ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಪ್ರಭಾ ಅತ್ರೆ– ಸ್ವರವನ್ನು ಮುತ್ತಾಗಿಸಿದ ಮೇರು ಕಲಾವಿದೆ

Published 13 ಜನವರಿ 2024, 19:54 IST
Last Updated 13 ಜನವರಿ 2024, 19:54 IST
ಅಕ್ಷರ ಗಾತ್ರ

ಮನದ ಚಿಪ್ಪಿನೊಳಗೆ

ಧ್ಯಾನಸ್ಥ ಸ್ವರವೊಂದು

ಕರೆಯುತಿದೆ ಆತ್ಮವನು,

ಸಾಗಬೇಕಿದೆ, ಸಾಗಬೇಕಿದೆ,

ಆ ಸ್ವರವನು ಮುತ್ತಾಗಿಸುವ ತನಕ

ನಿರಂತರ ಸಾಗುತ್ತಲೇ ಇರಬೇಕಿದೆ.

(ಡಾ. ಪ್ರಭಾ ಅತ್ರೆ, ‘ಅಂತಃಸ್ವರ’ ಮರಾಠಿ ಕವನಸಂಕಲನ)

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಕಿ, ಪದ್ಮಭೂಷಣ, ಸ್ವರಯೋಗಿನಿ ಡಾ. ಪ್ರಭಾ ಅತ್ರೆ ತಮ್ಮೊಳಗಿನ ʼಸ್ವರʼವನ್ನು ಮುತ್ತಾಗಿಸುವವರೆಗೂ ʼರಿಯಾಜ್‌ʼನಲ್ಲಿ ಸಾಗುತ್ತಲೇ ಇದ್ದವರು… ಇದೀಗ ಅದಾವುದೋ ಅಗೋಚರ ಗಂಧರ್ವಲೋಕದ ಸ್ವರಗಳು ಆತ್ಮವನು ಕರೆದಂತೆ ನಸುಕಿನ ನಿದ್ದೆಗಣ್ಣಿನಲ್ಲಿಯೇ ಸಾಗಿಬಿಟ್ಟಿದ್ದಾರೆ. ಕಳೆದ ಸೆಪ್ಟೆಂಬರ್‌ 13ಕ್ಕೆ 91 ವಸಂತಗಳನ್ನು ಪೂರೈಸಿ, 92ರ ಹೊಸ್ತಿಲಿಗೆ ಕಾಲಿಟ್ಟಿದ್ದ ಡಾ. ಪ್ರಭಾ ಅವರ ವ್ಯಕ್ತಿತ್ವವನ್ನು ಒಂದೆರಡು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ. ಕಿರಾಣಾ ಘರಾಣೆಯ ಶ್ರೇಷ್ಠ, ಹಿರಿಯ ಗಾಯಕಿಯಾಗಿ ಮಾತ್ರವಲ್ಲ, ವಾಗ್ಗೇಯಕಾರ್ತಿ, ಲೇಖಕಿ, ಚಿಂತಕಿ, ಸಂಶೋಧಕಿ, ಶಿಕ್ಷಣತಜ್ಞೆಯಾಗಿಯೂ ಡಾ. ಪ್ರಭಾ ಸಂಗೀತಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದವರು.

ಸಂಗೀತಗಾರರ ಮನೆತನದಿಂದ ಬಂದವರು ಅವರಲ್ಲ. ಅವರ ತಂದೆ, ತಾಯಿ ಇಬ್ಬರೂ ಶಿಕ್ಷಕರಾಗಿದ್ದವರು. ಕಿರಾಣೆ ಘರಾಣೆಯ ಸುರೇಶ್‌ಬಾಬು ಮಾನೆಯವರಲ್ಲಿ ಆರು ವರ್ಷ ಕಲಿತಿದ್ದು ಮುಂದಿನ ಇಡೀ ಸಂಗೀತಪಯಣಕ್ಕೆ ಭದ್ರ ಬುನಾದಿಯಾಯಿತು. ವಿಜ್ಞಾನ ಮತ್ತು ಕಾನೂನು ಪದವೀಧರೆಯಾಗಿದ್ದ ಪ್ರಭಾ ಅವರಿಗೆ ಆ ಎರಡೂ ಕ್ಷೇತ್ರದಲ್ಲಿ ಮುಂದುವರೆಯುವುದು ತನ್ನಿಂದಾಗದು ಎನ್ನಿಸಿತ್ತು. ಆಗ ಕೈಬೀಸಿ ಕರೆದಿದ್ದು ರಾಂಚಿ ಆಕಾಶವಾಣಿ. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದು ಅವರಿಗೆ ಧ್ವನಿಯ ನಾದಗುಣ ನಿರ್ಮಿತಿಯಲ್ಲಿ ಧ್ವನಿಶಾಸ್ತ್ರ, ಮಾಧ್ಯಮ ಹಾಗೂ ಸಂಸ್ಕರಣದ ಮಹತ್ವವನ್ನು ಕಂಡುಕೊಳ್ಳಲು ಸಾಧ್ಯವಾಯಿತು.

ಪ್ರಭಾ ಅವರಿಗೆ ಸಂಗೀತದ ಶೈಕ್ಷಣಿಕ ಅಧ್ಯಯನದಲ್ಲಿ ಗಂಭೀರವಾದ ಆಸಕ್ತಿ ಇದ್ದಿದ್ದರಿಂದ 1979ರಿಂದ 1992ರವರೆಗೆ ಎಸ್.ಎನ್.ಡಿ.ಟಿ. ಮಹಿಳಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೊಫೆಸರ್ ಆದರು. ಪುಣೆಯಲ್ಲಿ ಅವರು ಆರಂಭಿಸಿದ ‘ಸ್ವರಮಯೀ ಗುರುಕುಲ’ವು ಅಕೆಡೆಮಿಕ್ ಸಂಸ್ಥೆಗಳು ಹಾಗೂ ಸಾಂಪ್ರದಾಯಿಕ ಗುರು-ಶಿಷ್ಯ ಪರಂಪರೆಯ ನಡುವಣ ಸೇತುವೆಯಂತೆ ಇದೆ. ತಮ್ಮ ಕಛೇರಿಗಳು ಹಾಗೂ ಶಿಷ್ಯರಿಗೆ ಬೋಧನೆ, ಎರಡನ್ನೂ ಸಮನಾಗಿ ತೂಗಿಸಿಕೊಂಡು ಕೌಶಲ ಮೆರೆದವರು ಅವರು. ಸಂಗೀತದ ಕುರಿತು ಇಂಗ್ಲಿಷ್‌, ಹಿಂದಿ, ಮರಾಠಿಯಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ನೂರಾರು ಬಂದಿಶ್‌ಗಳನ್ನು ರಚಿಸಿರುವ ಪ್ರಭಾ ಅವರು ತಾವೇ ರಾಗ ಸಂಯೋಜಿಸಿ, ತಮ್ಮ ಕಛೇರಿಗಳಲ್ಲಿ ಪ್ರಸ್ತುತಪಡಿಸುತ್ತಿದ್ದರು. ಅವರ ಸಾಂಗೀತಿಕ ಶೈಲಿಯ ಎದ್ದು ಕಾಣುವ ವೈಶಿಷ್ಟ್ಯ ಎಂದರೆ ಖಯಾಲ್‌ ಗಾಯನದಲ್ಲಿ ಸರಗಮ್‌ ಬಳಕೆ. ಇದಕ್ಕಾಗಿ ಬಹಳಷ್ಟು ಟೀಕೆಯನ್ನೂ ಅವರು ಎದುರಿಸಬೇಕಾಗಿ ಬಂದಿತು. ‌

‘ತನ್ನ ಘರಾಣೆಯನ್ನು ಇನ್ನಷ್ಟು ಸಮೃದ್ಧಗೊಳಿಸಿ, ಸಶಕ್ತಗೊಳಿಸಿ, ಅದನ್ನು ಮುನ್ನಡೆಸುವುದು ಪ್ರತಿ ಕಲಾವಿದರ ಜವಾಬ್ದಾರಿ. ನಾನು ಅದೇ ಕೆಲಸವನ್ನು ಮಾಡಿರುವೆ. ಘರಾಣೆ ಎಂದರೆ ಫೋಟೊ ಕಾಪಿ ಅಲ್ಲ, ಅದನ್ನು ಜೀವಂತವಾಗಿಡುವುದಕ್ಕೆ ಏನಾದರೂ ಹೊಸತನ್ನು ನೀಡಬೇಕಾಗುತ್ತದೆ. ಕಿರಾನೆ ಘರಾಣೆಯ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಒಂದು ತಾರ್ಕಿಕ, ವೈಜ್ಞಾನಿಕ ದೃಷ್ಟಿಕೋನದಿಂದ ಈ ಘರಾಣೆಯನ್ನು ನೋಡಿರುವೆ. ಹೀಗಾಗಿ ನನ್ನ ಗಾಯನ ಮುಖ್ಯದಾರಿಯಿಂದ ಆಚೆಈಚೆ ಸರಿದಂತೆ ಅನ್ನಿಸುತ್ತೆ” ಎಂದು ತಮ್ಮನ್ನು ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದರು.

2022ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಲೇಖನಕ್ಕೆಂದು ಅವರನ್ನು ನಾನು ಮಾತನಾಡಿಸಿದ್ದೆ. ಅಷ್ಟು ಹಿರಿಯ ಸಂಗೀತಗಾರ್ತಿಯಾದರೂ ಯಾವುದೇ ಹಮ್ಮುಬಿಮ್ಮು ಇಲ್ಲದೇ, ತುಂಬು ಅಕ್ಕರೆಯಿಂದ, ಹಲವಾರು ವಿಷಯಗಳನ್ನು ಸರಳವಾಗಿ ವಿವರಿಸಿದ್ದರು.

ಪ್ರಭಾ ಅವರು ಬದುಕಿನ ಕೊನೆಯ ಕ್ಷಣದವರೆಗೂ ಪ್ರತಿಬೆಳಗನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದವರು. ಬೆಳಗಿನ ಚಹಾವನ್ನು ತಾವೇ ಸಿದ್ಧಮಾಡಿಕೊಂಡು ಕುಡಿಯುವುದರಿಂದ ಹಿಡಿದು, ರಾತ್ರಿ ಊಟದ ನಂತರ, ಮಿಕ್ಕಿದ್ದನ್ನು ಎತ್ತಿಡುವವರೆಗೆ ಅವರ ಎಲ್ಲ ಕೆಲಸಗಳಲ್ಲಿ ಒಂದು ಅಚ್ಚುಕಟ್ಟು, ಸೊಬಗು ಮೇಳೈಸಿತ್ತು. ‘ಉಸ್ಸಪ್ಪ’ ಎಂಬುದಾಗಲೀ, ‘ಅಯ್ಯೋ ಸಾಕಾಯಿತು’ ಎಂಬ ಪದವಾಗಲೀ ಎಂದೂ ಅವರ ತುಟಿಗಳಿಂದ ಹೊರಬೀಳಲಿಲ್ಲ. ಉಸಿರಿನ ಕೊನೆಯವರೆಗೂ ಕೊರಳಿಂದ ಹೊರಹೊಮ್ಮಿದ್ದು ಸಪ್ತಸ್ವರಗಳು. ತೊಂಬತ್ತೊಂದು ವರ್ಷ, ನಾಲ್ಕು ತಿಂಗಳ ಸ್ವಸ್ಥವಾದ, ತುಂಬು ಜೀವನ ನಡೆಸಿದ ಪ್ರಭಾ ಅವರು ಪ್ರಶಾಂತ ನಿದ್ದೆಯಲ್ಲಿಯೇ ಸ್ವರಪಯಣವನ್ನು ಮುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT