ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ ಕಾರ್ಯಕ್ರಮ ನಿಮಿತ್ತ ಹೋದಾಗಲೆಲ್ಲ ನನ್ನಲ್ಲಿ ವಿಚಿತ್ರ ಭಾವುಕತೆ ಆವರಿಸಿಕೊಳ್ಳುತ್ತದೆ. ಕಾರಣ, ಅದರ ಸಭಾಂಗಣದ ಗೋಡೆಗಳ ತುಂಬ ಇರುವ ಕರ್ನಾಟಕ ಏಕೀಕರಣ ಚಳವಳಿಯ ನಾಯಕರ ಹಾಗೂ ನಮ್ಮ ದೊಡ್ಡ ಲೇಖಕರ ಫೋಟೊಗಳು. ಹಳಗಾಲವನ್ನು ಸೂಸುವ ಕಪ್ಪುಬಿಳುಪಿನ ಈ ಫೋಟೊಗಳನ್ನು ನೋಡುತ್ತ ಸಾಗುವಾಗ ಕಣ್ಣು ಬಿ.ಎಂ. ಶ್ರೀಕಂಠಯ್ಯನವರ ಚಿತ್ರಕ್ಕೆ ಬಂದು, ಅಲ್ಲಿಯೆ ಸಿಲುಕಿ ನಿಂತುಬಿಡುತ್ತದೆ. ನಿಂತು ನೆನಪುಗಳನ್ನು ಕೆರಳಿಸುತ್ತದೆ.

ಶ್ರೀಯವರಿಗೆ ಕೊನೆಗಾಲದಲ್ಲಿ ಧಾರವಾಡದ ಜತೆ ಸಂಬಂಧ ಏರ್ಪಟ್ಟಿತ್ತಷ್ಟೆ. ಮಹಾರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಅವರು, ಬ್ರಿಟಿಶ್ ಆಳ್ವಿಕೆಯಲ್ಲಿದ್ದ ಮುಂಬೈ ಕರ್ನಾಟಕದ ಈ ಊರಿಗೆ ಬಂದರು. ಇಲ್ಲೇ ದೇಹವನ್ನೂ ಬಿಟ್ಟರು. ತುಂಡುಗಳಾಗಿದ್ದ ಕರ್ನಾಟಕ ಏಕೀಕರಣವಾಗಬೇಕು ಎಂಬ ಅವರ ಕನಸಿನ ಸಂಕೇತದಂತೆ ಅವರ ವಲಸೆ ಮತ್ತು ಮರಣಗಳಿವೆ. ಅವರು ಧಾರವಾಡದಲ್ಲಿದ್ದಾಗ ಜನರ ಪ್ರೀತಿ-ಗೌರವ ಪಡೆದರು. ಜತೆಗೆ ಮುಜುಗರವನ್ನೂ. ಅವರು ಸಭೆಗಳಲ್ಲಿ ಮಾತಾಡುವಾಗ, ಕೆಲವರು ಥಟ್ಟನೆ ಎದ್ದುನಿಂತು ‘ಸ್ವಾಮಿ, ನಾವೆಲ್ಲ ಬ್ರಿಟಿಶರ ವಿರುದ್ಧ ಹೋರಾಡುವಾಗ, ನೀವು ಬ್ರಿಟಿಶರಿಗೂ ಅವರ ಗುಲಾಮರಾಗಿದ್ದ ಮಹಾರಾಜರಿಗೂ ಸೇವೆ ಮಾಡಿಕೊಂಡಿದ್ದಿರಿ’ ಎಂದು ಚುಚ್ಚುಮಾತನ್ನು ಎಸೆದುಬಿಡುತ್ತಿದ್ದರು. ಆಗ ಶ್ರೀಯವರು ಕೆರಳಿ, ಬಳಿಕ ಕುಗ್ಗಿ ಹೋಗುತ್ತಿದ್ದರು. ಸಭಿಕರ ಈ ಆಕ್ಷೇಪಣೆಯಲ್ಲಿ ರಾಜಕೀಯ ಸತ್ಯವಿತ್ತು. ಆದರೆ ಅದು ಶ್ರೀಯವರು ಕನ್ನಡಕ್ಕಾಗಿ ಮಾಡಿದ ಕೆಲಸದ ಮಹತ್ವವನ್ನೇನೂ ಕಡಿಮೆಗೊಳಿಸಲಿಲ್ಲ.

ಮುಖ್ಯಸಂಗತಿಯೆಂದರೆ, ಶ್ರೀಯವರು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ 1911ರಲ್ಲಿ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಉಪನ್ಯಾಸ ಮಾಡಿದ್ದು. ಚಾರಿತ್ರಿಕ ಮಹತ್ವವುಳ್ಳ ಈ ಉಪನ್ಯಾಸಕ್ಕೆ ಈಗ ಶತಮಾನ ತುಂಬಿದೆ. ಇದರಲ್ಲಿ ಶ್ರೀಯವರು ಪ್ರಕಟಿಸಿರುವ ತಲ್ಲಣಗಳು ಈಗಲೂ ನಮ್ಮ ಸಂವೇದನೆಗೆ ತಾಕುವಷ್ಟು ತೀವ್ರವಾಗಿವೆ. ಇದರಲ್ಲಿ ಆಳವಾದ ಚಿಂತನೆ ಮತ್ತು ಮುಂಗಾಣ್ಕೆಯಿದೆ. ದಿಟವಾಗಿಯೂ ಇದೊಂದು ಕನ್ನಡವನ್ನೂ ಕರ್ನಾಟಕವನ್ನೂ ಕಟ್ಟುವ ದಾರ್ಶನಿಕತೆ ಮತ್ತು ಹೊಣೆಗಾರಿಕೆಯಿಂದ ಕೂಡಿದ ಉಪನ್ಯಾಸ.

ಈ ಉಪನ್ಯಾಸಕ್ಕೆ ಶ್ರೀಯವರು ಮಾತಾಡಿದ ಜಾಗದ ಪ್ರೇರಣೆಯೂ ಕೊಂಚ ಇದ್ದೀತು. ಅದೆಂದರೆ ವಿದ್ಯಾವರ್ಧಕ ಸಂಘ. ಈ ಸಂಘವನ್ನು ರಾ.ಹ.ದೇಶಪಾಂಡೆಯವರು, ಮರಾಠಿ ದುರಭಿಮಾನಿಗಳ ವಿರುದ್ಧ ಸೆಣಸಾಡುತ್ತ, ಕನ್ನಡಿಗರ ಸ್ವಾಭಿಮಾನದ ರುಜುವಾತಿಗಾಗಿ ಕಟ್ಟಿದ್ದು. ಮುಂಬೈ ಸರ್ಕಾರದಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ರಾ.ಹ. ಅವರಿಗೆ, ಜಗಳ ಇದ್ದದ್ದು ಬ್ರಿಟಿಶರ ಜತೆಯಲ್ಲಲ್ಲ; ನೆರೆಮನೆಯವರಾದ ಮರಾಠಿಗರ ಜತೆ. ಆಂಗ್ಲ ಪ್ರಾಧ್ಯಾಪಕರಾಗಿದ್ದ ಶ್ರೀಯವರಿಗಾದರೂ ವಿರೋಧ ಇದ್ದುದು ಇಂಗ್ಲಿಶಿನ ಜತೆಯಲ್ಲಿ ಅಲ್ಲ; ಬ್ರಿಟಿಶರ ಜತೆಯೂ ಅಲ್ಲ; ಸಂಸ್ಕೃತದ ಹೇರಿಕೆಯ ಬಗ್ಗೆ. ಶ್ರೀಯವರ ಭಾಷಣದ ತಲೆಬರೆಹದಲ್ಲಿ ಒಂದೇ ಒಂದು ಸಂಸ್ಕೃತ ಶಬ್ದವಿಲ್ಲ ಎಂಬುದು ಗಮನಾರ್ಹ. ಇದು ಅವರು ಸಂಸ್ಕೃತ ಜತೆಗೆ ಕನ್ನಡದ ಸಂಬಂಧವನ್ನು ನಿರ್ವಚಿಸಿಕೊಂಡಿದ್ದರ ಸಂಕೇತವೂ ಆಗಿದೆ. ಯಾಕೆ ನಾಡು ಮತ್ತು ನುಡಿಗಳನ್ನು ಕಟ್ಟುವ ಕೆಲಸ ಮಾಡಿದ ರಾ.ಹ., ಬಿಎಂಶ್ರೀ- ಮುಂತಾದವರು, ಬ್ರಿಟಿಶರ ಮತ್ತು ಇಂಗ್ಲಿಶಿನ ವಿರೋಧಿಗಳಾಗಿರಲಿಲ್ಲ. ಕನ್ನಡದ ತನ್ನತನವನ್ನು ಮನ್ನಿಸದ ಮರಾಠಿ ಮತ್ತು ಸಂಸ್ಕೃತಗಳ ಯಜಮಾನಿಕೆಯನ್ನು ಪ್ರತಿಭಟಿಸುವವರಾಗಿದ್ದರು. ಅವರ ಈ ನಿಲುವಿಗೆ ಅವರು ಬದುಕಿ ಕೆಲಸ ಮಾಡಿದ ಕಾಲದ ಚಾರಿತ್ರಿಕ ಒತ್ತಡಗಳೂ ಕಾರಣ.

ಶ್ರೀಯವರ ಮಟ್ಟಿಗೆ ಹೇಳುವುದಾದರೆ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದ ಅವರು, ತರಗತಿಯ ಒಳಗಿರಲಿ, ಹೊರಗೆ ಕೂಡ ಕನ್ನಡದಲ್ಲಿ ಮಾತನಾಡಲು ಇಷ್ಟಪಡುತ್ತಿರಲಿಲ್ಲ. ಕಾಲೇಜು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ಮತ್ತು ಸಹೋದ್ಯೋಗಿಗಳ ಜತೆ ಇಂಗ್ಲಿಶಿನಲ್ಲೇ ವ್ಯವಹರಿಸುತ್ತಿದ್ದರು. ಕನ್ನಡ ಸಂಘಗಳಲ್ಲಿ, ಕನ್ನಡ ಸಾಹಿತ್ಯದ ಮೇಲೆ ಭಾಷಣ ಮಾಡಿದರೂ ಇಂಗ್ಲಿಶಿನಲ್ಲೇ. ಈ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ಅವರ ಶಿಷ್ಯರಾದ ವಿ.ಸೀತಾರಾಮಯ್ಯನವರೂ, ಎ.ಎನ್.ಮೂರ್ತಿರಾಯರೂ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಕೆಲವು ವಿಮರ್ಶಕರು ಶ್ರೀಯವರ ಈ ವರ್ತನೆಯನ್ನು, ಅವರು ಬ್ರಿಟಿಶರಿಗೆ ಮತ್ತು ಇಂಗ್ಲಿಶಿಗೆ ತೋರಿದ ‘ದಾಸ್ಯ’ವೆಂದು ವ್ಯಾಖ್ಯಾನಿಸಿರುವುದುಂಟು.

ಆದರೆ ಇಂತಹ ಶ್ರೀಯವರು ‘ಕನ್ನಡ ಮಾತು ತಲೆಯತ್ತುವ ಬಗೆ’ ಕುರಿತು ಮಾತನಾಡಿದರು ಮತ್ತು ಕನ್ನಡದ ಕಣ್ವರೆನಿಸಿಕೊಂಡರು. ಮೊದಲಿಗೆ ಇಂಗ್ಲಿಶಿನಲ್ಲೇ ಸಾಹಿತ್ಯ ರಚನೆ ಮಾಡುತ್ತಿದ್ದ ಅವರ ನೆಚ್ಚಿನ ಶಿಷ್ಯರಾದ ಕುವೆಂಪು ಕೂಡ, ಬಳಿಕ ಕನ್ನಡಕ್ಕೆ ಹೊರಳಿಕೊಂಡರು. ಇಂಗ್ಲಿಶ್ ನುಡಿ ಮತ್ತು ಸಾಹಿತ್ಯಗಳ ಮಹಾ ಆರಾಧಕರಾಗಿದ್ದ ಇವರಿಬ್ಬರೂ, ಕನ್ನಡಕ್ಕೆ ಶಕ್ತಿ ತುಂಬಿದರು. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಇವರಿಬ್ಬರೂ ಸಂಸ್ಕೃತ ಅಥವಾ ಇಂಗ್ಲಿಶುಗಳ ಜತೆ ಕನ್ನಡದ ಸಂಬಂಧ ಹೇಗಿರಬೇಕೆಂಬ ವಿಷಯದಲ್ಲಿ ತೆಗೆದುಕೊಂಡ ನಿಲುವಿನ ಹಿಂದೆ, ಕನ್ನಡವನ್ನು ಕಟ್ಟುವ, ಸಾಹಿತ್ಯ ಸೃಷ್ಟಿಸುವ ಹಾಗೂ ಕನ್ನಡಿಗರ ತಿಳಿವಳಿಕೆಯನ್ನು ಬೆಳೆಸುವ ಸಾಮುದಾಯಕ ಕಾರಣಗಳಿದ್ದವು.

ಈ ಹಿನ್ನೆಲೆಯಲ್ಲಿಯೇ ಕುವೆಂಪು ಅವರ ‘ನಮಗೆ ಬೇಕಾದ ಇಂಗ್ಲಿಷ್’ ಎಂಬ ಲೇಖನವನ್ನು ಗಮನಿಸಬೇಕು; ಶ್ರೀಯವರು ತಮ್ಮ ಉಪನ್ಯಾಸದಲ್ಲಿ ವ್ಯಕ್ತಮಾಡಿದ ‘ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು; ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು’ ಎಂಬ ಆಶೋತ್ತರವನ್ನು ನೋಡಬೇಕು. ಇಲ್ಲಿರುವ ‘ನಮಗೆ’, ‘ನಮ್ಮ’ ಎಂಬ ಶಬ್ದಗಳು ಸಮುದಾಯ ಸೂಚಕವಾಗಿವೆ.

ಈ ಸಂಗತಿಯನ್ನು, ಇಂಗ್ಲಿಶ್ ಮೀಡಿಯಂ ಕರ್ನಾಟಕದಲ್ಲಿ ಜಾರಿಬರಬೇಕು ಎಂದು ಪ್ರತಿಪಾದಿಸಿರುವ ಉದ್ಯಮಿಯೊಬ್ಬರು ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಿರುವ ಸನ್ನಿವೇಶದಲ್ಲಿ, ಮುದ್ದಾಮಾಗಿ ಉಲ್ಲೇಖಿಸಬೇಕಿದೆ. ಈಗ ನಮ್ಮಲ್ಲಿ ಕನ್ನಡ ಕುರಿತಂತೆ ಹಲವಾರು ಮಾದರಿಗಳಿದ್ದು ಅವುಗಳಲ್ಲಿ ಎರಡು ಹೀಗಿವೆ:

1. ಕನ್ನಡದ ಪರವಾಗಿ ಭಾವಾವೇಶದ ಮಾತುಗಳನ್ನಾಡುತ್ತ, ಬೇರೆ ಜನಭಾಷಿಕರನ್ನು ಸಾರಾಸಗಟಾಗಿ ಅನುಮಾನಿಸುವ ಮತ್ತು ದ್ವೇಷಿಸುವ ಉಗ್ರಾಭಿಮಾನ.

2. ನಮ್ಮ ನಾಡು ಜಾಗತೀಕರಣದ ಯುಗದಲ್ಲಿ ಸಮರ್ಥ ಸ್ಪರ್ಧೆ ಒಡ್ಡಬೇಕಾದರೆ, ಕನ್ನಡವನ್ನು ಬಿಟ್ಟುಕೊಟ್ಟು ಇಂಗ್ಲಿಶ್ ಮಾಧ್ಯಮಕ್ಕೆ ಹೋಗಬೇಕು ಎಂಬ ಲಾಭಾಭಿಮಾನ. ಮೊದಲ ಮಾದರಿಯಲ್ಲಿ ಕನ್ನಡ ಕುರಿತ ಕಳಕಳಿಯಿದೆ. ಆದರೆ ಅದು ಅನುಸರಿಸುತ್ತಿರುವ ಹಾದಿಯಿಂದ ಕನ್ನಡಕ್ಕೆ ಲಾಭವಿಲ್ಲ. ಹಾನಿಯೇ. ಎರಡನೆಯದು ಪಕ್ಕಾ ವ್ಯಾಪಾರಿ ಲೆಕ್ಕಾಚಾರದ ಮಾದರಿ. ಈ ಮಾದರಿ, ತನ್ನ ವ್ಯವಹಾರದ ಬೆಳವಣಿಗೆಗೆ ದೇಶೀಭಾಷೆ ತೊಡಕೆನಿಸಿದರೆ, ಅದನ್ನು ಬಿಟ್ಟುಕೊಡಬೇಕು ಎಂದು ನಿರಾಳವಾಗಿ ನುಡಿಯುತ್ತದೆ. ಅದು ಇಂಗ್ಲಿಶನ್ನು ಅಪ್ಪಿಕೊಳ್ಳುವುದು- ಕುವೆಂಪು ಮತ್ತು ಶ್ರೀಯವರಂತೆ- ಜ್ಞಾನಕ್ಕೂ ಅಲ್ಲ, ಸಾಹಿತ್ಯಕ ಪ್ರೇರಣೆಗೂ ಅಲ್ಲ. ತನ್ನ ಬಿಜಿನೆಸ್ ಸಾಮ್ರಾಜ್ಯದ ವಿಸ್ತರಣೆಗೆ. ಅದೂ ಕನ್ನಡವನ್ನು ಇಟ್ಟುಕೊಂಡು ಅಲ್ಲ; ಕನ್ನಡವನ್ನು ಬಿಟ್ಟುಕೊಟ್ಟು. ಎಲ್ಲವನ್ನೂ ಲಾಭ-ನಷ್ಟಗಳ ಕಣ್ಣಲ್ಲೇ ನೋಡುವ ಅದಕ್ಕೆ ತನ್ನ ಈ ಭಾಷಾನೀತಿಯಿಂದ ನಾಡಿನ ವಿಶಾಲ ಸಮುದಾಯದ ಮೇಲೆ ಸಂಭವಿಸುವ ಪರಿಣಾಮದತ್ತ ಖಬರಿಲ್ಲ.
ಬಹುಶಃ ಎಲ್ಲ ಬಹುರಾಷ್ಟ್ರೀಯ ಕಂಪನಿಗಳ ಸಹಜ ವರ್ತನೆಯಿದು. ಹೆಸರೇ ಸೂಚಿಸುವಂತೆ ಅವಕ್ಕೆ ಒಂದು ರಾಷ್ಟ್ರದ ಹಂಗಿಲ್ಲ. ಒಂದು ಬಗೆಯಲ್ಲಿ ಅದರ ಮಾಲಕರು ‘ವಿಶ್ವಮಾನವ’ರು. ತಮ್ಮ ವಹಿವಾಟಿನ ಅವಸರಕ್ಕಾಗಿ ದೇಶ ಮತ್ತು ಭಾಷೆಯ ಗಡಿಗಳನ್ನು ದಾಟಿಹೋಗಬಲ್ಲ ಅವರಿಗೆ, ನಾಡಿನ ಸಮುದಾಯ, ಅದರ ಭಾಷೆ ಮತ್ತು ಸಂಸ್ಕೃತಿ, ಒಂದು ಪ್ರಶ್ನೆಯೇ ಅಲ್ಲ. ಎಂತಲೇ ಅವರು ಈ ನಾಡಿನಲ್ಲಿ ಸರಿಯಾದ ಸೌಕರ್ಯ ಒದಗಿಸದಿದ್ದರೆ, ಬೇರೆ ದೇಶಕ್ಕೆ ಹೋಗುತ್ತೇವೆ ಎಂದು ಧಮಕಿ ಹಾಕುವುದು; ತಮ್ಮ ಕಂಪನಿಗಳಲ್ಲಿ ನಾಡವರಿಗೆ ಕೆಲಸ ಕೊಡಬೇಕೆಂಬ ಬೇಡಿಕೆಯನ್ನು ತಳ್ಳಿಹಾಕುವುದು; ಅವರ ಜಾಗತಿಕ ಪ್ರಜ್ಞೆಯು ‘ಎಲ್ಲ ಮತದ ಹೊಟ್ಟತೂರಿ ತತ್ವದೆಲ್ಲೆಯನ್ನು ಮೀರಿ’ ಮಾನವ ಚೈತನ್ಯವು ಅನಿಕೇತನವಾಗಬೇಕು ಎಂದು ಪ್ರತಿಪಾದಿಸಿದ ಕುವೆಂಪು ವಿಶ್ವಮಾನವತೆಯಲ್ಲ. ಕುವೆಂಪು ವಿಶ್ವಮಾನವತೆಗಾಗಿ ತಮ್ಮ ನುಡಿಯನ್ನು ಬಿಟ್ಟುಕೊಡಿ ಎನ್ನಲಿಲ್ಲ. ‘ನೀ ಮೆಟ್ಟುವ ನೆಲ ಅದೆ ಕರ್ನಾಟಕ, ನೀ ಕುಡಿವ ನೀರ್ ಕಾವೇರಿ’ ಎನ್ನುವಾಗಲೂ, ಅವರು ಜಗತ್ತನ್ನು ನಾಡಿನ ಸ್ಮೃತಿಗಳ ಮೂಲಕವೇ ಪರಿಭಾವಿಸಲು ಸೂಚಿಸಿದರು. ಇಂತಹ ಕುವೆಂಪು ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಹಿಂದೆ (1986) ಉದ್ಘಾಟಿಸಿದ್ದರು. ಈಗ ಜಾಗದಲ್ಲಿ ಒಬ್ಬ ಬಹುರಾಷ್ಟ್ರೀಯ ಕಂಪನಿ ಮಾಲಕರು ಈ ಕೆಲಸ ನೆರವೇರಿಸುತ್ತಿದ್ದಾರೆ. ಇದು ಕರ್ನಾಟಕದ ಪ್ರಭುತ್ವಗಳ ಆಲೋಚನ ಕ್ರಮದಲ್ಲಾಗಿರುವ ಪಲ್ಲಟವನ್ನು ಸೂಚಿಸುತ್ತಿದೆ.

ಇನ್ಫೋಸಿಸ್ ನಾರಾಯಣಮೂರ್ತಿ ಅವರು ಬೆಂಗಳೂರಿಗೆ ವಿಶ್ವದಲ್ಲಿ ಮಾನ್ಯತೆ ತಂದುಕೊಟ್ಟವರು ಎನ್ನಲಾಗುತ್ತಿದೆ. ಆದರೆ ಈ ಮಾನ್ಯತೆಯನ್ನು ಕೊಡ ಮಾಡುತ್ತಿರುವವರು ಯಾರು? ಅವರು ಕೊಡುವ ಮಾನ್ಯತೆಯಿಂದ ಯಾವ ವರ್ಗಕ್ಕೆ ಪ್ರಯೋಜನವಾಗಿದೆ? ಹುಟ್ಟಿನಿಂದ ‘ಕನ್ನಡಿಗ’ರಾದರೂ, ಯಾಕೆ ಮೂರ್ತಿ ಅವರು ಕನ್ನಡ ತಂತ್ರಾಂಶದ ವಿಷಯದಲ್ಲಿ ಆಸಕ್ತಿ ತಳೆದಿಲ್ಲ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ನಾಡು ನುಡಿಯನ್ನು ಕಟ್ಟುವುದಕ್ಕೆ ಜೀವಮಾನ ಇಡೀ ತೇದುಕೊಂಡ ಲೇಖಕರು, ಅಥವಾ ಯಾವ ಪ್ರಶಸ್ತಿಯ ಉದ್ದೇಶವೂ ಇಲ್ಲದೆ ತನ್ನೂರಿನ ರಸ್ತೆ ಬದಿಯಲ್ಲಿ ಸಾಲುಮರಗಳನ್ನು ನೆಟ್ಟು ನೀರು ಹೊಯ್ದು ಬೆಳೆಸಿದ ಬಡವಿ ತಿಮ್ಮಕ್ಕ, ಸಮ್ಮೇಳನ ಉದ್ಘಾಟಿಸಿದ್ದರೆ ಅದಕ್ಕೆ ಬೇರೆಯೇ ಖದರು ಮತ್ತು ಘನತೆ ಇರುತ್ತಿತ್ತು ಅನಿಸುತ್ತಿತ್ತು.

ಬಹುಶಃ, ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ನಾಡಿನ ಸಾಂಸ್ಕೃತಿಕ ನಾಯಕರ ಪರಿಕಲ್ಪನೆಯೇ ಬದಲಾದಂತೆ ತೋರುತ್ತದೆ. ಶ್ರೇಷ್ಠ ಲೇಖಕರು, ಚಿಂತಕರು, ಆಯಾ ನಾಡಿನ ಅಸ್ಮಿತೆಗಳಾಗುತ್ತಿದ್ದರು. ಈಗ ಬಿಲ್ಗೇಟ್ಸ್, ಇನ್ಫೋಸಿಸ್ ಮೂರ್ತಿ, ಮಿತ್ತಲ್ ಮುಂತಾದ ಉದ್ಯಮಿಗಳು ನಾಡಿನ ಅಸ್ಮಿತೆಗಳಾಗುತ್ತಿದ್ದಾರೆ. ಸಮಸ್ಯೆಯೆಂದರೆ, ಈ ಉದ್ಯಮಿಗಳು ಸರ್ಕಾರಗಳ ದಕ್ಷತೆಯನ್ನು ಅಳೆಗೋಲು ಸಹ ಆಗಿರುವುದು. ಅವರ ಅಳೆಗೋಲಲ್ಲಿ ಮುಖ್ಯವಾದುದು, ಸರ್ಕಾರ ನಾಡಿನ ಜನರ ಜೀವನ ಮಟ್ಟ ಸುಧಾರಿಸಲು ಏನು ಮಾಡಿದೆ ಎಂಬುದಲ್ಲ; ತಮಗೆ ಬೇಕಾದ ಸೌಕರ್ಯವನ್ನು ಹೇಗೆ ಒದಗಿಸುತ್ತದೆ ಎಂಬುದು. ಈ ಸೌಕರ್ಯ ಒದಗಿಸುವುದರ ಅರ್ಥವೇನು ಎಂಬುದನ್ನು ಯಾರು ಹೇಳಬೇಕು? ಸೌಕರ್ಯ ಪಡೆದ ಅವರೊ, ಅವರಿಗಾಗಿ ಬೆಳೆವ ಜಮೀನು ಕಳೆದುಕೊಂಡ ಗ್ರೆಗರಿ ಪೆತ್ರಾವೊ ತರಹದ ರೈತರೊ? ನಮ್ಮ ಕೆಲವು ಉದ್ಯಮಿ ಮತ್ತು ರಾಜಕಾರಣಿಗಳು, ನೂರು ತಲೆಮಾರು ಕೂತು ತಿನ್ನುವಷ್ಟು ಸಂಪತ್ತನ್ನು ಕೆಲವೇ ವರ್ಷಗಳಲ್ಲಿ ಹೇಗೆ ಗಳಿಸಿಕೊಂಡರು? ಕೊನೆಯ ಪಕ್ಷ ಅವರು ನೆಲೆಸಿರುವ ಅಥವಾ ಪ್ರತಿನಿಧಿಸುವ ಪ್ರದೇಶಗಳ ಜನರ ಜೀವನ ಮಟ್ಟ ಸುಧಾರಿಸಿದೆಯೇ? ಇಂತಹ ಪ್ರಶ್ನೆಗಳು ಈಗ ಅಭಿವೃದ್ಧಿಯ ವಿರೋಧಿಗಳು ಮಾಡುವ ಅಪಸ್ವರದಂತೆ ಕೇಳುತ್ತಿವೆ.

ಗಮನಿಸಬೇಕು: ಮೂರ್ತಿಯವರು ಉದ್ಘಾಟನೆಯ ಗೌರವವನ್ನು ಕೇಳಿ ಪಡೆದದ್ದಲ್ಲ; ಸರ್ಕಾರವೇ ಅವರನ್ನು ಕೋರಿ ಒಪ್ಪಿಸಿದ್ದು. ಇದು ಕಾರ್ಪೊರೇಟ್ ಜಗತ್ತಿನ ಪರವಾದ ಆರ್ಥಿಕ ನೀತಿ ಅನುಸರಿಸುತ್ತಿರುವ ಪ್ರಭುತ್ವಗಳಿಗೆ, ಯಶಸ್ವಿ ಉದ್ಯಮಿಗಳು ನಾಡನ್ನು ಮುನ್ನಡೆಸುವ ದಾರ್ಶನಿಕರು ಎಂದು ಭಾಸವಾಗುತ್ತಿರುವ ಪರಿಯನ್ನು ಸೂಚಿಸುತ್ತದೆ; ಇದು ವಿಶ್ವ ಬಂಡವಾಳಗಾರರ ಸಮಾವೇಶದ ತಾರ್ಕಿಕ ಮುಂದುವರಿಕೆ ಕೂಡ. ಇಲ್ಲಿ ಕನ್ನಡ - ಕನ್ನಡಿಗ ಎಂಬ ಭಾವನಾತ್ಮಕ ಶಬ್ದಗಳು ನೆಪ ಅಷ್ಟೆ. ಪ್ರಭುತ್ವದ ಕಲ್ಪನೆಯಲ್ಲಿ ಹೊಸ ಆರಾಧ್ಯ ದೇವತೆಗಳಾಗಿರುವ ಈ ಕಾರ್ಪೊರೇಟ್ ಜಗತ್ತಿನ ನಾಯಕರನ್ನು ಜನರಿಗೆ ಸಾಂಸ್ಕೃತಿಕ ಉತ್ಸವಗಳ ಮೂಲಕ ಒಪ್ಪಿಸುತ್ತಿದೆ. ಇದಕ್ಕೆ ಕರ್ನಾಟಕದ ಮಧ್ಯಮವರ್ಗದಲ್ಲಿ ವ್ಯಾಪಕ ಸಮ್ಮತಿಯೂ ಇದೆ. ಹೊಸ ತಲೆಮಾರಿನ ಯುವಕರಿಗೆ ಮೂರ್ತಿಯವರು ಒಂದು ಆದರ್ಶ ಹಾಕಿಕೊಟ್ಟಿದ್ದಾರೆ ಎಂದು ಸಚಿವರೊಬ್ಬರು ಸಮರ್ಥನೆ ಮಾಡಿಕೊಂಡಿದ್ದನ್ನು ಇಲ್ಲೇ ನೆನೆಯಬೇಕು. ಈ ತರ್ಕದಲ್ಲಿ, ವಿದ್ಯಾವರ್ಧಕ ಸಂಘದಲ್ಲಿರುವ ಕುವೆಂಪು, ಬಿಎಂಶ್ರೀ, ಬೇಂದ್ರೆ ಮುಂತಾದವರ ಸಾಲಿನೊಳಗೆ, ನಮ್ಮ ನಾಡಿನ ಉದ್ಯಮಿಗಳ ಚಿತ್ರಗಳು ಪ್ರತಿಷ್ಠಾಪನೆಗೊಂಡರೆ ಸೋಜಿಗವಿಲ್ಲ.

ಕಷ್ಟವೆಂದರೆ, ಈ ಯಶಸ್ವೀ ಉದ್ಯಮಪತಿಗಳು ಚಿತ್ರನಟರಂತೆ ಅಥವಾ ಲೇಖಕರಂತೆ ಕೇವಲ ಆರಾಧನೆಗೆ ಒಳಗಾಗುವ ವ್ಯಕ್ತಿಗಳಾಗುತ್ತಿಲ್ಲ. ಪ್ರಜಾಪ್ರಭುತ್ವ ವಿಧಾನದಲ್ಲಿ ಆಯ್ಕೆಯಾದ ಸರ್ಕಾರಗಳಿಗೆ ಮಾರ್ಗದರ್ಶಕರೂ ಮಾಲಕರೂ ಆಗುತ್ತಿದ್ದಾರೆ. ಹಿಂದೆ ಪ್ರಭುತ್ವವನ್ನು ಉದ್ಯಮಿಗಳು ಓಲೈಸುತ್ತಿದ್ದರು. ಈಗ ಪ್ರಭುತ್ವವೇ ಅವರ ಊಳಿಗ ಮಾಡಲು ಟೊಂಕಕಟ್ಟಿ ನಿಂತಿದೆ. ಈ ಹಿನ್ನೆಲೆಯಲ್ಲಿ ನಾಡಿನ ನೀರನ್ನು ನೆಲವನ್ನು ಅದಿರನ್ನು ಕಲ್ಲನ್ನು ಉದ್ಯಮಿಗಳಿಗಾಗಿ ತೆರೆದಿಡುವ ಆರ್ಥಿಕನೀತಿಯನ್ನು ಪ್ರಭುತ್ವಗಳು ಜಾರಿ ಮಾಡುತ್ತಿರುವುದನ್ನು; ನಮ್ಮ ಶಾಸಕರಲ್ಲಿ ಹೆಚ್ಚಿನವರು ಗಣಿ, ಗ್ರಾನೈಟು, ರಿಯಲ್ ಎಸ್ಟೇಟ್, ಲಿಕ್ಕರ್, ಕ್ಯಾಪಿಟೇಶನ್ ಮುಂತಾದ ಉದ್ಯಮಸ್ಥರು ಎಂಬುದನ್ನು ಅರಿಯಬೇಕಿದೆ. ಕರ್ನಾಟಕದಲ್ಲೆಗ ರಾಜಕಾರಣಿಗಳು ಉದ್ಯಮಿಗಳಾಗಿ ರೂಪಾಂತರ ಪಡೆಯುತ್ತಿದ್ದರೆ, ಉದ್ಯಮಿಗಳು ರಾಜಕಾರಣಿಗಳಾಗಿ ಬದಲಾಗುತ್ತಿದ್ದಾರೆ. ಧಾರ್ಮಿಕ ನಾಯಕರು ರಾಜಕೀಯ ಪರಿಭಾಷೆಯಲ್ಲಿ ಮಾತಾಡುತ್ತಿದ್ದರೆ, ರಾಜಕಾರಣಿಗಳು ಧಾರ್ಮಿಕ ಪರಿಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಇವರೆಲ್ಲರ ಯಶಸ್ಸನ್ನು ಸಮಗ್ರ ನಾಡವರ ಯಶಸ್ಸೆಂದು ಬಿಂಬಿಸಲಾಗುತ್ತಿದೆ.

ರೈತರನ್ನು ಸಂಕಟದಂಚಿಗೆ ದೂಡಿ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಅನುಕೂಲವೊದಗಿಸುವ ಆರ್ಥಿಕ ನೀತಿಗೂ; ದೇಶಭಾಷೆಗಳಿಗೆ ಏನಾದರೂ ಚಿಂತೆಯಿಲ್ಲ, ಎಲ್ಲ ಹಂತಗಳಲ್ಲಿ ಇಂಗ್ಲಿಶೇ ಮಾಧ್ಯಮವಾಗಬೇಕು ಎಂಬ ವಾದಕ್ಕೂ ಸಂಬಂಧವಿದೆ. ಇದು ಬಲಿಷ್ಠರು ಮಾತ್ರ ಬದುಕಬಹುದು, ಸ್ಪರ್ಧಿಸಲಾಗದ ದುರ್ಬಲರಿದ್ದರೆ ಅವರು ಚರಿತ್ರೆಯಿಂದ ನಿರ್ಗಮಿಸುವುದು ನೈಸರ್ಗಿಕ ನ್ಯಾಯ ಎಂಬ ಧೋರಣೆಯ ಫಲವೂ ಆಗಿದೆ. ಶ್ರೀಯವರ ಮಾತಲ್ಲಿ ಹೇಳಬೇಕಾದರೆ, ಸರಸ್ವತಿಯು ‘ಊರ ಕಿವಿಗೆಲ್ಲ ಹತ್ತಿಯಿಟ್ಟು, ಒಬ್ಬನಿಗೆ ವೀಣೆ ಹೇಳಿದ’ ಹಾಗಾಗಿದೆ. ಲಾಭಗಳಿಕೆಯನ್ನು ದೊಡ್ಡ ಮೌಲ್ಯವಾಗಿ ಬಿತ್ತುತ್ತಿರುವ ಮಾರುಕಟ್ಟೆಯ ಚೌಕಟ್ಟಿನಲ್ಲಿ, ರೈತರು ಮತ್ತು ಜನಭಾಷೆಗಳು ಪೆಟ್ಟು ತಿನ್ನುವುದು ಸಹಜ. ಈ ಪೆಟ್ಟಿನ ಬಾಸುಂಡೆ ಮರೆಮಾಚುವುದಕ್ಕೇ ಭಾವನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದೂ ಅನಿಸುತ್ತಿದೆ. ಕರ್ನಾಟಕದಲ್ಲೆಗ ಕಾಣುತ್ತಿರುವ ವೈರುಧ್ಯವನ್ನು ಗಮನಿಸಬೇಕು: ಕನ್ನಡ ಮತ್ತು ಕನ್ನಡಿಗರ ಹೆಸರಲ್ಲಿ ವಿಶ್ವವಿದ್ಯಾಲಯ, ಪ್ರಾಧಿಕಾರ, ಅಕಾಡೆಮಿ, ಭುವನೇಶ್ವರಿ ಪ್ರತಿಮೆ, ಥೀಮ್ಪಾರ್ಕ್ ಮುಂತಾದವು ಸ್ಥಾಪನೆ ಆಗುತ್ತಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ಬಂದಿದೆ; ಆದರೆ ಕನ್ನಡದ ಶಾಲೆಗಳು ವರ್ಷವರ್ಷ ಕಣ್ಮುಚ್ಚುತ್ತಿವೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬ ನೀತಿಯನ್ನು ಜಾರಿಗೆ ತರಲು ಆಗುತ್ತಿಲ್ಲ. ಕನ್ನಡ ಮಾತು ನಿಜವಾಗಿಯೂ ತಲೆಯೆತ್ತುವಂತೆ ಮಾಡಬಲ್ಲ ಚರ್ಚೆ ಮತ್ತು ಖಚಿತ ಕಾರ್ಯಕ್ರಮಗಳೇ ಇಲ್ಲವಾಗಿವೆ. ಬದಲಿಗೆ ಸಾಂಸ್ಕೃತಿಕ ಉತ್ಸವಗಳು ಜರುಗುತ್ತಿವೆ. ಈ ಉತ್ಸವಗಳನ್ನು ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ತಮ್ಮ ಸಾಧನೆಯ ಗರಿಯನ್ನಾಗಿ ತಲೆಗೆ ಸಿಕ್ಕಿಸಿಕೊಳ್ಳುತ್ತಿವೆ. ಅಕ್ರಮ ಸಂಪತ್ತನ್ನು ಗಳಿಸಿ ಗುಡ್ಡೆ ಹಾಕಿಕೊಂಡವರೂ ಉತ್ಸವಗಳ ಮೂಲಕ ನಾಡನ್ನು ಮುನ್ನಡೆಸುವ ದ್ರಷ್ಟಾರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಕಹಿ ವಾಸ್ತವದ ಮುಖವನ್ನು, ನಿಜವಾಗಿ ನಾಡು ನುಡಿಯ ಪ್ರೀತಿಯಿಂದ ಉತ್ಸವಗಳಲ್ಲಿ ಭಾಗವಹಿಸುವ ಜನರ ಭಾವನಾತ್ಮಕತೆಯನ್ನು ಗೌರವಿಸುತ್ತಲೇ ಮನಗಾಣಬೇಕಿದೆ.

ಇಂತಹ ಹೊತ್ತಲ್ಲಿ ಜನರಿಂದ ರಾಜರ ಗುಲಾಮನೆಂದು ಬೈಸಿಕೊಂಡ ಶ್ರೀಯವರ ನೆನಪಾಗುತ್ತಿದೆ. ಅವರು ತಮ್ಮ ಪ್ರಭುನಿಷ್ಠೆಯನ್ನು ಎಂದೂ ಮುಚ್ಚುಮರೆ ಮಾಡಲಿಲ್ಲ. ಅವರು ದೊರೆಗಳು ಕೊಟ್ಟ ‘ರಾಜಸೇವಾಸಕ್ತ’ ಎಂಬ ಚಿನ್ನದ ಪದಕವನ್ನು ಕ್ಲೋಸ್ ಕಾಲರಿನ ಕಪ್ಪು ಕೋಟಿನ ಮೇಲೆ, ಎದೆಯ ಮೇಲೆ ಕೂರುವಂತೆ ಧರಿಸಿ ಮುಗುಳ್ನಗುತ್ತಿರುವ ಫೋಟೊ ಜನಪ್ರಿಯವಾಗಿದೆ. ಆದರೆ ಅವರ ಪ್ರಭುತ್ವನಿಷ್ಠೆ, ಜನತೆಯ ಭಾಷೆಗೂ ಅದರಲ್ಲಿ ಹುಟ್ಟಲಿರುವ ಸಾಹಿತ್ಯಕ್ಕೂ ಅನ್ಯಾಯ ಎಸಗಲಿಲ್ಲ. ಬದಲಿಗೆ ಸಾಹಿತ್ಯವು ಆಸ್ಥಾನದಲ್ಲಿ ಕೂತ ಪಂಡಿತರಿಗಲ್ಲ. ನಾಡಿನ ಮಕ್ಕಳಿಗೆ ಮಹಿಳೆಯರಿಗೆ ಒಕ್ಕಲಿಗರಿಗೆ ಬರೆಯಬೇಕು ಎಂದು ಅವರು ಮತ್ತೆಮತ್ತೆ ತಮ್ಮ ಉಪನ್ಯಾಸದಲ್ಲಿ ಹೇಳುತ್ತಾರೆ; ಸರಳವಾದ ಕನ್ನಡದಲ್ಲಿ ಬರೆಯಬೇಕು ಎಂದು ವಿನಂತಿಸುತ್ತಾರೆ. ‘ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ’, ‘ಕನ್ನಡದ ಪುನರುಜ್ಜೀವನ’ ಎಂಬ ಅವರ ಲೇಖನಗಳ ಉದ್ದೇಶವೂ ಇದೇ ಆಗಿತ್ತು. ಅವರ ಪ್ರಕಾರ, ಮಾತು ತಲೆಯೆತ್ತುವುದು ಎಂದರೆ, ಮಾತುಗರು ತಲೆಯೆತ್ತುವುದು ಎಂತಲೇ ಅರ್ಥ.

ಜಾಗತಿಕ ಬಂಡವಾಳವಾದವೂ ಪ್ರಭುತ್ವಗಳೂ ಮತೀಯವಾದವೂ ವಿಚಿತ್ರವಾಗಿ ಏಕೀಭವಿಸಿರುವ ಈ ಹೊತ್ತಲ್ಲಿ, ಕನ್ನಡದ ಕಷ್ಟವು ಭಾರತದ ಎಲ್ಲ ಜನಭಾಷೆಗಳ ಕಷ್ಟವೂ ಆಗಿರುವಂತಿದೆ. ಸಮಸ್ಯೆ ಎಲ್ಲಿದೆ? ದೇಶೀಯವಾದ ಭಾಷೆ ಮತ್ತು ವೃತ್ತಿ ಕುಶಲತೆಗಳನ್ನು ನಾಶಮಾಡುವ ಆರ್ಥಿಕ ನೀತಿಯನ್ನು ಮನೆಯೊಳಗೆ ಬಿಟ್ಟುಕೊಂಡು, ಅವುಗಳ ಪರಿಣಾಮ ಮಾತ್ರ ಬೇರೆಯಾಗಬೇಕು ಎಂದು ಅಪೇಕ್ಷಿಸುತ್ತಿರುವುದರಲ್ಲಿಯೊ? ಅಥವಾ ಜನಭಾಷೆಗಳು ಸಾರ್ವಜನಿಕ ಜೀವನದ ಹಲವು ವಲಯಗಳಲ್ಲಿ ಬಳಕೆಗೊಳ್ಳುವಂತಹ ಹಾದಿಗಳನ್ನು ಹುಡುಕಲು ಅಸಮರ್ಥವಾಗಿರುವುದರಲ್ಲಿಯೋ? ಈಗ ಕನ್ನಡ ಮಾತು ತಲೆಯತ್ತುವ ಸ್ವರೂಪವು, 1911ನೇ ಇಸವಿಯಲ್ಲಿ ಇದ್ದುದಕ್ಕಿಂತ ಬದಲಾಗಿದೆ, ನಿಜ. ಆದರೆ ಅದು ತಲೆಯೆತ್ತಬೇಕಾದ ಪರಿ ಮಾತ್ರ ಶ್ರೀಯವರ ಕಾಲಕ್ಕಿಂತಲೂ ಹೆಚ್ಚು ಜಟಿಲವಾಗಿದೆ ಮತ್ತು ತುರ್ತಿನದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.