ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಿಮಾ ಮಾಳಗಿಮನಿ ಅವರ ಕಥೆ: ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ

ಪೂರ್ಣಿಮಾ ಮಾಳಗಿಮನಿ
Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಯಲ್ಲಿ ಮೆಚ್ಚುಗೆ ಪಡೆದ ಕಥೆ.

ಈಗ ಸುಮಾರು ಒಂದು ತಿಂಗಳಿಂದ ನನ್ನ ಫೋನ್ ರಿಂಗ್ ಆದರೆ ಸಾಕು ಬೆಚ್ಚಿ ಬೀಳುತ್ತಿದ್ದೇನೆ, ಒಳಗೇ ನಡುಕ ಹುಟ್ಟುತ್ತದೆ, ಮತ್ತೇನು ಕಾದಿದೆಯೋ ಎಂದು ದಿಗಿಲಾಗುತ್ತದೆ.

ಮೊದಲೆಲ್ಲಾ ಯಾರೇ ಆಗಿರಲಿ, ಎಷ್ಟು ಹೊತ್ತಿನಲ್ಲೇ ಆಗಿರಲಿ ನನಗೆ ಫೋನ್ ಮಾಡಿದರೆ ತಪ್ಪದೆ ಉತ್ತರಿಸುತ್ತಿದ್ದೆ. ಮೊದಲೇ ನಾನು ಡಾಕ್ಟರು, ಕರ್ತವ್ಯ ಪ್ರಜ್ಞೆಯಿಂದ ಫೋನ್ ಸೈಲೆಂಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದೆ. ಅಪ್ಪ ವಿದೇಶದಲ್ಲಿ ಕೊಡಿಸಿದ ಮ್ಯಾನೇಜ್ಮೆಂಟ್ ಸೀಟಿನಿಂದ ಮೂಳೆ ತಜ್ಞನಾಗಿ, ಮೂವತ್ತು ವರ್ಷಕ್ಕೇ ಕೈ ತುಂಬಾ ಸಂಬಳ ಕೊಡುವ ಆಸ್ಪತ್ರೆಯಲ್ಲಿ ಕೆಲ್ಸಕ್ಕೆ ಸೇರಿಕೊಂಡು, ಮಾವ ಕೊಡಿಸಿದ ದೊಡ್ಡಮನೆಯಲ್ಲಿ ಹೆಂಡತಿಯೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದವನಿಗೆ ಈ ಫೋನ್ ಮೂಲಕ ಯಾವಳೋ ಶೂರ್ಪಣಖಿ ಹೀಗೆ ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾಳೆ ಅಂತ ಎಣಿಸಿರಲಿಲ್ಲ.  
 
ಅಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನು? ಆ ಭಾನುವಾರ ಸ್ನೇಹಿತರೆಲ್ಲಾ ಅವರವರ ಕಾರುಗಳಲ್ಲಿ ದೇವರಬೆಟ್ಟಕ್ಕೆ ಹೋಗ್ತಿದ್ವಿ. ಅದೇ ಮೊದಲು ನನ್ನ ಹೊಸ ಕಾರಿನಲ್ಲಿ ಮನ್ವಿತಾಳನ್ನೂ ಕರೆದುಕೊಂಡು ಆಫ್ ರೋಡ್ ಡ್ರೈವಿಂಗ್ ಹೊರಟಿದ್ದರಿಂದ ನಾನು ಸ್ವಲ್ಪ ನರ್ವಸ್ ಆಗಿದ್ದೆ.  ಅಲ್ಲೊಂದು ಕಡೆ ತಿರುವಿನಲ್ಲಿ ಉಸಿರು ಬಿಗಿಹಿಡಿದು ಹೋಗುತ್ತಿದ್ದಾಗ ಒಂದು ಫೋನ್ ಕಾಲ್ ಬಂತು. ಮನ್ವಿತಾ, ‘ಅಭಿ, ಯಾವುದೋ ಅನ್ನೌನ್ ನಂಬರ್ ಸುಮ್ನೆ ಕಾರ್ ಓಡಿಸು’ ಎಂದು ಗದರಿದಳು. ಯಾರದೋ ಏನೋ ಉತ್ತರಿಸಬಿಡಬೇಕು ಅನಿಸಿದರೂ ಸುಮ್ಮನಾದೆ. ಆದರೆ ಮತ್ತೆ ಎರಡೇ ನಿಮಿಷಕ್ಕೆ ಅದೇ ನಂಬರಿನಿಂದ ಕಾಲ್ ಬಂದಿತು. ನಾನು ಹಿಂದೆ ಬರುತ್ತಿದ್ದ ಸ್ನೇಹಿತರಿಗೆ ಯಾವುದೇ ಸೂಚನೆ ಕೊಡದೆ ಗಕ್ಕನೆ ನಿಲ್ಲಿಸಿ, ಉತ್ತರಿಸಿದೆ.

‘ಗುಡ್ ಮಾರ್ನಿಂಗ್ ಸರ್, ಐ ಯಾಮ್ ಇಶಿಕಾ ಕಾಲಿಂಗ್ ಫ್ರಮ್ ಎಚ್ಡಿಎಫ್ಸಿ ಬ್ಯಾಂಕ್, ಪರ್ಸನಲ್ ಲೋನ್ ಬೇಕಿತ್ತಾ ಸರ್’ ಎಂದು ಒಂದು ಹುಡುಗಿ ಮೋಹಕವಾಗಿ ಉಲಿಯಿತು. ಮನ್ವಿತಾ ಗೊಳ್ಳನೆ ನಕ್ಕಳು. ಹಿಂದಿನಿಂದ ಸ್ನೇಹಿತರು, ‘ಏಯ್ ಅಭಿ, ಏನಾಯ್ತೋ? ಆಗ್ಲೇ ಬಿಯರ್ ಕುಡಿದು ಬಂದಿದ್ದೀಯಾ? ಯಾಕಿಂಗೆ ನಿಲ್ಲಿಸಿದೆ?’ ಎಂದು ಹಾರ್ನ್ ಮಾಡುತ್ತಾ, ಕೂಗತೊಡಗಿದರು. 

ನಾನು ಸಿಟ್ಟು ತಡೆಯಲಾರದೆ, ‘ಏಯ್ ಯಾವಳೇ ಅವಳು, ನಿಂಗೇನು ಮಾಡಕ್ ಕೆಲಸ ಇಲ್ವಾ?’ ಎಂದು ಅಬ್ಬರಿಸಿದೆ.

ಆ ಹುಡುಗಿ ಅಷ್ಟೇ ಸಮಾಧಾನದಿಂದ, ‘ಇದೇ ನನ್ನ ಕೆಲಸ ಸರ್’ ಎಂದಿತು. ಮನ್ವಿತಾ ನಗುತ್ತಲೇ ಇದ್ದಳು.

‘ಯಾಕೆ ಬೇರೆ ಇನ್ಯಾವ ಕೆಲ್ಸನೂ ಸಿಗ್ಲಿಲ್ವಾ? ಮೈ ಬಗ್ಗಿಸಿ ಓದಿದ್ದಿದ್ರೆ ಒಳ್ಳೇ ಕೆಲಸ ಸಿಗ್ತಿತ್ತು. ಅದ್ರ ಬದ್ಲು ನಿಮ್ಮಂಥ ಹುಡುಗೀರು ಕಾಲೇಜ್‌ನಲ್ಲಿ ಐಸ್ ಕ್ಯಾಂಡಿ ಚೀಪ್ತಾ ಇರೋ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ಗೆ ಹಾಕ್ಕೊಂಡು, ರೀಲ್ಸ್ ಮಾಡ್ಕೊಂಡು ಟೈಮ್ ಪಾಸ್ ಮಾಡಿದ್ರೆ ಇನ್ನೇನಾಗುತ್ತೆ?’

‘ಸರ್ ಯಾಕೆ ಹೀಗೆಲ್ಲಾ ಜೆನರಲೈಸ್ ಮಾಡ್ತಿದೀರಿ? ಎಲ್ಲಾ ಮಕ್ಳು ಹಾಗಿರಲ್ಲ, ಓದಬೇಕು ಅಂತ ಆಸೆ ಇದ್ರೂ ದುಡೀಬೇಕಾದ ಅನಿವಾರ್ಯತೆ ... ’

‘ನೋಡೂ ... ಸುಮ್ನೆ ರೀಲ್ ಬಿಟ್ಕೊಂಡು ನನ್ನ ಟೈಮ್ ವೇಸ್ಟ್ ಮಾಡ್ಬೇಡ. ಮತ್ತೆ ಏನಾದ್ರೂ ಫೋನ್ ಮಾಡಿದ್ರೆ ನೀನ್ ಎಲ್ಲಿದ್ರೂ ಹುಡುಕ್ಕೊಂಡು ಬಂದು ... ’

‘ಅಭಿ, ದಟ್ಸ್ ಇನಫ್’ ಮನ್ವಿತಾ ಗದರಿದಳು.

ಆದರೆ ನಾನು ಬಿಡಲಿಲ್ಲ. ‘ಏಯ್ ಹುಡುಗಿ...’

‘ಇಶಿಕಾ ಸರ್’

‘ನಿನ್ ಹೆಸ್ರು ತಗಂಡು ನಾನೇನ್ ಮಾಡ್ಲಿ? ನನ್ನ ಫೋನಿಗೆ ಇಂಥ ಕಾಲ್ಸ್ ಬರಬಾರದು ಅಂತಲೇ ಡೂನಾಟ್ ಡಿಸ್ಟರ್ಬ್ ಮೋಡ್‌ನಲ್ಲಿದೀನಿ. ಆದ್ರೂ ಬರ್ತಿವೆ ಅಂದ್ರೆ ನೀನು ಮಾಡ್ತಿರೋದು ಇಲ್ಲೀಗಲ್. ಹಿಂಗ್ ಇಡೀ ದಿನ ಬಿಟ್ಟಿ ಕಾಲ್ ಮಾಡ್ಕೊಂಡ್ ನಮ್ಮಂಥವರಿಗೆ ಡಿಸ್ಟರ್ಬ್ ಮಾಡೋ ಬದ್ಲು, ಹೋಗಿ ಯಾವ್ದಾದ್ರು ಬಾರ್‌ನಲ್ಲಿ ಬಟ್ಟೆ ಬಿಚ್ಕೊಂಡು ಕುಣಿ, ಎರಡೊತ್ತು ಊಟನಾದ್ರೂ ಸಿಗುತ್ತೆ’.

‘ಈ ಕಾಲ್ ರೆಕಾರ್ಡ್ ಆಗ್ತಿದೆ ಅಂತ ನಿಮ್ಗೆ ಗೊತ್ತಲ್ವಾ?’

ನಾನು ಹಾಗೇ ಕಾರಿನೊಳಗಿಂದ ಪಕ್ಕಕ್ಕೆ ನೋಡಿದೆ. ಒಂದು ಸ್ವಲ್ಪ ಯಾಮಾರಿದ್ರೂ ನಾನು ಕಣಿವೆಗೆ ಬೀಳುವುದು ನಿಶ್ಚಿತವಾಗಿತ್ತು. ಇವತ್ತು ನನಗೆ ಡ್ಯೂಟಿ ಆಫ್, ನಾನು ಫೋನ್ ಎತ್ತದಿದ್ದರೂ ನಡೆಯುತ್ತಿತ್ತು ಅನಿಸಿ, ನನ್ನ ಮಂಕು ಬುದ್ಧಿಗೆ ನನಗೇ ಸಿಟ್ಟು ಬಂತು.

‘ಆ ರೆಕಾರ್ಡಿಂಗ್ ತಗೊಂಡೋಗಿ ಉಪ್ಪಿನಕಾಯಿ ಹಾಕ್ಕೋ, ಜಸ್ಟ್ ಫಕ್ ಆಫ್’ ಎಂದು ಕೂಗಿ ಫೋನ್ ಕಟ್ ಮಾಡಿದೆ. ಮನ್ವಿತಾ ನನ್ನ ಉಗ್ರ ರೂಪ ನೋಡಿ ಹೆದರಿದಳು.

‘ಅಭಿ, ಕೂಲ್ ಡೌನ್, ಮುಂದೆ ರೋಡ್ ಇನ್ನೂ ಟಫ್ ಇದೆ’ ಎಂದಳು.

ನಾವು ಬೆಟ್ಟದ ತುದಿ ತಲುಪಿದ ಮೇಲೆ ಮನೆಯಿಂದ ಕಟ್ಟಿಕೊಂಡು ಹೋಗಿದ್ದ ಊಟ ಮಾಡಲು ಕುಳಿತೆವು. ಸಂತು ಬಿಯರ್ ಕ್ಯಾನ್ ಓಪನ್ ಮಾಡಿ ನನ್ನತ್ತ ಚಾಚಿದ. ನಾನು, ‘ಏಯ್ ನಿಂಗೇನು ತಲೆ ಕೆಟ್ಟಿದೆಯೇನೋ, ಮೊದಲೇ ಆಫ್ ರೋಡ್ ಬಂದಿದೀವಿ?’ ಎಂದು ಗದರಿದೆ.

‘ಲುಕ್ ಹು ಈಸ್ ಟಾಕಿಂಗ್?’ ಸಂತು ಅಣಕಿಸಿದ.

‘ನೋಡೋ ಇವತ್ತು ರೇಗಿಸ್ಬೇಡ. ಬೇರೆ ದಿನ ಆಗಿದ್ರೆ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡೋದು ತಪ್ಪು ಅಂತ ಗೊತ್ತಿದ್ರೂ ಮಾಡ್ತಿದ್ದೆ. ಆದ್ರೆ ಇವತ್ತು ...’ ಎಷ್ಟು ಮರೆಯಬೇಕೆಂದರೂ ಆ ಹುಡುಗಿಯ ಧ್ವನಿ ಕಿವಿಗಳಲ್ಲಿ ರಿಂಗಣಿಸುತ್ತಿತ್ತು.

‘ಗೊತ್ತಪ್ಪ, ಆದ್ರೆ ಡ್ರೈವ್ ಮಾಡೋವಾಗ ಫೋನ್ ಆನ್ಸರ್ ಮಾಡೋದೂ ತಪ್ಪೇ ತಾನೇ?’ ಎಂದು ಮತ್ತೆ ಕೆಣಕಿದ.

‘ಲೇಯ್ ಸುಮ್ನಿರೋ’

‘ಹೋಗ್ಲಿ ಒಂದು ದಮ್ ಆದ್ರೂ ಹೊಡೆಯನ ಬಾ ಈ ಕಡೆ’ ಎಂದು ಎಲ್ಲರಿಂದ ಸ್ವಲ್ಪ ದೂರ ಕರೆದುಕೊಂಡು ಹೋದ. ನಾನು ಒಲ್ಲದ ಮನಸ್ಸಿನಿಂದಲೇ ಸಿಗರೇಟ್ ಸೇದುತ್ತಿದ್ದಾಗ ಸಾಫ್ಟ್‌ವೇರ್ ಎಂಜಿನಿಯರ್ ಆದ ಸಂತು ಆ ಹುಡುಗಿಗೆ ಬುದ್ಧಿ ಕಲಿಸುವ ಒಂದು ಐಡಿಯಾ ಕೊಟ್ಟ. ಮುಂದೆ ಅದೇ ಐಡಿಯಾ ನನ್ನ ಬದುಕನ್ನೇ ಅಲುಗಾಡಿಸಿಬಿಡುತ್ತದೆ ಎನ್ನುವುದು ಗೊತ್ತಿರಲಿಲ್ಲ.

‘ನೋಡೋ ಈ ನಂಬರಿಗೆ ಒಂದು ಹೆಸರು ಕೊಟ್ಟು ಸ್ಪ್ಯಾಮ್ ಅಂತ ಸೇವ್ ಮಾಡಣ. ಆಗ ಟ್ರೂ ಕಾಲರ್‌ನಲ್ಲಿ ಇವಳ ಹೆಸರು ಹಾಗೇ ಡಿಸ್‌ಪ್ಲೇ ಆಗುತ್ತೆ. ಸ್ವಲ್ಪ ಮಜಾ ತಗೊಳೋಣ.’ ನಾನು ಸರಿ ಅಂತ ತಲೆ ಆಡಿಸಿದೆ.

ನನ್ನ ಮೊಬೈಲ್ ತೆಗೆದುಕೊಂಡು ಆ ನಂಬರನ್ನು ‘ಎಚ್ಡಿಎಫ್ಸಿ ಲೋನ್’ ಅಂತ ಸೇವ್ ಮಾಡಿದೆ. ಆದರೆ ಸಂತು, ‘ಲೋ ಇವ್ರಿಗೆಲ್ಲಾ  ಸ್ವಲ್ಪ ಕಂತ್ರಿ ಬುದ್ಧಿ ತೋರಿಸ್ಬೇಕಾಗುತ್ತೆ, ಬೇರೆ ಏನಾದ್ರೂ ಯೋಚಿಸು, ಆ ಹೆಸರು ನೋಡಿ ಜನ ತಾವಾಗೇ ಅವ್ಳಿಗೆ ಕಾಲ್ ಮಾಡೀ ಮಾಡೀ ಸಾಯಿಸ್ಬೇಕು, ‘ಕಾಲ್ ಮೀ ಫ಼ಾರ್ ಫ್ರೀ ಸೆಕ್ಸ್’ ಅಂತ ಇಡೋಣಾ?’ ಎಂದು ಹುರಿದುಂಬಿಸಿದ.

ನಾನು ಹೆದರಿ, ‘ಏಯ್ ಅಷ್ಟು ಕೆಟ್ಟದಾಗಿ ಬೇಡ ಕಣೋ, ಮತ್ತೆ ನಮ್ಮ ಬುಡಕ್ಕೇ ಬಂದ್ರೆ ಕಷ್ಟ. ಬಾರ್ ಡ್ಯಾನ್ಸರ್ ಇಶಿಕಾ ಅಂತಿಡಣ’ ಎಂದು ಹೇಳಿ ಹಾಗೇ ಸೇವ್ ಮಾಡಿದೆ. ಸಂತು ಕೂಡ ತನ್ನ ಫೋನಿನಲ್ಲಿ ಆ ನಂಬರನ್ನು ಅದೇ ಹೆಸರಿನಿಂದ ಸೇವ್ ಮಾಡಿಕೊಂಡ. 

*** 
ಇದೆಲ್ಲಾ ಆಗಿ ಒಂದು ವಾರವೂ ಆಗಿರಲಿಲ್ಲ; ನನ್ನ ಎರಡೂ ಫೋನುಗಳಿಗೆ, ಮನ್ವಿತಾ ಫೋನಿಗೆ, ಆಸ್ಪತ್ರೆ ಫೋನಿಗೆ ನಿಲ್ಲದೇ ಫೋನ್ ಬರತೊಡಗಿದವು. ಉತ್ತರಿಸುತ್ತಿದ್ದಂತೆ ಒಂದು ಹುಡುಗಿ, ‘ಹಲೋ ಸರ್, ನಾನು ಬಾರ್ ಡಾನ್ಸರ್ ಇಶಿಕಾ, ಯಾವಾಗ್ ಬರ್ಲಿ?’ ಎನ್ನುವ ಸಾಲನ್ನು ರೆಕಾರ್ಡ್ ಮಾಡಿದಂತೆ ನಿರ್ಭಾವುಕವಾಗಿ ಹೇಳತೊಡಗಿದಳು. ಆನಂತರ ಬೇರೆ ಹುಡುಗರು ಫೋನು ಮಾಡಿ ಅವಳೊಂದಿಗೆ ಅಸಭ್ಯವಾಗಿ ಮಾತನಾಡಿದ ವಾಯ್ಸ್ ರೆಕಾರ್ಡಿಂಗ್ ಕೇಳಿಸತೊಡಗಿದಳು. ಮನ್ವಿತಾಳಂತೂ ಫೋನ್ ರಿಂಗ್ ಆದೊಡನೆ ಕೆಟ್ಟಕನಸು ಕಂಡವಳಂತೆ ಬೇಸ್ತುಬೀಳತೊಡಗಿದಳು. ಕಡೆಗೆ ನಾನು ಎಲ್ಲಾ ಫೋನ್‌ಗಳನ್ನೂ ಸೈಲೆಂಟ್ ಮಾಡಿಡತೊಡಗಿದೆ. ಸಂತು ಅವನ ಬಳಿ ಇದ್ದ ಇನ್ನೊಂದು ಸಿಮ್ ಕಾರ್ಡ್ ತಂದು ಕೊಟ್ಟ. ಅದನ್ನು ಹಾಕಿದ ಒಂದೇ ದಿನಕ್ಕೆ ಅದೂ ಹೊಡೆದುಕೊಳ್ಳಲು ಶುರುಮಾಡಿತು. ಕೂತರೆ ನಿಂತರೆ ನೆಮ್ಮದಿಯಿಲ್ಲದೆ ಒದ್ದಾಡಿದೆವು.

ಸಂತು ಸಿಟ್ಟಿನಿಂದ, ‘ಆಫ್ಟರ್ ಆಲ್ ಒಬ್ಬ ಕಾಲ್‌ ಸೆಂಟರ್ ಹುಡುಗಿ, ತಲೆ ಒಡೆದ್ರೆ ಎರಡು ಅಕ್ಷರ ಇರಲ್ಲ,’ ಎಂದನು.

ನಾನು ಅಚ್ಚರಿಯಿಂದ ನೋಡಿದಾಗ, ‘ಅಂಥವರೇ ತಾನೇ ಇಂಥ ಕೆಲ್ಸಕ್ಕೆ ಸೇರಿಕೊಳ್ಳೋದು? ಮತ್ತೆ ನಮ್ಮ ಹಾಗೆ ಫಾರಿನ್‌ನಲ್ಲಿ ಓದಿ ಬಂದವರು ಇರ್ತಾರಾ?’ ಎಂದು ಸಮರ್ಥಿಸಿಕೊಂಡು, ‘ಅವಳು ಇಷ್ಟೆಲ್ಲಾ ಆಟ ಆಡ್ತಿದ್ರೂ ನಾವು ಹೆಂಗೋ ಸುಮ್ನೆ ಕೂತಿರೋಕ್ ಆಗುತ್ತೆ. ಅವ್ಳಿಗೆ ಸರಿಯಾಗ್ ಬುದ್ಧಿ ಕಲಿಸ್ಬೇಕು’ ಎಂದು ಗುಡುಗಿದ.

ಕೊನೆಗೆ ನಾವಿಬ್ಬರೂ ಪೋಲೀಸರ ಸಹಾಯದಿಂದ ಬ್ಯಾಂಕಿನ ಕಾಲ್ ಸೆಂಟರ್ ತಲುಪಿದೆವು. ವಿಚಾರಣೆ ಮಾಡಿದಾಗ ಆ ಹುಡುಗಿ ಒಂದು ವಾರದಿಂದ ಕೆಲಸಕ್ಕೆ ಬರುತ್ತಿಲ್ಲವೆಂದು ಗೊತ್ತಾಯಿತು. ಈಗ ನನಗೆ ಬರುತ್ತಿರುವ ಕರೆಗಳು ಬ್ಯಾಂಕಿನ ಫೋನ್‌ಗಳಿಂದ ಬರುತ್ತಿಲ್ಲವೆಂದೂ ಸಾಬೀತಾಯಿತು. ಅಲ್ಲದೇ ನಮಗೇ ನನ್ನ ಫೋನ್ ರೆಕಾರ್ಡಿಂಗ್ ಕೇಳಿಸಿ, ‘ಒಬ್ಬ ಹುಡುಗಿ ಜೊತೆ ಇಷ್ಟು ಕೆಟ್ಟದಾಗಿ ಮಾತಾಡಿರೋ ನಿಮ್ಮದೇ ತಪ್ಪು, ಹುಡುಗಿ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗುವುದಿಲ್ಲ’ ಎಂದುಬಿಟ್ಟರು. ನಾವು ಅಲ್ಲಿಂದ ಹೊರಬಿದ್ದ ಕೂಡಲೇ ನನ್ನ ಸೈಲೆಂಟ್ ಆಗಿದ್ದ ಮೊಬೈಲ್ ನೋಡಿಕೊಂಡಾಗ ಹತ್ತು ಮಿಸ್ಡ್ ಕಾಲ್ಸ್ ಇದ್ದವು; ಎಲ್ಲವೂ ಗೊತ್ತಿಲ್ಲದ ನಂಬರುಗಳಿಂದಲೇ.  
ನಾನು ನಡುಗಿಬಿಟ್ಟೆ!

ಕಾರಿನಲ್ಲಿ ಕುಳಿತು ಸ್ಟಾರ್ಟ್ ಮಾಡಿದೊಡನೆ ಬ್ಲೂಟೂತ್‌ಗೆ ಕನೆಕ್ಟ್ ಆದ ಫೋನ್ ಬೊಬ್ಬೆ ಹಾಕತೊಡಗಿತು. ನಾನು ಏನು ಮಾಡುವುದೆಂದು ಯೋಚಿಸುತ್ತಿದ್ದಾಗಲೇ ಸಂತು ಉತ್ತರಿಸಿದ. ಅದು ಅವಳದೇ ಎಂದು ಗೊತ್ತಾದೊಡನೆ, ‘ಅಮ್ಮಾ ತಾಯಿ, ತಪ್ಪಾಯಿತು, ಬಿಟ್ಟು ಬಿಡು, ಪ್ಲೀಸ್’ ಎಂದು ಗೋಗರೆದೆ.

ಸಂತು, ‘ಏಯ್ ನೀನ್ಯಾಕೋ ಸಾರಿ ಕೇಳ್ತಿಯಾ? ಇವಳಕ್ಕನ್ ... ಮಾಡ್ತೀನಿ ನೋಡ್ತಿರು’ ಎಂದು ಗುಡುಗಿದ. ನಾನು ಅವನ ಬಾಯಿಗೆ ಕೈ ಅಡ್ಡ ಹಿಡಿದೆ. 

ಆ ಹುಡುಗಿ, ‘ಬರೀ ಸಾರಿ ಕೇಳಿದ್ರೆ ಆಗಲ್ಲ. ನೀವು ಬೇರೆಯವರು ಚೀಪು ಅಂತ ಅಂದ್ಕೊಂಡಿರೋ ಕೆಲಸಾನ …’

‘ಹಲೋ ನಾವ್ ಬಂದಿದ್ವ್ಯಾ ನಿನ್ನತ್ರ ಲೋನ್ ಬೇಕೂಂತ? ನೀನೇ ತಾನೇ ಲೋನ್ ತಗೋಳಿ ಅಂತ ಬೇಡ್ಕೊಳ್ತಿದ್ದಿದ್ದು?’

‘ಹೌದು, ನಮ್ಮ ಟ್ರೇನಿಂಗೇ ಹಂಗಿರತ್ತೆ. ಬೇಡಿಕೊಳ್ಳೋದೇ ಸದಾ. ನಮ್ಮ ನಿಜವಾದ ಧ್ವನಿ ಯಾವುದಂತ ನಮಗೇ ಮಾರ್ತೋಗಿರುತ್ತೆ. ಖಾಲಿ ಹೊಟ್ಟೇನಲ್ಲಿ ಶಿಷ್ಟಾಚಾರ ಹೇಗೆ ಪಾಲಿಸಬೇಕೂಂತ ಎರಡೇ ದಿನದಲ್ಲಿ ಕಲಿತುಬಿಡ್ತಿವಿ. ಆದ್ರೂ ಮೂರು ಹೊತ್ತೂ ಸ್ಮಾರ್ಟ್ ಫೋನ್ ನೋಡ್ತಾನೇ ಬಿದ್ದಿರೋ ಹೊಟ್ಟೆ ತುಂಬಿದ್ ನೀವು, ಒಂದು ಹತ್ತು ಹದಿನೈದು ಸೆಕೆಂಡ್ ಉತ್ತರಿಸಿ, ಬೇಕೋ ಬೇಡವೋ ಅಂತ ಹೇಳೋಕಾಗಲ್ವ?’

‘ಆಗಲ್ಲ, ಏನೀಗ?’ ಸಂತು ಕಿರುಚಿದ.

‘ಸರಿ ಸುಮ್ನೆ ರಿಜೆಕ್ಟ್ ಮಾಡಿಬಿಡಬಹುದಲ್ವಾ?’

‌‘ಆ ಶಿಷ್ಟಾಚಾರದ ಟೋನ್ ಇದ್ಯಲ್ಲ, ಅದು ಎಷ್ಟು ಕಿರಿಕಿರಿ ಅಂತ ನಿಂಗೊತ್ತಾ?’

‘ನಂಗಿದು ಹೊಟ್ಟೆಪಾಡು’ ಅವಳ ಧ್ವನಿ ತಗ್ಗಿತು.

‘ಹಲೋ, ಈಗೇನು ದುಡ್ಡು ಬೇಕಾ? ನಮ್ಮ ಕಂಪನಿಲಿ ಕೆಲಸ ಕೊಡಿಸ್ಬೇಕಾ? ಬಾಡಿಗೆಗೆ ಮನೆ ಬೇಕಾ? ಮದುವೆ ಮಾಡಿಸ್ಬೇಕಾ? ಅದೆಂಗೆ ದುಡ್ಡಿರೋ ನಮ್ಮನ್ನು ಸುಲಿಬೇಕಂತ ಪ್ಲಾನ್ ಮಾಡಿದೀಯ ಹೇಳ್ಬಿಡು’ ಸಂತು ತಾಳ್ಮೆ ಕಳೆದುಕೊಳ್ಳುತ್ತಿದ್ದ.

‘ಯಾವುದೂ ಪುಕ್ಸಟ್ಟೆ ಸಿಗಲ್ಲಾಂತ ನಂಗೊತ್ತಿದೆ.’

‘ಆಹಾ ಈ ಧಿಮಾಕು ಬೇರೆ’ ಸಂತು ಗೊಣಗಿದ.

ನಾನು ಸಂತುಗೆ ಸುಮ್ಮನಿರಲು ಹೇಳಿ, ‘ನೋಡಮ್ಮ ಇಶಿಕಾ, ನಾನು ತಾಳ್ಮೆ ಕಳ್ಕೊಂಡಿದ್ದು ನಿಜ, ತಪ್ಪಾಗಿದೆ, ಸಾರಿ ಹೇಳಿದೀನಿ, ಪ್ಲೀಸ್ ಬಿಟ್ಟುಬಿಡು’ ಎಂದು ಗೋಗರೆದೆ.

‘ತಾಳ್ಮೆ ಕಳ್ಕೊಂಡ್ರ? ಯುಟ್ಯೂಬ್, ಸ್ಪಾಟಿಫೈ, ಅಮೆಜಾನ್, ನೆಟ್‌ಫ್ಲಿಕ್ಸ್, ಟಿವಿ ಷೋಸ್, ರೇಡಿಯೊ, ಫೇಸ್ಬುಕ್, ಇನ್‌ಸ್ಟಾಗ್ರಾಮ್ ಯಾವುದ್ರಲ್ಲಿರಲ್ಲ ಜಾಹೀರಾತುಗಳು? ಅವಾಗ್ಲೂ ಹಿಂಗೇ ಮಾಡ್ತೀರಾ? ನಿಮ್ಮ ಆಸ್ಪತ್ರೆ ಬಗ್ಗೆ, ನೀವು ಮಾಡೋ ಸಾಫ್ಟ್‌ವೇರ್ ಬಗ್ಗೆ ನೀವೇ ಪ್ರಚಾರಾನೂ ಮಾಡಿ ಮಾರಬೇಕು ಅಂದಿದ್ರೆ ಏನು ಮಾಡ್ತಿದ್ರಿ?’

‘ಲಿಸನ್, ನಮಗಿನ್ನೂ ಅಂತ ದುರ್ದಿನ ಬಂದಿಲ್ಲ. ಬಂದ್ರೂ ನಾವಿಂಗೆಲ್ಲಾ ಭಾನುವಾರ ಹೊತ್ತು ಜನ ಡ್ರೈವ್ ಮಾಡೋವಾಗ ಫೋನ್ ಮಾಡಿ ತಲೆ ತಿನ್ನಲ್ಲ ...’

‘ನೀವೆಲ್ಲಿದೀರಿ, ಏನು ಮಾಡ್ತಿರ್ತೀರಿ ಅಂತ ನಂಗೆಗ್ ಗೊತ್ತಿರತ್ತೆ? ದಿನಕ್ಕೆ ಇಷ್ಟು ಕಾಲ್ ಮಾಡ್ಬೇಕಂತ ನಮಗೆ ಟಾರ್ಗೆಟ್ ಇರುತ್ತೆ. ಅದಿಕ್ಕೇ ಜನ ಬಾಯಿಗೆ ಬಂದಂಗೆ ಬೈದ್ರೂ ... ’ ಅವಳ ಧ್ವವನಿ ಕಷ್ಟಪಟ್ಟು ಅಳು ನುಂಗುತ್ತಿರುವ ಹಾಗೆ ಒದ್ದೆಯಾಯಿತು. ಅಷ್ಟೆಲ್ಲ ಜನರಿಂದ ಬೈಸಿಕೊಂಡರೂ, ಈ ವಿಷಯವನ್ನು ಅವ್ಳು ಇಷ್ಟು ಸೀರಿಯಸ್ಸಾಗಿ ತಗೊಂಡಿದ್ದು ನನಗೆ ಅಚ್ಚರಿ ಅನಿಸಿತು. ಕಾಲೇಜಿನಲ್ಲಿ ಸೀನಿಯರ್ಸ್ ನಮಗೆ ಹುಡುಗಿಯರಿಗೆ ಫೋನ್ ಮಾಡಲು ಒತ್ತಡ ಹಾಕಿ ರೇಗಿಂಗ್ ಮಾಡುತ್ತಿದ್ದ ದಿನಗಳು ನೆನಪಾದುವು. ಆ ಕೆಟ್ಟ ಹಿಂಸೆಯ ದಿನಗಳ ನೆನಪಿನಿಂದಲೇ ಕಿವಿಯೆಲ್ಲ ಕೆಂಪಾಗಿ, ಬಿಸಿಯಾಗತೊಡಗಿದವು. ಆದ್ರೆ ಅದೇ ಬೇರೆ ಇದೆ ಬೇರೆ ಅನಿಸಿ, ‘ಸರಿ ಈಗೇನು ಮಾಡ್ಬೇಕು ಅಂತ ಹೇಳು... ಐ ಮೀನ್ ಹೇಳಿ ಮಿಸ್ ಇಶಿಕಾ’ ನಾನು ತೇಪೆ ಹಚ್ಚುವ ಕೆಲಸ ಮಾಡಿದೆ. 

‘ನೀವು ನಾನು ಸಾಕು ಅಂತ ಹೇಳೋವರ್ಗು ಕಾಲ್ ಸೆಂಟರ್ ಹುಡುಗನ ಕೆಲಸ ಮಾಡ್ಬೇಕು’

‘ವಾಟ್? ನಿಂಗೇನು ತಲೆ ಕೆಟ್ಟಿದೆಯಾ?’ ಸಂತು ಫೋನ್ ಕಟ್ ಮಾಡಿ, ಬ್ಲೂ ಟೂತ್‌ನಿಂದಲೂ ಫೋನ್ ಅನ್ನು ಡಿಸ್ಕನೆಕ್ಟ್ ಮಾಡಿದ. ಮರುಕ್ಷಣವೇ ಮತ್ತೆ ಕಾಲ್ ಬಂದಿತು. ನಾನು ನಡುಗುವ ಕೈಗಳಿಂದಲೇ ಉತ್ತರಿಸಿದೆ.

‘ಕೊನೇ ಸಲ ಕೇಳ್ತಿದೀನಿ’

‘ನೀನ್ ಬೇರೆ ಏನು ಕೇಳಿದ್ರೂ ಓಕೆ, ಆದ್ರೆ ಕಾಲ್ ಸೆಂಟರ್ ಹುಡುಗ್ರು ಕೆಲಸ ಮಾತ್ರ ಮಾಡಲ್ಲ’ ನಾನು ಪಟ್ಟು ಹಿಡಿದೆ.  

‘ಸರಿ, ಮುಂದೆ ನಿಮಗೇ ಗೊತ್ತಾಗುತ್ತೆ ಬಿಡಿ’ ಎಂದು ಎಚ್ಚರಿಸಿ ಫೋನ್ ಕಟ್ ಮಾಡಿದಳು.

ನಾನು ಸಿಟ್ಟಿನಿಂದ ತಲೆ ಆಡಿಸಿ, ಸುಮ್ಮನೆ ಮನೆ ಕಡೆ ಗಾಡಿ ಓಡಿಸಿದೆ. ಸಿಕ್ಕಾಪಟ್ಟೆ ಟ್ರಾಫಿಕ್ ಇದ್ದಿದ್ದರಿಂದ ನಾವು ಮನೆ ಸೇರುವಷ್ಟರಲ್ಲಿ ಸಂಜೆಯಾಗಿಬಿಟ್ಟಿತ್ತು. ಸಂತು ಫ್ರಿಡ್ಜ್‌ನಿಂದ ತಾನಾಗಿಯೇ ಬಿಯರ್ ತೆಗೆದುಕೊಂಡು ಒಂದೂ ಮಾತಾಡದೇ ಕುಡಿಯುತ್ತಾ ಕುಳಿತ. 
ಮನ್ವಿತಾ ಎಲ್ಲೋ ಹೊರಗೆ ಹೋಗಿದ್ದಳು ಅನ್ನಿಸ್ತು. ನನ್ನ ಫೋನ್ ತೆಗೆದು ನೋಡಿದರೆ ಅವಳ ಹದಿನೈದು ಮಿಸ್ಡ್ ಕಾಲ್ಸ್ ಇದ್ದವು. ನಾನು ಹೆದರಿ ತಿರುಗಿ ಫೋನ್ ಮಾಡಿದೆ, ಉತ್ತರವಿಲ್ಲ!

ಸಂತು ಸಮಾಧಾನ ಮಾಡಿದ ಮೇಲೆ ಬಿಯರ್ ಕುಡಿಯುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೇ ಮನ್ವಿತಾ ಫೋನ್ ಬಂತು. ‘ಅಭಿ, ಎಲ್ಲಿದೀಯ? ಫೋನ್ ಕೆಟ್ಟೋಗಿದೆ ಅದಿಕ್ಕೆ ಇಮೈಲ್ ಮಾಡ್ತಿದೀನಿ, ಅರ್ಜೆಂಟ್ ಜಯನಗರ ಮೆಟ್ರೋ ಹತ್ರ ಬಾ ಅಂತ ಇಮೇಲ್ ಮಾಡಿದ್ಯಲ್ಲ?’

‘ನಾ ಯಾವಾಗ್ ನಿಂಗ್ ಇಮೇಲ್ ಮಾಡಿದೆ?’

‘ಅಯ್ಯೋ ನೀನೇ ಮಾಡಿದ್ದು, ಬೇಕಾದ್ರೆ ಸ್ಕ್ರೀನ್ ಶಾಟ್ ಕಳಿಸ್ತೀನಿ ಇರು’ ಎಂದು ಕಳಿಸಿದಳು.

ಸ್ವಲ್ಪ ಹೊತ್ತು ಯೋಚಿಸಿದ ಸಂತುಗೆ ಇಶಿಕಾ ಏನು ಮಾಡ್ತಿದ್ದಾಳೆ ಎನ್ನುವುದು ಗೊತ್ತಾಯಿತು. ‘ಅಭಿ, ಇವಳು ತಲೆ ಒಡೆದ್ರೆ ಎರಡು ಅಕ್ಷರ ಇಲ್ದೆ ಇರೋ ಎಸ್ಸೆಸ್ಸೆಲ್ಸಿ, ಪಿಯುಸಿ ಫೇಲ್ ಹುಡುಗಿ ಅಲ್ಲ. ನಿನ್ನ ಫೋನ್ ನಂಬರಿಗೆ ಲಿಂಕ್ ಆಗಿರೋ ನಿನ್ನ ಇಮೇಲ್ ಅಕೌಂಟ್ ಹ್ಯಾಕ್ ಮಾಡಿದಾಳೆ ಅನ್ಸುತ್ತೆ.’

ಅವನು ಹೇಳಿದ್ದನ್ನು ಯೋಚಿಸುತ್ತಿರುವಾಗಲೇ, ನನ್ನ ಕೊಲೀಗ್ ನತಾಶಾ ಫೋನ್ ಮಾಡಿದಳು. ‘ಅಭಿ, ಏನಿದೆಲ್ಲಾ? ನೀನು ಇಂಥವನು ಅಂದುಕೊಂಡಿರಲಿಲ್ಲ’ ಎಂದು ಕೇಳಿದಳು.

‘ನತಾಶಾ, ಏನಾಯ್ತು?’

‘ಏನಾಯ್ತ? ಈ ಮೆಸೇಜ್ ನೀನೇ ತಾನೇ ಕಳಿಸಿರೋದು?’ ಎಂದು ಒಂದು ಮೆಸೇಜ್ ಫಾರ್ವರ್ಡ್ ಮಾಡಿ, ‘ಡೋಂಟ್ ಎವರ್ ಶೋ ಮಿ ಯುವರ್ ಫೇಸ್’ ಎಂದು ಚೀರಿ ಫೋನ್ ಕಟ್ ಮಾಡಿದಳು. ನಾನು ಕುಸಿದು ಕುಳಿತು ಸಂತು ಎದುರಿಗೇ ಅದನ್ನು ನೋಡಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. ಅದು ನನ್ನದೇ ಫೋನ್‌ನಿಂದ ನನಗೇ ಗೊತ್ತಿರದೆ ಹೋಗಿರುವ ಮೆಸೇಜ್ ಆಗಿತ್ತು!

‘ಅಭಿ, ಏನೋ ಇದು ನಂಗೂ ಹೇಳಿಲ್ಲ ನೀನು?’ ಸಂತು ಅಚ್ಚರಿಯಿಂದ ಕೇಳಿ ಚುಡಾಯಿಸಿದ.

‘ಅಯ್ಯೋ ಹಾಗೇನು ಇಲ್ಲ ಕಣೋ. ನತಾಶಾ ಏನೋ ಒಳ್ಳೇ ಪೀಸ್, ಆಸ್ಪತ್ರೆಯಲ್ಲಿ ಅವಳನ್ನು ನೋಡಿದ್ರೆ ಏನೇನೋ ಅನ್ನಿಸ್ತಾ ಇದ್ದಿದ್ದು ನಿಜ, ಅವಳ ಕೆಲವು ಫೋಟೋಸ್ ಸೇವ್ ಮಾಡ್ಕೊಂಡಿದೀನಿ, ಅವನ್ನು ನೋಡ್ಕೊಂಡು ಒಂದೆರಡು ಸಲ ... ’

‘ಅಯ್ಯೋ ಹಲ್ಕಾ ನನ್ ಮಗ್ನೇ.’

‘ಹೇ ಆದ್ರೆ ಯಾವತ್ತೂ ಅವಳಿಗೆ ಅಂಥದ್ದೆಲ್ಲ ಏನೂ ಹೇಳಿಲ್ಲ ಕಣೋ. ಅದ್ರಲ್ಲೂ ಈ ಮೆಸೇಜ್‌ನಲ್ಲಿರೋ ಕೆಟ್ಟ ಕೆಟ್ಟ ಭಾಷೆನಲ್ಲಿ...’ ನನ್ನ ಕಣ್ಣುಗಳು ನನಗೇ ಅರಿವಿಲ್ಲದೇ ನೀರಾಡಿದವು. ‘ಅಲ್ವೋ ಒಂದು ಸಣ್ಣ ವಿಷಯಕ್ಕೆ ಈ ಸಿಲ್ಲಿ ಹುಡುಗಿ ಹೀಗೆಲ್ಲಾ ತೊಂದರೆ ಕೊಡಬಹುದಾ?’

‘ನೋಡೋ ಒಂದೇ ಬೈಗುಳ ಆದ್ರೂ ಯಾರ್ ಯಾರಿಗ್ ಹೆಂಗೆ ನಾಟುತ್ತೋ ಯಾವನಿಗ್ಗೊತ್ತು?’ ನಾನು ಒಂದು ಕ್ಷಣ ಬೆಚ್ಚಿದೆ. ‘ಅಭಿ ಅವಳು ನಿನ್ನ ಫೋನ್ ಹ್ಯಾಕ್ ಮಾಡಿದಾಳೆ, ಅದ್ರಲ್ಲಿರೋ ಫೋಟೋಸ್ ... ಮ್ಯಾನ್ ಐ ವಾಂಟ್ ಟು ವರ್ಕ್ ವಿತ್ ಹರ್’ ಸಂತು ಆಗಲೇ ಅವಳ ಬುದ್ಧಿವಂತಿಕೆಗೆ ಮಾರುಹೋಗಿದ್ದ.

‘ಬಟ್ ನಾನು ಆ ಫೋಟೋಸ್ ಹೈಡ್ ಮಾಡಿದ್ದೆ ಕಣೋ.’

‘ಇಷ್ಟೆಲ್ಲಾ ಮಾಡ್ತಿರೋಳಿಗೆ ಅದೇನ್ ಮಹಾ ದೊಡ್ಡದು? ಈಗೇನು ಮಾಡೋದಂತ ಯೋಚಿಸು ಅಭಿ, ಇದು ಹೀಗೇ ಮುಂದುವರೆದ್ರೆ.’

ಅಷ್ಟರಲ್ಲಿ ಇಶಿಕಾ ಫೋನ್ ಮಾಡಿದಳು. ‘ಇದೆಲ್ಲಾ ಬರಿ ಸ್ಯಾಂಪಲ್. ಇನ್ನೂ ಒಪ್ಪಲಿಲ್ಲ ಅಂದ್ರೆ, ಆಸ್ಪತ್ರೆನಲ್ಲಿ ಎರಡು ವರ್ಷಗಳಿಂದ ನೀವು ಪೇಶಂಟ್ಸ್ ಹತ್ರ ಕ್ಯಾಶ್ ಇಸ್ಕೊಂಡು ಟ್ಯಾಕ್ಸ್ ಕಟ್ಟದೇ ಇರೋದು, ಬೇನಾಮಿ ಆಸ್ತಿ ಮಾಡಿರೋದು, ಟಾರ್ಗೆಟ್ ಮೀಟ್ ಮಾಡೋಕೆ ಸುಮ್ ಸುಮ್ನೆ ಸರ್ಜರಿ ಮಾಡಿಸಿ ಅಂತ ಹೇಳಿ ...’

‘ಸ್ಟಾಪ್ ಇಟ್ ಇಶಿಕಾ, ಪ್ಲೀಸ್, ಐ ಯಾಮ್ ಬೆಗ್ಗಿಂಗ್ ಯು, ನೀನ್ ಹೇಳಿದಂಗೇ ಮಾಡ್ತೀನಿ’ ನನ್ನೆಲ್ಲಾ ಹಮ್ಮುಗಳನ್ನು ಬದಿಗಿಟ್ಟು, ಒಬ್ಬ ಕಾಲ್ ಸೆಂಟರ್ ಹುಡುಗಿಗೆ ನಾನು ಶರಣಾಗಿದ್ದೆ!

***

ಈಗ ಮನೆಯಲ್ಲಿ ಕುಳಿತು ಇಶಿಕಾ ಕೊಡುವ ನಂಬರುಗಳಿಗೆ ಕಾಲ್ ಮಾಡುತ್ತಿದ್ದೇನೆ. ದಿನಕ್ಕೆ ಒಂದು ನೂರು ಕಾಲ್ಸ್ ಮಾಡಿದರೂ ಒಬ್ಬರೂ ಸರಿಯಾಗಿ ಮಾತಾಡುವುದಿಲ್ಲ, ನನಗಿಂತಲೂ ಕೆಟ್ಟದಾಗಿ ಬೈಯ್ಯುತ್ತಾರೆ, ನಾನು ಗುಡ್ ಮಾರ್ನಿಂಗ್ ಹೇಳುವ ಟೋನ್‌ನಲ್ಲೇ ಇದು ಬೇಡದ ಕಾಲ್ ಅಂತ ಕಟ್ ಮಾಡುತ್ತಾರೆ, ಒಬ್ಬ ಪಾರ್ಟಿಯೂ ಲೋನ್ ಬೇಕು ಅಂತ ಆಸಕ್ತಿ ತೋರಿಸುವುದಿಲ್ಲ. ಹಾಗೇನಾದರೂ ಒಪ್ಪಿ ಒಂದಾದರೂ ಲೋನ್ ಅಪ್ಲಿಕೇಶನ್ ಬಂದ ದಿನ ನನ್ನ ಶಾಪ ವಿಮೋಚಚನೆಯಂತೆ!

***

ಅಂದು ಸಂತು ಮನೆಗೆ ಬಂದು ನನ್ನ ಅವಸ್ಥೆ ನೋಡಿ ಮರುಗಿದ.

‘ಸಂತು ಏನಾದರೂ ಮಾಡಿ ಅವಳನ್ನ ಪೊಲೀಸ್‌ಗೆ ಹಿಡುದ್ಕೊಡೋ, ಅಷ್ಟೆಲ್ಲಾ ಕಂಪ್ಯೂಟರ್ ಓದ್ಕೊಂಡಿದೀಯ’ ನಾನು ದುಃಖ ತೋಡಿಕೊಂಡೆ.

‘ನಾನು ಅವಳ ಜಾತಕವನ್ನೇ ಜಾಲಾಡಿ ತಂದಿದೀನಿ. ಅವಳ ಹೆಸರು ಇಶಿಕಾ ಅಲ್ಲ, ದೇವೀರಮ್ಮ. ಒಂದು ಸಣ್ಣ ಊರಿನಿಂದ ಬಂದಿದಾಳೆ. ಓದಿನಲ್ಲಿ ಪರ್ವಾಗಿಲ್ಲ, ಕಂಪ್ಯೂಟರ್ ಸೈನ್ಸ್ ತಗೊಂಡು ಮೂರು ಸೆಮಿಸ್ಟರ್ ಎಂಜಿನಿಯರಿಂಗ್ ಓದಿ ಡ್ರಾಪ್ಔಟ್ ಆಗಿದಾಳೆ. ಇನ್ನೂ ಮೂರು ಜನ ತಂಗಿಯರು, ಒಬ್ಬ ತಮ್ಮ ಇದಾನೆ. ಊರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸಕ್ಕಾಗಲ್ಲಾಂತ ಎಲ್ಲಾ ಬೆಂಗಳೂರಿಗೆ ಬಂದು ಸೇರ್ಕೊಂಡಿದಾರೆ. ಅವರಪ್ಪ ಏನ್ ಮಾಡ್ತಿದಾನೇಂತ ಹೇಳಿದ್ರೆ ನಿಂಗೆ ತಲೆ ಕೆಟ್ಟೋಗುತ್ತೆ ಅಷ್ಟೇ.’

‘ಏನು?’ ನನಗೆ ಗೆಸ್ಸಿಂಗ್ ಗೇಮ್ಸ್ ಆಡಲು ಯಾವುದೇ ಉತ್ಸಾಹವಿರಲಿಲ್ಲ.

‘ಇಶಿಕಾ ಬೇರೆ ಯಾರೂ ಅಲ್ಲ, ನಿಮ್ಮನೆ ಕಾರ್ ತೊಳೆಯೋ ಮಾದೇವಪ್ಪನ ಮಗಳೇ’ ನಾನು ಬೆಚ್ಚಿದೆ.

‘ನಿಜವಾಗ್ಲೂ? ಅಂದ್ರೆ ನನ್ನ ಟಾರ್ಗೆಟ್ ಮಾಡಿಕೊಂಡು ಹೀಗೆ ...’

‘ಅದನ್ನೇ ಈಗ ನೀನು ಹೇಳ್ಬೇಕು. ಸರಿಯಾಗಿ ನೆನಪುಸ್ಕೊಂಡು ಹೇಳು, ಅವ್ನಿಗೇನಾದ್ರೂ ತೊಂದ್ರೆ ಕೊಟ್ಟಿದ್ಯಾ? ಅವನೇನಾದ್ರು ನಿಂಗೆ ಅಡ್ವಾನ್ಸ್ ಕೇಳಿದ್ನಾ? ಎಕ್ಸ್ಟ್ರಾ ದುಡ್ಡು ಕೇಳಿದ್ನಾ? ಮಗಳಿಗೆ ಕೆಲಸ ಕೊಡಿಸಿ ಅಂದ್ನ?’

ನನಗೆ ಮೈಯೆಲ್ಲಾ ಉರಿದುಬಿಟ್ಟಿತು. ಒಬ್ಬ ಕಾರ್ ತೊಳೆಯೋವನ ಮಗಳು, ನನಗೆ ಹೀಗೆಲ್ಲಾ ತೊಂದ್ರೆ ಕೊಡೋದು ಅಂದ್ರೆ? ನಾನು ‘ಬಾರೋ, ಆ ನನ್ಮಗ ಮಾದೇವಪ್ಪನ್ಗೆ ಗ್ರಹಚಾರ ಬಿಡಿಸಣ’ ಎಂದು ರೋಷದಿಂದ ಕೂಗಿ ಎದ್ದು ನಿಂತೆ.

‘ಹಲೋ ಹಲೋ, ಒಬ್ಬ ಡಾಕ್ಟರ್ ಆಗಿ ಇಷ್ಟೆಲ್ಲಾ ಸಿಟ್ಟು ಒಳ್ಳೆದಲ್ಲಮ್ಮ, ಕುತ್ಕೋ ಇಲ್ಲಿ. ಅವ್ಳು ಯಾಕೆ ಹಿಂಗೆ ಮಾಡಿದ್ಲು, ಅಂತ ತಿಳ್ಕೋಬೇಕು ಮೊದ್ಲು. ಇದನ್ನೆಲ್ಲಾ ಅವರಪ್ಪನಿಗೆ ಹೇಳಿ ಕೇಳಿ ಮಾಡಿರಲ್ಲ ಬಿಡು. ಅವನನ್ನು ಹಿಡಿದ್ರೆ ಏನೂ ಗೊತ್ತಾಗಲ್ಲ. ಅವಳನ್ನ ನೇರವಾಗಿ ಮಾತಿಗೆ ಕರೆದರೆ ಬರಲ್ಲ, ಬೇರೆ ಏನಾದ್ರೂ ಉಪಾಯ ಮಾಡು ...’

***

ಮರುದಿನ ಬೆಳಿಗ್ಗೆ ಕಾರು ತೊಳೆಯಲು ಬಂದ ಮಾದೇವಪ್ಪನನ್ನು ಹಿಡಿದು ಗ್ಯಾರೇಜಿನಲ್ಲಿ ಕೂರಿಸಿಕೊಂಡೆ. ಊಟ ತಿಂಡಿ, ಜೊತೆಗೆ ವಿಸ್ಕಿ ಕೂಡ ಕುಡಿಸಿ, ಸಂಜೆಯಾದರೂ ಮನೆಗೆ ಹೋಗದಂತೆ ನೋಡಿಕೊಂಡೆ. ಕೊನೆಗೆ ಸಂಜೆ ಇಶಿಕಾಳ ಫೋನ್ ಬಂತು.

‘ಸರ್, ನಾನು ಮಾದೇವಪ್ಪನ ಮಗಳು, ನಮ್ಮಪ್ಪ ಬೆಳಿಗ್ಗೆ ನಿಮ್ಮನೆಗೆ ಕೆಲಸಕ್ ಬಂದಿದ್ರಾ?’ ಎಂದು ಆತಂಕದಿಂದ ಕೇಳಿದಳು. ಅವಳ ಬಗ್ಗೆ ನಮಗೆ ಗೊತ್ತಾಗಿರುವುದು ಅವಳಿಗೆ ಗೊತ್ತಾದಂತಿರಲಿಲ್ಲ.

‘ಹೂಂ, ನಿಮ್ಮಪ್ಪ ಇವತ್ತು ಕೆಲಸಕ್ಕೇನೋ ಬಂದಿದ್ದ, ಆದ್ರೆ ಅವ್ನಿಗೆ ಹುಷಾರಿಲ್ಲ. ನಾನೇ ಔಷಧಿ ಕೊಟ್ಟು ಇಲ್ಲೇ ನಮ್ಮ ಗ್ಯಾರೇಜಿನಲ್ಲಿ ಮಲುಗ್ಸಿದೀನಿ, ಬಂದು ಕರ್ಕೊಂಡು ಹೋಗಮ್ಮ’ ಎಂದು ಹೇಳಿ ಫೋನ್ ಕಟ್ ಮಾಡಿ, ಸಂತುಗೆ ಬರಲು ತಿಳಿಸಿದೆ.

***

ಗ್ಯಾರೇಜಿನಲ್ಲಿ ಕುಡಿದು ಮತ್ತಿನಲ್ಲಿದ್ದ ಅವಳಪ್ಪನಿಗೆ ಏನು ನಡೆಯುತ್ತಿದೆಯೆನ್ನುವುದರ ಪರಿವೆಯಿರಲಿಲ್ಲ. ಆರಾಮಾಗೇ ಇದ್ದ ಅಪ್ಪನನ್ನು ನೋಡಿ ಇಶಿಕಾಗೆ ತಾನು ಸಿಕ್ಕಿಕೊಂಡಿರುವುದು ಅರಿವಾಗಿ ಕೊನೆಗೂ ನಮ್ಮೆದುರು ಸೋತು ಕುಳಿತಿದ್ದಳು. ಆದರೂ ಅವಳ ಮುಖದ ಮೇಲೆ ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ. ಅಷ್ಟು ದಿನಗಳ ಒದ್ದಾಟವನ್ನು ಸಹಿಸಿಕೊಂಡಿದ್ದ ನನಗೆ ಅವಳನ್ನು ನೋಡಿದೊಡನೆ ಉಕ್ಕಿ ಬಂದ ಸಿಟ್ಟನ್ನು ಇನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ.

‘ಯು ಬ್ಲಡಿ ಬಿಚ್, ಯಾಕ್ ಹಿಂಗ್ ಮಾಡಿದೆ ಹೇಳು? ನಾನೇನು ಮಾಡಿದ್ದೆ ನಿಂಗೆ?’ ಒಂದು ಕ್ಷಣ ಬೆಚ್ಚಿದ ಅವಳ ಮುಖದಲ್ಲಿ ಇನ್ನು ತನ್ನ ಅಪ್ಪ ಕೂಡ ಕೆಲಸ ಕಳೆದುಕೊಳ್ಳುವನೇ ಎನ್ನುವ ಚಿಂತೆಯೇ ಹೆಚ್ಚು ಇದ್ದಂತಿತ್ತು.  ಏನು ಹೇಳುವುದೆಂದು ತೋಚದೆ ಕುಳಿತಿದ್ದವಳು, ‘ನಮ್ಮಪ್ಪ ಹದಿನೈದು ಸಾವಿರ ಅಡ್ವಾನ್ಸ್ ಕೇಳಿದ್ರು ನಿಮ್ಮತ್ರ...’

‘ಓಹೋ, ಅವನು ಕೇಳಿದ್ ತಕ್ಷಣ ಕೊಟ್ಟುಬಿಡೋಕೆ ಇಲ್ಲೇನು ದುಡ್ಡಿನ ಮರ ನೆಟ್ಟಿದೀವ? ನಾವೂ ಕಷ್ಟ ಪಟ್ಟು, ಪ್ರಾಮಾಣಿಕತೆಯಿಂದ ದುಡಿ ... ’ ನಾನಿನ್ನೂ ಮಾತು ಮುಗಿಸಿರಲಿಲ್ಲ, ಆಗಲೇ ಸರಕ್ಕನೆ ತಲೆ ಎತ್ತಿ ನನ್ನನ್ನೇ ದುರುಗುಟ್ಟಿ ನೋಡಿದಳು.

ಸಂತು ಸಿಟ್ಟಿನಿಂದ, ‘ಅಡ್ವಾನ್ಸ್ ಕೊಡಲಿಲ್ಲ ಅಂತ ಹೀಗೆ ಸೇಡು ತೀರಿಸ್ಕೊಂಡ್ಯ?’ ಕೇಳಿದ.

‘ಇಲ್ಲ, ದುಡ್ಡು ಕೊಡಲಿಲ್ಲಾಂತ ಬೇಜಾರಾಗಲಿಲ್ಲ, ಕೈಲಾಗದಿದ್ಮೇಲೆ ಕಾಲೇಜಿಗೆಲ್ಲಾ ಯಾಕೆ ಸೇರಿಸ್ತೀಯ, ಎಲ್ಲೋ ಒಂದ್ಕಡೆ ಕೆಲ್ಸಕ್ಕೆ ಸೇರಿಸು ಅಂತ ನೀವೇ ತಾನೇ ಅಪ್ಪನಿಗೆ ಹೇಳಿದ್ದು?’

‘ಹೌದು ಅದ್ರಲ್ಲಿ ತಪ್ಪೇನಿದೆ?’ ನಾನು ಸಮರ್ಥಿಸಿಕೊಂಡೆ.

‘ತಪ್ಪೇನಿಲ್ಲ, ನೀವು ಹೇಳಿದ ಹಾಗೇ ನಾನು ಎಲ್ಲೋ ಒಂದ್ಕಡೆ ಕೆಲ್ಸಕ್ಕೆ ಸೇರ್ಕೊಂಡೆ.’ ಅವಳು ಅಪ್ಪನ ಕಡೆ ನೋಡಿ, ‘ಅಲ್ನೋಡಿ, ಪುಕ್ಸಟ್ಟೆ ಸಿಗ್ತಿದೆ ಅಂತ ಮೈ ಮೇಲೆ ಎಚ್ಚರ ಇಲ್ದೆ ಹೇಗೆ ಕುಡಿದು ಬಿದ್ದಿದಾನೆ ನಮ್ಮಪ್ಪ. ಕೈಗೆ ದುಡ್ಡು ಸಿಕ್ರೆ ಬಿಡಲ್ಲ, ಕುಡಿದು ಕುಡಿದೂ ಹಾಳಾಗ್ತಾನೇಂತ ಇವನು ಕೆಲಸ ಮಾಡೋ ಎಲ್ಲ ಮನೆಗಳಲ್ಲೂ ನಾನು ಗೂಗಲ್ ಪೇ ಮಾಡಿ ಅಂತ ಕೇಳ್ಕೊಂಡಿದ್ದೆ. ನೀವೂ ಮೊದ್ಲು ಹಾಗೇ ಮಾಡ್ತಿದ್ರಿ. ಈಗ ಮೂರು ತಿಂಗಳಿಂದ...’

‘ನಂಗೇನು ಗೊತ್ತು ನಿಮ್ಮನೇಲಿ ಹಿಂಗೆಲ್ಲಾ ಇದೇಂತ? ಅವನೇ ಅತ್ತೂ ಕರೆದು, ಮನೇಲಿ ಹೆಂಡ್ತಿ, ಮಕ್ಳು ನೆಮ್ಮದಿಯಾಗ್ ಕುತ್ಕೊಳೋಕ್ ಬಿಡಲ್ಲ, ವಯಸ್ಸಾಗಿದ್ರೂ ಕೆಲಸ ಮಾಡು ಅಂತ ಕಳಿಸ್ತಾರೆ, ಆಮೇಲೆ ಒಂದು ರೂಪಾಯಿನೂ ಕೈಗೆ ಸಿಗದಂಗೆ ಕಿತ್ಕೋತಾರೆ ಅಂತೆಲ್ಲಾ ...’

‘ಅವ್ನು ಹೇಳಿದ, ನೀವು ನಂಬಿದ್ರಿ. ಅದೇ, ಏನೂ ಗೊತ್ತಿಲ್ಲದೇ ಇದ್ರೂ ಒಂದೇ ಸಲಕ್ಕೆ ನಾವು ಬಡವರೆಲ್ಲ ಹಿಂಗೇ ಅಂತ ಜಡ್ಜ್ ಮಾಡ್ಬಿಡ್ತೀರಲ್ಲ?’ ಅವಳ ಕಣ್ಣುಗಳಲ್ಲಿ ರೋಷ ಉಕ್ಕುತ್ತಿತ್ತು.

‘ಅಷ್ಟಕ್ಕೇ ಹೀಗೆಲ್ಲಾ ನಮಗೆ ಹಿಂಸೆ ಕೊಡೋದಾ, ನಿನ್ನಾ ...’ ನಾನು ಹಲ್ಲು ಮಸೆದೆ.  

‘ಇಲ್ಲ.’

‘ಮತ್ತೆ ಯಾಕಿಂಗೆ ಮಾಡಿದೇಂತ ಹೇಳು’ ನಾನು ಹುಚ್ಚನಾಗುತ್ತಿದ್ದೆ.

‘ಪ್ರತಿದಿನ ಜನರಿಂದ ಬೈಸ್ಕೊಳ್ಳುವ ನನಗೆ ಅವತ್ತು ಕೂಡ ಅಂಥ ವ್ಯತ್ಯಾಸವೇನೂ ಆಗಿರಲಿಲ್ಲ. ಅದು ನೀವೇ ಅಂತ ಕೂಡ ಗೊತ್ತಿರ್ಲಿಲ್ಲ. ಆದ್ರೆ ನೀವು ನನ್ನ ಹೆಸರನ್ನು ಹಾಗೆ ಹಾಳು ಮಾಡಿದಾಗ ನಿಮ್ಮ ಬಗ್ಗೆ ಹುಡುಕುತ್ತಾ ಹೋದೆ. ದುಡ್ಡಿರೋ ನಿಮಗೆ ತಾಳ್ಮೆ ಕಳೆದುಕೊಳ್ಳೋದು ಎಷ್ಟು ಸುಲಭ. ಆದ್ರೆ ಹಸಿದಿರೋ ನಮಗೆ ಆ ಆಪ್ಶನ್ ಇಲ್ಲ. ಕುಡುಕ ಅಪ್ಪ, ಬಡತನ, ತಂಗಿ ತಮ್ಮಂದಿರ ಜವಾಬ್ದಾರಿ, ಅರ್ಧಕ್ಕೇ ಓದು ನಿಲ್ಲಿಸಬೇಕಾಯ್ತಲ್ಲ ಅನ್ನೋ ನಿರಾಸೆ, ಎಷ್ಟು ಕಷ್ಟ ಪಟ್ಟು ಕೆಲಸ ಮಾಡಿದ್ರೂ ಅಷ್ಟೇ ಸಂಬಳ, ಬರೀ ಅವಮಾನ, ಇದೆಲ್ಲಾ ಒಂದಿನ ಸರಿಹೋಗುತ್ತೆ ಅನ್ನೋ ಯಾವ ಹೋಪ್ಸ್ ಕೂಡ ಇಲ್ಲ. ಇದೆಲ್ಲದ್ರಿಂದ ತಲೆ ಕೆಟ್ಟೋಗಿತ್ತು. ನಂಗೂ ಫೇಕ್ ಸ್ಟೈಲ್ ಮಾಡ್ತಾ, ನಾನಿರುವುದೇ ನಿಮಗಾಗಿ ಅಂತ ಸುಳ್ಳು ಹೇಳಿ ಹೇಳೀ ಸಾಕಾಗಿತ್ತು.  ಅದಿಕ್ಕೆ ಸ್ವಲ್ಪ ಮಜಾ ತಗೊಂಡೆ ಅಷ್ಟೇ...’ ಅವಳು ನಮ್ಮ ಮುಂದಿನ ಉತ್ತರಕ್ಕೂ ಕಾಯದೆ, ತನ್ನಪ್ಪನ ಕೈ ಹಿಡಿದು ಏಳಿಸಿಕೊಂಡು ನಡೆದು ಹೋಗೇಬಿಟ್ಟಳು.  

***    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT