ಹೀಗೇ ಒಂದು ದಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ಹಣ್ಣು ಜೀವ ಒಳಕ್ಕೆ ಪ್ರವೇಶಿಸಿತು. ನಾನು ಆ ಹಿರಿಜೀವವನ್ನು ಮೊದಲು ಚೇರಿನ ಮೇಲೆ ಕುಳಿತುಕೊಳುವಂತೆ ಹೇಳಿದೆ. ಅದು ನಯವಾಗಿ ತಿರಸ್ಕರಿಸಿ ನಿಂತೇ ಇತ್ತು. ಮತ್ತೂ ಹೇಳಿದೆ ಅಜ್ಜಿ ಜಗ್ಗಲಿಲ್ಲ. ಕಡೆಗೆ ಕೋಪದಿಂದ ಕುಳಿತುಕೊಳುವಂತೆ ಗದರಿದೆ. ಕಾಟಾಚಾರಕ್ಕೆಂಬಂತೆ ತನ್ನ ಕೃಷ ದೇಹದ ಕಾಲುಭಾಗವನ್ನು ಮಾತ್ರ ಚೇರಿಗೆ ಸೀಮಿತಗೊಳಿಸಿತು . ನಾನು ಅಜ್ಜಿಯ ಪಕ್ಕಕ್ಕೆ ಬಂದು " ಏನಜ್ಜಿ " ಎಂದೆ. " ಸಾರ್ ನಂಗೊಂದ್ ಮನೆ ಬೇಕಿತ್ತು " ನಡುಗುವ ಧ್ವನಿಯಲ್ಲೇ ಮನವಿಯಿತ್ತು. ಬಹುಪಾಲು ಒತ್ತಡಕ್ಕೆ, ಅಪರೂಪಕ್ಕೆ ಆತ್ಮಸಾಕ್ಷಿಗೆಂಬಂತೆ ಇಂಥ ಹತ್ತಾರು ವಿಜ್ಞಾಪನೆಗಳು ನನ್ನನ್ನು ತಟ್ಟುತ್ತಲೇ ಇರುತ್ತವೆ. ಹಳ್ಳಿಯ ಸಮಗ್ರ ಮೂಲಭೂತ ಸೌಕರ್ಯಗಳ ಜವಾಬ್ದಾರಿಯನ್ನು ಹೊತ್ತ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ಈ ಬಗೆಯ ಎಷ್ಟೋ ಮನವಿಗಳನ್ನು ದಿನಂಪ್ರತಿ ಸ್ವೀಕರಿಸುವ ನನಗೆ ಇದೊಂದು ಏಕೋ ಆಪ್ತವೆನಿಸಿಬಿಟ್ಟಿತು. ಸೊರಗಿದ ದೇಹಭಾಷೆಯ ಜೊತೆಗೆ ಆಕೆಯಲ್ಲಿ ನನ್ನ ಅಜ್ಜಿಯನ್ನೇ ಕಂಡಿದ್ದಕ್ಕೆನೋ ಕಣ್ಣೀರು ಒತ್ತರಿಸಿ ಧುಮುಕಿತ್ತು. ನಾನು ಆ ಅಜ್ಜಿಯನ್ನು ಇದೇ ಮೊದಲು ಕಂಡಿದ್ದರಿಂದ ಪೂರ್ವಾಪರ ಗೊತ್ತಿರಲಿಲ್ಲ. ಕೂಡಲೇ ಕರ ವಸೂಲಿಗಾರ ಶಿವನನ್ನು ಕರೆದು ವಿಚಾರಿಸಿದೆ. " ಸಾರ್, ಈ ಅಜ್ಜಿಯ ಹೆಸರು ನಾಗಿ. ಇದೇ ಊರಿನವರು. ಚಿಕ್ಕ ವಯಸ್ಸಿನಿಂದ ಅವರಿವರ ಮನೆ ಜೀತ ಮಾಡಿಕೊಂಡಿದ್ದರು. ಮದುವೆಯಾಗಿ ಗಂಡ ಚಿಕ್ಕ ವಯಸ್ಸಲ್ಲೇ ಕುಡಿದು ಕುಡಿದು ಸತ್ತು ಹೋದ. ಮಕ್ಕಳಿಲ್ಲ. ಈಗೊಂದ್ ಇಪ್ಪತ್ತು ವರ್ಷದಿಂದ ಸದಾಶಿವ ಸಾಹುಕಾರರ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲೇ ವಾಸವಿದ್ದರು. ಆ ಸಾಹುಕಾರರು ಸತ್ತ ಮೇಲೆ ಅವರ ಮಗ ತೋಟವನ್ನು ಮಾರಿ ಬೆಂಗಳೂರು ಸೇರಿಕೊಂಡ. ಹೊಸ ಯಜಮಾನರು ಇವರನ್ನೆಲ್ಲಾ ಹೋದ ವಾರ ಅಲ್ಲಿಂದ ಖಾಲಿ ಮಾಡಿಸಿದ್ದಾರೆ. ಈಕೆಯದ್ದು ಹಳೆಯದೊಂದು ಗುಡಿಸಲಿತ್ತು. ಹಿಂದೆ ಮುಂದೆ ಯಾರೂ ಇಲ್ಲದ್ದರಿಂದ ಸದ್ಯಕ್ಕೆ ಆ ಗುಡಿಸಲಲ್ಲೇ ವಾಸವಾಗಿದೆ. ಅಜ್ಜಿಗೆ ಕಣ್ಣು ಅಷ್ಟಾಗಿ ಕಾಣಿಸೊಲ್ಲ. ಈಗಲೂ ತೋಟದ ಕೆಲಸಕ್ಕೆ ಹೋಗುತ್ತಿದೆ. ಏನಾದರೂ ಉಪಕಾರ ಮಾಡಬೇಕು ಸಾರ್." ಶಿವು ಎಲ್ಲವನ್ನೂ ಹೇಳುವುದರ ಜೊತೆಗೆ ಹೊಸತೊಂದು ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿದ. ನಾನೊಮ್ಮೆ ದೀರ್ಘವಾದ ಉಸಿರನ್ನು ತೆಗೆದುಕೊಂಡು ಹಾಗೇ ಸುಮ್ಮನೆ ಕುಳಿತುಕೊಂಡೆ. ಅಜ್ಜಿಗೆ ಇದ್ಯಾವುದರ ಪರಿವಿಲ್ಲದೆ ನಮ್ಮಿಬ್ಬರನ್ನೇ ನೋಡುತ್ತಿತ್ತು. ಅಜ್ಜಿಗೆ ಧೈರ್ಯವನ್ನು ತುಂಬಿ, ನೂರು ರೂಪಾಯಿ ಕೈಗಿತ್ತು, ಮನೆಗೆ ಬಿಟ್ಟು ಬರುವಂತೆ ಶಿವುಗೆ ಹೇಳಿದೆ. ಸಂಕೋಚದಿಂದಲೇ ಅಲ್ಲಿಂದ ಬೀಳ್ಕೊಡುವ ಮುನ್ನ ಮತ್ತೊಮ್ಮೆ ಆಕೆ ಬಿನ್ನವಿಸಿದಳು " ಅಪ್ಪಾ, ನಂಗೊಂದ್ ಮನೆ ಮರಿ ಬೇಡ ಕಣಪ್ಪಾ ". ಬಂದಾಗ 'ಸಾರ್' ಎಂದಿದ್ದ ಅಜ್ಜಿ ಹೋಗುವಾಗ ವಾತ್ಸಲ್ಯದಿಂದ ಅಪ್ಪಾ ಎಂದು ಕರೆದಿದ್ದು ನನ್ನ ಎದೆಯನ್ನು ಆರ್ದ್ರಗೊಳಿಸಿತ್ತು. ಅಜ್ಜಿಯ ನಿಷ್ಕಲ್ಮಶ ಮಮತೆ ನನ್ನನ್ನು ಸೆಳೆದಿತ್ತು. ಅಜ್ಜಿ, ಕಚೇರಿಯ ಹೊಸ್ತಿಲು ದಾಟಿ ಹೋದರೂ ಆಕೆಯ ದೈನೇಸಿ ಸ್ಥಿತಿ ನನ್ನನ್ನು ಕಾಡುತ್ತಲೇ ಇತ್ತು. ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡು ಕೇಳಿಕೊಂಡೆ " ಒಂದು ಮನೆಯನ್ನು ಆ ಅಜ್ಜಿಗೆ ನೀಡುವುದೆಂದರೆ, ಜೇಬಿನಿಂದ ನೂರು ರೂಪಾಯಿ ತೆಗೆದು ಕೊಟ್ಟಷ್ಟು ಸುಲಭವೇ?. ಸರ್ಕಾರದಿಂದ ಇಷ್ಟು ಮನೆ ಆಯ್ಕೆ ಮಾಡಿ ಅಂತ ಗುರಿ ಕೊಡಬೇಕು. ಆ ಭಾಗದ ಪಂಚಾಯ್ತಿ ಮೆಂಬರ್ ಒಪ್ಪಿಕೊಳ್ಳಬೇಕು. ಆಕೆಯ ಜಾಗ ಯಾವುದು ನೋಡಬೇಕು. ಈಗಾಗಲೇ ಮನೆಯಿಲ್ಲದ ಪಟ್ಟಿಯಲ್ಲಿರುವವರು ಹೊಸದಾಗಿ ಬಂದ ಈ ಅಜ್ಜಿಗೆ ಮನೆ ಕೊಡಲು ತಕರಾರು ತೆಗೆದರೆ ಗತಿಯೇನು?. ಇಷ್ಟು ದಿನ ಯಾರ ಪರವಾಗಿಯೂ ವಕಾಲತ್ತು ಮಾಡದ ನಾನು ಈ ಅಜ್ಜಿಗಾಗಿ ಅವರಿವರ ಬಳಿ ಕೈಕಟ್ಟಿ ನಿಲ್ಲಬೇಕಾ?. " ಪುಂಖಾನುಪುಂಖವಾಗಿ ನುಗ್ಗಿದ ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೆ ಆ ಅಜ್ಜಿಯ ಕೊನೆಯ ಮಾತು ಈ ಎಲ್ಲಾ ಸವಾಲುಗಳನ್ನು ಗೌಣವಾಗಿಸಿತ್ತು.

ಮರುದಿನ ಬೆಳಿಗ್ಗೆ ಎಂದಿನಂತೆಯೇ ಕಚೇರಿ ಕೆಲಸಗಳಲ್ಲಿ ಮಗ್ನನಾಗಿದ್ದೆ. ಇದ್ದಕ್ಕಿದ್ದಂತೆ ಅಜ್ಜಿಯ ನೆನಪಾಯ್ತು. ಹೇಗೂ ಅಜ್ಜಿಯ ಗುಡಿಸಲು ನೋಡುವ ಕೆಲಸ ಬಾಕಿಯಿತ್ತು. ಶಿವನನ್ನು ಕರೆದುಕೊಂಡು ಅತ್ತ ಕಡೆ ಹೊರಟೆ. ಅಜ್ಜಿಯ ಗುಡಿಸಲಿನ ಹತ್ತಿರ ಬಂದೊಡನೆ ಶಿವು ಬೈಕ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ. ನಾನು ಬೈಕ್ ಇಳಿದು ಆ ಗುಡಿಸಲಿನ ಬಾಗಿಲಲ್ಲಿ ನಿಂತು ಒಮ್ಮೆ ನೋಡಿದೆ. ನಾಲ್ಕೈದು ಅಡಿ ಎತ್ತರದ ಹತ್ತನ್ನೆರಡು ಅಡಿ ಅಗಲದ ಆ ಗುಡಿಸಲಿಗೆ ಬಾಗಿಲೆಂದರೆ ಒಂದು ತೆಂಗಿನ ಗರಿ. ಹಾಗೇ ಒಳಕ್ಕೊಮ್ಮೆ ನುಗ್ಗಿದೆ. ಅದು ಬರೀ ಮಣ್ಣಿನ ನೆಲ, ಅದರ ಮೇಲೊಂದು ಗೋಣಿಚೀಲವನ್ನು ಹಾಸಿಕೊಂಡು ಅಜ್ಜಿ ಮಲಗಿದೆ. ಜ್ವರ ಬಂದು ಮಲಗಿದ್ದರಿಂದಲೇನೋ ನಿನ್ನೆಯಿದ್ದಷ್ಟು ಹುರುಪು ಆಕೆಯಲ್ಲಿರಲಿಲ್ಲ. ಮೊದಲೇ ಮಂದದೃಷ್ಟಿಯ ಆಕೆಗೆ ನನ್ನ ಗುರುತು ಸಿಗಲಿಲ್ಲ. ಆದರೆ ನಾನು 'ಅಜ್ಜಿ 'ಎಂದ ಧ್ವನಿಯಲ್ಲೇ ಪತ್ತೆ ಮಾಡಿತು. ನಾನೇ ಬಲವಂತವಾಗಿ ಎತ್ತಿ ಕೂರಿಸಿದೆ. ಸೌದೆ ಒಲೆಯ ಮೇಲಿನ ಮಡಿಕೆಯಲ್ಲಿ ಅನ್ನ ಬೆಂದಿತ್ತು. ಅಲ್ಲಿನ ಪರಿಸ್ಥಿತಿ ನೋಡಿದ ಮೇಲೆ ಅಜ್ಜಿಗೊಂದು ಸೂರನ್ನು ಕಟ್ಟಿಕೊಡಲೇಬೇಕೆಂದು ಮನದಲ್ಲೇ ಸಂಕಲ್ಪ ಮಾಡಿದೆ. ಏನೇನು ದಾಖಲೆಗಳಿವೆಯೆಂದು ಅಜ್ಜಿಯನ್ನು ಕೇಳಿದೆ. ಅಲ್ಲೊಂದು ಹಳೆಯ ಬಟ್ಟೆ ಬ್ಯಾಗ್ ನತ್ತ ಕೈ ತೋರಿತು. ಅದನ್ನೊಮ್ಮೆ ತೆರೆದೆ, ಒಂದು ಆಧಾರ್ ಕಾರ್ಡ್ ಬಿಟ್ಟರೆ ಮತ್ತೇನೂ ಇರಲಿಲ್ಲ. ರೇಷನ್ ಕಾರ್ಡ್ ಎಲ್ಲೆಂದು ಕೇಳಿದಾಗ, ಮಾಡಿಸಿಲ್ಲವೆಂದು ಹೇಳಿತು. ಇನ್ನು ಜಾತಿ ಆದಾಯ ಪ್ರಮಾಣಪತ್ರಗಳ ಬಗ್ಗೆ ಕೇಳಿ ಸುಖವಿಲ್ಲವೆಂದರಿತೆ. ಒಬ್ಬ ಫಲಾನುಭವಿಯನ್ನು ವಸತಿ ಯೋಜನೆಗೆ ಆಯ್ಕೆ ಮಾಡಲು ಇವೆಲ್ಲವೂ ಅತ್ಯಗತ್ಯ ದಾಖಲೆಗಳಾಗಿದ್ದವು. ಆದರೆ ಅಜ್ಜಿಯ ಬಳಿ ಇರುವುದು ಆಧಾರ್ ಕಾರ್ಡ್ ಮಾತ್ರ. ಅದರಲ್ಲಿಯೂ ಮೊಬೈಲ್ ನಂಬರ್ ದಾಖಲಿಸಿಲ್ಲ. ಉಳಿದೆಲ್ಲಾ ದಾಖಲೆಗಳನ್ನು ಮಾಡಿಸಲು ಅಜ್ಜಿಯನ್ನು ಕರೆದೊಯ್ಯುವುದು ಹೇಗೆ?. ನನಗೀಗ ಅಜ್ಜಿಗೆ ಮನೆ ಕೊಡಿಸುವುದು ವಾಮನನಂತೆ ಕಂಡರೂ ಹೊಂದಿಸಬೇಕಾದ ದಾಖಲೆಗಳು ತ್ರಿವಿಕ್ರಮನಂತೆ ಗೋಚರಿಸತೊದಗಿದವು. ಶಿವು ನನ್ನ ಮುಖವನ್ನು ನೋಡಿ ತಲೆ ಮೇಲೆ ಕೈಯಿತ್ತುಕೊಂಡ. ಒಂದು ಕ್ಷಣ ಏನೂ ತೋಚದೆ ಗುಡಿಸಲಿನಿಂದ ಹೊರಬಂದು ನಿಂತೆ. ಮೊಬೈಲನ್ನು ಜೇಬಿಂದ ಹೊರತೆಗೆದು ದಿಶಾಂಕ್ ಆಪ್ ಮೂಲಕ ಜಾಗದ ವಾರಸುದಾರಿಕೆಯನ್ನು ಪರಿಶೀಲಿಸಿದೆ. ಪುಣ್ಯಕ್ಕೆ ಅಜ್ಜಿಯ ಗುಡಿಸಲಿದ್ದ ಜಾಗ ಗ್ರಾಮಠಾಣಾ ಪ್ರದೇಶವಾಗಿತ್ತು. ಅದು ಗ್ರಾಮ ಪಂಚಾಯಿತಿಗೆ ಸೇರುವ ಸ್ಥಳವಾದ್ದರಿಂದ ಯಾವುದೇ ಸಮಸ್ಯೆಗಳಿರಲಿಲ್ಲ. ಸದ್ಯ ಇದೊಂದು ತಲೆನೋವು ತಪ್ಪಿತು ಎಂದುಕೊಂಡೆ. ಅಜ್ಜಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದರೂ, ಇದೆಲ್ಲಾ ತನಗೆ ಮಾಮೂಲು ಎಂಬಂತೆ ನಿರಾಕರಿಸಿಬಿಟ್ಟಿತು. ಅಷ್ಟರಲ್ಲಿ ಅಜ್ಜಿಯ ಮನೆ ಪಕ್ಕದಲ್ಲೇ ಇದ್ದ ಕೃಷ್ಣ ನನ್ನನ್ನು ಮಾತನಾಡಿಸಲು ಬಂದ. ಉಭಯ ಕುಶಲೋಪರಿಯ ನಂತರ ನಾನು ಅವನಿಗೆ ಅಜ್ಜಿಗೆ ನೆರವಾಗುವಂತೆ ತಿಳಿಸಿದೆ. ಅಜ್ಜಿ ತಮ್ಮ ದೂರದ ಬಂಧುವೆಂದು ಪ್ರತಿನಿತ್ಯ ತಮ್ಮ ಮನೆಯಿಂದಲೇ ಊಟ ತಿಂಡಿ ಕೊಡುತ್ತಿದ್ದರೂ ಅಜ್ಜಿ ಸ್ವಾಭಿಮಾನದಿಂದ ಅನ್ನ ಮಾಡಿಕೊಂಡಿರುತ್ತಾಳೆಂದು ತಿಳಿಸಿದ. ನನಗೆ ಆತನ ಮನೆಯವರ ಬಗ್ಗೆ ಹೆಮ್ಮೆಯೆನಿಸಿತು. ಕೆಲಸವಿದ್ದುದರಿಂದ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಕಚೇರಿಯತ್ತ ಬೈಕ್ ತಿರುಗಿಸಿದೆ.

ಸಭೆ, ತರಬೇತಿ ಮುಂತಾದ ಗೋಜಲುಗಳ ನಡುವೆ ಒಂದು ವಾರ ಕಳೆದಿತ್ತು. ಕಚೇರಿಯಲ್ಲಿ ಯಾವುದೋ ಕೆಲಸದಲ್ಲಿ ಮಗ್ನನಾಗಿದ್ದ ನನಗೆ ಧುತ್ತೆಂದು ಅಜ್ಜಿಗೆ ಮನೆ ಕೊಡಿಸುವ ಯೋಜನೆ ನೆನಪಾಯ್ತು. ತಕ್ಷಣ ಆ ಭಾಗದ ಮೆಂಬರ್ ರಂಗಪ್ಪನಿಗೆ ಕರೆ ಮಾಡಿದೆ. ಎಲ್ಲಾ ವಿಷಯವನ್ನು ಕೇಳಿಸಿಕೊಂಡ ಅವರು ಕಡೆಗೆ " ಸರ್, ನಾವು ಗೆದ್ದು ಎರಡು ವರ್ಷ ದಿಂದ ಮನೆಗಳೇ ಬಂದಿಲ್ಲ. ಎಲೆಕ್ಷನ್ ಗೆ ನಿಂತಾಗ ನಾನು ಮಾತು ಕೊಟ್ಟಿರುವ ಜನರ ಪಟ್ಟಿಯೇ ಹನುಮಂತನ ಬಾಲದಷ್ಟಿದೆ. ಅವರನ್ನು ಬಿಟ್ಟು ಈ ಅಜ್ಜಿನ ಆಯ್ಕೆ ಮಾಡಿದ್ರೆ, ಜನ ಬೇಜಾರು ಮಾಡಿಕೊಳ್ಳಬಹುದು. ನಾನು ನಿಷ್ಠುರವಾಗದ ಹಾಗೆ ನೀವೇ ಎಲ್ಲಾ ಮ್ಯಾನೇಜ್ ಮಾಡಿಕೊಳ್ಳಿ " ಎಂದು ಹೇಳಿ ಕೈತೊಳೆದುಕೊಂಡರು. ನಾನು ಕಂಡ ಅನೇಕ ಸಂಭಾವಿತ ಜನಪ್ರತಿನಿಧಿಗಳಲ್ಲಿ ರಂಗಪ್ಪ ಕೂಡ ಒಬ್ಬರು. ಬೇರೆ ಯಾರಾದರೂ ಆಗಿದ್ದರೆ ಅಷ್ಟು ಸುಲಭಕ್ಕೆ ಒಪ್ಪುತ್ತಿರಲಿಲ್ಲ. ಏಕೆಂದರೆ ಒಂದು ಮನೆಗೆ ಫಲಾನುಭವಿಯನ್ನು ಆಯ್ಕೆ ಮಾಡುವುದರ ಹಿಂದೆ ಹಲವಾರು ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಅವುಗಳನ್ನು ಮೀರಿ ಪಿಡಿಒ ಪರವಾಗಿ ಒಂದು ಮನೆಯನ್ನು ಬಿಟ್ಟುಕೊಡುವವರು ವಿರಳ. ಮನಸ್ಸಲ್ಲೇ ರಂಗಪ್ಪನಿಗೆ ನಮಸ್ಕರಿಸಿದೆ. ಆದರೆ ನನಗೆ ಗೊತ್ತಿತ್ತು, ಯಾವುದೇ ದಾಖಲೆಗಳಿಲ್ಲದ ಅಜ್ಜಿಗೆ ಮನೆ ಕೊಡಿಸುವ ಕೆಲಸ ಮೌಂಟ್ ಎವರೆಸ್ಟ್ ಏರಿದಷ್ಟೇ ತ್ರಾಸವೆಂದು.ಇರಲಿ, ಒಂದು ಕೈ ನೋಡೋಣ ಎಂದು, ನನಗೆ ನಾನೇ ಧೈರ್ಯ ತಂದುಕೊಂಡೆ.

ನಾಗಿ ಅಜ್ಜಿಗೆ ಮನೆ ಮಂಜೂರು ಮಾಡಲು ಇದ್ದ ಮೊದಲ ಅಡ್ಡಿಯನ್ನು ರಂಗಪ್ಪನ ರೂಪದಲ್ಲಿ ನಿವಾರಿಸಿಕೊಂಡಿದ್ದೆ. ಇನ್ನು ದಾಖಲೆಗಳನ್ನು ಹೊಂಚುವ ಕೆಲಸ ಆರಂಭಿಸಿದೆ. ರೇಷನ್ ಕಾರ್ಡ್ ಮಾಡಿಸೋಣವೆಂದು ಫುಡ್ ಇನ್ಸ್ಪೆಕ್ಟರ್ ಗೆ ಕರೆಮಾಡಿದೆ. ಗೃಹಲಕ್ಷ್ಮಿ ಯೋಜನೆಯ ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಈ ಪ್ರಕ್ರಿಯೆಯನ್ನು ನಿಲ್ಲಿಸಿರುವುದಾಗಿ ತಿಳಿಸಿದರು. ನನಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು. ಏಕೆಂದರೆ ಕಾರ್ಡ್ ಇಲ್ಲದೇ ಮನೆ ಫಲಾನುಭವಿಯ ಅರ್ಜಿಯನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ. ಮತ್ಯಾವುದಾದರು ದಾರಿಯಿದೆಯೇ ಎಂದು ಕೇಳಲಾಗಿ, ತಹಸೀಲ್ದಾರ್ ಅನುಮತಿ ಮೇರೆಗೆ ಕೇವಲ ತುರ್ತು ಆರೋಗ್ಯ ಸಮಸ್ಯೆ ಇದ್ದವರಿಗೆ ಹೊಸ ಕಾರ್ಡ್ ನೀಡಬಹುದೆಂದು, ತಾವು ಬೇಕಿದ್ದರೆ ಅವರನ್ನೊಮ್ಮೆ ಸಂಪರ್ಕಿಸಿ ಎಂದು ತಿಳಿಸಿದ. ಧನ್ಯವಾದ ತಿಳಿಸಿ ಫೋನಿಟ್ಟೆ. ಅಂದು ಸಂಜೆಯೇ ತಹಸೀಲ್ದಾರ್ ರವರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ತಮಗೂ ಸ್ವಲ್ಪ ಪುಣ್ಯವನ್ನು ಕಳಿಸಿ ಎಂದು ನಗುತ್ತಾ ಒಪ್ಪಿಕೊಂಡರು. ಅಂತೂ ಅಜ್ಜಿಯನ್ನು ನನ್ನ ಕಾರಿನಲ್ಲೇ ತಾಲ್ಲೂಕು ಕಚೇರಿಗೆ ಕರೆದುಕೊಂಡು ಬಂದು ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ರೇಷನ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿದೆ. ಅಲ್ಲಿದ್ದ ಕೆಲವು ಪರಿಚಿತರು ನನ್ನ ಅವಸ್ಥೆಯನ್ನು ಕಂಡು ನಗುತ್ತಿದ್ದರು. ಮತ್ತೆ ಕೆಲವರು ಹೊಗಳುತ್ತಿದ್ದರು. ನಾನು ಸ್ವಭಾವತಃ ಸಮಚಿತ್ತದವನಾಗಿದ್ದರಿಂದ ಎಲ್ಲವನ್ನೂ ಸ್ವೀಕರಿಸಿ ನಗುನಗುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದೆ. ಅಜ್ಜಿಯ ದಾಖಲೆ ಪತ್ರಗಳೆಲ್ಲ ತಯಾರಾದವು. ವಸತಿ ನಿಗಮದ ತಂತ್ರಾಂಶದಲ್ಲಿ ಸೇರಿಸಿದ್ದು ಆಯಿತು. ಯಾರಿಗೂ ಬೇಸರವಾಗಬಾರದೆಂದು ಆ ವಾರ್ಡ್ನ ಕೆಲವು ಮುಖಂಡರಿಗೆ ಅಜ್ಜಿಯ ವಾಸ್ತವಿಕ ಪರಿಸ್ಥಿತಿಯನ್ನು ಅರ್ಥ ಮಾಡಿಸಲಾಯಿತು. ಇನ್ನೇನು ಅಜ್ಜಿಗೆ ಮನೆ ನೀಡಬೇಕೆಂದು ತುದಿಗಾಲಲ್ಲಿ ನಿಂತಾಯಿತು. ಆದರೆ ಸರ್ಕಾರದಿಂದ ವಸತಿ ಫಲಾನುಭವಿ ಆಯ್ಕೆಯ ಸಂಬಂಧ ಯಾವುದೇ ಪತ್ರಗಳು ಬರಲಿಲ್ಲ.

ಮಳೆಗಾಲಕ್ಕೆ ಇನ್ನು ಮೂರು ತಿಂಗಳು ಮಾತ್ರವಿತ್ತು. ಅಷ್ಟರೊಳಗೆ ಅಜ್ಜಿಗೆ ಮನೆ ಮಾಡಿಸಿ ಕೊಡದಿದ್ದರೆ, ಬೇರೆ ಕಡೆ ವಾಸ್ತವ್ಯಕ್ಕೆ ಜಾಗ ಮಾಡಿಕೊಡಬೇಕಿತ್ತು. ಮಲೆನಾಡಿನ ಮಳೆಯ ಆರ್ಭಟವನ್ನು ಕಂಡಿದ್ದ ನನಗೆ ಭವಿಷ್ಯದ ಕಲ್ಪನೆ ಸ್ಪಷ್ಟವಾಗಿತ್ತು. ಮೇಲಧಿಕಾರಿಗಳನ್ನು ವಿಚಾರಿಸಲಾಗಿ ಸದ್ಯಕ್ಕೆ ಮನೆ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ತಿಳಿದು ಬೇಸರವಾಯ್ತು. ಯಾವ ರೂಪದಲ್ಲಾದರೂ ಅಜ್ಜಿಗೊಂಡು ನೆಲೆಯನ್ನು ಕಲ್ಪಿಸಬೇಕಿತ್ತು. ಸರ್ಕಾರದಿಂದಲೇ ಕೊಡಿಸುವುದಕ್ಕಾಗಿ ಇಷ್ಟು ದಿವಸ ಮಾಡಿದ್ದ ನನ್ನ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಇದೇ ಬೇಸರದಲ್ಲಿ ಅಜ್ಜಿಯನ್ನು ಮಾತನಾಡಿಸಲು ಹೊರಟೆ. ಒಬ್ಬನೇ ಅಜ್ಜಿಯ ಗುಡಿಸಲನ್ನು ಹೊಕ್ಕೆ. ಮಲಗಿದ್ದ ಅಜ್ಜಿಯ ಕೈಯಿಡಿದು ಆಕೆಗೊಂದು ಮನೆ ಕೊಡಿಸಲಾಗದ ನನ್ನ ವೈಫಲ್ಯವನ್ನು ಹೇಳಬೇಕೆಂದುಕೊಂಡೆ. ಯಾಕೋ ಬಾಯಿ ಬರಲಿಲ್ಲ. ಮಾತುಗಳನ್ನು ಹಾಗೇ ನುಂಗಿಕೊಂಡೆ. ಅಜ್ಜಿಯ ಆರೋಗ್ಯ ಸುಧಾರಿಸಿತ್ತು. ಇಂದು ಕೂಡ ತೋಟದ ಕೆಲಸಕ್ಕೆ ಹೋಗಿ ಆಗ ತಾನೇ ವಿಶ್ರಾಂತಿಯತ್ತ ಮುಖ ಮಾಡಿತ್ತು. ತನ್ನ ಹೊಸ ಯಜಮಾನರ ಬಳಿ ಮನೆ ಕಟ್ಟಿಸುವ ವಿಷಯ ತಿಳಿಸಿದ್ದು, ಅವರು ಹಣದ ಸಹಾಯ ಮಾಡಲಿದ್ದಾರೆ ಎಂದು ಹೇಳಿತು. ಅಜ್ಜಿ ಮಾನಸಿಕವಾಗಿ ಮನೆಯನ್ನು ಕಟ್ಟಲು ಸಿದ್ಧತೆಯನ್ನು ಮಾಡಿಕೊಂಡಿತ್ತು. ನನಗೆ ಏನು ಹೇಳಬೇಕೆಂದು ತೋಚದೆ, ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಅಲ್ಲಿಂದ ಜಾರಿಕೊಂಡೆ. ರಾತ್ರಿ ಹಾಸಿಗೆಯ ಮೇಲೆ ಮೈಚೆಲ್ಲಿದರೂ ನಿದ್ರಾದೇವಿ ಏಕೋ ಸೆಳೆಯಲು ಸೋತಳು. ಅಜ್ಜಿಗೆ ಮನೆಯನ್ನು ಎರಡು ಮೂರು ತಿಂಗಳೊಳಗೆ ಕಟ್ಟಿಸಬೇಕಾದ ಅನಿವಾರ್ಯತೆ ಇತ್ತು. ಆಕೆ ತನಗೆ ಮನೆ ಸಿಕ್ಕೇ ಸಿಗುತ್ತದೆ ಎಂದು ಬಲವಾಗಿ ನನ್ನನ್ನು ನಂಬಿದ್ದಾಳೆ. ಇಳಿ ವಯಸ್ಸಿನಲ್ಲಿ ಒಂದು ಆಶಾ ಗೋಪುರವನ್ನೇ ಕಟ್ಟಿಕೊಂಡಿದ್ದಾಳೆ. ಹೌದು, ಹೇಗಾದರೂ ಮಾಡಿ ಅದನ್ನು ಗಾಳಿಗೋಪುರವಾಗಲು ಬಿಡಬಾರದು ಎಂದುಕೊಂಡೆ. ಸರ್ಕಾರದ ಸಹಾಯಧನದಲ್ಲಿ ಸದ್ಯಕ್ಕೆ ಇದು ಅಸಾಧ್ಯವಾದ ಕೆಲಸವಾಗಿತ್ತು. ಅನ್ಯ ಯಾವುದೇ ದಾರಿಯಲ್ಲಾದರೂ ಆಕೆಗೊಂದು ಬೆಚ್ಚಗಿನ ಗೂಡನ್ನು ನಿರ್ಮಿಸಬೇಕೆಂದು ಆಲೋಚಿಸಿದೆ. ಕೋವಿಡ್ ಕಾಲದಲ್ಲಿ, ಗ್ರಾಮ ಪಂಚಾಯಿತಿ ಗ್ರಂಥಾಲಯ ನಿರ್ಮಾಣದಲ್ಲಿ ಮತ್ತು ಸರ್ಕಾರಿ ಶಾಲೆಗಳಿಗಾಗಿ ದಾನಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ ನನಗೆ ಅವರುಗಳ ಮೂಲಕವೇ ಅಜ್ಜಿಗೊಂದು ಮನೆ ನಿರ್ಮಿಸಿಕೊಡೋಣವೆಂದು ತೀರ್ಮಾನಿಸಿದೆ. ಆದರೆ ಈ ಸಂಧ್ಯಾಕಾಲದಲ್ಲೂ ತೋಟಕ್ಕೆ ಹೋಗಿ ದುಡಿಯುತ್ತಿರುವ, ತನ್ನ ಅನ್ನವನ್ನು ತಾನೇ ಗಳಿಸಬೇಕೆನ್ನುವ ಆಕೆಯ ಸ್ವಾಭಿಮಾನಕ್ಕೆ ಇದರಿಂದ ಘಾಸಿಯಾಗಬಹುದೆಂದು ಚಿಂತಿಸಿದೆ. ಇದನ್ನೇ ಬೇರೆ ಮಾರ್ಗದಲ್ಲಿ ಮಾಡೋಣವೆಂದು ಉಪಾಯ ಮಾಡಿದೆ. ಮುಂದಿನ ವಾರವೇ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಿತ್ತು. ಆದರಲ್ಲೇ ಈ ಬಗ್ಗೆ ಚರ್ಚಿಸೋಣವೆಂದು ನಿರ್ಧರಿಸಿದೆ. ಮನಸ್ಸು ಕೊಂಚ ನಿರಾಳವೆನಿಸಿತು.

ಅಂತೂ ಒಂದು ವಾರ ಕಳೆದೇ ಹೋಯ್ತು. ದಿನಂಪ್ರತಿ ಸವಾಲು, ಒತ್ತಡಗಳ ನಡುವೆಯೇ ಕರ್ತವ್ಯ ನಿರ್ವಹಿಸುವ ನನಗೆ ದಿನಗಳು ಕೆಲವೊಮ್ಮೆ ನಿಮಿಷಗಳಂತೆ ಓಡಿಬಿಡುತ್ತವೆ. ವೀರಣ್ಣನವರ ಅಧ್ಯಕ್ಷತೆಯಲ್ಲಿ ಶಿಷ್ಟಾಚಾರದಂತೆ ಪಂಚಾಯ್ತಿ ಸಭೆಯು ಮುಕ್ತಾಯಗೊಂಡಿತು. ನಂತರ ನಾನು ಅನಧಿಕೃತವಾಗಿ ಮಾತನ್ನು ಆರಂಭಿಸಿದೆ. " ಮಾನ್ಯರೇ, ತಮಗೆಲ್ಲ ತಿಳಿದಿರುವಂತೆ ದೊಡ್ಡಪುರದ ನಾಗಿ ಅಜ್ಜಿಗೆ ಮನೆ ಮಂಜೂರು ಮಾಡಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗದ ಕಾರಣ ಸದ್ಯಕ್ಕೆ ಅನುದಾನವನ್ನು ಆಕೆಗೆ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ದಾನಿಗಳ ನೆರವಿನಿಂದ ಅಜ್ಜಿಗೊಂದು ಮನೆಯನ್ನು ನಿರ್ಮಿಸಿಕೊಡೋಣ. ಆದರೆ ಆಕೆಗೆ ನಾವು ಕಟ್ಟಿಸಿಕೊಡುತ್ತಿರುವ ಮನೆ ಸರ್ಕಾರದಿಂದ ಕೊಟ್ಟಿರುವುದು ಎಂದೇ ಅನಿಸಬೇಕು. ಸಾಯುವಾಗ ಆ ಅಜ್ಜಿ ಯಾವುದೋ ಋಣದಲ್ಲಿ ಸತ್ತಂತೆ ಭಾಸವಾಗಬಾರದು. ಬದುಕಿನುದ್ದಕ್ಕೂ ದುಡಿದೇ ತಿಂದಿರುವ ಆ ಹಣ್ಣು ಜೀವ ನಿರುಮ್ಮಳವಾಗಿ ಜೀವಿಸಿ, ಈ ಲೋಕವನ್ನು ನಗುತ್ತಲೇ ತೊರೆಯಲಿ. ತಾವೆಲ್ಲರೂ ಸಹಕರಿಸುವುದಾದರೆ, ಆ ಊರಿನ ಮುಖಂಡರ ಜೊತೆ ಚರ್ಚಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇನೆ." ಎಲ್ಲವನ್ನೂ ವಿವರಿಸಿದೆ. ಸರ್ವರೂ ಈ ಒಳ್ಳೆಯ ಕೆಲಸಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ನಮ್ಮ ಸದಸ್ಯರೆಲ್ಲರೂ ಸೇರಿ ಮೂವತ್ತು ಸಾವಿರ ರೂಪಾಯಿಗಳನ್ನು ಕೊಡುವುದಾಗಿಯೂ, ತಮ್ಮನ್ನು ಕೂಡ ಈ ಪುಣ್ಯ ಕಾರ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ವಿನಂತಿಸಿದರು. ನನ್ನ ಹೃದಯ ತುಂಬಿ ಬಂತು. ಲೋಕವು ನಾನಂದುಕೊಂಡದ್ದಕ್ಕಿಂತ ಹೆಚ್ಚು ಸಜ್ಜನರಿಂದ ತುಂಬಿದೆ ಎಂದುಕೊಂಡು ಭಾವುಕನಾದೆ. ಅಂದು ಸಂಜೆಯೇ ಕೃಷ್ಣ ಮತ್ತು ಗೆಳೆಯರ ಬಳಗವನ್ನು ಕಚೇರಿಗೆ ಕರೆಸಿಕೊಂಡೆ. ನನ್ನ ಯೋಜನೆಯನ್ನು ತಿಳಿಸಿದೆ. ಅವರೆಲ್ಲರೂ ತಾವೂ ಕೈಲಾದಷ್ಟು ನೆರವಾಗುವುದಾಗಿ ತಿಳಿಸಿದರು. ಆ ತಂಡಕ್ಕೆ ನಿರ್ಮಾಣ ಉಸ್ತುವಾರಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಟ್ಟೆ.

ಸಂಜೆಯ ತಂಪನ್ನು ಅನಂದಿಸಬೇಕಾದರೆ ಮಧ್ಯಾಹ್ನದ ಸುಡು ಬಿಸಿಲಿನ ಅನುಭವವಾಗಿರಬೇಕು. ಇದು ನಾನು ನಂಬಿದ್ದ ತತ್ವ. ಈ ಮಾತೆಂದೂ ನನ್ನ ಜೀವನದಲ್ಲಿ ಸುಳ್ಳಾಗಿರಲಿಲ್ಲ. ಬೆಟ್ಟದಂತ ಸಮಸ್ಯೆ ಈಗ ಬೆಣ್ಣೆಯಂತೆ ಕರಗಿಬಿಟ್ಟಿತ್ತು. ಸತ್ಕಾರ್ಯಗಳಿಗೆ ಹೆಗಲಾಗಲು ನಾ ಮುಂದು ತಾ ಮುಂದು ಎಂದು ಬಂದ ಈ ಜೀವಗಳನ್ನು ಕಂಡು ಎದೆ ಹಿರಿಹಿರಿ ಹಿಗ್ಗಿತ್ತು. ಬದುಕು ನಾನಂದುಕೊಂಡಿರುವುದಕ್ಕಿಂತ ಸುಂದರವಾಗಿದೆ ಎಂದು ತೋರಿಸತೊಡಗಿತ್ತು. ಒಂದು ಶುಭದಿನ ನಾನು, ಅಧ್ಯಕ್ಷರಾದ ವೀರಣ್ಣ, ಸದಸ್ಯರಾದ ರಂಗಪ್ಪ ಮತ್ತು ಕೃಷ್ಣ ಅಜ್ಜಿಯ ಗುಡಿಸಲಿಗೆ ಧಾವಿಸಿದೆವು. ಆಕೆಗೆ ಎರಡು ಲಕ್ಷ ರೂಪಾಯಿಯ ಮನೆ ಮಂಜೂರಾಗಿರುವ ವಿಷಯವನ್ನು ತಿಳಿಸಿದೆವು. ಆ ಜೀವ ಆನಂದದಲ್ಲಿ ತೇಲಾಡಿತು. ಎಲ್ಲರಿಗೂ ನಮಸ್ಕರಿಸಿತು. ನೆಪಮಾತ್ರಕ್ಕೆ ಆಕೆಗೊಂದು ಮಂಜೂರು ಪತ್ರವನ್ನು ನೀಡಿ ಹೊರಬಂದೆವು.

ಅಸಲಿ ಆಟ ಇಲ್ಲಿಂದ ಶುರುವಾಯ್ತು. ಅದ್ಯಾರೋ ಪಕ್ಕದ ಮನೆಯವರು, ಅಜ್ಜಿಗೆ ಮೊದಲು ತಳಪಾಯ ಹಾಕಬೇಕು, ಆಗ ಮಾತ್ರ ಮೊದಲ ಕಂತು ಬರುತ್ತದೆ ಎಂದು ತಿಳಿಸಿದ್ದಾರೆ. ಅದಕ್ಕೆ ಆ ಅಜ್ಜಿ ತನ್ನ ಬಳಿ ಅಷ್ಟು ಹಣವಿಲ್ಲ, ತಳಪಾಯ ಹಾಕುವುದೇಗೆ? ಎನ್ನುತ್ತಾ ಚಿಂತಾಕ್ರಾಂತವಾಗಿದೆ ಎಂದು ಕೃಷ್ಣ ಹೇಳಿದ. ಸುಮಾರು ಯೋಚನೆ ಮಾಡಿದ ಮೇಲೆ ಅದಕ್ಕೂ ಒಂದು ದಾರಿ ಹೊಳೆಯಿತು. ಅಜ್ಜಿ ಹಿಂದೆ ದುಡಿಯುತ್ತಿದ್ದ ಸದಾಶಿವಗೌಡರ ಮಗನ ಫೋನ್ ನಂಬರ್ ಸಂಗ್ರಹಿಸಿ ಕರೆ ಮಾಡಿದೆ. ನಮ್ಮ ಸದುದ್ದೇಶವನ್ನೆಲ್ಲ ಸವಿವರವಾಗಿ ತಿಳಿಸಿದೆ. ತಾವು ಬಂದು ನಾವು ಕೊಡುವ ಐವತ್ತು ಸಾವಿರವನ್ನು ಆಕೆಗೆ ಕೊಟ್ಟರೆ ಸಾಕೆಂದು ತಿಳಿಸಿದ್ದೆ. ಹೆಚ್ಚೇನು ಪ್ರತಿಕ್ರಿಯಿಸದ ಆತ ಮುಂದಿನ ವಾರ ಕಾರ್ಯ ನಿಮಿತ್ತ ಸಕಲೇಶಪುರಕ್ಕೆ ಬರಲಿದ್ದು, ಆಗ ನಿಮ್ಮನ್ನು ಭೇಟಿಯಾಗುತ್ತೇನೆಂದು ತಿಳಿಸಿದ. ನನ್ನ ಬಿಡುವಿಲ್ಲದ ಕೆಲಸದ ನಡುವೆ ಅಜ್ಜಿಯ ಮನೆ ನಿರ್ಮಾಣದ ಕೆಲಸಕ್ಕೆ ಒಂದೆರಡು ದಿನ ವಿರಾಮ ನೀಡಿದ್ದೆ.

ಅಂದು ಬೆಳಿಗ್ಗೆ ನಾನು ಯಾವುದೋ ಕಡತ ಪರಿಶೀಲಿಸುತ್ತಿದ್ದಾಗ ಅಜ್ಜಿ ಮೆಲ್ಲಗೆ ಬಂದು ಮುಂದೆ ಕುಳಿತಿತು. ತನ್ನ ಸೆರಗಿನಿಂದ ಒಂದಷ್ಟು ದುಡ್ಡಿನ ಕಟ್ಟನ್ನು ತೆಗೆದು ನನ್ನ ಮೇಜಿನ ಮೇಲಿಟ್ಟು ತಳಪಾಯ ಹಾಕಿಸಿಕೊಡುವಂತೆ ಕೇಳಿತು. ನಾನು ಆಶ್ಚರ್ಯಚಕಿತನಾದೆ. ಬರೋಬ್ಬರಿ ಐವತ್ತು ಸಾವಿರ ರೂಪಾಯಿಗಳನ್ನು ಅಜ್ಜಿ ದಿಢೀರನೆ ಎಲ್ಲಿಂದ ಹೊಂದಿಸಿತು. ನಾನು ಕೌತುಕದಿಂದ ಕೇಳಿಯೇ ಬಿಟ್ಟೆ. ಆಗ ಅಜ್ಜಿ " ಸಾರ್, ಹಳೆಯ ಯಜಮಾನರ ಮಗ ವಿಶಾಲಪ್ಪನೋರು ನಿನ್ನೆ ಸಂಜೆ ನನ್ನ ಮನೆಗೆ ಬಂದಿದ್ದರು. ಈ ದುಡ್ಡು ಕೊಟ್ಟರು. ನಾನು ಇದ್ಯಾವ ದುಡ್ಡೆಂದು ಕೇಳಿದೆ. ನನ್ನ ಹಳೆಯ ಕೂಲಿ ಬಾಕಿಯೆಲ್ಲ ಅವರ ಹತ್ತಿರವೇ ಇತ್ತಂತೆ. ಅದನ್ನೆಲ್ಲ ಸೇರಿಸಿ ಇಷ್ಟಾಯ್ತು ಅಂತ ಕೊಟ್ಟು ಹೋದರು. ಪುಣ್ಯಾತ್ಮ ಕಣಪ್ಪಾ ಅವರು. ಈ ದುಡ್ಡು ತೆಗೆದುಕೊಂಡು ಮನೆ ಕಟ್ಟಿಸಿಕೊಡು" ಎಂದು ನಡೆದದ್ದನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಹೇಳಿತು. ನಾನಿನ್ನೂ ಯಾವುದೋ ಲೋಕದಲ್ಲಿದ್ದೆ. ಆ ಸದಾಶಿವಗೌಡರ ಮಗ ವಿಶಾಲ್, ನನ್ನ ದೃಷ್ಟಿಯಲ್ಲಿ ಮಹಾನ್ ಮಾನವತಾವಾದಿಯಾಗಿ ಕಂಗೊಳಿಸಿದ್ದ. ಅವನನ್ನು ಕಾಣದ್ದಕ್ಕೆ ನನ್ನ ಮನ ಬೇಸರಿಸಿತು. ಮನಸ್ಸಲ್ಲೇ ಆತನಿಗೆ ನಮಸ್ಕರಿಸಿದೆ. ಕೂಡಲೇ ಕೃಷ್ಣ ಮತ್ತು ಗುತ್ತಿಗೆದಾರರಾದ ಕಾಕನನ್ನು ಕರೆದು ಆ ಹಣವನ್ನು ಅಜ್ಜಿಯ ಎದುರಿನಲ್ಲೇ ಅವರಿಗೆ ಹಸ್ತಾಂತರಿಸಿ ತಳಪಾಯದ ಕೆಲಸವನ್ನು ಆರಂಭಿಸುವಂತೆ ಸೂಚಿಸಿದೆ. ನನ್ನ ಗೆಳೆಯನ ತಂದೆಯೊಬ್ಬರು ಯಾವಾಗಲೂ ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬಂತು "ಯಾವುದೇ ಒಳ್ಳೆಯ ಕೆಲಸವನ್ನು ನಿಮಿತ್ತರಂತೆ ಶುರು ಮಾಡುವುದಷ್ಟೇ ನಮ್ಮ ಕೆಲಸ. ಮುಂದಿನದನ್ನು ದೇವರೇ ನೋಡಿಕೊಳ್ಳುತ್ತಾನೆ. " ಅದೆಷ್ಟೋ ಬಾರಿ ನನ್ನ ಜೀವನದಲ್ಲಿ ಈ ಮಾತು ದೃಢಪಟ್ಟಿದೆ.

ಮಾರನೇ ದಿನವೇ ಶಿವು ಜೊತೆ ಅಜ್ಜಿಯನ್ನು ಬ್ಯಾಂಕಿಗೆ ಕಳುಹಿಸಿ ಖಾತೆ ತೆರೆಸಿದೆ. ಅಜ್ಜಿಯ ಬಿಡಾರವನ್ನು ತಾತ್ಕಾಲಿಕವಾಗಿ ಕೃಷ್ಣನ ಮನೆಗೆ ಶಿಫ್ಟ್ ಮಾಡಿಸಿದ್ದೆ. ಹತ್ತೇ ದಿನಗಳಲ್ಲಿ ಅಜ್ಜಿಯ ಕನಸಿನ ಮನೆಯ ತಳಪಾಯ ತಯಾರಾಗಿತ್ತು. ನಾನು ಸುಮ್ಮನೆ ನಾಟಕದ ರೀತಿಯಲ್ಲಿ ಅಜ್ಜಿಯನ್ನು ತಳಪಾಯದ ಬಳಿ ನಿಲ್ಲಿಸಿ ಫೋಟೋ ತೆಗೆದೆ. ಮೊದಲೇ ಯೋಜಿಸಿದಂತೆ ನಮ್ಮ ಸದಸ್ಯರ ಮೂವತ್ತು ಸಾವಿರ ಮತ್ತು ನನ್ನ ಇಪ್ಪತ್ತು ಸಾವಿರವನ್ನು ಒಟ್ಟುಗೂಡಿಸಿ ಐವತ್ತು ಸಾವಿರವನ್ನು ಅಜ್ಜಿಯ ಬ್ಯಾಂಕ್ ಖಾತೆಗೆ ಜಮೆ ಮಾಡಿದೆವು. ಹದಿನೈದು ದಿನಗಳ ನಂತರ ಆಕೆಗೆ ತಳಪಾಯದ ಹಣ ಬ್ಯಾಂಕಿಗೆ ಬಂದಿರುವುದಾಗಿ ತಿಳಿಸಿ, ಅಜ್ಜಿಯಿಂದಲೇ ಆ ಹಣವನ್ನು ಕಾಕನಿಗೆ ಕೊಡಿಸಿದೆವು. ಹೀಗೇ ಛಾವಣಿಗೆ ಒಂದಷ್ಟು ಯುವಕರ ತಂಡ, ಮುಕ್ತಾಯಕ್ಕೆ ಮತ್ತೊಂದಿಬ್ಬರು ಸಹೃದಯರ ನೆರವಿನೊಂದಿಗೆ ಅಜ್ಜಿಯದೊಂದು ಚಿಕ್ಕ ಚೊಕ್ಕ ಮನೆ ತಯಾರಾಗಿ ನಿಂತಿತ್ತು. ಅದೊಂದು ಶುಭ ದಿನ ಚಿಕ್ಕದಾಗಿ ಗೃಹಪ್ರವೇಶವನ್ನು ಮಾಡಿಸಿ ಅಜ್ಜಿಗೆ ಆ ಮನೆಯನ್ನು ಬಿಟ್ಟುಕೊಟ್ಟೆವು. ಆ ಅಜ್ಜಿಯ ಮೊಗದಲ್ಲಿ ಅಂದು ಕಂಡ ಆನಂದ ನನ್ನೆಲ್ಲಾ ಶ್ರಮವನ್ನು ಮೀರಿ ನಿಂತಿತ್ತು. ಎಲ್ಲಕ್ಕೂ ಮಿಗಿಲಾಗಿ ಯಾರ ಹಂಗಿಗೂ ತಾನು ಬಿದ್ದಿಲ್ಲವೆಂಬ ಆತ್ಮತೃಪ್ತಿ ಅಜ್ಜಿಯಲ್ಲಿ ಎದ್ದುಕಾಣುತ್ತಿತ್ತು. ನಾನು ಇದನ್ನೇ ಬಯಸಿದ್ದರಿಂದ ಒಂಥರಾ ಆತ್ಮತೃಪ್ತಿ, ಕರ್ತವ್ಯ ತೃಪ್ತಿ ನನ್ನಲ್ಲಿ ಅವರಿಸಿತ್ತು. ಆಶ್ಚರ್ಯವೆಂಬಂತೆ ನನ್ನ ಮನವಿಯನ್ನು ಸ್ವೀಕರಿಸಿ ಸದಾಶಿವಗೌಡರ ಮಗ ವಿಶಾಲ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಳೆಯನ್ನು ಹೆಚ್ಚಿಸಿತ್ತು. ಈ ಪುಣ್ಯದ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದೆ. ಅಜ್ಜಿಗೆ ಗೃಹಲಕ್ಷ್ಮಿಯ ಎರಡು ಸಾವಿರ ರೂಪಾಯಿ, ಉಚಿತ ಪಡಿತರ ಸಿಗುವಂತೆ ಮಾಡಿದ್ದೆವು. ಆದ್ದರಿಂದ ಇನ್ನು ಕೆಲಸಕ್ಕೆ ಹೋಗಬಾರದೆಂದು ತಾಕೀತು ಮಾಡಿ ಕಚೇರಿಯ ಕಡೆಗೆ ಹೊರಡಲು ಅಣಿಯಾದೆ. ಆಗ ಯಾವುದೋ ಕೈ ನನ್ನ ಎಳೆದಂತೆ ಭಾಸವಾಯ್ತು, ತಿರುಗಿ ನೋಡಿದೆ. ಅಜ್ಜಿ ನನಗೆ ಕೈಮುಗಿದು " ಯಾವ ಜನ್ಮದಲ್ಲಿ ನೀನು ನನ್ನ ಮಗನಾಗಿದ್ದೋ ಗೊತ್ತಿಲ್ಲ. ದಿಕ್ಕಿಲ್ಲದ ನನಗೆ ಮನೆಯೊಂದು ಸಿಗುವಂತೆ ಮಾಡಿದ್ದೀಯ. ನೀನು ನೂರುಕಾಲ ಚೆನ್ನಾಗಿರಪ್ಪ " ಎಂದು ಆಶೀರ್ವದಿಸಿತು. ನನ್ನ ಕಣ್ಣಲ್ಲಿ ನೀರು ಜಿನುಗಿತು. ಹಾಗೇ ಅಜ್ಜಿಯನ್ನೊಮ್ಮೆ ತಬ್ಬಿ, ಒಂದು ಬಗೆಯ ಹೆಮ್ಮೆಯನ್ನು ತುಂಬಿಕೊಂಡು ಅಲ್ಲಿಂದ ಹೊರಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.