ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಂಬರಿ ಧಾವತಿ ವಿಮರ್ಶೆ | ಹಣ್ಣಾಗದೆ ಮಣ್ಣಾದ ಬದುಕುಗಳ ಕಥನ

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಹೊಸ ನೀರು ರಭಸದಿಂದ ಕೂಡಿಕೊಳ್ಳುತ್ತಿರುವ ಕನ್ನಡ ಕಾದಂಬರಿ ಲೋಕಕ್ಕೆ ಮತ್ತೊಂದು ಸೇರ್ಪಡೆ ‘ಧಾವತಿ.’ ಇದು ಹೊಸತಷ್ಟೇ ಅಲ್ಲ, ಗಮನಾರ್ಹ ಸೇರ್ಪಡೆಯೂ ಹೌದು.

ಕೋಲಾರ ಜಿಲ್ಲೆಯ ಲಕ್ಕೂರಿನ ಗಂಗಪ್ಪ ತಳವಾರ್ ಕವಿತೆಗಳ ಮೂಲಕ ಓದುಗರಿಗೆ ಪರಿಚಿತರು. ‘ಧಾವತಿ’ ಕಾದಂಬರಿಯ ಮೂಲಕ ತುಸು ದೀರ್ಘ ಕಥನ ಪ್ರಯೋಗಕ್ಕೆ ಅವರು ತಮ್ಮನ್ನೊಡ್ಡಿಕೊಂಡಿರುವುದು ಕುತೂಹಲಕರ. ಚೊಚ್ಚಿಲ ಪ್ರಯತ್ನದಲ್ಲೇ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ಒಲಿಸಿಕೊಳ್ಳಲು ಅವರು ನಡೆಸಿರುವ ಪ್ರಯತ್ನ ಗಮನಸೆಳೆಯುವಂತಿದೆ.

ಚಂದ್ರಿ ಹಾಗೂ ಅವಳ ತಾಯಿ ದುರ್ಗಿ ಎನ್ನುವ ಇಬ್ಬರು ನತದೃಷ್ಟ ಹೆಣ್ಣುಮಕ್ಕಳ ಕಥೆ ‘ಧಾವತಿ’ಯಲ್ಲಿದೆ. ಈ ಕಾದಂಬರಿಯನ್ನು ಎರಡು ರೂಪದಲ್ಲಿ ನೋಡಬಹುದು. ಒಂದು, ಚಂದ್ರಿ ಎನ್ನುವ ಪುಟ್ಟ ಹುಡುಗಿಯ ಕಣ್ಣುಗಳ ಮೂಲಕ ಕಾಣುವ ಹಳ್ಳಿಯೊಂದರ, ಕೇರಿಯೊಂದರ ಅಸಹಾಯಕ ಬದುಕುಗಳ ಚಿತ್ರಣ. ಎರಡನೆಯದು, ಬೆಳೆದ ಚಂದ್ರಿಯ ಬದುಕಿನ ತಲ್ಲಣಗಳು ಹಾಗೂ ದುರಂತ.

ಅಕ್ಕಮಹಾದೇವಿಯ ವಚನದಿಂದ ಕಡ ತೆಗೆದುಕೊಂಡ ‘ಧಾವತಿ’ ಎನ್ನುವ ಪದಕ್ಕೆ ಧಾವಂತ ಎನ್ನುವ ಅರ್ಥವನ್ನು ಕಾದಂಬರಿಕಾರರು ಹಚ್ಚಿದ್ದಾರೆ. ಸಮೃದ್ಧ ಬದುಕಿಗೆ ಹಂಬಲಿಸಿ ಅತೃಪ್ತಗೊಂಡ ಮನಸ್ಥಿತಿಯನ್ನೂ ಧಾವತಿ ಎನ್ನಬಹುದು. ಇಲ್ಲಿನ ಚಂದ್ರಿಯ ಅಮ್ಮನಿಗೆ ಸಮೃದ್ಧ ಬದುಕಿನ ಹಂಬಲವೇನೂ ಇಲ್ಲ. ಬದುಕನ್ನು ಅದು ಬಂದಂತೆಯೇ ಸ್ವೀಕರಿಸುವ ಮನಸ್ಥಿತಿ ಅವಳದು. ಅಮ್ಮನ ಬದುಕಿನ ದುರಂತಗಳನ್ನು ಕಣ್ಣಾರೆ ಕಂಡ ಚಂದ್ರಿಗೆ ಚಂದದೊಂದು ಬದುಕು ಕಟ್ಟಿಕೊಳ್ಳುವ ಆಸೆ ಸುಪ್ತವಾಗಿದೆ. ಆದರೆ, ಅವಳ ಬದುಕಿನಲ್ಲಿ ಪ್ರವೇಶಿಸುವ ಗಂಡುಗಳಿಗೆ ಚಂದ್ರಿ ತಮ್ಮ ಕಾಮನೆಗಳನ್ನು ತೀರಿಸುವ ದೇಹವಾಗಿ ಕಾಣುತ್ತಾಳೆಯೇ ಹೊರತು, ಆ ದೇಹದೊಳಗಿನ ಮನಸ್ಸನ್ನು ಒಬ್ಬರೂ ಸ್ಪರ್ಶಿಸುವುದೇ ಇಲ್ಲ. ಚಂದ್ರಿ ಹಾಗೂ ಅವಳ ಮಗಳನ್ನು ಅನಾರೋಗ್ಯದ ಸಂದರ್ಭದಲ್ಲಿ ಪೊರೆಯುವ ಮೈದುನನೂ, ಅತ್ತಿಗೆಯನ್ನು ಒಲಿಸಿಕೊಂಡ ನಂತರ ‘ಅಪ್ಪಟ ಗಂಡಸಾಗಿ’ ಬದಲಾಗುತ್ತಾನೆ. ಆಸರೆಯೆಂದು ಭಾವಿಸಿದ್ದೆಲ್ಲ ಸೆರೆಯಾಗಿ ಪರಿಣಮಿಸಿ, ಕೊನೆಗೆ ಚಂದ್ರಿಯ ಬದುಕು ಅವಳ ಅಮ್ಮನ ಸಾವಿನ ಬೆನ್ನಿಗೇ ಕೊನೆಗೊಳ್ಳುತ್ತದೆ.

ಇದು ಮಗಳ ಕಥೆಯೋ ತಾಯಿಯದೋ ಎಂದು ಗೆರೆ ಎಳೆಯುವುದು ಕಷ್ಟವೆನ್ನಿಸುವ ಮಟ್ಟಿಗೆ ಇಬ್ಬರು ಹೆಣ್ಣುಮಕ್ಕಳ ಬದುಕುಗಳು ಕಾದಂಬರಿಯಲ್ಲಿ ಬೆರೆತುಹೋಗಿವೆ. ತಾಯಿ ಮಗಳ ಹೆಸರುಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ತಳವರ್ಗದ ಬಹುತೇಕ ಹೆಣ್ಣುಮಕ್ಕಳ ಸಂಕಟಗಳನ್ನು ಕಾಣಿಸುವ ಸಾಧ್ಯತೆಯಾಗಿಯೂ ‘ಧಾವತಿ’ಯನ್ನು ನೋಡಬಹುದು. ಚಂದ್ರಿಯ ಬಾಳು ಓದುಗರ ಎಣಿಕೆಯನ್ನು ಎಲ್ಲೂ ತಲೆಕೆಳಗು ಮಾಡುವುದಿಲ್ಲ. ಓದುಗನನ್ನು ರೋಮಾಂಚನಗೊಳಿಸುವ ಹುಕಿ ಕಾದಂಬರಿಕಾರರಿಗಿಲ್ಲ. ತನ್ನ ಅನುಭವಲೋಕದ ತುಣುಕೊಂದನ್ನು ಅದು ಇರುವಂತೆಯೇ ಓದುಗರ ಮುಂದಿಟ್ಟು, ಎದೆಯೊಳಗಿನ ನಿಟ್ಟುಸಿರನ್ನು ಹೊರಹಾಕುವ ಪ್ರಯತ್ನ ಇಲ್ಲಿಯದು. ಆ ನಿಟ್ಟುಸಿರು ಓದುಗರ ಎದೆಯನ್ನು ತಾಕಿ ತಲ್ಲಣಗೊಳ್ಳುವಂತೆ ಮಾಡುವುದರಲ್ಲಿ ‘ಧಾವತಿ’ಯ ಯಶಸ್ಸಿದೆ.

ಬಯಸಿದ ಬದುಕು ಸಿಗದೆ, ಸಿಕ್ಕ ಬದುಕೂ ಅಸಹನೀಯವಾಗಿ, ಅವಸರದಲ್ಲಿ ಮುಗಿದುಹೋಗುವ ಚಂದ್ರಿಯ ಬದುಕಿಗೆ ‘ಧಾವತಿ’ ಎನ್ನುವ ರೂಪಕ ಹೊಂದುವಂತಹದ್ದು. ಆದರೆ, ‘ಧಾವತಿ’ಯನ್ನು ರೂಪಿಸುವಾಗ ಕಾದಂಬರಿಕಾರರೂ ಅವಸರಕ್ಕೆ ಬಿದ್ದಂತೆ ಕಾಣಿಸುತ್ತದೆ. ಚಂದ್ರಿಯ ಸಂಕಷ್ಟಗಳನ್ನು ಲಂಬಿಸದೆ, ಭಾವುಕವಾಗಿಸದೆ ಒಂದು ಅಂತರದಲ್ಲಿ ನಿಂತು ಕಥೆ ಹೇಳುವ ತಂತ್ರ ಚೆನ್ನಾಗಿದೆ. ಚಂದ್ರಿ ತನ್ನ ಕಥೆಯನ್ನು ತಾನೇ‌ ಹೇಳಿಕೊಳ್ಳುವ ನಿರೂಪಣೆಯ ತಂತ್ರ ಕಾದಂಬರಿಕಾರರಿಗೆ ಅನುಕೂಲಕರವಾಗಿಯೂ ಇದೆ. ಆದರೆ, ಪಾತ್ರವೇ ಮಾತನಾಡತೊಡಗಿದಾಗ, ಅದಕ್ಕೊಂದು ಚೌಕಟ್ಟು ಸಹಜವಾಗಿಯೇ ಒದಗಿಬಿಡುವುದರಿಂದ, ಚಂದ್ರಿಯ ಪಾತ್ರಕ್ಕೆ ಸಹಜವಾಗಿ ದಕ್ಕಬೇಕಾದ ವಿಸ್ತಾರ ದೊರೆತಿಲ್ಲ ಅನ್ನಿಸುತ್ತದೆ. ಎಂಬತ್ತು ಪುಟಗಳಲ್ಲಿಯೇ ಎರಡು ಬದುಕುಗಳ ಕಥೆ ಕೊನೆಗೊಳ್ಳುತ್ತದೆ. ಶಾಲೆಯಲ್ಲಿನ ಕಲಿಕೆಯ ದಿನಗಳು, ಜಾನುವಾರುಗಳನ್ನು ಮೇಯಿಸುವುದು, ಹೂವು ಬಿಡಿಸಲು ಹೋಗುವುದು, ಜಾತ್ರೆಯ ಸಂಭ್ರಮ ಹಾಗೂ ನಿಟ್ಟುಸಿರು, ಬಾಡಿನ ಸಂಭ್ರಮ, ಮದ್ಯದ ಗಮಲು, ಜಾತೀಯತೆಯ ಸ್ವರೂಪ–ಹೀಗೆ, ಕಥನದ ವಿಸ್ತಾರಕ್ಕೆ ಪೂರಕವಾದ ಅನೇಕ ಸನ್ನಿವೇಶಗಳು ಕಾದಂಬರಿಯಲ್ಲಿವೆ. ಇಂಥ ಸನ್ನಿವೇಶಗಳು ಚಂದ್ರಿಯ ಬದುಕಿನ ಚೆಲುವು ಹಾಗೂ ದುರಂತವನ್ನು ಹೇಗೆ ಧ್ವನಿಸಬಲ್ಲವು ಎನ್ನುವುದನ್ನು ಕಾದಂಬರಿ ಪ್ರಕಾರದ ಸ್ವಾತಂತ್ರ್ಯವನ್ನು ಬಳಸಿಕೊಂಡು ವಿಸ್ತರಿಸಲು ಅವಕಾಶವಿತ್ತು. ಸಣ್ಣಕಥೆಯ ಬಿಗುವಿನಲ್ಲಿ ಕಥೆ ಹೇಳಿರುವ ಗಂಗಪ್ಪ, ವಿವರಗಳ ಚಿತ್ರಣದಲ್ಲಿ ಗಮನಸೆಳೆದರೂ ಧಾರಾಳಿಯಂತೇನೂ ಕಾಣಿಸುವುದಿಲ್ಲ. ಚಂದ್ರಿ ಮತ್ತು ಅವಳ ಅವ್ವನ ಪಾತ್ರಗಳನ್ನು ಹೊರತುಪಡಿಸಿದರೆ, ಕಾದಂಬರಿಯಲ್ಲಿ ಮತ್ತೊಂದು ಗಟ್ಟಿ ಪಾತ್ರವಿಲ್ಲ. ಮನೆಗೆ ಆಗಾಗ ಬಂದುಹೋಗುವ ಅತಿಥಿಯಂತೆ ಮಗಳ ಕಣ್ಣಿಗೆ ಕಾಣಿಸುವ ಪ್ಯಾಂಟಪ್ಪನ ಪಾತ್ರಪೋಷಣೆ ಮತ್ತಷ್ಟು ಅಗತ್ಯವಾಗಿತ್ತು.

‘ಧಾವತಿ’ ಕಾದಂಬರಿಯ ಶಕ್ತಿಯಿರುವುದು ಅದರ ಭಾಷೆಯಲ್ಲಿ. ಗದ್ಯದಲ್ಲಿ ಬಳಕೆಯಾಗುವ ಆಡುಮಾತು ಬಹುತೇಕ ಸಂದರ್ಭಗಳಲ್ಲಿ ಬಿಡುಬೀಸಾಗಿ, ಒರಟಾಗಿ, ವಾಚ್ಯವಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚು. ಆಡುಮಾತಿನಿಂದ ಕಥನಕ್ಕೆ ಪ್ರಾದೇಶಿಕ ಚೆಲುವು ಒದಗಿಬರುತ್ತದೆನ್ನುವುದು ನಿಜವಾದರೂ, ತನ್ನ ಲಯ ಹಾಗೂ ಸೂಕ್ಷ್ಮಗಳನ್ನು ಉಳಿಸಿಕೊಳ್ಳದ ಸಂದರ್ಭದಲ್ಲದು ಬರಹದ ದೌರ್ಬಲ್ಯವಾಗಿಬಿಡುತ್ತದೆ. ತನ್ನ ಮಾತು ಓದುಗನಿಗೆ ಅನ್ಯವೆನ್ನಿಸದಂತೆ ಬರೆಯುವುದು ಬರಹಗಾರ ಎದುರಿಸುವ ಬಹುದೊಡ್ಡ ಸವಾಲು. ಈ ಸವಾಲನ್ನು ನಿಭಾಯಿಸುವಲ್ಲಿ ಗಂಗಪ್ಪ ಯಶಸ್ವಿಯಾಗಿದ್ದಾರೆ. ಕೋಲಾರ ಸೀಮೆಯ ಅವರ ಭಾಷೆ ಮಣ್ಣಿನ ಗುಣದೊಂದಿಗೆ ತನ್ನ ಲಯ ಹಾಗೂ ಕಾವ್ಯದ ಬಿಗು ಉಳಿಸಿಕೊಂಡಿರುವ ಕಾರಣದಿಂದಲೇ ಅದು ಕಾದಂಬರಿಗೆ ಶಕ್ತಿಯಾಗಿ ಪರಿಣಮಿಸಿದೆ. ‘ಧಾವತಿ’ಯಂತೆ, ಕಥೆ ಘಟಿಸುವ ಆವರಣದ ನುಡಿ ಪರಿಣಾಮಕಾರಿಯಾಗಿ ಬಳಕೆಯಾಗಿರುವ ಉದಾಹರಣೆಗಳು ಸದ್ಯದ ಸಂದರ್ಭದಲ್ಲಿ ವಿರಳ.

ಧಾವತಿ

ಲೇ: ಗಂಗಪ್ಪ ತಳವಾರ್

ಪ್ರಕಾಶನ: ತಮಟೆ ಪ್ರಕಾಶನ, ಬೆಂಗಳೂರು.

ಫೋನ್: 9945430119

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT