ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾರಿನೆಟ್‌ ಮಾಂತ್ರಿಕ

Last Updated 21 ಜೂನ್ 2018, 20:13 IST
ಅಕ್ಷರ ಗಾತ್ರ

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ ಚಿತ್ರ ‘ಮುತ್ತಣ್ಣ’. ಈ ಸಿನಿಮಾದ ‘ಮುತ್ತಣ್ಣ ಪೀಪಿ ಊದುವ... ಮುತ್ತಣ್ಣ ಡೋಲು ಬಡಿಯುವ...’ ಹಾಡು ಜನಮಾನಸದಲ್ಲಿ ಅಚ್ಚೊತ್ತಿದೆ. ಇಂದಿಗೂ ಮದುವೆ ಸಮಾರಂಭಗಳ ಸಂಭ್ರಮವನ್ನು ಹೆಚ್ಚಿಸುತ್ತಲೇ ಇದೆ. ಮುತ್ತಣ್ಣ ತನ್ನ ತಂಗಿಯ ಮದುವೆಗೆ ಕ್ಲಾರಿನೆಟ್‌ ನುಡಿಸುವುದು ಈ ಹಾಡಿನ ವಿಶೇಷ. ಆದರೆ, ತೆರೆಯ ಹಿಂದೆ ಉಸಿರು ಬಿಗಿಹಿಡಿದು ಕ್ಲಾರಿನೆಟ್‌ ನುಡಿಸಿದ್ದು ಕ್ಲಾರಿನೆಟ್‌ ವಿದ್ವಾನ್‌ ಎಂ. ನಾಗೇಂದ್ರ.

ನಾಗೇಂದ್ರ ಗೌರಿಬಿದನೂರಿನವರು. ಅಪ್ಪ ನಾದಸ್ವರ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಬಾಲ್ಯದಲ್ಲಿಯೇ ಅವರು ಸಂಗೀತದತ್ತ ಹೊರಳಲು ಇದು ಪ್ರೇರಣೆಯಾಯಿತು. ಅವರು ಓದಿದ್ದು ಕೇವಲ ಐದನೇ ತರಗತಿ. ಆ ವೇಳೆಗೆ ಸಂಗೀತ ಕಲಿಕೆಯತ್ತ ಮನಸ್ಸು ವಾಲಿತು. ಆಗ ಅವರ ಮನಸೆಳೆದದ್ದು ಕ್ಲಾರಿನೆಟ್‌. ಈಗ ಅವರಿಗೆ ಎಪ್ಪತ್ತೈದು ವರ್ಷ. ಹದಿನೈದನೇ ವಯಸ್ಸಿಗೆ ಕ್ಲಾರಿನೆಟ್‌ ನುಡಿಸುವುದನ್ನು ಆರಂಭಿಸಿದ ಅವರ ಸಂಗೀತಕ್ಕೆ ಇಂದಿಗೂ ಮುಪ್ಪಾಗಿಲ್ಲ. ಇತ್ತೀಚೆಗೆ ‘ಶುಕ್ರದೆಶೆ ಸ್ಟಾಟ್‌’ ಚಿತ್ರದ ಹಾಡಿಗೂ ಕ್ಲಾರಿನೆಟ್‌ ನುಡಿಸಿದ ಖುಷಿ ಅವರದು.

‘ಅಪ್ಪನಿಂದ ನಾದಸ್ವರ ನುಡಿಸುವುದನ್ನು ಕಲಿತೆ. ಅದೇ ವೇಳೆ ನನಗೆ ಕ್ಲಾರಿನೆಟ್‌ ಮೇಲೆ ಮೋಹ ಬೆಳೆಯಿತು. ಹೆಚ್ಚಿನ ಸಂಗೀತ ಕಲಿಕೆಗಾಗಿ ಬಾಂಬೆಗೆ ಪಯಣ ಬೆಳೆಸಿದೆ. ಅಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್‌ ಬಳಿ ಸಂಗೀತ ಕಲಿಕೆಗೆ ಸೇರಿಕೊಂಡೆ. ಅದು ನನ್ನ ಜೀವನದ ಮಹತ್ವದ ಘಟ್ಟ. ಸಿನಿಮಾಗಳಿಗೆ ಕ್ಲಾರಿನೆಟ್‌ ನುಡಿಸುವ ಬಗೆಯನ್ನು ನಯ್ಯರ್‌ ಕಲಿಸಿದರು’ ಎಂದು ವಿವರಿಸುತ್ತಾರೆ.

ಕನ್ನಡ ಚಿತ್ರರಂಗ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲೂ ನಾಗೇಂದ್ರ ಛಾಪು ಮೂಡಿಸಿದ್ದಾರೆ. ಚಂದನವನದಲ್ಲಿ ಮಧುರಗೀತೆಗಳ ಪರಂಪರೆಗೆ ನಾಂದಿ ಹಾಕಿದ ಎಂ. ರಂಗರಾವ್‌ ಬಳಿಯೂ ಅವರು ಕೆಲಸ ಮಾಡಿದ್ದಾರೆ. ಟಿ.ಜಿ. ಲಿಂಗಪ್ಪ, ರಾಜನ್– ನಾಗೇಂದ್ರ, ಹಂಸಲೇಖ, ಇಳೆಯರಾಜ, ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಸುಬ್ಬಣ್ಣ, ರತ್ನಮಾಲಾ ಪ್ರಕಾಶ್‌ ಹೀಗೆ ನಾಗೇಂದ್ರ ಅವರು ಕೆಲಸ ಮಾಡಿದ ಸಂಗೀತ ದಿಗ್ಗಜರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

‘ಮುತ್ತಣ್ಣ’, ‘ಆಕಸ್ಮಿಕ’, ‘ಯಾರೇ ನೀನು ಚೆಲುವೆ’ ಚಿತ್ರದ ಹಾಡುಗಳಲ್ಲಿ ಅವರ ಕ್ಲಾರಿನೆಟ್‌ನ ಮಾಧುರ್ಯವಿದೆ.ಕನ್ನಡ ಚಿತ್ರರಂಗಕ್ಕಷ್ಟೇ ಅವರ ಸೇವೆ ಸೀಮಿತಗೊಂಡಿಲ್ಲ. ‘ಔರಾ ಬ್ರಿಡ್ಜ್‌’, ‘ಮೇರೆ ಸನಂ’, ‘ಸಿಐಡಿ ನಂ. 1’ ಹಿಂದಿ ಚಿತ್ರದ ಹಾಡುಗಳಿಗೂ ಅವರು ಕೆಲಸ ಮಾಡಿದ್ದಾರೆ.

ಎಂಬತ್ತರ ದಶಕದಲ್ಲಿ ಕ್ಲಾರಿನೆಟ್‌ ಬಳಕೆಗೆ ಬೇಡಿಕೆ ಹೆಚ್ಚಿತ್ತು. ಆ ದಶಕದಲ್ಲಿ ತೆರೆಕಂಡ ಬಹುತೇಕ ಸಿನಿಮಾಗಳಲ್ಲಿ ಈ ಸಂಗೀತ ಪರಿಕರದ ಬಳಕೆಗೆ ಸಂಗೀತ ನಿರ್ದೇಶಕರು ಹೆಚ್ಚು ಒಲವು ತೋರುತ್ತಿದ್ದರು. ಆದರೆ, ಕೀಬೋರ್ಡ್‌ ಬಳಕೆ ಹೆಚ್ಚಿದಂತೆ ಕ್ಲಾರಿನೆಟ್‌ ಬಳಕೆ ಕಡಿಮೆಯಾಗತೊಡಗಿದೆ.

‘ಇತ್ತೀಚೆಗೆ‌ ಸಂಗೀತ ಸಂಯೋಜನೆಗೆ ಕಂಪ್ಯೂಟರ್‌ ಬಳಕೆಗೆ ಹೆಚ್ಚುತ್ತಿದೆ. ಕೀಬೋರ್ಡ್‌ನಿಂದಾಗಿ ಕ್ಲಾರಿನೆಟ್‌ ಬಳಕೆಗೆ ಕಡಿಮೆಯಾಗಿದೆ. ಆದರೆ, ಅದರ ಸತ್ವ ಅರಿತಿರುವ ಸಂಗೀತ ನಿರ್ದೇಶಕರು ಇಂದಿಗೂ ಸಂಗೀತದಲ್ಲಿ ಕ್ಲಾರಿನೆಟ್‌ ಬಳಕೆಗೆ ಒತ್ತು ನೀಡುತ್ತಾರೆ. ಅಂತಹವರು ಕರೆ ಮಾಡಿದಾಗ ಹೋಗಿ ನುಡಿಸುತ್ತೇನೆ’ ಎನ್ನುತ್ತಾರೆ ನಾಗೇಂದ್ರ.

‘ಕ್ಲಾರಿನೆಟ್‌ ನುಡಿಸುವುದು ಕಷ್ಟಕರ. ಇದಕ್ಕೆ ಸತತ ಪರಿಶ್ರಮ ಬೇಕು. ಸಾಕಷ್ಟು ಹುಡುಗರು ಕಲಿಕೆಗೆ ನನ್ನ ಬಳಿಗೆ ಬರುತ್ತಾರೆ. ಅವರಿಗೆ ಕಲಿಸಲು ನನಗೂ ಉತ್ಸಾಹವಿದೆ. ಆದರೆ, ನನ್ನ ವಯಸ್ಸು ಸ್ಪಂದಿಸುತ್ತಿಲ್ಲ. ಆದರೆ, ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತವನ್ನು ಹೇಳಿಕೊಡುತ್ತೇನೆ’ ಎನ್ನುತ್ತಾರೆ ಅವರು.

ಅಮೆರಿಕ, ಸಿಂಗಪುರ, ಮಲೇಷ್ಯಾ, ಹಾಂಗ್‌ಕಾಂಗ್‌ನಲ್ಲಿ ನಡೆದ ಸಂಗೀತ ಕಛೇರಿಗಳಲ್ಲೂ ಭಾಗವಹಿಸಿ ಕ್ಲಾರಿನೆಟ್‌ನ ಗಾನಸುಧೆ ಹರಿಸಿದ್ದಾರೆ. ಕಂಚಿಯ ಆಸ್ಥಾನ ವಿದ್ವಾನ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಹದಿನೈದು ವರ್ಷಕಾಲ ಕರ್ನಾಟಕ ಪೊಲೀಸ್‌ ಬ್ಯಾಂಡ್‌ಗೆ ಸೇವೆ ಸಲ್ಲಿಸಿದ್ದು ಅವರ ಹಿರಿಮೆಗಳಲ್ಲೊಂದು. ಅವರ ಸೇವೆಗೆ ಹಲವು ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT