ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಟ್ಜರ್ಲೆಂಡ್‌ ಆಕಾಶದಲ್ಲಿ ಬೆಣ್ಣೆಮುದ್ದೆ!

Last Updated 2 ಜುಲೈ 2016, 19:30 IST
ಅಕ್ಷರ ಗಾತ್ರ

ನಮ್ಮವರಿಗೆ ರಿಟೈರ್ಡ್ ಆದಾಗ ಹೊರದೇಶವನ್ನೇ ನೋಡಿರದ ನಾವು ಮೊದಲ ಬಾರಿಗೆ ಯುರೋಪ್ ಪ್ರವಾಸ ಹೋಗುವುದೆಂದು ತೀರ್ಮಾನಿಸಿದೆವು. ಒಂದು ಟ್ರಾವೆಲ್ಸ್‌ನಲ್ಲಿ ಮುಂಗಡ ಹಣ ಕೊಟ್ಟು ಬುಕ್ಕಿಂಗ್ ಮಾಡಿದೆವು.ಪಾಸ್‌ಪೋರ್ಟ್‌, ವೀಸಾಗಳ ರಗಳೆಯೆಲ್ಲ ಮುಗಿದು, ವಿದೇಶ ಪ್ರವಾಸಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೆವು.

ಮೊದಲ ದಿನ ಫ್ಲೈಟ್ ಹತ್ತಿ ಅದು ಆಗಸದಲ್ಲಿ ರೊಯ್ಯನೆ ಹಾರುವಾಗ ರೋಮಾಂಚನಗೊಂಡೆ. ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸಿತು. ಆ ಬೆರಗಿನಲ್ಲೇ ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಮೊದಲಾದ ದೇಶಗಳನ್ನು ನೋಡುತ್ತ, ಸ್ವಿರ್ಟರ್ಲೆಂಡ್‌ಗೆ ಬಂದೆವು. ಅಲ್ಲಿನ ಹೋಟೆಲ್ ಹೊಕ್ಕಾಗ ಭಾರತದ ಕಾಲಮಾನದ ಪ್ರಕಾರ  ರಾತ್ರಿ 8 ಗಂಟೆ. ಆದರೆ ಅಲ್ಲಿನ ಸಮಯ ಇನ್ನೂ 5 ಗಂಟೆಯಲ್ಲೇ ಇತ್ತು.

‘ಏನೀ ವೈಪರೀತ್ಯ’ ಎಂದು ವಿಸ್ಮಯಪಟ್ಟೆವು. ಹತ್ತಿರದ ಉದ್ಯಾನದಲ್ಲಿ ಎಳೆಬಿಸಿಲನ್ನು ಆನಂದಿಸುತ್ತ, ಸ್ವಿಸ್ ಚಾಕೊಲೇಟ್ ಸವಿದೆವು. ರಾತ್ರಿ ನಾವಿದ್ದ ಹೋಟೆಲಿಗೆ ಬಂದು ಊಟ ಮುಗಿಸಿದೆವು.

ಮೊದಲು ಊಟ ಮುಗಿಸಿದ ನಾನು, ಹೊರಗಿನ ಕಾರಿಡಾರ್‌ಗೆ ಬಂದು ನಿಂತೆ. ನನ್ನ ಬಲಗಡೆ ಪ್ರಕಾಶಮಾನವಾದ ಏನೋ ಬೆಳಕು ಹೊಮ್ಮುತ್ತಿರುವಂತೆ ಭಾಸವಾಯಿತು. ತಿರುಗಿನೋಡಿದೆ ಅಷ್ಟೇ. ನನ್ನ ಮುಂದೆಯೇ ಅತಿದೊಡ್ಡದಾದ ಚಂದ್ರ! ಕೈಗೆ ಸಿಗುವನೇನೊ ಎನ್ನುವಷ್ಟು ಸಮೀಪದಲ್ಲಿ ಚಂದಮಾಮ ನಗುತ್ತಿದ್ದ. ನನ್ನ ಬೆರಗನ್ನು ಏನೆಂದು ಬಣ್ಣಿಸುವುದು.

ಭಾರತದಲ್ಲಿ ಆಕಾಶಕ್ಕೆ ಇಟ್ಟ ಚುಕ್ಕಿಯಂತೆ ಸಣ್ಣ ಸಣ್ಣ ಚಂದ್ರಮನನ್ನು ಕಂಡಿದ್ದ ನನಗೆ, ಸ್ವಿಟ್ಜರ್ಲೆಂಡ್‌ನಲ್ಲಿನ ಭಾರೀ ಚಂದ್ರಮ ಮುಖದ ಹತ್ತಿರವೇ ಬಂದಂತಿತ್ತು. ಮಾತು ಮರೆತು ಮೂಕಿಯಂತೆ ನಿಂತಿದ್ದ ನನಗೆ, ‘ನಮ್ಮವರು’ ಅಲುಗಾಡಿಸಿದಾಗಲೇ ಎಚ್ಚರ. ಅವರಿಗೆ ಆಕಾಶದತ್ತ ಕೈ ತೋರಿಸಿದೆ. ಅವರೂ ಬೆರಗಾದರು. ಇಬ್ಬರೂ ಮಂತ್ರಮುಗ್ಧರಂತೆ ಏನೂ ಮಾತನಾಡದೆ, ಹತ್ತಿರದ ಹುಲ್ಲು ಹಾಸಿನ ಮೇಲೆ ಕುಳಿತೆವು. ಬೆಣ್ಣೆಮುದ್ದೆಯಂತಹ ಚಂದ್ರನನ್ನೇ ನೋಡುತ್ತಾ ಹೊತ್ತಿನ ಪರಿವೆ ಮರೆತೆವು. ಆ ಚಂದ್ರಮನ ತಂಪು ಈಗಲೂ ಕಣ್ಣಲ್ಲಿ ಉಳಿದಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT