‘ಧೋ’ ಎಂದು ಸುರಿಯುವ ಮಳೆಯನ್ನು ಭದ್ರವಾದ ಸ್ಥಾವರದಲ್ಲಿ, ಎತ್ತರದ ತಾಣದಲ್ಲಿ ಕುಳಿತು ಆಸ್ವಾದಿಸುವುದು ತುಂಬಾ ಸುಲಭ. ಅದೇ ಮಳೆಗೆ ಸಿಕ್ಕು ಮನೆ ಉರುಳಿಬಿದ್ದ, ಪ್ರೀತಿಪಾತ್ರರಾದವರನ್ನು ಕಳೆದುಕೊಂಡ, ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆ ಎಲ್ಲವೂ ತೇಲಿಹೋದ, ಬದುಕೇ ಮೂರಾಬಟ್ಟೆಯಾದ ಸ್ಥಿತಿಯಲ್ಲಿ ನಾವಿದ್ದರೆ? ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ದಶಕದ ಹಿಂದೆ ಅಂತಹ ಕುಂಭದ್ರೋಣ ಮಳೆ ಮತ್ತು ಅದರಿಂದ ಉಂಟಾದ ಮಹಾಪೂರದಲ್ಲಿ ಇದೇ ರೀತಿ ತತ್ತರಿಸಿ ಹೋಗಿದ್ದವು. ಅಂತಹ ಮಳೆಯ ಅನುಭವಗಳೇ ಚಿದಾನಂದ ಸಾಲಿ ಅವರಿಂದ ‘ಮಳೆ’ ಎಂಬ ನೀಳ್ಗಥೆಯಾಗಿ ಅರಳಿವೆ.

‘ಮಳೆ’ ಕಥೆಯೂ ಹೌದು. ಅದೇ ಉಸಿರಿನಲ್ಲಿ ವಾಸ್ತವಿಕ ಅನುಭವವೂ ಹೌದು. ಆಗೊಮ್ಮೆ ಈಗೊಮ್ಮೆ ಆರ್ಭಟಿಸಿ ಸುರಿಯುವ ಮಹಾಮಳೆ ಎನ್ನುವುದು ಸರ್ಕಾರದ ಆಡಳಿತ ವೈಖರಿ, ಜನರ ಆಕ್ರಂದನ ಹಾಗೂ ಸ್ವಭಾವದ ನಿಜ ಬಣ್ಣವನ್ನು ತೋರಿಸುವ ಸಾಧನವೂ ಹೌದು. ಹಾಗೆ ಬಣ್ಣ ಕಳೆದುಕೊಂಡು ಬೆತ್ತಲೆಯಾಗಿ ನಿಂತವರ ಚಿತ್ರಣವನ್ನು ಈ ಕಥೆ ಮಳೆಯಷ್ಟೇ ಹದವಾಗಿ ಕಟ್ಟಿಕೊಡುತ್ತದೆ. ಇದನ್ನು ಲೇಖಕರು ನೀಳ್ಗಥೆ ಎಂದು ಕರೆದಿದ್ದಾರಾದರೂ ಮುನ್ನುಡಿಯಲ್ಲಿ ಕೇಶವ ಮಳಗಿ ಅವರು ಹೇಳಿದಂತೆ ‘ಮಳೆ’ ಒಂದು ರೀತಿಯ ಕಾದಂಕಥನ.

‘ಆಡಿನಮರಿ ನುಂಗಿದ ಆಯಾಸದಲ್ಲಿ ಸಂತೃಪ್ತಿ ಮತ್ತು ಉದಾಸೀನ ಬೆರೆತಂತೆ ಬಿದ್ದುಕೊಂಡಿರುವ ಹೆಬ್ಬಾವಿನ ಹಾಗೆ, ಈ ಪ್ರದೇಶ
ದಲ್ಲಿ ರಣಬಿಸಿಲೆಂಬುದು ಮೈಚಾಚಿ ಮಲಗಿಕೊಂಡಿರುತ್ತದೆ’– ಹೀಗೆ ಬಿಸಿಲೂರು ಬಯಲುಸೀಮೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾ 2009ರಲ್ಲಿ ಬಯಲುಸೀಮೆಯಲ್ಲಿ ಸುರಿದ ಮಹಾಮಳೆಯ ತಮ್ಮ ಅನುಭವವನ್ನು ‘ತಿಮೋತಿ’ ಪಾತ್ರದ ಮುಖಾಂತರ ಕಥೆಯಾಗಿಸಿದ್ದಾರೆ ಸಾಲಿ.

ಹಳ್ಳಿಯಿಂದ ನಗರಕ್ಕೆ ಬಂದು ಪತ್ರಕರ್ತನಾದ ತಿಮೋತಿ ವೃತ್ತಿಯಲ್ಲಿ ದಕ್ಷ, ಪ್ರಾಮಾಣಿಕ ಮತ್ತು ಕಳಕಳಿಯುಳ್ಳವ. ಈ ಕಾರಣ
ದಿಂದಾಗಿ ಈತನ ಮಾತು ನೇರ; ಮಾತ್ರವಲ್ಲ, ಚುಚ್ಚುವಂಥದ್ದು. ಹಳ್ಳಿಗಳಲ್ಲಿ ಜೀವಂತವಾಗಿರುವ ಮೇಲುಕೀಳಿನ ಬಗ್ಗೆ ಬೀಡಿ ಎಳೆದುಕೊಂಡು ವಿವರಿಸುವ ನದಿಜಾವೂರಿನ ತಾತನ ಮಾತಿನಷ್ಟೇ ಅದು ಹರಿತ. ಪ್ರತೀ ಬಾರಿಯೂ ಪ್ರವಾಹದ ಪರಿಸ್ಥಿತಿ ಎದುರಾದಾಗ ಸರ್ಕಾರ ಮಾಡುವ ಎಡವಟ್ಟುಗಳು, ಪರಿಹಾರದ ಹೆಸರಿನಲ್ಲಿ ಸಂಗ್ರಹವಾಗಿ ನಿರುಪಯುಕ್ತವಾಗುವ ವಸ್ತುಗಳು, ಹೆಸರಿಗಷ್ಟೇ ನಡೆಯುವ ದಾನ ಕಾರ್ಯಗಳು ಮುಂತಾದ ‘ಕೊಳೆ’, ತನ್ನ ಕುರೂಪ ತೋರಿಸುತ್ತಾ ಈ ಮಳೆ ನೀರಿನಲ್ಲಿ ಮೆರವಣಿಗೆ ಹೊರಟಿದೆ.

ಬೆನ್ನುಡಿಯಲ್ಲಿ ನಟರಾಜ ಎಸ್. ಬೂದಾಳು ಅವರೆನ್ನುವಂತೆಯೇ ‘ದುರಂತ ಏನಂದ್ರೆ ವಾಸ್ತವವೇ ಇಲ್ಲಿ ಕಥೆಯಾಗಿದೆ’. ಇದರಲ್ಲಿ ಮಹಾಮಳೆ ಬಿದ್ದಿದ್ದ ಪ್ರದೇಶ, ರಾಜಕೀಯ, ಅಧಿಕಾರಿ ವರ್ಗದ ವಾಸ್ತವದ ಜೊತೆಗೆ ಪ್ರಸ್ತುತ ಪತ್ರಿಕೋದ್ಯಮದ ವಾಸ್ತವವೂ ಢಾಳಾಗಿದೆ. ತಿಮೋತಿ ಹಾಗೂ ಸಂಪಾದಕ ದೇಸಾಯಿ ನಡುವಿನ ಸಂಭಾಷಣೆ ಈ ವಾಸ್ತವಕ್ಕೆ ಸಾಕ್ಷ್ಯ. ಕೆಲಕಾಲ ಪತ್ರಕರ್ತರಾಗಿದ್ದ ಲೇಖಕರ ಅನುಭವವೂ ‘ಮಳೆ’ಯಾಗಿ ಸುರಿದಿದೆ.

‘ಅಪ್ಪ ಬೀಡಿಯ ತುದಿಯನ್ನು ನೆಲಕ್ಕೊರೆಸಿ ಮೂಲೆಗೆಸೆದ. ಅದು ಆತನ ಕದನವಿರಾಮದ ಮತ್ತೊಂದು ಸಂಕೇತ’ – ಇಂತಹ ವಾಕ್ಯ ಬಯಲುಸೀಮೆಯ ಮನೆ ವಾತಾವರಣವನ್ನು ಬಲು ಸಮರ್ಥವಾಗಿ ಕಟ್ಟಿಕೊಡುತ್ತದೆ. ಹೀಗೆ ಓದುತ್ತಾ ಮತ್ತೊಮ್ಮೆ ಓದಿಸುವ ಉಪಮೆಗಳಿಗೆ ಇಲ್ಲಿ ವಿಶೇಷ ಸ್ಥಾನವಿದೆ. ನಡುವೆ ‘ಲೆಫ್ಟಿಸ್ಟ್ ರೈಟಿಸ್ಟ್’ ಅಜೆಂಡಾಗಳ ಬಗ್ಗೆ ಪ್ರಶ್ನೆಗಳೆದ್ದು ಪುಟಗಳು ಉರುಳುವುದರೊಳಗೆ ಉತ್ತರಗಳೂ ಸಿಗುತ್ತವೆ.

‘ಮಳೆ’ ಎನ್ನುವುದು, ‘ಯಾಕಾಗಿ ಮಳೆ ಬಂದವೋ...’ ಎನ್ನುವ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲೇ ಪ್ರಕಟವಾದ ನುಡಿಚಿತ್ರದ ವಿಸ್ತೃತ ಕಥೆಯಾಗಿ ಕಂಡರೂ (ಈ ವಿಸ್ತೃತ ರೂಪ ‘ಸುಧಾ’ದಲ್ಲಿ ಧಾರಾವಾಹಿಯಾಗಿ ಬಂತು) ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ‘ಇಲ್ಲಿನ ಎಲ್ಲ ಪಾತ್ರಗಳೂ ಕಾಲ್ಪನಿಕ. ಇಲ್ಲಿನ ಘಟನೆಗೆ ನಿಜಜೀವನದ ಯಾವುದಕ್ಕಾದರೂ ಕಿಂಚಿತ್ತಾದರೂ
ಹೋಲಿಕೆಯಿದೆ ಅನಿಸಿದಲ್ಲಿ ಅದು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಲ್ಲ’ ಎಂದು ಲೇಖಕರು ಆರಂಭದಲ್ಲಿ ಸ್ಪಷ್ಟಪಡಿಸುವುದೇನೋ ನಿಜ. ಆದರೆ, ಬಯಲುಸೀಮೆಯ ಪ್ರತೀ ಊರಿನ, ಪ್ರತೀ ಮನೆಯ ಕಥೆ ಇದಾಗಿದೆ ಎಂಬ ಭಾವ ಮಹಾಪೂರದ ಚಿತ್ರಣವನ್ನು ಖುದ್ದು ಕಂಡವರಿಗೆ ಅನಿಸದೇ ಇರದು.

ಮಳೆ

ಲೇ: ಚಿದಾನಂದ ಸಾಲಿ

ಪ್ರ: ಪಲ್ಲವ ಪ್ರಕಾಶ, ಚನ್ನಪಟ್ಟಣ

ಸಂ: 8880087235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.