ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜ ಅರಸು ಆಡಳಿತ ಮಾದರಿಯನ್ನು ಅರಸುತ್ತಾ...

ಪುಸ್ತಕ ವಿಮರ್ಶೆ
Last Updated 20 ಆಗಸ್ಟ್ 2019, 7:00 IST
ಅಕ್ಷರ ಗಾತ್ರ

ದೇವರಾಜ ಅರಸು ಕರ್ನಾಟಕ ರಾಜಕಾರಣ ಕಂಡ ವಿಶಿಷ್ಟ ರಾಜಕಾರಣಿ. ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳಿಗೆ ಅಧಿಕಾರ ಒದಗಿಸುವ ಮೂಲಕ ಭಾರತೀಯ ರಾಜಕಾರಣದಲ್ಲೂ ಪ್ರಮುಖ ಸ್ಥಾನ ಗಳಿಸಿರುವ ಅರಸು ಅವರ ಬದುಕು–ಸಾಧನೆಯನ್ನು ನಿಖರವಾಗಿ ಗುರ್ತಿಸುವ ಕೆಲಸಗಳು ಇನ್ನೂ ಆಗಬೇಕಾಗಿದೆ. ಈ ನಿಟ್ಟಿನಲ್ಲೊಂದು ಪ್ರಮುಖ ಪ‍್ರಯತ್ನ ಎ. ನಾರಾಯಣ ಅವರ ‘ದೇವರಾಜ ಅರಸು ಆಡಳಿತದ ಅಜ್ಞಾತ ಮುಖಗಳು’ ಕೃತಿ. ಈ ಅಪ್ರಕಟಿತ ಪುಸ್ತಕದಿಂದ ಆಯ್ದ ಒಂದು ಭಾಗ, ಅರಸು ಅವರ ಬಗ್ಗೆ ಪ್ರಕಟಗೊಂಡಿರುವ ಅಪಾರ ಸಾಹಿತ್ಯವನ್ನೂ ಹಾಗೂ ಆ ಸಾಹಿತ್ಯ ಅರಸು ಸಾಧನೆಯ ಒಂದು ಮುಖವನ್ನಷ್ಟೇ ಚಿತ್ರಿಸಿರುವುದನ್ನೂ ಗುರ್ತಿಸುತ್ತದೆ. ಇದು, ಅರಸು ಜನ್ಮದಿನ ಸಂದರ್ಭದ (ಆ. 20) ವಿಶೇಷ.

‘ಕರ್ನಾಟಕದ ಜನರಿಗೆ ಹೇಳುತ್ತಾ ಹೇಳುತ್ತಾ ಹೇಳದೇ ಉಳಿಸಿದ ಕತೆ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರದ್ದು...’

ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ಏಳು ವರ್ಷ, ಏಳು ತಿಂಗಳು, ಇಪ್ಪತ್ತಮೂರು ದಿನಗಳಷ್ಟು ಸುದೀರ್ಘ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು (1915-1982) ಅವರ ಬಗ್ಗೆ ಹೀಗೆ ಒಗಟಾಗಿ ಬರೆದದ್ದು ‘ಇಂಡಿಯಾ ಟುಡೇ’ ಇಂಗ್ಲಿಷ್ ವಾರಪತ್ರಿಕೆ.

1980ರಲ್ಲಿ ಅರಸು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ನಂತರ ಕರ್ನಾಟಕದ ಕುರಿತು ಒಂದು ಸಮಗ್ರ ಲೇಖನ ತಯಾರಿಸಲು ‘ಇಂಡಿಯಾ ಟುಡೇ’ ಓರ್ವ ಪ್ರಖ್ಯಾತ ರಾಜಕೀಯ ಶಾಸ್ತ್ರಜ್ಞರನ್ನು ವಿಶೇಷ ಪ್ರತಿನಿಧಿಯಾಗಿ ದೆಹಲಿಯಿಂದ ಬೆಂಗಳೂರಿಗೆ ಕಳುಹಿಸಿಕೊಡುತ್ತದೆ. ಆ ಪ್ರತಿನಿಧಿಯ ಹೆಸರು ಬಬಾನಿ ಸೇನ್ ಗುಪ್ತ– ಇಂಗ್ಲಿಷ್‌ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಲವು ಪುಸ್ತಕಗಳ ಲೇಖಕ ಮತ್ತು ವಿವಾದಾತ್ಮಕ ನಿಲುವುಗಳಿಗೆ ಪ್ರಸಿದ್ಧರಾದ ಅಂತರರಾಷ್ಟ್ರೀಯ ರಾಜಕೀಯ ಸಂಬಂಧಗಳ ವಿಶ್ಲೇಷಕ. ಕರ್ನಾಟಕಕ್ಕೆ ಬಂದ ಸೆನ್ ಗುಪ್ತ, ದೇವರಾಜ ಅರಸು ಅವರನ್ನು ಸಂದರ್ಶಿಸುತ್ತಾರೆ. ಅರಸು ಆಗ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದರು.

ಸೇನ್ ಗುಪ್ತ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಬರಹಗಾರರು, ಮಾಧ್ಯಮ ಪ್ರತಿನಿಧಿಗಳು ಮುಂತಾಗಿ ಅರಸು ಪರ– ವಿರೋಧ ಪಾಳಯದಲ್ಲಿದ್ದ ಹಲವಾರು ಮಂದಿಯನ್ನು ಸಂದರ್ಶಿಸುತ್ತಾರೆ. ಅರಸು ಕಾಲದ ಆಗುಹೋಗುಗಳ ಬಗ್ಗೆ ಲಭ್ಯವಿದ್ದ ಸರ್ಕಾರಿ ಮತ್ತು ಸರ್ಕಾರೇತರ ದಾಖಲೆಗಳನ್ನು ಓದುತ್ತಾರೆ. ಹೀಗೆ ಭಾರೀ ವಿಷಯ ಸಂಗ್ರಹದ ನಂತರ ಅವರು ಬರೆದ ಸುಮಾರು 11,000 ಪದಗಳ ಲಂಬಿತ ಲೇಖನದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಬಗ್ಗೆ ಚಾರಿತ್ರಿಕ ಮತ್ತು ಸಮಕಾಲೀನ ಚಿತ್ರಣವೊಂದನ್ನು ಕಟ್ಟಿಕೊಡುತ್ತಾರೆ.

ಅಧ್ಯಾಯದ ಆರಂಭದಲ್ಲಿ ನೀಡಿದ ಅರಸು ಅವರ ಬಗೆಗಿನ ಒಗಟಾದ ಸಾಲು ಕಾಣಿಸಿಕೊಂಡದ್ದು ಈ ಲೇಖನದಲ್ಲಿ. ಇಂದಿನ ಸಂದರ್ಭದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಈ ವಾಕ್ಯದ ಪೂರ್ಣರೂಪ ಹೀಗಿದೆ: ‘1970ರ ದಶಕದಲ್ಲಿ (ಅಂದರೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ) ಕರ್ನಾಟಕ ಕಂಡ ಮೌನ ಕ್ರಾಂತಿಯನ್ನು ಸಮಗ್ರವಾಗಿ ದಾಖಲಿಸುವ ಕೆಲಸ ನಡೆದಿಲ್ಲ ಎನ್ನುವುದು ತೀರಾ ವಿಷಾದಕರ. ಸರ್ಕಾರ ಮತ್ತು ಮಾಧ್ಯಮಗಳು ಸೇರಿ ಅರಸು ಅವರ ಕತೆಯನ್ನು ಜನರಿಗೆ ಹೇಳುತ್ತಾ ಹೇಳುತ್ತಾ ಹೇಳದೇ ಉಳಿಸಿದವು’.

ಈ ಲೇಖನ ಪ್ರಕಟವಾಗಿ ಕೆಲವೇ ತಿಂಗಳುಗಳಲ್ಲಿ ಅರಸು ತೀರಿಹೋಗುತ್ತಾರೆ (ಜೂನ್ 6, 1982). ಆಗಿನಿಂದ ಇಂದಿನವರೆಗಿನ ಮೂರೂವರೆ ದಶಕಗಳಲ್ಲಿ ಅರಸು ಬಗ್ಗೆ ಬ೦ದ ಬರಹಗಳಿಗೆ ಲೆಕ್ಕವಿಲ್ಲ. ರಾಜ್ಯಮಟ್ಟದಲ್ಲಿ ಮಾತ್ರವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅರಸು ಬಗ್ಗೆ ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ಲಂಡನ್ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರಜ್ಞ ಪ್ರೊ.ಜೇಮ್ಸ್ ಮ್ಯಾನರ್ ತಮ್ಮ ವೃತ್ತಿ ಜೀವನದುದ್ದಕ್ಕೂ ಅರಸು ಕಾಲದ ಸಾಮಾಜಿಕ, ರಾಜಕೀಯ ಬದಲಾವಣೆಗಳ ಬಗ್ಗೆ ಮತ್ತೆ ಮತ್ತೆ ಬರೆದರು. ಅರಸು ರಾಜಕೀಯವನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳ ವಿಶಿಷ್ಟ ರಾಜಕಾರಣಿಗಳ ರಾಜಕೀಯಕ್ಕೆ ಹೋಲಿಸಿ ಪ್ರೌಢ ಪ್ರಬಂಧಗಳನ್ನು ರಚಿಸಿದರು. ಅರಸು ಅವರನ್ನು ಹಲವು ಬಾರಿ ಭೇಟಿ ಮಾಡಿ ಸಂದರ್ಶನ ನಡೆಸಿದ್ದ ಜೇಮ್ಸ್ ಮ್ಯಾನರ್, ಅರಸು ಬಗ್ಗೆ ಇನ್ನೂ ಬರೆಯುತ್ತಲೇ ಇದ್ದಾರೆ.

ಅಮೆರಿಕದ ಜಗತ್ಪ್ರಸಿದ್ಧ ಪ್ರಿನ್‌ಸ್ಟನ್ ವಿಶ್ವವಿದ್ಯಾಲಯದ ಭಾರತೀಯ ಸಂಜಾತ ರಾಜಕೀಯ– ಅರ್ಥಶಾಸ್ತ್ರಜ್ಞ ಅತುಲ್ ಕೊಹ್ಲಿ ಅರಸು ಆಡಳಿತದ ಬಗ್ಗೆ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಬರೆದರು. ಭಾರತ ಕಂಡ ಪ್ರಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್. ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರೊ.ಎಂ.ಎನ್. ಪಾಣಿನಿ ಅವರ ಜೊತೆ ಅರಸು ಕಾಲದ ಸಮಗ್ರ ಆಗುಹೋಗುಗಳನ್ನು ವಿಶ್ಲೇಷಿಸಿ ಬರೆದರು. ಬೆಂಗಳೂರಿನ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ ಸ್ಟಡೀಸ್’ನ ನರೇಂದ್ರ ಪಾಣಿ, ಮೆಡ್ರಾಸ್ ಇನ್‌ಸ್ಟಿಟ್ಯೂಟ್‌ ಆಫ್ ಡೆವಲಪ್ಮೆಂಟ್ ಸ್ಟಡೀಸ್‌ನ ನಿರ್ದೇಶಕ ವಿ.ಕೆ. ನಟರಾಜ್, ಜವಾಹರ್‌ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಇನ್ನೊಬ್ಬ ಪ್ರೊ.ವಲೇರಿಯನ್ ರಾಡ್ರಿಗಸ್ ಮೊದಲಾಗಿ ಹಲವು ಹೆಸರಾಂತ ವಿದ್ವಾಂಸರು ಅರಸು ಕೊಡುಗೆಗಳನ್ನು ಬಗೆ ಬಗೆಯಾಗಿ ವಿಶ್ಲೇಷಿಸಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅರಸು ಆಡಳಿತದ ಬಗ್ಗೆ ಕನಿಷ್ಠ ಎರಡು ಪೂರ್ಣ ಪ್ರಮಾಣದ ಪಿಎಚ್.ಡಿ ಪ್ರಬಂಧಗಳು ಹೊರಬಂದಿವೆ.

ಇವಿಷ್ಟು ಅಕಡೆಮಿಕ್ ವಲಯಗಳಲ್ಲಿ ಅರಸು ಕುರಿತಾಗಿ ನಡೆದ ಸಂಶೋಧಗಳ ವಿಚಾರವಾಯಿತು. ಇನ್ನು ಅರಸು ಅವರ ಸಂಪುಟ ಸಹೋದ್ಯೋಗಿ ಡಿ.ಕೆ. ನಾಯ್ಕರ್ ಅರಸು ಬಗ್ಗೆ ಪುಸ್ತಕ ಬರೆದಿದ್ದಾರೆ. ಅರಸು ಕಾಲದಲ್ಲಿ ಪತ್ರಕರ್ತರಾಗಿ ಅರಸು ಅವರನ್ನು ಹತ್ತಿರದಿಂದ ಕಂಡಿದ್ದ ಐ.ಕೆ. ಜಾಗೀರ್ದಾರ್ ಮತ್ತು ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಅರಸು ಕಾಲದ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಎ.ಎಸ್‌. ರಾಜನ್ ಮತ್ತು ನಿವೃತ್ತ ಐಎಫ್ಎಸ್‌ ಅಧಿಕಾರಿ ಎ.ಎನ್. ಯಲ್ಲಪ್ಪರೆಡ್ಡಿ ಅರಸು ಕಾಲದಲ್ಲಿ ತಮ್ಮ ತಮ್ಮ ವೃತ್ತಿ ಜೀವನದಲ್ಲಾದ ಅನುಭವಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಬಿಡಿ ಬಿಡಿಯಾಗಿ ಅರಸು ಅವರ ಬಗ್ಗೆ ಬರೆದ ಲೇಖನಗಳ ಸಂಕಲನ ರೂಪದಲ್ಲಿ ಹಲವು ಪುಸ್ತಕಗಳು ಪ್ರಕಟವಾಗಿವೆ. ಹಾಗೆಯೇ ಅರಸು ಕಾಲದ ಪ್ರಮುಖ ಸಾಧನೆಗಳೆಂದು ಸಾಮಾನ್ಯವಾಗಿ ಗುರುತಿಸಲ್ಪಡುವ ಭೂ ಸುಧಾರಣೆ, ಹಿಂದುಳಿದವರಿಗೆ ನೀಡಿದ ಮೀಸಲಾತಿ ಮತ್ತು ತಳವರ್ಗದವರ ರಾಜಕೀಯ ಜಾಗೃತಿ ಇವುಗಳ ಕುರಿತಾಗಿ ಅಸಂಖ್ಯ ಬಿಡಿ ಬರಹಗಳು ಮತ್ತು ಪುಸ್ತಕಗಳು ಬಂದಿವೆ.

ಭಾರತದಲ್ಲಿ ಅಧಿಕಾರ ಹಿಡಿದ ರಾಜಕೀಯ ನಾಯಕರ ಪೈಕಿ ನೆಹರೂ ಕುಟುಂಬದವರನ್ನು ಹೊರತು ಪಡಿಸಿದರೆ ಇನ್ನೊಬ್ಬ ನಾಯಕ ಅಥವಾ ನಾಯಕಿಯ ಬಗ್ಗೆ ಇಷ್ಟೊಂದು ಬರಹಗಳು ಬಹುಶಃ ಬಂದಿಲ್ಲ. ಕರ್ನಾಟಕವಂತೂ ಈ ಮಟ್ಟಕ್ಕೆ ದೇಶ ಮತ್ತು ವಿದೇಶಗಳ ವಿದ್ವಾ೦ಸರ ಗಮನ ಸೆಳೆದ ಇನ್ನೊಬ್ಬ ರಾಜಕಾರಣಿಯನ್ನು ಕಂಡಿಲ್ಲ. ಹೀಗಾಗಿ ಅರಸು ಅವರ ಕೊಡುಗೆಗಳ ಬಗ್ಗೆ ಸರಿಯಾದ ದಾಖಲಾತಿಯೇ ನಡೆದಿಲ್ಲ ಎಂದು 1980ರ ದಶಕದಲ್ಲಿ ಬಬಾನಿ ಸೆನ್ ಗುಪ್ತ ಹೇಳಿದ್ದು ಕೊನೆಗೂ ಸುಳ್ಳಾಗಲಿಲ್ಲವೇ ಎಂಬ ಪ್ರಶ್ನೆ ಯಾರಾದರೂ ಕೇಳಬಹುದು.

ಈ ಪ್ರಶ್ನೆಗೆ ‘ಹೌದು’ ಎನ್ನುವ ಉತ್ತರವನ್ನು ಯಾರಾದರೂ ಸಹಜವಾಗಿಯೇ ನಿರೀಕ್ಷಿಸಬಹುದು. ಆದರೆ, ಅರಸು ಚರಿತೆಯ ವಿಶೇಷ ಏನು ಅಂದರೆ ಇಷ್ಟೆಲ್ಲಾ ಬರವಣಿಗೆಗಳು ಅರಸು ಅವರ ಕುರಿತಾಗಿ ಬಂದಿದ್ದರೂ ಬಬಾನಿ ಸೆನ್ ಗುಪ್ತ ಅಂದು ಹೇಳಿದ್ದು ಇಂದಿಗೂ ಅರಸು ವಿಚಾರದಲ್ಲಿ ಸತ್ಯವಾಗಿಯೇ ಉಳಿದಿದೆ. ಇಷ್ಟೆಲ್ಲಾ ಮಂದಿ ಕರ್ನಾಟಕದ ಜನರಿಗೆ ಅರಸು ಕತೆಯನ್ನು ಕಳೆದ 30–40 ವರ್ಷಗಳಿಂದ ಹೇಳುತ್ತಲೇ ಇದ್ದರೂ ಅರಸು ಕತೆ ಇನ್ನೂ ಹೇಳದೆ ಉಳಿದಿದೆ! ಹೀಗಾಗಿದ್ದು ಹೇಗೆ? ಏನೀ ವಿರೋಧಾಭಾಸ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಅರಸು ಅವರ ಮೇಲೆ ಸೃಷ್ಟಿಯಾದ ಬರವಣಿಗೆಗಳ ಮೇಲೊಂದು ಸೂಕ್ಷ್ಮದೃಷ್ಟಿಯನ್ನು ಬೀರಬೇಕು.

ಅನುಭವ ಕಥನಗಳು ಮತ್ತು ಮಾಧ್ಯಮ ಬರಹಗಳು ಕೆಲವೊಮ್ಮೆ ಅರಸು ಕಾಲದ ಇತರ ವಿಚಾರಗಳತ್ತ ಗಮನಹರಿಸಿದರೂ ಅವುಗಳು ಒಂದು ಅಥವಾ ಎರಡು ವಿಷಯಗಳಿಗಷ್ಟೇ ಸೀಮಿತವಾಗಿದ್ದು ಆ ಕಾಲದ ಸಮಗ್ರ ಚಿತ್ರಣವನ್ನು ಪಡೆಯಲು ನೆರವಾಗುವುದಿಲ್ಲ. ಉದಾಹರಣೆಗೆ ಯಲ್ಲಪ್ಪರೆಡ್ಡಿ ಅವರ ಪುಸ್ತಕದಲ್ಲಿ ಅರಸು ಆಡಳಿತಾವಧಿಯಲ್ಲಿ ಅರಣ್ಯ ಇಲಾಖೆಯಲ್ಲಿ ಆದ ಕೆಲ ಮಹತ್ವದ ನೀತಿ ನಿರೂಪಣೆ ಮತ್ತು ಯೋಜನೆಗಳ ವಿವರ ಸಿಗುತ್ತವೆ. ಆದರೆ, ಅದು ಒಂದು ಇಲಾಖೆಗೆ ಸಂಬಂಧಿಸಿದ ವಿವರವಾಯಿತು.

ಮಾಧ್ಯಮ ಬರಹಗಳಿಗೆ ಅವುಗಳದ್ದೇ ಆದ ಮಿತಿ ಇದೆ. ಆದರೂ, ಅರಸು ಅವರ ಕುರಿತು ಅಧ್ಯಯನ ಮಾಡುವವರಿಗೆ ರಘುರಾಮ ಶೆಟ್ಟಿ ಮತ್ತು ಜಾಗೀರ್ದಾರ್ ಬರೆದ ಪುಸ್ತಕಗಳೇ ಅರಸು ವಿಚಾರದಲ್ಲಿ ಒಂದು ಸಮಗ್ರ ನೋಟ ಒದಗಿಸುವುದು. ಬಹಳ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ವಿಷಯ ಎಂದರೆ ಇಷ್ಟೆಲ್ಲಾ ಬಳವಳಿ ಬಿಟ್ಟು ಹೋಗಿರುವ ಅರಸು ಅವರ ಒಂದು ಅಧಿಕೃತ ಜೀವನ ಚರಿತ್ರೆ ಇನ್ನೂ ಪ್ರಕಟವಾಗಿಲ್ಲ. ಈಗಿನ ಕೆಲ ನಾಯಕರು ಅಧಿಕಾರ ವಹಿಸಿ ಕೆಲಸ ಪ್ರಾರಂಭಿಸುವುದಕ್ಕೆ ಮೊದಲೇ ಅವರ ಅಧಿಕೃತ ಜೀವನ ಚರಿತ್ರೆ ಮಾರುಕಟ್ಟೆಯಲ್ಲಿರುತ್ತದೆ. ಹಾಗಿರುವಾಗ ಕರ್ನಾಟಕ ಕಂಡ ಒಬ್ಬ ಧೀಮಂತ ನಾಯಕ ಅರಸು ಅವರ ಒಂದು ಸಣ್ಣ ಗಾತ್ರದ ಜೀವನ ಚರಿತ್ರೆಯಾದರೂ ಈ ತನಕ ಹೊರಬಂದಿಲ್ಲ ಎನ್ನುವುದು ದೊಡ್ಡ ಕೊರತೆ.

ಅರಸು ಮತ್ತು ಅವರ ಕೊಡುಗೆಗಳ ಕುರಿತಾದ ನಮ್ಮ ಅರಿವನ್ನು ವಿಸ್ತರಿಸುವಲ್ಲಿ ಎರಡು ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಮೊದಲನೆಯದ್ದು: ಈಗಾಗಲೇ ಅರಸು ಅವರ ಸಾಧನೆಗಳು ಎಂದು ಬಣ್ಣಿಸಿರುವ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣ ವಿಷಯಗಳಾಚೆ ಅರಸು ಆಡಳಿತದಲ್ಲಿ ಏನೇನು ಆದವು ಎನ್ನುವುದು. ಎರಡನೆಯದ್ದು, ಅರಸು ಮಾಡಿದ್ದನ್ನೆಲ್ಲಾ ಅವರಿಗೆ ಹೇಗೆ ಮಾಡಲು ಸಾಧ್ಯವಾಯಿತು ಎನ್ನುವುದು.

ಮೊದಲನೆಯ ಪ್ರಶ್ನೆ ಯಾಕೆ ಮುಖ್ಯವಾಗುತ್ತದೆ ಎಂದರೆ ಈಗಾಗಲೇ ಹೇಳಿದಂತೆ ಅರಸು ಕಾಲದಲ್ಲಿ ಏನೇನು ಬೆಳವಣಿಗೆಗಳಾಗಿವೆ ಎನ್ನುವ ಕಥನ ಅಪೂರ್ಣವಾಗಿ ಉಳಿದಿದೆ ಎನ್ನುವ ಕಾರಣಕ್ಕೆ. ಕೆಲವು ಉದಾಹರಣೆಗಳನ್ನು ನೋಡೋಣ. ಅರಸು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ನಾಯಕ ಎ೦ದು ಎಲ್ಲರೂ ಹೇಳುತ್ತಾರೆ. ಆದರೆ, ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಭೂಮಿಯ ಮರು ಹಂಚಿಕೆ, ಹಿಂದುಳಿದವರಿಗೆ ಉದ್ಯೋಗದಲ್ಲಿ ನೀಡಿದ ಮೀಸಲಾತಿ, ತಳವರ್ಗದವರಿಗೆ ಸಂಪನ್ಮೂಲಗಳಲ್ಲಿ ಮತ್ತು ರಾಜಕೀಯ ಅಧಿಕಾರದಲ್ಲಿ ದೊರಕಿದ ಹೆಚ್ಚಿನ ಪಾಲು ಎಂದಷ್ಟೇ ಭಾವಿಸಲಾಗಿದೆ. ಆದರೆ, ಅರಸು ಕಾಲದ ಎಲ್ಲ ನೀತಿಗಳನ್ನು ಮತ್ತು ಬೆಳವಣಿಗೆಗಳನ್ನು ನೋಡುವಾಗ ಅವರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಇಷ್ಟಕ್ಕೆ ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ. ಅರಸು ಎತ್ತಿ ಹಿಡಿದ ಸಾಮಾಜಿಕ ನ್ಯಾಯವನ್ನು ಅವರಿಗೆ ಅಭಿವೃದ್ಧಿಯ ಬಗ್ಗೆ ಇದ್ದ ಸಮಗ್ರ ದೃಷ್ಟಿಕೋನದ ಭಾಗವಾಗಿ ಕಾಣುವ ಅಗತ್ಯವಿದೆ.

ಶಾಸಕರ ಕ್ರೀಡಾಕೂಟದ ವೇಳೆ ಬ್ಯಾಟ್‌ ಹಿಡಿದು ಕ್ರಿಕೆಟ್‌ ಆಡಲು ಹೊರಟಿರುವ ಡಿ. ದೇವರಾಜ ಅರಸು
ಶಾಸಕರ ಕ್ರೀಡಾಕೂಟದ ವೇಳೆ ಬ್ಯಾಟ್‌ ಹಿಡಿದು ಕ್ರಿಕೆಟ್‌ ಆಡಲು ಹೊರಟಿರುವ ಡಿ. ದೇವರಾಜ ಅರಸು

ಅದೇ ರೀತಿ 1956ರಲ್ಲಿ ಏಕೀಕರಣಗೊಂಡ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಆದದ್ದು ಅರಸು ಅವರ ಕಾಲದಲ್ಲಿ ಎನ್ನುವುದನ್ನು ಎತ್ತಿ ಹೇಳಲಾಗುತ್ತಿದೆ. ಇಂದೊಂದು ರಾಜಕೀಯ ನಿರ್ಣಯ. ಇದನ್ನು ಸಾಧ್ಯವಾಗಿಸುವಲ್ಲಿ ಅರಸು ಅವರ ಮುತ್ಸದ್ಧಿತನದ ಪಾತ್ರ ಇದೆ. ಆದರೆ, ಇದರಾಚೆಗೆ ಕರ್ನಾಟಕದ ಏಕೀಕರಣವನ್ನು ಸಂಪೂರ್ಣಗೊಳಿಸುವ ಹಲವಾರು ಆಡಳಿತಾತ್ಮಕ ನಿರ್ಧಾರಗಳು ಅರಸು ಅವರ ಕಾಲದಲ್ಲಿ ಆಗಿದ್ದು ಎನ್ನುವ ಅಂಶ ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದೆ ಉಳಿದಿದೆ.

ಉದಾಹರಣೆಗೆ ಕರ್ನಾಟಕದಾದ್ಯಂತ ಇರುವ ನಗರಪಾಲಿಕೆಗಳಿಗೆ ಒಂದು ಏಕರೂಪದ ಕಾಯ್ದೆ (ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1975) ಜಾರಿಯಾದದ್ದು ಅರಸು ಕಾಲದಲ್ಲಿ. ಅಲ್ಲಿಯವರೆಗೆ ರಾಜ್ಯದ ಬೇರೆ ಬೇರೆ ನಗರ ಪಾಲಿಕೆಗಳು ಬೇರೆ ಬೇರೆ ಕಾಯ್ದೆಯಡಿ ಕೆಲಸ ಮಾಡುತ್ತಿದ್ದವು. ಇಷ್ಟು ಮಾತ್ರವಲ್ಲ. ಈ ಕಾಯ್ದೆಯಲ್ಲಿ ನಗರಾಡಳಿತಕ್ಕೆ ಸಂಬಂಧಿಸದ ಹಲವಾರು ಆರೋಗ್ಯಕರ ಅಂಶಗಳಿವೆ. ಆದುದರಿಂದಲೇ ಈ ಕಾಯ್ದೆ 1993ರಲ್ಲಿ ಸಂವಿಧಾನಕ್ಕೆ 74ನೇ ತಿದ್ದುಪಡಿಯಾದ ನಂತರವೂ ವಿಶೇಷ ಬದಲಾವಣೆ ಇಲ್ಲದೆ ಇಂದಿಗೂ ಉಳಿದುಕೊಂಡಿದೆ ಎನ್ನುವುದನ್ನು ಗುರುತಿಸಬೇಕು.

ಹಾಗೆಯೇ ಕರ್ನಾಟಕಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಿಗೆ ಒಂದು ಏಕೀಕೃತ ಕಾಯ್ದೆ ತಂದದ್ದು ಕೂಡ ಅರಸು ಆಡಳಿತ. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ಉದಾಹರಣೆ ಎಂದರೆ, ಎಂಬತ್ತರ ದಶಕದ ಕೊನೆಯ ಭಾಗದಿಂದ ಆರಂಭಿಸಿ ಇಲ್ಲಿಯವರೆಗೆ ಕರ್ನಾಟಕ ದೇಶದ ಗಮನವನ್ನು ಸೆಳೆಯಲು ಸಾಧ್ಯವಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ. ಈ ವಿಷಯಕ್ಕೆ ಬಂದಾಗ ಇದು ಅರಸು ನಂತರದ ಕಾಲದಲ್ಲಿ ಕರ್ನಾಟಕ ಕಂಡ ಬೆಳವಣಿಗೆ ಎಂದೇ ಎಲ್ಲರೂ ಭಾವಿಸುತ್ತಾರೆ. ಇದನ್ನು ಪ್ರಾರಂಭಿಸಿದ ಖ್ಯಾತಿ ಯಾರಿಗೆ ಸಲ್ಲಬೇಕು ಎಂಬ ಚರ್ಚೆಯಲ್ಲಿ ಅರಸು ಅವರ ಹೆಸರು ಕೇಳಿಸುವುದಿಲ್ಲ. ಆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಎಲ್ಲಾ ಬೆಳವಣಿಗೆಗಳಿಗೆ ತಳಹದಿ ಎನ್ನಬಹುದಾದ ಬೆಂಗಳೂರಿನ ‘ಎಲೆಕ್ಟ್ರಾನಿಕ್ಸ್ ಸಿಟಿ’ಯ ನಿರ್ಮಾಣವಾದದ್ದು ಅರಸು ಅವರ ಕಾಲದಲ್ಲಿ.

ಹೀಗೆ ಗುರುತಿಸುತ್ತಾ ಹೋದರೆ ಅರಸು ಕಾಲದಲ್ಲಿ ಆದ ಹಲವಾರು ಆಡಳಿತಾತ್ಮಕ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಇವುಗಳನ್ನೆಲ್ಲ ಒಂದು ಸಮಗ್ರ ವಿಶ್ಲೇಣಾತ್ಮಕ ಚೌಕಟ್ಟಿನಲ್ಲಿ ಇಟ್ಟು ನೋಡದೆ ಹೋದದ್ದು ಅರಸು ಕೊಡುಗೆಗಳ ಸಂಕಥನವನ್ನು ಅಪೂರ್ಣವಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT