ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಬೆಟ್ಟ ಹತ್ತುವುದೆಂದರೆ...

Last Updated 27 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಟ್ಟ ಹತ್ತುವುದೆಂದರೆ
ಸಾಲದು ಕಾಲುಗಳೆರಡಿದ್ದರೆ
ನಿಲುವಿರಬೇಕು ಅಚಲವಾದದ್ದೊಂದು
ಒಂದು ದಪ್ಪಚರ್ಮದ ಪಾದರಕ್ಷೆ
ಬೀಳದಿರಲು ಚುಚ್ಚೋ ಮುಳ್ಳುಗಳ
ಬಲೆಯೊಳಗೆ ಹಾದಿಗುಂಟ
ಕಂಬಳಿಯಂತ ಅಂಗಿಯೇ
ದಟ್ಟ ಜೇನುನೊಣಗಳ ರಕ್ಷೆ
ಮುಖಗವಸು ಜೇಡರಬಲೆಗೆ
ಕಡಿದ ದಟ್ಟಾರಣ್ಯದೊಳಗೆ
ಬೆಳಕಿನ ಅಸ್ತ್ರದ ಕೈ
ತಿಮಿರದ ಕಾಡಿಗೆ ದಾರಿ
ಪಾಚಿಗಟ್ಟಿದ ಹಾಸುಗಲ್ಲು
ಎಚ್ಚರದ ಪಾದದ ಅರಿವು
ಜೀಂವ್ ಗುಡುವ ಜೀರುಂಡೆಗಳು
ಕಾನಸನಿಹ ಪಿಸುರುವ ಕುಂಬಾರಹುಳು
ಬಡಿಗೆಯೊಂದು ಬೇಕೇ ಬೇಕು
ಬೆನ್ನಟ್ಟಲು ವಿಕೃತಕ್ರಿಮಿಗಳ
ಎತ್ತರದ ಬೆಟ್ಟಕ್ಕೆ ಊರುಗೋಲು

ಬೆಟ್ಟ ಹತ್ತುವುದೆಂದರೆ
ಒಂಟಿ ಪಯಣದ ಗುರಿಯಲ್ಲ
ಕಾಡ ಹಾದಿಯ ಮೌನ ಕಡಿದು
ಜೋಡಿ ಪಯಣ ಮಾತಿನ ಜೊತೆಗಾರನೊಂದಿಗೆ
ಹಾರೈಸಿ ಬೀಳ್ಕೊಡುವವರು
ಒಣರೊಟ್ಟಿ ಬುತ್ತಿಗಂಟಿನ ಹೊರೆ ಹೊಟ್ಟೆಗೆ
ಒಗಟು ಬಿಡಿಸುವ ಮಾರ್ಗದರ್ಶಿ
ಸುಳಿಯ ರಹಸ್ಯಗಳ
ಕಕ್ಕುಲಾತಿಯ ಹೂರಣ
ಬೆನ್ನುತಟ್ಟುವ ಬೆಂಗಾವಲುಗಳು
ಬೆಂಬಲಿಗರು ಪಯಣಕ್ಕೆ
ಬರೆಯಬೇಕು ಭವ್ಯ ಮುನ್ನುಡಿ

ಹುಲಿ ಕರಡಿ ಸಿಂಹಗಳು
ಬೆನ್ನಟ್ಟುವ ಚಿರತೆಗಳು
ತಮಾಷೆಯ ಮಾತಲ್ಲ
ಹಲ್ಲು ಕಿಸಿವ ಚೇಷ್ಟೆಯ ವಾನರ
ಗುಟುರುಹಾಕಿ ಗೂಗುಡುವ ಗೂಬೆ
ಬಾಣದೇಟು ಚುಚ್ಚುವ ಮುಳ್ಳುಹಕ್ಕಿ
ಕಗ್ಗತ್ತಲ ದಾರಿಯ ಕಂದಕಗಳು
ಹೊಂಡದ ಹಾದಿಯ ಕಾಡು
ರಕ್ತಕಾರಿ ಅಪ್ಪಚ್ಚಿ ಹೆಬ್ಬೆರಳು
ಡಿಕ್ಕಿಹೊಡೆದು ಒಣಗಿದ ಗಿಡದ ಮೊಂಡಿಗೆ

ಬೆಟ್ಟ ಹತ್ತುವುದೆಂದರೆ
ಬಲವಿರಬೇಕು ಬೆಟ್ಟದಾನೆಯಷ್ಟು
ಗಟ್ಟಿಯಿರಬೇಕು
ಕೈ ಕಾಲು ಎದೆಗುಂಡಿಗೆ
ವಿಜಯಗೀತೆ ಮೊಳಗಲು
ಬೆಟ್ಟದ ತುದಿಯಲ್ಲಿ ನಿಂತು
ಗಟ್ಟಿ ಕೊರಳಿರಬೇಕು

ಬೆಟ್ಟ ಗಟ್ಟಿಗರಿಗೆ
ಪುಕ್ಕಲರಿಗಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT