ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಅಲೆಮಾರಿ ಗ್ರಹಿಸಿದ ಜಪಾನ್‌ ಬದುಕು

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಶೀರ್ಷಿಕೆಯ ಮೂಲಕವೇ ಜಪಾನ್‌ಗೊಂದು ಕೃತಜ್ಞತೆಯ ನಮಸ್ಕಾರ ಹೇಳುತ್ತಲೇ ಜಪಾನ್‌ ಅನುಭವ ಕಥನಗಳನ್ನು ದಾಖಲಿಸಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ. ದೇಶ ಸುತ್ತಲು ಲಾರಿ ಡ್ರೈವರ್‌ ಆಗುತ್ತೇನೆ ಎಂದು ಹೇಳಿದ್ದ ಕನವರಿಕೆಯಿಂದ ಹಿಡಿದು ವಿಮಾನ, ಜಪಾನ್‌ನ ಮೆಟ್ರೊ ರೈಲು ಹತ್ತುವವರೆಗಿನ ಸಣ್ಣ ಸಣ್ಣ ಮೆಟ್ಟಿಲುಗಳನ್ನೂ ನೆನಪಿಸಿಕೊಂಡಿದ್ದಾರೆ. ಜಪಾನ್‌ಗೆ ಹೋಗಬೇಕಾದರೆ ಖರ್ಚಿಗೆ ತಕ್ಕಷ್ಟು ಇರಲಿ ಎಂದು ಉರು ಹೊಡೆದುಕೊಂಡ ಜಪಾನಿ ಪದಗಳ ಪಟ್ಟಿಯನ್ನು ಮಾಡುತ್ತಾ ರಸಭರಿತ ವಿವರಣೆಯನ್ನು ನೀಡುತ್ತಾರೆ ಲೇಖಕರು. ಅಣು ಬಾಂಬ್‌ ದಾಳಿಯ ಕುರುಹು ಉಳಿಯದಂತೆ ಹಸಿರು ಹೊದ್ದು, ಕಟ್ಟಡಗಳು ಎದ್ದು ಬೆಳೆದ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಕಥೆಯನ್ನು ನಿರೂಪಿಸುತ್ತಾ, ಪಠ್ಯಗಳಲ್ಲೋ, ಮಾಧ್ಯಮಗಳಲ್ಲೋ ಕೇಳಿದ ಉತ್ಪ್ರೇಕ್ಷಿತ ವಿವರಗಳಿಗಿಂತ ಕಣ್ಣಾರೆ ಕಂಡ ಅನುಭವ ವೇದ್ಯ ದರ್ಶನವೇ ಬೇರೆ ಎಂದು ಅಲೆಮಾರಿತನದ ಅಗತ್ಯವನ್ನೂ ಹೇಳಿದ್ದಾರೆ.

ಒಂದು, ಎರಡು ಪುಟಗಳ ಪುಟ್ಟ ಪುಟ್ಟ ಬರಹಗಳು ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ. ಬೌದ್ಧ ಮಂದಿರದಲ್ಲಿ ಸಿಕ್ಕ ಕೊಳಲ ಗುರು, ಕೊಳಕ ಚಾಲಕ ಟಿಮ್ಕಾ, ಸಾರಿಗೆ ವ್ಯವಸ್ಥೆ, ಜಪಾನಿಯರ ಪ್ರಾಮಾಣಿಕತೆ ಮತ್ತು ಭಾರತೀಯರ ಪ್ರಾಮಾಣಿಕತೆಯ ತುಲನೆ ಒಂದು ಕ್ಷಣ ನಮ್ಮನ್ನೇ ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ.

ತುಂಬಾ ವಿವರವಾಗಿರುವುದು ರೈತರ ಮನೆಯಲ್ಲಿ ಲೇಖಕರ ವಾಸ. ಇಂಗ್ಲಿಷ್‌ ಬಾರದ ಅಲ್ಲಿನ ಜನರ ಜೊತೆ ಲೇಖಕರು ಸಂವಾದ ನಡೆಸಿ ಅದನ್ನು ಅರ್ಥಮಾಡಿಕೊಂಡ ಪರಿ ಅಲ್ಲಲ್ಲಿ ನಗು ತರಿಸುತ್ತದೆ. ಆದರೆ, ಕೃಷಿ ಯಾಂತ್ರಿಕತೆಯ ವಿವರಗಳು ಮತ್ತು ಸಣ್ಣ ರೈತರೂ ಅದನ್ನು ಸಮರ್ಪಕವಾಗಿ ಬಳಸುವ ಪರಿ, ಸಾವಯವ ಪದ್ಧತಿ ಅನುಸರಿಸುವುದು ಇತ್ಯಾದಿ ಬೆರಗು ಮೂಡಿಸುತ್ತವೆ.

ಜಗತ್ತಿನ ಸಿನಿಪ್ರಿಯರ ಕಣ್ಮಣಿಗಳಲ್ಲಿ ಒಬ್ಬನಾದ ಅಕಿರ ಕುರಸೊವಾನಿಗೊಂದು ಗೌರವ ಸಲ್ಲಿಸಿದ್ದಾರೆ ನಾಗತಿಹಳ್ಳಿ. ‘ಟೋಕಿಯೊ ಟ್ರಯಲ್‌’ನೊಂದಿಗೆ ಕೃತಿ ಅಂತ್ಯವಾಗುತ್ತದೆ.

ಕೃತಿ: ಅರಿಗಟೊ ಗೊಜಾಯಿಮಸ್‌
ಲೇ: ನಾಗತಿಹಳ್ಳಿ ಚಂದ್ರಶೇಖರ
ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಬೆಂಗಳೂರು
ಸಂ: 9845878899

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT