ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರೊನಾ ಸಂಗೀತದ ಮಂದ್ರ ರಾಗ!

Published : 5 ಜೂನ್ 2021, 19:30 IST
ಫಾಲೋ ಮಾಡಿ
Comments

ಹಿಂದಿನ ವರ್ಷ ಮಾರ್ಚ್‌ನಲ್ಲಿ ಕೊರೊನಾದ ಹಾವಳಿ ಆರಂಭವಾದಾಗ ಉಳಿದೆಲ್ಲಾ ಕ್ಷೇತ್ರಗಳಂತೆ ಸಂಗೀತ ಲೋಕವೂ ನಲುಗಿಹೋಗಿತ್ತು. ಲಕ್ಷಗಳಲ್ಲಿ ಆದಾಯ ಗಳಿಸುತ್ತಾ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ ಓಡಾಡಿಕೊಂಡಿದ್ದ ಹಿರಿಯ, ಹೆಸರಾದ ಸಂಗೀತಗಾರರಿಂದ ಹಿಡಿದು, ಆಗಷ್ಟೇ ಬೆಳಕಿಗೆ ಬರುತ್ತಿದ್ದ ಯುವ ಕಲಾವಿದರು, ಸಣ್ಣ ಪುಟ್ಟ ಕಾರ್ಯಕ್ರಮ
ಗಳೊಂದಿಗೆ ಹೊಟ್ಟೆಪಾಡಿಗಾಗಿ ಸಂಗೀತ ತರಗತಿಗಳನ್ನು ನಡೆಸುತ್ತಿದ್ದ ಅನೇಕ ಕಲಾವಿದರು ತೊಂದರೆಯಲ್ಲಿ ಸಿಲುಕಿದರು. ಆದರೆ, ಮುಂದೆ ಕೆಲವೇ ದಿನಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸತೊಡಗಿದವರೂ ಸಂಗೀತದವರೇ ಆಗಿದ್ದರು.

ದಿನ ಬೆಳಗಾಗಿ ಫೇಸ್‍ಬುಕ್ ತೆರೆದರೆ, ಅಲ್ಲಿ ‘ಫೇಸ್‍ಬುಕ್ ಲೈವ್’ ಕಛೇರಿಗಳ ಸಾಲೋ ಸಾಲು. ಹಲವಾರು ಪೇಜ್‍ಗಳಲ್ಲಿ ನಿಗದಿತ ಹೊತ್ತಿಗೆ ಸರಿಯಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಅವರದ್ದೇ ಆದ ಕೇಳುಗರ ವರ್ಗ ಸೃಷ್ಟಿಯಾಗಿತ್ತು ಮತ್ತು ಅವರು ಪ್ರತಿದಿನ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರ ಬಗ್ಗೆ, ರಾಗದ ಬಗ್ಗೆ ಕಮೆಂಟುಗಳ ಮೂಲಕ ಮಾತಾಡಿಕೊಳ್ಳುವುದು ಇವೆಲ್ಲಾ ನಡೆದಿತ್ತು. ಇವುಗಳಲ್ಲಿ ಕೆಲವು ಪೇಜ್‍ಗಳು ಮೊದಲಿನಿಂದಲೂ ಸಂಗೀತ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ನಡೆಸುತ್ತಿದ್ದ ಸಂಸ್ಥೆಗಳಿಗೆ ಸೇರಿದವಾಗಿದ್ದರೆ, ಇನ್ನೂ ಕೆಲವು ಬದಲಾದ ಸಂದರ್ಭದಲ್ಲಿ ಲೈವ್ ಕಾರ್ಯಕ್ರಮಗಳನ್ನು ನಡೆಸಲೆಂದೇ ರೂಪುಗೊಂಡವು.

ಮೊದಲ ಬಾರಿಗೆ ಹಿಂದೂಸ್ತಾನಿ ಕಛೇರಿಗಳನ್ನು ಆರಂಭಿಸಿದ ಪೇಜ್‍ಗಳೆಂದರೆ ಮಹಾರಾಷ್ಟ್ರದ ‘ಹಿಂದೂಸ್ತಾನಿ ಕ್ಲಾಸಿಕಲ್ ಮ್ಯೂಸಿಕ್ ಆ್ಯಂಡ್ ಎವ್ರಿಥಿಂಗ್’ ಹಾಗೂ ‘ಆರ್ಟಿಸ್ಟ್ಸ್ ಯುನೈಟೆಡ್’. ಈ ಎರಡು ಪೇಜ್‍ಗಳು ಪ್ರತಿನಿತ್ಯ ಗಾಯನ, ವಾದನ, ನೃತ್ಯ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಆಯೋಜಿಸಿದವಲ್ಲದೆ, ಭಾಗವಹಿಸಿದ ಯುವ ಕಲಾವಿದರನ್ನು ಗೌರವದಿಂದ ನಡೆಸಿಕೊಂಡಿದ್ದವು. ಮುಂದೆ ಕೆಲವೇ ದಿನಗಳಲ್ಲಿ ಸ್ವರಸಂಪದ, ಇಂದೋರ್‌ನ ತಾಲಸ್ವರಾಂಜಲಿ, ಲಾತೂರಿನ ಶ್ರುತಿನಾದ್, ಉತ್ತರಭಾರತದ ರಾಷ್ಟ್ರೀಯ ಸಂಗೀತಜ್ಞ ಪರಿವಾರ್, ಆರ್ಟ್ ಆ್ಯಂಡ್ ಸೌಲ್ ಫೌಂಡೇಷನ್, ಬ್ಯಾನ್ಯನ್ ಟ್ರೀ, ಕೋಲ್ಕತ್ತದಕೆಲವು ಪೇಜ್‌ಗಳಲ್ಲೆಲ್ಲಾ ಕಾರ್ಯಕ್ರಮಗಳು ನಡೆಯತೊಡಗಿದವು. ಅವುಗಳಲ್ಲಿ ವಿಶೇಷ ಜನಾದರವನ್ನು ಪಡೆದು, ಇನ್ನೂ ಮುಂದುವರಿಯುತ್ತಿರುವುದು ಪಂ.ಜಸರಾಜ್ ಅವರ ಮಗಳು ದುರ್ಗಾ ಜಸರಾಜ್ ನಡೆಸುತ್ತಿರುವ ‘ಉತ್ಸಾಹ್’ ಎಂಬ ಹೆಸರಿನ ಕಾರ್ಯಕ್ರಮ, ಪ್ರತಿಷ್ಠಿತ ‘ಎಚ್‍ಸಿಎಲ್ ಕಛೇರಿಗಳು’, ‘ಫೆಸ್ಟ್ ಎಡಿಷನ್ ಆರ್ಟ್ಸ್‌’ ನಡೆಸುವ ಸಂಗೀತ ಕಛೇರಿಗಳು.

‘ಕೆಡೆನ್ಸ್ ಎಂಟರ್‌ಟೇನ್‌ಮೆಂಟ್‌’ ಹಾಗೂ ಇತರ ಕೆಲವು ಸಂಸ್ಥೆಗಳು ಟಿಕೆಟ್‍ಗಳನ್ನು ಇರಿಸಿ ಇದರ ಮೂಲಕ ಕಲಾವಿದರಿಗೆ ಒಳ್ಳೆಯ ಗೌರವಧನ ನೀಡಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಕರ್ನಾಟಕದ ಆಯೋಜಕರಲ್ಲಿ ಆನ್‍ಲೈನ್ ಕಾರ್ಯಕ್ರಮಗಳನ್ನು ನಡೆಸಿದ್ದು ‘ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್’, ‘ಪರಂಪರಾ ಸಂಗೀತ ಪ್ರತಿಷ್ಠಾನ’, ‘ಗಂಧಾರ ಸಂಗೀತ ಸಭಾ’, ‘ನಟರಾಜ ಸಂಗೀತ ವಿದ್ಯಾಲಯ’, ಬೆಳಗಾವಿಯ ‘ಸ್ವರಮಲ್ಹಾರ್’ ಸಂಸ್ಥೆಗಳು. ಕರ್ನಾಟಕಿ ಸಂಗೀತದಲ್ಲೂ ‘ಮಣಿಕೃಷ್ಣಸ್ವಾಮಿ ಅಕಾಡೆಮಿ’, ‘ಲೈವ್ ಫಾರ್ ಯು’ ಈ ಪೇಜ್‍ಗಳಲ್ಲಿ ಈಗಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳ ಪೈಕಿ ಮರೆಯಲ್ಲುಳಿದ ಪ್ರತಿಭಾವಂತರನ್ನು ಹುಡುಕಿ, ವೇದಿಕೆ ನೀಡಿ ಅವಿರತವಾಗಿ ಕಾರ್ಯಕ್ರಮ ನಡೆಸುತ್ತಾ ಬಂದವರೆಂದರೆ, ಮೈಸೂರಿನ ‘ಗಾಯನ ಸಭಾ’ ನಡೆಸುವ ಹರ್ಷ ಹಾಗೂ ಅಹಮದಾಬಾದ್‌ನಲ್ಲಿ ನೆಲೆಸಿರುವ ವಕೀಲರಾದ ಮಿಹಿರ್ ಟಾಕೋರೆ. ಗಾಯನ ಸಭಾದ ಮೂಲಕ ದೇಶದ ಯಾವ್ಯಾವುದೋ ಮೂಲೆಯಲ್ಲಿನ ಸಂಗೀತ ಹಾಗೂ ನೃತ್ಯ ಕಲಾವಿದರು ತಮ್ಮ ಕೇಳುಗರನ್ನು ಪಡೆದುಕೊಂಡರು.

ಹೊರಗೆ ಕಾಲಿಡಲಾಗದಂಥ ಸನ್ನಿವೇಶ ಬಂದ ಕೂಡಲೇ ಯಾಕೆ ಈ ರೀತಿ ಕಾರ್ಯಕ್ರಮಗಳ ಸಂಖ್ಯೆ ‘ಅತಿ’ ಎನಿಸುವಷ್ಟು ಹೆಚ್ಚಿತು ಎಂಬುದರ ಬಗ್ಗೆ ಯೋಚಿಸಿದಾಗ ಕೆಳಗಿನ ಹಲವು ಅಂಶಗಳು ಗಮನಕ್ಕೆ ಬಂದವು. ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಕಾರ್ಯಕ್ರಮದ ಆಯೋಜಕರು ಹೆಚ್ಚಾಗಿ ಕಲಾವಿದರೇ ಆಗಿದ್ದಾರೆ. ಕರ್ನಾಟಕಿ ಸಂಗೀತದಲ್ಲಿದ್ದಂತೆ ಇಲ್ಲಿ ಸಭಾಗಳು, ಆಯೋಜಕರು ಎಂಬಂಥ ಪ್ರತ್ಯೇಕವಾದ ಗುಂಪು ಇಲ್ಲ. ಆದ್ದರಿಂದ ಸಂಗೀತಗಾರ ಸ್ನೇಹಿತರ ಗುಂಪು ಸರಳವಾಗಿ, ಏನೂ ಶಿಷ್ಟಾಚಾರ (ಪ್ರೋಟೊಕಾಲ್) ಇಲ್ಲದೆ ಸಂಗೀತ ಕಛೇರಿಗಳನ್ನು ಏರ್ಪಡಿಸುವುದು ಸುಲಭ ಸಾಧ್ಯ.

ಹಿಂದಿನ ತಲೆಮಾರಿನ ಸಂಗೀತಗಾರರಂತಲ್ಲದೆ ಇಂದಿನ ಯುವ ಸಂಗೀತಗಾರರು ತಂತ್ರಜ್ಞಾನದ ವಿಷಯದಲ್ಲಿ ಬಹಳ ಮುಂದುವರಿದವರು. ಸಂಗೀತದೊಂದಿಗೆ ಎಂಜಿನಿಯರಿಂಗ್, ವ್ಯವಹಾರ ಕೌಶಲ, ಮ್ಯಾನೇಜ್‍ಮೆಂಟ್ ಮುಂತಾದ ವಿಷಯಗಳಲ್ಲಿ ಪದವಿ ಪಡೆದ, ಚಿಮ್ಮುವ ಉತ್ಸಾಹದ ಯುವಕರಿಗೆ ಬದಲಾದ ಸನ್ನಿವೇಶದಲ್ಲಿ ಹೊಸದನ್ನು ಮಾಡಲು ಹುಮ್ಮಸ್ಸು ಬಂದಿತ್ತು. ಸಮಾನಮನಸ್ಸುಳ್ಳ ಸಹ ಕಲಾವಿದ ಸ್ನೇಹಿತರೊಂದಿಗೆ ಬೆರೆತು ಅನೇಕರು ಸಾಹಸಕ್ಕೆ ಕೈ ಹಾಕಿದರು.

ಸಂಗೀತ ಕ್ಷೇತ್ರದಲ್ಲಿದ್ದ ದೊಡ್ಡ ಕೊರತೆಯೆಂದರೆ, ಅನೇಕರು ಈಗಾಗಲೇ ಗುರುತಿಸಿರುವಂತೆ ಎಳೆಯ, ಬೆಳೆಯುವ, ಯುವ ಸಂಗೀತಗಾರರಿಗೆ ಸಿಗುವ ಅವಕಾಶದ ಕೊರತೆ. ಒಮ್ಮೆ ಹೆಸರಾದ ಕಲಾವಿದರೇ ದೇಶದ ದೊಡ್ಡ ಕಾರ್ಯಕ್ರಮಗಳಲ್ಲಿ ಪ್ರತಿಬಾರಿಯೂ ಕಾಣಿಸಿಕೊಳ್ಳುತ್ತಿರುತ್ತಾರಲ್ಲದೆ ಪ್ರತಿಭಾವಂತ ಎಳೆಯರಿಗೆ ಅವಕಾಶ ದೊರಕುವುದು ತುಂಬಾ ವಿರಳ. ಜೊತೆಗೆ, ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡು ಹೆಸರಾದವರೂ ಬೆರಳೆಣಿಕೆಯಷ್ಟೇ. ಇಲ್ಲಿ ವೇದಿಕೆ ಗಿಟ್ಟಿಸಿಕೊಳ್ಳಲು ಹಲವು ಬಗೆಯ ವಶೀಲಿ, ರಾಜಕೀಯ, ಓಲೈಸುವಿಕೆ ಕೆಲಸ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಇವು ಯಾವುದರ ಅಗತ್ಯವೂ ಇಲ್ಲದೆ ವೇದಿಕೆ ದೊರಕಿದ್ದು ಯುವ ಗಾಯಕರಿಗೆ ಪ್ರೋತ್ಸಾಹದಾಯಕವಾಗಿ ಕಂಡಿತು. ಅಲ್ಲದೆ, ನೃತ್ಯ, ನಾಟಕ, ವಾದನ ಮುಂತಾದ ಕಲೆಗಳಿಗೆ ಹೋಲಿಸಿದಲ್ಲಿ ಹಾಡುವುದು ಹೆಚ್ಚಿನ ಪರಿಕರ, ಪೂರಕ ಅಂಶಗಳನ್ನು ಬಯಸದೇ ಇರುವ ಕಾರಣ ಇದರ ಆನ್‍ಲೈನ್ ಪ್ರಸ್ತುತಿ ಉಳಿದವಕ್ಕಿಂತ ಸುಲಭ.

ಅವಿರತವಾಗಿ 8-10 ತಿಂಗಳುಗಳ ಕಾಲ ನಡೆದ ಆನ್‍ಲೈನ್ ಕಾರ್ಯಕ್ರಮಗಳು, ಬದಲಾವಣೆಯ ಅಲೆಯನ್ನೇ ಉಂಟುಮಾಡಿದವು. ಇವುಗಳಿಂದ ಹಲವಾರು ಅನುಕೂಲಗಳೂ ಆಗಿವೆ. ಬಹು ಮುಖ್ಯವಾಗಿ ಇದರಿಂದ ಹಾಡುವವರು ನೇರವಾಗಿ ದೊಡ್ಡ ಸಂಖ್ಯೆಯ ಶ್ರೋತೃಗಳನ್ನು, ಪೋಷಕರನ್ನು ತಲುಪಲು ಸಾಧ್ಯವಾಯಿತು. ತಮ್ಮ ತಮ್ಮ ಪ್ರತಿಭೆಯನ್ನು ಮುಕ್ತವಾಗಿ ಕೇಳುಗರ ಮುಂದೆ ಇಟ್ಟು, ತೀರ್ಮಾನವನ್ನು ಅವರಿಗೇ ಬಿಡುವುದು ಸಾಧ್ಯವಾಯಿತು. ದೇಶದ ಯಾವ್ಯಾವುದೋ ಮೂಲೆಯಲ್ಲಿರುವ ಆಸಕ್ತರನ್ನು ಇದು ತಲುಪಿತು. ಮಾತ್ರವಲ್ಲ ಹೊರದೇಶದ ಸಂಗೀತಪ್ರೇಮಿಗಳವರೆಗೂ ಇದು ತಲುಪಿತು. ನಾನು ಗಮನಿಸಿದಂತೆ ಕಳೆದ ಒಂದು ವರ್ಷದಲ್ಲಿ ಬೆಳಕಿಗೆ ಬಂದ ಪ್ರತಿಭಾವಂತರಲ್ಲಿ ಕೋಲ್ಕತ್ತದವರದ್ದು ಅಗ್ರಪಾಲು. ಕರ್ನಾಟಕದ ಹಲವರೂ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದೆಡೆಯ ಪೋಷಕರನ್ನು ತಲುಪಿದ್ದಾರೆ.

ಧ್ವನಿವರ್ಧಕಕ್ಕಾಗಿ ದೊಡ್ಡ, ದುಬಾರಿ ಸಭಾಂಗಣಗಳನ್ನು ಬಳಸಿಕೊಳ್ಳಲಾಗದ ಸಂದರ್ಭದಲ್ಲಿ ಅನೇಕರು ಅವಶ್ಯ ಪರಿಕರಗಳಾದ ಮೈಕ್, ಆ್ಯಂಪ್ಲಿಫೈಯರ್, ಮಿಕ್ಸರ್ ಮುಂತಾದವುಗಳನ್ನು ತಮ್ಮ ಮನೆಯಲ್ಲೇ ಜೋಡಿಸಿಕೊಂಡರು. ಇದರಿಂದಾಗಿ ಹಲವರು ತಮ್ಮ ತಂತ್ರಜ್ಞಾನದ ತಿಳಿವಳಿಕೆಯನ್ನು ಬೆಳೆಸಿಕೊಂಡು, ತಮ್ಮ ದನಿಗೆ ಬೇಕಾದಂತೆ ಸೌಂಡ್‌ ಅನ್ನು ಸೆಟ್ಟಿಂಗ್ ಮಾಡಿಕೊಳ್ಳುವ ರೀತಿ, ಲೈವ್ ಹೋಗುವ ರೀತಿ, ಪ್ರೀಮಿಯರ್, ವಿಡಿಯೊ-ಆಡಿಯೊ ಮಿಕ್ಸಿಂಗ್, ವಿಡಿಯೊ ಎಡಿಟಿಂಗ್ ಇವನ್ನೆಲ್ಲಾ ಕಲಿತರು.

ಕೇಳುಗರಿಗಾದ ಅನುಕೂಲವೆಂದರೆ ಕುಳಿತಲ್ಲೇ, ತಮ್ಮ ಮನೆಯ ಟಿವಿ-ಫೋನ್‍ನಲ್ಲೇ ಸಂಗೀತವನ್ನು ಕೇಳಬಹುದಾದದ್ದು. ಬೆಂಗಳೂರು, ದೆಹಲಿ, ಮುಂಬೈಯಂಥ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಕಾರಣದಿಂದ ಎಷ್ಟೋ ಬಾರಿ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಡೆದ ಕಾರ್ಯಕ್ರಮಗಳನ್ನು ಭಾಗವಹಿಸದ ಹೊರತು ಹೊರಗೆ ಕೇಳಲಾಗುವುದಿಲ್ಲ. ಕೊರೊನಾ ಕಾಲದಲ್ಲಿ ಅಂಗೈಯಲ್ಲೇ ಸಂಗೀತ ದೊರಕಿದ್ದು ಮಾತ್ರವಲ್ಲ, ತಮಗಿಷ್ಟವಾದದ್ದನ್ನು ಮತ್ತೆ ಮತ್ತೆ ಕೇಳುವ, ಕೆಲಸ ಮುಗಿಸಿ ವಿರಾಮದಲ್ಲಿ ಕೇಳುವ ಅವಕಾಶಗಳೂ ದೊರಕಿದವು. ಉಡುಪಿಯ ‘ರಂಜನಿ ಮೆಮೋರಿಯಲ್ ಟ್ರಸ್ಟ್’, ಮೈಸೂರಿನಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ‘ಗಾನಭಾರತಿ’ ಇವುಗಳು ಸಂಗೀತದ ಕೆಲಸವನ್ನು ಹಲವು ಬಗೆಯಲ್ಲಿ ಮಾಡಿವೆ. ಅನೇಕರಿಗೆ ಗಡಿಬಿಡಿಯ ಓಡಾಟವನ್ನು ಒಮ್ಮೆ ನಿಲ್ಲಿಸಿ ತಮ್ಮ ಸಂಗೀತವನ್ನು ಅರಿತು, ಸುಧಾರಿಸಿಕೊಳ್ಳಲು ಅನುವಾಗಿದೆ. ನನ್ನ ಗುರುಗಳಾದ ಪಂ.ನಾರಾಯಣ ಪಂಡಿತರು ರಚಿಸಿದ 100 ಬಂದಿಶ್‍ಗಳನ್ನು ಅವರ ಶಿಷ್ಯರು ಸೇರಿ ಯೂಟ್ಯೂಬ್‍ಗೆ ಸೇರಿಸಿದ್ದೇವೆ ಮತ್ತು ಇಂತಹ ಇನ್ನೂ ಅನೇಕ ಕೆಲಸಗಳಾಗಿವೆ.

ಈ ಎಲ್ಲಾ ಪ್ರಯತ್ನಗಳು ಕಲಾವಿದರೊಳಗಿನ ಜೀವರಸವನ್ನು ಬತ್ತದಂತೆ ಇಟ್ಟುಕೊಳ್ಳಲು ನೆರವಾಗಿದ್ದರೂ ಬದುಕಿಗೆ ಬೇಕಾದ ಮೂಲ ದ್ರವ್ಯವಾದ ‘ಆದಾಯ’ ಇಲ್ಲಿ ದೊಡ್ಡ ಪ್ರಶ್ನೆಯೇ ಆಗಿದೆ. ಹೆಚ್ಚಿನ ಫೇಸ್‍ಬುಕ್ ಲೈವ್ ಕಾರ್ಯಕ್ರಮಗಳಲ್ಲಿ ಆದಾಯವಿರುವುದಿಲ್ಲ. ಇದ್ದರೂ ಅದು ಸಣ್ಣ ಮೊತ್ತ. ಆದರೆ ‘ಚಾಲ್ತಿ’ಯಲ್ಲಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯವೆಂಬ ಅಂಶ ಅಂದಿಗೆ ಕಲಾವಿದರೆಲ್ಲರಿಗೆ ಮುಖ್ಯವಾಗಿತ್ತು ಎಂದೆನಿಸುತ್ತದೆ. ಹಾಗಾಗಿ ‘ಗುಣಮಟ್ಟ’ದ ಕೊರತೆಯೂ ಇಲ್ಲಿ ಕಾಣಿಸಿಕೊಂಡಿತ್ತು. ಕಣ್ಣಮುಂದೆ ಸಹೃದಯಿ ಕೇಳುಗರು ಇಲ್ಲದೆ ಗೋಡೆ ನೋಡುತ್ತಾ ಹಾಡುವುದು ಅನೇಕ ಬಾರಿ ಅಸಹನೀಯವೆನಿಸುತ್ತದೆ. ಬೇಕಾದಂತೆ ಪಕ್ಕವಾದ್ಯದವರು ದೊರಕುವುದಿಲ್ಲ. ಆದಾಯವಿಲ್ಲದೆ, ಅವಕಾಶವಿಲ್ಲದೆ ಕಷ್ಟಪಟ್ಟವರಲ್ಲಿ ಪಕ್ಕವಾದ್ಯದ ಕಲಾವಿದರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಒಂದು ವರ್ಷದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಅನೇಕ ಸಾವು-ನೋವುಗಳನ್ನು ನೋಡಿದ್ದಾಗಿದೆ. ಸಾಧಕರನ್ನು, ಆಪ್ತರನ್ನು, ಮಾದರಿಯಾಗಿದ್ದವರನ್ನು ಕಳೆದುಕೊಂಡಿದ್ದೇವೆ. ಫೇಸ್‍ಬುಕ್ ತೆರೆದರೆ ಹಿಂದಿನ ವರ್ಷದ ಲವಲವಿಕೆ ಇಲ್ಲ, ಯಾರಿಗೆ ಯಾರೂ ‘ಚಾಲೆಂಜ್’ ಕೊಟ್ಟುಕೊಳ್ಳುತ್ತಿಲ್ಲ, ಸಂಗೀತದ ವಿಡಿಯೊಗಳಿಲ್ಲ, ಯಾಕೋ ಬೇರೆ ಎಲ್ಲಾ ಬಗೆಯ ಸಂವೇದನೆಗಳು ಜಡವಾಗಿ, ನಮ್ಮವರ-ಸುತ್ತ ಮುತ್ತಲಿರುವವರ ಜೀವ ಮಿಡಿಯುವ ಸದ್ದು ಮಾತ್ರ ಕೇಳುತ್ತಿರಲಿ ಎಂದೆನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT