ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕವಿನುಡಿಯ ಸೂರ್ಯಕಾಂತಿ ಪ್ರವಾಹ

Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವನ ಸಂಕಲನ ‘ಅಮೃತ ಸುರಿದಿರುಳು’ ತೆಲುಗಿನ ದೇವರಕೊಂಡ ಬಾಲಗಂಗಾಧರ ತಿಲಕ್‌ರ ಪ್ರಮುಖ ಕೃತಿಗಳಲ್ಲೊಂದು. ಶ್ರೀಶ್ರೀ ಮತ್ತು ಅಜಂತ ಅವರೊಂದಿಗೆ ತೆಲುಗಿನ ಪ್ರಸಿದ್ಧ ಕವಿಗಳ ಸಾಲಿಗೆ ಸೇರಿದ ತಿಲಕ್‌ರ ಈ ಸಂಕಲನವನ್ನು ಸ. ರಘುನಾಥ ಕನ್ನಡಕ್ಕೆ ತಂದಿದ್ದಾರೆ. ಅಮೃತ ಸುರಿದಿರುಳಿನಲ್ಲಿ ಸಹೃದಯರನ್ನು ಕರೆದೊಯ್ಯುತ್ತ, ‘ಬೆಳುದಿಂಗಳ ನೋಡ’ ಎನ್ನುವ ಅನುಭವಕ್ಕೆ ಪಕ್ಕಾಗಿಸುವ ಪ್ರಯತ್ನ ಮಾಡಿದ್ದಾರೆ.

‘ನನ್ನ ಅಕ್ಷರಗಳು ಕಣ್ಣೀರ ಜಡಿಯಲ್ಲಿ ನೆನೆದ ದಯೆಯ ಪಾರಿವಾಳಗಳು’, ‘ನನ್ನ ಅಕ್ಷರಗಳು ಬೆಳದಿಂಗಳಲ್ಲಿ ಆಡುವ ಸುಂದರ ಹೆಣ್ಣುಮಕ್ಕಳು’ – ‘ನನ್ನ ಕವಿತೆ’ ಪದ್ಯದ ಈ ಎರಡು ಸಾಲುಗಳು ತಿಲಕ್‌ರ ಕಾವ್ಯದ ಎರಡು ತುದಿಗಳಂತಿವೆ. ಬದುಕಿನ ಸೌಂದರ್ಯ ಹಾಗೂ ಗಾಸಿಗೊಂಡ ಮುಖಗಳೆರಡನ್ನೂ ಅವರ ಕಾವ್ಯ ಆಸ್ಥೆಯಿಂದ ಎದುರುಗೊಂಡಿದೆ.

ಸಾಹಿತ್ಯದ (ಕಾವ್ಯದ) ಶಕ್ತಿಯ ಬಗ್ಗೆ ಕವಿಗಿರುವ ಅಪಾರ ನಂಬಿಕೆಗೆ ನಿದರ್ಶನವಾಗಿ ‘ವಸುಧೈಕಗೀತೆ’ ಕವಿತೆಯನ್ನು ಗಮನಿಸಬಹುದು. ಜನಪರ ಕವಿಯೊಬ್ಬನ ಆಶಯಗೀತೆಯಂತೆಯೂ ಓದಿಕೊಳ್ಳಬಹುದಾದ ಈ ಕವಿತೆಯಲ್ಲಿ ಕವಿ ವ್ಯಕ್ತಿ–ಸಮಷ್ಟಿಯಾಗಿ ಮಾತ್ರವಲ್ಲದೆ, ಪ್ರಕೃತಿಯಾಗಿಯೂ ಕಾಣಿಸಿಕೊಳ್ಳುತ್ತಾನೆ. ‘ಸೂರ್ಯನನ್ನು ನೋಡು ನನ್ನ ತಲೆ ಮೇಲಿನ ಹೂವು’, ‘ಕವಿನುಡಿಯ ಸೂರ್ಯಕಾಂತಿ ಪ್ರವಾಹವಿದು’ ಎನ್ನುವಂತಹ ಸುಂದರ ಸಾಲುಗಳನ್ನು ಬರೆವ ಕವಿಯೇ, ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲಿ ಕಡು ವಿಷಾದದಿಂದ ‘ಆರ್ತಗೀತೆ’ ಹಾಡಬಲ್ಲರು. ಈ ದುಃಖ, ‘ಯಾವ ರಾಜಕಾರಣಿಗಳ ಹೃದಯಗಳ ತಾಕಬಲ್ಲದು? ಯಾವ ದೇವನಿಗೆ ನಿವೇದಿಸಬಲ್ಲದು?’ ಎನ್ನುವ 1956ರ ತಿಲಕ್‌ರ ಪ್ರಶ್ನೆ ವರ್ತಮಾನದ ಕವಿಯದೂ ಹೌದು. ಈ ಆರ್ತತೆ ‘ನಿನ್ನೆಯಿರುಳು’ ಕವಿತೆಯಲ್ಲಿ ಮತ್ತಷ್ಟು ತೀವ್ರವಾಗುತ್ತದೆ. ಮನುಷ್ಯನ ಸಂಕಟಗಳ ಕಂಡು, ಹಿರಿಯನಾದ ಹಾಗೂ ಹೆತ್ತೊಡಲಿನ ದೇವರ ಕೆನ್ನೆಯ ಮೇಲೆ ಕಣ್ಣೀರು ಹರಿಯುತ್ತದೆ. ಆ ದೇವನ ಬಗ್ಗೆ ಕನಿಕರಗೊಂಡು ಅಪ್ಪಿಕೊಂಡು, ಸಾಂತ್ವನ ಹೇಳುವ ಕವಿ, ‘ಹೋಗಿ ಬಾರೆಂದು’ ಬೀಳ್ಕೊಡುತ್ತಾನೆ. 

ಕೋಟೇಶ್ವರರಾವ್‌ ಎನ್ನುವ ಕಾರಕೂನನ ಅಚಾನಕ್‌ ಮರಣದ ಬಗ್ಗೆ ರೂಪುಗೊಳ್ಳುವ ‘ಸಿ.ಐ.ಡಿ. ವರದಿ’ ಕವಿತೆಯಲ್ಲಿ, ಸಾವನ್ನು ದೃಢೀಕರಿಸುವ ವ್ಯಂಗ್ಯ ವಿಷಾದದಲ್ಲಿ ಅದ್ದಿ ತೆಗೆದಂತಹದ್ದು. ‘ಕೋಟೇಶ್ವರರಾವ್‌ ಮರಣಿಸಿದ್ದು ನಿಜ, ವೈದ್ಯರ ತೀರ್ಮಾನಕ್ಕಿಂತಲೂ ಮೇನೇಜರು ಬರುತ್ತಲೆ ಎದ್ದು ನಿಲ್ಲದಾದುದು ಇದಕ್ಕೆ ನಿದರ್ಶನ.’ ಈ ವ್ಯಂಗ್ಯ ಮತ್ತಷ್ಟು ತಾರಕಕ್ಕೇರುವುದು ಮರಣಿಸುವ ಹಿಂದಿನ ದಿನ, ‘ಸುಖವೆಂದರೇನು? ಹೇಗಿರುತ್ತೆ? ಎಲ್ಲಿ ಸಿಗುತ್ತದೆ?’ ಎಂದು ಗೆಳೆಯನೊಬ್ಬನನ್ನು ಆತ ವಿಚಾರಿಸಿದ್ದನ್ನು ದಾಖಲಿಸುವ ವರದಿ– ಈ ಪ್ರಶ್ನೆಯನ್ನು ಮೃತವ್ಯಕ್ತಿಯ ಬದುಕಿನ ಕಲಂಕವಾಗಿ ಗುರ್ತಿಸಿ, ಸುಖದ ಜಿಜ್ಞಾಸೆ ಬೆಳೆದು ದೊಡ್ಡದಾಗುವ ಮೊದಲೇ ಕೋಟೇಶ್ವರರಾವ್‌ ಮರಣಿಸಿದ್ದು ದೇಶಕ್ಕೆ ಹಿತ ಎಂದು ಷರಾ ಬರೆಯುತ್ತದೆ. ಬಡವರು, ಜನಸಾಮಾನ್ಯರು ಪ್ರಶ್ನೆಗಳನ್ನು ಕೇಳತೊಡಗುವುದು, ದೇಶದ ಮತ್ತು ಅದನ್ನು ಮುನ್ನಡೆಸುವ ಅಧಿಕಾರಶಾಹಿಯ ಹಿತಕ್ಕೆ ಧಕ್ಕೆಯಲ್ಲದೆ ಮತ್ತಿನ್ನೇನು?

‘ಹೋಗಿ, ಹೊರಟು ಹೋಗಿ’, ‘ಕರೆ’, ‘ಸೈನಿಕನ ಕಾಗದ’ದಂಥ – ಯುದ್ಧದ ದಾರುಣತೆ ಹಾಗೂ ಆ ದಾರುಣತೆಯೆದುರು ಮಾನವೀಯತೆ ನಿರುತ್ತರಗೊಳ್ಳುವ ಸನ್ನಿವೇಶಗಳ ಚಿತ್ರಗಳ ಕವಿತೆಗಳು ಸಂಕಲನದಲ್ಲಿವೆ. 

ನೆಹರು ಮರಣಹೊಂದಿದ ಸಂದರ್ಭದಲ್ಲಿ ರಚಿಸಿದ ‘ನೆಹರು’ ಕವಿತೆ, ಗತಿಸಿದ ಪ್ರಧಾನಿಯ ವ್ಯಕ್ತಿತ್ವದ ಔನ್ನತ್ಯವನ್ನು ಬಹುಸೊಗಸಾಗಿ ಚಿತ್ರಿಸಿದೆ. 

ಇಲ್ಲಿನ ಕವಿತೆಗಳು ವಿಶ್ವ ಇತಿಹಾಸ, ವರ್ತಮಾನದಲ್ಲಿನ ಸಂಕಟಗಳು, ಯುದ್ಧ, ಹಿಂಸೆ–ಕ್ರೌರ್ಯದ ಬಗ್ಗೆ ಮಾತನಾಡುತ್ತವೆ. ನಾಗರಿಕತೆಯ ಹೆಸರಿನಲ್ಲಿ ಮಾನವೀಯತೆಯ ಪಸೆ ಕ್ಷೀಣಿಸುತ್ತಿರುವುದರ ಬಗ್ಗೆ ಆರ್ದ್ರವಾಗಿ ಮಾತನಾಡುತ್ತವೆ.

ಸಂಕಲನದ ಶೀರ್ಷಿಕೆಯೂ ಆದ ‘ಅಮೃತ ಸುರಿದಿರುಳು’ ಕವಿತೆಯಲ್ಲಿ, ‘ಅಮೃತ ಸುರಿದಿರುಳು / ಎಲ್ಲರೂ ಮಲಗಿರಲು’ ಕವಿ ಬೆಳದಿಂಗಳ ಬಯಲಿಗೆ ಹೋಗಿ ನಿಲ್ಲುತ್ತಾನೆ. ‘ಅಮೃತದ ಸೋನೆಯನು ಬೊಗಸೆಯಲಿ ಕುಡಿದು ಮರಳಿಬಂದೆ / ದುಃಖವನು ಮರಣವನು ಹೊರಟು ಹೋಗೆಂದೆ’ ಎನ್ನುವ ಅನುಭವಕ್ಕೆ ಕವಿ ಒಳಗಾಗುತ್ತಾನೆ. ಅಂತಹುದೇ ಅನುಭವ ತಿಲಕ್‌ರ ಕವಿತೆಗಳಿಗೆ ಮುಖಾಮುಖಿಯಾಗುವ ಸಹೃದಯರದೂ ಆಗುತ್ತದೆ. ಈ ಅನುಭವಸುಖಕ್ಕೆ ಸ. ರಘುನಾಥರ ಸಮರ್ಥ ಅನುವಾದವೂ ಪೂರಕವಾಗಿದೆ.

ಅಮೃತ ಸುರಿದಿರುಳು

ಮೂಲ: ದೇವರಕೊಂಡ ಬಾಲಗಂಗಾಧರ ತಿಲಕ್

ಕನ್ನಡಕ್ಕೆ: ಸ. ರಘುನಾಥ

ಬೆ: ₹150

ಪ್ರ: ಸಾಹಿತ್ಯ ಅಕಾಡೆಮಿ.

ಫೋನ್: 080–22245152

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT