ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂ.ಜಸ್‌ರಾಜ್ ನುಡಿ ನಮನ: ನಾದಬ್ರಹ್ಮನ ಸೇರಿದ ಗಂಧರ್ವ ಶಾರೀರ

Last Updated 17 ಆಗಸ್ಟ್ 2020, 15:32 IST
ಅಕ್ಷರ ಗಾತ್ರ
ADVERTISEMENT
""

ಮೆವಾಟಿ ಘರಾನಾ, ತಾನ್‌ಸೇನ್‌ ಅವರ ಘರಾನಾ ಶೈಲಿಯದ್ದು. ರಾಗ ದೀಪಕ್‌ ಹಾಡಿದರೆ ಜ್ಯೋತಿ ಬೆಳಗಬೇಕು. ಮೇಘಮಲ್ಹಾರ ಹಾಡಿದರೆ ಹನಿಯುದುರಬೇಕು. ಈ ಘರಾನಾದಿಂದ ಶಾರೀರವೊಂದು ಸುರಲೋಕ ಸೇರಿತು.

ರಾಗವೆಂಬುದು ಕೇವಲ ಶಾರೀರಕ್ಕೆ ಸಂಬಂಧಿಸಿದ್ದಲ್ಲ. ಅದು ಪೂರ್ಣ ಬ್ರಹ್ಮಾಂಡಕ್ಕೆ ಸಂಬಂಧಿಸಿದ್ದು. ಶಾರೀರ ನಾದಬ್ರಹ್ಮನನ್ನು ತಲುಪಿದರೆ, ಬ್ರಹ್ಮ ರಾಗವನ್ನು ಅನುಸರಿಸಿ ಸೃಷ್ಟಿಸುತ್ತಾನೆ ಅಂತ ಪಂಡಿತ್ ಜಸ್‌ರಾಜ್‌ ಹೇಳುತ್ತಿದ್ದರು. ಹೀಗೆ ಬ್ರಹ್ಮಾಂಡ ಮತ್ತು ನಾದವನ್ನು ಏಕ್ತಾರಿಗೆ ತಂದುದರಿಂದಲೇಮಂಗಳ ಮತ್ತು ಗುರು ಗ್ರಹಗಳ ನಡುವಿನ ಗ್ರಹಕ್ಕೆ ಪಂಡಿತ್‌ ಜಸ್‌ರಾಜ್‌ ಅವರ ಹೆಸರನ್ನು ಇರಿಸಿಲಾಗಿದೆ.

ಹೆಗಲು ಮುಟ್ಟುವ ಕೇಶರಾಶಿ ಜಸ್‌ರಾಜ್‌ ಅವರ ಶೈಲಿ ಆಗಿರಲಿಲ್ಲ. ಅದು ಅವರ ಹಟವಾಗಿತ್ತು. 1945ರವರೆಗೂ ತಬಲಾವಾದಕರಾಗಿದ್ದರು. ಲಾಹೋರಿಗೆ 1945ರಲ್ಲಿ ಬನ್ಸಿಲಾಲ್‌ ಅವರ ಸರಸ್ವತಿ ವಿದ್ಯಾಲಯಕ್ಕೆ ಹೋಗಿದ್ದರು. ಅಲ್ಲಿ ಗಾನಗಂಧರ್ವರು ತಬಲಾ ಮೇಲಿನ ಇವರ ಕೈಚಳಕವನ್ನು ಗಮನಿಸಿದವರೇ ತಮ್ಮೊಂದಿಗೆ ಕರೆದೊಯ್ಯುವುದಾಗಿ ಜಸ್‌ರಾಜ್‌ ಅವರ ಸಹೋದರರ ಅನುಮತಿ ಕೇಳಿದರು. ಜಸ್‌ರಾಜ್‌ ಸವಾರಿ ಅವರೊಂದಿಗೆ ಹೊರಟಿತು.

ಗಾನಗಂಧರ್ವರು ರಾಗ್‌ ಭೀಮ್‌ಪಲಾಶ್‌ನಲ್ಲಿ ದೈವತ್‌ ಜೊತೆಗೆ ಪ್ರಸ್ತುತ ಪಡಿಸಿದರು. ಇದು ಅತ್ಯಪರೂಪ. ಹೀಗಾಗಿ ತಬಲಾ ಸಾಥ್‌ ನೀಡಲು ಆಗಲಿಲ್ಲ. ಅದಾದ ನಂತರ ಮೂರನೆಯ ದಿನ ಮಥುರಾದಲ್ಲಿ 'ನಂದ ಉತ್ಸವ' ಇತ್ತು. ಅಲ್ಲಿ ಗಾಯಕರೊಂದಿಗೆ ಕೂರುವಾಗ... ‘ತಬಲಾವಾಲಾಗೆ ಗಾಯಕರೊಂದಿಗೆ ಕೂರುವಷ್ಟು ಧೈರ್ಯವೆ? ಎಂದು ಹೀಗಳೆದರು. ಆ ಅವಮಾನ, ತಡೆಯಲಾಗಲಿಲ್ಲ. ಮೂರು ದಿನಗಳಿಂದ ಮಡುಗಟ್ಟಿದ ಎಲ್ಲ ಭಾವತೆರೆಗಳೂ ಹೃದಯದಲೆಗೆ ಅಬ್ಬರಿಸಿ, ಕಂಗಳಲ್ಲಿ ನೀರು ತಂದಿತ್ತವು. ಪೆಂಡಾಲ್‌ನಿಂದ ಆಚೆ ಹೋಗಿ. ತಬಲಾ ನುಡಿಸುವುದಿಲ್ಲವೆಂದು ಪ್ರಮಾಣ ಮಾಡಿದರು. ಹಾಗೆ ರಾಗಯಾನ ಆರಂಭವಾಯಿತು. ಹಾಡುಗಾರಿಕೆಯಲ್ಲಿ ಅಸ್ಮಿತೆಯನ್ನು ಸ್ಥಾಪಿಸುವವರೆಗೂ ಕೇಶರಾಶಿಗೆ ಕತ್ತರಿ ಹಾಕುವುದಿಲ್ಲವೆಂದು ಪ್ರಮಾಣ ಮಾಡಿದರು.

ಮತ್ತೆ ಕ್ಷೌರಿಕನ ಬಳಿ ತಲೆತಗ್ಗಿಸಲು ಸಪ್ತಸ್ವರಗಳಿದ್ದಂತೆಯೇ ಏಳು ವರ್ಷಗಳು ಬೇಕಾದವು. 1952ರಲ್ಲಿ ಗಾಯಕನಾಗಿ ಆಕಾಶವಾಣಿಯಲ್ಲಿ ಹಾಡು ಪ್ರಸ್ತುತ ಪಡಿಸಿದ ನಂತರವೇ ಕೇಶ ವಿನ್ಯಾಸಗೊಳಿಸಿದ್ದು.

ಬದುಕಿನಲ್ಲಿ ಅತಿ ಸಂತಸ ತಂದ ಕ್ಷಣವೆಂದರೆ ದುರ್ಗಾ ಜನನ. ಆ ಕಾಲದಲ್ಲಿ ಈ ಹೆಸರು ಇಟ್ಟಿದ್ದಕ್ಕೆ ಹುಬ್ಬೇರಿಸಿದ್ದರಂತೆ.
ದುರ್ಗೆ ಶಕ್ತಿಯ ಪ್ರತೀಕ. ಒಳಿತಿನ ಮೇಲಿನ ಜಯ ಅವಳಾದರೆ ಅದೇ ಶಕ್ತಿ ಮಗಳಿಗಿರಲಿ ಎಂದವರು ಹೇಳಿದ್ದರು. ಮಗ ಶಾರಂಗ್‌ ದೇವ್‌, ಪತ್ನಿ ಮಧುರಿಮಾ ಪಂಡಿತ್‌ ಅವರನ್ನು ಜಸ್‌ರಾಜ್‌ ತಮ್ಮ 90ನೇ ವಯಸ್ಸಿನಲ್ಲಿ ವಿದಾಯ ಹೇಳಿದರು.

ಪಂಡಿತ್‌ ಮೋತಿರಾಮ್‌ ಅವರ ಮಗನಾಗಿ ಹರ್ಯಾಣದ ಹಿಸ್ಸಾರ್‌ ಜಿಲ್ಲೆಯಲ್ಲಿ 1930ರ ಜ.28ರಂದು ಜನನ. ಅಪ್ಪ ತೀರಿಹೋದಾಗ ಜಸ್‌ರಾಜ್‌ ಹದಿಹರೆಯಕ್ಕೆ ಕಾಲಿಟ್ಟಿದ್ದರು. ಇಡಿಯ ಕುಟುಂಬದ ಜವಾಬ್ದಾರಿ ಅಣ್ಣ ಪಂಡಿತ್‌ ಮಣಿರಾಮ್‌ ಹೆಗಲಿಗಿತ್ತು. ಅವರಿಗೆ ಜೋಡಿಯಾಗಿದ್ದು ಎಳೆಕೈಗಳು ತಬಲಾ ಸಾಥ್‌ ನೀಡಲು ಹೊರಟವು.

ಲಾಹೋರ್‌ನ ಘಟನೆಯ ನಂತರ ಜಸ್‌ರಾಜ್‌ ಯಾವತ್ತೂ ಆ ಮಾತನ್ನು ನೆನಪಿಸಿಕೊಳ್ಳುತ್ತಿದ್ದುದೇ ಎಡವದೇ ಮಾರ್ಗ ಬದಲಾಗುವುದಿಲ್ಲ ಎಂದು. ಅವಮಾನಗಳಿಂದ ಕುಗ್ಗಬಾರದು. ಅವಮಾನವು ನಮ್ಮನ್ನು ಒಳಿತಿನೆಡೆಗೆ ಪರಿವರ್ತಿಸಬೇಕು ಅನ್ನುತ್ತಿದ್ದರು.

ಸಿನಿಲೋಕದಲ್ಲಿ ಲಘುಶಾಸ್ತ್ರೀಯ ಸಂಗೀತವನ್ನು ಅಳವಡಿಸಿದ ಹೆಗ್ಗಳಿಕೆಯೂ ಇವರದ್ದು. ಸಿನಿಮಾ ನಿರ್ಮಾಪಕ ವಿ.ಶಾಂತಾರಾಮ್‌ ಅವರ ಮಗಳು ಮಧುರಿಮಾ ಶಾಂತಾರಾಮ್‌ ಇವರ ಪತ್ನಿ.

ಕೃಷ್ಣಾಷ್ಟಮಿಯ ಸಂದರ್ಭದ ನಂದ ಉತ್ಸವದ ನಂತರ ಬದುಕು ಬದಲಾಗಿದ್ದಕ್ಕೆ ಕೃಷ್ಣ ಅವರ ಆರಾಧ್ಯ ದೈವವೇ ಆಗಿದ್ದರು. ಸಂಗೀತ ಮತ್ತು ದೈವಿಕ ಶಕ್ತಿಯ ಬಗ್ಗೆ ಮಾತನಾಡುವುದು ಅವರಿಷ್ಟದ ವಿಷಯವಾಗಿತ್ತು. ಕೃಷ್ಣಾಷ್ಟಮಿಯ ನಂತರದ ಏಕಾದಶಿಯಂದು ಅವರು ದೈವಾಧೀನರಾದರು. ‘ಬಾಪೂಜಿ ನೋ ಮೋರ್‌’ ಅಂತ್ಹೇಳಿದ ದುರ್ಗಾ ಕಂಠದ ನರ ಸೀಳಿಬರುವಂತಾಗಿತ್ತು. ಆದರೆ ಅವರಿಷ್ಟದ ಕೃಷ್ಣ ಕೈ ಬೆರಳು ಹಿಡಿದು ಕರೆದೊಯ್ದಿರಬೇಕು ಎಂದು ಸಮಾಧಾನಿಸಿಕೊಂಡ ಧ್ವನಿಯಲ್ಲಿ ದುರ್ಗಾ ಹೇಳಿದರು.

ಕೃಷ್ಣನ ಕೊರಳಿಗೆ ಜಸ್‌ರಾಜ್‌ ಅವರ ಕಂಠ ಬೇಕಿತ್ತೇನೊ.. ವಿದಾಯ ಹೇಳಿದರವರು. ಮಂದ್ರದಲ್ಲಿ ಅವರ ಧ್ವನಿ ಅನುರಣಿಸುತ್ತಲೇ ಇರುತ್ತದೆ.ಕೃಷ್ಣನ ಓಂ ನಮೋ ವಾಸುದೇವಾಯ ಭಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT