ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಜನಪದ ಗೀತ ಯಾತ್ರೆ

Published 20 ಜನವರಿ 2024, 23:30 IST
Last Updated 20 ಜನವರಿ 2024, 23:30 IST
ಅಕ್ಷರ ಗಾತ್ರ

‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’–ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ರಾಮಾಯಣದ ಸಾಲು. ವೃತ್ತಿಗಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳಿದವರಲ್ಲಿ ತಾಯ್ನೆಲದ ನೆನಪು ಪದೇ ಪದೇ ಕಾಡುತ್ತಿರುತ್ತದೆ. ಆಹಾರ, ಆಚಾರ–ವಿಚಾರ, ಹಬ್ಬಗಳು ಬಂದಾಗ ಈ ನೆನಪು ಮತ್ತಷ್ಟು ತೀವ್ರವಾಗುತ್ತದೆ.

ಅಂಥ ನೆನಪಿನ ಚುಂಗಿನಲ್ಲಿಯೇ ಬದುಕುತ್ತಿರುವ ಅಮೆರಿಕದ ಕನ್ನಡಿಗರಿಗೆ ಕಳೆದ ವರ್ಷದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಮರೆಯಲಾರದ್ದು. ಅಮೆರಿಕದ ಬೇರೆ ಬೇರೆ ಭಾಗಗಳಲ್ಲಿರುವ ವಿವಿಧ ಕನ್ನಡ ಕೂಟಗಳು ಹಮ್ಮಿಕೊಂಡಿದ್ದ ‘ಸವಿತಕ್ಕ ಜನಪದ ಸಂಭ್ರಮ’ ಕಾರ್ಯಕ್ರಮ ಕನ್ನಡಿಗರಲ್ಲಿ ಕರ್ನಾಟಕದ ನೆನಪನ್ನು ಮತ್ತಷ್ಟು ಹಸಿರಾಗಿಸಿತು. ಬೆಂಗಳೂರಿನ ಜನಪದ ಗಾಯಕಿ ಸವಿತಕ್ಕ (ಸವಿತಾ ಗಣೇಶ್ ಪ್ರಸಾದ್) ತಮ್ಮ ವಿಶಿಷ್ಟ ಕಂಠಸಿರಿಯ ಮೂಲಕ ಜನಪದದ ಕಂಪು ಬೀರುವ ಮೂಲಕ ಅಲ್ಲಿನವರಲ್ಲಿ ತವರೂರ ನೆನಪನ್ನು ಮತ್ತಷ್ಟು ಹಸಿರಾಗಿಸಿದರು.

ಅಮೆರಿಕದ ಶಿಕಾಗೊ, ನ್ಯೂಯಾರ್ಕ್‌, ವರ್ಜೀನಿಯಾ, ಡೆಟ್ರಾಯಿಟ್‌, ಒಹಿಯೊ, ದಕ್ಷಿಣ ಕ್ಯಾಲಿಫೋರ್ನಿಯಾ, ಫಿಲಿಡಲ್ಫಿಯಾ ಹೀಗೆ 7 ರಾಜ್ಯಗಳಲ್ಲಿನ ಕನ್ನಡ ಕೂಟಗಳು ಆಯೋಜಿಸಿದ್ದ 8 ಸಂಗೀತ ಕಾರ್ಯಕ್ರಮಗಳು ಕನ್ನಡಿಗರಲ್ಲಿ ಜನಪದ ಪ್ರೀತಿಯನ್ನು ಸಂಪ್ರೀತಗೊಳಿಸಿದವು. ಅಮೆರಿಕದಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಜನಪದ ಸಂಗೀತ ಕಾರ್ಯಕ್ರಮ ಹಾಗೂ ಮೂರು ಗಾಯನ ಕಾರ್ಯಾಗಾರ ನಡೆಸಿಕೊಟ್ಟದ್ದು ಒಂದು ರೀತಿಯಲ್ಲಿ ದಾಖಲೆ ಎಂಬುದು ಗಾಯಕಿ ಸವಿತಾ ಅವರ ಅಭಿಪ್ರಾಯ. 

ಸವಿತಾ ಅವರ ಕಂಠಸಿರಿಯಲ್ಲಿ ಮೂಡಿಬಂದ ಮಂಟೇಸ್ವಾಮಿ, ಜುಂಜಪ್ಪ ಸ್ವಾಮಿ, ಮಾದೇಶ್ವರ ಸ್ವಾಮಿಯ ಆಯ್ದ ಚರಣಗಳು, ಉಧೋ ಉಧೋ ಎಲ್ಲವ್ವ ಸೇರಿದಂತೆ ಇತರ ಜನಪ್ರಿಯ ಜನಪದ ಗೀತೆಗಳು ಕನ್ನಡಿಗರ ಮನಸೂರೆಗೊಂಡವು. ‘ಚೆಲ್ಲಿದರು ಮಲ್ಲಿಗೆಯಾ’, ‘ಘಲ್ಲು ಘಲ್ಲು ಘಲ್ಲೆನ್ನುತ್ತಾ’, ‘ಶಿವನು ಭಿಕ್ಷೆಗೆ, ‘ಪಂಚಮಿ ಹಬ್ಬ’ ‘ತವರೂರ ಮನೆಯ ನೋಡಬಂದೆ’, ಹೆಣ್ಣಿನ ಜನಮ...’ ಹಾಡುಗಳು ಹೆಣ್ಣುಮಕ್ಕಳಲ್ಲಿ ತವರು ಮನೆಯ ನೆನಪು ಮೂಡಿಸಿದರೆ, ಮೂಡಲ್ ಕುಣಿಗಲ್ ಕೆರೆ, ಜಕ್ಕಣಕ್ಕ ಹಾಡುಗಳು ಯುವಜನರು, ಪುಟಾಣಿಗಳನ್ನು ಹೆಜ್ಜೆ ಹಾಕುವಂತೆ ಮಾಡಿತು. ಒಂದೊಂದು ಜನಪದ ಗೀತೆಯೂ ತಾಯ್ನೆಲದ ಬಗೆಗಿನ ಭಾವತೀವ್ರತೆಯನ್ನು ಹೆಚ್ಚಿಸಿತಲ್ಲದೆ, ಹಿರಿಯರು–ಕಿರಿಯರು ಒಗ್ಗೂಡಿ ಹೆಜ್ಜೆ ಹಾಕುವಂತೆ ಮಾಡಿತು. ಈ ನಿರಂತರ ಸಂಗೀತ ಯಾತ್ರೆಗೆ ಸಾಥ್ ನೀಡಿದವರು ಅಮೆರಿಕದ ಮಿಷಿಗನ್‌ನ ‘ಧ್ವನಿ ಮೀಡಿಯಾ’ದ ಸಂಸ್ಥಾಪಕಿ ಜಯಾ ಗೌಡ.

‘2014ರಲ್ಲಿ ಮೊದಲ ಬಾರಿಗೆ ‘ಅಕ್ಕ’ ಸಮ್ಮೇಳನಕ್ಕೆ ಅಮೆರಿಕಕ್ಕೆ ಹೋಗಿದ್ದೆ. ಅದಾದ ಮೇಲೆ ಮೂರ್ನಾಲ್ಕು ಬಾರಿ ಹೋಗಿದ್ದೇನೆ. ಆದರೆ, ಈ ಬಾರಿಯ ಅನುಭವ ಮರೆಯಲಾರದ್ದು. ಜನಪದ ಗೀತೆಗಳು ನಮಗೆ ಸಾಮಾನ್ಯ ಎನಿಸಬಹುದು. ಆದರೆ, ವಿದೇಶದಲ್ಲಿರುವ ಕನ್ನಡಿಗರಿಗೆ ವಿಶೇಷ ಅನಿಸುತ್ತದೆ. ಈ ಹಾಡುಗಳನ್ನು ಕೇಳಿದಾಗ ಅವರಿಗೆ ಏನೋ ನಿಧಿ ಸಿಕ್ಕ ಸಂಭ್ರಮ’ ಎನ್ನುತ್ತಾರೆ ಸವಿತಕ್ಕ.

ಅಲ್ಲಿನ ಕನ್ನಡಿಗರ ಮನೆಗಳಲ್ಲಿ ಉಳಿದಿದ್ದ ಸವಿತಕ್ಕ, ಜನಪದ ಸಂಗೀತದಲ್ಲಿ ಒಲವುಳ್ಳವರಿಗೆ ಮೂರು ಗಾಯನ ಕಾರ್ಯಾಗಾರಗಳನ್ನೂ ಮಾಡಿದ್ದಾರೆ. ಅವರನ್ನು ವೇದಿಕೆಯಲ್ಲಿ ಹಾಡಿಸಿ, ಸಂಭ್ರಮಿಸಿದ್ದನ್ನು ಸಂತಸದಿಂದ ಹೇಳಿಕೊಳ್ಳುವ ಅವರಿಗೆ ಅಲ್ಲಿನ ಕನ್ನಡಿಗರಷ್ಟೇ ಅಲ್ಲ, ಅಮೆರಿಕನ್ನರಿಗೂ ಜನಪದದ ಬಗೆಗಿರುವ ಒಲವು ವಿಸ್ಮಯ ಮೂಡಿಸಿದೆ.

‘ಒಂದು ಕಾರ್ಯಕ್ರಮಕ್ಕೆ ಹಾಡಲು ಹೋಗಿ, ಏಳು ಕಾರ್ಯಕ್ರಮಗಳಲ್ಲಿ ಹಾಡಿದ್ದು ಜನಪದಕ್ಕಿರುವ ಶಕ್ತಿ. ವೇದಿಕೆಯಲ್ಲಿ ನಾನೊಬ್ಬಳೇ ಇದ್ದು, ಟ್ರ್ಯಾಕ್ ಹೊಂದಿಸಿಕೊಂಡು ಹಾಡುವುದು, ಜನರೊಂದಿಗೆ ಸಂವಹನ ನಡೆಸುತ್ತಲೇ ಹಾಡುವುದು, ನೃತ್ಯ ಮಾಡುವುದು.. ಇವೆಲ್ಲವೂ ಏಕಕಾಲಕ್ಕೆ ನಡೆಸಿದ್ದು ಸವಾಲಿನ ಕೆಲಸವಾಗಿತ್ತು. ಆದರೆ, ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಅನ್ನುವ ಹೆಮ್ಮೆ ಮೂಡಿದೆ. ಮೊದಲ ಬಾರಿಗೆ ಅಮೆರಿಕದಲ್ಲಿ ಹಾಡಲು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರು ನನ್ನನ್ನು ಕರೆದೊಯ್ದಿದ್ದರು. ಆಗ ಅವರು ಹೇಳಿದ್ದ ‘ಜನಪದ ಅಂದರೆ ಸವಿತಕ್ಕ’ ಅನ್ನುವಂತಾಗಬೇಕು ಎನ್ನುವ ಮಾತು ನನಗೆ ಪ್ರೇರಣೆ ಎನ್ನುತ್ತಾರೆ ಅವರು. 

‘ಮತ್ತೆ ಸವಿತಕ್ಕ ಅವರು ಯಾವಾಗ ಬರ್ತಾರೆ ಎಂದು ಇಲ್ಲಿನ ಕನ್ನಡಿಗರು ಫೋನ್ ಮಾಡಿ ಕೇಳುತ್ತಾರೆ. ತಮ್ಮ ಕಂಠಸಿರಿಯ ಮೂಲಕ ಜಾನಪದ ಲೋಕಕ್ಕೆ ಕರೆದೊಯ್ದ ಸವಿತಕ್ಕ ಅವರ ಬಗ್ಗೆ ಮಿಷಿಗನ್‌ನ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಮಿಶಿಗನ್‌ನ ಪಂಪ ಕನ್ನಡ ಕೂಟದ ಅಧ್ಯಕ್ಷ ಪ್ರಶಾಂತ್. 

‘ಸವಿತಕ್ಕ ಅವರು ನಿರೀಕ್ಷೆಗೂ ಮೀರಿ ಚೆನ್ನಾಗಿ ಜನಪದ ಗಾಯನವನ್ನು ಪ್ರಸ್ತುತಪಡಿಸಿದರು. ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲೂ ಅವರು ಜನಪದ ಗೀತೆ ಹಾಡಿದ್ದು ಮೆರಯಲಾಗದ್ದು’ ಎನ್ನುತ್ತಾರೆ ಮಿಷಿಗನ್‌ನ ಧ್ವನಿ ಮೀಡಿಯಾ ಸಂಸ್ಥಾಪಕಿ ಜಯಾಗೌಡ.

ಹಾಡಿನ ಜತೆಗೆ ಹೆಜ್ಜೆಗಳನ್ನೂ ಹಾಕುವ ಸವಿತಾ ಅವರ ವಿಶಿಷ್ಟ ಗಾಯನ ಶೈಲಿ ಕನ್ನಡಿಗರನ್ನಷ್ಟೇ ಅಲ್ಲ, ಅಮೆರಿಕದವರನ್ನೂ ಬೆರಗುಗೊಳಿಸಿದೆ. ಸವಿತಾ ಹಾಡುತ್ತಿದ್ದ ವೇದಿಕೆಯ ಧ್ವನಿ ನಿಯಂತ್ರಣ ನಿರ್ವಹಿಸುತ್ತಿದ್ದ ಅಮೆರಿಕದ ಯುವತಿಯೊಬ್ಬರು ಸವಿತಾ ಅವರ ಹಾಡಿನ ಸಿ.ಡಿ ಬೇಕು ಎಂಬ ಬೇಡಿಕೆಯನ್ನೂ ಮಂಡಿಸಿದ್ದರಂತೆ. ಅಂತೆಯೇ ಮುಂದಿನ ಸೆಪ್ಟೆಂಬರ್, ಅಕ್ಟೋಬರ್ ಹೀಗೆ ಎರಡು ತಿಂಗಳ ಕಾಲ ಸವಿತಕ್ಕ ಅವರನ್ನು ಕರೆಸಲು ಅಮೆರಿಕ ಕನ್ನಡ ಕೂಟಗಳು ಸಿದ್ಧತೆಯನ್ನೂ ನಡೆಸಿವೆ.

ಅಮೆರಿಕದ ಫಿಲಿಡೆಲ್ಫಿಯಾ ಕನ್ನಡ ಕೂಟದಿಂದ ಜನಪದ ಗಾಯಕಿ ಸವಿತಾ ಅವರನ್ನು ಸನ್ಮಾನಿಸಿದ ಕ್ಷಣ
ಅಮೆರಿಕದ ಫಿಲಿಡೆಲ್ಫಿಯಾ ಕನ್ನಡ ಕೂಟದಿಂದ ಜನಪದ ಗಾಯಕಿ ಸವಿತಾ ಅವರನ್ನು ಸನ್ಮಾನಿಸಿದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT