ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣ ಸೃಜಿಸಿದ ಸಂಗೀತ ಜಗತ್ತು

Published : 29 ಜುಲೈ 2023, 23:30 IST
Last Updated : 29 ಜುಲೈ 2023, 23:30 IST
ಫಾಲೋ ಮಾಡಿ
Comments

ಆಹ್ವಾನ ಪತ್ರಿಕೆಯಲ್ಲಿ ಹೀಗೊಂದು ಒಕ್ಕಣೆ–‘ವಿಶ್ವದ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಗಾಯಕ ಟಿ.ಎಂ. ಕೃಷ್ಣ ಅವರ ಸಮ್ಮೋಹನಗೊಳಿಸುವ ಸಂಗೀತ ಸಂಜೆಯಲ್ಲಿ ಜತೆಯಾಗಿ; ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪರಂಪರೆ, ಸೃಜನಶೀಲತೆಯ ಸಂಭ್ರಮಾಚರಣೆ ಮಾಡಿ’.

ತಮ್ಮ ಯಾವುದೇ ಕಛೇರಿಯಲ್ಲಿ ಕೃಷ್ಣ ಮೋಡಿ ಮಾಡುವುದು, ಕೀಟಲೆ ಮಾಡುವುದು ಸದಾ ಇದ್ದೇ ಇರುತ್ತದೆ. ಪ್ರಚೋದಿಸುವ, ಗೊಂದಲ ಮೂಡಿಸುವ, ಬಡಿದೆಬ್ಬಿಸುವ ಕೆಲಸವನ್ನೂ ಅವರ ಸಂಗೀತ ಮಾಡುತ್ತದೆ. ಮಂಕು ಎನ್ನಬಹುದಾದ ಕ್ಷಣವೇ ಅವರ ಕಛೇರಿಯಲ್ಲಿ ಇರುವುದಿಲ್ಲ. ಶುದ್ಧ ಕಲಾಪ್ರಕಾರ ಪ್ರೀತಿಸುವವರಿಗೆ ಅದೊಂದು ಹಬ್ಬ. ಪ್ರಯೋಗಮುಖಿ ಕಲಾವಂತರಿಗೆ ಹಾಗೂ ಸರ್ವಧರ್ಮಗಳನ್ನೂ ಸಮಾನವಾಗಿ ಕಾಣುವವರಿಗೆ ಅಚ್ಚರಿ ಬೆರೆತ ಆನಂದವನ್ನು ಕೃಷ್ಣ ಅವರ ಸಂಗೀತ ನೀಡುತ್ತದೆ. ಆದರೆ, ಧರ್ಮಿಷ್ಠರು, ಸಂಪ್ರದಾಯವಾದಿಗಳು ಅವರೆಂದರೆ ಬಿರುಗೂದಲಿನವರಾಗುತ್ತಾರೆ, ಅಗೌರವ ತೋರುತ್ತಾರೆ. ನಾಸ್ತಿಕರಿಗೆ ಅವರ ಚಿಂತನೆಗಳು ಪ್ರಿಯ. ಶಾಸ್ತ್ರೀಯ ಸಂಗೀತದ ಆಳ–ಅಗಲವನ್ನು ಬಲ್ಲ ಹಿರೀಕರು ಮೆಚ್ಚುಗೆ ಸೂಸುವಾಗಲೂ ಅವರನ್ನು ವಾರೆಗಣ್ಣಿನಿಂದಲೇ ನೋಡುತ್ತಾರೆ. ಶಾಸ್ತ್ರೀಯ ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡ ಹೊಸ ತಲೆಮಾರಿನವರು ಹಾಗೂ ಸಂಗೀತ ವಿದ್ಯಾರ್ಥಿಗಳು ಅವರನ್ನು ಕೊಂಡಾಡುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ–ಅವರು ದೈವಿಕ ಪ್ರತಿಭೆ, ವರ್ಚಸ್ವಿ, ನಿರ್ಭಿಡೆಯ ವ್ಯಕ್ತಿತ್ವದ ಸಂಗೀತಗಾರ. ಕೃಷ್ಣ ದೈವಾರಾಧಕರಲ್ಲದಿದ್ದರೂ ಹಲವು ವಿಷಯಗಳ ಸಾರಸತ್ತ್ವ ಅರಿಯುವ ಆಸಕ್ತಿ ಹಾಗೂ ತಲಸ್ಪರ್ಶಿ ಅಧ್ಯಯನದಿಂದ ಅವರ ದೃಷ್ಟಿಕೋನಗಳು ವಿಕಸನಗೊಂಡಿವೆ. ಶಾಸ್ತ್ರೀಯ ಸಂಗೀತ, ಕಲೆ, ಅಸ್ಪೃಶ್ಯತೆಯಿಂದಾಗಿ ಸಮಾಜದಲ್ಲಿ ಮೂಲೆಗುಂಪಾದರೂ ತಲೆ ತಲಾಂತರದಿಂದ ಬಂದ ವಾದ್ಯ ತಯಾರಿಕೆಗೆ ಅರ್ಪಿಸಿಕೊಂಡ ಕಲಾ ಕುಶಲಕರ್ಮಿಗಳ ಕುರಿತು ವಿದ್ವತ್ಪೂರ್ಣ ಕೃತಿಗಳನ್ನು ಬರೆದಿರುವ ಅವರು ಹೆಸರಾಂತ ಲೇಖಕ. ಸಮಕಾಲೀನ ವಿಷಯಗಳ ಬಗೆಗೆ ಸತತವಾಗಿ ಬರೆಯುವ ಅವರು ನಿರ್ಭೀತ ಹೋರಾಟಗಾರರೂ ಹೌದು.

ಅವರ ಸಂಗೀತ ಹಾಗೂ ಬಹು ವಿಷಯಗಳ ಭಂಡಾರ ಕಂಡರೆ ಚಕಿತಗೊಳ್ಳುವಿರಿ. ಸಂಪ್ರದಾಯದ ಬೇರುಗಳಿದ್ದೂ ಅವರು ಆಧುನಿಕ ಮನಃಸ್ಥಿತಿಯವರು. ನಿರೀಶ್ವರವಾದಿಯಾದರೂ ದೇವಸ್ಥಾನದಲ್ಲಿ ನಡೆಯುವ ಸಂಗೀತೋತ್ಸವಗಳಲ್ಲಿ ಭಕ್ತಿಗೀತೆಗಳನ್ನು ಹಾಡಿ ಮೋಡಿ ಮಾಡುತ್ತಾರೆ. ಅವರದ್ದು ಹೊಸತನಕ್ಕಾಗಿ ತುಡಿಯುವ ಮನ. ಕಲೆಯ ಜತೆ ಬೆರೆತುಕೊಂಡಿರುವ ಸಂಪ್ರದಾಯವಾದಿ ಮನಸ್ಸುಗಳನ್ನು ಅವರು ಸಂಸ್ಕೃತಿ ಹಾಗೂ ಸಾಮಾಜಿಕ ಅವಕಾಶದ ನೆಲೆಗಟ್ಟಿನಲ್ಲಿ, ಗುಪ್ತಗಾಮಿನಿಯಾಗಿರುವ ತರತಮವನ್ನು ಉಲ್ಲೇಖಿಸಿ ಪ್ರಶ್ನಿಸುತ್ತಾರೆಯೇ ವಿನಾ ನಂಬಿಕೆಗಳನ್ನೇ ಬುಡಮೇಲು ಮಾಡುವುದಿಲ್ಲ.

ವಿಶ್ವಮಟ್ಟದಲ್ಲಿ ಅವರಿಗೆ ಎಲ್ಲರಿಂದಲೂ ಹೊಗಳಿಕೆ ಸಿಗುವುದಿಲ್ಲ ಎನ್ನುವುದೇನೋ ನಿಜ. ಆದರೆ ಕಲೆಯನ್ನು ಶ್ರೀಮಂತಗೊಳಿಸುವಂಥ ಅರ್ಥಪೂರ್ಣ ಚರ್ಚೆಗಳನ್ನು ಅವರು ಹಚ್ಚುತ್ತಾರೆನ್ನುವುದು ಗಮನಾರ್ಹ. ಜನಪದೀಯರು, ಟ್ರ್ಯಾನ್ಸ್‌ಜೆಂಡರ್‌ಗಳು, ಪುರಾಣಿಕರು, ಶಾಸ್ತ್ರೀಯರು, ದಾಸ–ವಚನ ಸಾಹಿತ್ಯ ಹಾಡುವವರು, ಹಳೆಯ ಹಾಗೂ ನವೋದಯ ಕಾವ್ಯಪ್ರೇಮಿಗಳು, ಭಕ್ತಿ ಹಾಗೂ ಸೂಫಿ ಸಂಗೀತಗಾರರು ಎಲ್ಲರನ್ನೂ ದೇಶ–ವಿದೇಶಗಳ ವಿವಿಧ ಭಾಗಗಳಿಂದ, ಹಲವು ಭಾಷೆಗಳಿಂದ ತಮ್ಮೊಡನೆ ಒಳಗೊಳ್ಳುತ್ತಲೇ ಸಂಗೀತದ ಕಲಾವಂತಿಕೆಯನ್ನು ಅವರು ಸಂಭ್ರಮಿಸುತ್ತಾರೆ.

ಕರ್ನಾಟಕ, ಹಿಂದೂಸ್ತಾನಿ, ಭರತನಾಟ್ಯ, ಕಥಕ್, ಕುಚಿಪುಡಿ, ಒಡಿಸ್ಸಿ ಮತ್ತಿತರ ಸಂಗೀತ ಹಾಗೂ ನೃತ್ಯ ಪ್ರಕಾರಗಳನ್ನು ಕಛೇರಿಯು ಒಳಗೊಳ್ಳಲಿದೆ ಎಂದು ಆಯೋಜಕರು ಉಲ್ಲೇಖಿಸಿದ್ದನ್ನು ನೋಡಿ ಅನ್ನಿಸಿತ್ತು. ಆದರೆ, ಕೃಷ್ಣ ಅದನ್ನು ಅರ್ಥೈಸಿದ್ದು ತುಸು ಬೇರೆ ರೀತಿಯಲ್ಲಿ. ಕಛೇರಿ ಪ್ರಾರಂಭಿಸುವ ಮೊದಲು ಅವರು ಸುದೀರ್ಘ ಭಾಷಣ ಮಾಡದೆ ಸಂಕ್ಷಿಪ್ತವಾಗಿ ಮಾತನಾಡಿದರು. ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕಾಲದ ಸಂಗೀತ ಸಂಯೋಜನೆಗಳನ್ನು ವಿವಿಧತೆ ಹಾಗೂ ಶ್ರೀಮಂತ ಪರಂಪರೆಯ ದೃಷ್ಟಿಯಿಂದ ಅಷ್ಟೇ ಅಲ್ಲದೆ ನಾವು ಎದುರಿಸುತ್ತಿರುವ ಸಮಕಾಲೀನ ವಿದ್ಯಮಾನಗಳು, ಸಮಸ್ಯೆಗಳಿಗೆ ಅನ್ವಯಿಸಬಹುದಾದ ಅವುಗಳ ಪಠ್ಯದ ಅರ್ಥ–ತತ್ತ್ವದಿಂದಲೂ ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದರು.

ಗೋಪಾಲಕೃಷ್ಣ ಭಾರತಿ ಅವರ ತಮಿಳಿನ ಜನಪ್ರಿಯ ರಚನೆಯೊಂದರಿಂದ ಅವರು ಹಾಡುಗಾರಿಕೆ ಪ್ರಾರಂಭಿಸಿದರು. ವಿಲಂಬ ಕಾಲದಿಂದ ಶುರುವಾಯಿತು. ಸಾಮಾನ್ಯವಾಗಿ ಸಾಹಿತ್ಯ, ಸಂಗೀತದ ಪಲುಕುಗಳ ಮಿಶ್ರಣ ಒಳಗೊಂಡ ವರ್ಣದ ಮೂಲಕ ಕಛೇರಿಗಳನ್ನು ಅನೇಕರು ಪ್ರಾರಂಭಿಸುತ್ತಾರೆ. ಅದಕ್ಕೆ ಇದು ಅಪವಾದ. ಗಾಯಕರಿಗೆ ವರ್ಣ ಎನ್ನುವುದು ಒಂದು ಬಗೆಯಲ್ಲಿ ಕಛೇರಿಯ ದಿಕ್ಕನ್ನು ನಿರ್ಣಯಿಸುವಂಥದ್ದು. ಸರಿಯಾದ ಶ್ರುತಿ, ತಾಳಕ್ಕೆ ಒಗ್ಗಿಕೊಳ್ಳಲು ಅಗತ್ಯವಿರುವ ಪ್ರವೇಶಿಕೆಯಂತೆ. ಬಹುಶಃ ಸಂಪ್ರದಾಯವಾದಿಗಳಿಗೆ ಕೃಷ್ಣ ಅವರು ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳದೇಹೋದುದು ಇರುಸು ಮುರುಸು ಉಂಟುಮಾಡಿದ್ದೀತು.

ಕರ್ನಾಟಕ ಸಂಗೀತ ಕಛೇರಿಯ ಸಿದ್ಧ ಅನುಕ್ರಮಣಿಕೆಯನ್ನು ಕೃಷ್ಣ ಅವರು ಅನುಸರಿಸದೆಯೂ ಇರಬಹುದು. ಅಂಧ ಸಾಂಪ್ರದಾಯಿಕತೆಯ ವಿಷಯದಲ್ಲಿ ಬಂಡೇಳುವವರು ಅವರಾದರೂ ಕಲೆಯ ಗಂಭೀರ ವಿದ್ಯಾರ್ಥಿ. ಪ್ರತಿ ಕಛೇರಿಯಲ್ಲೂ ಹೊಸತನ್ನು ಅನಾವರಣ ಮಾಡುವ ಶುದ್ಧವಾದಿ. ಕೃತಿಗಳು, ರಾಗಗಳು, ಆಲಾಪ, ತಾನಂ, ಪಲ್ಲವಿಗಳು, ಕಲ್ಪನಾಸ್ವರಗಳು, ನೆರವಲ್‌ಗಳು ಇವೆಲ್ಲವುಗಳ ಮೇಲಿನ ಅವರ ಹಿಡಿತ ಹಿತಾನುಭವ ನೀಡುವುದಲ್ಲದೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಮಿಂಚಿನಂತಹ ತಾನಂ ಒಟ್ಟಿಗೆ ನಾಲ್ಕು ರಾಗಗಳ ಗುಚ್ಛವನ್ನು(ರಾಗ ಮಾಲಿಕ) ಪ್ರಸ್ತುತಪಡಿಸಿದ ಬಳಿಕ, ಕೃಷ್ಣ ಊಹೆಗೂ ಮೀರಿದ್ದನ್ನು ಹಾಡಿದರು. 2500 ವರ್ಷಗಳ ಹಿಂದೆ ಬಂಡೆಗಳ ಮೇಲೆ ಕೊರೆದಿದ್ದ ಅಶೋಕನ ಶಿಲಾಶಾಸನಗಳಿಂದ ತೆಗೆದುಕೊಳ್ಳಲಾದ ಸಾರವನ್ನು ಅವರು ಹಾಡಾಗಿಸಿದರು. ಇತಿಹಾಸಕಾರರು, ಭಾಷಾ ಪರಿಣತರು ಹಾಗೂ ಅಶೋಕ ವಿಶ್ವವಿದ್ಯಾಲಯದವರೊಂದಿಗೆ ಸಾಕಷ್ಟು ಸಂಶೋಧನೆ ನಡೆಸಿ, ಅರಿವಿಗೆ ದಕ್ಕಲು ಕಷ್ಟವಾದ ಪ್ರಾಕೃತ ಭಾಷೆಯ ಪಠ್ಯಕ್ಕೆ ರಾಗ ಹಾಗೂ ಸ್ವರ ಹಾಕಿದರು. ನಿಗೂಢ ಚಿತ್ರಲಿಪಿಗಳ ಮೂಲಕ ಉಳಿದಿರುವ ಪ್ರಾಕೃತ ಲಿಪಿಯನ್ನು ಕೆಲವು ತಿಂಗಳ ಹಿಂದೆಯಷ್ಟೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಪ್ರಾಕೃತ ಲಿಪಿ ಕುರಿತ ಅಧ್ಯಯನ ಈಗಲೂ ಮುಂದುವರಿದಿದೆ. ಸೌಹಾರ್ದ, ಶಾಂತಿ ಹಾಗೂ ಧರ್ಮಮಾರ್ಗದ ನಡೆಯನ್ನು ಅಶೋಕನ ಶಾಸನಗಳ ಪ್ರಸ್ತುತಿಯು ಕೇಂದ್ರವಾಗಿಟ್ಟುಕೊಂಡಿತ್ತು. ತನ್ನ ಸಾಮ್ರಾಜ್ಯ ನಡೆಸುತ್ತಿದ್ದ ಮೊದಲ ಕಾಲಘಟ್ಟದಲ್ಲಿ ನಿರ್ದಯಿ ಯುದ್ಧಪಿಪಾಸು ಆಗಿದ್ದ ಅಶೋಕ ಮುಂದೆ ಶಾಂತಿಪ್ರಿಯನಾದದ್ದು ಗೊತ್ತೇ ಇದೆ. ಅವನ ಒಂದು ಶಾಸನದಲ್ಲಿ ಕೃಷ್ಣ ಹೀಗೆ ಹೇಳುತ್ತಾನೆ- “ಅಶೋಕನು ಕಳಿಂಗವನ್ನು ಯುದ್ಧದಿಂದ ಗೆದ್ದ. ಆದರೆ ನ್ಯಾಯವನ್ನು ಪ್ರತಿಬಿಂಬಿಸಿ, ನ್ಯಾಯವನ್ನು ಅಭ್ಯಸಿಸಿ, ನ್ಯಾಯವನ್ನು ಸುಖಿಸಿ ಪಶ್ಚಾತ್ತಾಪಪಟ್ಟ. ಕಳಿಂಗದ ಜನರ ಹೃದಯವನ್ನು ಅಶೋಕ ಗೆದ್ದನೇ?’

ಕೃಷ್ಣ ತಮ್ಮ ಕಛೇರಿಯಲ್ಲಿ ಪ್ರಸ್ತುತಪಡಿಸಿದ್ದರಲ್ಲಿ ತ್ಯಾಗರಾಜರ ಕೀರ್ತನೆ ಹಾಗೂ ಜನಪ್ರಿಯ ಸಂಸ್ಕೃತ ಗೀತೆ ‘ಪಾಪನಾಶನ ಶಿವಂ’ನ ‘ಜಾನಕೀಪತೆ’, ಜೇಡರ ದಾಸಿಮಯ್ಯ ಹಾಗೂ ಲಡ್ಡೆಯ ಸೋಮಣ್ಣನ ಎರಡು ವಚನಗಳು ಕೂಡ ಸೇರಿದ್ದವು. ದಾಸಿಮಯ್ಯನ ಪೌರುಷದ ಪದ್ಯ 1000 ವರ್ಷಗಳ ಹಿಂದೆಯೇ ರಚಿತವಾದುದು. ಆ ಕಾಲದಲ್ಲಿ ಸಾಕಷ್ಟು ದೂರಾಲೋಚನೆಯುಳ್ಳದ್ದು. ಟ್ರಾನ್ಸ್‌ಜೆಂಡರ್‌ಗಳ ಅಸಮಾನತೆ ಹಾಗೂ ಅವರ ಮೇಲೆ ಹೇರಿದ್ದ ಬಹಿಷ್ಕಾರ ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ಅವನು ಖಂಡಿಸಿದ್ದ ವಚನ ಅದು. ಅದು ಹೀಗಿದೆ: ‌‘ಜಡೆ ಬಂದರೆ ಹೆಣ್ಣೆಂಬರು,/ಕಾಸೆ ಮೀಸೆ ಬಂದರೆ ಗಂಡೆಂಬರು,/ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ’.

ಸಮಾಜ ಸುಧಾರಕ ನಾರಾಯಣ ಗುರು ಅವರ ಮಲಯಾಳಂ ರಚನೆ ‘ಅನುಕಂಬದಾಸಕಂ’ ಅನ್ನೂ ಅವರು ಹಾಡಿದರು. ರಾಮ, ಬುದ್ಧ, ಯೇಸು, ಶಂಕರ ಅಥವಾ ಪೈಗಂಬರ್–ಇವರಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರುವವರು ಯಾರು ಎನ್ನುವ ಗಂಭೀರ ಪ್ರಶ್ನೆಯನ್ನು ಎತ್ತಿದ ರಚನೆ ಇದು.

ಕೊನೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸೂಚಿಸುವ ಉಮೇದಿನಿಂದ ಮೆಚ್ಚಿನ ಗಾಂಧಿ ಗೀತೆಯನ್ನು ಹಾಡಿದರು. ಮೀರಾ ಭಜನೆಯೊಂದಿಗೆ ಕಛೇರಿ ಮುಗಿಯಿತು.

ಪಾಕಿಸ್ತಾನದ ಹಫೀಸ್ ಜಲಂಧರಿ ಬರೆದಿರುವ ಕೃಷ್ಣದೇವರ ಕುರಿತಾದ ‘ಕೃಷ್ಣಾ ಕನ್ಹಯ್ಯಾ’ ಎಂಬ ಉರ್ದು ಗೀತೆಯನ್ನು ಕೃಷ್ಣ ಹಾಡಿದ್ದು ಅವರ ಕಛೇರಿಯ ರೋಮಾಂಚನಕಾರಿ ಘಟ್ಟ. ಪಾಕಿಸ್ತಾನದ ರಾಷ್ಟ್ರಗೀತೆಯನ್ನೂ ಬರೆದಿರುವ ಹಫೀಸ್ ಜಲಂಧರಿ ಅವರ ಭಾವತೀವ್ರತೆಯ ಅರ್ಥಪೂರ್ಣ ಗೀತೆ ಅದು. ಈ ಗೀತೆಗೆ ಸ್ವರ ಸಂಯೋಜನೆ ಮಾಡಲು ಹಿಂದೂಸ್ಥಾನಿ ಸಂಗೀತದ ಹೆಸರಾಂತ ಗಾಯಕಿ ಶುಭಾ ಮುದ್ಗಲ್ ಅವರ ನೆರವನ್ನು ಪಡೆದುಕೊಂಡಿದ್ದಾಗಿ ಕೃಷ್ಣ ತಿಳಿಸಿದರು. ಸೃಜನಶೀಲತೆಯ ವಿಷಯದಲ್ಲಿ ಈ ಸಂಗೀತಗಾರನ ಉತ್ಕಟತೆ ಎಷ್ಟು ಆಳವಾದದ್ದು ಎನ್ನುವುದಕ್ಕೆ ಈ ತರಹದ ಯತ್ನಗಳು ಕನ್ನಡಿ ಹಿಡಿಯುತ್ತವೆ. ಕೃಷ್ಣನ ಗುಣಗಾನ ಮಾಡುತ್ತಲೇ ನೋಡುಗರನ್ನು ಪ್ರಚೋದಿಸುವಷ್ಟು ಶಕ್ತವಾದ ಈ ರಚನೆಯು ‘ಓ ನನ್ನ ಕತ್ತಲ ಬಂಧು, ಭಾರತದ ಬೆಳಕೇ, ನಿನ್ನ ನಿಲುವಂಗಿಯಲ್ಲಿ ನನ್ನ ಸುತ್ತುವರಿ’ ಎನ್ನುವ ಅರ್ಥ ಕೊಡುವ ಸಾಲುಗಳಿಂದ ಮುಕ್ತಾಯಗೊಂಡಿತು.

ಎರಡೂವರೆ ತಾಸು ಅವಧಿಯ ಕಛೇರಿ ಮುಗಿದೊಡನೆ ಎಲ್ಲರೂ ಎದ್ದುನಿಂತು ಚಪ್ಪಾಳೆಯ ಗುಡುಗು ಮೂಡಿಸಿದರು. ಆಗ ನನಗೆ ಶೇಕ್ಸ್‌ಪಿಯರನ ಈ ಸಾಲುಗಳು ನೆನಪಾದವು: ‘ಸಂಗೀತ ಪ್ರೀತಿಯ ಆಹಾರವಾದರೆ, ಅನುರಣಿಸಲಿ; ಅದನ್ನು ಭರಪೂರ ನೀಡು... ಇಷ್ಟು ಭಾವಪರವಶವಾದ ಸಂಗೀತ, ಕ್ಲಿಯೋಪಾತ್ರಳ ಕುರಿತ ಬಾರ್ಡ್‌ನ ಸಾಲುಗಳನ್ನು ತಿರುಗಿಸಿ ಹೇಳುವುದಾದರೆ, ತಣಿಸಿದಷ್ಟೂ ಹಸಿವು ಮೂಡಿಸುವಷ್ಟು ಶಕ್ತ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT