ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮರ್ಶೆ: ಗಾಯಗೊಂಡ ಬದುಕಿನ ಚಿತ್ರಗಳು

ವಿಕ್ರಮ ವಿಸಾಜಿ
Published 23 ಡಿಸೆಂಬರ್ 2023, 23:22 IST
Last Updated 23 ಡಿಸೆಂಬರ್ 2023, 23:22 IST
ಅಕ್ಷರ ಗಾತ್ರ

ಗ್ರಾಮೀಣ ಬದುಕು ಮತ್ತು ನಗರ ಜೀವನ ಮೊದಲಿನಿಂದಲೂ ಕನ್ನಡ ಕತೆಗಳ ಆಸಕ್ತಿಯ ತಾಣಗಳು. ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ‘ಅಗಸ್ತ್ಯ ನಕ್ಷತ್ರ’ ಸಂಕಲನದ ಕತೆಗಳು ಗ್ರಾಮೀಣ ಬದುಕಿನೆಡೆಗೆ ವಾಲಿವೆ. ಕನ್ನಡ ಕತೆಗಳು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ತೆರೆದಿಟ್ಟ ಈ ಲೋಕಕ್ಕೆ ಇನ್ನಷ್ಟು ಅನುಭವಗಳನ್ನು ಸೇರಿಸಲು ಯತ್ನಿಸಿವೆ. ಇಲ್ಲಿಯ ನಾಲ್ಕು ಕತೆಗಳಲ್ಲಿ ಎರಡು ಕತೆಗಳು ನೀಳ್ಗತೆಗಳು. ‘ಘಾಟು’ ಕತೆ ತಂಬಾಕು ಬೆಳೆಯ ಸುತ್ತಲಿನ ರಾಜಕಾರಣವನ್ನು ಹೇಳಿದರೆ, ‘ಅಗಸ್ತ್ಯ ನಕ್ಷತ್ರ’ ಕತೆ ಪ್ರೇಮವೊಂದರ ದುರಂತ ಅಂತ್ಯವನ್ನು ಕಾಣಿಸಿದೆ. ‘ಕಣಿವೆ’ ಕತೆ ದುಡ್ಡಿನ ಆಸೆಯಲ್ಲಿ ಹೊಲಗಳನ್ನು ಗಣಿ ದಣಿಗಳಿಗೆ ಮಾರಿ ರೋಗ ತಂದುಕೊಂಡ ರೈತರ ಕತೆಯಾದರೆ, ಕೊನೆಯ ಕತೆ ‘ನಲ್ಲಿ ಬಂತು’ ಊರಿನ ಜಾತಿ ವ್ಯವಸ್ಥೆಯ ಸಂಕೀರ್ಣ ಚಿತ್ರಗಳಿಗೆ ಕನ್ನಡಿ ಹಿಡಿದಿದೆ. ವಿವಿಧ ಸಮುದಾಯಗಳ ನಡುವಿನ ಅಪನಂಬಿಕೆ, ಬೆಳೆಗಾರರು ಮತ್ತು ದಲ್ಲಾಳಿಗಳ ವೈಮನಸ್ಸು, ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಎಲ್ಲಾ ಸಂಬಂಧಗಳು ತೋಪೆದ್ದು ಹೋಗುವ ದುರಂತ, ಪೈಪ್‍ಲೈನ್ ಹಾಕುವ ನೆವದಲ್ಲಿ ನೀರು ಯಾವ ಕೇರಿಯಿಂದ ಯಾವ ಕೇರಿಗೆ ಹೋಗಬೇಕೆಂಬ ಜಗಳ ಇಲ್ಲಿನ ಕತೆಗಳಲ್ಲಿ ಸಂಘರ್ಷದ ವಾತಾವರಣವನ್ನು ನಿರ್ಮಿಸಿವೆ. ಸಂಬಂಧಗಳನ್ನು ಅರ್ಥಮಾಡಿಕೊಳ್ಳದ ಸ್ಥಿತಿ ಹಲವು ಕೊಲೆಗಳಿಗೆ ಕಾರಣವಾಗಿದೆ. ‘ಅಗಸ್ತ್ಯ ನಕ್ಷತ್ರ’ ಕತೆಯಲ್ಲಿ ಸರೋಜಳ ಕೊಲೆ ಇದಕ್ಕೊಂದು ಸಂಕೇತ. ಆಕೆಯ ಪ್ರಿಯಕರ ಭೋಜನಗೌಡ ಪೊಲೀಸರ ಶಂಕೆಗೊಳಗಾಗಿ ಇನ್ನೊಂದು ತರಹದ ಮಾನಸಿಕ ಹಿಂಸೆಗೆ ಒಳಗಾಗಿದ್ದಾನೆ. ಆತನ ಪ್ರಗತಿಪರ ಆಶಯಗಳು ಮತ್ತಷ್ಟು ತೊಂದರೆಗಳನ್ನು ತಂದೊಡ್ಡಿವೆ. ಪತ್ರಕರ್ತ ಉದಯನ ತನಿಖಾ ವರದಿಯ ರೂಪದಲ್ಲಿ ಈ ಕತೆಯನ್ನು ರಚಿಸಲಾಗಿದೆ. ‘ನಲ್ಲಿ ಬಂತು’ ಕತೆ ಗ್ರಾಮೀಣ ಜಗತ್ತಿನ ರಾಜಕಾರಣ ಮತ್ತು ಜಾತಿಯ ವಿಕಾರಗಳನ್ನು ಬಿಚ್ಚಿಟ್ಟಿದೆ. ಜೊತೆಗೆ ಕೃಷಿ ಜಗತ್ತಿನ ತಲ್ಲಣಗಳನ್ನು ತೆರೆದಿಡುವಲ್ಲಿ ಆಸಕ್ತವಾಗಿದೆ.

ಈ ಕತೆಗಳಲ್ಲಿ ಕಾಣಿಸಿಕೊಳ್ಳುವ ರಾಜಕಾರಣವು ಇಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಪ್ರತಿಯೊಂದು ಸಮಸ್ಯೆ ಕೂಡ ಅದಕ್ಕೆ ಓಟಿನ ರಾಜಕಾರಣದ ಭಾಗ. ನ್ಯಾಯಪ್ರಜ್ಞೆ ಹಿನ್ನೆಲೆಗೆ ಸರಿದು, ಯಾರ ಪರ ನಿಂತರೆ ಎಷ್ಟು ಓಟು ದಕ್ಕುತ್ತದೆ ಎಂಬುದೇ ಅದಕ್ಕೆ ಮುಖ್ಯ. ಹೀಗಾಗಿ ಅದು ಪ್ರವೇಶಿಸಿದಷ್ಟೂ ಸಮಸ್ಯೆ ಗೊಂದಲದ ಗೂಡಾಗಿಬಿಟ್ಟಿದೆ. ರಾಜಕಾರಣ ಹಲವು ತಳ ಸಮುದಾಯಗಳನ್ನು ಪರಸ್ಪರ ಎದುರಾಳಿಗಳಾಗಿಸುವ ಸಂಚಿನ ಭಾಗವಾಗಿರುವುದನ್ನು ಕತೆಗಳಲ್ಲಿ ಕಂಡುಕೊಳ್ಳಬಹುದು. ನಾಲ್ಕೂ ಕತೆಗಳಲ್ಲಿ ಇದನ್ನು ವ್ಯಂಗ್ಯದಿಂದಲೂ, ವಿಷಾದದಿಂದಲೂ ಸೂಚಿಸಲಾಗಿದೆ. ಇಲ್ಲಿನ ಕತೆಗಳ ಬಹುತೇಕ ಪಾತ್ರಗಳಿಗೆ ಕೃಷಿಯು ಈಗ ಅಷ್ಟು ಲಾಭದಾಯಕ ಸಂಗತಿಯಾಗಿ ಉಳಿದಿಲ್ಲ. ಅದನ್ನು ಉದ್ಯಮವಾಗಿಸುವ ಆಸೆಗಳಿಗೆ ಕೃಷಿಕರು ಬಲಿಯಾಗುತ್ತಿದ್ದಾರೆ. ತಂಬಾಕು ಉದ್ಯಮ, ಕಬ್ಬಿಣದ ಅದಿರಿನ ಉದ್ಯಮ ಅವರನ್ನು ಸೆಳೆದಿದೆ. ಎಲ್ಲಿ ಒಂದು ಗ್ರಾಮವಿತ್ತೊ ಅಲ್ಲಿ ಈಗ ವ್ಯಾಪಾರದ ಅವಕಾಶಗಳು ಗೋಚರಿಸಿವೆ. ಜೀವನವನ್ನು ಜೀವಿಸಬೇಕೊ ಅಥವಾ ಭೋಗಿಸಬೇಕೊ ಎಂಬ ದ್ವಂದ್ವಗಳಲ್ಲಿ ಪಾತ್ರಗಳು ದಿಕ್ಕೆಟ್ಟು ನಿಂತಿವೆ. ಗ್ರಾಮೀಣ ಜಗತ್ತಿನ ಈ ಬದಲಾದ ಚಿತ್ರಗಳನ್ನು ಕತೆಗಳು ಒಳಗೊಂಡಿದ್ದೊಂದು ವಿಶೇಷ.
ಇವು ಗ್ರಾಮೀಣ ಜಗತ್ತಿನ ವಾಸ್ತವವನ್ನು ಅರಿಯಹೊರಟ ಕತೆಗಳು. ಅಯ್ನೋರ ಓಣಿ, ಪಿಂಜಾರ ಕೇರಿ, ಮಾದಿಗರ ಕೇರಿ, ಹೀಗೆ ಹಲವು ಸಮುದಾಯಗಳ ಮುಖಗಳಿವೆ. ಇವುಗಳ ಮೂಲಕ ಆಯಾ ಸಮುದಾಯಗಳ ರಚನೆಯೊಂದನ್ನು ಪ್ರತಿನಿಧಿಸುವ ಭಾಷೆಯೂ ಕಾಣಿಸಿಕೊಂಡಿದೆ.

ಬಣಕಾರ ಬಸಯ್ಯ, ಈಚಲದಕಟ್ಟೆ ಭರಮಪ್ಪ, ಕಾಸೀಂಸಾಬ್, ಮಾದರ ದುರುಗ, ಹಾಲಬಾವಿ ಮಾಸ್ತರ, ಮೇಸ್ತ್ರೀ ಚೌಡಪ್ಪ, ತಳವಾರ ಮರಿಯ, ಕ್ಷೌರಿಕ ನಂಜಣ್ಣ, ಅಗಸರ ಪಕ್ಕೀರಣ್ಣ, ಚಲವಾದಿ ಗಿಡ್ಡಪ್ಪ, ಹುಲುಗವ್ವ, ಲಿಂಗನಗೌಡ ಮತ್ತು ನಾಯಕರ ಭರಮಜ್ಜ ಇವರೆಲ್ಲರ ಮಾತು ಗ್ರಾಮೀಣ ಸಂಸ್ಕತಿಯ ಹಲವು ಪದರುಗಳನ್ನು ತೆರೆದಿಟ್ಟಿದೆ. ಗ್ರಾಮೀಣ ಜಗತ್ತಿನ ಭಾಷಿಕ ಸಂಸ್ಕೃತಿ ನಿರ್ಮಾಣಗೊಂಡಿದ್ದರ ಚಿತ್ರವೊಂದು ಅನುದ್ದೇಶಪೂರ್ವಕವಾಗಿ ಇಲ್ಲಿನ ಕತೆಗಳಲ್ಲಿ ದಾಖಲಾಗಿದೆ. ಅಲ್ಲಲ್ಲಿ ಬರುವ ಕಾವ್ಯಾತ್ಮಕ ಭಾಷೆ ಕೂಡ ಅಚ್ಚರಿ ಹುಟ್ಟಿಸುತ್ತದೆ. ವಾಸ್ತವದ ನಿರೂಪಣೆ ವಾಚಾಳಿ ನಿರೂಪಣೆ ಆಗಬೇಕಿಲ್ಲ ಎಂಬುದನ್ನು ಹಲವು ಕಡೆ ಕಾಣಿಸಿದ್ದೆ ಇಲ್ಲಿಯ ಕತೆಗಳ ಒಂದು ಗುಣಾತ್ಮಕ ಸಂಗತಿ.

ಗ್ರಾಮೀಣ ಜಗತ್ತಿನ ಒತ್ತಡಗಳನ್ನು ಇಲ್ಲಿಯ ಕತೆಗಳು ಸ್ವಲ್ಪ ಹಳೆಯದಾದ ಮಾದರಿಯಲ್ಲಿ ಗ್ರಹಿಸುತ್ತಿರುವುದರಿಂದ ಹೊಸ ಸದ್ದುಗಳನ್ನು ಆಲಿಸಲು ಇವುಗಳಿಗೆ ಸಾಧ್ಯವಾಗುತ್ತಿಲ್ಲ. ವೈವಿಧ್ಯಮಯವಾದ ವಿವರಗಳಿವೆ. ಆದರೆ ಈ ವಿವರಗಳಿಗೆ ಆಳವಾದ ಅನುಭವಗಳ ನೆರವು ದೊರೆಯದೇ ಹೋಗಿದೆ. ವಿವರಗಳನ್ನು ಕಾಣಿಸುವ ಉತ್ಸಾಹ, ಕತೆಗಳ ರಚನೆ ಹಾಗೂ ಕತೆಗಳಿಂದ ಹೊರಡಬಹುದಾದ ದನಿಗಳನ್ನು ಆಲಿಸುವಲ್ಲಿ ಇಲ್ಲ. ಇದರಿಂದಾಗಿ ಕತೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ವಿವರಗಳಿಗೆ ಚಲನೆ ಸಾಧ್ಯವಾಗಿಲ್ಲ. ಇದ್ಯಾಕೆ ಹೀಗಾಗಿದೆ ಅಂತ ಯೋಚಿಸಿದರೆ ಕೆಲ ಸಂಗತಿಗಳು ಗೋಚರಿಸಬಹುದು. ಈ ಕತೆಗಳಲ್ಲಿನ ಪಾತ್ರಗಳು ತಮ್ಮ ಆಂತರ್ಯದೊಂದಿಗೆ ಹೆಚ್ಚು ಸಂಬಂಧಗಳನ್ನಿಟ್ಟುಕೊಂಡಿಲ್ಲ. ಹೊರಗಿನ ಘಟನೆಗಳಿಂದ ಪ್ರಭಾವಗೊಂಡಷ್ಟು, ತಮ್ಮ ಒಳಗಿನ ದ್ವಂದ್ವಗಳಿಂದ ಕಲಿಯುತ್ತಿಲ್ಲ. ಈ ಬಿರುಕು ಪಾತ್ರಗಳ ಆಂತರ್ಯವನ್ನು ಖಾಲಿಯಾಗಿಯೇ ಉಳಿಸಿಬಿಟ್ಟಿದೆ. ಹೊರಗಿನ ಲೋಕ ದೊಡ್ಡದೆಂಬುದರಲ್ಲಿ ಎರಡು ಮಾತಿಲ್ಲ, ಆದರೆ ಮನುಷ್ಯರ ಒಳಗಿನ ಲೋಕ ಹೊರಗಿನ ಲೋಕಕ್ಕಿಂತ ಎರಡು ಪಟ್ಟು ದೊಡ್ಡದೆಂಬುದನ್ನು ನಂಬದಿದ್ದರೆ ಕತೆಗಳ ಬೆಳವಣಿಗೆಯ ಮಾರ್ಗಗಳು ಮೊಟಕುಗೊಳ್ಳುತ್ತವೆ. ಪುಟಗಳಲ್ಲಿ ದೀರ್ಘವಾಗಿ ಬೆಳೆಯುವ ಕತೆಗಳು ಓದುಗರ ಮನಸ್ಸಿನಲ್ಲೂ ಬೆಳೆಯುವಂತಾದರೆ ಚೆಂದ. ಹಾಗೆ ಬೆಳೆಯುವ ಸಾಧ್ಯತೆಗಳನ್ನು ಕತೆಗಳಲ್ಲಿ ಬಚ್ಚಿಡುವುದೇ ಎಲ್ಲಾ ಕಾಲದ ಕತೆಗಾರರ ಎದುರಿನ ಸವಾಲು. ವಿವರಗಳು ತಿಳಿವಳಿಕೆಯಾಗಿ ಬದಲಾಗುವ ದಾರಿಗಳನ್ನು ಕತೆಗಾರರು ಹುಡುಕುತ್ತಲೇ ಇರಬೇಕೇನೊ. ಆ ತಿಳಿವಳಿಕೆಗಳು ಕತೆಗಳ ರಚನೆಯೊಳಗಿನಿಂದಲೇ ಎದ್ದು ಬರಬೇಕು. ಗಾಯಗೊಂಡ ಈ ಗ್ರಾಮಗಳನ್ನು ನಿರೂಪಿಸಲು ಹೊಸ ಕಣ್ಣೋಟವೇ ಬೇಕಿತ್ತು ಎನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT