ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಿ

Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

1) “ಹೊತ್ತು ಮುಳಿಗಿದ್ರೂ ಬರ್ಲಿಲ್ಲಾ ನಿನ್ ಸುಪುತ್ರಿ. ಯಾವನ್ಜೊತಿಗೋ ಓಡೋದ್ಲೇನೋ. ಬೋಸೂಡಿಗೆ ಹರೇವು ಉಕ್ಕಿ ಹರ್ದೈತಿ. ನನ್ ಹೊಟ್ಯಾಗ್ ಹೆಂಗ್ ಹುಟ್ಟಿದ್ಲೋ. ಲಗ್ನಕ್ಕೆ ತಲಿಯಾಡ್ಸಿ ಈಗ ಮಾಯ ಆಗ್ಬಿಟ್ಲು. ಕಾಲೇಜ್ ಬಿಟ್ ಎಲ್ಡ್ ತಿಂಗ್ಳಾತಂತೆ. ನನ್ ಕಣ್ಣಿಗೇ ಮಣ್ಣೆರ್ಚಿ ಹಾರ್ಕಂಡ್ಯಾಳ ಲೌಡಿ... ಇವ್ಳು ಹಿಂಗೇಂತ ಗೊತ್ತಿದ್ರೆ ಕಾಲ್ಮುರ್ದು ಮೂಲ್ಯಾಗೆ ಕೂರುಸ್ತಿದ್ದೆ. ಹೋಗು ಹುಡ್ಕಿ ಎಳ್ಕಂಬಾ... ಏನ್ ಮಕಾ ನೋಡ್ತಿ. ಅವ್ಳನ್ನ ಸಿಗ್ದು ತೋರ್ಣ ಕಟ್ಲಿಲ್ದಿದ್ರೆ ನಮ್ಮಪ್ಪಂಗೆ ಹುಟ್ಟಿಲ್ಲ ನಾನು..”

ವದರಾಡುತ್ತಿದ್ದ ಹೆಂಡತಿಯ ಆವೇಶಕ್ಕೆ ಸಂಗಪ್ಪ ಹೆದರಿಬಿಟ್ಟಿದ್ದ. ಹೊಟ್ಟೆಯಲ್ಲಿ ಹುಟ್ಟಿದ ಮಗಳನ್ನು ಸಿಗಿದು ತೋರಣ ಕಟ್ಟುವಂತಹ ಕಟುಕ ಹೆಂಗಸೇ ಇವಳು ಅಂದುಕೊಂಡು, ದೀರ್ಘ ನಿಡುಸುಯ್ದು ಚಪ್ಪಲಿ ಮೆಟ್ಟಿಕೊಂಡು ಕತ್ತಲಿಗೆ ಮುಖಮಾಡಿ ನಡೆದೇಬಿಟ್ಟ. ಆರೋಗ್ಯ ಇಲಾಖೆಯಲ್ಲಿ ಗುಮಾಸ್ತನಾಗಿ ನಿಯತ್ತಿನಿಂದ ಸರ್ವೀಸು ಪೂರೈಸಿದವನಿಗೆ ಜೀವನವೇ ಮುಗಿದುಹೋದಂತಹ ದಿಗಿಲು. ಸಾಲ ಸಿಕ್ಕಿದ್ದೇ ವರ್ಗಾ ಮಾಡಿಸಿಕೊಂಡು ಮಾಯವಾಗಿದ್ದ ಮೇಲಾಧಿಕಾರಿ ಸೋಮಲಿಂಗಪ್ಪ.

ಸಾಲಕ್ಕೆ ಶ್ಯೂರಿಟಿ ಸಹಿ ಹಾಕಿದ್ದ ತಪ್ಪಿಗೆ ಬ್ಯಾಂಕು ಸಂಗಪ್ಪನ ಮೂರು ತಿಂಗಳ ಸಂಬಳ, ಪೆನ್ಷನ್ ಹಣ ಕಬಳಿಸಿತ್ತು. ಹೆಂಡತಿಗೆ ಸುಳಿವು ನೀಡದೇ ನಿಭಾಯಿಸಲು ಹೆಣಗಿದವನಿಗೆ ಧೈರ್ಯಕ್ಕೆ ನಿಂತ ಮಗಳು, ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿಕೊಂಡು, ಗುಪ್ತವಾಗಿ ರೇಷನ್ನು-ಹಾಲು-ತರಕಾರಿ ಖರ್ಚನ್ನು ನಿಭಾಯಿಸತೊಡಗಿದ್ದಳು. ಮೋಸಕ್ಕೆ ಮೆತ್ತಗಾದ ಅಪ್ಪನ ಪರವಾಗಿ ದನಿಯೆತ್ತಲು ಬ್ಯಾಂಕಿಗೂ ಹೋಗಿ...
‘‘ಸಾಲ ಕೊಡ್ಬೇಕಾರೆ ಸೋಮ್ಲಿಂಗಪ್ಪೋರ್ದು ಆಸ್ತಿಪಾಸ್ತಿ ಕಾಗ್ದಪತ್ರನೆಲ್ಲ ತಕಂಡೀರಲ್ಲ. ಅದ್ರಾಗೇ ಸಾಲ ಚುಕ್ತಾ ಮಾಡ್ಕಳ್ರಿ. ನಂಬ್ಕೆಗಂತ ಸೈ ಮಾಡ್ದವ್ರ ಜೀವ ಯಾಕ್ ತಿಂತೀರ?”– ಎಡಗೈಯಾಡಿಸಿ ಮುಖಕ್ಕೊಡೆದಂತೆ ಮಾತಾಡಿದ್ದೆ ಸಿಟ್ಟಿಗೆದ್ದ ಆಫೀಸರ್ರು...

‘‘ಸರ್ವೀಸು ಮುಗ್ಸಿ ಮುದ್ಕ ಆದ್ರೂ ಬುದ್ಧಿ ಬರ್ಲಿಲ್ವೇನಪ್ಪಾ? ಮಗ್ಳನ್ನ ಕರ್ಕಂಡ್ಬಂದೀಯ ದಬಾಯ್ಸೋಕೆ. ಲಾಯರ್ ಇಟ್ಟು ಹೋರಾಡ್ರಿ. ಆಗ್ಲಿಲ್ಲಾಂದ್ರೆ ಸೈಡ್ ಬಿಸ್ನೆಸ್ ನೋಡ್ಕಂಬಿಡ್ರಿ. ಬೇರೆ ದಾರಿನೇ ಇಲ್ಲ. ಸೋಮಲಿಂಗಪ್ಪ ಭಾಳ ಜನ್ರಿಗೆ ಮೂರ್ನಾಮ ಎಳ್ದು ಶಿವನ್ಪಾದ ಸೇರ್ಕಂಡ. ಸಾಲಕ್ಕೆ ಸಹಿ ಹಾಕ್ಬೇಕಾದ್ರೆ ನೀನೆಲ್ಲೋಗಿದ್ಯಮ್ಮ? ಈಗ ಬಂದೀಯಲ್ಲ ರೋಫ್ ಹಾಕೋಕೆ”. ಇಂದಿಗೂ ಅಪ್ಪ-ಮಗಳ ನಿದ್ರೆ ಕೆಡಿಸುತ್ತಿದ್ದುದು ಈ ಮಾತುಗಳೇ. ‘ಸೈಡ್ ಬಿಸ್ನೆಸ್’ ಎನ್ನುವಾಗ ಅವನು ಕಣ್ಣು ಹೊರಳಿಸಿದ ರೀತಿ ನೆನೆನೆನೆದು ಕುದ್ದುಹೋಗುತ್ತಿದ್ದಳು.

ವಾರದೊಳಗೆ ಪತ್ರ-ಫೋನು-ಫ್ರೆಂಡ್ಸ್ ಹೆಲ್ಪ್ ಬಳಸಿ ಓಡಾಡಿ ಸೋಮಲಿಂಗಪ್ಪನ ಊರು ಮುಟ್ಟಿ ಅವನ ಮಗ ಲಿಂಗರಾಜನ ಕಾಲಿಗೆ ಬಿದ್ದು, ಬಿಡದೇ ಅವನ ಕರೆತಂದಿದ್ದಳು. ‘‘ತಪ್ಪಾಗೇತಿ, ಒಪ್ಗೋತೇನ್ರಿ. ಕೋರ್ಟ್-ಕೇಸು ನಮ್ಮಂಗಾದ್ರೆ ಸೈಟು ಮಾರಿ ಸಾಲ ತೀರಿಸ್ತೇನ್ರಿ. ಅಪ್ಪನ್ ನೌಕ್ರಿ ಸಿಗೂದು ಇನ್ನೂ ತಡ ಅದ” ಅಂದು ತಿಂಗಳ ಸಂಬಳದಷ್ಟು ಹಣ ಕೊಟ್ಟು ಹೋಗಿದ್ದ. ಅಂದಿನಿಂದ ತಾಯಿ ದಿನಾ ಚೆಂಬಿನೊಂದಿಗೆ ಬಯಲಕಡೆಗೆ ಹೋದಾಕ್ಷಣ ಕಾಯಿನ್‌ಬಾಕ್ಸಿಗೆ ಹೋಗುತ್ತಿದ್ದ ಸಂಧ್ಯಾ ಲಿಂಗರಾಜನ ಭರವಸೆಯ ವಾರ್ತೆಯೊಂದಿಗೆ ವಾಪಸ್ಸಾಗುತ್ತಿದ್ದಳು. ಆದರೆ ಈ ಅಪರಾತಪರಾದ ಸುದ್ದಿಯಿಲ್ಲದ ಅವಳಮ್ಮ ಒಂದಿನ ರುದ್ರಚಂಡಿಯವತಾರ ತಾಳಿ...

‘‘ಪಿಂಚ್ಣಿ ಹಣಾ ಬರಾದ್ಯಾವಾಗ ಈ ಸಂಧಿ ಮದ್ವಿ ಮಾಡಾದ್ಯಾವಾಗ ಗೊತ್ತಾಗಿಲ್ಲ. ಇವ್ಳು ಮಳ್ಳಿಯಂಗೆ ಏನೋ ಮಸಲತ್ತು ಮಾಡಕತ್ತಾಳ. ಹುಡ್ಗಿ ಕೈತಪ್ಪಿ ಹೋತಂದ್ರ ಇಸಾ ಕುಡ್ದ್ ಸಾಯಾದೊಂದೇ ಬಾಕಿ. ನಿನ್ ಪಿಂಚ್ಣಿ ದುಡ್ ಯಾಕ ಬರವಲ್ದೂಂತ ಇಚಾರ ಮಾಡಾಕ ನಾನ ಆಪೀಸಿಗ ಬರ್ಲಾ... ನೀನ ಸರ‍್ಯಾಗಿ ಇಚಾರ ಮಾಡ್ತಿಯಾ... ನಿನ್ದೇನ್ ಯವಾರ ನಡದೈತೀಂತ ಗೊತ್ತಾಗ್ತೈತಿ” ಅಂತಾ ಗುಡುಗಿದ್ದಳು.
ಇವೊತ್ತು-ನಾಳೆ, ಇನ್ನೊಂದ್ವಾರ, ಕ್ಲಾರ್ಕು ರಜೆ, ರೆಕಾರ್ಡ್ ಬಂದಿಲ್ಲಂತೆ– ಅಂತಾ ಸುಳ್ಳಿನ ಹುರಿ ಹೊಸೆಯುತ್ತಿದ್ದವ ಹೆಂಡತಿಯ ಈ ಧಮಕಿಗೆ ಪತರಗುಟ್ಟಿಹೋದ.

ಇತ್ತ ಲಿಂಗರಾಜನಿಂದ ಬರುತ್ತಿದ್ದ ಅಷ್ಟಿಷ್ಟು ಮನಿಯಾರ್ಡರು ನಿಂತವು, ಫೋನು ಬಂದಾದವು. ತಂದೆ-ಮಗಳು ಕೆಟ್ಟ ನಿರ್ಧಾರಗಳೆಡೆ ಮುಖಮಾಡಿದ್ದೇ... ಅಪ್ಪನ ನೌಕ್ರಿ ಗಿಟ್ಟಿಸಿದ ಲಿಂಗರಾಜ ಪೇಡೆಯೊಂದಿಗೆ ಪಾರ್ಕಿನಲ್ಲಿ ಹಾಜರಾಗಿದ್ದ.
‘‘ಕೇಸು ನಮ್ಮಂತೇನೋ ಆತ್‌ರಿ ಸರ. ಆದ್ರೆ ಸಾಲ್ದೋರು ಬಿಡ್ಬೇಕಲ್ರಿ. ಎಲ್ರೂ ನಿಮ್ಹಂಗೆ ಛಲೋ ಮನ್ಸರು ಇರ್ತಾರೇನ್ರಿ. ಎಲ್ಲಾ ಹರ್ಕಂಡ್ ತಿಂದ್ಹಾಕ್ಬಿಟ್ರು... ನಮ್ಹತ್ರ ಇನ್ನೇನೂ ಉಳ್ದಿಲ್ರಿ. ಈ ನೌಕ್ರಿ ಒಂದ್ ಬಿಟ್ಟು. ತಂಗ್ಯಾರ್ ಲಗ್ನಾ ಮಾಡ್ಬೇಕ್ರಿ... ಹಿಂಗ್ ಹೇಳ್ತೀನಂತ ಬ್ಯಾಸ್ರ ಮಾಡ್ಕಬ್ಯಾಡ್ರಿ... ಸಂಧ್ಯಾ ಲಗ್ನಾನೇ ನಿಮ್ಗ ದೊಡ್ಡ ತಲಿಬ್ಯಾನಿಯಾದ್ರ... ಅವ್ರನ್ನ ನಾನು ಲಗ್ನ ಅಕ್ಕೀನ್ರಿ. ರೊಕ್ಕ ಇಲ್ದಿದ್ರೂ ಪ್ರೀತಿ ಇರ್ತಾತಲ್ರಿ. ಅಪ್ಪನಂಗೆ ಮಾಡೂದಿಲ್ರಿ. ನನ್ನ ನಂಬ್ರಿ...’’

ಅಪ್ಪನ ಸಲೀಸಾಗಿ ನಂಬಿದ ಸಂಗಪ್ಪ ಈಗ ಮಗನನ್ನೂ ನಂಬಿದ್ದ. ಆಗಲೇ ಲಿಂಗರಾಜನ ತಾಯಿಯೂ ಮೊಬೈಲಿನಲ್ಲಿ ‘ಛಲೋವಾತ್ ತಗೋರಿ, ಲಗೂನ ವಾಲ್ಗ ಊದ್ಸಾನ್ರಿ...’ ಅಂದಿದ್ದಳು. ಅಂತೂ ಹೀಗೊಂದು ಸಂಬಂಧದ ಬಗ್ಗೆ ರಾತ್ರಿ ಅಳುಕಿನಿಂದಲೇ ಸಂಗಪ್ಪ ಹೆಂಡತಿಗೆ ಹೇಳಿದ್ದೇ ಇನ್ನೇನು ಗೊರಕೆಹೊಡೆಯುವವಳು ಹುಚ್ಚೆದ್ದು ಕೂತು, ‘ಬಾಂಡೆಸಾಮಾನು-ಕೊಡಾದು-ತಗಳ್ಳಾದು ಭಾಳ ಇರ್ತೈತಿ. ಚೀಟಿ ಬರೀರಿ’ ಅಂತಾ ಶುರುವಿಟ್ಟುಕೊಂಡಿದ್ದಳು. ಬೈಗುಳ ಕೂಗಾಟ ಮಾಯವಾಗಿ ರೊಟ್ಟಿ ಬಡಿಯುವ ಸದ್ದೊಂದೇ ಮನೆ ತುಂಬ.

ಮಾತುಕತೆಗೆ ಮುಂದಿನ ತಿಂಗಳ ಒಳ್ಳೆ ಲಗ್ನಕ್ಕಾಗಿ ಕಾಯುತ್ತ ಬದುಕು ಹಳಿಯ ಮೇಲೆ ಬಂದಂತೆ ಬದುಕು ಸಮಾಧಾನವಾಗಿ ಸಾಗುತ್ತಿರಬೇಕಾದರೆ... ಜೀವನವೆಲ್ಲಾ ತಂದೆಯಂತೆ ನ್ಯಾಯ-ನೀತಿಯನ್ನು ನೆಚ್ಚಿಕೊಂಡು ಬಂದಿದ್ದ ಸಂಧ್ಯಾಗೆ ಒಮ್ಮೆಲೆ ತಾಯಿಯಂತೆ ರೋಷಾವೇಷ-ಸೇಡಿನ ಗುಣಕ್ಕೆ ಬಲಿಯಾಗಿ...

2) ಅಂದುಕೊಂಡಂತೇ ಆಗಿದೆ. ಕಶ್ಯಪ್ ಬದಲಾಗಿದ್ದಾನೆ. ಏಳು ತಿಂಗಳಿಂದ ಸರಿಯಿಲ್ಲ. ಜೀವವೇ ಆಗಿದ್ದ ಹೆಂಡತಿಯೇ ಬೇಕಿಲ್ಲ. ಸ್ನಾನ-ಶೇವ್-ಡ್ರೆಸ್ ಅಷ್ಟಕಷ್ಟೇ. ಮನಸ್ಸು ಬೇರೆಲ್ಲೋ ನೆಟ್ಟಿದೆ, ಗಾಢವಾಗಿ. ಡ್ಯೂಟಿ ಐದೂವರೆಗೆ ಮುಗಿದರೂ ಮನೆಗೆ ಬರುವುದು ಹತ್ತಕ್ಕೆ. ಮುಂಬೈ ಟ್ರೈನಿಂಗ್ ಹೋಗುವವರೆಗೂ ಚೆನ್ನಾಗೇ ಇದ್ದ. ನಿನ್ನ ಬಿಟ್ಟು ಹೋಗಲಾರೆ ಎಂದು ಹಟಕ್ಕೆ ಬಿದ್ದವನ ಬೈದು ಕಳಿಸಿದ್ದು ನಾನೇ ಅಲ್ಲವೆ...

ಎಲ್ಲ ಸಹಿಸಿಕೊಳ್ಳಬಹುದು.. ಆತನ ಕಂಜೂಸಿತನ, ಮಾತಿನಲ್ಲಿನ ವ್ಯಂಗ್ಯ, ಉಸಿರ ದುರ್ನಾತ... ಆದರೆ ನಿರ್ಲಕ್ಷ್ಯ? ದಿನಾ ಸಂಜೆಗೆ ಮಲ್ಲಿಗೆ, ವಾರಕ್ಕೊಮ್ಮೆ ಮೂವಿ, ತಿಂಗಳಿಗೊಮ್ಮೆ ಟ್ರಿಪ್... ಎಲ್ಲವನ್ನೂ ಮರೆತುಬಿಟ್ಟಿದ್ದಾನೆ. ಪರವಾಗಿಲ್ಲ... ಟ್ರೈನಿಂಗ್ ನಂತರ ಪ್ರೊಮೋಷನ್ ಆಗಿದೆ. ವರ್ಕ್‌ಪ್ರಶರ್ ಅರ್ಥವಾಗುತ್ತೆ. ಬಟ್... ನಮ್ಮ ಮ್ಯಾರೇಜ್ ಆನಿವರ್ಸರಿ ಇವೊತ್ತು... ಇದನ್ನು ಮರೆತಿದ್ದಾನೆಂದರೆ...

ಮೊನ್ನೆ ಅಕಸ್ಮಾತ್ ಮೊಬೈಲ್ ಕೇಳಿದ್ದೇ ಬೆವೆತು ಬಿಟ್ಟ. ಮೊಬೈಲ್‌ ಕದ್ದು ನೋಡಿದರೆ ಲಾವಣ್ಯ ಎಂಬ ನಂಬರಿಗೆ ಮೂರು ಬಾರಿ ಕರೆ! ಕಳ್ಳ ಸಿಕ್ಕುಬಿದ್ದಿದ್ದ. ಆಗಾಗ್ಗೆ ಸೆಕೆಂಡ್ ಹ್ಯಾಂಡ್ ಪದ ಬಳಸುತ್ತಿರುತ್ತಿದ್ದ... ಸಹಜವಾಗಿ. ಈಗ ಅದು ಅರ್ಥಪೂರ್ಣವಾದ ನಿರ್ಧಾರದಂತೆ ಕಂಡುಬರುತ್ತಿದೆ. ಕಾಡಿಬೇಡಿ ಹಿಂದೆ ಬಿದ್ದು ಒಮ್ಮೆಲೆ ವಿಮುಖನಾದನಲ್ಲ. ನನ್ನ ಹಣೆಬರಹವೇ ಸರಿಯಿಲ್ಲ.  ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವ ಕಾರಣವಿಲ್ಲದೇ ದೂರಸರಿಯುತ್ತಿರುವನೇಕೆ? ಮಕ್ಕಳಾಗಲಿಲ್ಲವೆಂದೆ? ಸೌಂದರ್ಯ ಕರಗಿತೆಂದೆ? ನಿರೀಕ್ಷಿಸಿದಷ್ಟು ಐಷಾರಾಮಿ ಲೈಫ್‌ಸ್ಟೈಲ್ ಇನ್ನೂ ಸಿಕ್ಕಲಿಲ್ಲವೆಂದೆ? ಅಥವಾ... ವಿಧವೆಯನ್ನು ಮದುವೆಯಾದೆನೆಂದೆ?

ನಾನು ಮತ್ತೆ ಮದುವೆಯಾಗಬಾರದಿತ್ತು. ಕಾರ್ತಿಕ್ ಸತ್ತು ಮೂರು ತಿಂಗಳಿಗೇ ಮುಗಿಬಿದ್ದವನಲ್ಲವೇ ಇವನು. ಗರ್ಭಪಾತದ ಆಘಾತವೂ ಸೇರಿಕೊಂಡು ಜೀವನದಲ್ಲಿ ಆಸೆ ಸಂಪೂರ್ಣ ತೀರಿಹೋಗಿತ್ತು. ನಿಸ್ತೇಜ ದೇಹ-ಮನಸ್ಸು, ಕ್ರಾನಿಕ್ ಡಿಪ್ರೆಷನ್. ಸಿಕ್ಕಾಪಟ್ಟೆ ಆಸ್ತಿ ಮಾಡಿಕೊಂಡ ನನ್ನ ಹೆತ್ತವರಿಗೋ ವಂಶವನ್ನು ಬೆಳೆಸುವ ಹಟ. ಕಾರ್ತಿಕನ ಸ್ನೇಹಿತನಂತೆ ಎಂಬ ಸುಳ್ಳಿನ ಮೂಲಕ ಇವನೆಡೆ ನಾನು ಮೃದುವಾಗುವಂತೆ ಮಾಡಿದ್ದರು. ಅಪಾರ ಕಾಳಜಿ, ಮಾತಿನ ಜಾಣ್ಮೆ, ತುಂಟ ಕಣ್ಣೋಟಕ್ಕೆ ನನಗೂ ಸೋಲದಿರಲು ಆಗಲೇ ಇಲ್ಲ. ಬದುಕು ಪ್ರಿಯವಾಯಿತು.

ಮೊದಲಿನ ಪ್ರೇಮ-ದಾಂಪತ್ಯದ ನೆನಪನ್ನೇ ಅಳಿಸುವಂತಹ ಮೋಹದ ಮಳೆಯಲ್ಲಿ ತೋಯಿಸಿದ್ದ. ಜೀವನದ ಮಹತ್ತರ ಬದಲಾವಣೆ ಅದು. ಎರಡನೆಯ ದಾಂಪತ್ಯದ ಮೊದಲ ವರ್ಷ ಬುದ್ಧಿ ಮಾಡಿದ್ದ ಕೆಲಸವೊಂದೇ. ಇಬ್ಬರ ಗುಣಗಳನ್ನು ತಾಳೆನೋಡುವುದು. ಅನುಮಾನವೇ ಇಲ್ಲ, ಕಶ್ಯಪನದೇ ಜಯ. ‘ಕಶ್ಯಪಂಗೆ ದುಡ್ಡಿನ್ ಬೆಲೆ ಗೊತ್ತಿದ್ಯಮ್ಮ... ನಿನ್ನ ಎಲ್ಲಿದ್ರೂ ಸಾಕ್ತಾನೆ. ಕಾರ್ತಿಕ್‌ನ ಹಾಗೆ ಈತ ಮುಂಗೋಪಿಯಲ್ಲ, ಸಹನಶೀಲ’ ಅಪ್ಪನ ಹೊಗಳಿಕೆ ಬೇರೆ. ಅಮ್ಮನೂ ‘ಇಂಥವ್ನ ಪಡೆಯೋಕೆ ಪುಣ್ಯ ಮಾಡಿದ್ದೀಯಮ್ಮ’ ಅಂದಿದ್ದಳು. ಎಲ್ಲ ಗುಣಗಳು ಈಗಲೂ ಅವನಲ್ಲಿವೆ. ಆದರೆ ಒಳಗೇನು ಕುದಿಯುತ್ತಿದೆ– ತಿಳಿಯದಂತೆ ಮೌನಿಯಾಗಿದ್ದಾನೆ. ಈವರೆಗೆ ಯಾರೂ ಅವನ ತಿರಸ್ಕರಿಸಲಿಲ್ಲ, ಅವನ ಮೂಲದ ಬಗ್ಗೆ ಚಕಾರವೆತ್ತಿಲ್ಲ... ಏನೂ ಕೆಟ್ಟದ್ದು ಘಟಿಸಲಿಲ್ಲ..

ಅವನಿಷ್ಟದ ಮೇಲೆಯೇ ನಾನು ಮತ್ತೆ ಕೆಲಸಕ್ಕೆ ಸೇರಿಕೊಂಡದ್ದಲ್ಲವೇ... ಅವನಿಷ್ಟದ್ದೇ ಎಲ್ಲ. ನಾನು ಉಡುವ ಸೀರೆ-ಅಡುಗೆ-ಕಾರು. ಆದರೂ... ಎಷ್ಟು ನೆನಪಿಸಿಕೊಂಡರೂ ಅವನ ಈ ಅವತಾರಕ್ಕೆ ಕಾರಣ ಹೊಳೆಯುತ್ತಿಲ್ಲ. ಈ ಹೆಸರೊಂದು ನಿನ್ನೆಯಿಂದ ವಿಷದಂತೆ ಹರಡುತ್ತಿದೆ. ಲಾ..ವ..ಣ್ಯ! ವೈಯಾರದಿಂದ ಬಳುಕುವ ಮಾಟಗಾತಿ.. ಜೋರಾಗಿ ಬಿಕ್ಕತೊಡಗಿದ್ದ ಪೂರ್ವಿ ಬಟ್ಟೆಯಲ್ಲೇ ಶವರ್ ಕೆಳಗೆ ನಿಂತು ತಾಸಿನ ಮೇಲಾಗಿತ್ತು.

ಟೆಲಿಫೋನ್ ನಿಲ್ಲದೆ ಹೊಡೆದುಕೊಳ್ಳತೊಡಗಿದ್ದೇ ಒಮ್ಮೆಲೇ ಉದ್ರೇಕಗೊಂಡವಳು ಈವರೆಗಿನ ಅನಿಷ್ಟ ಯೋಚನೆಗಳನ್ನೆಲ್ಲ ಒಮ್ಮೆಲೆ ಸರಿಸಿ ಮುಖವರಳಿಸಿ ನಿಂತಳು. ‘ಪೂರ್ವಿ ನಿನ್ನ ಟೆಸ್ಟ್ ಮಾಡ್ದೆ ಕಣೇ... ಎಷ್ಟ್ ಬೇಗ ಫೂಲಾದ್ಯೇ... ವಿಶ್ ಯು ಅ ವಂಡರ್‌ಫುಲ್ ಮ್ಯಾರೇಜ್ ಆನಿವರ್ಸರಿ..’ ಅಂತಾನೆ ಅಂದುಕೊಂಡು ಹಸಿಮೈಯಲ್ಲೇ ಹೊರಬಂದು ಫೋನು ಕಿವಿಗಿಟ್ಟರೆ...
ಹಲೋ.. ಸೂರ್ಯೇಶ್? ಎಂಬ ಹೆಣ್ಣು ದನಿ! ಕುಸಿದುಕೂತಳು.

ನೀವ್ಯಾರ್ರೀ? ಸಾವರಿಸಿಕೊಂಡ ಪೂರ್ವಿ ದನಿಯೇರಿಸಿದ್ದೇ ರಿಸೀವರ್ ಇರಿಸಿದ ಸದ್ದು.
ಓಹೋ! ಲಾವಣ್ಯಳ ಸೂರ್ಯೇಶ್ ಇಷ್ಟೊತ್ತಿಗೆಲ್ಲಿ ಮನೆಯಲ್ಲಿರ್ತಾನೆ? ಇವತ್ತು ಕಾರು ಬೇರೆ ಒಯ್ದಿದ್ದಾನೆ. ಉದ್ದೇಶಪೂರ್ವಕವಾಗಿ ಲ್ಯಾಂಡ್‌ಲೈನಿಗೆ ಕಾಲ್ ಬಂದಿದೆಯೆಂದರೆ ಕಶ್ಯಪ್ ಪರೋಕ್ಷವಾಗಿ ನನಗೆ ಎಲ್ಲವನ್ನೂ ಅರ್ಥೈಸುತ್ತಿದ್ದಾನೆ...
ಒಮ್ಮೆಲೆ ಚಿಗಿತುಕೊಂಡ ಯೋಚನೆಗಳಿಗೆ ಅವಳ ಥಂಡಿ ಮೈ ಬಿಸಿಯಾಯಿತು. ಈ ಲಾವಣ್ಯ ಹಳೆಯ ಪ್ರೇಯಸಿಯೇ? ಬ್ಲಾಕ್‌ಮೇಲ್ ಹೆಂಗಸೇ? ಇರಬಹುದು... ಆದರೆ ಈ ಸೂರ್ಯೇಶ... ಹೊಸ ಹೆಸರು, ಹೊಸ ವೇಷವಾ? ಛಿ!

3) ಕೆಕೆಎಂ ಲ್ಯಾಬ್ ಇದ್ದದ್ದು ಬಸ್-ರೈಲ್ವೆ ನಿಲ್ದಾಣ ಕೂಡುವಲ್ಲಿ, ಸಂತೆ-ಆಸ್ಪತ್ರೆಯ ಹಿಂದಿನ ದಾರಿಯಲ್ಲಿ. ಹಾಗಾಗಿ ಅದು ಲ್ಯಾಬೋ ಆಸ್ಪತ್ರೆಯೋ ವೇಶ್ಯಾಗೃಹವೋ ಶವಾಗಾರವೋ ಹೊಳೆಯದಂತೆ ಗುಪ್ತರೋಗಗಳ ಪೋಸ್ಟರ್‌ಗಳನ್ನು ಅಂಟಿಸಿಕೊಂಡು ಮುರುಕು ಬಾಗಿಲ ಇಟ್ಟುಕೊಂಡು ಉಚ್ಚೆವಾಸನೆಯ ಮೈದಾನದ ಮೂಲೆಯಲ್ಲಿತ್ತು. ಹಿಂದಿದ್ದ ಸಿನಿಮಾ ಟಾಕೀಸ್ ಹೆಸರಿನಿಂದಲೇ ಗುರುತಿಸಲ್ಪಡುತ್ತಿತ್ತು. ಹಿಂದಿನ ರೋಡಿನ ಮೂಲಿಮನಿ ಡಾಕ್ಟರನೇ ಈ ಲ್ಯಾಬ್ ನಡೆಸುತ್ತಿದ್ದ ಕಾರಣ ರೋಗಿಗಳಿಗೆ ನಾನಾನಮೂನಿ ಟೆಸ್ಟ್‌ಗಳನ್ನು ಬರೆದು ಬೆಚ್ಚಿಬೀಳಿಸಿ ತನ್ನ ಜೇಬು ಬೆಚ್ಚಗೆ ಮಾಡಿಕೊಳ್ಳುತ್ತಿದ್ದ. ಅವನ ಪ್ರೇಯಸಿ ಸಿಂಗಾರಮ್ಮನ ಸುಪರ್ದಿಗೆ ಈ ಲ್ಯಾಬು, ಟೆಸ್ಟುಗಳು ಇದ್ದು, ಆಕೆ ಸಾಕ್ಷಾತ್ ದೇವರಂತೇ ವರ್ತಿಸುತ್ತಿದ್ದಳು.

‘ಯೋ.. ಯಪ್ಪಾ ಏನಂಗ್ ಮ್ಯಾಲೇ ಬರ್ತಿ.. ರೊಕ್ಕ ಏಟದಾವ? ಈ ಕೊನೀ ಟೆಸ್ಟ್ ಏನಂತಾ ಖಬರೈತಿಲ್ಲೋ.. ಏಡ್ಸ್ ರೋಗದ್ದು! ಕೇಳೀಯಿಲ್ಲೋ.. ಇದೇನಾರ ಹೌದಂತ ಬಂತೋ.. ನಿನ್ ಕತಿ ಮುಗೀತ್ ಅಂತ ತಿಳ್ಕ.. ಜಾಸ್ತಿ ನಿಗರ್ಬೇಡ..’
ಅತ್ತ ಲಾಜಿನಲ್ಲಿ ‘ಕೆಲಸ ಮುಗಿಸಿಕೊಂಡು’ ಬಂದವರೆಲ್ಲ ರೋಗಗಳ ಪೋಸ್ಟರ್‌ಗೆ ಹೆದರಿ, ಆಸ್ಪತ್ರೆ ಕಂಡೊಡನೆ ಮುಗ್ಗರಿಸಿಬಿದ್ದು ಒಳಹೊಕ್ಕರೆ, ಬಾಣ್ಲಿತಲೆಯ ಡಾ. ಮೂಲಿಮನಿ ಸ್ಟೆತಾಸ್ಕೋಪೂ ಮುಟ್ಟಿಸದೇ ‘ಮೊದ್ಲು ಇದೆಲ್ಲಾ ಟೆಸ್ಟ್ ಮಾಡಿಸ್ಕಂಬರ್ರಿ...’ ಅಂದು ಸ್ಲಿಪ್ಪಿನಲ್ಲಿ ಸಿಕ್ಕಾಪಟ್ಟೆ ಟಿಕ್ ಹೊಡೆದು ಲ್ಯಾಬಿಗೆ ಸಾಗಹಾಕುತ್ತಿದ್ದ.

ಲ್ಯಾಬ್ ರೂಪದ ಭೂತಬಂಗಲೆಯೊಳಗೆ ಕಳೆದ ತಿಂಗಳಿಂದ ದೊಡ್ಡ ಟೆಸ್ಟಿಂಗ್ ಮಶೀನೂ ಸ್ನೇಹ ಎಂಬ ಮಲೆಯಾಳಿ ನರ್ಸೂ ಸಹಾಯಕಿಯಾಗಿ ರಾಣಿ ಎಂಬ ಬಡಕಲು ಹುಡುಗಿಯೂ ಸೇರಿಕೊಂಡು, ಮೇನ್‌ರೋಡಿನ ಫೇಮಸ್ ನರ್ಸಿಂಗ್‌ಹೋಮ್ ಲ್ಯಾಬ್‌ನ ಕಳೆಗುಂದಿಸಿಬಿಟ್ಟಿತ್ತು. ಮರ್ಯಾದಸ್ತ ಶ್ರೀಮಂತರೂ ಗುಪ್ತವಾಗಿ ಗುಪ್ತರೋಗಗಳ ಫಲಿತಾಂಶ ಪಡೆಯಲು ಇಲ್ಲಿಗೇ ಧಾವಿಸತೊಡಗಿದ್ದರು. ಗುಂಗುರುಗೂದಲ ಸ್ನೇಹಳಿಗೆಲ್ಲಿ ಮೂಲಿಮನಿ ಮರುಳಾಗಿ ತನ್ನ ಬಾಯಿಗೆ ಮಣ್ಣು ಹಾಕುತ್ತಾನೋ ಎಂದು ರಾಣಿಯನ್ನೇ ಹೆಚ್ಚು ನೆಚ್ಚಿಕೊಂಡಿದ್ದಳು ಸಿಂಗಾರಮ್ಮ. ರೋಗಿಗಳ ಕಣ್ಣು-ಕೈ ಅಷ್ಟೇ ಕಾಣುವ ಸಣ್ಣ ಕೌಂಟರ್ ಮೂಲಕ ದುಡ್ಡು-ರಸೀತಿ-ರಿಪೋರ್ಟುಗಳ ವಿಲೇವಾರಿ ಮಾಡುತ್ತ ರಾಣಿ ಕಳೆಗುಂದಿದ ಮುಖ ಹೊತ್ತು ಕೂತಿರುತ್ತಿದ್ದಳು.

ಇಂತಹ ಲ್ಯಾಬಿನ ಸಾಮಾನ್ಯ ದಿನಚರಿಯೊಳಗೆ ಮತ್ತೊಂದು ಬೆಳಗು ಹರಿದು, ಒಂಬತ್ತಕ್ಕೆ ಬಂದ ಸಿಂಗಾರಮ್ಮ ಕೀಲಿ ತೆಗೆದು ಊದಗಡ್ಡಿ ಬೆಳಗಿ ಮಶೀನುಗಳನ್ನೆಲ್ಲ ಆನ್ ಮಾಡಿ ನಿನ್ನೆಯ ನೀರಸ ವ್ಯಾಪಾರಕ್ಕೆ ಮೂಲಿಮನಿಗೆ ತರಾಟೆ ತೆಗೆದುಕೊಂಡು ಗರಂ ಆಗಿ ಕೂತಿದ್ದಳು. ತಡವಾಗಿ ಬಂದ ಸ್ನೇಹ ಮಿಣ್ಣಗೆ ಫೈಲ್‌ಗಳಲ್ಲಿ ಕಣ್ಣಾಡಿಸುತ್ತಾ ಕೂತರೆ ತಾಸಿನ ನಂತರ ಬೆವರ ಮೈಯಲ್ಲಿ ಎಡಗೈ ಬೀಸುತ್ತಾ ಒಳಬಂದ ರಾಣಿ ಸಿಂಗಾರಮ್ಮನ ರುದ್ರಾವತಾರ ಕಂಡು ಥರಥರ ನಡುಗತೊಡಗಿದಳು.

ಸಿಂಗಾರಮ್ಮ ಬಾತ್‌ರೂಂ ಹೊಕ್ಕಿದ್ದೇ ರಾಣಿ ರಿಪೋರ್ಟ್ಸ್ ವಿಲೇವಾರಿ ಫೈಲ್ ತೆರೆಯುತ್ತಿದ್ದಂತೆ... ಸುರೇಶ್ ಹೆಸರಿನ ರಿಪೋರ್ಟ್ ಈಗಷ್ಟೇ ಡಿಲಿವರಿಯಾಯಿತೆಂದೂ ಆ ವ್ಯಕ್ತಿ ಸಂತೋಷದಲ್ಲಿ ಐನೂರರ ನೋಟು ಕೊಟ್ಟು ಕೆನ್ನೆ ಚಿವುಟಿ ಹೋದನೆಂದೂ ಸ್ನೇಹ ಸಂಭ್ರಮದಲ್ಲಿ ಹೇಳಿದ್ದೇ... ಗಾಬರಿಬಿದ್ದ ರಾಣಿ ಮತ್ತೊಂದು ನಂಬರಿಗೆ ಪ್ರಯತ್ನಿಸಿ ಸೋತು ಉಗುರುಕಚ್ಚುತ್ತಾ ನಿಂತು, ಕೊನೆಗೆ ತಲೆಕೆರೆದುಕೊಳ್ಳುತ್ತ ಹೊರಗೋಡಿದಳು.

‘‘ಏನಾಯ್ತೇ” ಅಂತಾ ದಡಬಡಾಯಿಸಿ ಬಂದ ಸಿಂಗಾರಮ್ಮ ಸ್ನೇಹಳಿಗೆ ದಬಾಯಿಸಿದ್ದೇ ‘‘ನಂಗೂ ಗೊತ್ತಿಲ್ಲ ಅಮ್ಮಾವರೇ” ಅಂದು, ನಿನ್ನೆಯ ದಿನಚರಿಯಲ್ಲಿನ ಸ್ವಾರಸ್ಯಕರ ಅಂಶವನ್ನು ನೆನಪಿಸಿಕೊಳ್ಳತೊಡಗಿದಳು. ಟೆಸ್ಟು-ರಿಪೋರ್ಟೆಂದು ಯಾರೂ ಬಾರದಿದ್ದಕ್ಕೆ ಸ್ನೇಹ ರಾಣಿ ಮಾತಾಡುತ್ತಾ ಕೂತಿದ್ದಾಗ ಕಾರೊಂದು ಬಂದದ್ದೇ ಬೆಚ್ಚಿ ಬಗ್ಗಿ ನೋಡಿದ್ದರು. ಇಳಿದ ವ್ಯಕ್ತಿ ಅಂಜಿಕೆಯಿಂದ ತನ್ನ ಟೆಸ್ಟಿಂಗ್ ರಿಕ್ವೆಸ್ಟ್ ಸ್ಲಿಪ್ಪನ್ನು ಕಿಂಡಿಯಲ್ಲಿ ತೂರಿಸಿದ್ದ. ಹೆಸರು, ಕಾಂಟ್ಯಾಕ್ಟ್ ನಂಬರ್ ಹೇಳಲು ತಡವರಿಸಿದಾಗ ರಾಣಿ ಸ್ನೇಹಳಿಗೆ ಸನ್ನೆ ಮಾಡಿದ್ದಳು.

ಅವನ ಬೆಕ್ಕಿನ ಕಣ್ಣನ್ನಷ್ಟೇ ನೋಡಿ ಹೆದರಿಕೊಂಡ ಸ್ನೇಹ ‘ಒಳಾಗೆ ಬನ್ನಿ’ ಎಂದು ಕರೆದೊಯ್ದು ಕಂಪಿಸುತ್ತಲೇ ಬ್ಲಡ್ ಸ್ಯಾಂಪಲ್ ತೆಗೆದುಕೊಂಡಿದ್ದಳು. ಈಕೆಗೂ ಆತನಿಗೂ ಬೆವರು. ‘ಆಯತು.. ನೀವಿನ್ನು ಹೊರಡಿ’ ಎಂದು ಕಷ್ಟಪಟ್ಟು ಕನ್ನಡದಲ್ಲಿ ಉಲಿದು ಅವನ ರೂಮಿನಿಂದ ಹೊರಗೆ ಸಾಗಹಾಕುವಷ್ಟರಲ್ಲಿ ಕರೆಂಟು ಹೋಗಿ ಯೂಪಿಎಸ್ಸು ಕೈಕೊಟ್ಟು ಕತ್ತಲೆಗೆ ಒಮ್ಮೆಲೆ ಚೀರಿಕೊಂಡಿದ್ದಳು. ‘ಏನಾಯ್ತು?’ ಎಂದು ರಾಣಿ ಬರುವಷ್ಟರಲ್ಲಿ ಸುಧಾರಿಸಿಕೊಂಡಿದ್ದ ಸ್ನೇಹ, ರಿಸಲ್ಟಿಗೆ ಅವಸರಿಸುತ್ತಿದ್ದವ ಒಮ್ಮೆಲೆ ಕಣ್ಣಿಗೆ ಕಾಣದಂತೆ ಮಾಯವಾಗಿದ್ದು ಕಂಡು, ಭೂತವೇ ಎಂದು ಹೆದರಿಕೊಂಡಿದ್ದ ಕಥೆಯ ಪ್ರಸ್ತಾಪವಾಯಿತು.

ಎಲ್ಲಾ ಕೇಳಿಸಿಕೊಂಡ ಸಿಂಗಾರಮ್ಮ ಕೊಕ್ಕಾಡಿಸಿ ನಕ್ಕು ‘‘ಸರಿಸರಿ.. ಇವ್ಳೆಲ್ಲೋದ್ಲು?” ಅಂದು ಹೊರಗೆ ಬಂದು ಬಗ್ಗಿ ನೋಡಿದಳು. ‘‘ಎನ್ಗೂ ಗೊತ್ತಿಲ್ಲ ಅಮ್ಮಾವರೇ... ನಿನ್ನೆ ರಾತ್ರೆ ಹೋಗುವಾಗ ರಾಶಿ ಕೋಪ ವಂದಿತ್ತು ಅವಳಿಗೆ” ಅಂದು ತಕ್ಷಣ ರಿಪೋರ್ಟ್ ಡಿಸ್ಪ್ಯಾಚ್ ಫೈಲ್ ತೆರೆದು ನೋಡಿ ಬೆಚ್ಚಿದಳು. ‘‘ರಿಪೋರ್ಟ್ ಮಿಸ್ ಡಿಲೆವರ್ಡ್!” ಅಂದು ಕಂಪಿಸಿದಳು. ಕವರಿನ ಮೇಲಿನ ಹೆಸರು, ಒಳಗಿನ ಹೆಸರು ಬೇರೆ.. ಒಂದು ಸ್ಪೆಲ್ಲಿಂಗಷ್ಟೇ! ಗಾಬರಿಯಲ್ಲಿ ಮೂಲಿಮನಿಗೆ ಫೋನಾಯಿಸಿದ ಸಿಂಗಾರೆಮ್ಮ ಅವನ ಅಭಯ ಸಿಕ್ಕಮೇಲೆ ಇನ್ನಷ್ಟು ದರ್ಪದಿಂದ ‘‘ಯಾವನ್ ಬತ್ತಾನೆ ಬರ್ಲಿ.. ನೀನ್ ಕೆಲ್ಸ ನೋಡು” ಅಂದು ಎಲೆಯಡಿಕೆ ಜಗಿಯತೊಡಗಿದಳು.

4) ‘‘ನಿಮ್ ಈಯರ್‌ಫೋನ್ ಕಿತ್ತಾಕಿ.. ನಿಮ್ಗೇನಾಗ್ಬೇಕೂಂತ ಹೇಳಿ.. ಬಾಗ್ಲಾಕೋ ಟೈಮಲ್ಲಿ ತಲೆತಿಂತೀರರ್ಲೀ”.
‘‘ಅಯ್ಯೋ ಶಿವ್ನೇ.. ನಾನಿನ್ನೂ ಬಂದ್ ಒಂದ್ನಿಮ್ಷಾನೂ ಆಗಿಲ್ಲ.. ತಲೆತಿನ್ನೋದೆಲ್ಲಿ ಬಂತು”.
‘‘ಸರಿಸರಿ.. ಹೇಳಿ.. ನನ್ತಲೇನೆ ಇವೊತ್ತು ಸರಿಯಿಲ್ಲ”.
‘‘ಬೆಳಗ್ಗೆ ಹಾಳುಹೊಟ್ಟೇಲಿ ಕ್ಯಾರೆಟ್‌ರಸ ಕುಡೀರಿ.. ಸರಿಹೋಗುತ್ತೆ”.
‘‘ಅಯ್ಯೋ ನಿಮ್ದೊಳ್ಳೆ ಕಾಟ”.

‘‘ಹೋಗ್ಲಿಬಿಡ್ರಿ.. ಹಂಗ್ಯಾಕೆ ಹಣೆ ಚಚ್ಕೋತೀರ. ವಿಷ್ಯಕ್ಕೆ ಬರ್ತೀನಿ. ನೀವೊಂದು ಮದ್ವೆ ಮಾಡ್ಸಬೇಕಿತ್ತು”.
‘‘ರಿಜಿಸ್ಟರ್ ಆಫೀಸಿನಲ್ಲಿ ಮತ್ತಿನ್ನೇನು ಹೆರಿಗೆ ಮಾಡ್ಸೋಕಾಗುತ್ತಾ. ಗಂಡು-ಹೆಣ್ಣು ಎಲ್ಲಿದಾರೆ?”.
‘‘ಹೆಣ್ಣು ಹಿಂದೆ ಬೆಂಚಿನ ಮೇಲೆ ಕೂತಿದೆ”.
‘‘ಅಯ್ಯೋ! ಮೈನರೇನ್ರೀ? ಏಳ್ರೀ ಮೇಲೆ!”.
‘‘ಹಿಂಗಾಗುತ್ತೇಂತಾನೇ ಹುಡ್ಗಿ ಸ್ಕೂಲಿನ ದಾಖಲೆ ತಂದೀನಿ ನೋಡಿ”.
‘‘ಹುಡ್ಗಿ ರಾಜಸ್ತಾನದ್ದಾ... ಏನ್ ಕಿಡ್ನ್ಯಾಪಾ? ಹುಡ್ಗ ಎಲ್ಲಿ?”.
‘‘ಕಣ್‌ಕಾಣಲ್ವೇನ್ರೀ.. ನಿಮ್ಮೆದ್ರುಗೇ ಕುಂತಿದೀನಿ ಗುಂಡ್ಕಲ್ಲಿನಂಗೆ”.

‘‘ತಮಾಷೆ ಮಾಡ್ಬೇಡಿ.. ಹುಡ್ಗನ್ನ ಕರ್ಕೊಂಡ್ ಬನ್ನಿ”.
‘‘ಸತ್ಯ ಹೇಳ್ತಾ ಇದ್ದೀನಿ.. ಗಂಡು ನಾನೇ. ಅದೂ.. ಬಿಸ್ನಸ್ಸೂಂತ ದೇಶಾಂತರ ತಿರುಗ್ದೆ.. ಬಿಂದಾಸ್ ಆಗಿ ಲೈಫ್ ಎಂಜಾಯ್ ಮಾಡ್ದೆ.. ಇನ್ಮೇಲೆ ಸೆಟ್ಲ್ ಆಗೋಣಾಂತ.. ನಂಗಿನ್ನೂ ಫಿಫ್ಟೀಫೈವ್ ಅಷ್ಟೇ!”.
‘‘ಈ ಏಜಲ್ಲಿ ಮ್ಯಾರೆಜ್ ಬೇಕಿತ್ತಾ?”
‘‘ಎಷ್ಟ್ ದಿನಾ ಹೋಟ್ಲು ಊಟ ಮಾಡೂಂತೀರಿ? ಮನೆ ಊಟಾನು ಮಾಡೋದ್ ಬ್ಯಾಡ್ವಾ. ಹ್ಹಿಹ್ಹಿ”.

‘‘ಏನ್ ಡಬ್ಬಲ್ ಮೀನಿಂಗಾ? ಗಂಡಸ್ರೇ ಇಷ್ಟು ಥೂ. ಹುಡ್ಗಿ ಏನೂ ಮಾತಾಡ್ತಾನೇ ಇಲ್ಲ.. ಫೋರ್ಸ್‌ಡ್ ಮ್ಯಾರೇಜಾ?”.
‘‘ಅಯ್ಯೋ ಇಲ್ರೀ! ಅವ್ಳಿಗೆ ಕನ್ನಡ ಬರಲ್ಲ.. ಬಿಸ್ನೆಸ್ ಮೇಲೆ ಬಿಕಾನೇರ್ ದಾಟಿ ಹೋಗ್ಬೇಕಾದಾಗೆಲ್ಲಾ ಇವ್ರ ಡಾಬಾದಾಗೆ ಉಳೀತಿದ್ದೆ.. ನಾನಂದ್ರೆ ಜೀವ ಬಿಡ್ತಾಳೆ.. ಅವ್ಳಿಗೇನು ಕಮ್ಮಿ ಖರ್ಚು ಮಾಡಿಲ್ಲ.. ಹೆತ್ತವರ್ರೇ ಕಳ್ಸಿ ಕೊಟ್ಟಿದ್ದಾರೆ.. ಬೇಕಾದ್ರೆ ಕೇಳ್ರಿ.. ಅವ್ರೂ ಏನ್ಮಾಡ್ತಾರೆ ಪಾಪ.. ಏಳು ಜನ ಹೆಣ್ಮಕ್ಳು.. ಯಾರ್ನಂತ ಮದ್ವೆ ಮಾಡ್ತಾರೆ.. ನಂದು ಎರಡು ಉಂಗ್ರ ಅವ್ರತ್ರಾನೇ ಇದೆ”.
‘‘ಏನಾದ್ರೂ ರೋಗ-ಗೀಗ? ಈ ಹುಡ್ಗಿ ಜೊತೆಗೂ ಆಗ್ಹೋಯ್ತಾ”.

‘‘ಹೆಹೆಹೆ.. ಹಂಗೇನಾದ್ರೂ ಆಗಿದ್ರೆ ನಿಮ್ಮುಂದೆ ಹಿಂಗ್ ಕುಂತಿರ್ತಿದ್ನಾ? ಅವ್ಳು ಇನ್ನೂ ಫ್ರೆಶ್ಶು”.
‘‘ಏನೋ.. ನಿಮ್ ಕೇಸು ಕಾಂಪ್ಲಿಕೇಟೆಡ್. ನನ್ಕೈಲಾಗೊಲ್ಲ. ಇಷ್ಟೆಲ್ಲ ಡಾಕ್ಯುಮೆಂಟ್ಸ್ ತಗೊಂಡು ನಾಳೆ ಬನ್ನಿ”.
‘‘ನಾಳೆ ಮದ್ವೆ ಮಾಡಿಸ್ತೀರ? ನಿಮ್ಗೆಷ್ಟೋ ಬೇಕೋ ಕೇಳಿ ನಾಚ್ಕೋಬೇಡಿ..”.
‘‘ನಾಳೆ ನಾನು ಪರ್ಸನಲ್ ಕೆಲ್ಸದ ಮೇಲೆ ರಜೆ ಹಾಕ್ತಿದ್ದೀನಿ.. ನನ್ ಮೇಲಾಧಿಕಾರಿ ಇರ್ತಾರೆ.. ನಿಮ್ದೇನಿದೆಯೋ ಸೆಟ್ಲ್ ಮಾಡ್ಕೊಂಡ್ಬಿಡಿ. ಇಂಥವ್ನೆಲ್ಲ ನನ್ ತಲೆಗೆ ಕಟ್ಬೇಡಿ”.

‘‘ನೀವೇ ಹ್ಯಾಂಡಲ್ ಮಾಡಿದ್ರೆ ಚೆನ್ನಾಗಿತ್ತು.. ಇವ್ಳು ನನ್ನ ನಂಬಿ ಊರ್ ಬಿಟ್ಟು ಬಂದಿದಾಳೆ.. ಇವ್ಳಿಗೆ ಅನ್ಯಾಯ ಆಗ್ಬಾರದಲ್ಲಾ.. ಮದ್ವೆ ಲೇಟಾಗಿ ಅಕಸ್ಮಾತ್ ನಾನು ಗೊಟಕ್ ಅಂದ್ರೆ ಆಸ್ತಿಯೆಲ್ಲಾ ಕಂಡೋರ ಪಾಲಾಗ್ಬಿಡುತ್ತೆ.. ಹೆಂಗ್ಸಿನ್ ಕಷ್ಟಕ್ಕೆ ಹೆಂಗ್ಸೇ ಆಗೊಲ್ಲ ಅಂದ್ರೆ ಇದ್ಯಾವ ನ್ಯಾಯ?”.
‘‘ಮೊಮ್ಮಗಳ ವಯಸ್ಸಿನ ಹುಡ್ಗಿ ಜೊತೆ ಮದ್ವೆ.. ಇದು ನ್ಯಾಯನಾ? ನಾನ್ಸೆನ್ಸ್!”.

‘‘ಏನ್ರಿ ಏನೇನೋ ಮಾತಾಡ್ತೀರಿ. ನಿಮ್ಕೈಲಾಗ್ದಿದ್ರೆ ಬಿಡ್ರಿ.. ದುಡ್ಡಿಗೆ ಬದ್ಲಾಗ್ದೇ ಇರೋ ರೂಲ್ಸೇ ಇಲ್ಲ ಇಂಡಿಯಾದಲ್ಲಿ.. ನಿಮ್ದೂ ಲೈಫೂ ನೆಟ್ಟಗಿಲ್ಲಂತೆ.. ಆಗ್ಲೆ ಪ್ಯೂನ್ ಹೇಳ್ತಿದ್ದ.. ಸಂಸಾರ ಮಾಡ್ತೀನಿ ಹೆಲ್ಪ ಮಾಡ್ರಿ ಅಂದ್ರೆ ಹಾದರ ಮಾಡೋಕೆ ರೂಮ್ ಕೊಡ್ರಿ ಅಂದ್ಹಂಗಾಯ್ತಾ ನಿಮ್ಗೆ”.


5) ‘‘ಸ್ವಲ್ಪ ಕೇಳ್ರಿ.. ಫೋನ್ ಇಡ್ಬೇಡಿ.. ಈ ನಂಟಸ್ತಿಕೆಯಿಂದ ದೀಡ್ ಲಕ್ಷ ವರದಕ್ಷಿಣೆ ಸಿಗ್ತದ್ರೀ.. ಅದ್ರಲ್ಲಿ ಇಪ್ಪತ್ತೈದ್‌ಸಾವ್ರ ನಿಮ್ದಾ.. ನಿಮ್ ಪ್ರಾಬ್ಲಮ್ಮೂ ಕಮ್ಮಿಯಾಕ್ಕತ್ರಿ. ಇಬ್ರೂ ಸಾಲ್ದಾಗೇ ವದ್ದಾಡಿರೋರು.. ಲಗ್ನಾ ಆದ್ರೂ ಅದೇ ಜಂಜಾಟ ಅಲ್ಲೇನ್ರೀ.. ಬೇಜಾರಾಗ್ಬೇಡ್ರೀ.. ಅವ್ವ ಸೊಲ್ಪ ಹೊತ್ತು ಮುಂಚೆ ಇದೇ ನಂಬರ್ರಿಗೆ ಪೋನ ಹಚ್ಚಿದ್ಲರೀ.. ತಾನಾ ಸುದ್ದಿ ನಿಮ್ಗ ಮುಟ್ಟಸ್ತೇನಿ ಅಂತಾ.. ಇದು ರಕ್ತಮಲ ಟೆಸ್ಟ್ ಮಾಡೋ ಲ್ಯಾಬು.. ಸಂಧ್ಯಾ ಅನ್ನಾವ್ರು ಯಾರೂ ಇಲ್ಲಾ.. ಅಂತಾ ಹೇಳಿದ್ದೇ.. ಹಾರ್ಯಾಡಾಕತ್ತಾಳ್ರೀ.. ಅವ್ಳಂತೂ ನಿಮ್ ಸಂಬಂಧ ಒಪ್ತಿರ್ಲಿಲ್ಲ ಬಿಡ್ರಿ.. ರೊಕ್ಕ ಕೊಡ್ತೇನಲ್ರೀ.. ನಿಮ್ಗೂ ಚಲೋವಾತು.. ನಿಮ್ಗ ಚಲೋ ಗಂಡ್ ನಾನಾ ಹುಡುಕ್ತೇನ್ರಿ..”.

ಬದಲಾದ ರಿಪೋರ್ಟು ಪಡೆದ ಸುರೇಶನ ಹುಡುಕಿಕೊಂಡು ಅಲೆದಾಡಿ ಹೈರಾಣಾಗಿ ಬಂದಿದ್ದವಳಿಗೆ ಬದುಕೇ ಬದಲಾದಂತಹ ಆಘಾತ ಫೋನ್ ಕರೆ ಸ್ವೀಕರಿಸಿದ ಮೇಲೆ ಆಗಿತ್ತು. ಕುಸಿದು ಕೂತವಳೆಡೆ ಬಂದ ಸಿಂಗಾರಮ್ಮ– ‘‘ಏನಾತೇ ರಾಣಿ? ಅವನಲ್ದಿದ್ರ ಇನ್ನೊಬ್ಬ.. ಹಲ್ಲಿನ್ ಸೆಟ್ ಹಾಕಿಸ್ಕ್ಯಂಡ್ರ ನೀನು ರಾಣಿನೇ... ಅಂದಾಂಗೆ ನಿನ್ನೆಸ್ರು ಸಂಧ್ಯಾರಾಣಿಯೇನು? ಈಟು ದಿನ ಬರೇ ರಾಣಿ ಅಂದಿದ್ದೀ... ಇರ್ಲಿತಗಾ” ಸಮಾಧಾನ ಮಾಡಿದ್ದು ಕಂಡು ಹೌಹಾರಿದ ರಾಣಿ  ಕಂಬನಿಗಣ್ಣಲ್ಲಿ ತಲೆಯಾಡಿಸಿದಳು.

‘‘ಅದಿರ್ಲಿ, ಟೆಸ್ಟ್‌ರಿಪೋರ್ಟ್ ಅದ್ಲುಬದ್ಲಾಗೈತೀಂತ ಹುಚ್ಚಿ ಓಡ್ದಂಗ್ ಓಡ್ತಾರೇನು... ಇಸ್ಕಂಡ್ ಹೋಗಾವ್ರು ಕಣ್ಣೇನು ನೆತ್ತಿಮ್ಯಾಗ ಇಟ್ಕಂಡಿರ್ತಾರೇನು. ಬರ್ತಾರೆ ಬಿಡು.. ನೀನೂ ಲ್ಯಾಬ್ ಬಿಟ್ ಹೊಂಟ್‌ಬಿಟ್ರ.. ಈ ಹೇಲು-ಉಚ್ಚಿವಾಸ್ನಿ ಲ್ಯಾಬ್ನಾಗ ಯಾರತ್ರ ನನ್ ಸಂಕ್ಟಹೇಳ್ಕಳ್ಲಿ”.
‘‘ಅದು ಎಚ್ಚೈವಿ ರಿಪೋರ್ಟು ಮೇಡಂ. ಒಂದು ಪಾಸಿಟಿವ್ ಒಂದು ನೆಗೆಟಿವ್!”.
‘‘ಗೊತ್ತೈತಿ. ಚಿಂತಿ ಬಿಡು. ಇಗಾ ಚಾ ತರ್ಸೀನಿ ಕಣ್ಣೊರ್ಸಕಾ”.

ಇತ್ತ ಗಾಜಿನ ಕೋಣೆಯೊಳಗೆ ಸಮಾಧಾನ ಮಾಡಿ ತಾನೂ ಕಣ್ಣೀರು ಸುರಿಸಿ ಸಿಂಗಾರಮ್ಮ ಸಂಧ್ಯಾರಾಣಿನ ಹೊರಬಿಡುವಷ್ಟರಲ್ಲಿ ಇನ್ನೊಂದೂ ರಿಪೋರ್ಟು ಡಿಲಿವರಿಯಾಗಿಬಿಟ್ಟಿತ್ತು.
ಕಂಪಿಸುವ ಕೈಯಲ್ಲಿ ಬೆವರೊರೆಸಿಕೊಳ್ಳುತ್ತ ರಿಪೋರ್ಟ್ ಪಡೆದ ‘ಸೂರ್ಯೇಶ್’ ಸರಕ್ಕನೆ ಪ್ಯಾಂಟುಜೇಬಿಗೆ ತುರುಕಿಕೊಂಡು, ಸ್ನೇಹಾಳ ವೈಯಾರದ ‘ಬಿ ಹ್ಯಾಪಿ, ಬೀ ಪಾಸಿಟಿವ್ ಸರ್!’ ಎಂಬ ಉದ್ಗಾರಕ್ಕೆ ತನ್ನ ಬೆಕ್ಕಿನ ಕಣ್ಣಗಲಿಸಿ ಇನ್ನಿಲ್ಲದಂತೆ ಬೆದರಿ ಕಾರು ಏರಿ ಭರ್ರನೆ ಹೊರಟುಬಿಟ್ಟನಂತೆ.

6) ‘‘ಹೋಯ್! ಜೋಧ್‌ಪುರ್ ಎಕ್ಸ್‌ಪ್ರೆಸ್ ಹೋಯ್ತಾ?”
ಐದೂವರೆಗೆ ರೈಲ್ವೇಗೇಟಿನಲ್ಲಿ ಕಾಯುತ್ತಿದ್ದ ವ್ಯಕ್ತಿ ಟ್ರಾಕಿನ ಮೇಲೆ ಓಡಿ ಬಂದು ಉಸಿರುತೆಗೆದುಕೊಳ್ಳುತ್ತಿದ್ದವನ ಕೇಳಿದ. ಸುಧಾರಿಸಿಕೊಂಡವನು ‘‘ಏನ್ ಸಾಯೋಕಾ? ಹೋಯ್ ಅಂತೆ ರೆಸ್ಪೆಕ್ಟ್ ಕೊಡು..” ಅಂದ. ದೀರ್ಘ ನಿಡುಸುಯ್ದು.. ‘‘ಸಾರಿ.. ಇಷ್ಟೊತ್ತಿನ ವರ್ಗೂ ಸಾಯೋ ಬಗ್ಗೇನೇ ಯೋಚಿಸ್ತಾ ಬಂದಿದ್ದೆ.. ಈಗ ದೇಶಾಂತರ ಹೋಗ್ಬೇಕೂಂತ ಅನ್ನಿಸ್ತಿದೆ..”– ಇನ್‌ಷರ್ಟ್ ತೆಗೆದು, ಟೈ ಲೂಸು ಮಾಡಿಕೊಂಡು ಅಂತರ್ಮುಖಿಯಾಗಿ ನಿಂತ.

‘‘ನಾನು ದೇಶಾಂತರ ಸುತ್ತಿ ಸಾಕಾಗಿ ಸಂಸಾರ ಮಾಡೋಣಾಂತ ಬಂದೆ... ನೀನು ಸಂಸಾರ ಬಿಟ್ಟು ದೇಶಾಂತರ ಹೋಗ್ತೀನಿ ಅಂತಿದ್ದೀಯ... ಏನು ವಿಚಿತ್ರ..”– ಕುತ್ತಿಗೆಗೆ ಕಟ್ಟಿಕೊಂಡಿದ್ದ ಕರ್ಚೀಫು ಬಿಚ್ಚಿಕೊಂಡು ಮುಖವರೆಸಿಕೊಂಡ ಅಜ್ಜ. ರೈಲು ಹೋದ ದಿಕ್ಕಿನೆಡೆ ನೋಡುತ್ತ... ‘‘ಮದ್ವೆ ಆಗ್ತೀನಂತ ಇಲ್ಲೀವರ್ಗೂ ಬಂದವ್ಳು ಅವ್ಳೂರಿನ್ ಟ್ರೈನ್ ಕಂಡದ್ದೇ ಜೋರಾಗಿ ಕೂಗಾಡಿ ಹಟಮಾಡಿ ಹೋಗೇಬಿಟ್ಲು... ಒಳ್ಳೆ ಆಸ್ತಿ-ಮನಿ ಇತ್ತು... ಸುಖ್ವಾಗಿರ್ಬೌದಿತ್ತು. ಹೆಂಡ್ತಿ ಇದ್ದಂಗಿಲ್ದಿದ್ರೂ ಮಗಳಾಂಗಾದ್ರೂ ಇರ್ಬೌದಿತ್ತು. ಅರ್ಧಹೊಟ್ಟಿ ಉಣ್ಣಾಕೆ ಹೋದ್ಲು... ನನಗೀಗ ಸಾಯ್ಬೇಕನ್ನಿಸಕತ್ತೈತಿ” ಅಂದ.

‘‘ಇದೊಳ್ಳೆ ಕಥೆ.. ಆಸ್ತಿ ಇಟ್ಕೊಂಡ್ಯಾಕೆ ಹೆದ್ರೋದು... ಅವ್ಳಲ್ದಿದ್ರೆ ಇನ್ನೊಬ್ಳು... ಆ ಲಾವಣ್ಯ ಲ್ಯಾಬ್ ಪಕ್ಕದ ಸಂದೀಲಿ ಹೋಗಿ.. ನೂರಿನ್ನೂರು ರುಪಾಯ್ಗೆ ಸಿಕ್ತಾರೆ”.
‘‘ಅಬ್ಬಬ್ಬಾ ಏನ್ ಯೋಚ್ನೆ ಮಾಡ್ತಿಯೋ ತಮ್ಮಾ. ಸಂಸಾರ ಮಾಡ್ಬೇಕೂಂತಿದ್ದವ್ನ ಹಾದರ ಮಾಡೂಂತ ಕಳ್ಸಾಕತ್ತೀ. ನಿನ್ನೆ ರಿಜಿಸ್ಟರ್ ಆಫೀಸ್ ಲೇಡಿ ಹೇಳಿದ್ದು ಇದ್ಕೇ ಏನೋ. ಗಂಡಸ್ರೇ ಇಷ್ಟು ಅಂತಾ. ಮದ್ವೆ ಆಗೋಕ್ಯಾಕೆ ಹೆಲ್ತ್ ಚೆಕಪ್ಪು ಅಂದ್ಕಂಡಿದ್ದೆ. ಆಕೆ ಬಿಗಿಹಿಡೀದಿದ್ರೆ ನಂಗೆ ಈ ರೋಗ ಇರೋದೇ ಗೊತ್ತಾಗ್ತಿರ್ಲಿಲ್ಲ. ಸುರೇಶನ ರೋಗಾನ ಸೂರ್ಯೇಶನಿಗೆ ಲ್ಯಾಬ್ನೋರು ಅಂಟಿಸಿದ್ರೆ ಈ ವಿಧಿ ಸುಮ್ನಿರ್ತತಾ. ಹ್ಞೂಂ. ಅಂತೂ ಎಲ್ಲಾ ಮುಗೀತಪಾ. ಎಂಟೂವರೆಗೊಂದು ವಾಸ್ಕೋ ಎಕ್ಸ್‌ಪ್ರೆಸ್ ಐತೆ.

ಒಂದೊಳ್ಳೆ ಚಿಕನ್ ಬಿರ್ಯಾನಿ, ಒಂದು ಬೀಯರ್ ಹೊಡ್ದು ಹಳಿ ಮೇಲೆ ಕಣ್ಮುಚ್ಚಿ ಮಲಗ್ಬಿಟ್ರೆ ಆಹಾ. ಎಂತಾ ನೆಮ್ದಿ” ಅಜ್ಜ ಒಮ್ಮೆಲೆ ಬಿಕ್ಕತೊಡಗಿದ. ಸುಧಾರಿಸಿಕೊಂಡು ಮತ್ತೆ ಶುರುಮಾಡಿದ. ‘‘ನೀನು ಹುಟ್ಟೋದ್ಕಿಂತ ಮುಂಚೆ ಲಾವಣ್ಯ ಥೇಟ್ರಲ್ಲಿ ಎಂತೆಂಥ ಒಳ್ಳೆ ಸಿನ್ಮಾ ನೋಡಿದ್ವಿ ಗೊತ್ತಾ... ಬಣ್ಣದ ಬದುಕಿಗಿಂತ ಬ್ಲಾಕ್ ಅಂಡ್ ವೈಟ್ ಸಿನ್ಮಾನೇ ಚಲೋ. ನಿಮ್ ಜನರೇಷನ್ ಹುಟ್ಟಿದ್ಮೇಲೇ ಪೋಲಿ ಸಿನ್ಮಾಗೆ ಬೆಲೆ ಬಂದಿದ್ದು... ಆ ಥೇಟ್ರೂ ಹಂಗಾಗೆ ಮುಚ್ತು... ಈಗ ನನ್ ಜೀವ್ನ ಮುಗ್ಸಾಕತ್ತೈತಿ ಅದೇ ಬಿಲ್ಡಿಂಗ್ನಾಗಿರೋ ಲ್ಯಾಬು. ಈಗ ಆ ಲ್ಯಾಬಿನ ಉಬ್ಬಲ್ಲು ಹುಡ್ಗಿ ಹುಡ್ಕಂಡ್ ಬಂದ್ ಅತ್ತಕಂತ ಹೇಳ್ತಾಳ– ‘’ಸಾರ್ ನಿಮ್ದು ಎಚ್ಚೈವಿ ಪಾಸಿಟಿವ್! ರಿಪೋರ್ಟ್ ನಾನ ಮಿಸ್ ಮಾಡೀನಿ. ಕ್ಷಮ್ಸಿ’ ಅಂತಾ. ಮತ್ತ ಹೇಳ್ತಾಳ. ‘ಜೀವಕ್ಕೇನೂ ಅಪಾಯ ಮಾಡ್ಕೋಬೇಡ್ರಿ, ನನ್ನಾಣೆ’ ಅಂತಾ ಹ್ಹಹ್ಹ”.

‘‘ನೀವೇಳಿದ್ರಲ್ಲ ಆ ವಿಧಿ ನನ್ಜೊತೇನೂ ಆಟ ಆಡ್ತು. ಬುದ್ಧೀನೂ ಕಲಿಸ್ತು. ಸೂರ್ಯೇಶ ಅನ್ನೋ ಹೆಸ್ರನಲ್ಲಿ ಬದಲಾದ ರಿಪೋರ್ಟ್ ನೋಡಿ ಸಾಯೋಕಂತ ಹೊರ್ಟೋನು ನಾನು. ಹೆಸರೊಳಗೆ ಹೆಸರು, ಹೆಸರಂತ ಹೆಸರು... ಹೆಸರು ಬುದ್ಧಿ ಕಲ್ಸುತ್ತೆ ಅಂತಾ ಅಂದ್ಕೊಂಡಿರ್ಲಿಲ್ಲ... ಈ ದಿನ ಈ ಕ್ಷಣ ಆ ರಿಪೋರ್ಟ್ ಮಿಸ್ ಮಾಡ್ದ ಹುಡ್ಗಿ, ನೀವು ನನ್ ಕಣ್ ತೆರೆಸ್ದ್ರಿ... ಸಾರಿ, ನಿಮ್ಗೆ ಒರಟಾಗಿ ಮಾತಾಡ್ಬಿಟ್ಟೆ... ಈಗ ನಾನು ಮನೆಗೆ ಹೋಗ್ಬೇಕು ನನ್ಮನೆಗೆ... ಅರ್ಜೆಂಟು...

ನಿಮ್ಮ ಆ ರಿಜಿಸ್ಟರ್ ಆಫೀಸ್ ಸ್ಟ್ರಿಕ್ಟ್ ಲೇಡಿ ಮನೇಲಿ ಕಾಯ್ತಿರ್ತಾಳೆ... ಇವೊತ್ತು ನಮ್ ಆನಿವರ್ಸರಿ... ಆಮೇಲೆ... ಇದು ಎಚ್ಚೈವಿ ರಿಹ್ಯಾಬಿಲಿಟೇಷನ್ ಸೆಂಟರ್ ಅಡ್ರೆಸ್ ನಂಗಂತ ಹುಡುಕಿಕೊಂಡಿದ್ದೆ... ಪ್ಲೀಸ್ ಒಂದ್ಸಾರ್ತಿ ಅಲ್ಲಿಗೆ ಹೋಗಿ. ನಾನಿನ್ನು ಬರ್ತೀನಿ. ಅಂದ್ಹಾಗೆ ಇದು ನನ್ನ ಕಾರ್ಡು... ರಿಯಲ್ ನೇಮ್.. ಒಮ್ಮೆ ಮನೆಗೆ ಬನ್ನಿ..”

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT