ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸಂರಕ್ಷಣೆಗೆಂದೇ ಬೇಟೆ ಅನುಮೋದನೆ?!

Last Updated 24 ಸೆಪ್ಟೆಂಬರ್ 2017, 4:24 IST
ಅಕ್ಷರ ಗಾತ್ರ

2015ರ ಜೂನ್ ತಿಂಗಳ ಕೊನೆಯ ದಿನಗಳು.

ಜಿಂಬಾಬ್ವೆಯ, ಪ್ರಪಂಚ ಪ್ರಸಿದ್ಧವಾದ ಹ್ವಂಗೆ ರಾಷ್ಟ್ರೀಯ ಉದ್ಯಾನದ ಒಂದೆಡೆ ಬೇಟೆಗೆಂದೆ ನಿರ್ಮಿಸಲಾಗಿದ್ದ ಮರೆಯೊಂದರಲ್ಲಿ, ಅಮೆರಿಕದ ಒಬ್ಬ ಸಿರಿವಂತ ದಂತ ವೈದ್ಯ ಡಾ. ವಾಲ್ಟರ್ ಪಾಮರ್ ತನ್ನ ಅತ್ಯಾಧುನಿಕ ಹಾಗೂ, ಶಕ್ತಿಯುತವಾದ ಬಿಲ್ಲಿಗೆ ಲೋಹದ ಬಾಣವನ್ನು ಹೂಡಿ ಹೊಂಚು ಹಾಕಿ ಕುಳಿತಿದ್ದ... ಸಿಂಹಗಳ ಬೇಟೆಗಾಗಿ. ಆ ಉದ್ಯಾನದ ‘ರಾಜ ಎಂದೇ ಹೆಸರು ಗಳಿಸಿದ್ದ ಸೆಸಿಲ್ ಎಂಬ ಸಿಂಹವು ಎಂದಿನಂತೆ ಗಾಂಭೀರ‍್ಯದಿಂದ ತನ್ನದೆ ಹಾದಿಯಲ್ಲಿ ಹೋಗುತ್ತಿರುವಾಗ, ದುರಾದೃಷ್ಟಕ್ಕೆ ಆ ಹವ್ಯಾಸಿ ಬೇಟೆಗಾರನ ದುಷ್ಟ ದೃಷ್ಟಿಯ ಆವರಣದೊಳಗೆ ಸಿಕ್ಕಿಬಿದ್ದಿತ್ತು. ತಕ್ಷಣವೆ, ಪಾಮರ್ ಗುರಿ ಇಟ್ಟು ಸೆಳೆದು ಬಿಟ್ಟ ಬಿಲ್ಲಿನಿಂದ ಚಿಮ್ಮಿದ ಬಾಣವು ಸೆಸಿಲ್‌ನ ದೇಹವನ್ನು ಸೀಳಿ ಹೊಕ್ಕಿತ್ತು. ಸೆಸಿಲ್ ನೆಲಕ್ಕುರುಳಿತ್ತು. ಆದರೆ ಸಾಯಲಿಲ್ಲ. ಮರುಕ್ಷಣವೆ ಚೇತರಿಸಿಕೊಂಡು ಗಾಯದಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ, ದೇಹದೊಳಗಿದ್ದ ಬಾಣವನ್ನು ಹೊತ್ತುಕೊಂಡೇ ಕಾಡಿನೊಳಗೆ ಕುಂಟುತ್ತ ಮರೆಯಾಯಿತು. ಇತ್ತ ಪಾಮರ್, ಸಿಂಹವನ್ನು ಕೇವಲ ಗಾಯಗೊಳಿಸಿದ್ದರಿಂದ ಮಾತ್ರವೇ ತೃಪ್ತಿಯಾಗದೆ ಅದನ್ನು ಸಾಯಿಸಲೇಬೇಕೆಂಬ ಹಟ ಹಿಡಿದು ಬೆನ್ನು ಹತ್ತಿದ. ಸಿಂಹದ ದೇಹದಿಂದ ಸೋರಿದ್ದ ರಕ್ತದ ಗುರುತುಗಳ ಜಾಡು ಹಿಡಿದು, ಮುಂದಿನ 40 ಗಂಟೆಗಳವರೆಗೆ ಹುಡುಕಾಡಿ, ಕೊನೆಗೆ ಜುಲೈ 1, 2015ರಂದು ಅದು ಕಣ್ಣಿಗೆ ಬಿದ್ದ ತಕ್ಷಣ, ತನ್ನ ಬಂದೂಕಿನಿಂದ ಗುಂಡು ಹಾರಿಸಿ ಕೊಂದು ಹಾಕಿದ. ಹೆಣವಾಗಿ ಉರುಳಿ ಬಿದ್ದಿದ್ದ ಸೆಸಿಲ್‌ನ ಪಕ್ಕ ಹೆಮ್ಮೆಯಿಂದ ನಿಂತು, ತನ್ನ ಪರಾಕ್ರಮವನ್ನು ಬಿಂಬಿಸಲೆಂದು ತೆಗೆಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡತೊಡಗಿದವು.

ಸೆಸಿಲ್‌ನ ಆ ಕಗ್ಗೊಲೆಯ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಪ್ರಪಂಚದಾದ್ಯಂತ ಮಾಧ್ಯಮಗಳಲ್ಲಿ, ಜನಸಾಮಾನ್ಯರಲ್ಲಿ, ವಿಜ್ಞಾನಿಗಳಲ್ಲಿ, ಆ ಬೇಟೆಯು ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು; ವನ್ಯ ಮೃಗಗಳ ಹಾಗೂ ಜೀವ ವೈವಿಧ್ಯದ ಸಂರಕ್ಷಣೆಯ ಬಗ್ಗೆ ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿತ್ತು. ಒಂದೆಡೆ ಹಲವು ಸಂಘಟನೆಗಳು ಮತ್ತು ಚಿಂತಕರು ಸೆಸಿಲ್‌ನ ಕೊಲೆಯನ್ನು ಅಕ್ಷಮ್ಯ ಅಪರಾಧ, ಸಿರಿವಂತಿಕೆಯ ಆಟಾಟೋಪ, ಮಾನವನಲ್ಲಿ ಇನ್ನೂ ತಾಂಡವವಾಡುತ್ತಿರುವ ಕ್ರೂರತೆಯ ಅಸಹ್ಯ ಕುರುಹು ಎಂದು ಖಂಡಿಸಿದರೆ, ಮತ್ತೊಂದೆಡೆ ಕೆಲವರು ಪಾಮರ್‌ನ ಬೆಂಬಲಕ್ಕೆ ನಿಂತರು! ಅದರಲ್ಲೂ ವಿಶೇಷವಾಗಿ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಕೆಲವು ವಿಜ್ಞಾನಿಗಳೇ ತಮ್ಮದೇ ಚಿಂತನೆಗಳನ್ನೊಡ್ಡಿ, ಆ ಅನಾಗರಿಕ ಘಟನೆಯನ್ನು ಅತ್ಯಂತ ಪ್ರಬಲವಾಗಿ ಸಮರ್ಥಿಸಿಕೊಂಡದ್ದು ಎಲ್ಲರ ಹುಬ್ಬೇರಿಸಿತ್ತು. ಹಾಗಾಗಿ ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಪ್ರತಿಪಾದಿಸುತ್ತಿರುವ ವಿಧಾನಗಳನ್ನೂ, ಸೂತ್ರಗಳನ್ನೂ, ಅವುಗಳ ವೈಜ್ಞಾನಿಕ ಅಡಿಪಾಯವನ್ನೂ ಪ್ರಶ್ನಿಸುವುದರ ಜೊತೆಗೆ ಅದರ ಮೂಲ ತಾತ್ವಿಕತೆಯನ್ನೆ ಅಲುಗಾಡಿಸುವತ್ತ ವಾದಗಳು ಬೆಳೆಯತೊಡಗಿದವು. ಈ ವಾದಗಳ ವೇದಿಕೆಯಲ್ಲಿ, ಜೀವ ಸಂರಕ್ಷಣೆಯ ಕಾರ್ಯವಿಧಾನಗಳು ಮಾನವನ ಭವಿಷ್ಯತ್ತಿನ ದೃಷ್ಟಿಯಿಂದ ರೂಪುಗೊಳ್ಳಬೇಕೆ ಅಥವಾ ಇತರೆ ಜೀವಿಗಳ ಬಗ್ಗೆ ನಮ್ಮ ಅಂತರಂಗದ ತುಡಿತ ಮತ್ತು ಅನುಕಂಪ ಅವುಗಳ ಸಂರಕ್ಷಣೆಯ ಸೂತ್ರಧಾರಿಯಾಗಬೇಕೆ ಎಂಬ ಪ್ರಶ್ನೆಗಳು ಪ್ರಮುಖವಾಗಿ ಚರ್ಚೆಗೆ ತೆರೆದುಕೊಂಡವು. ಈ ಎಲ್ಲ ಬೆಳವಣಿಗೆಗಳಿಂದಾಗಿ, ಸಂಬಂಧವೇ ಇಲ್ಲದ ಇತರೆ ಕೆಲವು ಕ್ಷೇತ್ರಗಳಲ್ಲಿಯೂ ಬದಲಾವಣೆಗಳು ಕಾಣತೊಡಗಿದವು. ಕೆಲವು ವಿಮಾನ ಯಾನದ ಕಂಪೆನಿಗಳು, ಬೇಟೆಯಾಡಿದ ಮೃಗಗಳ ‘ಟ್ರೋಫಿ’ಗಳನ್ನು ತಮ್ಮ ವಿಮಾನಗಳಲ್ಲಿ ಸಾಗಿಸಲು ಅಡೆತಡೆಗಳನ್ನು ತಂದರೆ, ಅಮೆರಿಕದ ವನ್ಯಮೃಗದ ಸಂಸ್ಥೆಯೊಂದು ಸಿಂಹಗಳ ಎರಡು ಪ್ರಭೇದಗಳನ್ನು ‘ಅಳಿವಿನಂಚಿನ, ನಿಷೇಧಿತ ಪ್ರಭೇದ’ಗಳೆಂದು ಘೋಷಿಸಲು ಮುಂದಾಯಿತು. ಅಮೆರಿಕದ ನ್ಯಾಯ ಸಂಸ್ಥೆಯು ಬೇಟೆಯಾಡಲ್ಪಟ್ಟ ಮೃಗಗಳನ್ನು ಆಮದು ಮಾಡಿಕೊಳ್ಳುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿತು. ಒಟ್ಟಿನಲ್ಲಿ ವನ್ಯಜೀವಿಗಳ ಸಂರಕ್ಷಣೆಯ ಬಗೆಗಿನ ವೈಜ್ಞಾನಿಕ ಚಿಂತನೆಗಳನ್ನೇ ಕೆದಕುವತ್ತ ಕೈತೋರಿದ ಸೆಸಿಲ್‌ನ ಸಾವು ಜೀವ ವೈವಿಧ್ಯ-ವಿಜ್ಞಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ವಿಚಿತ್ರವೆಂದರೆ ಈ ಘಟನೆ ಪ್ರಪಂಚದಾದ್ಯಂತ ಅಷ್ಟು ಗಮನ ಸೆಳೆದದ್ದು ಒಂದು ಸಿಂಹವನ್ನು ಕ್ರೂರವಾಗಿ ಕೊಲೆ ಮಾಡಲಾಯಿತು ಎಂಬ ಕಾರಣದಿಂದಲ್ಲ! ಜಿಂಬಾಬ್ವೆಯ ವನ್ಯ ಪ್ರದೇಶಗಳಲ್ಲಿ, ಅದರಲ್ಲೂ ಹ್ವಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ದಶಕಗಳಿಂದ ಅದೆಷ್ಟೋ ಸಿಂಹಗಳನ್ನು ಇಷ್ಟೇ ಕ್ರೂರವಾಗಿ ಸತತವಾಗಿ ಬೇಟೆಯಾಡಲಾಗುತ್ತಿದೆ; 2008ರಿಂದೀಚೆಗೆ, ಪ್ರತಿ ವರ್ಷವೂ ಸುಮಾರು 40 ಸಿಂಹಗಳು ಬೇಟೆಗೆ ಬಲಿಯಾಗಿವೆ! ಆದರೂ ಈ ಘಟನೆ ಅಂತಹ ಭಾವೋದ್ರೇಕದ ಪ್ರತಿಕ್ರಿಯೆ ಪಡೆದು ಪ್ರಪಂಚ ಪ್ರಸಿದ್ಧವಾಗಲು ಕಾರಣ, ಅದು ‘ಸೆಸಿಲ್ ಎಂಬ ಸುಪ್ರಸಿದ್ಧ ಸಿಂಹವು ಕೊಲೆಯಾಗಿದ್ದರಿಂದ!

ದಕ್ಷಿಣ ಆಫ಼್ರಿಕಾದ ಪ್ರಧಾನಮಂತ್ರಿಯಾಗಿದ್ದ ಸೆಸಿಲ್ ರೋಡ್ಸ್ ಅವರ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ಸಿಂಹವು, ಆ ಉದ್ಯಾನದ ಒಂದು ಪ್ರಮುಖ ಆಕರ್ಷಣೆಯಾಗಿತ್ತು. ಪ್ರವಾಸಿಗರ ವೀಕ್ಷಕ ವಾಹನಗಳ ನಡುವೆಯೆ ನಿರ್ಭಯವಾಗಿ, ಗಜ ಗಾಂಭೀರ್ಯದಿಂದ ‘ನಾನೇ ಈ ಕಾಡಿನ ರಾಜ ಎಂಬಂತೆ ರಾಜನಡಿಗೆಯಲ್ಲಿ ಓಡಾಡುತ್ತಿದ್ದ ಸೆಸಿಲ್ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರಾಣಿಯಾಗಿತ್ತು. ಅದರ ವಿಸ್ತೃತ ಛಾಯಾಚಿತ್ರಗಳನ್ನು ತೆಗೆದು, ಅತಿ ಸಮೀಪದಿಂದ ಅದನ್ನು ವೀಕ್ಷಿಸಿದ ಸವಿ ನೆನಪುಗಳನ್ನು, ಪ್ರವಾಸಿಗರು ತಮ್ಮ ಅತ್ಯಂತ ಮರೆಯಲಾಗದ ಅನುಭವವೆಂಬಂತೆ ಎದೆಗೊತ್ತಿ ತಮ್ಮೊಂದಿಗೆ ಒಯ್ಯುತ್ತಿದ್ದರು. ಪ್ರವಾಸಿಗರ ಮತ್ತು ಉದ್ಯಾನದ ಸಿಬ್ಬಂದಿಯನ್ನು ಮಾತ್ರವೇ ಅಲ್ಲದೆ ವನ್ಯ ಜೀವಿಗಳ ವಿಜ್ಞಾನಿಗಳನ್ನೂ ಸೆಸಿಲ್ ಆಕರ್ಷಿಸಿತ್ತು. ಸಾಂಸಾರಿಕ ಜೀವನದಲ್ಲಿ ವಿಜಯೀಭವವಾಗಿದ್ದ ಹಾಗೂ ಅತ್ಯಂತ ಕುತೂಹಲ ಮೂಡಿಸುವ ಸಿಂಹರಾಜನಾಗಿ. ಹದಿಮೂರು ವರ್ಷದ ಸೆಸಿಲ್, ಈಗಾಗಲೆ ಮೂರು ಭಿನ್ನ ಸಿಂಹಗಣಗಳಿಗೆ ನಾಯಕನಾಗಿ ಬಾಳಿದ, ಒಟ್ಟಿಗೆ ಸುಮಾರು 40 ಜನ ಮಕ್ಕಳು, ಮೊಮ್ಮಕ್ಕಳನ್ನು ಪಡೆದ ಫಲಭರಿತ ಸಿಂಹವೆನಿಸಿಕೊಂಡಿತ್ತು. ಜೊತೆಗೆ, ಎರಡು ವರ್ಷದ ನಂತರ, ಜುಲೈ 20, 2017ರಲ್ಲಿ ಅದರ ಒಬ್ಬ ಮಗ ಕೂಡ ಹೀಗೆಯೇ ಬೇಟೆಗಾರರ ಕೈಲಿ ಹತಗೊಂಡಾಗ, ಸೆಸಿಲ್‌ನ ಹತ್ಯೆಯ ಬಗೆಗಿನ ಚರ್ಚೆಗೆ ಮತ್ತಷ್ಟು ಶಕ್ತಿ ಬಂದಿತ್ತು. ಒಟ್ಟಿನಲ್ಲಿ ಸೆಸಿಲ್ ಒಂದು ಅಪ್ರತಿಮ ಸಿಂಹನಾಯಕನಾಗಿ ಎಲ್ಲರ ಮನ ಗೆದ್ದಿದ್ದ. ಹಾಗೆಂದೇ ಅದರ ಕೊಲೆ ಯಾವುದೇ ಹಾಲಿವುಡ್‌ನ ಪ್ರಸಿದ್ಧ ನಾಯಕನ ಕೊಲೆಯಾದಷ್ಟೇ ಗಂಭೀರ ಚರ್ಚೆಗೆ ಒಳಗಾಗಿತ್ತು.

ಇನ್ನು ಸಿರಿವಂತ ರಾಷ್ಟ್ರವಾದ ಅಮೆರಿಕದ ಧನಿಕನೊಬ್ಬ ಬಡದೇಶಕ್ಕೆ ಬಂದು ತನ್ನ ತೆವಲಿಗಾಗಿ ಸಿಂಹವನ್ನು ಕೊಂದ ದಾರ್ಷ್ಟ್ಯತನವೂ ಈ ಸುದ್ದಿ ಅಷ್ಟು ಗಮನ ಸೆಳೆಯಲು ಕಾರಣವಾಗಿರಲಿಲ್ಲ. ಬದಲಿಗೆ ಆ ದಂತವೈಧ್ಯ, ವಾಲ್ಟರ್ ಪಾಮರ್, ಸಿಂಹವನ್ನು ಕೊಂದು ತನ್ನ ಟ್ರೋಫಿಯನ್ನು ಹೊತ್ತೊಯ್ಯುಲು ಅಧಿಕೃತವಾಗಿ ಅನುಮತಿ ಪಡೆದಿದ್ದ ಎನ್ನುವುದೇ ಈ ವಿವಾದ ಜಗತ್ಪ್ರಸಿದ್ಧಿಯಾಗಲು ಮತ್ತೊಂದು ಕಾರಣವಾಗಿತ್ತು.

ಸಿಂಹಗಳನ್ನು ಬೇಟೆಯಾಡಲು ಹಾಗೂ ಅದನ್ನು ಪ್ರೋತ್ಸಾಹಿಸಲು, ಸರ್ಕಾರದಿಂದ ಅಧಿಕೃತ ಪರವಾನಗಿ ಹೊಂದಿದ್ದ ಒಬ್ಬ ಗುತ್ತಿಗೆದಾರನಿಗೆ, ಪಾಮರ್ ಆಘೋಷಿತ 50,000 ಡಾಲರ್‌ಗಳನ್ನು ತೆತ್ತು ಹುಲಿಯನ್ನು ಬೇಟೆಯಾಡಲು ಅನುಮತಿ ಪಡೆದಿದ್ದ. ಹಾಗಾಗಿ ಈ ಸೆಸಿಲ್‌ನ ಕ್ರೂರ ಸಾವು ಲಕ್ಷಾಂತರ ಜನರ ಗಮನ ಸೆಳೆಯಲು ಕಾರಣ, ಕೊಲ್ಲಲು ಪರವಾನಗಿ ಹೊತ್ತಿದ್ದ ‘ಜೇಮ್ಸ್ ಬಾಂಡ್ ಒಬ್ಬ, ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿ ಪ್ರಸಿದ್ಧಿಯಾಗಿದ್ದ ಸಿಂಹವೊಂದನ್ನು, ಕೊಲೆಗೈದುದರಿಂದ ಎನ್ನಬಹುದು!

ಆದರೆ ಸರ್ಕಾರವೇ ಸಿಂಹಗಳನ್ನು ಕೊಲ್ಲಲು ಅನುಮತಿ ನೀಡಲು ಕಾರಣ?

ಕಾರಣ ವನ್ಯಜೀವಿಗಳ ಸಂರಕ್ಷಣೆ!
ಹೌದು. ಜಿಂಬಾಬ್ವೆಯ ಹ್ವಂಗೆ ಉದ್ಯಾನದ ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ಸಂರಕ್ಷಣೆಯ ಕರ್ತವ್ಯ ಹೊತ್ತ ಅಲ್ಲಿನ ಆಡಳಿತವು ಸಂರಕ್ಷಣೆಗೆಂದೇ ಬೇಟೆಯನ್ನು ಅನುಮೋದಿಸುವ ಒಂದು ವಿಶೇಷ ಯೋಜನೆಯನ್ನು ರೂಪಿಸಿಕೊಂಡಿತ್ತು. ಸಿಂಹಗಳನ್ನು ಬೇಟೆಯಾಡಲು ನಿಯಮಿತವಾದ ಪರವಾನಗಿಗಳನ್ನು ಮಾರಿ, ಬಂದ ಹಣದಿಂದ ಉದ್ಯಾನದ ಸಂರಕ್ಷಣೆ ಮಾಡುವ ‘ಸಂರಕ್ಷಣೆಗಾಗಿ ಆರ್ಥಿಕ ಕಸರತ್ತು ಎನ್ನಬಹುದಾದ ಕಾರ್ಯ ನೀತಿಯನ್ನು ಆಯೋಜಿಸಿಕೊಂಡಿತ್ತು. 14900 ಚದರ ಕಿ. ಮೀ. ವಿಸ್ತೀರ್ಣದ ಆ ರಾಷ್ಟ್ರೀಯ ಉದ್ಯಾನದಲ್ಲಿ ನೆಲೆಸಿದ್ದ ಎಲ್ಲ 400– 500 ಸಿಂಹಗಳ ರಕ್ಷಣೆಗೆ ಬೇಕಾಗುವ ಆರ್ಥಿಕ ಸಹಾಯ ಪಡೆಯಲು, ಕೆಲವು ಸಿಂಹಗಳನ್ನು ತ್ಯಾಗ ಮಾಡುವುದರಲ್ಲಿ ಯಾವುದೇ ಅನ್ಯಾಯವಿಲ್ಲ; ಅದು ಸೂಕ್ತವಾದ ಹೆಜ್ಜೆ ಎಂಬುವುದು ಈ ಕಾರ್ಯಯೋಜನೆಯ ಮೂಲ ಮಂತ್ರ. ಅದರಂತೆ ಕೆಲವು ಘೋಷಿತ ಪ್ರದೇಶಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಸಿಂಹಗಳ ಬೇಟೆಯನ್ನು ಅಧಿಕೃತಗೊಳಿಸಿ, ಬೇಟೆಯಾಡಲು ಬೇಕಾದ ಪರವಾನಗಿಯ ಗುತ್ತಿಗೆಯನ್ನು ಪ್ರತಿ ವರ್ಷವೂ ಹರಾಜಿನಲ್ಲಿ ಮಾರಾಟ ಮಾಡಿ ‘ಸಂರಕ್ಷಣಾ-ನಿಧಿಯನ್ನು ಸಂಗ್ರಹಿಸಲಾಗುತ್ತಿತ್ತು. ಆ ಗುತ್ತಿಗೆದಾರರು ಪ್ರಪಂಚದಾದ್ಯಂತ ಬೇಟೆಯ ಚಟ ಇರುವ ಹಣವಂತರಿಗೆ ತಮ್ಮ ಪರವಾನಗಿಯ ಹಕ್ಕುಗಳನ್ನು ಮರು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು. 2008ರಿಂದ ಅಂತಹ ವ್ಯಾಪಾರ ಅವ್ಯಾಹತವಾಗಿ ನಡೆದು ಬಂದಿದ್ದು, ಪ್ರತಿ ವರ್ಷವೂ ಸುಮಾರು 40 ಸಿಂಹಗಳು ಅಂತಹ ಬೇಟೆಗೆ ಬಲಿಯಾಗುತ್ತಿದ್ದವು. ವಾಲ್ಟರ್ ಪಾಮರ್ ಕೂಡ ಹೀಗೆ ಗುತ್ತಿಗೆದಾರನಿಂದ ಪರವಾನಗಿಯನ್ನು ಖರೀದಿಸಿದ್ದ. ಆದರೆ ಆತ ಬೇಟೆಯಾಡಿದ್ದು ಪ್ರಪಂಚ ಪ್ರಸಿದ್ಧವಾದ ಸೆಸಿಲ್ ಸಿಂಹವಾದ ಕಾರಣ, ಅದರಿಂದ ಭುಗಿಲೆದ್ದ ಚರ್ಚೆಗಳು ಈ ಇಡೀ ಕಾರ್ಯಯೋಜನೆಯ ಮೂಲಮಂತ್ರವನ್ನೇ ಪ್ರಶ್ನಿಸತೊಡಗಿದವು

.

ಜೀವ ಸಂರಕ್ಷಣೆಗೆ ಇಂಧನ ಯಾವುದಾಗಬೇಕು? ಆರ್ಥಿಕತೆಯೋ? ಕರುಣೆಯೋ?
ಆ ಎಲ್ಲ ಚರ್ಚೆಗಳೂ ಗಿರಕಿ ಹೊಡೆದದ್ದು ಸಂರಕ್ಷಣೆಯ ಸೋಗಿನಲ್ಲಿ ನಾವು ವನ್ಯ ಮೃಗಗಳನ್ನು ಸಾಯಿಸಬಹುದೆ? ಎಂಬ ತಾತ್ವಿಕ ಪ್ರಶ್ನೆಯ ಸುತ್ತ. ಆ ಚರ್ಚೆಗಳ ಎಲ್ಲ ವಾದಗಳೂ ಮೂಲತಃ ವನ್ಯ ಜೀವಿಗಳ ಸಂರಕ್ಷಣೆಯ ಪ್ರಾಮುಖ್ಯವನ್ನೇ ಎತ್ತಿ ಹಿಡಿದಿದ್ದರೂ ಆ ಗುರಿ ತಲುಪಲು ಅನುಸರಿಸುವ ಮಾರ್ಗಗಳ ಅಥವಾ ಕಾರ್ಯ ವೈಖರಿಗಳ ಬಗ್ಗೆ ಎರಡು ವಿಭಿನ್ನ ದೃಷ್ಟಿ ಕೋನಗಳು ಬಿಂಬಿತವಾದವು: ಒಂದು, ಸಂರಕ್ಷಣೆಗೆ ಅವಶ್ಯವಾದ ನಿಧಿಯನ್ನು ಸಂಗ್ರಹಿಸಲು ಅನುಸರಿಸುವ ಆರ್ಥಿಕ ನೀತಿಯೇ ಕಾರ್ಯಯೋಜನೆಯನ್ನು ರೂಪಿಸಬೇಕು ಎನ್ನುವುದು. ಎರಡು, ಸಂರಕ್ಷಣೆಯ ಕಾರ್ಯ ವೈಖರಿಯನ್ನು ರೂಪಿಸುವಲ್ಲಿ ವನ್ಯ ಮೃಗಗಳ ಬಗೆಗಿನ ಮಾನವನ ಅನುಕಂಪ ಮತ್ತು ದಯಾ ಭಾವವೇ ಪ್ರಮುಖವಾಗಬೇಕು ಎನ್ನುವುದು. ನಿರೀಕ್ಷಿಸಿದಂತೆ, ಈ ಎರಡೂ ವಾದ ಗರಡಿಗಳು ಸಂರಕ್ಷಣಾ- ನಿಧಿ ಸಂಗ್ರಹಕ್ಕೆಂದು ಸಿಂಹಗಳನ್ನು ಕೊಲ್ಲುವ ಯೋಜನೆಯ ವಿರುದ್ಧ ತೀರ್ಮಾನ ತಳೆಯುವುದರ ಜೊತೆಗೆ ಸಂರಕ್ಷಣೆ ಕಾರ್ಯಾಚರಣೆಯನ್ನು ರೂಪಿಸುವಲ್ಲಿ ಧರ್ಮದ ಪಾತ್ರದ ಬಗ್ಗೆಯೂ ಹೊಸ ಯೋಚನೆಗಳನ್ನು ಹುಟ್ಟುಹಾಕಿದವು. ಇದು ಹೇಗೆ ಎನ್ನುವ ಮುನ್ನ ಈ ಎರಡೂ ವೈರುಧ್ಯ ವಾದಗಳ ಬಗ್ಗೆ ಎರಡು ಮಾತು ಇಲ್ಲಿ ಪ್ರಸ್ತುತ:

ಜೀವ ವೈವಿಧ್ಯವನ್ನೇ ಸಂರಕ್ಷಣೆಯ ಟಂಕಸಾಲೆಯಾಗಿಸಿದ ವಿಜ್ಞಾನಿಗಳು
ಜೀವ ವೈವಿಧ್ಯ ಕಾಪಾಡುವುದು ಅವಶ್ಯ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅದಕ್ಕೆ ಬೇಕಿರುವ ಆರ್ಥಿಕ ಸಹಾಯವನ್ನು ಹೇಗೆ ಒದಗಿಸಿಕೊಳ್ಳುವುದು? ಜೀವ ವೈವಿಧ್ಯದಿಂದ ಬರುವ ‘ಇಳುವರಿಯನ್ನೇ ಮಾರಿ ಸಂರಕ್ಷಣೆಗೆ ಬೇಕಾದ ಆರ್ಥಿಕ ಸಹಾಯ ಪಡೆಯಬಹುದೆ?’ ಎಂಬ ಬಗ್ಗೆ ಬಗೆ ಬಗೆ ಚಿಂತನೆಗಳು ನಡೆದಿದ್ದು ಹಲವು ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಕೂಡ. ಒಂದು ವಿಚಿತ್ರ ಯೋಜನೆ ಪ್ರಾರಂಭವಾದದ್ದು ದಕ್ಷಿಣ ಅಮೆರಿಕದ ಕೋಸ್ಟರಿಕಾದಲ್ಲಿನ ಕಾಡುಗಳಲ್ಲಿ. ಡೇನಿಯಲ್ ಜಾನ್ಜೆನ್ ಎಂಬ ಪರಿಸರ ಮತ್ತು ಜೀವ ತಜ್ಞ, ಕೋಸ್ಟರಿಕಾದ ಹರಿದ್ವರಣ ಕಾಡಿನ ಕೆಲವು ಭಾಗಗಳನ್ನು ಸಾಹುಕಾರರಿಗೆ ನಾಮಕಾವಸ್ಥೆಗೆ ಮಾರಿ ‘ಅವರ ಹೆಸರಿಗೆ ಮುಡಿಪಾಗಿಸುವ ವ್ಯವಹಾರಕ್ಕೆ ಶಂಕುಸ್ಥಾಪನೆ ಮಾಡಿದ್ದ. ಅಂತಹ ವನಪ್ರದೇಶಗಳಲ್ಲಿ ಇನ್ನೂ ನಮ್ಮ ಅರಿವಿಗೇ ಬಾರದ ಅಸಂಖ್ಯಾತ ಪ್ರಭೇದಗಳಿರುವ ಸಾಧ್ಯತೆಯಿದ್ದು, ಯಾರೇ ಯಾವುದೇ ಹೊಸ ಜಂತುವನ್ನು ಕಂಡುಹಿಡಿದರೂ ಅದನ್ನು ಆ ಸಾಹುಕಾರರ ಹೆಸರಲ್ಲಿ ಅಥವಾ ಅವರ ಇಷ್ಟಾರ್ಥದಂತೆ ಇತರರ ಹೆಸರಲ್ಲಿ ನಾಮಕರಣ ಮಾಡಲಾಗುವುದು ಎಂದೂ, ಆ ಎಲ್ಲ ಹಕ್ಕುಗಳನ್ನು ಸಿರಿವಂತರು ಕೊಳ್ಳಬಹುದು ಎಂದೂ, ಹಾಗೆ ಸಂಗ್ರಹಗೊಂಡ ಹಣದಿಂದ ಕೋಸ್ಟರಿಕಾದ ಕಾಡುಗಳಲ್ಲಿನ ಜೀವ ವೈವಿಧ್ಯದ ಸಂರಕ್ಷಣೆಯನ್ನು ಕೈಗೊಳ್ಳಬಹುದೆಂದೂ ಸೂಚಿಸಿ ಒಂದು ಯೋಜನೆಯನ್ನು ಮುಂದಿಟ್ಟ. ಈ ಯೋಜನೆಯನ್ನು ಜೀವ ವೈವಿಧ್ಯ ಸಂರಕ್ಷಣೆಯ ನಿಧಿ ಸಂಗ್ರಹಕ್ಕೆ ಒಂದು ಉತ್ತಮ ಆರ್ಥಿಕ ಸೂತ್ರ ಎಂದೇ ಮೆಚ್ಚಿಕೊಳ್ಳಲಾಯಿತು.

ಜ಼ಿಂಬಾಬ್ವೆಯಲ್ಲಿ ನಡೆಯುವ ಸಿಂಹ ಬೇಟೆಯು ಇದೇ ಸೂತ್ರವನ್ನಾಧರಿಸಿದ ಮತ್ತೊಂದು ನಿಧಿ ಸಂಗ್ರಹದ ಮಾದರಿ ಎನ್ನಬಹುದು. ತಮ್ಮ ಮನೋರಂಜನೆಗಾಗಿ ಕಾಡುಗಳಲ್ಲಿ ಮೃಗಗಳನ್ನು ಬೇಟೆಯಾಡುವ ಚಟ ಹೊತ್ತ ಎಷ್ಟೋ ಹಣವಂತರು ಅವಕಾಶಗಳಿಗಾಗಿ ಕಾದು ಕುಳಿತಿದ್ದಾರೆ. ಅವರಿಗೆ ನಿಯಮಿತ ಸಂಖ್ಯೆಯ ಸಿಂಹಗಳನ್ನು ಬೇಟೆಯಾಡುವ ಪರವಾನಗಿಗಳನ್ನು ಅಪಾರ ಹಣಕ್ಕೆ ಮಾರಿ, ಅದರಿಂದ ಬಂದ ಹಣದಿಂದ ಉಳಿದ ಇಡೀ ಸಿಂಹಗಣವನ್ನೇ ಸಂರಕ್ಷಿಸಬಹುದು ಎನ್ನುವುದು ಈ ವಾದ. ಅದರಂತೆ ‘ಇಡೀ ಗುಂಪಿನ ರಕ್ಷಣೆಗೆ ಕೆಲವೇ ಸಿಂಹಗಳ ತ್ಯಾಗ ಅವಶ್ಯಕ ಮತ್ತು ಸೂಕ್ತ ಎನ್ನುವುದು ಈ ಯೋಜನೆಯ ಮೂಲ ಮಂತ್ರ. ಕೆಲವು ಸಿಂಹಗಳನ್ನು ಕೊಲ್ಲುವುದರಿಂದ ನಷ್ಟವಾಗುವುದು ನಿಜ. ಆದರೆ ಅದರಿಂದ ಗಳಿಸಿದ ಹಣದಿಂದ ಉಳಿದ ಇಡೀ ಸಿಂಹ ಸಂಕುಲವನ್ನು ರಕ್ಷಿಸಲು ಸಾಧ್ಯವಿರುವುದರಿಂದ ಆ ‘ಸಂರಕ್ಷಣಾ ಲಾಭಕ್ಕೆ ಹೋಲಿಸಿದರೆ ‘ಕೆಲವೇ ಸಿಂಹಗಳ ತ್ಯಾಗದ ನಷ್ಟ ಅತಿ ನಗಣ್ಯ ಎನ್ನುವುದು ಈ ವಾದದ ತಿರುಳು. ಜೀವ ಸಂರಕ್ಷಣೆಯನ್ನು ಒಂದು ಆರ್ಥಿಕ ಯೋಜನೆಯಂತೆ ಅವಲೋಕಿಸುವ ಇಂತಹ ವ್ಯಾಪಾರೀ- ಚಿಂತನೆಗಳು ವಿಜ್ಞಾನದಲ್ಲಿ ಬಹಳ ಹಿಂದಿನಿಂದಲೇ ಬೇರೂರಿವೆ. ಲಿಯೋಪಾಲ್ಡ್ ಎಂಬ ಪ್ರಸಿದ್ಧ ವನ್ಯ ಜೀವಿತಜ್ಞ 1933ರಲ್ಲಿಯೇ ಇಂತಹ ಚಿಂತನೆಗೆ ನಾಂದಿ ಹಾಡಿದ್ದ. ಪ್ರಾಣಿಗಳ ಸಂಖ್ಯೆಯನ್ನು ಕಾಡಿನಲ್ಲಿ ವೃದ್ಧಿಸಿ, ಬಂದ ‘ವನ್ಯಮೃಗ ನಿರ್ವಹಣೆಯನ್ನು (wildlife management) ಕೈಗೆತ್ತಿಕೊಳ್ಳಲು ನಾವು ಪ್ರಾಣಿ- ಬೆಳೆಯನ್ನು ಮಾನವನ ಮನೋರಂಜನೆಗೆ ಮತ್ತು ಉಪಯೋಗಕ್ಕೆ ಬಳಸಬೇಕು ಎಂದು ಪ್ರತಿಪಾದಿಸಿದ್ದ. ಆ ಬೋಧನೆಯ ಅಪರಾವತಾರವೇ ಜಿಂಬಾಬ್ವೆಯ ಈ ಸಿಂಹಬೇಟೆಯ ಯೋಜನೆ ಎನ್ನಬಹುದು. ಸಿಂಹಗಳನ್ನು ತಂಬಾಕು, ಗಾಂಜಾ ಮುಂತಾದ ಆರ್ಥಿಕ ಬೆಳೆಗಳಂತೆ ನೋಡುವ ಈ ಕ್ರಮದಲ್ಲಿ ಸಿಂಹಗಳತ್ತ ತೋರಬೇಕಾದ ಕರುಣಾ ಭಾವಕ್ಕೆ ಜಾಗವಿರಲಿಲ್ಲ!

ದಯೆಯೇ ಸಂರಕ್ಷಣೆಯ ಮೂಲಮಂತ್ರವಾಗಬಲ್ಲದೆ?
ಆದರೆ ಸೆಸಿಲ್‌ನ ಬೇಟೆಯ ಘಟನೆ, ಆರ್ಥಿಕತೆಯ ಆಧಾರದ ಮೇಲೆ ನಾವು ಕೈಗೊಳ್ಳುತ್ತಿರುವ ಸಂರಕ್ಷಣಾ ಯೋಜನೆಗಳ ಅಂತರಂಗವನ್ನೇ ಪ್ರಶ್ನಿಸತೊಡಗಿದೆ. ಯಾವುದೇ ಸಿಂಹವನ್ನು ಸಂರಕ್ಷಣಾ ಉದ್ದೇಶದಿಂದ ಕೊಲ್ಲುವ ಹಕ್ಕು ನಮಗಿದೆಯೆ? ಒಂದು ಸಿಂಹವನ್ನು ಕೊಂದು ಮತ್ತೊಂದು ಸಿಂಹವನ್ನು ಉಳಿಸುವುದು ಯಾವ ನ್ಯಾಯ? ಇಂತಹ ಯೋಜನೆಗಳನ್ನು ತಯಾರಿಸುವ ತಜ್ಞರ ಅಂತರಂಗವನ್ನು ಹಿಂಸೆಯ ಪಾಪಪ್ರಜ್ಞೆ ಕಾಡುವುದಿಲ್ಲವೆ? ಎಂಬಂಥ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಸಂರಕ್ಷಣಾ ತಜ್ಞರು ಈ ವಿರೋಧವನ್ನು ಖಂಡಿಸಿ, ಸೆಸಿಲ್‌ನ ಬೇಟೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು– ಮಾನವ ಸಮಾಜಗಳಲ್ಲಿಯೂ ಎಲ್ಲರ ರಕ್ಷಣೆಗೆ ಕೆಲವರನ್ನು ತ್ಯಾಗ ಮಾಡುವ ಪದ್ಧತಿ ರೂಢಿಯಲ್ಲಿದೆ. ಉದಾಹರಣೆಗೆ ಸೈನಿಕರು ಇಡೀ ದೇಶದ ಜನರ ಅಥವಾ ಅವರ ಸಮಾಜದ ರಕ್ಷಣೆಗೆ ತಮ್ಮ ಜೀವವನ್ನೇ ತ್ಯಾಗ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಅಂತೆಯೇ ಕೆಲವು ಸಿಂಹಗಳನ್ನು ಇಡೀ ಸಿಂಹ ಸಂಕುಲಕ್ಕಾಗಿ ತ್ಯಾಗ ಮಾಡಿದರೆ ಅದರಲ್ಲಿ ತಪ್ಪಿಲ್ಲ ಎಂದು ವಾದಿಸಿದರು.

ಇದರ ವಿರೋಧಿಗಳು ಈ ವಾದದಲ್ಲಿನ ಹುಸಿತನವನ್ನು ಎತ್ತಿ ತೋರಿಸಿದರು– ಒಂದು ಪರಿಷ್ಕೃತ ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯಕ್ತಿಗೆ ಸೈನಿಕನಾಗುವ ಬಗ್ಗೆ ತೀರ್ಮಾನಿಸಲು ಸ್ವಾತಂತ್ರ್ಯವಿದೆ; ಆದರೆ ಜಿಂಬಾಬ್ವೆಯ ಉದ್ಯಾನದಲ್ಲಿ ಯಾವ ಸಿಂಹವೂ ತಮ್ಮ ಕುಲದ ಒಳಿತಿಗಾಗಿ ತಾವು ಸಾಯಲು ಸಿದ್ಧ ಎಂಬ ತ್ಯಾಗಪತ್ರಕ್ಕೆ ಸಹಿ ಹಾಕಿಲ್ಲ; ಸಿಂಹಗಳನ್ನು ಬೇಟೆಯಾಡಲು ಪರವಾನಗಿ ನೀಡುವುದರ ಮೂಲಕ ಅವು ಬೇಟೆಗಾರನ ಗುರಿಯ ಹೊರಗೆ ಉಳಿಯುವ ಸ್ವಾತಂತ್ರ್ಯವನ್ನೇ  ಕಸಿದುಕೊಂಡಿದ್ದೇವೆ. ಹಾಗಾಗಿ ಈ ಇಡೀ ಕಾರ್ಯವಿಧಾನವೇ ಒಂದು ಪಾಪಕೃತ್ಯ. ಅದನ್ನು ಸೈನಿಕರ ತ್ಯಾಗಕ್ಕೆ ಹೋಲಿಸುವುದರಲ್ಲಿ ಅರ್ಥವೇ ಇಲ್ಲ ಎಂದು ವಾದಿಸಿದರು. ಇಷ್ಟೇ ಅಲ್ಲದೆ ಕೆಲವು ಸಿಂಹಗಳನ್ನು ಕೊಲ್ಲುವುದರಿಂದ ಇಡೀ ಸಿಂಹ ಗಣಕ್ಕೆ ಯಾವುದೇ ಹಾನಿಯಾಗದು ಎಂಬ ನಂಬಿಕೆ ತಾನೆ ಎಷ್ಟು ಸತ್ಯ? ಪರೀಕ್ಷೆಗೆ ಒಡ್ಡದೆಯೇ ಇದನ್ನು ಸತ್ಯವೆಂದು ಒಪ್ಪಿಕೊಂಡಿರುವುದು ಎಷ್ಟು ಸರಿ? ಹೀಗೆ ಆಧಾರರಹಿತವಾದ, ಹುಸಿಯಿರಬಹುದಾದ ನಂಬಿಕೆಯನ್ನಾಧರಿಸಿ ಧನ ಸಂಗ್ರಹ ಮಾಡುವುದು ಅವೈಜ್ಞಾನಿಕವಲ್ಲವೆ? ಇಡೀ ಸಿಂಹ ಸಂಕುಲವನ್ನು ಕಾಪಾಡಲು ಕೆಲವು ಸಿಂಹಗಳನ್ನು ಬಲಿ ಕೊಡುವುದು ಅನಿವಾರ್ಯ, ಅವಶ್ಯಕ ಹಾಗೂ ಸ್ವಾಗತಾರ್ಹ ಎನ್ನುವ ತೀರ್ಮಾನ, ಸಂರಕ್ಷಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾರದ ಮಾನವನ ಪಲಾಯನವಾದವಲ್ಲವೆ? ಸಂರಕ್ಷಣೆಯ ಸೋಗಿನಲ್ಲಿ ಕೆಲವು ಅಮಾಯಕ ಸಿಂಹಗಳ ಬೇಟೆಯನ್ನು ಅನುಮೋದಿಸುತ್ತಿರುವ ಈ ಕ್ರಮವು ಮಾನವ ತನ್ನ ಸ್ವಾರ್ಥಕ್ಕಾಗಿ ಕೈಗೊಳ್ಳುತ್ತಿರುವ ಒಂದು ಪ್ರಾಯೋಜಿತ ಮಾರಣಹೋಮವೇ ವಿನಃ ಅದು ಸಂರಕ್ಷಣೆಯ ಸತ್ಯಸ್ಯ ಸಂಗತಿಯೇ ಅಲ್ಲ ಎಂದು ಖಂಡಿಸಿದರು. ಅಲ್ಲದೆ ಯಾವುದೇ ಸಂರಕ್ಷಣಾ ಕ್ರಿಯೆಗೆ ದಯೆಯೇ ಆಧಾರವಾಗಬೇಕೆ ಹೊರತು ಆರ್ಥಿಕತೆಯನ್ನು ಅಳತೆಗೋಲಾಗಿಸುವುದು ಸರಿಯಲ್ಲ ಎಂದೂ ವಾದಿಸಿದರು.

ಆದರೂ ಬೇಟೆಯನ್ನು ಸಮರ್ಥಿಸಿಕೊಳ್ಳಲು ಮುಂದಾದವರು ಇಂತಹ ವಿರೋಧಗಳನ್ನು ತರ್ಕರಹಿತ ವಾದಗಳೆಂದೂ, ಭಾವನೆಗಳಿಗೆ ಬಲಿಯಾದವರ ದುರ್ಬಲ ತೀರ್ಮಾನಗಳೆಂದೂ ದೂಷಿಸಿದರು. ಇಡೀ ಸಿಂಹ ಸಂಕುಲದ ಒಳಿತಿಗೆ, ಕೆಲವು ಸಿಂಹಗಳ ಬೇಟೆ ಕ್ರೂರವಾಗಿ ಕಂಡು ನಮ್ಮಲ್ಲಿ ಮರುಕ ಹುಟ್ಟುವುದು ಸಹಜವೇ. ಆದರೆ ಆ ಮರುಕ ಭಾವದಿಂದ ಸಂರಕ್ಷಣಾ ಕಾರ್ಯದ ಉಪಯುಕ್ತತೆಗಳ ಬಗ್ಗೆ ನಾವು ಕುರುಡರಾಗುವುದು ಸರಿಯಲ್ಲ ಎಂದೂ ವಾದಿಸಿದರು.

ಜೀವ ಸಂರಕ್ಷಣೆ ಒಂದು ಸ್ವಾರ್ಥ ಪರಿಕಲ್ಪನೆ
ಜೀವ ಸಂರಕ್ಷಣೆಯ ಪರಿಕಲ್ಪನೆ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಅಳವಡಿಸಿಕೊಂಡಿರುವ ನೀತಿ ನಿಯಮಗಳು ರೂಪ ತಾಳಿರುವುದೇ ಬಹುಪಾಲು ಎರಡು ಕಾಲ ಘಟ್ಟಗಳ ಬೆಳವಣಿಗೆಗಳಿಂದ– ಸುಮಾರು 17ನೇ ಶತಮಾನದಲ್ಲಿಯೇ ಪಶ್ಚಿಮದ ದೇಶಗಳು ಅಭಿವೃದ್ಧಿ ಕಾರ್ಯಗಳಿಗಾಗಿ ಕಾಡಿನ ಸಂಪತ್ತನ್ನು ಅನಿಯಮಿತವಾಗಿ ಬಳಸಿದ ಪರಿಣಾಮವಾಗಿ ಇಡೀ ವನ ಸಂಪತ್ತೇ ವಿನಾಶದ ಅಂಚಿಗೆ ಬಂದಿರುವುದನ್ನು ಮನಗಾಣುತ್ತೇವೆ. ಕ್ರಿ.ಶ. 1662ರಲ್ಲಿ ಬ್ರಿಟನ್ನಿನ ಜಾನ್ ಎವ್ಲಿನ್ ಬರೆದ ‘ಸಿಲ್ವ ಎಂಬ ಪುಸ್ತಕದಲ್ಲಿ ಮೊದಲ ಬಾರಿಗೆ ದೇಶದ ವನಸಂಪತ್ತು ಕ್ಷೀಣಗೊಳ್ಳುತ್ತಿರುವತ್ತ ಗಮನ ಸೆಳೆದು, ಹಾಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಎಂತಹ ಕುಂದು ಬರಬಹುದು ಎಂದು ಎಚ್ಚರಿಸಿ ದೇಶದ ಉತ್ತಮ ಭವಿಷ್ಯಕ್ಕಾಗಿ ಸಂರಕ್ಷಣೆಯನ್ನು ಕೈಗೊಳ್ಳಬೇಕು ಎಂದು ಕರೆ ಕೊಡುತ್ತಾನೆ. ಜೊತೆಗೆ, 19ನೆ ಶತಮಾನದಲ್ಲಿ ಜೀವ ವೈವಿಧ್ಯದ ಬಗ್ಗೆ ಅಧ್ಯಯನಗಳು ಚುರುಕುಗೊಂಡು, ಆ ಶತಮಾನದ ಕೊನೆಯ ದಶಕಗಳಲ್ಲಿ ಎಡ್ವರ್ಡ್ ಓ ವಿಲ್ಸನ್ ಮುಂತಾದವರು, ಪ್ರತಿ ವರ್ಷವೂ ಸಾವಿರಾರು ಪ್ರಭೇದಗಳು ನಾಶವಾಗುತ್ತಿದ್ದು, ಆ ಗತಿಯಲ್ಲಿ ನಾವು ಇಡೀ ಜೀವ ವೈವಿಧ್ಯವನ್ನೇ ಕಳೆದುಕೊಳ್ಳುವ ದುಸ್ಥಿತಿ ಬರಬಹುದೆಂದು ಎಚ್ಚರಿಸಿದಾಗಲಂತೂ ಜೀವವೈವಿಧ್ಯದ ಸಂರಕ್ಷಣೆಯ ಪರಿಕಲ್ಪನೆ ಮರುಜೀವ ತಳೆಯತೊಡಗಿತು. ಹಾಗೆ ಮೈತಾಳಿದ ಎಲ್ಲ ಸಂರಕ್ಷಣಾ ಕ್ರಮಗಳೂ ಮಾನವನ ಭವಿಷ್ಯಕ್ಕಾಗಿ ಜೀವ ವೈವಿಧ್ಯವನ್ನು ಉಳಿಸಿಕೊಳ್ಳಬೇಕು ಎಂಬ ಸ್ವಾರ್ಥದ ದೃಷ್ಟಿಯಿಂದಲೇ ಪ್ರಮುಖವಾಗಿ ರೂಪುಗೊಂಡವು.

ಹಾಗೆಂದೇ ನಾವು ಪ್ರಕೃತಿಯ ಯಾವ ಅಂಶಗಳನ್ನು, ಅಥವ ಜೀವ ರಾಶಿಗಳಲ್ಲಿ ಯಾವ ಪ್ರಭೇದಗಳನ್ನು ಪ್ರಮುಖವಾಗಿ ಉಳಿಸಬೇಕು ಎಂಬ ಆದ್ಯತೆಯ ಪಟ್ಟಿಗಳನ್ನು ತಯಾರಿಸತೊಡಗಿದೆವು. ಇದಕ್ಕಾಗಿ ಹಲವು ಮಿಲಿಯನ್ ಡಾಲರ್‌ಗಳನ್ನು ಈಗಲೂ ವ್ಯಯಮಾಡಲಾಗುತ್ತಿದೆ. ಔಷಧೀಯ ಗುಣಗಳುಳ್ಳ, ಅಥವ ನಮಗೆ ಅತ್ಯಂತ ಉಪಯುಕ್ತವಾಗಿರುವ, ವಿನಾಶದ ಅಂಚಿಗೆ ಹೋಗಿರುವ ಪ್ರಭೇದಗಳು ಅತ್ಯಂತ ಸಂರಕ್ಷಣಾಯೋಗ್ಯ ಎಂಬ ಸಮರ್ಥನೆ ನೀಡಲಾಯಿತು. ಒಂದು ವೇಳೆ ಉಪಯೋಗ ತಿಳಿಯದಿದ್ದರೂ ವಿನಾಶದ ಅಂಚಿಗೆ ಬಂದಿರುವ ಪ್ರಭೇದಗಳನ್ನು ರಕ್ಷಿಸಲು ನೀಡಿದ ಸಮರ್ಥನೆಯೂ ಅದೇ ದಾಟಿಯಲ್ಲಿತ್ತು– ಅವುಗಳಲ್ಲಿರುವ ಧಾತುಗಳು, ರಸಾಯನಿಕಗಳು, ಅವು ತೋರಬಹುದಾದ ರೋಗ- ಅಥವ ಕೀಟ-ನಿರೋಧಕ ಗುಣಗಳು ನಮಗೆ ಮುಂದೆಂದೋ ಉಪಯೋಗಕ್ಕೆ ಬರಬಹುದು; ಅವು ನಾಶವಾದಲ್ಲಿ ಆ ಉಪಯೋಗಗಳಿಂದ ಮುಂದಿನ ಜನಾಂಗ ವಂಚಿತವಾಗುತ್ತದೆ ಎಂಬ ಕಾರಣಕ್ಕಾಗಿ ನಾವು ಅವನ್ನು ಸಂರಕ್ಷಿಸಬೇಕು ಎಂದು ವಾದಿಸಲಾಯಿತು. ‘ಹಿಂದಿನವರಿಂದ ಎರವಲು ಪಡೆದಿರುವ ಜೀವ ವೈವಿಧ್ಯವನ್ನು ಮುಂದಿನ ಜನಾಂಗಕ್ಕೆ ಉಳಿಸಿ ಹೋಗುವುದು ನಮ್ಮ ಜವಾಬ್ದಾರಿ ಎನ್ನುವ ಸುಪ್ರಸಿದ್ಧ ನಾಣ್ಣುಡಿಯಲ್ಲಿಯೂ ಮಾನವನ ಭವಿಷ್ಯತ್ತಿನ ಸ್ವಾರ್ಥವನ್ನೇ ಲೆಕ್ಕ ಹಾಕುತ್ತಿದ್ದೇವೆಯೇ ಹೊರತು ಎಂದೂ ಮುಕ್ತವಾಗಿ ಆ ಜೀವಿಗಳ ದೃಷ್ಟಿಯಿಂದ ನೋಡುತ್ತಿಲ್ಲ. ಹೀಗೆ ಇಡೀ ಜೀವರಾಶಿಯನ್ನು ಅವುಗಳ ಸಂರಕ್ಷಣಾ ಯೋಗ್ಯತೆಯ ಮೇರೆಗೆ ಮೇಲು ಕೀಳಿನ ಜಾತಿಗಳಾಗಿ ವಿಭಜಿಸುವ ಕಾರ್ಯದಲ್ಲಿ ನಾವು ತೊಡಗಿಕೊಂಡದ್ದೇ ನಮ್ಮ ಸ್ವಾರ್ಥದಿಂದ. ಬಹುಶಃ ಆರ್ಥಿಕತೆ ಮತ್ತು ವ್ಯಾಪಾರಿ ಮನೋಭಾವಗಳೇ ಬೇರೂರಿರುವ ಪಾಶ್ಚಾತ್ಯ ಚಿಂತನೆಗಳಿಂದ ವಿಜ್ಞಾನದ ಪರಿಕಲ್ಪನೆಗಳೂ ಪ್ರಭಾವಿತವಾಗಿರುವುದರಿಂದಲೇ ಸಂರಕ್ಷಣೆಯೂ ಅಂತಹ ಸುಳಿಗೆ ಸಿಕ್ಕಿಹಾಕಿಕೊಂಡಿರಬಹುದು.

ಸಂರಕ್ಷಣೆಯ ಜವಾಬ್ದಾರಿಯಲ್ಲಿ ಧರ್ಮದ ಪಾತ್ರ
ಪ್ರಪಂಚದ ಎಲ್ಲ ಜೀವಿಗಳನ್ನೂ ನಮ್ಮಂತೆಯೇ ಪರಿಗಣಿಸಿ, ಅವಕ್ಕೂ ನಮ್ಮಷ್ಟೆ ಬದುಕುವ ಹಕ್ಕಿದೆ, ಅವನ್ನೂ ಬದುಕಲು ಬಿಡಬೇಕು ಹಾಗೂ ಅವನ್ನು ಸಂರಕ್ಷಿಸಲು ನಮ್ಮ ಅಂತರಂಗದಿಂದ ಪುಟಿವ ದಯಾ ಭಾವವೇ ಪ್ರಮುಖ ಇಂಧನವಾಗಬೇಕು ಎಂಬ ದೃಷ್ಟಿಯಲ್ಲಿ ನಾವು ಕಾರ್ಯ ಯೋಜನೆಗಳನ್ನು ರೂಪಿಸಿತೊಡಗಿದಾಗ ಮಾತ್ರ ಮಾನವನ ಸ್ವಾರ್ಥದ ಸುಳಿಯಲ್ಲಿ ಸಿಲುಕಿಕೊಂಡಿರುವ ಸಂರಕ್ಷಣೆಯ ಯೋಜನೆಗಳನ್ನು ಹೊರತರಲು ಸಾಧ್ಯ. ಹಾಗಾದಲ್ಲಿ ಎಲ್ಲ ಜೀವಗಳೂ- ಸೂಕ್ಷ್ಮ ಜೀವಿಗಳಿಂದ ಹಿಡಿದು, ಇರುವೆ, ಪಕ್ಷಿ, ನವಿಲು, ಆನೆ, ವೇಲ್‌ಗಳವರೆಗೆ ಎಲ್ಲವೂ ಸಮಾನ ಪ್ರಾಮುಖ್ಯ ಪಡೆಯುತ್ತವೆ. ಆಗ ನಾವು ಸಂರಕ್ಷಣಾಯೋಗ್ಯವಾದ ಜೀವರಾಶಿಗಳ ಆದ್ಯತೆಯ ಪಟ್ಟಿ ತಯಾರಿಸುವ ಅವಶ್ಯಕತೆಯೇ ಬಾರದು. ಇದು ಸಾಧ್ಯವಾಗಬೇಕಿದ್ದರೆ ಬಹುಶಃ ಬೌದ್ಧ, ಜೈನ ಮುಂತಾದ ಧರ್ಮಗಳ ಬೋಧನೆಗಳನ್ನು ಸಂರಕ್ಷಣೆಯ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬೇಕು. ಸೂಕ್ಷ್ಮವಾಗಿ ಗಮನಿಸಿದರೆ, ವಿಜ್ಞಾನವು ಜೀವ ಸಂರಕ್ಷಣೆಯತ್ತ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ಮಾನವನ ಸಂಸ್ಕೃತಿಯಲ್ಲಿ, ಹಲವು ಧರ್ಮಗಳಲ್ಲಿ ಅದರ ಮಜಲುಗಳಿದ್ದವು ಎನ್ನಬಹುದು. ನಮ್ಮಿಂದ ಇತರೆ ಜೀವಗಳಿಗೆ ತೊಂದರೆಯಾಗಬಾರದು ಎಂಬ ತತ್ವ ಪಾಲನೆಗಾಗಿ, ಮೂಗಿಗೆ ಬಟ್ಟೆಯನ್ನೂ ಕಾಲಿಗೆ ಹತ್ತಿಯನ್ನೂ ಕಟ್ಟಿಕೊಂಡು ಓಡಾಡುವ ಜೈನ ಮುನಿಗಳೇ ಆಗಲಿ, ದೇವದತ್ತನ ಬಾಣಕ್ಕೆ ಬಲಿಯಾದ ಪಕ್ಷಿಯನ್ನು ಕಾಪಾಡಲು ಬಂದ ಬಾಲಬುದ್ಧನ ಕತೆಯೇ ಆಗಲಿ, ಪ್ರತಿ ತೀರ್ಥಂಕರರಿಗೆ ಒಂದು ಪ್ರಾಣಿ ಹಾಗೂ ಒಂದು ಸಸ್ಯವನ್ನು ಗುರುತಿಸಿ ಅವನ್ನು ಪೂಜಿಸುವ ಜೈನ ಧರ್ಮದ ಪರಿಯಾಗಲಿ ಎಲ್ಲವೂ ಇದನ್ನೇ ಸೂಚಿಸುತ್ತವೆ.

ಈ ಹಿನ್ನೆಲೆಯಲ್ಲಿ ಜೀವ ಸಂರಕ್ಷಣೆಯ ಪರಿಕಲ್ಪನೆಗೆ ನಿಜವಾದ ವಾರಸುದಾರರು ಯಾರು? ವಿಜ್ಞಾನವೋ? ಧರ್ಮವೋ? ಎಂಬ ಪ್ರಶ್ನೆಯೂ ನಮ್ಮನ್ನು ಕಾಡತೊಡಗುತ್ತದೆ. ಆಧುನಿಕ ವಿಜ್ಞಾನದ ಮಾಹಿತಿಯನ್ನಾಧರಿಸಿ, ವನ್ಯಸಂಪತ್ತು ಮತ್ತು ಪ್ರಭೇದಗಳ ನಾಶದ ಆಧಾರದ ಮೇಲೆ ಜನ್ಮತಾಳಿದ ಸಂರಕ್ಷಣೆಯ ಪರಿಕಲ್ಪನೆ ಇತ್ತೀಚಿನದ್ದಾದರೆ, ದಯೆ ಮತ್ತು ಭಾವನಾತ್ಮಕತೆಯನ್ನಾಧರಿಸಿ ಧರ್ಮಗಳ ಮೂಲಕ ನೆಲೆಯಾದ ಸಂರಕ್ಷಣೆಯ ಪರಿಕಲ್ಪನೆ ಶತಮಾನಗಳಷ್ಟು ಹಳೆಯದು. ಆದರೆ ಸಂರಕ್ಷಣೆಯ ಪರಿಕಲ್ಪನೆ ಸೃಷ್ಟಿಯಾಗಿರುವುದೇ ತನ್ನಿಂದ ಎಂಬ ಶಿರೋಭ್ರಮಣೆಯ ಅಹಂನಿಂದಾಗಿ ವಿಜ್ಞಾನವು ಧರ್ಮದ ಕೊಡುಗೆಯನ್ನು ಗುರುತಿಸಿಲ್ಲ ಎನ್ನಬಹುದು.

ದುರದೃಷ್ಟವೆಂದರೆ ಭಾವನೆಗಳು, ನಂಬಿಕೆಗಳು ಹಾಗೂ ಭಾವೋದ್ರೇಕಕ್ಕೆ ಬಲಿಯಾಗಿ ತೀರ್ಮಾನಗಳನ್ನು ತಳೆಯುವ ಕ್ರಿಯೆಗೆ ವಿಜ್ಞಾನದಲ್ಲಿ ಜಾಗವಿಲ್ಲ. ಹಾಗೆ ಭಾವನೆಗಳಿಂದ ಪ್ರೇರಿತರಾದ ವಿಜ್ಞಾನಿಗಳಿಗೆ objective ಅಂದರೆ ಪರಿಣಾಮಾತೀತ ಕ್ರಮಗಳನ್ನು ಅನುಸರಿಸಲು ಸಾಧ್ಯವಾಗದು. ಅಂತಹವರು ಸತ್ಯವನ್ನು ಶೋಧಿಸಲಾರರು ಎನ್ನುವುದು ವಿಜ್ಞಾನದ ದೃಢ ನಂಬಿಕೆ. ಹಾಗೆಂದೇ ನಂಬಿಕೆಯ ಆಧಾರದ ಮೇಲೆ ನಿಂತಿರುವ ಧರ್ಮದಿಂದ ವಿಜ್ಞಾನ ದೂರ ದೂರಕ್ಕೆ ಸರಿಯುತ್ತಿದೆ ಕೂಡ. ಕೇವಲ ನಂಬಿಕೆಯನ್ನೇ ಆಧರಿಸಿ ಸತ್ಯದತ್ತ ನಾವು ನಡೆಯಲಾರೆವು ಎಂಬ ವಿಜ್ಞಾನದ ನಂಬಿಕೆ ಸತ್ಯವೇ ಇರಬಹುದು. ಆದರೆ ಕೆಲವು ಸಿಂಹಗಳನ್ನು ಕೊಲ್ಲುವುದರಿಂದ ಇಡೀ ಸಿಂಹಗಣಕ್ಕೆ ಏನೂ ಆಗದು, ಬದಲಿಗೆ ಉಳಿದವುಗಳ ಸಂರಕ್ಷಣೆಗೆ ಅವುಗಳ ತ್ಯಾಗ ಅನಿವಾರ್ಯ ಎಂಬ ಅಪರೀಕ್ಷಿತ ನಂಬಿಕೆಯನ್ನು ವಿಜ್ಞಾನ ನಂಬಿದೆಯಲ್ಲವೆ? ಹಾಗೆಯೆ ವಿಜ್ಞಾನದ ಎಲ್ಲ ಸ್ತರಗಳಲ್ಲೂ, ಎಲ್ಲ ವಿಷಯಗಳಲ್ಲೂ ಭಾವನಾತೀತ ಮತ್ತು ಪರಿಣಾಮಾತೀತ ಕ್ರಮಗಳನ್ನೇ ಅನುಸರಿಸಲು ಸಾಧ್ಯವಿಲ್ಲ. ಅದರಲ್ಲೂ ಜೀವ ಸಂರಕ್ಷಣೆಯ ವಿಷಯದಲ್ಲಿ ದಯೆ ಮತ್ತು ಅನುಕಂಪಕ್ಕೂ ಜಾಗವಿದ್ದರೆ, ಧರ್ಮತತ್ವಗಳನ್ನೂ, ಧರ್ಮನಂಬಿಕೆಗಳನ್ನೂ ಗೌರವಿಸುವಂತಿದ್ದರೆ ನಾವು ಸಂರಕ್ಷಣಾ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಯೋಜಿಸಲು ಸಾಧ್ಯ ಎಂಬ ಸತ್ಯವನ್ನು (ನಂಬಿಕೆಯನ್ನು) ಸ್ವೀಕರಿಸಬೇಕಾಗುತ್ತದೆ. ಇದನ್ನು ಈಗಾಗಲೆ ಹಲವಾರು ನಿದರ್ಶನಗಳು ಪುಷ್ಟೀಕರಿಸಿವೆ ಕೂಡ. ಉದಾಹರಣೆಗೆ ಕಾಂಬೋಡಿಯದ ಕಾಡುಗಳಲ್ಲಿ ಕಾಡಿನ ಸಂರಕ್ಷಣೆಯ ಕಾರ್ಯಕ್ಕೆ ತೊಡಗಿಸಿಕೊಂಡ ಬೌದ್ಧಮುನಿಗಳು ಅಧಿಕಾರಿಗಳ ನಿಯಂತ್ರಣಕ್ಕೂ ಮಣಿಯದ ಕಾಡುಗಳ್ಳರನ್ನು ತಮ್ಮ ಧರ್ಮಾಧಾರಿತ ಬೋಧನೆ ಮತ್ತು ನಂಬಿಕೆಗಳ ಮೂಲಕ ಒಲಿಸಿ ಅವರನ್ನು ಸ್ವತಃ ಕಾಡಿನ ಸಂರಕ್ಷಕರಾಗುವಂತೆ ಪರಿವರ್ತನೆಗೊಳಿಸುವಲ್ಲಿ ಸಫಲರಾಗಿದ್ದಾರೆ.

ಅಂತೆಯೇ ಇತ್ತೀಚೆಗೆ ಕಾಶ್ಮೀರದ ಲಡಾಕ್ ಮತು ಜ಼ನ್ಸ್ಕಾರ್ ಪ್ರದೇಶಗಳಲ್ಲಿ ಹಿಮಚಿರತೆಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಬೌದ್ಧ ಮುನಿಗಳ ಸಹಕಾರವನ್ನು ಪಡೆಯಲಾಗಿದೆ. ಒಟ್ಟಿನಲ್ಲಿ, ನನ್ನ ವಿಕಾಸ ವಿಜ್ಞಾನದ ಮಾನಸ ಗುರುವಾದ ಸ್ಟೀಪನ್ ಜೇ ಗೌಲ್ಡ್ ಹೇಳಿರುವ ಹಾಗೆ ‘we can not win this battle to save species and environment without forging an emotional bond between ourselves and nature; for, we will not fight to save what we do not love’.

ಅಂದರೆ ‘ನಮ್ಮ ಮತ್ತು ಪ್ರಕೃತಿಯ ನಡುವೆ ಭಾವನಾತ್ಮಕ ಕೊಂಡಿಯನ್ನು ಬೆಸೆಯದೆ, ಪ್ರಭೇದಗಳ ಮತ್ತು ಪರಿಸರವನ್ನು ಉಳಿಸುವ ಈ ಸಂಘರ್ಷದಲ್ಲಿ ನಾವು ಎಂದೂ ಜಯ ಗಳಿಸಲಾರೆವು. ಕಾರಣ, ನಮಗೆ ಪ್ರೀತಿಪಾತ್ರವಲ್ಲದುದನ್ನು ಉಳಿಸಲು ನಾವು ಎಂದೂ ಹೋರಾಡುವುದಿಲ್ಲ. ಆದ ಕಾರಣ, ಮಾನವನ ಭವಿಷ್ಯ ಮತ್ತು ಆರ್ಥಿಕತೆಯನ್ನೇ ಕೇಂದ್ರವನ್ನಾಗಿಸಿಕೊಂಡಿರುವ ಪ್ರಸ್ತುತ ಎಲ್ಲ ಜೀವ ಸಂರಕ್ಷಣಾ ಕಾರ್ಯಗಳಿಗೆ ಭಾವನಾತ್ಮಕತೆಯನ್ನು ಬೆರೆಸಿ, ಧಾರ್ಮಿಕ ನಂಬಿಕೆ ಮತ್ತು ಚಿಂತನೆಗಳನ್ನು ಅಳವಡಿಸಿಕೊಂಡರೆ ಮಾತ್ರ ಅವು ಅರ್ಥಪೂರ್ಣವೂ, ಸಂಪೂರ್ಣವೂ, ನಿರಂತರವೂ ಆಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT