ಕಥೆ
ಅರಸೀಕೆರೆಯ ಅಹೋಬಲರಾಯರ ಧರ್ಮಛತ್ರದ ಒಂದು ಮೂಲೆಯ ಕೋಣೆಯಲ್ಲಿ ಸಕೇಶಿ ಸರಸಜ್ಜಿಯ ವಾಸ. ನಿಜ ಹೇಳಬೇಕೆಂದರೆ ಆ ಧರ್ಮಛತ್ರ ಆಕೆಯ ಮನೆತನದ ಕೊಡುಗೆ. ಹತ್ತಿದ ಬೆಂಡೆಕೆರೆಯ ಸುತ್ತಮುತ್ತ ಇದ್ದ ಜಮೀನಿನ ಮೂಲಕವೇ ಧರ್ಮಛತ್ರ ನಡೆಯತ್ತಿದ್ದುದು. ಸಣ್ಣ ವಯಸ್ಸಿನಲ್ಲಿಯೇ ಗಂಡ ತೀರಿಕೊಂಡ. ನಂತರದಲ್ಲಿ ನೆಂಟರಿಷ್ಟರೂ ದೂರವಾದರು. ಆಸ್ತಿಯೂ ಕೈತಪ್ಪಿತು, ಛತ್ರವನ್ನು ಕೂಡ ಯಾರೋ ಲಪಟಾಯಸಿದರು. ಅವರಿವರ ಮನೆಗೆ ಸಂಡಿಗೆ, ಉಪ್ಪಿನ ಕಾಯಿ, ಹಪ್ಪಳ ಮಾಡಿಕೊಂಡು ಜೀವನ ಸಾಗಿಸುವುದು ಅನಿವಾರ್ಯವಾಗಿ ಅಭ್ಯಾಸವಾಗಿತ್ತು, ಸರಸಜ್ಜಿಗೆ.

ಹೀಗಿದ್ದಾಗ ಒಮ್ಮೆ ದೂರದ ಹಿರಿಯ ನೆಂಟರೊಬ್ಬರು ಛತ್ರದಲ್ಲಿದ್ದ ದೇವಸ್ಥಾನದ ವಿಶೇಷ ಪೂಜೆಗೆ ಪುರೋಹಿತರಾಗಿ ಬಂದಿದ್ದರು. ಆಗ ಸರಸಜ್ಜಿಯನ್ನು ಗುರುತಿಸಿ `ಏನು ಸರಸು, ಆಸ್ತಿ ಎಲ್ಲಾ ಕೈಬಿಟ್ಟು ಹೋಯಿತಂತೆ! ಅಯ್ಯೋ ಪಾಪ, ಎಂತಹ ಮನೆತನ ನಿಮ್ಮದು, ಊರಿನವರಿಗೆ ಅದೆಷ್ಟು ಉಪಕಾರ ಮಾಡಿದ್ದರು ನಿಮ್ಮ ಹಿರಿಯರು. ತುಂಬಾ ಅನ್ಯಾಯ, ಹೀಗಾಗಬಾರದಿತ್ತು... ಜೀವನಕ್ಕೆ ಏನು ಮಾಡಿಕೊಂಡಿದ್ದೀ?' ಎಂದು ಕೇಳಿದರು ಎಂಬತ್ತು ವರ್ಷದ ಆ ಹಿರಿಯರು.

`ಎಲ್ಲವು ಹರಿಚಿತ್ತ, ಹಿರಿಯರ ಆತ್ಮ ಇಲ್ಲಿ ಸುಳಿದಾಡುತ್ತಿರುವ ತನಕ ಇರುತ್ತೇನೆ' ಎನ್ನುತ್ತಾ ಪುರೋಹಿತರ ಪಕ್ಕದಲ್ಲಿಯೇ ಅಳುತ್ತಾ ನಿಂತಿದ್ದ ನಾಲ್ಕೈದು ವರ್ಷದ ಹೆಣ್ಣು ಮಗುವನ್ನು ನೋಡಿ `ಇದು ಯಾರದ್ದು?' ಎಂದರು.

`ಅಯ್ಯೋ... ಅದೊಂದು ದೊಡ್ಡ ಕತೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪರಿಮಳ ನಿನ್ನ ಹಿರಿಯಕ್ಕನ ಮೊಮ್ಮಗಳು' ಎನ್ನುತ್ತಾ ಸುಸ್ತಾಗಿ ನಿಂತಿದ್ದ ಮಗುವಿನ ತಲೆ ಸವರಿದರು. `ಇವಳಪ್ಪ, ಅಮ್ಮ ತೀರಿಕೊಂಡ ರೀತಿ ನಿನಗೆ ತಿಳಿದಿರಲಾರದು. ಆ ನಂತರ ನಾನೇ ಇವಳಿಗೆ ಸರ್ವಸ್ವ. ಆಗಾಗ ನನ್ನೊಂದಿಗೆ ಅಲ್ಲಿ ಇಲ್ಲಿ ಬರುತ್ತಾಳೆ. ನಮ್ಮ ಮನೆಯಲ್ಲೂ ಈಗ ಕಿರಿಕಿರಿ ಜಾಸ್ತಿ, ಅವಳನ್ನು ಎಲ್ಲಿಯಾದರೂ ಇರಿಸುವ ಪ್ರಯತ್ನ ಮಾಡುತ್ತಿದ್ದೇನೆ'. ಅವರು ಮಾತನ್ನು ನಿಲ್ಲಿಸುವುದಕ್ಕೆ ಮುಂಚಿತವಾಗಿಯೇ ಸರಸಜ್ಜಿ, `ಅಭ್ಯಂತರ ಇಲ್ಲವಾದರೆ ನನ್ನೊಂದಿಗೆ ಬಿಡಿ' ಎಂದರು. ಸಣ್ಣಪುಟ್ಟ ಕೆಲಸಕ್ಕೆ ಒಂದು ಹುಡುಗಿಯ ಅಗತ್ಯವೂ ಇತ್ತು ಎನ್ನುವುದು ಮನಸ್ಸಿಗೆ ಆ ಕ್ಷಣದಲ್ಲಂತೂ ಬಂದಿರಲಿಲ್ಲ. ಹೀಗೆ ಪರಿಮಳ ಸರಸಜ್ಜಿಯ ಮನೆ ಸೇರಿದಳು.

ದಿನ ಕಳೆದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದ ಪರಿಮಳನ್ನು ಪಕ್ಕದಲ್ಲೆ ಇದ್ದ ಶಾಲೆಯೊಂದಕ್ಕೆ ಸರಸಜ್ಜಿ ಸೇರಿಸಿದ್ದರು. ಪರಿಮಳಳಿಗೆ ಆಗ ಏಳು ವರ್ಷ. ಓದು ಬರಹದಲ್ಲಿ ಆಸಕ್ತಿ ತುಂಬಾನೇ ಇತ್ತು. ಆದರೆ ಸಹಪಾಠಿಗಳ ಅಪಹಾಸ್ಯಕ್ಕೆ ಸದಾ ಗುರಿಯಾಗುತ್ತಿದ್ದ ಕಾರಣದಿಂದಾಗಿ ಮೂರನೇ ತರಗತಿ ಮುಟ್ಟುವುದರೊಳಗೆ ಶಾಲೆ ಬಿಟ್ಟಳು. ಮೂರನೇ ತರಗತಿಯಲ್ಲಿದ್ದಾಗ ಒಮ್ಮೆ ಶಾಲೆಯ ಸಮಾರಂಭಕ್ಕೆ ಸಂಭ್ರಮದಿಂದ ಹೋಗಿದ್ದವಳು ಆಳುತ್ತಾ ಮನೆಗೆ ಬಂದಳು. `ಏನಾಯಿತೇ ಪಮ್ಮಿ... ಹೇಳು, ಶಾಲೇಲಿ ಯಾರಾದರೂ ಅಂದರೇನೇ?' ಎಂದೆಲ್ಲಾ ಪುಸಲಾಯಿಸಿ ಕೇಳಿದರು. ಅವಳೇನು ತುಟಿಪಿಟಕ್ಕೆನಲಿಲ್ಲ. ಮಾರನೆಯ ದಿವಸ ಬೆಳಗ್ಗೆ `ಅಜ್ಜಿ, ಇನ್ಮೇಲಿಂದ ಶಾಲೆಗೆ ಹೋಗಲ್ಲ, ಮನೇಲಿದ್ದು ಎಲ್ಲಾ ಕಲೀತಿನಿ' ಎಂದಳು. ಸರಸಜ್ಜಿ ಎಷ್ಟೇ ಕೇಳಿದರೂ ಕಾರಣ ಮಾತ್ರ ಹೇಳಲೇ ಇಲ್ಲ. `ಹೋಗಲ್ಲ ಅಂದ್ರೆ, ಹೋಗಲ್ಲ' ಅಂತ ಬಿಕ್ಕಿಬಿಕ್ಕಿ ಅತ್ತಳು. `ಸರಿಯಮ್ಮ, ನಿನ್ನಿಷ್ಟ, ನಿನ್ನ ಹಣೇಲಿ ಏನು ಬರಿದಿದೆಯೋ ಏನೋ?' ಎಂದು ಸುಮ್ಮನಾದರು.

ಹೀಗೆ ಮನೆಯಲ್ಲಿದ್ದುಕೊಂಡೇ ಪರಿಮಳ ಅಜ್ಜಿಗೆ ನೆರವಾಗುತ್ತಿದ್ದಳು. ಕೆಲ ದಿನಗಳ ನಂತರ ಪಮ್ಮಿಯ ಶಿಕ್ಷಕಿ ಸರಸಜ್ಜಿಗೆ ಸಿಕ್ಕಿ ಯಾಕಜ್ಜಿ, ಪರಿಮಳ ಹೀಗೆ? ಹುಡುಗಿ ತುಂಬಾ ಜಾಣೆ. ಕೆಲ ವಿಷಯದಲ್ಲಿ ಮಾತ್ರ ಎಡಬಿಡಂಗಿತನ. ಎಡಗೈಲಿ ಬರಿತಾಳೆ, ನೋಡೋರ್ಗೆ ತುಂಬಾ ಹಿಂಸೆ ಆಗತ್ತೆ. ವಾರದ ದಿನಗಳ ಹೆಸರನ್ನು ಕೇಳಿದರೆ ಸಾಕು ತಿಂಡಿಗಳ ಹೆಸರು ಹೇಳ್ತಾಳೆ. ಇವೆಲ್ಲ ವಿಚಿತ್ರ ಅನ್ಸಲ್ವ? ಅವಳು ಹೀಗೆ ಮಾಡೋದ್ರಿಂದ ಮಕ್ಕಳು ನಗ್ತಾರೆ, ಅವಳನ್ನ ಕೆಣಕ್ತಾರೆ. ನನಗೋ ಪ್ರಾಣ ಸಂಕಟ, ಇದರಿಂದಾಗಿಯೇ ತರಗತಿಯಲ್ಲಿ ಸದಾ ಗದ್ದಲ. ಮಖ್ಯೋಪಾಧ್ಯಾಯರು ಕೂಡ ಇದೇ ಕಾರಣವನ್ನಾಗಿಸಿಕೊಂಡು ನನ್ನ ಬೈದಿದಾರೆ ಗೊತ್ತಾ? `ತರಗತಿನಾ ನಿಭಾಯಿಸಕ್ಕೆ ಬರದಿದ್ದರೆ ಕೆಲಸ ಬಿಟ್ಟುಬಿಡಿ' ಅಂತೆಲ್ಲ ಅವರಿಂದ ಅನ್ಸಿಕೊಂಡಿದ್ದೀನಿ ಗೊತ್ತಾ? ಅದೆಷ್ಟು ಸಲ ಮಕ್ಕಳ ಕೈಲಿ ಇವಳ ಮೂಗು ಹಿಡಿಸಿ ಕೆನ್ನೆಗೆ ಹೊಡಿಸಿದ್ದೇನೆ ಎಂದರು.

ಕಳೆದ ವಾರ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಎಂತಹ ಚೇಷ್ಟೆ ಮಾಡಿದಳು ಗೊತ್ತಾ? ಮಕ್ಕಳೊಂದಿಗೆ ವೇದಿಕೆಯಲ್ಲಿದ್ದ ಇವಳು ಎಲ್ಲರೂ ಗುರುವಾರ ಬಂತಮ್ಮ ಎಂದು ಹಾಡುತ್ತಿದ್ದರೇ ಲಾಡು ಬಂತಮ್ಮ ಎನ್ನುವುದೇ? ಹೋಗಲಿ, ಮೆಲ್ಲಗೆ ಹೇಳಿದಳಾ? ಎಲ್ಲರ ಗಮನ ಸೆಳೆಯುವಷ್ಟು ಏರು ಧ್ವನಿಯಲ್ಲಿ ಹಾಡಿದ್ದಳು. ಇಂಪಾಗಿದೆ ಇವಳ ಧ್ವನಿ. ಆದರೇನು ಪ್ರಯೋಜನ? ಅದಕ್ಕೆ ಆಗ ಎಲ್ಲರಿಗೂ ಸಿಟ್ಟುಬಂತು, ನಾಲ್ಕೇಟು ಹಾಕಿದೆವು ಎಂದರು. ಇದೆಲ್ಲ ಮಾತನ್ನು ಅಚ್ಚರಿಯಿಂದ ಕೇಳಿಸಿಕೊಳ್ಳುತ್ತಿದ್ದ ಸರಸಜ್ಜಿಗೆ ಒಮ್ಮೆಲೆ ಸಿಟ್ಟು ಬಂದು, `ಶಾಲೆ ನೆಗೆದು ಬೀಳ್ಲಿ' ಅಂತ ಗೊಣಗುತ್ತಾ ಕಣ್ಣಂಚಿನಲ್ಲಿ ನಿಂತಿದ್ದ ಹನಿಗಳನ್ನು ಒರೆಸಿಕೊಳ್ಳದೇ ಮುನ್ನಡೆದರು.

ಸರಸಜ್ಜಿಗೆ ಪಮ್ಮಿ ಬಗ್ಗೆ ಕೊಂಚ ಆತಂಕವೇ ಆಯಿತು. ಮುಂದೇನು ಗತಿ ಎನ್ನುವುದಕ್ಕಿಂತ, ಈಗೇನು ಮಾಡಬೇಕು ಎನ್ನುವುದೇ ಅವರ ಮನಸ್ಸಿನಲ್ಲಿದ್ದದ್ದು. ಪಮ್ಮಿಗೆ ತನ್ನ ಸ್ಥಿತಿ ಬರಬಾರದು ಎನ್ನುವುದೇ ಅವರ ನಿತ್ಯದ ನಿವೇದನೆ. ಹೀಗೇ ಯೋಚಿಸುತ್ತಾ ಹೆಜ್ಜೆಹಾಕುತ್ತಿದ್ದಾಗ ಕಿರುಚಲು ದನಿಯೊಂದು `ಏನಜ್ಜಿ...ಚೆನ್ನಾಗಿದ್ದೀರಾ? ನಿಮ್ಮ ಮನೇಗೆ ಹೊರಟಿದ್ದೆ' ಎಂದು ಗಮನಸೆಳೆಯಿತು. `ಓ! ಕನಕ. ಏನು ವಿಷಯ? ಡೆಲ್ಲಿಯಿಂದ ಮಗಳು ಬಂದಿರಬೇಕಲ್ವೆ?' ಎಂದು ಒಂದೇ ಉಸಿರಲ್ಲಿ ಕೇಳಿದಳು. `ಹೌದು, ಕುಸುಮ ಬಂದಾಯಿತು... ಎರಡನೇ ಹೆರಿಗೆ ಆಯಿತು, ಅದೂ ಹೆಣ್ಣು ಮಗೂನೆ' ಎಂದರು.
`ಹಾಗಿದ್ರೆ ಕೆಲಸ ಜಾಸ್ತಿ ಆಗಿರಬೇಕು?'

`ಹೌದು, ವಾರದ ಮಗು, ಬಾಣಂತಿ, ಮತ್ತೆ ಮೂರು ವರ್ಷದ ತುಂಟ ಹುಡುಗೀನ ಸಾಗಸ್ಕೊಂಡು ಹೋಗೋದು ಶ್ರಮವೇ. ಅದಕ್ಕೆ ನಿಮ್ಮ ಸಹಾಯ ಕೇಳೋಣ ಅಂತ ನಿಮ್ಮಕಡೆ ಬರ್ತಿದ್ದೆ. ನೀವೇ ಸಿಕ್ಕಿದ್ರಿ. ಎಲ್ಲ ಶುಭ ಶಕುನವೇ...'
`ನನ್ನಂತಹವರ ಮುಖ ಅದೆಂತಹ ಶುಭ! ಅದೆಂತಹ ಸಂಕೇತ ಕನಕ?'

`ಹಾಗೆಲ್ಲ ಅನ್ಬೇಡಿ... ಮಗು, ಬಾಣಂತಿ ಇರೋತನಕ ನಿಮ್ಮ ಸಹಾಯ ಬೇಕು. ಮನೆಯ ಹಿರಿಯರಿದ್ದ ಹಾಗೆ ನೀವು. ಬಾಣಂತನದ ವಿಷಯದಲ್ಲಿ ನಿಮಗೆ ಗೊತ್ತಿರೋ ಅಷ್ಟು ಯಾರಿಗೂ ಗೊತ್ತಿಲ್ಲ. ದಯವಿಟ್ಟು ಬರಲೇಬೇಕು'.
`ಆದರೆ ಕನಕ, ಮನೇಲಿ ಪಮ್ಮಿ ಒಬ್ಬಳೇ ಆಗ್ಬಿಡ್ತಾಳೆ, ಸ್ವಲ್ಪ ಕಷ್ಟ ಅಮ್ಮ'.
`ಅದಕ್ಕೇನಜ್ಜಿ, ನನ್ನ ಮೊಮ್ಮಕ್ಕಳ ಜೊತೆ ಆಡ್ಕೊಂಡು ಇರಲಿ, ನಮ್ಮದೇನೂ ಅಭ್ಯಂತರ ಇಲ್ಲ. ನಿಜ ಹೇಳಬೇಕು ಅಂದ್ರೆ...' ಎನ್ನುವಷ್ಟರಲ್ಲಿಯೇ- `ಮೊದಲ ಮಗುವಿನ ಹೇಸರೇನು ಕನಕ?' ಎಂದು ಅಜ್ಜಿ ಕೇಳಿದಳು.
`ಪಿಂಕಿ...'
`ಬೆಂಕಿ ನಾ? ಯಾವ ಭಾಷೆ ಹೆಸರಮ್ಮ ಅದು?'
ಕನಕ ನಗುತ್ತಾ `ಬೆಂಕಿ ಅಲ್ಲ ಅಜ್ಜಿ, ಪಿಂಕಿ... ಪಂಕಜ'
`ಇತ್ತೀಚೆಗೆ ಕಿವಿ ಸರಿಯಾಗಿ ಕೇಳ್ಸಲ್ಲ, ಕ್ಷಮಿಸಮ್ಮ'
ಕನಕ ಮಾತು ಮುಂದುವರೆಸುತ್ತಾ `ಅವಳ ಕಾಟ ವಿಪರೀತ ಆಗಿದೆ. ಅವಳೊಂದಿಗೆ ಆಡಲಿಕ್ಕೆ ಜೊತೆ ಇಲ್ಲ. ಅವಳಮ್ಮನ ಬಿಟ್ಟು ಒಂದು ಕ್ಷಣಾನೂ ಪಿಂಕಿ ಇರಲ್ಲ. ಪಮ್ಮಿ ಏನಾದ್ರು ಬಂದ್ರೆ ಅವಳ ಹಠಮಾರಿತನ ಕಡಿಮೆಯಾಗತ್ತೆ... ಇಲ್ಲ ಅನ್ಬೇಡಿ. ದಯವಿಟ್ಟು ಬನ್ನಿ'.
`ಅಷ್ಟೆಲ್ಲಾ ಬಲವಂತ ಯಾಕೆ? ನನ್ನ ಹೊಟ್ಟೆಪಾಡು ಇದೇ ತಾನೆ. ಬರ್ತೀನಿ. ಪಮ್ಮಿ ಜೊತೆಗೆ ಇದ್ರೆ ನನಗೇನು ತಲೆಬಿಸಿ ಆಗೊಲ್ಲ, ನಾಳೆ ಬೆಳಗ್ಗೆ ಬಂದ್ರಾಗತ್ತಲ್ಲವೇ, ಕನಕ? '
`ಪುಣ್ಯ ಬರತ್ತೆ, ಹಾಗ್ಮಾಡಿ' ಎನ್ನುತ್ತಾ ಕೈಲಿದ್ದ ಪ್ಲಾಸ್ಕಿಕ್ ಚೀಲವನ್ನ ಸರಸಜ್ಜಿಗೆ ಕೊಟ್ಟಳು.
`ಏನಮ್ಮ ಇದು?'

`ಏನಿಲ್ಲ..., ಪಮ್ಮಿಗೆ ಒಂದಷ್ಟು ಹೊಸ ಬಟ್ಟೆ, ಸಿಹಿ, ಅಷ್ಟೇ. ಮಗಳು ಡೆಲ್ಲಿಯಿಂದ ತಂದದ್ದು'.
`ಈ ಋಣ ಯಾಕಮ್ಮ?'
`ಅಂತಹದ್ದೇನೂ ಇಲ್ಲ ಸರಸಜ್ಜಿ' ಅಂತ ಕನಕ ಅಲ್ಲಿಂದ ಹೊರಟಳು.
ಸರಸಜ್ಜಿ ಮನೆಗೆ ಬಂದಕೂಡಲೆ ಅವಸವರದಿಂದ ಬಿಸಲಿಗೆ ಇಟ್ಟಿದ್ದ ಸಬ್ಬಕ್ಕಿ ಸಂಡಿಗೆ, ಅಕ್ಕಿ ಪೇಣಿ, ಪುದೀನ ಹಪ್ಪಳವನ್ನೆಲ್ಲ ಡಬ್ಬಕ್ಕೆ ಹಾಕುತ್ತಿದ್ದಾಗ ಪಮ್ಮಿ ಕೇಳಿದಳು- `ಏನಜ್ಜಿ ? ಇಷ್ಟು ಬೇಗ ಎಲ್ಲಾ ಒಣಗಿತಾ?'
ಪ್ರಶ್ನೆಗೆ ಉತ್ತರಿಸದೆ, `ಈ ಸಲ ಗೌರಿ ವ್ರತ ಯಾವ ದಿನ ಬರುತ್ತೆ ಅಂತ ಪುರೋಹಿತರು ಹೇಳಿದ್ದ ನೆನಪು ಇದೆಯೇ?' ಎನ್ನುತ್ತಾ ಪಮ್ಮಿಯತ್ತ ನೋಡಿದರು. ಅವರಿನ್ನೂ ಕಣ್ಣು ಮಿಟಿಕಿಸಿಲ್ಲ ಅಷ್ಟರಲ್ಲೇ, `ಚಿರೋಟಿ ವಾರ' ಅಂದದ್ದು ಕೇಳಿಸಿತು. ಮುಖ ಸಿಂಡರಿಸಿಕೊಂಡು `ಏನಂದಿ? ಏ! ಪಮ್ಮಿ ಏನಂದಿ?' ಅಂತ ನಕ್ಕರು.
`ಅಜ್ಜಿ ನಾ ಹೇಳಿದ್ದು ಕೇಳಿಸಿತೆ?'
`ಕೇಳಿಸದೇ ಏನು? ಇದೇನು ಹೊಸದಲ್ಲವಲ್ಲ!'
`ಅಂದ್ರೆ?'

`ಅಯ್ಯೋ, ನಿಮ್ಮಮ್ಮ, ನಮ್ಮಮ್ಮನಿಗೂ ಕೂಡ ಹೀಗೆಯೇ ವಾರದ ಹೆಸರನ್ನು ತಿಂಡಿಯ ಮೂಲಕ ಗುರುತಿಸುವ ಹುಚ್ಚಿತ್ತು. ಅಷ್ಟೇಕೆ, ನಿಮ್ಮಜ್ಜಿಯು ಸಹ ಹೀಗೆಯೇ. ಅವರು ದೇವರ ಹೆಸರುಗಳನ್ನೇ ಬಣ್ಣದ ಹೆಸರಿನಿಂದ ಕರೆಯುತ್ತಿದ್ದಳು. ರಾಮದೇವರು ಕೆಂಪು, ಕೃಷ್ಣ ಪರಮಾತ್ಮ ಹಸಿರು, ಭಾಗ್ಯದ ಲಕ್ಷ್ಮಿ ನೀಲಿ, ಹೀಗೆ ದೇವಾನುದೇವತೆಗಳಿಗೆ ಬಣ್ಣ ಕಟ್ಟುತ್ತಿದ್ದಳು.ನಾ ಎಷ್ಟೋ ಸಲ `ಏನೇ ಅಕ್ಕ, ಎಲ್ಲಿಂದ ಕಲಿತೆಯೇ ಈ ಹೆಸರಿಡೋ ವಿಚಿತ್ರದ ಆಟ?' ಅಂದರೆ, `ನೋಡೇ ಭಾನುವಾರ ಅನ್ನುತ್ತಿದ್ದಂತೆಯೇ ಮನಸ್ಸಿನಲ್ಲಿ ಜಿಲೇಬಿ ಕಾಣಿಸಿಕೊಳ್ಳುತ್ತದೆ. ಎಷ್ಟೇ ಪ್ರಯತ್ನಿಸಿದರೂ ಜಿಲೇಬಿಯನ್ನು ಭಾನುವಾರದಿಂದ ಬಿಡಿಸಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ ಕಣೇ, ಜಿಲೇಬಿಯ ಬಣ್ಣ, ಪರಿಮಳ, ರುಚಿಕೂಡ ಮನಸ್ಸಿಗೆ ಬರುತ್ತದೆ. ನಿಜವಾಗಿಯೂ ಜಿಲೇಬಿ ಕಾಣಿಸತ್ತೆ.

ನಾ ಎಷ್ಟೇ ತಡೆದರೂ ಅದಾಗದೇ ಮನಸ್ಸಿಗೆ ಬರತ್ತೆ' ಎಂದಿದ್ದಳು. ಆದರೆ ಇದನ್ನು ನನ್ನೊಂದಿಗೆ ಬಿಟ್ಟು ಯಾರೊಂದಿಗೂ ಹೇಳಿದ್ದಿರಲಿಲ್ಲ'. ಅಜ್ಜಿ ಮತ್ತೆ ಮಾತು ಮುಂದುವರೆಸಿದರು... `ಅಪ್ಪ ಅಮ್ಮನಿಗೆ ಅದೇನು ಅವಸರವಿತ್ತೋ ಅಕ್ಕನಿಗೆ ಬಹಳ ಬೇಗ ಮದುವೆ ಮಾಡಿದರು. ಆದರೆ ಅದೇನು ಹೆಚ್ಚು ದಿನ ಉಳಿಯಲಿಲ್ಲ. ಅವಳ ಈ ವರ್ತನೆಯಿಂದಲೇ ಸಮಸ್ಯೆ ಉಂಟಾಗಿದ್ದು. ಐದಾರು ವರ್ಷ ಕೂಡ ಸುಖವಾಗಿರಲಿಲ್ಲ. ಸದಾ ಕಿರುಕುಳ, ಸದಾ ನೋವು. ಅತ್ತೆ ಮನೆಯವರು ಚಿತ್ರಹಿಂಸೆ ಕೊಟ್ಟೇ ಸಾಯಿಸಿಬಿಟ್ಟರು ಅವಳನ್ನ; ಅದೂ ನೀ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ' ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತಳು.
ಕಣ್ಣೊರಿಸಿಕೊಂಡು `ನಿನ್ನದೂ ಅದೇ ಗತಿ ಆಗಬಾರದು ಪಮ್ಮಿ, ನಿಮ್ಮಮ್ಮನಂತೆ ನೀ ಆಗಬೇಡ, ನಿನ್ನ ಈ ಬುದ್ಧಿ ಹೇಗಾದರೂ ಬದಲಾಯಿಸಿಕೋ. ಮನಸ್ಸು ಬದಲಾಯಿಸಿ ಕೊಳ್ಳೋದನ್ನ ಕಲಿಯೋದೇನು ಕಷ್ಟವಲ್ಲ'.

`ಅಯೊ್ಯೀೀ, ಅದೆಲ್ಲ ಬಿಟ್ಟಾಕಜ್ಜಿ, ಏನಾಗುತ್ತೋ ಆಗಲಿ'.
`ಪಮ್ಮಿ, ಇಲ್ಲಿ ಕೇಳು... ಕನಕಮ್ಮನ ಮಗಳು ಬಾಣಂತನಕ್ಕೆ ಬಂದಿದ್ದಾಳಂತೆ, ನಾಳೆಯಿಂದ ಅವರ ಮನೆಯಲ್ಲಿಯೇ ಉಂಬಳ. ಬೆಳಗ್ಗೆ ಹೋಗೋಣಂತೆ' ಅಂದರು.

2) ಸುಮಾರು ಆರೇಳು ತಿಂಗಳು ಕನಕಮ್ಮನ ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆದ ಪಮ್ಮಿಗೆ ಪಿಂಕಿ ಹತ್ತಿರವಾದಳು. ಅವರೆಲ್ಲರೂ ಊರಿಗೆ ಹೊರಡುವ ಸಮಯವೂ ಬಂತು. ಆಗ ಪಿಂಕಿ ಪಮ್ಮಿಯನ್ನು ಸಹ ಡೆಲ್ಲಿಗೆ ಕರೆದುಕೊಂಡು ಹೋಗಲೇಬೇಕೆಂದು ಒಂದೇ ಸಮನೇ ರಂಪ ಮಾಡಿದಳು. ಪಿಂಕಿಯ ಒತ್ತಡ ತಡೆಯಲಾರದೇ ಕುಸುಮ ಸರಸಜ್ಜಿಯನ್ನು `ಒಂದೈದಾರು ತಿಂಗಳುಗಳ ಕಾಲ ಪಮ್ಮಿಯನ್ನು ನಮ್ಮಂದಿಗೆ ಕಳುಹಿಸಿ. ಅವಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತವೆ. ಜೊತೆಗೆ ನಿಮ್ಮ ದಿನನಿತ್ಯದ ಬದುಕಿಗೆ ಬೇಕಾದ ಎಲ್ಲಾ ಖರ್ಚು ವೆಚ್ಚ ತೂಗಿಸುತ್ತೇವೆ. ಅಷ್ಟೇಕೆ ಈ ಮನೆಯಲ್ಲಿಯೇ ಇದ್ದುಬಿಡಿ. ಆ ಛತ್ರದ ಚಾಕರಿ ಇನ್ನೆಷ್ಟು ದಿನ' ಎಂದಳು. ಇದನ್ನು ಸಮ್ಮತಿಸಿದಂತೆ ಕನಕಮ್ಮ `ಹೌದು' ಎಂದಿದ್ದಳು.
`ಒಂದು ಮಾತು ಪಮ್ಮಿಯನ್ನು ಕೇಳಿಬಿಡಿ. ಅವಳು ಒಪ್ಪಿದರೆ ನನ್ನದೇನು ಅಡ್ಡಿ ಇಲ್ಲ' ಎಂದರು ಸರಸಜ್ಜಿ.
ಹತ್ತಿರದಲ್ಲಿಯೇ ನಿಂತಿದ್ದ ಪಮ್ಮಿಯನ್ನು `ಏನಂತಿಯಾ ಪಮ್ಮಿ?' ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳಿದರು.
ಪಮ್ಮಿ `ಹು' ಅಂದಳಷ್ಟೆ.

ಕನಕಮ್ಮನ ಮೊಮ್ಮಕಳೊಂದಿಗೆ ಡೆಲ್ಲಿ ಸೇರಿದ ಪಮ್ಮಿ ಸಂತೋಷದಿಂದಲೇ ಸಮಯ ಕಳೆದಳು. ಅವಳಿಗೆ ಭಾಷೆ ಕಲಿಯುವ ಶಕ್ತಿ ಚೆನ್ನಾಗಿದ್ದದ್ದರಿಂದ ಮಕ್ಕಳಾಡುತ್ತಿದ್ದ ಭಾಷೆಯನ್ನು ಕಲಿತಳು. ಆರು ತಿಂಗಳು ಎಂದಿದ್ದು ಸುಮಾರು ಎರಡು ವರ್ಷ ಹೀಗೇ ಕಳೆಯಿತು. ಹೀಗಿದ್ದಾಗಲೇ ಕುಸುಮಳ ಗಂಡ ರಾಜೇಶನಿಗೆ ಅಮೆರಿಕಕ್ಕೆ ಹೋಗಬೇಕಾಗಿ ಬಂತು. ಸಂಸಾರದೊಂದಿಗೆ ಪಮ್ಮಿಯನ್ನು ಜೊತೆಗೆ ಕರೆದುಕೊಂಡು ಹೋಗುವುದು ಅನಿವಾರ್ಯವೇ ಆಗಿತ್ತು. ಏಕೆಂದರೆ ಆ ಎರಡು ಮಕ್ಕಳು ಅವಳಿಗೆ ತುಂಬಾ ಹಚ್ಚಿಕೊಂಡಿದ್ದರು.

ಅಮೆರಿಕಕ್ಕೆ ಕಾಲಿಟ್ಟಾಗ ಪಮ್ಮಿಗೆ ಹದಿನೇಳು ತುಂಬಿತ್ತು. ಅವಳ ಮನಸ್ಸಿನಲ್ಲಿ ವಾರದ ದಿನಗಳೆಂದಾಗಲೆಲ್ಲ ತಿಂಡಿ, ತಿನಸುಗಳು ಬರುತ್ತಲೇ ಇತ್ತು. ಇಂಗ್ಲಿಷ್ ವಾರದ ದಿನಗಳು ಹೇಳುವಾಗಲೂ ತಿಂಡಿ ತಿನಸುಗಳ ಹೆಸರು ಬರುತ್ತಿತ್ತು. ಈ ವಿಷಯ ಮಕ್ಕಳಿಗೆ ಒಂದು ರೀತಿಯ ಆಟವಾಗಿ ಹೋಗಿದ್ದರಿಂದ ಯಾವ ಗೊಂದಲವೂ ಆಗುತ್ತಿರಲಿಲ್ಲ. ಆದರೆ, ಕುಸುಮಳಿಗೆ ಇದು ಹಿಡಿಸುತ್ತಿರಲಿಲ್ಲ.

`ನೋಡು ಪಮ್ಮಿ, ವಾರದ ದಿನಗಳನ್ನು ತಿಂಡಿಗಳ ಹೆಸರೊಂದಿಗೆ ಹೇಳಬೇಡ, ನನಗೆ ನಿನ್ನ ಹುಡುಗಾಟಿಕೆ ಹಿಡಿಸುವುದಿಲ್ಲ' ಎಂದು ಎಚ್ಚರಿಕೆ ಕೊಟ್ಟಿದ್ದರು.
ಆದರೆ ಪಮ್ಮಿ ಇದು ಸಹಜವಾಗಿ ಬಂದಂತಹದ್ದು ಎಂದು ಹೇಳಲಾರದೇ ನೊಂದುಕೊಂಡಿದ್ದಳು. ಕುಸುಮ ತನ್ನ ಮಕ್ಕಳೊಂದಿಗೆ ಪಮ್ಮಿಗೂ ಶಿಕ್ಷಣದ ಅವಕಾಶ ಕಲ್ಪಿಸಿದ್ದಳು. ಕಂಪ್ಯೂಟರ್ ಬಳಸುವುದು, ಇತರರೊಂದಿಗೆ ದೂರವಾಣಿಯಲ್ಲಿ ಮತ್ತು ಮುಖಾಮುಖಿ ಮಾತಾಡುವ ರೀತಿಯನ್ನೂ ಕುಸುಮ ಕಲಿಸಿಕೊಟ್ಟಿದ್ದಳು.

ಒಮ್ಮೆ ಮಕ್ಕಳೊಂದಿಗೆ ಟೀವಿ ನೋಡುತ್ತಿದ್ದ ಪಮ್ಮಿಗೆ ಒಂದು ಕಾರ್ಯಕ್ರಮದಿಂದ ಇನ್ನೊಂದು ಕಾರ್ಯಕ್ರಮಕ್ಕೆ ಹಾರುತ್ತಾ ಇದ್ದಾಗ ಸರಸಜ್ಜಿಯ ನೆನಪಾಗಿ ಅವರನ್ನೇ ಆಲೋಚಿಸುತ್ತಾ ಮೈಮರೆತಿದ್ದಳು.

ಆಗ ಪಿಂಕಿ ಚಾನಲ್ ಬದಲಾಯಿಸಿ ಅದ್ಯಾವುದೋ ಕಾರ್ಯಕ್ರಮ ಹುಡುಕುತ್ತಿದ್ದಳು. ಅಷ್ಟರಲ್ಲಿ `ಪಮ್ಮಿ ನೋಡು, ಇಲ್ಲಿ ನೋಡು, ಇವರು ಸಹ ನೀನು ಹೇಳುವಂತೆ ವಾರದ ಹೆಸರನ್ನು ತಿಂಡಿಯ ಮೂಲಕ ಕರೆಯುತ್ತಿದ್ದಾರೆ' ಎಂದಳು.

ಮೈಗೆ ವಿದ್ಯುತ್ ತಗುಲಿದಂತಾಗಿ ಒಮ್ಮೆಲೆ ಟೀವಿ ಕಾರ್ಯಕ್ರಮದತ್ತ ಗಮನ ಹರಿಸಿದಳು. ಆ ಕಾರ್ಯಕ್ರಮದಲ್ಲಿ ತನಗೆ ಆಗುತ್ತಿರುವ ರೀತಿಯ ಅನುಭವಗಳನ್ನು ಹಂಚಿಕೊಳ್ಳುವವರು ಮಾತಾಡುತ್ತಿದ್ದರು. ಪಮ್ಮಿ ಮಾರನೇ ದಿನವೂ ಆ ಕಾರ್ಯಕ್ರಮವನ್ನು ನೋಡಿದಳು. ಹೀಗೆ ಸುಮಾರು ಎರಡು ವಾರಗಳ ನಂತರ ಅವಳಿಗೂ `ಸೈನಸ್ಥಿಯ' ಇದೆ ಎನ್ನುವುದು ಖಚಿತವಾಯಿತು. ಅವಳು ಕಾರ್ಯಕ್ರಮದ ಸಂಘಟಕರಿಗೆ ಫೋನ್ ಮಾಡಿ ತನ್ನ ವಿಷಯವನ್ನು ತಿಳಿಸಿದಳು.

ಮೂರೇ ದಿನಗಳಲ್ಲಿ ಅವಳಿದ್ದ ಮನೆಗೆ `ಸೈನಸ್ಥಿಯ' ಬಳಗದವರು ಬಂದರು.
ಅದೊಂದು ಭಾನುವಾರ. ಮನೆಯಲ್ಲಿ ಎಲ್ಲರೂ ಇದ್ದರು. ತಕ್ಷಣದಲ್ಲಿ ಕುಸುಮಳಿಗೆ ಒಂದೂ ಅರ್ಥವಾಗಲಿಲ್ಲ. ಆದರೂ ತನಗೆಲ್ಲ ತಿಳಿದಿದೆ ಎನ್ನುವ ರೀತಿಯಲ್ಲಿ `ನಮಗೇನು ಅವಳಿಂದ ತೊಂದರೆ ಅಗಿಲ್ಲವಲ್ಲ' ಎಂದು ರಾಗ ಎಳೆದಳು.
ಅದಾವುದಕ್ಕೂ ಕಿವಿಗೊಡದೆ ಬಳಗದ ಮುಖ್ಯಸ್ಥ- `ನಿಮ್ಮ ಹುಡುಗಿಗೆ ಸೈನಸ್ಥಿಯ ಎನ್ನುವ ಮಾನಸಿಕ ಸ್ಥಿತಿ ಇದೆ. ಆದರೆ ಆಕೆಯೇನು ಮಾನಸಿಕ ಅಸ್ವಸ್ಥೆಯ್ಲ್ಲಲ' ಎಂದು ಆ ಮನೋಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ.

ತಂಡದ ಮತ್ತೊಬ್ಬ ಹೇಳಿದ- `ಈ ಹುಡುಗಿಗೆ ವಾರದ ದಿನ ಕೇಳಿಸಿದ ತಕ್ಷಣವೇ ಅದರ ಸಮವಾಗಿಯೇ ಇನ್ನೊಂದು ಅನುಭವವೂ ಆಗುತ್ತದೆ. ಅಂದರೆ ದಿನದ ಹೆಸರು ಕೇಳಿಸಿದಾಗ ತಿಂಡಿ, ತಿನಸುಗಳ ಹೆಸರು, ಅವುಗಳ ರುಚಿ ಸಹ ಮನಸ್ಸಿಗೆ ಗೋಚರಿಸುತ್ತದೆ. `ಮಂಗಳವಾರ' ಅವಳ ಮನಸ್ಸಿಗೆ ಬಂದಾಗ ಅದೊಂದು ವಾರದ ದಿನ ಎನ್ನುವುದೊಂದು ಕಡೆ ಇದ್ದು, ತಿನಿಸು ಪದಾರ್ಥ ಒಂದರ ಅನುಭವವಾಗಿ ಸ್ಪಷ್ಟವಾಗಿ ಆಗುತ್ತದೆ. ಅವಳಲ್ಲಿ ನಿಮ್ಮ ದೇಶದ ಸಿಹಿ ತಿಂಡಿಯೊಂದು ಮನಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಆ ತಿನಿಸಿನ ಎಲ್ಲಾ ಗುಣಗಳು ಆ ಕ್ಷಣದಲ್ಲಿ ಮೂಡಿಬರುತ್ತದೆ. ಹೀಗೆ, ವಾರದ ಎಲ್ಲಾ ದಿನಗಳಿಗೂ ಒಂದಲ್ಲಾ ಒಂದು ತಿಂಡಿ, ತಿನಿಸು ಹೊಂದಿಕೊಳ್ಳುತ್ತದೆ. ಈ ವಿಧದ ಅನುಭವವನ್ನು ರೋಗವೆಂದು ಕರೆಯಲಾಗದು'.
`ಹೌದಲ್ವ, ಪಮ್ಮಿ?' ಎಂದು ಪಮ್ಮಿಯತ್ತ ನೋಡುತ್ತಾ ಆತ ಕೇಳಿದ.
`ನಿಜ' ಎಂದಳು ಪಮ್ಮಿ.

`ಇದಕ್ಕೆ ಚಿಕಿತ್ಸೆ, ಔಷಧಿ ಏನಾದರೂ ಇರುವುದೆ?' ಎಂದು ಕುಸುಮ ಆತಂಕದಿಂದ ಕೇಳಿದಳು.
`ಇಲ್ಲ. ಚಿಕಿತ್ಸೆ, ಔಷಧಿಗಳೇನೂ ಇಲ್ಲ. ಇದರಿಂದ ಇತರರಿಗೆ ತೊಂದರೆ ಆಗದಿದ್ದರೂ ಅಪಹಾಸ್ಯಕ್ಕೆ ಗುರಿಯಾಗುವುದು ಸಾಮಾನ್ಯ'.
`ಈ ಸಮಸ್ಯೆಯಿಂದ ಪಮ್ಮಿಯ ಭವಿಷ್ಯ ಹಾಳಾಗುವುದಿಲ್ಲವೇ?' ಎಂದು ಕೇಳಿದಳು ಕುಸುಮ.
`ಖಂಡಿತ ಆಗಕೂಡದು. ನಮ್ಮ ಸಂಘಟನೆಯ ಮೂಲಕ ಇಂತಹ ಸಮಸ್ಯೆ ಇರುವವರಿಗೆ ಮಾರ್ಗದರ್ಶನ ಮತ್ತು ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಡುತ್ತೇವೆ, ಪಮ್ಮಿಯನ್ನು ನಮ್ಮ ಸಂಸ್ಥೆಗೆ ಸೇರಿಸಿಕೊಂಡು ತಿಂಡಿ ತಿನಸುಗಳ ಬಗ್ಗೆಯೇ ತರಬೇತಿ ಕೊಡುವ ಪ್ರಯತ್ನ ಮಾಡುತ್ತೇವೆ'.
ಅಷ್ಟರಲ್ಲಿ ಪಮ್ಮಿ- `ನಿಮ್ಮ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುವೆ' ಎಂದಳು.

3) ಕುಸುಮಳ ಕುಟುಂಬದೊಂದಿಗೆ ಭಾರತಕ್ಕೆ ವಾಪಸ್ಸಾದಾಗ ಪಮ್ಮಿಗೆ ಇಪ್ಪತ್ತ್ಮೂರು ವರ್ಷವಿದ್ದಿರಬೇಕು. ಅರಸೀಕೆರೆಯಲ್ಲಿರುವ ಸರಸಜ್ಜಿಯನ್ನು ಭೇಟಿ ಮಾಡುವ ತವಕ ಅವಳಿಗೆ ಹೆಚ್ಚಾಗಿತ್ತು. ಡೆಲ್ಲಿಯಿಂದ ನೇರವಾಗಿ ಅರಸೀಕರೆಗೆ ಧಾವಿಸಿ ಅಜ್ಜಿಯನ್ನು ಭೇಟಿಯಾದಳು.
`ನೋಡಜ್ಜಿ, ನಿನ್ನ ಮನೆತನದವರು ಅನುಭವಿಸುತ್ತಿದ್ದ ಯಾತನೆಯ ಪ್ರಭಾವದಿಂದ ನನಗೊಂದು ಉತ್ತಮ ಬದುಕು ಸಿಕ್ಕಿದೆ. ಇದೊಂದು ವಿಧದ ಮಾನಸಿಕ ಸ್ಥಿತಿಯಷ್ಟೇ, ರೋಗವೇನೂ ಅಲ್ಲ. ಈ ಸ್ಥಿತಿಯಲ್ಲಿ ಕಿವಿಗೆ ಕೇಳಿಸುವ ಅಂಕಿಗಳು, ಕಾಣಿಸುವ ಅಕ್ಷರಗಳು ವರ್ಣ ರಂಜಿತವಾಗಿರಬಲ್ಲವು'.

ಪಮ್ಮಿ, ನಿಮ್ಮಮ್ಮನಲ್ಲಿ ಇದ್ದದ್ದು ಅದೇ ಕಣಮ್ಮ. ನಾನು ಸಣ್ಣವಳಾಗಿದ್ದಾಗ ರಂಗೋಲಿ ಆಟ ಅಂತ ಆಡ್ತಿದ್ದೆವು. ಅಂದರೆ ಎಡ ಕೈಲಿ ರಂಗೋಲಿ ಹಾಕೋದು, ಬಲಗೈಲಿ ಅಳಿಸೋದು. ರಂಗೋಲಿ ಅಳಿಸಿದ ತಕ್ಷಣವೇ ಆ ಜಾಗದಲ್ಲಿ ಬಣ್ಣಬಣ್ಣದ ಚುಕ್ಕೆಗಳು, ಚೌಕಗಳು, ಗೆರೆಗಳು ಮೂಡಿಬರುತ್ತಿದ್ದವು. ಇದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತಿತ್ತು. ಹೀಗಾಗಿ ಅವಳಿಗೆ ಕಂಡದ್ದನ್ನು ನನಗೆ ಹೇಳುತ್ತಿದ್ದಳು, ನನಗೆ ಕಾಣಿಸಿದ್ದನ್ನು ಅವಳಿಗೆ ಹೇಳುತ್ತಿದ್ದೆ. ಒಮೊಮ್ಮೆ ದಾಸರ ಪದ `ಜಗದೋದ್ಧಾರನ ಆಡಿಸಿದಳು ಯಶೋಧೆ...' ಕೇಳಿಬಂದಾಗ ಬಣ್ಣಗಳು ಕೇಳಿಸುತ್ತಿವೆ ಎನಿಸುತ್ತಿತ್ತು. ಎಲ್ಲವೂ ವಿಚಿತ್ರ. ಎಷ್ಟೋ ಸಲ ಭಯವಾಗಿದ್ದುಂಟು. ರಂಗೋಲಿ ಅಳಿಸೋದು ಅನಿಷ್ಟ ಎಂದು ಮನೆಯವರು ನಮ್ಮಿಬ್ಬರನ್ನೂ ಹೊಡೆದದ್ದುಂಟು. ಇದು ಭೂತ ಚೇಷ್ಟೆ ಎಂದು ಮಾಟ, ಮಂತ್ರ ಕೂಡ ಮಾಡಿಸಿದ್ದರು. ನಮ್ಮಿಬ್ಬರ ಬದುಕಿಗೆ ಇದೇ ಕಂಟಕವೂ ಆಗಿಹೋಯಿತು. ಅಕ್ಕನ ಅಕಾಲ ಮೃತ್ಯುವಿಗೆ ಅವಳತ್ತೆ ಮನೆಯವರು ಕಾರಣವಾದರು. ನನ್ನ ಗಂಡನ ಮೃತ್ಯುವಿಗೆ ಅವರ ಮನೆಯವರೇ ಕಾರಣವಾಗಿಬಿಟ್ಟರು... ಎನ್ನುತ್ತಾ ಅತ್ತರು.

`ಹೋಗಲಿ ಬಿಡಜ್ಜಿ, ಆಗಿದ್ದು ಆಗಿಹೋಯಿತು. ಇನ್ಮುಂದೆ ಆತಂಕ ಬೇಡ. ಇಂತಹ ಮನಸ್ಸು ಇರುವವರು ಅದೆಷ್ಟೋ ಲಕ್ಷ ಸಂಖ್ಯೆಯಲ್ಲಿ ಪ್ರಪಂಚದಲ್ಲಿ ಇದ್ದಾರೆ. ಅವರಲ್ಲಿ ಅನೇಕರು ದೊಡ್ಡ ಸಾಧನೆ ಮಾಡಿದ್ದಾರೆ. ಸಂಗೀತ, ಸಾಹಿತ್ಯ, ವಿಜ್ಞಾನದಲ್ಲಿ ಬೇಕಾದಷ್ಟು ಸಾಧನೆ ಮಾಡಿದ್ದಾರಂತೆ ಇಂತಹ ಜನ' ಎಂದು ಪಮ್ಮಿ ಹೇಳಿದಳು.

`ಅಜ್ಜಿ, ಈಗ ಊರಲ್ಲಿ `ಲೊಲೀಟ' ಎನ್ನುವ ಚಲನಚಿತ್ರ ನಡೆಯುತ್ತಿದೆ. ಇದು ವಿಶ್ವವಿಖ್ಯಾತಿ ಪಡೆದ ಕತೆಗಾರ ವಾದಿಮೆರ್ ನಬೊಕ ಎನ್ನುವಾತ ಬರೆದ ಕತೆಯನ್ನು ಆಧಾರಿಸಿದ್ದು. ಇವನಿಗೂ ಸಹ ನಮಗಿರುವಂತಹ ಸಮಸ್ಯೆ ಇತ್ತಂತೆ! ಅಷ್ಟೇ ಅಲ್ಲ, ಅವನ ಮಗ ದಿಮಿತ್ರಿ ಎನ್ನುವವನಿಗೂ ಇದೇ ಸಮಸ್ಯೆ ಇದೆಯಂತೆ'.

`ಪಮ್ಮಿ, ನೀ ಅದೇನು ಹೇಳ್ತಾ ಇದಿಯೋ ಒಂದು ಗೊತ್ತಾಗಲ್ಲಮ್ಮ. ಆದರೆ ಇದೊಂದು ಮನಸ್ಸಿನ ವೈಶಿಷ್ಟ್ಯ ಎನ್ನುವುದು ನನಗಂತೂ ಗೊತ್ತು. ನಾನಿವತ್ತು ಒಂಟಿಯಾಗಿದ್ದರೂ ಚಿಂತೆ-ಆತಂಕವಿಲ್ಲದೇ ಬದುಕಿರುವುದಕ್ಕೆ ಅದೇನೆ ಕಾರಣ. ನನ್ನ ಮನಸ್ಸಿನಲ್ಲಿ ಸದಾ ಚಿತ್ರ, ಬಣ್ಣಗಳೇ ತುಂಬಿರುತ್ತೆ...' ಎನ್ನುತ್ತಿದ್ದಂತೆಯೇ ಅಡ್ಡ ಬಾಯಿ ಹಾಕಿದಳು ಪಮ್ಮಿ. `ಇದಕ್ಕೆ ಮಿದುಳಿನ ಕಾರ್ಯ ವಿಧಾನವೂ ಕಾರಣ. ಇದನ್ನಾ `ಸೈನಸ್ಥಿಯ' ಎನ್ನುತ್ತಾರೆ. ಇದು ಗ್ರೀಕ್ ಭಾಷೆಯ ಪದ. ಎರಡು ವಿಭಿನ್ನ ಅನುಭವಗಳು ಒಟ್ಟೊಟ್ಟಿಗೆ ಮನಸ್ಸಿನಲ್ಲಿ ಆದಾಗ ಉಂಟಾಗುವ ಮನಸ್ಸಿನ ಸ್ಥಿತಿ' ಎನ್ನುತ್ತಾ ಸರಸಜ್ಜಿಯನ್ನು ಅಪ್ಪಿ ಮುದ್ದಾಡಿದಳು. `ಈ ಅಪ್ಪುಗೆಯಷ್ಟೇ ಹಿತವಾಗಿರುತ್ತೆ ನನ್ನ ಸೈನಸ್ಥಿಯಾ, ಏನಂತೀಯ ಅಜ್ಜಿ?' ಎಂದಳು.
`ನನಗೂ ಅಷ್ಟೆ, ನನ್ನ ಬದುಕು ಬಣ್ಣ ರಹಿತವಾಗಿ ಹೊರಗಿನವರಿಗೆ ಕಂಡರೂ, ಸೈನಿ... ಅದೇನೋ... ಈಯ, ನನಗಂತೂ ಹಿಡಿಸಿದೆ' ಎನ್ನುತ್ತಾ ಅಜ್ಜಿ ಪಮ್ಮಿಯ ತಲೆ ತಡವಿದರು.

ಕಥೆಗಾರರು ವೃತ್ತಿಯಿಂದ ಮನೋವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.