ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧುರ್ಯದ ಹುರುಳನ್ನು ಅರಳಿಸಿದ ಮಂಡೆಚ್ಚರು

Last Updated 27 ಫೆಬ್ರುವರಿ 2019, 11:43 IST
ಅಕ್ಷರ ಗಾತ್ರ

2018 ಡಿಸೆಂಬರ್‌ ಮೊದಲ ವಾರ ಪುತ್ತೂರಿನಲ್ಲಿ ಮೂರು ದಿವಸಗಳ ಪುಸ್ತಕ ಹಬ್ಬ, ಪ್ರದರ್ಶನ. ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯವರ ಆಯೋಜನೆ. ವ್ಯಾಪಾರ ವಿಭಾಗವನ್ನು ನಿರ್ವಹಿಸುತ್ತಿದ್ದ ಶ್ಯಾಮಪ್ರಸಾದ್ ಒಂದೆಡೆ ಹಳೆ ಪುಸ್ತಕ ಆಸಕ್ತರಿಗಾಗಿ ಪೇರಿಸಿದ್ದರು. ಇದಕ್ಕೆ ನಿರ್ವಹಣಾ ವೆಚ್ಚವನ್ನಷ್ಟೇ ಪಡೆಯುತ್ತಿದ್ದರು. “ನಿಮಗೆ ಈ ಪುಸ್ತಕ ಹೆಚ್ಚು ಇಷ್ಟವಾಗಬಹುದು. ತೆಗೆದಿರಿಸಿದ್ದೇನೆ, ಎನ್ನುತ್ತಾ ‘ಗಾನಕೋಗಿಲೆ’ ಕೈಗಿತ್ತರು. ಅದು ಕೀರ್ತಿಶೇಷ ಭಾಗವತ ದಾಮೋದರ ಮಂಡೆಚ್ಚರ ಸ್ಮೃತಿ ಕೃತಿ.

ಮಂಡೆಚ್ಚರ ಕೃತಿ ಕೇಳಿ ಬಲ್ಲೆ, ನೋಡಿರಲಿಲ್ಲ. ಬಹುಕಾಲದಿಂದ ನಿರೀಕ್ಷೆಯಲ್ಲಿದ್ದೆ. ಅಚಾನಕ್ಕಾಗಿ ಶ್ಯಾಮ್ ಮೂಲಕ ಕೈಸೇರಿತು. ಮೂರು ದಶಕದ ಹಿಂದೆ ಪ್ರಕಟಗೊಂಡ ಮಂಡೆಚ್ಚರ ಕಲಾಯಾನಕ್ಕೆ ವಿದ್ವಜ್ಜನರು ಬೆಳಕು ಹಾಕಿದ್ದರು. ಈ ಕಾಲಘಟ್ಟದಲ್ಲಿ ನಿಂತು ಪುಸ್ತಕದ ಹೂರಣ ಓದಿದಾಗ ದಾಮೋದರ ಮಂಡೆಚ್ಚರ ಭಾಗವತಿಕೆ ಸೊಗಸುಗಾರಿಕೆ, ಪಡೆದ ತಾರಾ ಮೌಲ್ಯ, ಸಂಗೀತದ ಸಾಧನೆ, ಅದನ್ನು ಯಕ್ಷಗಾನಕ್ಕೆ ಅಳವಡಿಸುವಲ್ಲಿನ ಸಿದ್ಧಿ, ಹೀಗೆ ಅಳವಡಿಸಿದಾಗ ಭಾಗವತಿಕೆಯು ಯಕ್ಷಗಾನದಿಂದ ಕಳಚದಂತೆ ಕಟ್ಟೆಚ್ಚರಗಳು ಗಾಢವಾಗಿ ಕಾಡಿದುವು.

ಬಿ.ಸಿ.ರೋಡಿನ ‘ದಾಮೋದರ ಮಂಡೆಚ್ಚ ಸ್ಮಾರಕ ಸಮಿತಿ’ಯು ಕೃತಿ ಪ್ರಕಾಶಿಸಿದೆ. ಹಿರಿಯರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಗೌರವ ಸಂಪಾದಕರು. ಡಾ.ಎಂ.ಪ್ರಭಾಕರ ಜೋಶಿ, ಎನ್.ನಾರಾಯಣ ಭಟ್, ರಾಜಮಣಿ ರಾಮಕುಂಜ ಸಂಪಾದಕರು. ಪ್ರಾಯಃ 1987-1990ರ ಮಧ್ಯೆ ಪ್ರಕಾಶವಾಗಿದ್ದಿರಬೇಕು. ವ್ಯಕ್ತಿ ಮತ್ತು ಕಲೆ ಎನ್ನುವ ಎರಡು ಅಧ್ಯಾಯಗಳು. ಶೇಣಿ ಗೋಪಾಲಕೃಷ್ಣ ಭಟ್, ಎಂ.ಪ್ರಭಾಕರ ಜೋಶಿ, ಕಡತೋಕಾ ಮಂಜುನಾಥ ಭಾಗವತ, ಕುಂಬಳೆ ಸುಂದರ ರಾವ್, ವಿಜಯನಾಥ್ ಶೆಣೈ, ಕುಕ್ಕಿಲ ಕೃಷ್ಣ ಭಟ್, ಸೇಡಿಯಾಪು ಕೃಷ್ಣ ಭಟ್, ಅಮೃತ ಸೋಮೇಶ್ವರ, ಉದ್ಯಾವರ ಮಾಧವ ಆಚಾರ್ಯ, ಡಾ.ಕೆ.ಚಿನ್ನಪ್ಪ ಗೌಡ.. ಹೀಗೆ ಅನೇಕರ ಹೂರಣಗಳು ಪುಸ್ತಕದ ಸಮೃದ್ಧತೆಗೆ ಸಾಕ್ಷಿಯಾಗಿದೆ.

1982-83ರ ಸಮಯ. ಮಂಗಳೂರು ಪುರಭವನದ ಮಳೆಗಾಲದ ಆಟವೆಂದರೆ ಖುಷಿ. ಪ್ರತಿ ಶನಿವಾರ ಪ್ರದರ್ಶನ. ಮೂರು ಪ್ರಸಂಗಗಳು. ಮೊದಲ ಭಾಗಕ್ಕೆ ದಾಮೋದರ ಮಂಡೆಚ್ಚರು. ಎರಡನೇ ಭಾಗದಲ್ಲಿ ಕಾಳಿಂಗ ನಾವುಡರು. ಕೊನೆ ಪ್ರಸಂಗಕ್ಕೆ ಕಡತೋಕ ಮಂಜುನಾಥ ಭಾಗವತರು. ಈ ಮೂವರ ಸಾಂಗತ್ಯದಲ್ಲಿ ಯಕ್ಷಗಾನದ ಸೊಗಸುಗಾರಿಕೆ ಉಂಡ ಅನೇಕರು ಮಾತಿಗೆ ಸಿಗುತ್ತಾರೆ. ದಕ್ಷಾಧ್ವರ, ದಮಯಂತಿ ಪುನರ್ ಸ್ವಯಂವರ, ಪಾರಿಜಾತ. ಪ್ರಸಂಗಗಳ ಹಾಡುಗಳು ಮಂಡೆಚ್ಚರಿಗೆ ಶರಣಾಗಿರಬೇಕು! ಆಟವನ್ನಲ್ಲ, ಹಾಡನ್ನು ಕೇಳುವುದಕ್ಕಾಗಿಯೇ ಟಿಕೇಟ್‌ ಖರೀದಿಸಿ ಬರುವ ಪ್ರೇಕ್ಷಕರನ್ನು ನೋಡಿದ್ದೇನೆ. ಭಾಗವತಿಕೆ ಕುರಿತಾದ ಒಳನೋಟಗಳ ಅನುಭವ ಇಲ್ಲದ ನನಗೆ ಮಂಡೆಚ್ಚರ ಹಾಡುಗಾರಿಕೆಯು ಪ್ರಿಯವಾದ ಅನುಭಾವ ಕಟ್ಟಿಕೊಟ್ಟಿತ್ತು! ‘ಗಾನ ಕೋಗಿಲೆ’ ಕೃತಿಯು ಹಲವು ಅನುಭಾವ, ಅನುಭವಗಳನ್ನು ಮುಂದಿಡುತ್ತಿದೆ.

ಮಂಡೆಚ್ಚರ ಶಿಷ್ಯರಾದ ಎಂ.ದಿನೇಶ ಅಮ್ಮಣ್ಣಾಯರಲ್ಲಿ ಮಾತನಾಡುವ ಸಂದರ್ಭ ಬಂದಿತ್ತು. ತನ್ನ ಗುರುವಿನ ಭಾಗವತಿಕೆಯನ್ನು ಅಮ್ಮಣ್ಣಾಯರು ನೆನಪಿಸಿಕೊಂಡದ್ದು ಹೀಗೆ –‘ಮಂಡೆಚ್ಚರ ಹಾಡು ಎಂದರೆ ಭಾವಗಳ ರಾಶಿ. ಪದ್ಯಗಳ ಭಾವ, ಅದಕ್ಕೆ ಹೊಂದುವ ರಾಗಗಳನ್ನು ಅನುಭವಿಸಿ ಹಾಡುತ್ತಿದ್ದರು. ಒಂದು ಹಂತದಲ್ಲಿ ರಾಗದೊಂದಿಗೆ ಮಿಳಿತವಾಗುತ್ತಿದ್ದರು. ಸ್ವತಃ ಅವರೇ ರಾಗವಾಗುತ್ತಿದ್ದರು! ಏರು ಪದ್ಯಗಳು ವೇಷಗಳಿಗೆ ಝೇಂಕಾರದ ಸ್ಪರ್ಶ ನೀಡುತ್ತಿದ್ದುವು. ಪ್ರಸಂಗ ಪದ್ಯಗಳಿಗೆ ಸಂಗೀತದ ರಾಗಗಳ ಮೂಲಕ ಹೊಳಪನ್ನು ತರುವ ಸಾಮರ್ಥ್ಯ ಅನ್ಯಾದೃಶ. ಅವರೊಂದು ‘ರಂಗದ ಪುಂಜ’. ಪದ್ಯದ ಒಂದೊಂದು ಅಕ್ಷರಕ್ಕಿರುವ ಭಾವವನ್ನು ಹೆಕ್ಕಿ ಉಣಿಸುತ್ತಿದ್ದರು. ಆಂಗಿಕ ಚೇಷ್ಟೆಗಳಿಲ್ಲ. ರಂಗಸ್ಥಳ ಅವರಿಗೆ ದೇವಾಲಯ.

‘ಗಾನಕೋಗಿಲೆ’ ಕೃತಿಯಲ್ಲಿ ಮಂಡೆಚ್ಚರ ವ್ಯಕ್ತಿ ಚಿತ್ರಗಳ ಸಮೀಪ ನೋಟದ ಎಸಳುಗಳು ಹೀಗಿವೆ. ಶೇಣಿ ಗೋಪಾಲಕೃಷ್ಣರು ಮಂಡೆಚ್ಚರ ರಾಗ, ಭಾವಗಳನ್ನು ವಿಶ್ಲೇಷಿಸುತ್ತಾರೆ, ‘ಒಂದೊಂದು ರಾಗದ ಹತ್ತಾರು ಕೀರ್ತನೆಗಳನ್ನು ಕಲಿತಿದ್ದ ಮಂಡೆಚ್ಚರಿಗೆ ಯಕ್ಷಗಾನದ ನೂರಾರು ಹಾಡುಗಳನ್ನು ಆಯ್ದ ಕೆಲವೇ ರಾಗಗಳಲ್ಲಿ ಬೇರೆ ಬೇರೆಯಾಗಿ ಭಾವ ವೈವಿಧ್ಯದಿಂದ ಹಾಡಲು ಬರುತ್ತಿತ್ತು. ರಾಗದ ಭಾವ ವೈವಿಧ್ಯದಿಂದ ಕೇಳುಗರ, ಕಲಾವಿದರ ಭಾವವನ್ನು ಕೆಣಕುವ ಶಕ್ತಿ ಅವರಲ್ಲಿತ್ತು. ಅಠಾಣ, ಭೈರವಿ, ಕಾಂಬೋಧಿ.. ಹೀಗೆ ಒಂದೊಂದು ರಾಗವನ್ನೂ ತೀರ ಭಿನ್ನವಾದ ಭಾವ, ಸನ್ನಿವೇಶಗಳಿಗೆ ಹೊಂದಿಸುವ ಅವರ ಸಿದ್ಧಿ ನನ್ನ ಅವರ ಒಡನಾಟದಲ್ಲಿ ನೂರಾರು ಬಾರಿ ಕಂಡುಂಡ ಅಪೂರ್ವ ಅನುಭವವಾಗಿದೆ.

ಡಾ.ಎಂ.ಪ್ರಭಾಕರ ಜೋಶಿ ಅವರು ಮಂಡೆಚ್ಚರ ಹಾಡಿನ ಮಾಧುರ್ಯದ ಮೋಡಿ ಹೇಳುತ್ತಾ, ಅವರ ಆಸಕ್ತಿಯತ್ತ ಬೆರಳು ತೋರುತ್ತಾರೆ, ‘ಭಾಗವತಿಕೆ, ಅದಕ್ಕೆ ಸಂಬಂಧಿಸಿದ ಸಂಗತಿಗಳು ಮಂಡೆಚ್ಚರಿಗೆ ಗಂಭೀರ ಆಸಕ್ತಿ ವಿಷಯಗಳಾಗಿದ್ದುವು. ಹಿರಿಯ, ಕಿರಿಯ ಕಲಾವಿದರೊಂದಿಗೆ; ಸಾಹಿತಿ, ರಸಿಕರೊಂದಿಗೆ ಈ ವಿಷಯಗಳ ಬಗೆಗೆ ಅವರು ಚರ್ಚಿಸಿ ವಯಸ್ಸಿನ, ಸ್ಥಾನ ಭೇದವಿಲ್ಲದೆ ಸಲಹೆಗಳನ್ನು ಸ್ವೀಕರಿಸುತ್ತಿದ್ದರು. ಯಾವ ಪದ್ಯಕ್ಕೆ ಯಾವ ರಾಗ, ಅದು ಏಕೆ, ಹೇಗೆ, ಪದ್ಯಗಳ ಆಯ್ಕೆ ಹೇಗೆ, ಏನು – ಈ ಕುರಿತು ಚರ್ಚಿಸುತ್ತಿದ್ದರು. ಇಡೀ ಪ್ರದರ್ಶನದ ಆಕಾರ ಖಚಿತಗೊಳ್ಳದಾಗ ಅವರಲ್ಲಿ ಅಸಮಾಧಾನ ಉಳಿಯುತ್ತಿತ್ತು. ಪ್ರಯೋಗಾನುಭವಿರದ ಹಲವು ಸಂಪ್ರದಾಯಗಳನ್ನು ಅವರು ಅನುಭವಿಗಳಿಂದ ಸಂಗ್ರಹಿಸಿ, ಅಭ್ಯಸಿಸುವ ಕೆಲಸವನ್ನು ನಿಧನದ ಕೆಲವೇ ವರುಷಗಳ ಮೊದಲು ಮಾಡಿದ್ದು, ಅವರ ಆಸಕ್ತಿಯು ಜೀವಂತಿಕೆಯ ದೃಷ್ಟಾಂತ.

‘ಶೈಲಿಯ ಬಗೆಗಿನ ಭಿನ್ನಾಭಿಪ್ರಾಯದ ಕುರಿತು ಅವರಿಗೆ ಗೌರವವಿತ್ತು. ಯಕ್ಷಗಾನದ ಶೈಲಿಯಲ್ಲಿ ಕೂಡಾ ಎಷ್ಟು ಸೊಗಸಾಗಿ ಹಾಡಬಲ್ಲವೆಂಬುದು ಮಂಚಿಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದಲ್ಲಿ (1971) ಸಿದ್ಧವಾಗಿತ್ತು. ಹಲವು ಬಾರಿ ಅದೇ ಶೈಲಿಯಲ್ಲಿ ಹಾಡುತ್ತಿದ್ದುದುಂಟು. ಇತ್ತೀಚೆನ ವರುಷಗಳಲ್ಲಿ (ಅಂದರೆ 1985ರ ಹತ್ತಿರ ಹತ್ತಿರ) ಅವರು ಯಕ್ಷಗಾನ ಶೈಲಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದು, ತನ್ನ ಅಭ್ಯಾಸದ ನಾಜೂಕು, ರಾಗ ನಿರ್ಣಯಗಳನ್ನು ಅಳವಡಿಸಿ ಹಾಡುವ ಹೊಸ ಸಮನ್ವಯದ ಧೋರಣೆಯನ್ನವರು ಪ್ರಯೋಗಿಸಿದ್ದರು. ಈ ಪ್ರಯೋಗ ಒಂದು ಪಕ್ವ ಹಂತವನ್ನು ತಲುಪುವ ಮೊದಲೇ ಅವರು ವಿಧಿವಶರಾದುದು (1929-1985) ಬೇಸರದ ಸಂಗತಿ’.

ಸ್ವತಃ ಭಾಗವತರಾಗಿದ್ದುಕೊಂಡ ಕಡತೋಕ ಮಂಜುನಾಥ ಭಾಗವತರು ಮಂಡೆಚ್ಚರ ಕೊಡುಗೆಗಳಿಗೆ ಮಾತಿಗೆ ಸ್ಪರ್ಶ ನೀಡುತ್ತಾರೆ – ‘ಯಕ್ಷಗೀತೆಗಳನ್ನು ಪ್ರಥಮತಃ ಶಾಸ್ತ್ರೀಯ ಸಂಗೀತದಲ್ಲಿ ಹಾಡಿದ ಭಾಗವತರು ಇವರು. ಯಕ್ಷಗಾನದಲ್ಲಿ ಪದ್ಯವು ಭಾವವನ್ನು ತೇಲಿಸಬೇಕು ಹೊರತು ಮುಳುಗಿಸಬಾರದು. ಪದ್ಯ-ಸಾಹಿತ್ಯದಲ್ಲಿ ಅಧ್ಯಯನ ಪೂರ್ಣ ಸಂಗೀತದ ರಾಗ-ನಾದ ಸೌಂದರ್ಯದ ಹೂರಣ ತುಂಬಿ ಭಾಗವತಿಕೆಯಲ್ಲಿ ಮಾಧುರ್ಯದ ಹುರುಳನ್ನು ಅರಳಿಸಬಲ್ಲ ವಿಶಿಷ್ಟ ಚೈತನ್ಯ ಅವರಲ್ಲಿತ್ತು. ಸಂಗೀತದ ಆವರಣದಲ್ಲಿ ಜಾನಪದೀಯ ಸೊಗಸನ್ನು ಅಭಿವ್ಯಕ್ತಿಸುವ ಕಲೆ ಕರಗತವಾಗಿತ್ತು. ಆಧಾರ ಶ್ರುತಿ ತೀರ ಮಂದ್ರದಲ್ಲಿದ್ದರೂ ಅದರ ಮೂರು ಸ್ಥಾಯಿಗಳಲ್ಲೂ ಸಂಚರಿಸಿ, ರಾಗ ವಿಸ್ತಾರ ಮಾಡಿ ರಂಗವನ್ನು ತುಂಬಿಸುವ ಅನನ್ಯ ಶಕ್ತಿ ಅವರದ್ದಾಗಿತ್ತು. ಶುದ್ಧ ಶಾಸ್ತ್ರೀಯ ಸಂಗೀತ ಅಧ್ಯಯನ ಅವರ ಹಾಡುಗಾರಿಕೆಗೆ ತುಂಬಾ ಸಹಕಾರಿ ಯಕ್ಷಗಾನ ಕಲಾ ಕ್ಷೇತ್ರಕ್ಕೆ ಮೌಲ್ಯಯುತ ದೇಣಿಗೆಯನ್ನೇ ಪಡೆಯಿತು.

ಮಂಡೆಚ್ಚರ ಕಲಿಕಾ ಹಸಿವನ್ನು ಡಾ.ಕೆ.ಎಂ.ರಾಘವ ನಂಬಿಯಾರರು ಸುಂದರವಾಗಿ ಹೇಳಿದ್ದಾರೆ, ‘ಯಶಸ್ಸು ಸಿದ್ಧಿಸಿದೊಡನೆ ಜನರಿಂದ ಅಗಲುವುದು, ತಾನೊಂದು ಶಿಖರವಾಗಿ ಕಾಣಿಸಿಕೊಳ್ಳುವುದು, ಮನುಷ್ಯನ ಸಾಮಾನ್ಯ ಸ್ವಭಾವ. ಜನರಿಂದ ಪ್ರತ್ಯೇಕಗೊಂಡಷ್ಟು ಕಲಾವಿದನ ಬೆಳವಣಿಗೆ ಕುಂಠಿತವಾಗುತ್ತದೆಂಬ ಪರಿವೆ ಅವನಿಗಿರುವುದಿಲ್ಲ. ಮಂಡೆಚ್ಚರು ಎಂದೂ ತಾನೊಬ್ಬ ವಿದ್ವಾಂಸನೆಂಬ ಸೋಗನ್ನು ಹಾಕಿಕೊಂಡವರಲ್ಲ. ಅವರೆಂದೂ ‘ತಿಳಿವಳಿಕೆ ದ್ವೀಪ’ವಾಗಲಿಲ್ಲ. ಎಳೆಯರೊಡನೆ ಎಳೆಯರಾಗಿ ಬೆರೆಯುತ್ತಿದ್ದ ಆ ‘ನಗುಮುಖದ ಅರಸ’ನಿಗೆ ಎಲ್ಲರೊಡನೆಯೂ ವಿಚಾರ ವಿನಿಮಯ ಮಾಡಬೇಕು, ಬೆಳೆಯುತ್ತಲೇ ಇದ್ದ ಕಲಾವಿದ ಅವರು.” ರಾಘವ ನಂಬಿಯಾರರ ಈ ವಾಕ್ಯಸರಣಿಯು ದಾಮೋದರ ಮಂಡೆಚ್ಚರ ವ್ಯಕ್ತಿತ್ವಕ್ಕೆ ಕನ್ನಡಿ.

ಮಂಡೆಚ್ಚರು ವಿಧಿವಶರಾದ ಆ ದಿನಗಳಿಗೆ ಕುಂಬಳೆ ಸುಂದರ ರಾಯರು ಅಕ್ಷರ ನಮನ ಸಲ್ಲಿಸುತ್ತಾರೆ, ‘ಮಂಡೆಚ್ಚರ ಕೊನೆ ದಿನಗಳನ್ನು ಕಂಡ ನನಗೆ ಅವರೊಬ್ಬ ಭಾಗ್ಯಶಾಲಿ ಎಂದೆನಿಸುತ್ತದೆ. ಅವರಿಗೆ ಮರಣ ಮಹಾಭಾಗ್ಯವೆಂದೇ ತೋರುತ್ತದೆ. ಆಸ್ಪತ್ರೆ ಸೇರಲಿಲ್ಲ. ನೋವಿನಿಂದ ನರಳಲಿಲ್ಲ. ರಂಗಸ್ಥಳದಲ್ಲಿ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರ ಕೈಲಿ ಜಾಗಟೆ ಕೊಟ್ಟು ಇಳಿದವರು ಮತ್ತೆ ರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ’.

ಮಂಡೆಚ್ಚರ ಭಾಗವತಿಕೆ, ಸಂಗಿತ ಕಲಿಕೆ, ಕಲಾವಿದರೊಂದಿಗಿನ ಸ್ನೇಹಪರತೆ, ಕಲಿಯುವ ದಾಹಗಳು.. ಹೂರಣವಾಗಿ ಪ್ರಕಟ ‘ಗಾನಕೋಗಿಲೆ’ ಇಷ್ಟವಾಯಿತು, ಆಪ್ತವಾಯಿತು. ಕಲಾವಿದ ಹೇಗೆ ಬೆಳೆಯಬೇಕು, ಬೆಳೆಯಬಹುದು ಎಂಬ ಸಂದೇಶವನ್ನು ಕೃತಿಯು ನನಗಂತೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT