ಗಿಕ; ಉಳಿದ ಇಪ್ಪತ್ತು ಧಾತುಗಳು ಕೃತಕ. ನೈಸರ್ಗಿಕ ಮೂಲವಸ್ತುಗಳು ಸ್ಥಿರ. ಕೃತಕ ಧಾತುಗಳು ಅಸ್ಥಿರ: ಪ್ರಯೋಗಾಲಯಗಳಲ್ಲಿ ಮೈದಳೆದ ಕ್ಷಣದೊಳಗೇ ಅವು ಕ್ಷಯಿಸಿಹೋಗುತ್ತವೆ.

ವಿಸ್ಮಯ ಏನೆಂದರೆ ಜಲಜನಕದಿಂದ ಆರಂಭಗೊಂಡು ಪ್ಲುಟೋನಿಯಂವರೆಗಿನ ಎಲ್ಲ ತೊಂಬತ್ನಾಲ್ಕು ಧಾತುಗಳೂ ಒಂದರಿಂದ ಮತ್ತೊಂದು ಸಂಪೂರ್ಣ ವಿಭಿನ್ನವಾಗಿವೆ; ಪ್ರತಿ ಮೂಲವಸ್ತುವೂ ತನ್ನದೇ ವಿಶಿಷ್ಟ ಭೌತ ಮತ್ತು ರಾಸಾಯನಿಕ ಗುಣಗಳನ್ನು ಪಡೆದಿದೆ. ಇನ್ನೂ ವಿಸ್ಮಯ ಏನೆಂದರೆ ಎರಡು ಅಥವಾ ಅದಕ್ಕಿಂತ ಅಧಿಕ ಧಾತುಗಳ ಸಂಯೋಜನೆಯಿಂದ ಮುವ್ವತ್ತು ಲಕ್ಷಕ್ಕೂ ಅಧಿಕ `ಸಂಯುಕ್ತ ವಸ್ತುಗಳು' ಪ್ರಕೃತಿಯಲ್ಲಿ ರೂಪುಗೊಂಡಿವೆ. ಸಜೀವಿಗಳು ಸೃಷ್ಟಿಗೊಂಡಿರುವುದೂ ಹೀಗೆಯೇ.

ನೈಸರ್ಗಿಕ ಮೂಲವಸ್ತುಗಳನ್ನೆಲ್ಲ ತುಂಬ ಸ್ಥೂಲವಾಗಿ ಲೋಹ ಮತ್ತು ಅಲೋಹ ಎಂಬ ಎರಡು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ (ಬಹು ಗುಂಪುಗಳ ಸೂಕ್ಷ್ಮ ವರ್ಗೀಕರಣದ `ಆವರ್ತ-ಕೋಷ್ಟಕ' ನಿಮಗೆ ಗೊತ್ತು ತಾನೆ?). ಧಾತುಗಳಲ್ಲಿ ಲೋಹಗಳದೇ ಅತ್ಯಧಿಕ ಸಂಖ್ಯೆ (76); ಅಲೋಹಗಳು ಹದಿನೆಂಟು.

ನೈಸರ್ಗಿಕ ಮೂಲವಸ್ತುಗಳ ಪಟ್ಟಿಯಲ್ಲಿರುವ, ಅತ್ಯಂತ ವಿಶಿಷ್ಟ ಎನಿಸಿರುವ ಕೆಲವು ಆಯ್ದ ಧಾತುಗಳ ಸಂಕ್ಷಿಪ್ತ ಪರಿಚಯ:

1. ಜಲಜನಕ: ಇದರಷ್ಟು ಸರಳ ಮೂಲವಸ್ತು ಇನ್ನಾವುದೂ ಇಲ್ಲ. ವಿಶ್ವದಲ್ಲಿರುವ ಒಟ್ಟೂ ದ್ರವ್ಯರಾಶಿಯ ಮೂರರ ಎರಡಂಶ ಈ ಧಾತುವಿನದೇ. ತಾರೆಗಳಲ್ಲಿನ ಪ್ರಧಾನ ದ್ರವ್ಯವೂ ಆಗಿರುವ (ಚಿತ್ರ-1) ಅನಿಲ ರೂಪದ ಈ ಅಲೋಹ ಧಾತುವೇ ಉಳಿದೆಲ್ಲ ಮೂಲವಸ್ತುಗಳ ಹುಟ್ಟಿನ ಆಧಾರ-ಆಕರ.

2. ಆಮ್ಲಜನಕ: ಜಲಜನಕದೊಡನೆ ಬೆರೆತು `ಜೀವಜಲ'ವಾದ ನೀರನ್ನು ರೂಪಿಸಿರುವ (ಚಿತ್ರ-2), ಭೂ ವಾಯುಮಂಡಲದಲ್ಲಿ ಭಾರೀ ಪ್ರಮಾಣದಲ್ಲಿ ಬೆರೆತು (21%) `ಪ್ರಾಣವಾಯು' ಆಗಿರುವ ಮೂಲದ್ರವ್ಯ. ಧರೆಯಲ್ಲಿ ಸಸ್ಯಗಳಿಂದ ತಯಾರಾಗಿ ವಾತಾವರಣಕ್ಕೆ ಬೆರೆವ ಅಲೋಹ ಧಾತು. ಒಟ್ಟಾರೆ ಜೀವಿಗಳ ಬದುಕಿಗೆ ಅತ್ಯಗತ್ಯವಾದ ಮೂಲದ್ರವ್ಯ.

3. ಚಿನ್ನ: ಅತ್ಯಂತ ಜನಪ್ರಿಯ ಅಷ್ಟೇ ಅಮೂಲ್ಯ ಲೋಹೀಯ ಮೂಲವಸ್ತು (ಚಿತ್ರ-3). ನೇರವಾಗಿ ಪರಿಶುದ್ಧವಾಗಿಯೇ ದೊರಕುವ ಮೋಹಕ ವರ್ಣದ, ಮೃದು ಸ್ವಭಾವದ, ಸಂಪೂರ್ಣ ತಟಸ್ಥ ರಾಸಾಯನಿಕ ಗುಣದ ಈ ಧಾತು ಆಭರಣಗಳಿಗೆ ಅತ್ಯಂತ ಪ್ರಶಸ್ತ. `ರಾಜಲೋಹ-ಲೋಹರಾಜ' ಎಂದೇ ಜಗತ್ಪ್ರಸಿದ್ಧ.

4. ಇಂಗಾಲ: ಈ ಅಲೋಹ ಮೂಲವಸ್ತು ಸಕಲ ಜೀವಕೋಶಗಳ ಅವಿಭಾಜ್ಯ ಅಂಗ. ವಿಶ್ವದ ಅತ್ಯಂತ ಗಟ್ಟಿವಸ್ತುವಾದ ವಜ್ರ (ಚಿತ್ರ) ಮತ್ತು ಅತೀವ ಮಾಲಿನ್ಯದ (ಚಿತ್ರ-5) ಕಲ್ಲಿದ್ದಿಲು ಇಂಗಾಲದ್ದೇ ಬಹುರೂಪಗಳು.

5. ಬೆಳ್ಳಿ: ಬಹುಬೆಲೆಯ ಬಹೂಪಯೋಗೀ ಮೂಲವಸ್ತು (ಚಿತ್ರ-6). ಅತಿ ಸಮರ್ಥ ಶುದ್ಧಿಕಾರಕ; ಶಾಖ ಮತ್ತು ವಿದ್ಯುತ್ ಶಕ್ತಿಯ ಸರ್ವೋತ್ತಮ ವಾಹಕ.

6. ಕಬ್ಬಿಣ: ಭೂಗರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ (ಚಿತ್ರ-7), ಧಾರಾಳ ಲಭ್ಯ ಲೋಹೀಯ ಧಾತು. ಕೈಗಾರಿಕೆಗಳ, ಕಟ್ಟಡಗಳ ಬೆನ್ನೆಲುಬು. ಯಂತ್ರ-ಉಪಕರಣಗಳ ಜೀವಾಳ. ಕಬ್ಬಿಣದಷ್ಟು ಜನೋಪಯೋಗೀ ಧಾತು ಬೇರೊಂದಿಲ್ಲ.

7. ಸಿಲಿಕಾನ್: ಧರೆಯಲ್ಲಿ ಧಾರಾಳ ಲಭ್ಯತೆಯಲ್ಲಿ ಆಮ್ಲಜನಕದ ನಂತರ ದ್ವಿತೀಯ ಸ್ಥಾನದಲ್ಲಿರುವ ಅಲೋಹ ಧಾತು. ಎಲ್ಲ ಶಿಲೆಗಳಲ್ಲಿ (ಚಿತ್ರ-8) ಮರಳಲ್ಲಿ ಜೇಡಿಮಣ್ಣಲ್ಲಿ ಈ ಧಾತುವೇ ಪ್ರಧಾನ ಘಟಕ. ಗಾಜು, ಕಂಪ್ಯೂಟರ್ ಚಿಪ್, ಸೌರಕೋಶ, ಗಡಿಯಾರ ಇತ್ಯಾದಿಗಳಲ್ಲೆಲ್ಲ ಈ ಮೂಲವಸ್ತುವಿನದೇ ಮೂಲಸತ್ವ.

8. ಕಾಲ್ಷಿಯಂ: ಆಮ್ಲಜನಕ, ನೀರು ಮತ್ತು ಇಂಗಾಲಗಳೊಡನೆ ತೀವ್ರವಾಗಿ ವರ್ತಿಸುವ ಲೋಹೀಯ ಮೂಲವಸ್ತು. ಪ್ರಾಣಿಗಳು ಮೂಳೆ ಹಲ್ಲು ಮತ್ತು ಮೃದ್ವಂಗಿ ಚಿಪ್ಪುಗಳ (ಚಿತ್ರ-9) ಪ್ರಧಾನ ಅಂಶವೆಲ್ಲ ಈ ಧಾತುವೇ.

9. ಸಾರಜನಕ: ಭೂ ವಾಯುಮಂಡಲದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ (ಶೇ 78 ಭಾಗ) ಅಲೋಹ ಧಾತು. ಸಸ್ಯ ಸಾಮ್ರಾಜ್ಯದ ಒಂದು ಪ್ರಧಾನ ಪೋಷಕ ವಸ್ತು ಕೂಡ. ಮಿಂಚುಗಳಿಂದ (ಚಿತ್ರ-10) ಪ್ರತ್ಯೇಕಗೊಂಡು, ಮಳೆ ನೀರಲ್ಲಿ ಬೆರೆತು ಸುರಿದು ಸಸ್ಯಗಳಿಗೆ ಒದಗುವ ಅತ್ಯವಶ್ಯ ಮೂಲದ್ರವ್ಯ.

10. ಪಾದರಸ: ಸಾಮಾನ್ಯ ತಾಪಮಾನಗಳಲ್ಲಿ ದ್ರವರೂಪದಲ್ಲಿರುವ ಏಕೈಕ ಲೋಹ (ಚಿತ್ರ-11) (ಅಲೋಹ ಧಾತು ಬ್ರೋಮೀನ್ ಕೂಡ ಇದೇ ಗುಣ ಹೊಂದಿದೆ). ಕರಗಿದ ಬೆಳ್ಳಿಯಂಥದೇ ರೂಪ ಹಾಗಾಗಿ `ಬೆಳ್ಳಿನೀರು' ಎಂದೂ ಪ್ರಸಿದ್ಧ. ಜೀವಿಗಳಿಗೆ ವಿಷಕರ, ಅಪಾಯಕರ ಧಾತು.

11. ಯುರೇನಿಯಂ: ಸುಪ್ರಸಿದ್ಧ ವಿಕಿರಣಪಟು ಧಾತು. ಅಣು ವಿದ್ಯುತ್ ಸ್ಥಾವರಗಳ ಪ್ರಧಾನ ಇಂಧನ. ಪ್ರಸ್ತುತ ಜಗದ ಶೇಕಡ ಹದಿನೇಳರಷ್ಟು ವಿದ್ಯುದುತ್ಪಾದನೆಗೆ ಈ ಲೋಹೀಯ ಧಾತುವಿನ ಬಳಕೆ. `ಆಧುನಿಕ ಜಗದ ಸ್ವಚ್ಛ ಇಂಧನ' ಎಂದೇ ಖ್ಯಾತ. ನಿಯಂತ್ರಣ ತಪ್ಪಿದರೆ ಸರ್ವನಾಶ ತರಬಲ್ಲ ಮೂಲದ್ರವ್ಯ.

12. `ಲೀಥಿಯಂ' ಅತ್ಯಂತ ಹಗುರ ಲೋಹೀಯ ಧಾತುವಾಗಿ, `ಆಸ್ಮಿಯಂ' ಅತ್ಯಂತ ಭಾರವಾದ ಲೋಹವಾಗಿ, `ಅಸ್ಟಟೈನ್' ಅತ್ಯಂತ ವಿರಳ ಮೂಲವಸ್ತುವಾಗಿ (ಇಡೀ ಧರೆಯಲ್ಲಿ ಈ ಧಾತುವಿನ ಪ್ರಮಾಣ ಮುವ್ವತ್ತು ಗ್ರಾಂ ಮೀರುವುದಿಲ್ಲ) ವಿಶಿಷ್ಟ ದಾಖಲೆಗಳನ್ನು ಸೃಷ್ಟಿಸಿವೆ! ಗರಿಷ್ಠ ವಿಷಕರ ಧಾತುವಾಗಿ `ಪ್ಲುಟೋನಿಯಂ' ವಿಶಿಷ್ಟ ಸ್ಥಾನ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.