ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ಪುಸ್ತಕ ‍ಪರಿಚಯ: ಸಂಘದ ಸಿದ್ಧಾಂತಗಳನ್ನು ಪ್ರಶ್ನಿಸುತ್ತ...

Published 26 ಮೇ 2024, 0:29 IST
Last Updated 26 ಮೇ 2024, 0:29 IST
ಅಕ್ಷರ ಗಾತ್ರ

ಸಂಘಪರಿವಾರದಿಂದ ಹೊರಬಂದು ಆ ಅನುಭವವನ್ನು ಕಟ್ಟಿಕೊಡುವ ಅನೇಕ ಲೇಖಕರು ಸಿಗಬಹುದು. ಆದರೆ, ಲೇಖಕಿಯರು ಇಲ್ಲವೇ ಇಲ್ಲ. ಈ ಕೃತಿಯ ಮೂಲಕ ಅಂಥ ಕೊರತೆ ಇಲ್ಲವಾಗಿದೆ. ಪುರುಷರ ದೃಷ್ಟಿಕೋನ ಮತ್ತು ಮಹಿಳೆಯರ ದೃಷ್ಟಿಕೋನಗಳು ಭಿನ್ನವಾಗಿರುತ್ತದೆ. ಅಂಥ ಭಿನ್ನತೆಯೇ ಈ ಕೃತಿಯ ಸಕಾರಾತ್ಮಕ ಅಂಶ.

ಬಾಲ್ಯದಲ್ಲಿ ಆರ್‌ಎಸ್‌ಎಸ್‌ನ ಪ್ರಭಾವಕ್ಕೊಳಗಾಗಿ, ಮನೆಯವರ ಹಾಗೂ ಶಿಕ್ಷಕರ ವಿರೋಧದ ನಡುವೆಯೂ ಸಂಘದ ಪರವಾಗಿ ಕೆಲಸ ಮಾಡಿದ್ದ ಲೇಖಕಿಗೆ ಅದರಿಂದ ಹೊರ ಬಂದಾಗ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಂಘಪರಿವಾರದ ನಡವಳಿಕೆಯ ವ್ಯತ್ಯಾಸಗಳು ಗಂಭೀರವಾಗಿ ಕಾಡಿದ್ದರಿಂದ ಅದು ಅಂಕಿ ಅಂಶಗಳ ಸಹಿತ ಪುಸ್ತಕರೂಪದಲ್ಲಿ ಹೊರಬಂದಿದೆ.

ಪುಸ್ತಕದಲ್ಲಿ ಐದು ಭಾಗಗಳಿವೆ. ಆರ್‌ಎಸ್‌ಎಸ್‌ ಜೊತೆಗಿನ ಲೇಖಕರ ಒಡನಾಟ, ಸಂಘ ಪರಿವಾರ ಮತ್ತು ಹಿಂದುತ್ವ, ಹಿಂದುತ್ವ ಮತ್ತು ಹಿಂದು ರಾಷ್ಟ್ರ ವಿಚಾರಗಳ ಸಮಂಜಸತೆ, ಹಿಂದೂ ರಾಷ್ಟ್ರ ನಿರ್ಮಾಣದೆಡೆಗೆ ಆರ್‌ಎಸ್‌ಎಸ್‌ ಪ್ರಾಯೋಜಿತ ಬಿಜೆಪಿ ಸರ್ಕಾರದ ನಡೆಗಳು ಮುಂತಾದ ವಿಚಾರಗಳನ್ನು ಪುರಾವೆ ಸಹಿತ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಕೊನೆ ಭಾಗದಲ್ಲಿ ದೇಶದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಲೇಖಕರು ದೇಶದ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗುತ್ತಾರೆ. ಕೊನೆಯಲ್ಲಿ ಪ್ರಧಾನಿ ಮೋದಿಯರಿಗೆ ಬರೆದ ಪತ್ರ ಪುಸ್ತಕದ ವಿಶೇಷ.

ರಾಜ್ಯದಲ್ಲಿ ಸಂಘಪರಿವಾದ ಪ್ರಯೋಗ ಶಾಲೆ ಎನಿಸಿಕೊಂಡಿರುವ ಕರಾವಳಿಯಲ್ಲಿ ಸಂಘದ ಬೇರುಗಳನ್ನು ಊರಿದ್ದು, ತಳಸಮುದಾಯದ ಯುವಕರನ್ನು ಗುರಿಯಾಗಿಸಿಕೊಂಡು ಕೋಮುವಾದವನ್ನು ಬಿತ್ತಿದ ಬಗೆ ದಾಖಲಾಗಿದೆ. ಬಾಬರಿ ಧ್ವಂಸದ ವೇಳೆ ಹಿಂದುಳಿದ ವರ್ಗದ ಯುವಕರನ್ನು ಪ್ರಚೋದಿಸಿ, ತಾವು ತಪ್ಪಿಸಿಕೊಂಡಿದ್ದು, ಸ್ವಂತ ಊರಲ್ಲೇ ಮುಗ್ಧ ಜನರ ನಡುವೆ ಹೊಡೆದಾಡಿಕೊಳ್ಳುವಂಥ ವಾತಾವರಣ ಸೃಷ್ಟಿ ಮಾಡಿದ್ದನ್ನು ಲೇಖಕಿ ವಿಷಾದದಿಂದ ನುಡಿದಿದ್ದಾರೆ. ಪ್ರಧಾನಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಪುಸ್ತಕಕ್ಕೆ ಅಡಿಯಿಡುವ ಲೇಖಕರು, ಮಧ್ಯೆ ಭಯ ಮತ್ತ ಆತಂಕ ವ್ಯಕ್ತಪಡಿಸಿಸಿ, ಕೊನೆಯಲ್ಲಿ ದಾರ್ಶನಿಕರ ದಾಟಿಯಲ್ಲಿ ಮಾತನಾಡುತ್ತಾರೆ. ಸಂಘಪರಿವಾರದಲ್ಲಿ ಮಹಿಳೆಯರು, ದಲಿತರು, ಹಿಂದುಳಿದ ವರ್ಗ ಹಾಗೂ ಆದಿವಾಸಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ, ತುರ್ತು ಪರಿಸ್ಥಿತಿಯ ಲಾಭ ಪಡೆದು ಆರ್‌ಎಸ್‌ಎಸ್‌ ರಾಜಕೀಯಕ್ಕಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಹೇಗೆ ಎನ್ನುವುದನ್ನು ತಿಳಿಯಲು ಪುಸ್ತಕ ಓದಬೇಕು.

ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು

ಲೇ: ಲತಾಮಾಲಪ್ರ: ಅಭಿರುಚಿ

ಸಂ:9980560013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT