ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ | ತರಗತಿ ಕೊಠಡಿಯಲ್ಲಿ ಧೀಂಗಿಣ: ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ

Published 18 ನವೆಂಬರ್ 2023, 23:35 IST
Last Updated 18 ನವೆಂಬರ್ 2023, 23:35 IST
ಅಕ್ಷರ ಗಾತ್ರ

ಧೀಂ ಕಿಟ, ಕಿಟ ತಕ...ತರಿಕಿಟ ಕಿಟ ತಕ...

ತದಿಗಿಣ ಥೋ, ತದಿಗಿಣ ಥೋ, ತದಿಗಿಣ ಥೋ...

ತರಗತಿ ಕೊಠಡಿಯ ಒಂದು ಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳು ಈ ತಾಳವನ್ನು ಬಾಯಲ್ಲಿ ಹೇಳುತ್ತ ಹೆಜ್ಜೆ ಹಾಕುತ್ತಿದ್ದರು. ಇತ್ತ ಮತ್ತೊಂದು ಕಡೆಯಲ್ಲಿ...

ತಿತ್ತಿಥೈ, ತಿತ್ತಿಥೈ, ತಿತ್ತಿಥೈ...ತದೋಂ ದಿಗು ತಕ ಥೈಯ...

ಕಿಟತಕ...ತದೋಂ ದಿಗು ತಕ ಥೈಯ...

ಎಂದು ತಾಳವನ್ನು ನುಡಿಸುತ್ತಿದ್ದ ವಿದ್ಯಾರ್ಥಿಗಳು ಭರವಸೆಯಿಂದಲೇ ನಾಟ್ಯದ ಅಭ್ಯಾಸ ಮಾಡುತ್ತ ಲಾಸ್ಯವಾಡುತ್ತಿದ್ದರು. ಇನ್ನೊಂದು ಕಡೆ ಇದ್ದವರು...

ದಿದ್ದಗ ದಿದ್ದಗ ದಿದ್ದಗ ದಿದ್ದಗ...ದಿದ್ದಗ ದಿದ್ದಗ ದಿದ್ದಗ ದಿದ್ದಗ...

ಎನ್ನುತ್ತ ಮೈ ಬಳುಕಿಸುತ್ತ ಮುಂದೆ ಸಾಗಿ ಜಿಗಿಯುತ್ತಿದ್ದರು. ಇವರೆಲ್ಲರೂ ಹೈಸ್ಕೂಲ್ ವಿದ್ಯಾರ್ಥಿಗಳು. ವೇದಿಕೆಯಲ್ಲಿದ್ದ ಯಕ್ಷಗಾನ ಗುರು ಜಾಗಟೆ ಹಿಡಿದುಕೊಂಡು ತಾಳ ಹಾಕುತ್ತ ಹಾಡುತ್ತಿದ್ದರೆ, ‘ರಂಗಪ್ರವೇಶ’ದ ಕನಸು ಕಂಡುಕೊಂಡಿರುವ ಚಿಗುರು ಕಲಾವಿದರ ಹುಮ್ಮಸ್ಸು ಹೆಚ್ಚುತ್ತಿತ್ತು.

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌, ಶಾಲಾ ಮಕ್ಕಳಿಗೆ ಯಕ್ಷಗಾನ ಕಲಿಸಲು ಹಮ್ಮಿಕೊಂಡಿರುವ ‘ಯಕ್ಷ ಶಿಕ್ಷಣ ಯೋಜನೆ’ ಆರಂಭವಾಗಿ ಮೂರು ತಿಂಗಳು ಕಳೆದಿದೆಯಷ್ಟೆ. ಅಷ್ಟರಲ್ಲಿ ವಿದ್ಯಾರ್ಥಿಗಳು ತಾಳ–ಲಯದ ಪಾಠ ಕರಗತ ಮಾಡಿಕೊಂಡು ನಾಟ್ಯಲೋಕ ಪ್ರವೇಶಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ನವ ಪ್ರತಿಭೆಗಳ ಮೊದಲ ಪ್ರಸಂಗದಲ್ಲಿ ಕುಣಿಯುವ ಉತ್ಸಾಹದಲ್ಲಿದ್ದಾರೆ.

ಯಕ್ಷಶಿಕ್ಷಣ ಯೋಜನೆಯ ಬೀಜ ಮೊಳೆತದ್ದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ, 2007ರಲ್ಲಿ. ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್‌ ಸ್ಥಾಪಿಸಿ ಆರಂಭಿಸಿದ್ದ ಯೋಜನೆ ಈಗ ಕಾಪು ಮತ್ತು ಕುಂದಾಪುರ ಕ್ಷೇತ್ರಕ್ಕೂ ವ್ಯಾಪಿಸಿದೆ. ಅಲ್ಲಿ ಒಟ್ಟು ಒಟ್ಟು 69 ಶಾಲೆಗಳಲ್ಲಿ 31 ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ.

ಇದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಈ ವರ್ಷದ ಆಗಸ್ಟ್‌ನಲ್ಲಿ ಪ್ರಯೋಗಕ್ಕೆ ಇಳಿದಿತ್ತು. ಸೂರಿಕುಮೇರು ಗೋವಿಂದ ಭಟ್ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಯೋಜನೆ ದಕ್ಷಿಣ ಕನ್ನಡ 12 ವಸತಿಶಾಲೆ ಸೇರಿ 40 ಸರ್ಕಾರಿ ಶಾಲೆಗಳಲ್ಲಿ ಕಾರ್ಯಗತಗೊಂಡಿದ್ದು, 4500 ವಿದ್ಯಾರ್ಥಿಗಳು ‘ತರಿಕಿಟ ಕಿಟ ತಕ, ತದಿಗಿಣ ಥೋಂ...’ ಕಲಿಯುತ್ತಿದ್ದಾರೆ.

ಸದ್ಯ ನಾಟ್ಯ ಪ್ರಧಾನ

ಯಕ್ಷ ಶಿಕ್ಷಣ ಯೋಜನೆಯಲ್ಲಿ ಸದ್ಯ ನಾಟ್ಯವನ್ನು ಮಾತ್ರ ಕಲಿಸಲಾಗುತ್ತಿದೆ. ಮುಂದಿನ ವರ್ಷ ಪರಿಷ್ಕೃತ, ಹೊಸ ಪಠ್ಯ ಕ್ರಮ ಅಳವಡಿಸಲು ಈಗಲೇ ಪ್ರಯತ್ನ ನಡೆಯುತ್ತಿದೆ. ಮುಂದಿನ ಬಾರಿ ಶೈಕ್ಷಣಿಕ ವರ್ಷ ಆರಂಭವಾಗುವಾಗಲೇ ಯಕ್ಷಗಾನ ತರಗತಿಗಳು ಕೂಡ ಆರಂಭಗೊಳ್ಳಲಿರುವ ಕಾರಣ ನಾಟ್ಯದ ಜೊತೆಯಲ್ಲೇ ಪ್ರಸಾಧನ, ವೇಷಭೂಷಣ, ಹಿಮ್ಮೇಳ, ಚೌಕಿ, ರಂಗಸ್ಥಳ, ಬಣ್ಣಗಾರಿಕೆ ಮತ್ತು ಇತರ ಅಂಗಗಳ ಪ್ರಾಥಮಿಕ ಪರಿಚಯವನ್ನೂ ಮಾಡಿಸುವುದು ಟ್ರಸ್ಟ್‌ನ ಉದ್ದೇಶ.

ತರಗತಿ ಹೀಗೆ ನಡೆಯುತ್ತದೆ...

ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಯಕ್ಷಗಾನ ತರಗತಿಗಳನ್ನು ನಡೆಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ವಾರದಲ್ಲಿ ಕನಿಷ್ಠ ಎರಡು ತರಗತಿಗಳು ಇರುತ್ತವೆ. ವೃತ್ತಿಪರವಾಗಿ ಯಕ್ಷಗಾನ ತರಬೇತಿ ನೀಡುತ್ತಿರುವ ಗುರುಗಳೇ ಇಲ್ಲಿ ಶಿಕ್ಷಕರು. ಆಯಾ ಶಾಲೆಯ ಮುಖ್ಯ ಶಿಕ್ಷಕರು ಯಕ್ಷಗಾನ ತರಗತಿಗೆ ಸಮಯ ನಿಗದಿ ಮಾಡುತ್ತಾರೆ. ಪಠ್ಯೇತರ ಚಟುವಟಿಕೆಯ ಸಮಯವನ್ನು ಯಕ್ಷಗಾನಕ್ಕಾಗಿ ತೆಗೆದಿರಿಸುತ್ತಾರೆ. ಎಲ್ಲ ಶಾಲೆಗಳಲ್ಲಿ ಏಕರೂಪದ ತರಗತಿಗಳನ್ನು ನಡೆಸುವುದಕ್ಕಾಗಿ ಪಠ್ಯಕ್ರಮದ ಕೈಪಿಡಿಯೊಂದನ್ನು ಸಿದ್ಧಗೊಳಿಸಲಾಗಿದೆ. ಇದನ್ನು ಪರಿಷ್ಕರಿಸಿ ಪುಸ್ತಕ ರೂಪ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ‘ಪಠ್ಯಪುಸ್ತಕ’ವಾಗಿ ಗುರುಗಳ ಕೈ ಸೇರಲಿದೆ.

‘ಯಕ್ಷಧ್ರುವ ಪಟ್ಲ ಫೌಂಡೇಷನ್‌ನವರು ಯಕ್ಷ ಶಿಕ್ಷಣ ಯೋಜನೆಯ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳು ಯಕ್ಷಗಾನವನ್ನು ಕುತೂಹಲದಿಂದ ಕಲಿಯುತ್ತಿದ್ದು, ಹೇಳಿಕೊಟ್ಟ ವಿಷಯಗಳನ್ನು ಬೇಗನೆ ಕರಗತ ಮಾಡಿಕೊಳ್ಳುತ್ತಿದ್ದಾರೆ. ಯೋಜನೆಯಿಂದ ಯಕ್ಷಗಾನದ ಪ್ರಸಾರಕ್ಕೆ ಹೆಚ್ಚು ಅನುಕೂಲ ಆಗಲಿದೆ’ ಎಂಬುದು ಹರೇಕಳ ಶಾಲೆಯ ಯಕ್ಷಗಾನ ಗುರು ಅಶ್ವತ್ಥ್‌ ಮಂಜನಾಡಿ ಅವರ ಭರವಸೆಯ ನುಡಿ.

‘ಯಕ್ಷ ಶಿಕ್ಷಣ ಯೋಜನೆ ಅತ್ಯಪೂರ್ವ ಕಾರ್ಯ. ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಬೆಳೆಯಲು ಇದು ನೆರವಾಗಲಿದೆ. ಹೆಚ್ಚು ಗಮನ ಸೆಳೆಯದ ಹಿಮ್ಮೇಳದಲ್ಲೂ ಮಕ್ಕಳನ್ನು ಪಳಗಿಸುವ ಕಾರ್ಯಕ್ಕೆ ಈ ಯೋಜನೆಯಲ್ಲಿ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಆಯಾಮಗಳಲ್ಲೂ ಯಕ್ಷಗಾನದ ಬೆಳವಣಿಗೆಯ ನಿಟ್ಟಿನಲ್ಲಿ ಈ ಯೋಜನೆ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು ಭಾಗವತರಾದ ಮುರಳಿ ಕೃಷ್ಣ ಶಾಸ್ತ್ರಿ ತೆಂಕಬೈಲು.

ವಸತಿಶಾಲೆಗಳಲ್ಲಿ ಸಂಸ್ಕೃತಿ ವಿನಿಮಯ

ಯಕ್ಷ ನಾಟ್ಯಕ್ಕೆ ಲಾಸ್ಯ ತುಂಬುವ ಪ್ರಯತ್ನ

ಯಕ್ಷ ನಾಟ್ಯಕ್ಕೆ ಲಾಸ್ಯ ತುಂಬುವ ಪ್ರಯತ್ನ

ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅನೇಕ ಮಂದಿ ಈಚೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬಂದು ನೆಲೆಸಿದ್ದಾರೆ. ಅವರ ಮಕ್ಕಳ ಪೈಕಿ ಹೆಚ್ಚಿನವರು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ವಸತಿಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡವರೂ ಇದ್ದಾರೆ. ಅವರಲ್ಲಿ ಅನೇಕರು ಯಕ್ಷಗಾನ ಕಲಿಯುವ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಅಂಥ ಶಾಲೆಗಳಲ್ಲಿ ಈಗ ಸಂಸ್ಕೃತಿ ವಿನಿಮಯ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ವಿದ್ಯಾರತ್ನ ಶಾಲೆಯಲ್ಲಿ ಯಕ್ಷಗಾನ ಆಭ್ಯಾಸದ ನಡುವೆ –‌ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್ 
ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ವಿದ್ಯಾರತ್ನ ಶಾಲೆಯಲ್ಲಿ ಯಕ್ಷಗಾನ ಆಭ್ಯಾಸದ ನಡುವೆ –‌ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್ 

'ಯಕ್ಷಗಾನ ಕಲಿಯಲು ಆಸಕ್ತಿ ತೋರಿಸುವವರ ಸಂಖ್ಯೆ ಕೆಲವು ಶಾಲೆಗಳಲ್ಲಿ ಹೆಚ್ಚುತ್ತಾ ಸಾಗುತ್ತಿದೆ. ಮಂಗಳೂರಿನ ಉಳಾಯಿಬೆಟ್ಟು ಅಂಬೇಡ್ಕರ್ ವಸತಿಶಾಲೆಯಲ್ಲಿ ಆರಂಭದಲ್ಲಿ 98 ವಿದ್ಯಾರ್ಥಿಗಳು ಮಾತ್ರ ಇದ್ದರು. ಈಗ ಈ ಸಂಖ್ಯೆ 154ಕ್ಕೆ ಏರಿದೆ. ಹೀಗಾಗಿ ಅಲ್ಲಿ ಎರಡು ತಂಡಗಳಲ್ಲಿ ಕಲಿಸಲಾಗುತ್ತದೆ. ವಸತಿಶಾಲೆಗಳ ಶೇಕಡ 90 ಮಂದಿ ಯಕ್ಷಗಾನದ ಬಗ್ಗೆ ಮಾಹಿತಿ ಇಲ್ಲದವರು. ಆದರೂ ಹೆಚ್ಚಿನವರು ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಯಕ್ಷ ಗುರು ದೀವಿತ್ ಎಸ್‌.ಕೆ.ಪೆರಾಡಿ ಹೇಳುತ್ತಾರೆ.

ಶಾಲಾ ಮಕ್ಕಳ ಯಕ್ಷಗಾನ ಕಲಿಕೆಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಉಚಿತವಾಗಿ ನೀಡುವ ತರಬೇತಿಗೆ ಈ ವರ್ಷ ಕನಿಷ್ಠ ₹ 50 ಲಕ್ಷ ವೆಚ್ಚ ಆಗಲಿದೆ. ಯೋಜನೆಯನ್ನು ಕರಾವಳಿಯ ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಿಸಬೇಕು ಎಂಬ ಆಶಯವಿದೆ.
–ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ ಸ್ಥಾಪಕ
- ವಸತಿಶಾಲೆಗಳಲ್ಲಿ ಸಂಸ್ಕೃತಿ ವಿನಿಮಯ
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅನೇಕ ಮಂದಿ ಈಚೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬಂದು ನೆಲೆಸಿದ್ದಾರೆ. ಅವರ ಮಕ್ಕಳ ಪೈಕಿ ಹೆಚ್ಚಿನವರು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ವಸತಿಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡವರೂ ಇದ್ದಾರೆ. ಅವರಲ್ಲಿ ಅನೇಕರು ಯಕ್ಷಗಾನ ಕಲಿಯುವ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಅಂಥ ಶಾಲೆಗಳಲ್ಲಿ ಈಗ ಸಂಸ್ಕೃತಿ ವಿನಿಮಯ ನಡೆಯುತ್ತಿದೆ. ‘ಕೆಲವು ಶಾಲೆಗಳಲ್ಲಿ ಯಕ್ಷಗಾನ ಕಲಿಯಲು ಆಸಕ್ತಿ ತೋರಿಸುವವರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ. ಮಂಗಳೂರಿನ ಉಳಾಯಿಬೆಟ್ಟು ಅಂಬೇಡ್ಕರ್ ವಸತಿಶಾಲೆಯಲ್ಲಿ ಆರಂಭದಲ್ಲಿ 98 ವಿದ್ಯಾರ್ಥಿಗಳು ಮಾತ್ರ ಇದ್ದರು. ಈಗ ಈ ಸಂಖ್ಯೆ 154ಕ್ಕೆ ಏರಿದೆ. ಹೀಗಾಗಿ ಅಲ್ಲಿ ಎರಡು ತಂಡಗಳಲ್ಲಿ ಕಲಿಸಲಾಗುತ್ತದೆ. ವಸತಿಶಾಲೆಗಳ ಶೇಕಡ 90 ಮಂದಿ ಯಕ್ಷಗಾನದ ಬಗ್ಗೆ ಮಾಹಿತಿ ಇಲ್ಲದವರು. ಆದರೂ ಹೆಚ್ಚಿನವರು ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಯಕ್ಷ ಗುರು ದೀವಿತ್ ಎಸ್‌.ಕೆ.ಪೆರಾಡಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT