ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಟರಿ ಸಿಟಿ ಪುಸ್ತಕ ವಿಮರ್ಶೆ: ಕಾಡಿದ ‘ಜಯಾಪಜಯ'ದ ಪ್ರಶ್ನೆಗಳ ಜಾಡು

ಲೇಖಕ ಸಲ್ಮಾನ್ ರಶ್ದಿ ಅವರ ಹದಿನಾಲ್ಕನೇ ಕಾದಂಬರಿ ‘ವಿಕ್ಟರಿ ಸಿಟಿ’.
Published 14 ಮೇ 2023, 0:41 IST
Last Updated 14 ಮೇ 2023, 0:41 IST
ಅಕ್ಷರ ಗಾತ್ರ

ಲೇಖನ– ಎಸ್.ಆರ್. ವಿಜಯಶಂಕರ

ಭಾರತೀಯ ಮೂಲದ ಬ್ರಿಟಿಷ್-ಅಮೆರಿಕ ಬರಹಗಾರ, ಆಧುನಿಕೋತ್ತರ ಲೇಖಕ ಸಲ್ಮಾನ್ ರಶ್ದಿ ಅವರ ಹದಿನಾಲ್ಕನೇ ಕಾದಂಬರಿ ‘ವಿಕ್ಟರಿ ಸಿಟಿ’. ತಮ್ಮ ಮ್ಯಾಜಿಕ್ ರಿಯಲಿಸಂ ಹಾಗೂ ಚಾರಿತ್ರಿಕ ಕಥನಗಳಿಂದ ಪ್ರಸಿದ್ಧವಾಗಿರುವವರು ಸಲ್ಮಾನ್ ರಶ್ದಿ. ಅವರ ಈ ಕಾದಂಬರಿಯೂ ಆ ಎರಡೂ ಅಂಶಗಳಿಂದಲೇ ಬೆಳೆಯುತ್ತದೆ. ಕಾದಂಬರಿಯ ಮೂಲ ಹಂದರ ವಿಜಯನಗರ ಸಾಮ್ರಾಜ್ಯದ ಕತೆ. ಆದರೆ ಅದನ್ನು ಹೇಳುವಾಕೆ 247 ವರ್ಷಗಳ ಕಾಲ ಬದುಕಿ ತೀರಿಕೊಂಡ ನಗರ ಮಾತೆ ಪಂಪ-ಕಂಪನ. ಅವಳು ಅದನ್ನು ಬರೆದು ಒಂದು ಮಣ್ಣಿನ ಮಡಕೆಯೊಳಗೆ ಭದ್ರವಾಗಿರಿಸಿ, ಮುಂದಿನ ಜನಾಂಗಕ್ಕೆ ತನ್ನ ಸಂದೇಶವಾಗಿ ಹುಗಿದಿಟ್ಟ ಕೃತಿ ‘ಜಯಾಪಜಯ' ದೊರೆತ ನಿರೂಪಕ, ಆ ಕತೆಯಲ್ಲಿರುವ ವಿಜಯನಗರದ ಹೊಸ ಕಥನವನ್ನು ಓದುಗರಿಗೆ ನಿರೂಪಿಸುತ್ತಾನೆ. ಕಾದಂಬರಿಯೊಳಗೆ ಹುಟ್ಟು-ದೇಶಭ್ರಷ್ಟತೆ-ವೈಭವ-ಪತನಗಳೆಂಬ ನಾಲ್ಕು ಹಂತಗಳಲ್ಲಿ ರಶ್ದಿ ಕತೆ ಹೇಳುತ್ತಾರೆ. ಅವರು ತಮ್ಮ ವಿಚಾರಗಳನ್ನು ಹೇಳಲು ವಿಜಯನಗರದ ಕಥಾ ಹಂದರವನ್ನು ಕನಿಷ್ಠವೆಂಬಷ್ಟು ಮಾತ್ರ ಬಳಸಿ ಪಂಪ ಕಂಪನ ಅವರ ರಾಜ್ಯ ನಿರ್ಮಾಣದ ಹಿಂದಿರುವ ಸ್ತ್ರೀ ಸಮಾನತೆ, ಪರಧರ್ಮ ಸಹಿಷ್ಣುತೆ, ಸಕಲ ಜನ ಹಿತಾಸಕ್ತಿ ಮುಂತಾದ ಆದರ್ಶಗಳ ವಿವರಗಳನ್ನು ನೀಡುತ್ತಾರೆ. ಆ ಮೂಲಕ ತಮ್ಮದೇ ಆದ ಆಧುನಿಕೋತ್ತರ ಸಾಮಾಜಿಕ-ರಾಜಕೀಯ ತತ್ವವೊಂದನ್ನು ಪ್ರತಿಪಾದಿಸುತ್ತಾರೆ. ಚಾರಿತ್ರಿಕ ವಿವರಗಳನ್ನು ಪ್ರಸಿದ್ಧ ಇತಿಹಾಸಜ್ಞರಿಂದ ಪಡೆದಂತೆ, ವಿಜಯನಗರ ಸಾಮ್ರಾಜ್ಯದ ಹುಟ್ಟು ಬೆಳವಣಿಗೆ, ವೈಭವ ಹಾಗೂ ಪತನಗಳ ಬಗೆಗೆ ಇರುವ ಹಲವು ದಂತಕತೆಗಳನ್ನೂ ತಮ್ಮದೇ ಆದ ರೀತಿಯ ನಿರೂಪಣೆಯಲ್ಲಿ ಬಳಸಿಕೊಳ್ಳುತ್ತಾರೆ. ಒಂದು ರಾಜ್ಯ ಸ್ಥಾಪನೆಯ ಹಿಂದಿರುವ ಆದರ್ಶಕ್ಕೆ ಅನುಗುಣವಾಗಿ ರಾಜ್ಯದ ಬೆಳವಣಿಗೆ ಯಾಕೆ ಸಂಭವಿಸುವುದಿಲ್ಲ ಎಂಬುದರ ಜಿಜ್ಞಾಸೆಯೇ ಈ ಕಾದಂಬರಿಯ ನಿಜವಾದ ಮೂಲವಸ್ತು.

ಪಂಪ ಕಂಪನ ಬಿತ್ತುವ ಮಾಯಾಬೀಜಗಳಿಂದ ನಗರ, ಕೋಟೆ ಕೊತ್ತಳ, ಜನ ಜೀವನ, ಸೈನ್ಯ ಎಲ್ಲವೂ ಬೆಳೆಯುತ್ತದೆ. ಸಣ್ಣ ಮಟ್ಟದಲ್ಲಿದ್ದ ಹುಕ್ಕ-ಬುಕ್ಕರು ಅವಳ ಕೃಪೆಯಿಂದ ರಾಜರಾಗಿ ಬೆಳೆಯುತ್ತಾರೆ. ಹುಕ್ಕರಾಯ ಅವಳನ್ನು ಮದುವೆಯಾಗಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಒಂಬತ್ತು ವರ್ಷದ ಮಗಳು ಪಂಪ ಕಂಪನಗಳನ್ನು ಬಿಟ್ಟು ಅವಳ ತಾಯಿ ರಾಧಾ ಕಂಪನ, ಪಂಪಾ ನದಿ ದಂಡೆಯಲ್ಲಿ ಬೆಂಕಿಗೆ ಬಿದ್ದು ತೀರಿಕೊಳ್ಳುತ್ತಾಳೆ. ಕಂಪಿಲಿಯೆಂಬ ಪುಟ್ಟ ರಾಜ್ಯ. ಪಂಪಳ ತಂದೆ ಅರ್ಜುನ ಕಂಪನ ಯಾವುದೋ ಹೆಸರೇ ಇಲ್ಲದ ಯುದ್ಧವೊಂದರಲ್ಲಿ ಮೊದಲೆ ತೀರಿಹೋಗಿದ್ದ. ಆ ಬಳಿಕ ಉತ್ತರದ ಸುಲ್ತಾನರ ಸೈನ್ಯಕ್ಕೆ ಹೆದರಿ ಅನೇಕ ಹೆಂಗಸರು ಬೆಂಕಿಗೆ ಬಿದ್ದು ಸಾಯುತ್ತಾರೆ. ಪಂಪಳ ತಾಯಿ ಸತ್ತ ಚಿತೆ ಗಂಧದ ಸೌದೆಯಿಂದ ಮಾಡಿದುದಾಗಿದ್ದರೂ, ಸುಡುತ್ತಿದ್ದ ತಾಯಿಯ ಹಸಿ ಮೈಯ ಮಾಂಸದ ವಾಸನೆ ಅವಳ ಜೀವಮಾನವಿಡೀ ಕಾಡುತ್ತದೆ. ಜೀವಂತ ಬೆಂದ ಆ ನೆನಪಿನಿಂದ ಎಂದೂ ಮುಕ್ತಳಾಗದ ಅವಳು ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸುತ್ತಾಳೆ. ಧ್ಯಾನದಲ್ಲಿದ್ದು ತನ್ನ ವಿಶೇಷ ಶಕ್ತಿಯ ಬೀಜಗಳಿಂದ ನಗರ, ಕೋಟೆಗಳನ್ನು ಪಂಪ ಕಂಪನ ಸೃಜಿಸುತ್ತಾಳೆ. ಪೋರ್ಚುಗೀಸಿನ ಕುದುರೆ ವ್ಯಾಪಾರಿಯೊಬ್ಬನ ಮೋಹದಲ್ಲಿ ಬೀಳುತ್ತಾಳೆ. ಹುಕ್ಕರಾಯನನ್ನು ಮದುವೆಯಾಗುತ್ತಾಳೆ. ಅವನ ನಿಧನದ ಬಳಿಕ ಬುಕ್ಕರಾಯನಿಗೂ ರಾಣಿಯಾಗುತ್ತಾಳೆ. ಬಳಿಕ ಕೃಷ್ಣದೇವರಾಯನ ಕಾಲದಲ್ಲಿ ವೈಭವನ್ನೂ ಕಾಣುತ್ತಾಳೆ. ತಾನು ಮಾಡದ ತಪ್ಪಿಗಾಗಿ ಕೃಷ್ಣದೇವರಾಯನಿಂದ ಕಣ್ಣು ಕೀಳಿಸುವ ಶಿಕ್ಷೆಗೊಳಗಾಗಿ, ಕುರುಡಿಯಾಗುತ್ತಾಳೆ. ಅಚ್ಯುತರಾಯನನ್ನು ಸಿಂಹಾಸನದಿಂದ ಇಳಿಸಿದ ಅಳಿಯ ರಾಮರಾಯನ ಕಾಲದ ಪತನವನ್ನು ದಾಖಲಿಸಿ ಮುಂದಿನ ಜನಾಂಗಕ್ಕೆ ತನ್ನ ಸಂದೇಶವಾಗಿ ಜಯಾಪಜಯ ಕೃತಿಯನ್ನು ಕಾಯ್ದಿರಿಸುತ್ತಾಳೆ. ಅದರ ಕಥನವೇ ‘ವಿಕ್ಟರಿ ಸಿಟಿ’ ಅಂದರೆ ವಿಜಯನಗರ.

ಪಂಪ ಕಂಪನ ರಾಜ್ಯಾಡಳಿತದಲ್ಲೂ, ಸಮಾಜದಲ್ಲೂ ಸ್ತ್ರೀಯರಿಗೆ ಪುರುಷರ ಸಮಾನ ಹಕ್ಕು ಇರಬೇಕೆಂದು ಪ್ರತಿಪಾದಿಸುತ್ತಾಳೆ. ಪ್ರಜಾ ಸಖ್ಯವೆ ರಾಜ್ಯದ ಗುರಿ ಎನ್ನುತ್ತಾಳೆ. ತನಗೆ ಇದ್ದ ಮಗಳಂದಿರು ಮತ್ತು ಮಗಂದಿರಲ್ಲಿ ತನ್ನ ಹೆಣ್ಣುಮಕ್ಕಳಿಗೂ ರಾಣಿಯಾಗಿ ರಾಜ್ಯ ನಡೆಸುವ ಹಕ್ಕು ಇರಬೇಕು ಎಂಬುದನ್ನು ಪ್ರತಿಪಾದಿಸುತ್ತಾಳೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿ ದೇಶಭ್ರಷ್ಟಳಾಗಬೇಕಾಗುತ್ತದೆ. ಕಾಡಿನ ಅಜ್ಞಾತವಾಸದಲ್ಲಿ ಶಕ್ತಿ ಸಂಚಯನ ಮಾಡಿಕೊಳ್ಳುವ ಅವಳು ವಿಜಯನಗರಕ್ಕೆ ಹಿಂತಿರುಗಿದ ಬಳಿಕ ತನ್ನ ಮಾಯದಿಂದ ಹೊಸದಾಗಿ ನಿರ್ಮಿಸುವ ಕೋಟೆಗಳಿಂದ ಪುನಃ ಮುನ್ನಿನ ಗೌರವಕ್ಕೆ ಪಾತ್ರಳಾಗುತ್ತಾಳೆ. ಕೃಷ್ಣದೇವರಾಯ ತನ್ನ ಪಟ್ಟದ ರಾಣಿಯ ಚಾಡಿ ಮಾತುಗಳನ್ನು ನಂಬಿ ಪಂಪ ಕಂಪನಳ ಕಣ್ಣುಗಳನ್ನು ಕೀಳಿಸಿದ ಬಳಿಕ ಅವಳು ಬರವಣಿಗೆಯಲ್ಲಿ ತೊಡಗಿ ಒಂದು ಸಾಮ್ರಾಜ್ಯದ ಉನ್ನತಿ-ಅವನತಿಗಳ ಕಥನವನ್ನು ‘ಜಯಾಪಜಯ’ವೆಂಬ ಕೃತಿಯಲ್ಲಿ ದಾಖಲಿಸುತ್ತಾಳೆ. ರಾಜ್ಯಾಡಳಿತವು ಧಾರ್ಮಿಕ ವ್ಯವಸ್ಥೆ ಅಥವಾ ಧಾರ್ಮಿಕ ಮುಖಂಡರ ಪ್ರಭಾವದಲ್ಲಿ ಇರಬಾರದು ಎಂಬುದನ್ನು ಪ್ರತಿಪಾದಿಸುತ್ತಿದ್ದ, ರಾಜ್ಯಲಕ್ಷ್ಮಿಯ ಸಾಂಕೇತಿಕ ರೂಪದಂತಿರುವ ಪಂಪ ಕಂಪನಳ ಕಣ್ಣು ಕೀಳಿಸಿದ ಬಳಿಕ ಅವಳನ್ನು ರಕ್ಷಿಸುವುದು ಅದೇ ಧಾರ್ಮಿಕ ವ್ಯವಸ್ಥೆ ಎಂಬುದು ಅವಳು ಕಟ್ಟಿದ ರಾಜ್ಯದ ವೈರುಧ್ಯವಾಗಿಯೂ ಗೋಚರಿಸುತ್ತದೆ.

ಧರ್ಮ-ರಾಜಕೀಯ, ಸಮಾಜ-ಅಧಿಕಾರ, ಸೈನ್ಯಶಕ್ತಿ-ಜನಜೀವನ ಹೀಗೆ ಹಲವು ಅಂಶಗಳನ್ನು ರಶ್ದಿ ಚರ್ಚಿಸುತ್ತಾರೆ. ಔನ್ನತ್ಯದಲ್ಲಿರುವ ರಾಜ್ಯದ ಅವನತಿಗೆ ಕಾರಣಗಳೇನು ಎಂಬುದನ್ನು ಧ್ಯಾನಿಸುವುದು ಕಾದಂಬರಿಯ ಮುಖ್ಯ ಉದ್ದೇಶ. ಅದು ಕೇವಲ ರಾಜನೊಬ್ಬನ ದೌರ್ಬಲ್ಯವೆ? ಕಾಲದ ಸಂದರ್ಭವೆ? ಸೈನ್ಯದ ಸೋಲೆ? ಆಡಳಿತಾತ್ಮಕ ಅಥವಾ ಯೋಜನಾತ್ಮಕ ಅಸಾಮರ್ಥ್ಯವೇ? ರಾಜ್ಯದ ಅವನತಿಗೆ ಕೇವಲ ರಾಜನು ಕಾರಣವೇ? ಧರ್ಮ ಮತ್ತು ರಾಜತ್ವದ ಸಂಬಂಧಗಳೇನು ಮತ್ತು ಅದು ಹೇಗಿರಬೇಕು? ಇಂತಹ ಹಲವು ಪ್ರಶ್ನೆಗಳಿಂದ ರಾಜಕೀಯ ತಾತ್ವಿಕತೆಯೊಂದನ್ನು ಕಾದಂಬರಿ ಮುನ್ನೆಲೆಗೆ ತರುತ್ತದೆ. ಅದರ ಜೊತೆಗೆ ‘ಜಯಾಪಜಯ’ ವೆಂಬ ಹೆಸರಿನ ಮೂಲಕವೇ ಇವನ್ನೆಲ್ಲಾ ಪೌರಾಣಿಕವಾಗಿಯೂ ನೆನಪಿಸಿ ರಾಜ-ಪ್ರಜಾ ಧರ್ಮಗಳ ತಾತ್ವಿಕ ಜಿಜ್ಞಾಸೆ ಪುರಾಣಗಳಷ್ಟೇ ಪ್ರಾಚೀನವಾದದು ಮತ್ತು ಆಧುನಿಕೋತ್ತರ ಕಾಲದಲ್ಲೂ ಮತ್ತೆ ಚರ್ಚಿಸ ಬೇಕಾದುದು ಎಂಬುದನ್ನು ಜ್ಞಾಪಿಸುತ್ತದೆ. ಮಹಾಭಾರತವು, ಜಯ, ವಿಜಯ, ಭಾರತ, ಮಹಾಭಾರತಗಳಾಗಿ ಬೆಳೆದ ಪುರಾಣ ಎಂಬ ವಿದ್ವಾಂಸರ ಮಾತನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು.

ಜನರ ಹಿತ, ಪ್ರಗತಿ, ಶಾಂತಿ, ಸಮಾನತೆಗಳಿಗಾಗಿ ಹುಟ್ಟಿದ ರಾಜ್ಯವೊಂದು ವೈಭವವನ್ನು ಗಳಿಸುವುದರ ಜೊತೆಗೆ ಯಾಕೆ ಎಲ್ಲಾ ಹಂತಗಳಲ್ಲೂ ಹಿಂಸೆಯನ್ನೂ ಕ್ರೌರ್ಯವನ್ನೂ ಮೈಗೂಡಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಕಾದಂಬರಿಕಾರರಾಗಿ ರಶ್ದಿಯವರನ್ನು ಕಾಡಿದೆ. ರಾಜಧರ್ಮದ ಈ ಪ್ರಶ್ನೆಗೆ ಉತ್ತರ ಹುಡುಕಿದ ಪುರಾಣಗಳಿಗೆ ನಿಶ್ಚಿತವಾಗಿ ಇದು ಹೀಗೆ ಎನ್ನಲಾಗಲಿಲ್ಲ. ಚಾರಿತ್ರಿಕ ಜಿಜ್ಞಾಸೆಗಳಲ್ಲಿಯೂ ಅದಕ್ಕೆ ಸಮರ್ಥ ಉತ್ತರ ಸಿಗಲಿಲ್ಲ. ಮನುಷ್ಯನ ವಿಧಿಯಂತೆ ಬದುಕಿಗೆ ಬೆಸೆದಿರುವ ಈ ರಾಜಕೀಯ ಅನಿವಾರ್ಯಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಸೈದ್ಧಾಂತಿಕ ನೆಲೆಗಳಲ್ಲಿ ತಾತ್ವಿಕ ಉತ್ತರಗಳನ್ನು ಹುಡುಕುವುದು ಆಧುನಿಕೋತ್ತರ ಕಾಲದ ಅಗತ್ಯವೂ ಆಗಿದೆ ಎಂದು ರಶ್ದಿ ನಂಬುತ್ತಾರೆ.

‘ವಿಕ್ಟರಿ ಸಿಟಿ’ ಕಾದಂಬರಿ ಪೋರ್ಚುಗೀಸನ ಬಾಯಲ್ಲಿ ಬಿಸ್ನಾಗ (BISNAGA) ಎಂದಾದ ವಿಜಯನಗರದ ಮಾತೆ ಬಯಸಿದ್ದು ಸ್ತ್ರೀ-ಪುರುಷ ಸಮಾನತೆ, ಸಾಂಸ್ಕೃತಿಕ -ಭೌಗೋಳಿಕ ಸಹೋದರತ್ವ ಸೌಹಾರ್ದದ ಸ್ವಾತಂತ್ರ್ಯಗಳನ್ನು. ಆದರೆ ಅಂತಹ ಆದರ್ಶಗಳ ವಿರುದ್ಧವಾಗಿ ಪ್ರಭುತ್ವದ ಹಿಂಸೆ ಕ್ರೌರ್ಯಗಳು ಬೆಳೆದಾಗ ಅವುಗಳನ್ನು ನಿಯಂತ್ರಿಸುವ ಮಾರ್ಗಗಳಾವುವು? ಎಂಬುದರ ಹುಡುಕಾಟಕ್ಕೆ ರಶ್ದಿ ಮತ್ತೊಂದು ಚಾರಿತ್ರಿಕ ಕಥನವನ್ನು ಬಳಸಿಕೊಂಡಿದ್ದಾರೆ. ವಿಜಯನಗರದ ಹುಟ್ಟಿನ ಆಶಯದಲ್ಲೆ ಅಡಗಿದ್ದ ಬಹುತ್ವದ ಮೂಲಶಕ್ತಿ ಕಳೆದುಹೋಗಲು ಕಾರಣಗಳೇನು? ಎಂಬುದು ರಶ್ದಿಯವರನ್ನು ತೀವ್ರವಾಗಿ ಕಾಡಿದೆ. ಹದಿನಾಲ್ಕನೆ ಕಾದಂಬರಿಯಲ್ಲೂ ತಮ್ಮ ಬರವಣಿಗೆಯ ಮ್ಯಾಜಿಕ್ ಅನ್ನು ಸಲ್ಮಾನ್ ರಶ್ದಿ ಉಳಿಸಿಕೊಂಡಿದ್ದಾರೆ. ಪಂಪ ಕಂಪನಳ ಆತಂಕ, ಪ್ರಶ್ನೆಗಳು ನಮ್ಮ ಪರಿಭಾಷೆಯಲ್ಲಿ ಹೇಳುವುದಾದರೆ ನಿಜವಾದ ರಾಜ್ಯಲಕ್ಷ್ಮಿಯ ಪ್ರಶ್ನೆಗಳೂ ಆಗಿವೆ.

ಕೃತಿ: ವಿಕ್ಟರಿ ಸಿಟಿ (ಇಂಗ್ಲಿಷ್) ‌ಲೇ: ಸಲ್ಮಾನ್ ರಶ್ದಿ ಪು: 352 ದ: ₹309 (ಪೇಪರ್‌ ಬ್ಯಾಕ್) ಪ್ರ: ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಲಿಮಿಟೆಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT