ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀವಾದಕ್ಕೆ ಬಹುತ್ವದ ವ್ಯಾಖ್ಯಾನಗಳು

Last Updated 19 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಅಮೆರಿಕದ ಲೇಖಕಿ ಮತ್ತು ಸ್ತ್ರೀವಾದಿ ಬೆಲ್ ಹುಕ್ಸ್ ಅವರ ‘ಫೆಮಿನಿಸಂ ಈಸ್‌ ಫಾರ್ ಎವರಿಬಡಿ: ಫ್ಯಾಶನೇಟ್ ಪಾಲಿಟಿಕ್ಸ್’ ಕೃತಿಯನ್ನು ಕನ್ನಡದ ಮುಖ್ಯ ಬರಹಗಾರ್ತಿಯೂ ಸ್ತ್ರೀವಾದಿ ಚಿಂತಕಿಯೂ ಆದ ಎಚ್.ಎಸ್. ಶ್ರೀಮತಿಯವರು ‘ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ಹಲವು ಬಾರಿ ಅನುವಾದ ಮಾಡುವವರು, ಅನುವಾದ ಆಗುತ್ತಿರುವ ಭಾಷಿಕ ಸಂಸ್ಕೃತಿಗೆ ಅನುವಾದ ನಡೆಯುವ ತಾತ್ವಿಕ ವಿಚಾರಗಳು ಹೇಗೆ ವಿಸ್ತರಿಸಬಲ್ಲವು? ಯಾವ ಬಗೆಯ ಚಿಂತನೆಗಳಿಗೆ ಇವು ಕಸುವು ನೀಡಬಲ್ಲವು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಲಕ್ಕೆ ತಕ್ಕಂತೆ ತಡಕಾಡಬೇಕಾಗುತ್ತದೆ. ಈ ಅರಿವು ಇಲ್ಲದಿದ್ದರೆ ಅನುವಾದಗಳು ಎಷ್ಟೋ ಸಲ ಅಪ್ರಸ್ತುತವಾಗಿಬಿಡುತ್ತವೆ. ಕನ್ನಡದಲ್ಲಿ ಈಚೆಗೆ ಮೂಲೆಗೆ ಸೇರುತ್ತಿರುವ ಎಷ್ಟೋ ಅನುವಾದಗಳು ನಮ್ಮ ಕಣ್ಣಮುಂದಿವೆ. ಆದರೆ, ಶ್ರೀಮತಿಯವರು ಕಳೆದ ಕೆಲ ದಶಕಗಳಿಂದ ಮಾಡುತ್ತಿರುವ ಸ್ತ್ರೀಕೇಂದ್ರಿತ ಅನುವಾದ ಬರಹಗಳು ಕನ್ನಡದ ತಿಳಿವಳಿಕೆಯನ್ನು ವ್ಯಾಪಕಗೊಳಿಸುತ್ತಿವೆ.

ಕಪ್ಪು ಸ್ತ್ರೀವಾದಿ ನೋಟಕ್ರಮಗಳಿಂದ ಚಿಂತನೆ ಮಾಡುತ್ತಿರುವ ಬೆಲ್ ಹುಕ್ಸ್ ಅವರ ಬರಹಗಳು ಕನ್ನಡಕ್ಕೆ ಬಂದಾಗ ಈಕೆ ನುಡಿಯುತ್ತಿರುವ ಹೊಸ ವಿಚಾರಗಳೇನು? ಕನ್ನಡದಲ್ಲಿ ನಡೆದಿರುವ, ಆಗುತ್ತಿರುವ ಹೆಣ್ಣು ಸಂವಾದಗಳಿಗಿಂತ ಹೊರತಾಗಿ ಇವರಿಂದ ಕಲಿಯಬೇಕಾದ್ದು ಏನು ಎಂಬ ಪ್ರಶ್ನೆಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ. ಕನ್ನಡವನ್ನು ಒಳಗೊಂಡಂತೆ ಅನೇಕ ಕಡೆ ಸ್ತ್ರೀವಾದಕ್ಕೆ ಬಹುಕಾಲ ಅಪಕಲ್ಪನೆಗಳು, ಅಪವ್ಯಾಖ್ಯಾನಗಳು ಆವರಿಸಿದ್ದವು; ಈಗಲೂ ಇವೆ. ಆದರೆ, ಬೆಲ್ ಹುಕ್ಸ್ ಸ್ವ ಅನುಭವಗಳಿಂದ, ತಾತ್ವಿಕ ಅಭ್ಯಾಸದ ಬಲದಿಂದ ತಮ್ಮದೇ ನಿರ್ವಚನಗಳ ಮೂಲಕ ಸ್ತ್ರೀವಾದದ ಅರ್ಥ ಹುಡುಕಲು ಯತ್ನಿಸುತ್ತಾರೆ. ಪರಮ ಪುರುಷದ್ವೇಷಿ ಸ್ತ್ರೀವಾದಿಗಳಿಗೆ ಅನೇಕ ಉತ್ತರಗಳನ್ನೂ ನೀಡುತ್ತಾ ಹೋಗುತ್ತಾರೆ. ಇದರ ಭರಾಟೆಯಲ್ಲಿ ಕೆಲವು ಸಲ ಪುನರಾವರ್ತನೆಯ ಮಾತುಗಳನ್ನು ಸೇರಿಸುತ್ತಾರೆ. ಆದರೆ, ಇವು ಅವರ ವಾದಗಳಿಗೆ ಪೂರಕವಾಗಿಯೇ ಬಂದಿವೆ.

ಸ್ತ್ರೀವಾದಿ ರಾಜಕಾರಣ ಎಂದರೆ ಇಲ್ಲಿ ಪುರುಷವಿರೋಧಿ ಅಥವಾ ಸಮಾಜ ವಿಘಟನೆಯ ದಾರಿಯದಲ್ಲ. ಬದಲಿಗೆ ಅದು ಕೂಡೊಟ್ಟಿನ ಬದುಕನ್ನು ಒಳಗೊಳ್ಳುವ ದಾರ್ಶನಿಕ ತತ್ವ. ಬಹುತೇಕ ಅವರ ವಾದಗಳು ಈ ತತ್ವವನ್ನು ಹಿಂಬಾಲಿಸಿಯೇ ಸಾಗುತ್ತವೆ. ಹಾಗಂತ ಅವರು ಜಗತ್ತಿನಲ್ಲಿ ನಡೆಯುವ ಪುರುಷ ಹಿಂಸಾಕೃತ್ಯಗಳನ್ನು ಕ್ಷಮಿಸುವುದಿಲ್ಲ. ವರ್ತಮಾನದಲ್ಲಿ ಆವರಿಸಿಕೊಳ್ಳುತ್ತಿರುವ ಬಿಕ್ಕಟ್ಟುಗಳಿಗೆ ತಕ್ಕಂತೆ ಹೋರಾಟದ ದಾರಿಗಳನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ. ಇದರಿಂದಲೇ ಅವರು ಬಿಳಿಯ ಸಂಪ್ರದಾಯವಾದಿ ಸ್ತ್ರೀವಾದಗಳ ಕಡೆ ಹೆಚ್ಚು ವಾಲುವುದಿಲ್ಲ.

ತೀವ್ರವಾದಿ ಮಹಿಳಾವಾದಗಳನ್ನು ಅನೇಕ ಸಂದರ್ಭಗಳಲ್ಲಿ ಸ್ವೀಕರಿಸುತ್ತಾರೆ. ಇಂತಹ ಕಡೆ ಅಮೆರಿಕದ ಬಿಳಿಯ ಮತ್ತು ಕಪ್ಪು ಮಹಿಳೆಯರ ಕುರಿತು ಸಾಕಷ್ಟು ವಾದಗಳನ್ನು ಬೆಳೆಸುತ್ತಾರೆ. ಆದರೆ, ಬಿಳಿಯರ ಸ್ತ್ರೀವಾದಗಳು ಬಹುತೇಕ ಸೀಮಿತ ಮತ್ತು ಸ್ವಕೇಂದ್ರಿತವಾಗಿವೆ ಎಂಬ ನಿಲುವುಗಳಿಗೆ ತಲುಪುವಾಗ ಅವರ ಮಾತುಗಳು ಸಾಕಷ್ಟು ತೀವ್ರತೆಯನ್ನು ಧರಿಸುತ್ತವೆ.

ಭಾರತೀಯ ಸಂದರ್ಭದಲ್ಲೂ ಸಂಪ್ರದಾಯವಾದಿ ಸ್ತ್ರೀವಾದಗಳು ತಳಸಮುದಾಯಗಳ ಸ್ತ್ರೀವಾದಕ್ಕೆ ಇನ್ನಿಲ್ಲದಂತೆ ರಾಜಕಾರಣ ಮಾಡಿವೆ. ತಳಸಮುದಾಯದ ಹೆಣ್ಣುಮಕ್ಕಳ ಮೇಲೆಯೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ ಎಂಬ ಮಾತುಗಳು ಹೆಚ್ಚಾಗಿ ಕೇಳಿಬಂದಿವೆ. ಇಂಥ ಮಾತುಗಳಿಗೆ ನಾವು ಅನೇಕ ಬಾರಿ ಧರ್ಮದ, ವರ್ಗದ, ರಾಜಕಾರಣದ ಬೆನ್ನಲ್ಲಿ ಚರ್ಚಿಸುತ್ತೇವೆ. ಇಂಥ ಸಮಯದಲ್ಲಿ ‘ದಲಿತ ಸ್ತ್ರೀವಾದ’ ಎಂಬ ನುಡಿಗಟ್ಟು ಮುನ್ನೆಲೆಗೆ ಬರುತ್ತದೆ. ಆದರೆ, ಇವು ಅನೇಕ ಸಲ ವಿಶಾಲವ್ಯಾಪ್ತಿಯಲ್ಲಿ ವರ್ತಮಾನಕ್ಕೆ ತಕ್ಕಂತೆ ತಾತ್ವಿಕ ಚೌಕಟ್ಟಿನಲ್ಲಿ ಚರ್ಚೆಯಾಗುವುದೇ ಇಲ್ಲ.

ಭಾರತೀಯ ತಳಸಮುದಾಯದ ಹೆಣ್ಣಿಗೆ ಜಾತಿ ಜೊತೆಯಲ್ಲಿ ಆರ್ಥಿಕ, ಶಿಕ್ಷಣದ ಸವಾಲುಗಳಿದ್ದ ಹಾಗೆ ಕಪ್ಪು ಮಹಿಳೆಗೆ ಎರಡು ಮುಖ್ಯ ಸವಾಲುಗಳಿವೆ. ಒಂದು ಸಮಕಾಲೀನತೆಯಲ್ಲೂ ಕಾಡುತ್ತಿರುವ ಬಣ್ಣದ್ದು. ಮತ್ತೊಂದು ಸ್ತ್ರೀಯಾಗಿ ಬಿಳಿಯರ ಮತ್ತು ಪುರುಷರ ಅಂತರದಲ್ಲಿ ‘ಸ್ವ’ಚಿಂತನೆಗಳನ್ನು ಕಾಪಿಟ್ಟುಕೊಳ್ಳುವುದು. ಇಬ್ಬರಿಗೂ ಎಲ್ಲ ಕಾಲಕ್ಕೂ ರಾಜಕಾರಣದ ಮತ್ತು ‘ಗಂಡುತನದ’ ಹೊಂಚುಹಾಕುವ ‘ಗಿಡುಗತ್ವ’ ಕಾಡುತ್ತಲೇ ಇದೆ. ಬೆಲ್ ಹುಕ್ಸ್ ಈ ಕೃತಿಯಲ್ಲಿ ಚರ್ಚಿಸುವ ಮತ್ತೊಂದು ಮಹತ್ವದ ತಾತ್ವಿಕತೆ ಎಂದರೆ ‘ಸೋದರಿತ್ವ’. ಬಿಳಿಯ ಸ್ತ್ರೀವಾದಿಗಳು ಕಪ್ಪು ಸ್ತ್ರೀವಾದಿಗಳ ಸಂಗಡವಾಗಿ ಹೋರಾಡುವ ಮತ್ತು ಅವರ ಹಕ್ಕುಗಳ ಪ್ರತಿಪಾದನೆಗೆ ಸಿದ್ಧವಾಗುವ ಪ್ರಕ್ರಿಯೆ ಎಂದು ಈ ಪರಿಕಲ್ಪನೆ ಸಾಧಿಸಿದರೂ, ಬಹುಪಾಲು ಎಲ್ಲ ಹಂತಗಳಲ್ಲೂ ಲೇಖಕಿ ಇದನ್ನು ಪ್ರಾಯೋಗಿಕವಾಗಿ ಗ್ರಹಿಸುತ್ತಲೇ ಹೋಗುತ್ತಾರೆ. ಈ ಹಂತದಲ್ಲಿ ಅವರು ಕಪ್ಪು ಮಹಿಳೆಗೆ ಅಷ್ಟಾಗಿ ಸಮಗ್ರ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು ಭಾವಿಸಲಾರರು.

ನವವಸಾಹತುಶಾಹಿ, ಬಂಡವಾಳಶಾಹಿ, ಮಾಧ್ಯಮಗಳ ರಾಜಕಾರಣ, ಲೈಂಗಿಕತೆಯ ವಿರೋಧ ಮುಂತಾದವುಗಳ ನಡುವೆಯೂ ‘ಸೋದರಿತ್ವ’ವನ್ನು ಸಾಕಷ್ಟು ಮಾಗಬೇಕಾದ ಹಾದಿಗಳ ಕುರಿತು ತಮ್ಮ ವಾದಗಳನ್ನು ವಿಸ್ತರಿಸುತ್ತಾರೆ. ಹೀಗೆ ವಿಸ್ತರಿಸುವ ದಾರಿಗಳ ನಡುವೆ ‘ಸೋದರಿತ್ವ’ ನಮ್ಮ ಭಾರತಕ್ಕೂ ಅನ್ವಯಮಾಡಿಕೊಳ್ಳುವ ತುರ್ತು ಇದೆ.

ಬೆಲ್ ಹುಕ್ಸ್‌ರ ವಾದಗಳು ಮತ್ತಷ್ಟು ಗಟ್ಟಿಗೊಳ್ಳುವುದು ಕೊನೆಯ ಮೂರು ಅಧ್ಯಾಯಗಳಲ್ಲಿ. ಸ್ತ್ರೀವಾದವನ್ನು ‘ಎಲ್ಲರಿಗಾಗಿ’ ಎಂದು ಕರೆಯುವಾಗ ಅದಕ್ಕೊಂದು ದಾರ್ಶನಿಕ ಒಳನೋಟವನ್ನು ನೀಡುತ್ತಾರೆ. ಅಂತಿಮವಾಗಿ ಇವರು ಹೇಳಿರುವ ಎಲ್ಲ ವಿಚಾರಗಳು ಕನ್ನಡಕ್ಕೆ ಹೊಸವು ಎಂದು ಹೇಳಲಾರೆ. ಆದರೆ, ಸದ್ಯದ ದಂದುಗಗಳಿಗೆ ತಕ್ಕಂತೆ ಸ್ತ್ರೀನೋಟಗಳನ್ನು ತಾತ್ವಿಕ ಚೌಕಟ್ಟಿನಲ್ಲಿ ಗ್ರಹಿಸುವ ಕ್ರಮ ಹೊಸ ತಲೆಮಾರಿಗೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT