ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಹೆಣ್ಣಳತೆಗೋಲು: ಇದಿರು ನೋಟ

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಲೇಖಕಿ ಸಬಿತಾ ಬನ್ನಾಡಿ ಪ್ರಜಾವಾಣಿಯಲ್ಲಿ ಬರೆದ 38 ಅಂಕಣ ಬರಹಗಳ ಸಂಗ್ರಹ ‘ಇದಿರು ನೋಟ’. ಹೆಸರೇ ಸೂಚಿಸುವಂತೆ ತಳಗೂ ಅಲ್ಲ, ಮೇಲೂ ಅಲ್ಲ, ಇದಿರೇ ನಿಂತು ‘ಕಾಣುವ’ ನೋಟವನ್ನು ಈ ಹೊತ್ತಗೆ ದಾಖಲಿಸಿದೆ. ಅತ್ಯಾಚಾರ, ಜಾತಿ ದೌರ್ಜನ್ಯ, ಸಂವಿಧಾನದ ಮೇಲೆ ದಾಳಿ, ಬೆಲೆಯೇರಿಕೆ, ಕೋಮುದ್ವೇಷ, ಮಾರುಕಟ್ಟೆಯ ಹಪಹಪಿ, ಹೆಣ್ಣುಬದುಕಿನ ಜಂಜಡಗಳು, ಯುದ್ಧ-ಹಿಂಸೆ, ಭಾಷೆ, ಶಿಕ್ಷಣ, ರಾಜಕಾರಣ, ಸಿನಿಮಾ, ನಾಟಕ, ಸಾಹಿತ್ಯವೇ ಮೊದಲಾದ ಹಲವು ವಿಷಯಗಳನ್ನು ಚರ್ಚಿಸುವ ಬರಹಗಳು ನಿನ್ನೆ-ಇಂದು-ನಾಳೆಗಳ ನಡುವೆ ಸುಲಲಿತವಾಗಿ ಚಲಿಸುತ್ತವೆ. ಸ್ಥಗಿತಗೊಂಡ ಮನಸ್ಸುಗಳು ಚಲನಶೀಲವಾಗಲಿ; ಕೇಡು ಕೊನೆಗೊಂಡು ನೆಮ್ಮದಿ ನೆಲೆಸಲಿ ಎನ್ನುವ ಪ್ರಧಾನ ಆಶಯದ ಬರಹಗಳು ಓದಿದವರನ್ನು ಚಿಂತನೆಗೆ ಹಚ್ಚುತ್ತವೆ.

‘ಇದಿರು ನೋಟ’ದಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಬರಹದಲ್ಲಿ ಬಳಸಿರುವ ಕಸುವಿನ ಭಾಷೆ, ವಸ್ತು ವೈವಿಧ್ಯ ಮತ್ತು ಮಂಡಿಸುವ ವಿಧಾನಗಳು.

ಕನ್ನಡ ಭಾಷೆಯ ಪದಸಂಪತ್ತು ಸಮೃದ್ಧವಾಗಿದ್ದರೂ ನಿತ್ಯ ಬಳಕೆಯಲ್ಲಿ ನಾವು ಅವವೇ ಸಾವಿರ ಪದಗಳನ್ನು ಬಳಸುತ್ತೇವೆ. ಹೊಗಳಿಕೆ, ತೆಗಳಿಕೆ, ಟೀಕೆ, ಮೋಹ, ಪ್ರೇಮ, ದುಃಖ, ಸಂಭ್ರಮಗಳೆಲ್ಲಕ್ಕೂ ಬಳಸಿದ ಪದಗಳನ್ನೇ ಬಳಸಿ ಜಡಗೊಂಡ ಇಂಗನ್ನಡಕ್ಕೆ ‘ನೇರವಂತಿಕೆ, ಉಸಿರ್ತಾಣ, ನುಡಿಪಾಠ, ತಿಳಿವಿನ ಬಿತ್ತು’ ಮುಂತಾದ ಹೊಸಹೊಸ ಪದಗುಚ್ಛಗಳನ್ನು ಸಬಿತಾ ಕೊಟ್ಟಿದ್ದಾರೆ. ಕರ್ತೃ-ಕರ್ಮ-ಕ್ರಿಯಾಪದಗಳ ಹೊಸಜೋಡಣೆಯ ಮೂಲಕ ನವನವೀನ, ಸಣ್ಣಸಣ್ಣ ವಾಕ್ಯಗಳು ಮೈತಳೆದೆದ್ದು ಬಂದಿವೆ. ಓದುಗಿತ್ತಿ ಸಬಿತಾರ ಹಳಗನ್ನಡ, ನಡುಗನ್ನಡ ಸಾಹಿತ್ಯಿಕ ಪಠ್ಯಗಳ ಆಳಜ್ಞಾನ ಪ್ರತೀ ಬರಹದಲ್ಲೂ ಅರಿವಿಗೆ ಬರುತ್ತದೆ. ಮಹಾದೇವಿಯಕ್ಕ ಅಂತರ್ಗಾಮಿನಿಯಂತೆ ಹರಿದಿದ್ದಾಳೆ. ಪಂಪ, ರನ್ನ, ಕುಮಾರವ್ಯಾಸರಿಂದ ಇಲ್ಲಿಯವರೆಗಿನ ಕನ್ನಡ ಸಾಹಿತ್ಯ ಹಲವೆಡೆ ಉಲ್ಲೇಖಗೊಂಡಿದೆ. ಬರಹಗಳ ಶೀರ್ಷಿಕೆ ಕಾವ್ಯಾತ್ಮಕವಾಗಿದ್ದು ಮತ್ತೆಮತ್ತೆ ಕಾಣುವ ರೂಪಕಗಳು ಓದುವವರ ಕಲ್ಪನಾ ಲೋಕವನ್ನು ವಿಸ್ತರಿಸುತ್ತವೆ. ರೂಪಕದ ಭಾಷೆಯೇ ಪದಮಿತಿಯ ಅಂಕಣ ಬರಹದ ಆಳವನ್ನು ಹೆಚ್ಚಿಸಿದೆ.

ಸಾಹಿತ್ಯದಂತೆ ಸಿನಿಮಾ ವಿಷಯಗಳೂ ಬರಹದ ಒಳನೇಯ್ಗೆಯಲ್ಲಿ ಸೇರಿಕೊಂಡಿವೆ. ದೇಶಭಾಷೆಗಳ ಗಡಿಮೀರಿ ನೋಡುವ ಮನಸ್ಸುಗಳಲ್ಲಿ ನ್ಯಾಯಾನ್ಯಾಯ ಪ್ರಜ್ಞೆಯನ್ನು ಅರಳಿಸುವಂತಹ ಹಲವು ಜಾಗತಿಕ ಸಿನಿಮಾಗಳನ್ನು ಪರಿಚಯಿಸಲಾಗಿದೆ. ಟ್ವೆಲ್ವ್ ಆಂಗ್ರಿ ಮ್ಯಾನ್, ಕ್ಯಾಸ್ಟ್ ಅವೇ ಆನ್ ದ ಮೂನ್, ದ ಬಾಯ್ ವಿತ್ ದ ಸ್ಟ್ರೈಪಡ್ ಪೈಜಾಮಾ, ಹನಿಲ್ಯಾಂಡ್, ಡ್ರೀಮ್ಸ್, ಡಿ ಜ್ಯಾಂಗೋ, ನ್ಯೂ ಸಿಂಡ್ರೆಲಾ, ಜೈಭೀಮ್, ಶೇರ್ನಿ ಮುಂತಾದ ಸಿನಿಮಾಗಳ ಬಗೆಗೆ ಚರ್ಚಿಸುತ್ತಲೇ ತಮ್ಮ ವಿಷಯಮಂಡನೆಯ ಹರಹನ್ನು ಸಬಿತಾ ವಿಸ್ತರಿಸಿಕೊಂಡಿದ್ದಾರೆ. ಆದರೆ ಕನ್ನಡ ನಾಟಕ ಮತ್ತು ಸಿನಿಮಾಗಳು ಕಾಣದೇ ಇರುವುದು ಎದ್ದು ಕಾಣುವಂತಿದೆ. ಬರಿಗನ್ನಡಿಗರಿಗೆ ಜಾಗತಿಕ ಸಿನಿಮಾಗಳ ಉಲ್ಲೇಖ ಭಾರವಾದೀತೇ ಎನಿಸುತ್ತದೆ.

`ಹಮ್ಮಿನ ಸಿಂಹಾಸನದ ಪ್ರತಿನಿಧಿಗಳು ನಾವಲ್ಲ, ತಂಪು ನದಿತಟದ ಸಹಪಯಣಿಗರು ನಾವು’ ಎನ್ನುವ ಸಬಿತಾರ ಬರಹದ ಶೈಲಿ ಮೇಜು ಕುಟ್ಟಿ ವಾದ ಗೆಲ್ಲುವ ಚರ್ಚಾಪಟುವಿನದಲ್ಲ. ಜತನದಿಂದ ಒಂದೊಂದೇ ಹೂವನ್ನೆತ್ತಿ ದಾರದಲ್ಲಿ ಕಟ್ಟುವ ಸಹನಶೀಲ ಹೂವಾಡಗಿತ್ತಿಯ ಮನಸ್ಸು ಅದು. ಸಂಯಮದ ವಿಶ್ಲೇಷಣೆ, ಒಳಗೇ ಹರಿಯುವ ವಿಡಂಬನೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುವ ಅವರು, ವಚನಕಾರರು, ಮಾರ್ಕ್ಸ್‌, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಕರಗಿಸಿ ಮಂಡಿಸುತ್ತ ಪ್ರಜ್ಞಾ ಪರಿಧಿ ಹಿಗ್ಗಿಸುತ್ತಾರೆ. ಜೀವಪರ ಚಿಂತನೆಗಳೆಲ್ಲವನ್ನು ಅಪ್ಪಿಕೊಂಡ ಅವರ ಒಳಗೊಳ್ಳುವ ಮನಸ್ಸು ಸರ್ವಥಾ ಬಹುತ್ವವನ್ನು ಎತ್ತಿ ಹಿಡಿಯುತ್ತದೆ.

ಇದೇ ಸ್ತ್ರೀವಾದ. ಬಹುತ್ವ ಮತ್ತು ಒಳಗೊಳ್ಳುವಿಕೆ ಸ್ತ್ರೀವಾದದ ಪ್ರಧಾನ ಲಕ್ಷಣಗಳು. ಈ ಗುಣ ಪ್ರತಿ ಬರಹದಲ್ಲೂ ಬೆರಳಿಗೆ ತಾಗುವಂತಿದೆ. ಹೆಣ್ಣಿನ ಸಾಮಾಜಿಕ ಪ್ರಜ್ಞೆಯೆಂದರೆ ಹೀಗಿರುತ್ತದೆ ಎಂದು ತೋರಿಸುವ ಹೆಣ್ಣಳತೆಗೋಲಾಗಿ ‘ಇದಿರು ನೋಟ’ವನ್ನು ರೂಪಿಸಿದೆ.

ಮೂಕ ಮಗುವಿನ ಬೇಕುಬೇಡಗಳ ಭಾಷೆಯನ್ನೂ ಅರಿಯಬಲ್ಲ ಸೂಕ್ಷ್ಮಜ್ಞತೆಯೇ ಹೆಣ್ಣು ಕಣ್ಣೋಟ. ಯುದ್ಧವನ್ನು, ಹಿಂಸೆಯನ್ನು ಹೆಣ್ಣು ಕಣ್ಣೋಟದಿಂದ ನೋಡಿರುವ ಸಬಿತಾ, ‘ಸ್ನೇಹವೇ ಶೌರ್ಯ ಎನ್ನುವುದು ಹೆಣ್ಣುನಡೆಯ ದಾರಿ’ಯೆನ್ನುತ್ತಾರೆ. ತಾಯ್ತನವನ್ನು ಹಾಡಿ ಹೊಗಳುವ ಲೋಕ ಎಂದಾದರೂ ಯುದ್ಧ ಬೇಕೇ ಬೇಡವೇ ಎಂದು ಸೈನಿಕರನ್ನು ಹೆತ್ತ ತಾಯಂದಿರ ಬಳಿ ಕೇಳಿದೆಯೇ ಎಂದು ಪ್ರಶ್ನಿಸುತ್ತಾರೆ. ಅಕಸ್ಮಾತ್ ಕುಂತಿ ಸಾಮಾಜಿಕ ಮಾಧ್ಯಮದಲ್ಲಿ ಯುದ್ಧ ಬೇಡವೆಂಬ ಪೋಸ್ಟ್ ಹಾಕಿದ್ದರೆ ಬರುವ ಕಮೆಂಟಿಗೆ ಶಬ್ದಕೋಶಗಳೇ ನಾಚಿ ಮುಖ ಮುಚ್ಚಿಕೊಳ್ಳಬಹುದು ಎಂದು ವ್ಯಂಗ್ಯವಾಡುತ್ತಾರೆ. ‘ಹೆಣ್ಣನ್ನು ಆಕ್ರಮಿಸಿಕೊಳ್ಳುವುದರ ದುರಂತ ಪರಿಣಾಮವೇ ರಾಮಾಯಣ: ನೆಲವನ್ನು ಆಕ್ರಮಿಸಿಕೊಳ್ಳುವುದರ ದುರಂತ ಪರಿಣಾಮವೇ ಮಹಾಭಾರತ’ ಎಂದು ಮಹಾಕಾವ್ಯಕಾರಣವನ್ನು ಚುಟುಕಾಗಿ, ಹರಿತವಾಗಿ ಹೇಳಿಬಿಡುತ್ತಾರೆ.

‘ಆಕ್ರಮಣವೇ ಶೌರ್ಯ ಎಂದು ಭಾವಿಸಿರುವ ಪುಟಿನನಂಥ ಪುಕ್ಕಲೆದೆಯವರಿಗೆಲ್ಲ ಹೆಣ್ಣುಮಾದರಿಯ ಶಿಕ್ಷಣ ದೊರೆಯಲಿ’; ‘ಸರ್ವ ಅಧಿಕಾರಕ್ಕೂ ಇದಿರುಂಟು’; ‘ಮನೋಮಂದಿರದೊಳಗೆ ಪ್ರೀತಿಮೂರ್ತಿಯ ಕಟೆಯದೇ ಹೊರಗೆ ಕಟ್ಟಿದ ಮಂದಿರ, ಮಹಲುಗಳಿಂದ ಯಾರಿಗೆ ಸುಖ?’; ‘ಬೇರೆ ಶತ್ರುಗಳೇನು? ನಮ್ಮ ಜೀವನಶೈಲಿಯೇ ಶತ್ರು’; ‘ಹೆಣ್ಣುಮಕ್ಕಳು ಕೊಡುವ ಶಿಕ್ಷೆ ದೂರ ತಳ್ಳುವುದಲ್ಲ, ಅಪ್ಪಿ ಸಂತೈಸುವುದು’; ‘ಹೆಣ್ಣುಮಕ್ಕಳು ಬರೀ ಪ್ರಶ್ನೆ ಕೇಳಲ್ಲ, ಅವರು ಉತ್ತರದಿಂದ ಆರಂಭಿಸುತ್ತಾರೆ’ – ಮುಂತಾದ ಸಾಲುಗಳು ಹೆಣ್ಣು ಕಣ್ಣೋಟವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.

***

ಇವತ್ತಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಬೇಕೆಂದು ಕೇಳುವ ಸ್ತ್ರೀವಾದ ಹಲವರಿಗೆ ಇಷ್ಟವಾಗುವುದಿಲ್ಲ. ‘ನೀವು ಸ್ತ್ರೀವಾದಿನಾ? ಆದ್ರೂ ಮದುವೆ ಆಗಿದೀರಾ? ಗಂಡನ ಜೊತೆಗೇ ಇದೀರಾ? ಇನ್ನೂ ಡೈವೋರ್ಸ್ ಆಗಿಲ್ವಾ? ನೀವೇ ಅಡಿಗೆ ಮಾಡ್ತೀರಾ?’ ಮುಂತಾದ ಕುಹಕದ ಪ್ರಶ್ನೆಗಳು ಸ್ತ್ರೀವಾದಿಗಳನ್ನು ಎದುರಾಗುತ್ತವೆ. ತಪ್ಪು ಅರ್ಥೈಸುವಿಕೆ, ಹೀಗಳೆಯುವಿಕೆ, ಪುರುಷರ ಒಡನಾಟ ಕಳೆದುಕೊಳ್ಳುವ ಭಯದ ಕಾರಣದಿಂದ ಎಷ್ಟೋ ಪ್ರಭಾವಿ ಮಹಿಳೆಯರೂ ತಾವು ಸ್ತ್ರೀವಾದಿಯಲ್ಲವೆಂದು ಘೋಷಿಸಿಕೊಳ್ಳುತ್ತಾರೆ!

ಆತ್ಮಗೌರವ ಕುಂದಿದ ಹೆಣ್ಣು, ಉತ್ಪ್ರೇಕ್ಷಿತ ಆತ್ಮಗೌರವದ ಗಂಡು ಇಬ್ಬರೂ ಅಸುಖಿಗಳೇ ಆಗಿದ್ದಾರೆ. ಇದನ್ನು ಗುರುತಿಸುತ್ತಾ ಶೋಷಕರನ್ನೂ, ಶೋಷಿತರನ್ನೂ ಒಟ್ಟಿಗೇ ಮಾನವೀಕರಣಗೊಳಿಸುವ ಸವಾಲು ಹೆಣ್ಣುಗಳ ಮೇಲಿದೆ. ಇದಕ್ಕಾಗಿ ಅಕ್ಕ ಮನಿಶಾ ಗುಪ್ತೆ ಹೇಳುವಂತೆ ಮಹಿಳೆಯರಿಗೆ ದಿನಕ್ಕೆ 24 ಗಂಟೆ ಸಾಲುವುದಿಲ್ಲ. 48, 72 ಗಂಟೆಗಳು ಬೇಕಾಗುತ್ತವೆ. ಏನು ಮಾಡುವುದು? ಕೈಗೆ ಕೈ ಜೋಡಿಸುವುದು.

ಅದಕ್ಕಾಗಿ ‘ಪೌರುಷದ ಮಾದರಿಯೆಂಬ ವಿನಾಶದ ಜಾರುಬಂಡಿ ಏರಿ ಕುಳಿತ ಎಲ್ಲ ಸ್ತ್ರೀಪುರುಷರು ಬಚಾವಾಗಬೇಕೆಂದರೆ ಮಹಾ ಇಳೆಯ ಮಾದರಿಗೆ ಮರಳಬೇಕು’ ಎನ್ನುವ ಸಬಿತಾರಂತಹ ಆರೋಗ್ಯಕರ ಹೆಣ್ಣುಮನಸ್ಸುಗಳು ಜೀವರನ್ನೆಲ್ಲ ಬೆಸೆಯುವ ಆಶಯದೊಂದಿಗೆ ಬರೆಯುತ್ತಿರುವುದು; ಕೆಲವು ಪುರುಷ ಸಂಗಾತಿಗಳೂ ಇದರಲ್ಲಿ ಕೈಜೋಡಿಸಿರುವುದು ನೆಮ್ಮದಿಯ ಸಂಗತಿ.

ಕೃತಿ: ಇದಿರು ನೋಟ
ಲೇ: ಸಬಿತಾ ಬನ್ನಾಡಿ
ಪ್ರ: ಬಹುರೂಪಿ
ಸಂ: 7019182729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT