ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಭಾವ-ಅನುಭಾವ-ಅಭಾವದ ಕವಿತೆಗಳು

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಪದಗಳೊಡನೆ ಆಟ, ಭಾವಗಳ ಜಿಗಿದಾಟ, ಸೃಜನಶೀಲ ಹುಡುಕಾಟಗಳ ಜೊತೆ ಅಸಹಾಯಕತೆಯ ಹಳವಂಡವೂ ಸೇರಿದ ಕವಿತೆಗಳು ಚಿದಾನಂದ ಸಾಲಿ ಅವರ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಸಂಕಲನದಲ್ಲಿವೆ. ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ (2022)ಗೆ ಭಾಜನವಾಗಿರುವ ಈ ಸಂಕಲನದಲ್ಲಿ ಏನಿದೆ? ಎಂದು ಹೇಳುವುದಕ್ಕಿಂತ ಏನೇನಿಲ್ಲ ಎಂದು ತಡಕಾಡುವುದೇ ಸುಲಭ. ನವ್ಯೋತ್ತರ ಕವಿತೆಯ ಝಲಕುಗಳು, ನವೋದಯದ ಪಲಕುಗಳು, ಗಜಲ್‌ಗಳ ಬೆಳಕು, ಭಾವಗೀತೆಗಳ ಸೆಳಕುಗಳ ಜೊತೆಯಲ್ಲಿಯೇ ತತ್ವಪದಗಳು ಕೂಡ ಸೇರಿಕೊಂಡಿವೆ. 38 ವಿಭಿನ್ನ ಕವಿತೆಗಳ ಈ ಸಂಕಲನದಲ್ಲಿ ಪ್ರತಿಯೊಂದು ಕವಿತೆಯು ತಾನು ಮತ್ತೊಂದಕ್ಕಿಂತ ಭಿನ್ನವಾಗಲು ಹಟ ಹಿಡಿದು ಪ್ರಯತ್ನಿಸಿದೆ. ಈ ಪ್ರಯತ್ನವು ಚೆಲ್ಲುವರಿದ ಚಿತ್ರಗಳನ್ನು ನೀಡಿದೆ. ಒಡೆದ ಕನ್ನಡಿ ಬಿಂಬಗಳನ್ನು ಒದಗಿಸಿದೆ.

‘ಕತೆಗಾರ’ ಚಿದಾನಂದ ಸಾಲಿಯು ತಾನು ಕೇವಲ ಕತೆಗಾರ ಮಾತ್ರ ಅಲ್ಲ ಎಂಬುದನ್ನು ಸಾಬೀತು ಪಡಿಸುವ ಹಟದ ಹುಡುಕಾಟ–ಹುಡುಗಾಟಗಳಿರುತ್ತವೆ. ಪತ್ರಕರ್ತ ಸಾಲಿಯ ಪಕ್ಕದಲ್ಲಿಯೇ ಮೇಷ್ಟ್ರು ಸಾಲಿ. ಸತತ ಪರೀಕ್ಷೆಗಳನ್ನು ಬರೆಯುವ ಸದಾ ಜೀವಂತ ವಿದ್ಯಾರ್ಥಿ ಸಾಲಿಗೆ ಹೊಂದಿಕೊಂಡಂತೆ ಗಜಲ್‌ ರಚನಕಾರ ಕೂಡ ಇರುತ್ತಾನೆ. ಸ್ಪಷ್ಟ ಚಿತ್ರಣ ನೀಡುವ ಸಂದರ್ಶಕನ ಜೊತೆಗೆ ಅದೃಶ್ಯ, ಅಸ್ಪಷ್ಟಲೋಕದ ಅನಾವರಣ ಮಾಡುವ ಹುಕಿಯೂ ಸೇರಿರುತ್ತದೆ. ಇಷ್ಟು ಮಾತ್ರವಲ್ಲ, ಹುಚ್ಚು ಮನಸ್ಸಿಗೆ ಕೇವಲ ಹತ್ತೇ ಮುಖವೇಕೆ? ಹಲವು ಇರಬಹುದು. ಇವೆ. ಅವುಗಳ ಚಿತ್ರ-ಚಿತ್ರಣ ಕನ್ನಡಿಯಲ್ಲಿ ಕಾಣಿಸುತ್ತದೆ. ಆದರೆ, ಕನ್ನಡಿಯಲ್ಲಿ ಕಂಡದ್ದು ಮನುಷ್ಯ ಮಾತ್ರ ಎಂದು ಫರ್ಮಾನು ಹೊರಡಿಸುತ್ತದೆ. ಅದೇ ಹೊತ್ತಿಗೆ ಗಲಿಬಿಲಿಗೊಂಡು 
‘ಕಿಟಕಿಯಲ್ಲಿ ಇಣುಕಿದರೆ
ಹೆಗಲ ಮೇಲೊಬ್ಬ
ಹೆಣ ಹೊತ್ತು ನಡೆದಿದ್ದ
ಅದು ಯಾರದೆಂದು 
ನಿಮಗೆ ಗೊತ್ತೆಂದು 
ನನಗೆ ಗೊತ್ತು 
ಹೇಳಬಾರದು ಅಷ್ಟೆ’
ಎಂದರೂ ಹೇಳದೇ ಇರಲಾರ. ಈ ಸಂಕಲನದ ಬಹುತೇಕ ಕವಿತೆಗಳು ಕವಿಯ ಹುಡುಕಾಟ ಆಗಿರುವ ಜೊತೆಗೆ ಓದುಗನನ್ನು ಕೂಡ ಹುಡುಕಾಡಲು ಹಚ್ಚುತ್ತವೆ. ಹುಡುಕಾಡದವನಿಗೆ ಸಿಗುವುದೇ ಇಲ್ಲ. ಹಾಗೆಯೇ ಹುಡುಕಿದವನಿಗೆ ಕೂಡ. ‘ಹಾಗೋ ಹೀಗೋ ಅಂತೂ/ ಗೋಳ ಹೋಳು’. ತಾನು ಕೆಲಸ ಮಾಡುವ ಶಾಲೆಯಲ್ಲಿ ಗಣಿತ ಕಲಿಸುವ ಮೇಷ್ಟ್ರು ಸಾಲಿಗೆ ಕವಿತೆಯೂ ಒಂದು ಪ್ರಮೇಯ ಹಾಗೂ ಲೆಕ್ಕಾಚಾರ. ಅದು ಕೇವಲ ಅಂಕಗಣಿತ, ರೇಖಾಗಣಿತಕ್ಕೆ ಸೀಮಿತವಾಗಿಲ್ಲ. ಅಲ್ಲಿ ‘ಬೀಜಗಣಿತ’ವೂ ಸೇರಿದೆ. ದೀರ್ಘ ಕವಿತೆಗಳ ಜೊತೆಯಲ್ಲಿಯೇ ಸುದೀರ್ಘ ಕವಿತೆಗಳೂ ಸೇರಿವೆ. ಹನಿಗಳು, ಚುಟುಕುಗಳು ತಪ್ಪಿಸಿಕೊಂಡಿವೆ. ಕತೆಯಾಗಲು ಹೊರಟು ಕವಿತೆಯಾದವುಗಳಿವೆ. ಕವಿತೆಯಾಗಲು ಪಟ್ಟುಬಿಡದೇ ಹೆಣಗುತ್ತಿರುವ ಗದ್ಯದ ಸಾಲುಗಳೂ ಇಲ್ಲವೆಂದೇನಿಲ್ಲ. ರೂಪಕದ ಭಾಷೆ ಕವಿಗೆ ಸಿದ್ಧಿಸಿದೆ. ಕವಿತೆಗಳಲ್ಲಿನ ‘ರೂಪಕ’ಗಳು ಬದುಕಿನ ಕನ್ನಡಿಯಿಂದ ಎರವಲು ಪಡೆದವುಗಳು. ಪ್ರತೀಕ-ಪ್ರತಿಮೆಗಳೂ ವಿಪುಲ.

ಅನ್ನದ ಬಟ್ಟಲು ಕಿತ್ತುಕೊಂಡರೇನಂತೆ
ಅಚ್ಛೇ ದಿನ್‌ ಹತ್ತಿರವಾಗಿವೆ
ಎನ್ನುವ ರಾಜಕೀಯ ಪ್ರಜ್ಞೆ ಇರುವ ಕವಿ 
‘ಕೂರೋ ಜಾಗ ಕಸಗೊಂಡರೇನಂತೆ
ದೇಶದ ಕಸ ಗುಡಿಸಲಾಗುತ್ತಿದೆ 
ಎಂದು ಪರಾಕು ಪಲಕುತಿರುವರು
ಉದ್ಯಮಿಗಳೂ
ಮಧ್ಯಮಿಗಳೂ’ ಎಂದು ಛೇಡಿಸಬಲ್ಲ. ಹಾಗೆಯೇ ಝಾಡಿಸಬಲ್ಲ. ಸೂಚ್ಯ ಹಾಗೂ ವಾಚ್ಯಗಳೆರಡನ್ನೂ ಸರಿದೂಗಿಸಬಲ್ಲ.

‘ಯಾವ ಮರವೂ 
ಹುಸಿಯಲ್ಲ ಗೌಡ
ನೇಣಿಗೊಂದು ಕೊಂಬೆ
ಸಿದಿಗೆಗಷ್ಟು ಸೌದೆಯಿರುವಾಗ’ ಎಂದು ಮುಕ್ತಾಯವಾಗುವ ಕವಿತೆಯು 
‘ಸಾಂಗತ್ಯದಗತ್ಯ
ಪ್ರೀತಿಯ ಮಹತ್ವ 
ತಿಳಿಹೇಳಿ ನನಗೊಂದು 
ಗಿಡಕೊಟ್ಟರು’ ಎಂದು ಆರಂಭವಾಗಿರುತ್ತದೆ.

ಕವಿ ಸಾಲಿಯ ‘ಮೌನ’ ಎಂಬ ಗಜಲ್‌ಗಳ ಸಂಕಲನ ಐದು ಮುದ್ರಣಗಳನ್ನು ಕಂಡಿದೆ. ಗಜಲ್‌ನ ಛಂದಸ್ಸು ಹಾಗೂ ರಚನೆಯ ಸೂಕ್ಷ್ಮಗಳನ್ನು ಅರಿತ ಕವಿ ಎಂಬುದು ಸಾಬೀತಾಗಿರುವ ಸಂಗತಿ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂಲಕ ಕನ್ನಡದ ಗಜಲ್‌ಗಳ ಪ್ರಾತಿನಿಧಿಕ ಸಂಕಲನ ಪ್ರಕಟಿಸಿರುವ ಸಾಲಿಯು ಗಜಲ್‌ಗಳ ಬಗ್ಗೆ ಅಭ್ಯಾಸಪೂರ್ಣ ಪ್ರಸ್ತಾವನೆಯನ್ನೂ ಬರೆದಿದ್ದಾನೆ. ಸಾಲಿಯ ಚೆಂದದ ಮತ್ತು ಚೆಂದಗಾಣಿಸಿದ ಕವಿತೆಗಳನ್ನು ಓದಿದ ನಂತರ ಈ ಸಂಕಲನದ ಗಜಲ್‌ಗಳನ್ನು ಓದುವುದು ಕಿರಿಕಿರಿ ಎನ್ನಿಸುವ ಸಂಗತಿ. ಅದಕ್ಕಿಂತ ಹೆಚ್ಚು ಬೇಜಾರಾಗುವುದು ಗಜಲ್‌ ನಂತರದ ಸ್ಥಾನ ಪಡೆದಿರುವ ತತ್ವಪದಗಳೆಂದು ಕರೆದಿರುವ ಹಾಡುಗಳು. ಅವುಗಳಲ್ಲಿ ಸಾರ ಅಥವಾ ಸತ್ವ ಇಲ್ಲವೆಂದೇನಲ್ಲ. ಆದರೆ, ಅವುಗಳನ್ನು ಸಂಕಲನದಲ್ಲಿ ಜೋಡಿಸಿಟ್ಟಿರುವ ಕ್ರಮ ಓದುಗನಿಗೆ ಸವಾಲು ಒಡ್ಡುವಂತಿದೆ. ಬೇಸರ ಮೂಡಿಸುವ ಹಾಗಿದೆ.

‘ರೆ’ (2011) ಎಂಬ ಮೊದಲ ಮುಕ್ತಛಂದಸ್ಸಿನ ಕವಿತೆಗಳ ಸಂಕಲನ ಪ್ರಕಟಿಸಿದ್ದ ಸಾಲಿಯ ಎರಡನೇ ಸಂಕಲನವಿದು. ಇದನ್ನು ಗಜಲೇತರ ಸಂಕಲನ ಎಂದು ಕರೆಯಲಾಗುವುದಿಲ್ಲ. ಮುನ್ನುಡಿ-ಬೆನ್ನುಡಿಗಳ ಭಾರದ ಜೊತೆಗೆ ‘ಬಹುಮಾನಿತ’ ಕವಿತೆಗಳು ಕೂಡ ಭಾರ ಹೆಚ್ಚಿಸಿವೆ. ಓದುಗರ ಮೇಲೆ ‘ಭಾರ’ ಹಾಕುವ ಕವಿತೆಗಳ ಹುಟ್ಟಿಸುವ ನಿರೀಕ್ಷೆ ಒಟ್ಟು ಸಂಕಲನ ಓದಿ ಮುಗಿಸಿದಾಗ ಜೊತೆಗಿರುವುದಿಲ್ಲ ಎಂಬುದು ವಿಷಾದದ ಹಾಗೆಯೇ ಅಸಹಜವೆನ್ನಿಸುವ ಸಂಗತಿ.

ಕನ್ನಡಿಯಲ್ಲಿ ಮನುಷ್ಯ ಮಾತ್ರ

ಲೇ: ಚಿದಾನಂದ ಸಾಲಿ

ಪ್ರ: ಋತು ಪ್ರಕಾಶನ, ರಾಯಚೂರು

ಸಂ: 8310718310

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT