ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ | ಅಲ್ಲಮ ಅಧ್ಯಯನಲೋಕ: ಅಲ್ಲಮ ಜಗತ್ತನ್ನು ಅಂಗೈ ಮೇಲಿರಿಸಿದ ಆಕರ ಗ್ರಂಥ

Published 16 ಸೆಪ್ಟೆಂಬರ್ 2023, 23:32 IST
Last Updated 16 ಸೆಪ್ಟೆಂಬರ್ 2023, 23:32 IST
ಅಕ್ಷರ ಗಾತ್ರ

ಲೇಖಕರು: ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ಕ ನ್ನಡ ನಾಡಿನ ಚರಿತ್ರೆಯಲ್ಲಿ ವಚನ ಚಳವಳಿ ಒಂದು ಮಹತ್ವದ ಕಾಲಘಟ್ಟವಾದರೆ, ಅಲ್ಲಮ ಪ್ರಭುಗಳು ಆ ಚಳವಳಿಯ ನಡುವಿನ ಬಹುದೊಡ್ಡ ಬೆರಗು. ಅನುಭವ ಮಂಟಪದ ಪರಿಕಲ್ಪನೆಯ ಅಡಿಯಲ್ಲಿ ಅಲ್ಲಿನ ಎಲ್ಲ ಬಗೆಯ ಮಹಾ ಮನಸ್ಸುಗಳ ಜೊತೆ ಅನುಸಂಧಾನ ನಡೆಸಿದ ಮಹಾಚೇತನ ಅದು. ಜಗತ್ತಿನ ತತ್ವಜ್ಞಾನಿಗಳ, ದಾರ್ಶನಿಕರ, ಅನುಭಾವಿಗಳ ವಲಯದಲ್ಲಿ ಅಲ್ಲಮನಿಗೆ ಅಲ್ಲಮ ಮಾತ್ರ ಸಾಟಿ ಎಂಬ ವಿಧೇಯಕದ ಮಹಾ ಪ್ರತಿಭೆ ಅದು. ಅದನ್ನು ಶೈವ ಪ್ರತಿಭೆ ಎಂದು ಕರೆದವರಿದ್ದಾರೆ. ಜಾಗತಿಕ ವ್ಯಾಪ್ತಿಯಲ್ಲಿ ಹುಟ್ಟಿರುವ ಎಲ್ಲ ಜ್ಞಾನ ಮೀಮಾಂಸೆಗಳ ಜೊತೆಯಲ್ಲಿ ಸಂವಾದಿಸಬಲ್ಲ ಶಕ್ತಿಯಿರುವ ಬಹುಜ್ಞತೆಯ ಅನುಭಾವಿ ಎಂದು ಹಲವರು ಗುರುತಿಸಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯ ವಲಯದಲ್ಲಿ ಇಂಥ ಮಹಾ ಪ್ರತಿಭೆಯನ್ನು ಕುರಿತು ತಮ್ಮ ತಮ್ಮ ಜ್ಞಾನ ಮಿತಿಯೊಳಗೆ ಅರ್ಥೈಸಹೊರಟ ವಿದ್ವಾಂಸರ ದಂಡೇ ಇದೆ. ಸೃಜನಶೀಲ ಸಾಹಿತ್ಯದ ತೆಕ್ಕೆಗೆ ತಂದುಕೊಂಡಂತೆ ಕವಿಗಳು, ಸಾಹಿತಿಗಳು ಅಲ್ಲಮ ಪ್ರಭೆಯನ್ನು ವರ್ತಮಾನದ ವಿದ್ಯಮಾನಗಳ ಪ್ರೇರಣೆಯ ಆವರಣದಲ್ಲಿ ಮರು ನಿರೂಪಿಸಲು ಪ್ರಯತ್ನಿಸಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ಜೀವನ ಚರಿತ್ರೆಗಳ ಪ್ರಕಾರಗಳಲ್ಲಿ ಈ ಮರು ನಿರೂಪಣೆಯ ಕಾರ್ಯ ನಡೆದಿದೆ.

ಇದಕ್ಕೂ ಪೂರ್ವದಲ್ಲಿ ಹರಿಹರ, ಚಾಮರಸ, ಎಳಂದೂರು ಹರೀಶ್ವರ ಇವರು ಅಲ್ಲಮನ ಬಗ್ಗೆ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ‘ಬಸವಪುರಾಣ’ದಲ್ಲಿ, ಭೀಮಕವಿಯ ಬಸವಪುರಾಣದಲ್ಲಿ ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದಲ್ಲಿ, ಲಕ್ಕಣನ ಶಿವತತ್ವ ಚಿಂತಾಮಣಿಯಲ್ಲಿ, ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯದಲ್ಲಿ, ಚನ್ನಪ್ಪ ಕವಿಯ ಶರಣ ಲೀಲಾಮೃತದಲ್ಲಿ, ಅಲ್ಲಮ ಪ್ರಭುವಿನ ಜೀವನ ಚಿತ್ರಣವನ್ನು ತಾತ್ವಿಕ ಚಿಂತನೆಗಳನ್ನು ಪ್ರಾಸಂಗಿಕವಾಗಿ ಮರುನಿರೂಪಿಸಿರುವುದೂ ಆಗಿದೆ. ರಗಳೆ, ಖಂಡಕಾವ್ಯ, ಮಹಾಕಾವ್ಯಗಳ ಕನ್ನಡ ಪ್ರಜ್ಞೆಯ ಸಂವೇದನಾಶೀಲ ಕವಿಗಳು ಕಂಡ ಅಲ್ಲಮಪ್ರಭು ವ್ಯೋಮ ಮೂರುತಿ, ತಮದ ಮಾಯೆಗೆ ಸಿಗದ ದ್ಯುಮಣಿ ಅಲ್ಲಮ, ಸುಜ್ಞಾನ ನಿರಹಂಕಾರಕ್ಕೆ ಜನಿಸಿದ ಶಿವಸ್ವರೂಪ ಲಿಂಗತತ್ವವೇ ಅಲ್ಲಮ. ಆದರೆ ಈ ಎಲ್ಲ ಕಾವ್ಯಕೃತಿಗಳು ಅಲ್ಲಮನನ್ನು ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿ ಚಿತ್ರಿಸುವುದಕ್ಕಿಂತ ಒಬ್ಬ ಪೌರಾಣಿಕ ಪ್ರಭೆಯ ಶಕ್ತಿಯಾಗಿ ಪ್ರತಿಮಾ ವಿಧಾನದಲ್ಲಿ ಚಿತ್ರಿಸಿರುವುದೇ ಹೆಚ್ಚಾಗಿದೆ. ಇಂಥ ವಸ್ತು ವಿನ್ಯಾಸದ ನಡುವೆ ಅಲ್ಲಲ್ಲಿ ಚಾರಿತ್ರಿಕ ಹೊಳಹುಗಳು ಸುಳಿದರೂ ಅದು ರೂಪಕ ಪ್ರತಿಮಾನಿಷ್ಠ ಸಂವೇದನೆಗೆ ದಕ್ಕಿದ ಮಹಾಶೈವ ಪ್ರತಿಭೆ. ಆದರೆ ಅಲ್ಲೆಲ್ಲಾ ಅಲ್ಲಮನ ಜ್ಞಾನ ಮೀಮಾಂಸೆಯನ್ನು ಕೆಲವರಾದರೂ ಹೆಚ್ಚು ಜಿಜ್ಞಾಸೆಗೆ ಒಳಪಡಿಸಿರುವ ರೀತಿಯಲ್ಲಿ ಹಲವು ಪ್ರಸಂಗಗಳ ಮರುನಿರ್ಮಾಣ ಮಾಡಿದ್ದಾರೆ. ಹನ್ನೆರಡನೇ ಶತಮಾನದ ಚಾರಿತ್ರಿಕ ವ್ಯಕ್ತಿಗಳಾದ ಸಿದ್ಧರಾಮ, ಅಕ್ಕ, ಮುಕ್ತಾಯಕ್ಕ ಮೊದಲಾದವರ ಜೊತೆಯೊಳಗಿನ ಅಲ್ಲಮನ ಸಂವಾದ ಅಲ್ಲಮ ವಚನಗಳ ಆಕರ ಮೂಲಗಳಿಂದ ಆಕೃತಿ ಪಡೆದಿರುವುದು ವಿದಿತಸತ್ಯ. ಶೂನ್ಯ ಸಂಪಾದನಾಕಾರರುಗಳಾದ ಶಿವಗಣ ಪ್ರಸಾದಿ ಮಹದೇವಯ್ಯ, ಹಲಗೆ ದೇವರು, ಗುಮ್ಮಳಾಪುರದ ಸಿದ್ಧಲಿಂಗ ಯತಿಗಳು, ಗೂಳೂರು ಸಿದ್ಧ ವೀರಣ್ಣೊಡೆಯರು ತಮ್ಮ ತಮ್ಮ ಶೂನ್ಯ ಸಂಪಾದನೆಗಳಲ್ಲಿ ಪ್ರಭುದೇವರ ವ್ಯಕ್ತಿತ್ವವನ್ನು ದೀಪ್ತವಾಗಿಸಿರುವ ಬಗೆ ಹರಿಹರ ಚಾಮರಸರು ಚಿತ್ರಿಸಿದ ಅಲ್ಲಮ ವ್ಯಕ್ತಿತ್ವವನ್ನು ಆಧರಿಸಿದಂತೆ ಹರಿದಿದ್ದರೂ ಅವರು ವಚನಾಧಾರಗಳ ನೆಲೆಯಲ್ಲಿ ಕಾಣಿಸಿರುವ ಅಲ್ಲಮಪ್ರಭೆ ಅನನ್ಯವಾದುದು.

ಅಲ್ಲಮನ ಈ ಬಗೆಯ ಜೀವನಗಾಥೆಯನ್ನು ಅವನ ವಚನಗಳೊಟ್ಟಿಗೆ ಪರಿಭಾವಿಸಿ ಸಂಶೋಧನೆ ವಿಶ್ಲೇಷಣೆಗಳನ್ನು ನವೋದಯ, ಪ್ರಗತಿಶೀಲ, ನವ್ಯ ಹಾಗೂ ನವ್ಯೋತ್ತರ ಕನ್ನಡ ವಿಮರ್ಶಕರು ನಡೆಸಿದ್ದಾರೆ. ನವೋದಯಕಾಲದ ವಿಮರ್ಶಕರಲ್ಲಿ ದೇಸಾಯಿ ಪಾಂಡುರಂಗರಾಯರು, ದ.ರಾ. ಬೇಂದ್ರೆ, ಎಂ.ಆರ್.ಶ್ರೀ., ಡಾ. ಎಲ್. ಬಸವರಾಜು, ಎಚ್. ತಿಪ್ಪೇರುದ್ರಸ್ವಾಮಿ, ಡಾ. ಎಂ. ಚಿದಾನಂದಮೂರ್ತಿ, ಡಾ. ಎಂ.ಎಂ. ಕಲಬುರ್ಗಿ, ಎಂ.ಎಸ್. ವೃಷಭೇಂದ್ರಸ್ವಾಮಿ, ಪ್ರಭುಶಂಕರ, ಡಾ. ಜಿ.ಎಸ್. ಶಿವರುದ್ರಪ್ಪ ಮುಂತಾದವರು ಗಮನಾರ್ಹರಾಗಿದ್ದಾರೆ. ಇವರ ಅಧ್ಯಯನ ಸ್ವರೂಪ ಕೇವಲ ಅಲ್ಲಮ ವಚನಗಳನ್ನಾಧರಿಸಿರದೆ, ಇದುವರೆಗೆ ಬಂದಿರುವ ಅಲ್ಲಮ ಕೇಂದ್ರಿತ ಕಾವ್ಯ ಕೃತಿಗಳನ್ನು ತೌಲನಿಕ ಅಧ್ಯಯನಕ್ಕೆ ಒಳಗುಮಾಡುತ್ತಾ ಅಲ್ಲಮನೊಟ್ಟಿಗೆ ವಚನ ಚಳವಳಿ, ವಚನಕಾರರು ಹಾಗೂ ಅವರ ನಡುವೆ ಅಲ್ಲಮಪ್ರಭುವಿನ ಔನ್ನತ್ಯವನ್ನು ಕಾಣಿಸುವುದೇ ಆಗಿದೆ. ಲೌಕಿಕದಿಂದ ಅಲೌಕಿಕದ ಕಡೆ ನಡೆದ ಅನುಭಾವಿ ಅಲ್ಲಮ ದರ್ಶನ ಈ ಮಾರ್ಗದ ಬಹುತೇಕ ವಿಮರ್ಶಕರ ದೃಷ್ಟಿಯಾಗಿದೆ. ಆದರೆ ಅಲ್ಲಮನ ನಿಜವಾದ ಅಲ್ಲಮತ್ವದ ಶೋಧನೆಯೆಂದರೆ ಹೊರಗಿನ ಆಕರಗಳ ಅಧ್ಯಯನ ಪ್ರಾಧಾನ್ಯಕ್ಕಿಂತ ಅಲ್ಲಮ ವಚನಗಳ ನೇರವಾದ ಅಧ್ಯಯನ ಮಾಡುವುದರಿಂದ ಮಾತ್ರ ಸಾಧ್ಯ. ಈ ಅಧ್ಯಯನ ವಚನ ಪಠ್ಯ ಕೇಂದ್ರಿತವಾಗದೆ ಅಲ್ಲಿಯ ಚಿಂತನೆಗಳ ಪ್ರಭಾವಳಿಯಲ್ಲಿ ಜಾಗತಿಕ ವ್ಯಾಪ್ತಿಯಲ್ಲಿ ಬರುವ ಎಲ್ಲ ಧರ್ಮಮತ ಪಂಥಗಳ ತಾತ್ವಿಕ ಜಿಜ್ಞಾಸೆಗೆ ಮುಖಾಮುಖಿ ಮಾಡುತ್ತಾ ನಡೆಸುವುದರಲ್ಲಿದೆ. ಅಲ್ಲಮನ ಕಾಲದಲ್ಲಿಯೇ ಇದ್ದ ಮತ್ತು ಆಗಿಹೋಗಿದ್ದ ವ್ಯಕ್ತಿ ಚೇತನಗಳ ಮತ ಪಂಥಗಳ ಪ್ರಭಾವ ಅಲ್ಲಮನ ತಾತ್ವಿಕತೆಗೆ ಹೇಗೆ ಪೂರಕವಾಗಿದೆ, ಹೇಗೆ ಅವನ ವಿರೋಧಕ್ಕೆ ಒಳಗಾಗಿದೆ ಎಂಬುದನ್ನೂ ವಿಶ್ಲೇಷಣೆಗೆ ಒಡ್ಡುವ ಅಗತ್ಯವಿದೆ.

ನವೋದಯ ನಂತರದ ಕನ್ನಡ ವಿಮರ್ಶಾಲೋಕ ಈ ದಾರಿಯಲ್ಲಿ ಕ್ರಮಿಸಿದಂತೆ ಅಲ್ಲಮ ಪ್ರಭುವಿನ ಅರಿವಿನ ವಿಸ್ತಾರವನ್ನು ಬಯಲುಗೊಳಿಸಲು ಪ್ರಯತ್ನಶೀಲವಾಗಿದೆ. ಈ ಬಗೆಯ ವಿನೂತನ ಚಿಂತನೆಯನ್ನು ನಡೆಸಿದವರಲ್ಲಿ ಡಿ.ಆರ್. ನಾಗರಾಜ ಅಗ್ರಮಾನ್ಯರು. ಅವರು ಅಲ್ಲಮಪ್ರಭುವನ್ನು ಶೈವಪ್ರತಿಭೆ ಎಂದು ಗುರುತಿಸುವಲ್ಲಿ ತೋರಿರುವ ಜಾಗತಿಕ ವ್ಯಾಪ್ತಿಯ ದಾರ್ಶನಿಕರ ತತ್ವಜ್ಞಾನಿಗಳ, ಮತಪಂಥಗಳ ಜೊತೆಗಿನ ಅನುಸಂಧಾನ ವಿಸ್ತಾರವಾದುದು. ಇಂಥ ಬಹುಜ್ಞತೆಯ ವಿಮರ್ಶೆ ಮಾತ್ರ ಅಲ್ಲಮನ ಆಳ ವಿಸ್ತಾರಗಳನ್ನು ಅನಾವರಣ ಮಾಡಲು ಸಾಧ್ಯ. ಆದರೆ ನಮ್ಮ ಕನ್ನಡದ ವಿಮರ್ಶಾವಿವೇಕ ಯಾವುದನ್ನೂ ಸುಮ್ಮನೆ ಒಪ್ಪುವುದಿಲ್ಲ; ಸಹಜವಾಗಿ ಇವರ ಚಿಂತನೆಗಳನ್ನೂ ಡಾ. ಚಂದ್ರಶೇಖರ ನಂಗಲಿಯವರು ಪ್ರಶ್ನಿಸಿದಂತೆ ಭಿನ್ನ ನೆಲೆಯಲ್ಲಿ ವಿಶ್ಲೇಷಣೆ ನಡೆಸಿದ್ದಾರೆ. ಜಾಗತಿಕ ವ್ಯಾಪ್ತಿಗಿಂತ ನೆಲಮೂಲ ಚಿಂತನೆಯ ಆಳದಲ್ಲಿ ಅಲ್ಲಮಪ್ರಭೆಯ ಅನನ್ಯತೆಯನ್ನು ಅವರು ಗುರುತಿಸುತ್ತಾರೆ. ಈ ಬಗೆಯ ದೇಸಿ ಚಿಂತನೆ, ಜಾಗತಿಕ ನೆಲೆಯ ವಿಸ್ತಾರದ ಆಲೋಚನೆಗಳಿಗೆ ಅಲ್ಲಮತ್ವವನ್ನು ಮುಖಾಮುಖಿಯಾಗಿಸಿ ವಿಶ್ಲೇಷಣೆ ನಡೆಸಿದ ವಿಮರ್ಶಕರಲ್ಲಿ ಡಾ. ಕೆ.ವಿ.ಎನ್., ನಟರಾಜ್ ಬೂದಾಳು, ಬಸವರಾಜ ಕಲ್ಗುಡಿ, ಜಿ.ಎಸ್. ಅಮೂರ, ಓ.ಎಲ್.ಎನ್., ಸರ್ಫರಾಜ್, ಜಿ.ಎಂ. ಹೆಗ್ಗಡೆ, ವೀಣಾ ಬನ್ನಂಜೆ, ಬಿ. ಜನಾರ್ದನ ಭಟ್, ನರಹಳ್ಳಿ ಮುಂತಾಗಿ ಪಟ್ಟಿ ದೊಡ್ಡದಿದೆ. ಇವರ ಚರ್ಚೆ ವರ್ತಮಾನದ ವಿಸಂಗತಿಗಳನ್ನು ಅಧ್ಯಾಹಾರ ಭಾವದಲ್ಲಿ ಚಿಂತನೆಯ ಕಕ್ಷೆಗೆ ತೆಗೆದುಕೊಳ್ಳುತ್ತಾ ಅನುಭಾವಿಕತೆಯ ಅರ್ಥವನ್ನು ನೆಲಮುಖೀ ಜೀವನ ಸಾಂಗತ್ಯದಲ್ಲಿ ಕಾಣಿಸುವುದೇ ಆಗಿದೆ.

ಅಲ್ಲಮತ್ವದ ನಿಜವಾದ ದರ್ಶನವೆಂದರೆ ಈ ಎಲ್ಲ ಬಗೆಯ ಅಧ್ಯಯನಗಳನ್ನು ಒಟ್ಟಂದದಲ್ಲಿ ಇಟ್ಟುಕೊಂಡಂತೆ ಕನ್ನಡ ಪ್ರಜ್ಞೆ ಅಲ್ಲಮ ಪ್ರಭೆಯ ಜೊತೆ ಸಮಗ್ರತೆಯಲ್ಲಿ ಹೇಗೆ ಸಂವಾದಿಸಿದೆ ಎಂಬುದನ್ನು ನೋಡುವುದರಲ್ಲಿದೆ. ಇಂಥ ಅಧ್ಯಯನ ವಿಶೇಷತೆಗೆ ಅಧಿಕೃತ ಮಾದರಿ ಗ್ರಂಥವಾಗಿ ‘ಅಲ್ಲಮ ಅಧ್ಯಯನ ಲೋಕ’ ಸಂಪಾದಿತ ಕೃತಿ ಮೂಡಿಬಂದಿದೆ. ಈ ಕೃತಿಯ ಗೌರವ ಸಂಪಾದಕರು ಡಾ. ನಾ. ಮೊಗಸಾಲೆಯವರು. ಈ ಕೃತಿಯ ಐವತ್ತು ಲೇಖನಗಳನ್ನು ಅವುಗಳ ಗುಣಾತ್ಮಕತೆಯ ಆಧಾರದಲ್ಲಿ ಆಯ್ಕೆ ಮಾಡಿ ಸಂಪಾದಿಸಿರುವವರು ಡಾ. ಜಿ.ಎಂ. ಹೆಗ್ಗಡೆಯವರು. ಇದೊಂದು ಪರಿಶ್ರಮ ಪೂರ್ಣ ಸಂಪಾದನೆ. ಇಂಥ ಕೃತಿಯ ಮಹತ್ವವನ್ನು ಮನಗಂಡಂತೆ ಈ ವಿದ್ವಾಂಸ ಜೋಡಿ ಈ ಅಲ್ಲಮ ಅಧ್ಯಯನ ಲೋಕವನ್ನು ಸಂಪಾದಿಸಿದ್ದಾರೆ. ಇದಕ್ಕೆ ಅಧ್ಯಯನ ಪೂರ್ಣವಾದ ಪ್ರಸ್ತಾವನೆಯನ್ನು ಡಾ. ಜಿ.ಎಂ. ಹೆಗ್ಗಡೆಯವರು ಬರೆದಿದ್ದಾರೆ. ಅಲ್ಲಮ ಪ್ರತಿಭೆಯ ಅಧ್ಯಯನಕ್ಕೆ ಇದೊಂದು ಅತ್ಯಮೂಲ್ಯ ಆಕರ ಗ್ರಂಥ.→⇒v

ಅಲ್ಲಮ ಅಧ್ಯಯನ ಲೋಕ

ಗೌರವ ಸಂಪಾದಕರು:  ನಾ. ಮೊಗಸಾಲೆ

ಸಂಪಾದಕರು: ಜಿ.ಎಂ. ಹೆಗಡೆ

ಪ್ರ: ಅಲ್ಲಮ ಅಧ್ಯಯನಪೀಠ ಕಾಂತಾವರ

ಸಂ: 9448110034

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT