ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ಜೀವನ ಶಿಲ್ಪ’ ಪುಸ್ತಕ ವಿಮರ್ಶೆ: ಸಮ್ಮಿಶ್ರಣ ಸಾಧ್ಯತೆಯ ಹದ, ಓದಿನ ಮುದ

ದೃಶ್ಯ ಕಲಾವಿದ ವೆಂಕಟಾಚಲಪತಿ ಅವರನ್ನು ಕುರಿತಾದ
Published 28 ಮೇ 2023, 0:04 IST
Last Updated 28 ಮೇ 2023, 0:04 IST
ಅಕ್ಷರ ಗಾತ್ರ

–ಎಚ್. ಎ. ಅನಿಲ್ ಕುಮಾರ್

ದೃಶ್ಯ ಕಲಾವಿದ ವೆಂಕಟಾಚಲಪತಿ ಅವರನ್ನು ಕುರಿತಾದ ಈ ದ್ವಿಭಾಷೀಯ ಚಿತ್ರ-ಪುಸ್ತಕವು ಕಳೆದ ಮೂರ್ನಾಲ್ಕು ದಶಕಗಳ ನಮ್ಮ ಕಲಾವಲಯದ ಆಗುಹೋಗುಗಳ ಬಹುಮುಖ್ಯ ದೃಶ್ಯ ದಾಖಲೆಯಾಗಿದೆ. ವಿಪುಲ ಸಂಖ್ಯೆಯ ಛಾಯಾಚಿತ್ರಗಳ ಜೊತೆ ಜೊತೆಗೆ ಕಲಾವಿದರು ಸಾಂಪ್ರದಾಯಿಕವಾಗಿ ತಮ್ಮ ‘ಬಡತನದಿಂದ-ನೆಮ್ಮದಿವರೆಗಿನ’ ಕಥೆಯನ್ನು ಆಪ್ತವಾಗಿ, ಸರಳ ವಾಕ್ಯಗಳಲ್ಲಿ ಸ್ವತಃ ತಾವೇ ಬರೆದಿದ್ದಾರೆ. ಕಲಾವಲಯಕ್ಕೆ ಚಿರಪರಿಚಿತರಾಗಿರುವ ಕಲಾ ಬರಹಗಾರರಾದ ಕೆ.ವಿ.ಸುಬ್ರಹ್ಮಣ್ಯಂ, ಆ.ಲ.ನರಸಿಂಹನ್, ಪ್ರಮೀಳಾ ಲೋಚನ ಅಂತಹವರುಗಳು ವಿವಿಧ ಸಂದರ್ಭಗಳಲ್ಲಿ ಇವರ ಕೃತಿಗಳನ್ನು ಕುರಿತು ಬರೆದ ಇಂಗ್ಲಿಷ್-ಕನ್ನಡ ಲೇಖನ, ವಿಮರ್ಶೆ, ವರದಿಗಳನ್ನೂ ಪುನರ್ ಪ್ರಕಟಿಸಲಾಗಿದೆ. ಸಮಾಜದ ಜನಪ್ರಿಯ ವ್ಯಕ್ತಿಗಳು ವೆಂಕಟಾಚಲಪತಿಯವರ ಬಗ್ಗೆ ಬರೆದ ಪತ್ರಗಳೂ ಇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಸ್ವತಃ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಇವರ ಈ ಪುಸ್ತಕವು ಯಾವುದೇ ಅಕಾಡೆಮಿಯ ವತಿಯಿಂದ ಮೂಡಿಬಂದ ಹೊತ್ತಗೆಯಾಗಿರದೆ, ವ್ಯಕ್ತಿಗತ ಸಾಹಸ ಆಗಿದೆ. ಅಂದರೆ ಈ ಪುಸ್ತಕದ ಒಟ್ಟಾರೆ ವಿನ್ಯಾಸ-ನಿರೂಪಣೆಯೇ ಈ ಕಲಾವಿದರ ಒಟ್ಟಾರೆ ವ್ಯಕ್ತಿತ್ವದ ಆತ್ಮಚರಿತ್ರೆಯಂತಾಗಿಬಿಟ್ಟಿದೆ. 

ಕನ್ನಡದಲ್ಲಿ ಕಲಾವಿದರನ್ನು ಕುರಿತ ಪುಸ್ತಕ ಪ್ರಕಟಣಾ ಸಂಪ್ರದಾಯಕ್ಕೆ ಒಂದು ವಿಕ್ಷಿಪ್ತವಾದರೂ, ಮುಖ್ಯವಾಹಿನಿ ಸಾಹಿತ್ಯಕ್ಕಿಂತಲೂ ವಿಭಿನ್ನವಾದ ಒಂದು ‘ಆಚರಣೆ’ ಇದೆ. ಅಂತಹ ಆಚರಣೆಗಳ ಒಳಗಿನಿಂದ ಈ ಪುಸ್ತಕವು ಆತ್ಮಕಥನ, ಗ್ಯಾಲರಿ ಕೆಟಲಾಗ್, ಕಲಾಗೆಳೆಯರ ಬಳಗದ ಆಲ್ಬಮ್, ಅಭಿನಂದನಾ ಗ್ರಂಥ, ಪರಿಚಯಾತ್ಮಕ ಬ್ರೋಷರ್, ಪತ್ರಾಗಾರ, ಕಾಫಿ ಟೇಬಲ್ ಪುಸ್ತಕ – ಇವಿಷ್ಟು ಪ್ರಕಟಣಾ ವೈಶಿಷ್ಟ್ಯಗಳ ಆಯಾಮಗಳನ್ನು ಒಟ್ಟಾಗಿ ಸೇರಿಸಿಕೊಡುತ್ತವೆ. ಇಂತಹ ಸಮ್ಮಿಶ್ರಣ ಸಾಧ್ಯತೆಯನ್ನು ಮನಸ್ಸಿನಲ್ಲಿರಿಸಿಕೊಂಡೇ ‘ಪುಸ್ತಕವು ಗೋಡೆಗಳಿಲ್ಲದ ಸಂಗ್ರಹಾಲಯ’ ಎಂದು ಕಲಾ ಇತಿಹಾಸಹಾರ ಆದ್ರೆ ಮಲ್ರಾವ್ ಹೇಳಿದ್ದಾನೆ. ಈ ಪುಸ್ತಕವನ್ನು ಓದುವಾಗ, ಪುಸ್ತಕ ಸಂಸ್ಕೃತಿಯ ಈ ಎಲ್ಲ ಅವತಾರಗಳೂ ಒಟ್ಟುಗೂಡಿ, ಚಲಪತಿಯವರ ಬರವಣಿಗೆಗೆ ಮುದ ನೀಡುತ್ತದೆ.  

ಕರಾರುವಾಕ್ ಆಗಿ ಎರಕ ಹೊಯ್ದ ಸಣ್ಣ ಸಣ್ಣ ವಾಕ್ಯಗಳು. ಅಚ್ಚು ತೆಗೆದಂತೆ ತಮ್ಮ ಬದುಕಿನ ಯಾವ ಘಟನೆಗಳನ್ನು ಯಾವ ಕೋನಗಳಿಂದ ಅರಿಯಬೇಕು, ಅಷ್ಟನ್ನು ಮಾತ್ರ ತಿಳಿಸುವ ಎಚ್ಚರ. ಬಾಲ್ಯಕಾಲದ ವಿವರ ಹಾಗೂ ತಾವು ಧಾವಂತಕ್ಕೆ ಒಳಗಾದ ಸಂದರ್ಭಗಳನ್ನು ವಿವರಿಸುವಾಗ ಮಾತ್ರ ಬಲೂನು-ಶಿಲ್ಪವೊಂದರಂತೆ ಒಂದು ಅತಿಯಾಗಿ ಓಲಾಡುವ ಉಮೇದು. ಬರವಣಿಗೆಯಲ್ಲಿ ತಮ್ಮ ಶಿಲ್ಪಾಭ್ಯಾಸವು ಎಲ್ಲಿ, ಯಾವ ಕಲಾ ಶಿಬಿರಗಳಲ್ಲಿ, ಊರಿನಲ್ಲಿ, ಯಾರ ನೆರವಿನಲ್ಲಿ, ಯಾವಾಗ ಮೂಡಿಬಂದಿತು ಎಂಬ ಒಂದು ಶಿಲ್ಪಿ-ಕೊರೆದಂತಹ, ಎರಕ ಹೊಯ್ದ ವಿವರಗಳ ವಿಪುಲ ಬರವಣಿಗೆ ಚಲಪತಿಯವರದ್ದು. ಜೊತೆ ಜೊತೆಗೆ ‘ಹೆಬ್ಬಾರರನ್ನು ನೆನಪುಸುವಂತೆ’ ಎಂದು ಸುಮತೀಂದ್ರ ನಾಡಿಗರಿಂದ ಹೊಗಳಿಸಿಕೊಂಡ, ಅನೇಕ ಕರಡು ರೇಖಾಚಿತ್ರಗಳಿದ್ದು, ಇಲ್ಲಿನ ಅಕ್ಷರದ ಲೆಕ್ಕಾಚಾರದ ಬರವಣಿಗೆಗೊಂದು ಕಾವ್ಯಾತ್ಮಕ ಲಯ ತಂದುಕೊಡುತ್ತವೆ.          

*

ಕಳೆದ ನಾಲ್ಕು ದಶಕಗಳ ರಾಜಕೀಯ ಹಾಗೂ ಸಾಂಸ್ಕೃತಿಕ ಉದ್ದುರಿಗಳ ಭಾವಶಿಲ್ಪಗಳನ್ನು ರೂಪಿಸಿದವರು ಚಲಪತಿ. ಅಂತಹ ಪ್ರತಿಯೊಂದು ಕೃತಿಯ ನಿರೂಪಣೆಯ ಕಾಲಕ್ಕೆ ಒದಗಿಬಂದ ಪರಿಚಯ, ಪ್ರಭಾವಗಳ ದಾಖಲೆಯೂ ಇಲ್ಲಿದೆ. ‘ನಮ್ಮ ಸಾಂಸ್ಕೃತಿಕ ನಾಯಕರುಗಳ ಬರವಣಿಗೆಗಳ ಪರಿಚಯವೇ ಇಲ್ಲದಂತಾಗಿದೆ ಇತ್ತೀಚಿನ ತಲೆಮಾರುಗಳಿಗೆ. ಅಂತಹವರ ಭಾವಶಿಲ್ಪಗಳು ಕಣ್ಣುಮುಂದೆ ಇದ್ದಾದರೂ, ಇದೇ ನೆಪದಿಂದ ಮತ್ತೆ ಅವರ ಪ್ರತಿಭೆಗಳ ಕುರಿತು ವೀಕ್ಷಕರಲ್ಲಿ ಕುತೂಹಲ ಮೂಡುವಂತಾಗಲಿ’ ಎಂಬ ಉದಾತ್ತ ಆಶಯವಿದೆ ಚಲಪತಿಯವರ ಪುಸ್ತಕದ ಬರಹ-ವಿನ್ಯಾಸಗಳ ವಿವರಣೆಯಲ್ಲಿ.  

ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಕಲಾಚಟುವಟಿಕೆಗಳ ದೃಶ್ಯದಾಖಲಾತಿಯ ಮುಖ್ಯ ಘಟ್ಟಗಳನ್ನೂ ಇಲ್ಲಿನ ಛಾಯಾಚಿತ್ರಗಳು ಕಟ್ಟಿಕೊಡುತ್ತವೆ. ಈ ನಾಡಿನ ಗುರುತರವಾದ ಕಲಾಘಟ್ಟಗಳಾದ ಕಲಾಮೇಳ, ‘ಸಮುಹ ಶಿಲ್ಪಿ’ ರಚನೆ (ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿ)  ಮುಂತಾದವುಗಳಲ್ಲಿನ ತಮ್ಮ ವ್ಯಕ್ತಿಗತ ಪಾತ್ರವನ್ನು ವಿವರಿಸುತ್ತಾರೆ. ದೇವರಾಜ ಅರಸು, ಕಿಟೆಲ್ ಮುಂತಾದವರ ಶಿಲ್ಪಗಳು ಮೂಡಿಸುವಾಗಿನ ಅನುಭವದ ನೋವು-ನಲಿವಿನ ಚುರುಕು ವಿವರಗಳಿವೆ. ಯಾರನ್ನೂ ನೋಯಿಸದ, ಕಾಡಿಸದ, ಆದರೆ ತಮ್ಮ ಪ್ರಸ್ತುತಿಯನ್ನು ಉಳಿಸಿಕೊಳ್ಳಲು ಬಯಸುವ ಬರವಣಿಗೆ ವೆಂಕಟಾಚಲಪತಿಯವರದ್ದು, ಸ್ವತಃ ಅವರ ಕಲಾಕೃತಿಗಳಂತೆ. ಮತ್ತೊಂದು ಅರ್ಥದಲ್ಲಿ, ಚಿತ್ರಕಲಾವಿದರೂ, ರೇಖಾಚಿತ್ರ ಪ್ರವೀಣರೂ ಆಗಿರುವ ಚಲಪತಿಯವರ ಕೃತಿಗಳ ಬಗ್ಗೆ, ಅವರದೇ ಶಿಲ್ಪಗಳನ್ನು ಒಟ್ಟಾಗಿ ಒಂದೆಡೆ ವೀಕ್ಷಿಸುವ ಮೂಲಕ ಕಲಾರಸಿಕರು ಆಸಕ್ತರಾಗಲಿ ಎಂಬ ಕ್ರಿಯಾಶೀಲ ಉಪಾಯವೂ ಈ ‘ಆತ್ಮಕಥನ’ದ ಪುಸ್ತಕದ ವಿನ್ಯಾಸ-ಬರವಣಿಗೆಯಲ್ಲ ಅಡಕವಾಗಿದೆ.  

ಪ್ರಜಾವಾಣಿಯ ‘ವ್ಯಕ್ತಿ ವಿಷಯ’ ಕಾಲಮ್ಮಿನಲ್ಲಿ 2001ರಲ್ಲಿ ಪ್ರಕಟಗೊಂಡ, ಚಲಪತಿಯವರನ್ನು ಕುರಿತಾದ ಪುಟ್ಟ ಬರಹವು (ಈ ಪುಸ್ತಕದಲ್ಲೂ ಪ್ರಕಟಿತ) ಇಡಿಯ ಪುಸ್ತಕದ ಸಂರಚನೆಯ ಸಂಕ್ಷಿಪ್ತ ರೂಪದ ಹೂರಣವೂ ಆಗಿರುವುದೊಂದು ವಿಶೇಷ. ಇವರ ಕೃತಿಗಳ ವರ್ಣಚಿತ್ರಗಳನ್ನು ಸುಮಾರು ಎಪ್ಪತ್ತು ಪುಟಗಳ ವಿಸ್ತಾರದಲ್ಲಿ ಹರಡಲಾಗಿದೆ ಸಹ. ಚಿತ್ರಕಲೆಯಲ್ಲೂ ನೈಪುಣ್ಯ ಸಾಧಿಸಿರುವ ಇವರ ಈ ಪುಸ್ತಕದ ಮತ್ತೊಂದು ಮುಖ್ಯ ಸಾಧನೆ ಎಂದರೆ: ಚಲಪತಿಯವರ ಗೆಳೆಯರ ಬಳಗದ ವಿಸ್ತಾರ. ಇವರ ವೃತ್ತಿಜೀವನಕ್ಕೆ ಸಂಬಂಧಿಸಿದ ಅಧಿಕಾರಿಗಳು, ಕಲಾವಿದರು, ಬರಹಗಾರರು, ರಾಜಕಾರಣಿಗಳೇ ಇವರ ಗೆಳೆಯರ ಬಳಗದಲ್ಲಿ ಇರುವುದು ಒಂದು ವಿಶೇಷ. 

*   

‘ಆತ್ಮಕತೆ’ ಎಂದು ಸ್ವತಃ ಕಲಾವಿದರೇ ಈ ಪುಸ್ತಕವನ್ನು ವರ್ಗೀಕರಿಸಿದ್ದರೂ, ಅದನ್ನು ಮೀರಿದ ಆಯಾಮಗಳು ಈ ಪುಸ್ತಕ-ಸಂಗ್ರಹಾಲಯದ ಹೊತ್ತಿಗೆಗಿದೆ. ಇಲ್ಲಿನ ಚಲಪತಿಯವರ ಬದುಕಿನ ಪಯಣ, ಕಲಾಕೃತಿಗಳ ನಿರ್ಮಿತಿ, ವಿದೇಶ ಪಯಣ, ಹತ್ತು ಹಲವು ಶಿಲ್ಪಕಲಾ ಮಾಧ್ಯಮಗಳ, ಹಲವು ಗುರುತರ ಕೃತಿಗಳ ನಿರ್ಮಿತಿಯ ಹಂತಗಳು, ಸೂಕ್ಷ್ಮಾತಿ ಸೂಕ್ಷ್ಮವಾದ, ತಾಳ್ಮೆಯ ವಿವರಗಳು ಮಡುಗಟ್ಟಿವೆ. ಕರ್ನಾಟಕದ ಕಲಾರಂಗದ ಒಳಗಿನವರಿಗೆ ತಮ್ಮ ತಮ್ಮ ಹಿನ್ನೆನಪಿನ ಆಹ್ಲಾದವನ್ನು ಮೆಲುಕು ಹಾಕಲು ಒಂದು ಒಳ್ಳೆಯ ಅವಕಾಶವಿದು. ಆದರೆ ಕೆಲವು ವಿವರಗಳ (ದೇವರಾಜ ಅರಸು ಶಿಲ್ಪದ ಸುತ್ತಲಿನ ವಿವಾದ, ಇವರ ಜನಪ್ರಿಯತೆಯ ಕುರಿತು ಮೇಲಧಿಕಾರಿಗಳ ಈರ್ಷ್ಯೆಯ ನಡಾವಳಿ) ಸಂಕ್ಷಿಪ್ತ ನಮೂದು ಮಾತ್ರ ಇದೆ. ವಿಸ್ತಾರವಾದ ಕ್ಯಾನ್ವಾಸ್ಸಿನ ಆತ್ಮಕಥೆಯಲ್ಲಿ ಈ ನಿಲುವು ಸೂಕ್ತವೂ ಇರಬಹುದು. ಆದರೆ ನಿಯಮಿತ ಮುದ್ರಣ ದೋಷಗಳಾಚೆಗೆ ಈ ಪುಸ್ತಕವನ್ನು ಶಿಲ್ಪಿಯೊಬ್ಬರು ಕೆತ್ತಿಕೊರೆದ ಹೊತ್ತಗೆ ಎಂದು ಸ್ವೀಕರಿಸಬೇಕಿದೆ.     

ಕನ್ನಡದಲ್ಲಿ ಆತ್ಮಕಥನ ಬರೆದ ಕಲಾವಿದರು ಅಪರೂಪ, ಇತರರು ಬರೆದ ಅಭಿನಂದನಾ ಗ್ರಂಥಗಳು ಮತ್ತು ಜೀವನ ಚರಿತ್ರೆಗಳೇ  ಹೆಚ್ಚು. ಎಂ.ಟಿ.ವಿ. ಆಚಾರ್ಯರ ‘ನನ್ನ ಕಲೆ ಮತ್ತು ನಾನು’, ಶಿವರಾಮ ಕಾರಂತರ ‘ಅಪೂರ್ವ ಪಶ್ಚಿಮ’ ಮತ್ತು ಕನಕಮೂರ್ತಿ ಅವರ ‘ಹೌದೇ, ಇದು ನಾನೇ?’ ಪುಸ್ತಕಗಳಲ್ಲಿ ಇತರ ಕಲಾವಿದರ ಕೃತಿಗಳ, ಗ್ಯಾಲರಿ, ಸಂಗ್ರಹಾಲಯಗಳ, ವಿದೇಶಿ ಕಲಾ ವಲಯಗಳ ಪ್ರವಾಸ ಕುರಿತು ಕೊಡುವ ಒಳನೋಟಗಳನ್ನು ನೀಡಲು ಚಲಪತಿಯವರು ಹೆಚ್ಚಾಗಿ ಯತ್ನಿಸಬಹುದಿತ್ತು. ಇದು ಅವರಿಗೆ ಸಾಧ್ಯವೂ ಇತ್ತು. ಆದರೆ ಎಲ್ಲಿ ಆಚಾರ್ಯರು, ಕಾರಂತರು ತಮ್ಮನ್ನು ‘ಸಾಂಸ್ಕೃತಿಕ ಉದ್ದುರಿಗಳು’ ಎಂದು ಭಾವಿಸಿದ್ದರೋ ಅಂತಲ್ಲಿ ಚಲಪತಿಯವರು, ಕಲಾವಿದ ಕೆ. ವೆಂಕಟಪ್ಪನವರಂತೆ (ಇವರ ನಾಲ್ಕು ದಶಕಗಳ ದಿನಚರಿಗಳಲ್ಲಿ ಇರುವಂತೆ) ತಮ್ಮನ್ನು ಈ ಕಲಾಜಗತ್ತಿನ ನಮ್ರ ವಿದ್ಯಾರ್ಥಿಯನ್ನಾಗಿ, ಕುತೂಹಲಕರ ಕಂಗಳಿಂದ ಜಗತ್ತನ್ನು ಭಾವಿಸುವಲ್ಲೇ ಧನ್ಯತೆಯನ್ನು ಅನುಭವಿಸುತ್ತಾರೆ. ತಮ್ಮ ಅಭಿಪ್ರಾಯ, ದೃಶ್ಯ ವಿಶ್ಲೇಷಣೆ, ಹೊರನೋಟ, ಒಡಲಾಳದ ತುಮುಲ, ಸುತ್ತಲಿನ ಆಧುನಿಕ-ಸಮಕಾಲೀನ ಕಲಾ ವಾಗ್ವಾದಗಳ ಸೊಬಗು ಇತ್ಯಾದಿ ಬರೆಯುವುದನ್ನು ಅಹಮಿಕೆಯ ಆಯಾಮ ಎಂದು ಭಾವಿಸಿ, ಅದನ್ನು ತಡೆಹಿಡಿದಿದ್ದಾರೆ. ಇಷ್ಟಾದರೂ ಸ್ವಂತ ಪ್ರಕಟಣೆಯ ಈ ಅಪರೂಪದ ಪುಸ್ತಕವು (ಎಸ್.ಜಿ. ವಾಸುದೇವ್, ಜಿ.ಎಸ್.ಶೆಣೈ, ಯೂಸಫ್ ಅರಕ್ಕಲ್, ವಿ.ಎ. ದೇಶಪಾಂಡೆ, ಎಂ.ಜೆ. ಕಮಲಾಕ್ಷಿ ಅವರುಗಳನ್ನು ಕುರಿತ ಖಾಸಗಿ ಪ್ರಕಟಣೆಗಳಂತೆ) ವ್ಯಕ್ತಿಗತ ಪ್ರಕಟಣೆಯ ಶ್ರೀಮಂತಿಕೆಯ, ಮಹತ್ವಾಕಾಂಕ್ಷೆಯ ಮೈವಳಿಕೆಯನ್ನು ಹೊಂದಿದೆ. ಶಿಲ್ಪಿ ಚಲಪತಿಯವರು ತಮ್ಮದೇ ಒಂದು ರಭಸಯುಕ್ತ, ಎಕ್ಸ್ ಪ್ರೆಸಿವ್ ಶೈಲಿಯ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಅಂತೆಯೇ ಈ ಪುಸ್ತಕವನ್ನೂ ಸಹ ಅವರ ಇತ್ತೀಚಿನ ಒಂದು ಶಿಲ್ಪಕೃತಿ ಎಂದು ಸುಲಭವಾಗಿ ಸ್ವೀಕರಿಸಿಬಿಡಬಹುದು.

ಪುಸ್ತಕ: ನನ್ನ ಜೀವನ ಶಿಲ್ಪ (ಆತ್ಮಕಥನ) ಲೇಖಕ: ವೆಂಕಟಾಚಲಪತಿ ಸಂಪಾದಕರು: ಕೆ.ವಿ. ಸುಬ್ರಮಣ್ಯಮ್  ದ: ₹600 ಪುಟ: 292 ಪ್ರ: ಸ್ಟುಡಿಯೋ 94 ಬೆಂಗಳೂರು  ನಂ: 9448408563

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT