ಬಸ್ಸಿನಿಂದ ಇಳಿದು ಸೀದಾ ಸ್ಟ್ಯಾಂಡಿನಲಿ ಹಾಕಿದ್ದ ಗಾಡಿಯನ್ನು ತೆಗೆದು ಕಿಕ್ಕರು ಒದ್ದೆ. ಕ್ಷಣಾರ್ಧದಲಿ ಮನೆಯ ಗೇಟಿನ ಚಿಲಕ ತೆಗೆದು ಒಳಹೋದೆ. ಮನಸ್ಸು ತೀರಾ ಹದಗೆಟ್ಟಂತೆ ಭಾಸವಾಗಿತ್ತು. ನಾಳೆ ಏನೋ ಎತ್ತೋ? ಒಂದು ವೇಳೆ ನಾನಂದುಕೊಂಡಂತೆ ಆಗದೇ ಹೋದರೆ ಮುಂದಿನ ಭವಿಷ್ಯವೇನು? ನೆನಪಿಸಿಕೊಂಡರೆ ನರಕದ ಬಾಗಿಲು ತಟ್ಟಿ ಬಂದ ಅನುಭವವಾಗುತ್ತಿತ್ತು.

ಮಹಡಿಯ ಮೆಟ್ಟಿಲು ಹತ್ತಲು ಕಾಲುಗಳು ಸ್ವಾದ ಕಳೆದುಕೊಂಡಂತೆ ನಡುಗಲಾರಂಭಿಸಿದವು.ಕಣ್ಣುಗಳು ತಿರುಗಿ ಮಂಜಾದಂತೆ ಸುತ್ತಲಾರಂಭಿಸಿದವು. ‘ಜೀವನದಲ್ಲಿ ನೀನು ಉದ್ಧಾರ ಆಗಲ್ವೋ’ ಎಂದು ಅಪ್ಪ ಆ ದಿನ ಹಾಕಿದ್ದ ಶಾಪವೋ ಏನೋ ನನ್ನ ಉದ್ಧಾರವೆಷ್ಟಾಗಿದೆ ಎನ್ನುವ ಪ್ರಶ್ನೆಯೊಂದು ತಲೆಯೊಳಗೆ ಪಟ್ಟನೆ ಹೋಗಿ ಒಂದು ಸುತ್ತು ಸುತ್ತಿ ಬಂದ ಹಾಗಾಯಿತು. ಇಲ್ಲಾ, ಅವಳನ್ನು ಈ ಸಾರಿ ರಾತ್ರಿ ಪೂರ ಹೇಗಾದರು ಮನವೊಲಿಸಬೇಕು. ನಾಳೆ ಏನಾದರು ಕೋರ್ಟಿನಲಿ ಅವಳು ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿಬಿಟ್ಟರೆ? ಕಥೆ ಅಲ್ಲಿಗೆ ಮುಗಿಯಿತು. ಅವಳಿಗೆ ಹೇಗಾದರು ಮನವೊಲಿಸಿ ದಾರಿ ಸುಗಮ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಾ ಬಾಗಿಲ ಬಳಿಯೇ ನಿಂತೆ. ನಾನು ಕೆಲ ಹೊತ್ತಿನಿಂದ ಅಲ್ಲೇ ನಿಂತಿರುವುದನ್ನು ನೋಡಿದ ಮನೆಯ ಓನರ್ ಸಾವಿತ್ರಮ್ಮ ‘ಏನಾಯ್ತು ಪ್ರಸಾದ್? ಸುಮ ಮನೆಯೊಳಗಿಲ್ವೆ?’ ಎಂದರು. ‘ಇದಾಳೆ ಆಂಟಿ’ ಎಂದಷ್ಟೆ ಹೇಳಿ ಬಾಗಿಲು ಬಡಿದೆ. ನಿಧಾನಕ್ಕೆ ಬಾಗಿಲು ತೆರೆದುಕೊಂಡಂತೆ ಸುಮ ನನ್ನನ್ನೇ ದಿಟ್ಟಿಸಿ ನೋಡಲಾರಂಭಿಸಿದಳು. ಕೆಂಪಾದ ಕಣ್ಣುಗಳು, ಹರಡಿಕೊಂಡು ಬತ್ತಿ ಹಿಡಿದ ಕೂದಲು. ನಾನು ಅವಳ ಮುಖವನ್ನೊಮ್ಮೆ ದಿಟ್ಟಿಸಿದೆ. ಯಾಕೋ ಅವಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಾಗಲಿ, ಔದಾರ್ಯವಾಗಲಿ ನನ್ನಲ್ಲುಳಿಯಲಿಲ್ಲ. ಸೀದಾ ಸ್ನಾನದ ಮನೆ ಬಾಗಿಲು ತೆಗೆದು ಕೈಕಾಲು ತೊಳೆದು ಸೋಫಾದ ಮೇಲೆ ಬಂದು ಕುಳಿತೆ. ಈ ಸಂಜೆ ಯಾಕೋ ಸತ್ತು ಹೋದ ಅನುಭವವಾಗತೊಡಗಿತು. ಅಷ್ಟೊಂದು ಜನನಿಭಿಡ ಸದ್ದುಗಳ ನಡುವೆ ಏಕಾಂತದ ಮೌನ ಒಮ್ಮೆಗೆ ಆವರಿಸಿಕೊಂಡಿತ್ತು. ಆವಿಯಾಗುತ್ತಿರುವ ಚಹಾದ ಲೋಟವೊಂದನ್ನು ಟೀಪಾಯಿಯ ಮೇಲಿಟ್ಟು ಸುಮ ಅಡುಗೆ ಮನೆಯತ್ತ ನಡೆದಳು. ಕತ್ತಲೆಯೊಳಗೂ ನೆರಳೊಂದು ಅವಳನ್ನೇ ಹಿಂಬಾಲಿಸಿದಂತೆ ಹೋಗುತ್ತಿತ್ತು.

ಸುಮ ಮತ್ತು ನನ್ನದು ಪ್ರೇಮ ವಿವಾಹವಾದರೂ ಇತ್ತೀಚೆಗೆ ನಮ್ಮಿಬ್ಬರ ಸಂಬಂಧ ಇಷ್ಟೊಂದು ಹದಗೆಟ್ಟಿದೆ. ಹಚ್ಚಿಕೊಂಡು ಮದುವೆಯಾದರೂ ಯಾಕೋ ಈಗ ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಮ್ಮಿಬ್ಬರ ನಡವಳಿಕೆಗಳು ಬೇರೆಯಾಗಿವೆ. ಆದರೂ ಒಪ್ಪಿ ಮದುವೆಯಾಗುವ ಸಂದರ್ಭದಲ್ಲಿ ನಾನು ಯಾವಾಗ ನಮ್ಮಿಬ್ಬರಲ್ಲಿ ಹೊಂದಾಣಿಕೆಯಿಲ್ಲವೋ ಆಗ ಬೇರೆಯಾಗಬಹುದೆಂಬ ಒಪ್ಪಂದದ ಮೇಲೆ ಅವಳನ್ನು ಮದುವೆಯಾಗಲು ಒಪ್ಪಿಕೊಂಡಿದ್ದು. ಆದರೆ ಈಗ ಅವಳ ನಿರ್ಧಾರ ಯಾಕೋ ಭಯ ಹುಟ್ಟಿಸುವಂತಿದೆ. ಅವಳೇನಾದರು ನಾಳೆ ಕೋರ್ಟಿನಲ್ಲಿ ನನ್ನ ಸಮ್ಮತಿಯಿಲ್ಲ ಎಂದುಬಿಟ್ಟರೆ ನನ್ನ ಮುಂದಿನ ನಡೆಯೇನು. ಈ ಕೋರ್ಟು ವಿಚ್ಛೇದನ ನೀಡಲು ಇಬ್ಬರ ಸಮ್ಮತಿಯನ್ನು ಪರಿಗಣಿಸುತ್ತದೆ. ಹಾಗಾಗಿ ಕೋರ್ಟಿನಲಿ ನಾನು ಒಬ್ಬಂಟಿಯಾದರೆ ನನ್ನ ನಿರ್ಧಾರ ಏನಾಗಿರಬೇಕು? ಒಂದೊಂದೇ ಪ್ರಶ್ನೆಗಳು ಈಗ ನನ್ನಲ್ಲಿ ದಾರಿಯಲ್ಲಿ ಆಗಾಗ್ಗೆ ಸಿಕ್ಕಿ ಕಳೆದುಹೋಗುವ ಮೈಲಿಗಲ್ಲಿನಂತೆ ಹುಟ್ಟಿಕೊಂಡು ಮರೆಯಾಗುತ್ತಿದ್ದವು. ನನ್ನ ಮದುವೆಗೆ ಸಮ್ಮತಿಸಿ ಕೊನೆಯವರೆಗೂ ನನ್ನ ಜೊತೆ ನಿಂತುಕೊಂಡವಳು ಅಕ್ಕ ಮಾತ್ರ. ಮೂರು ವರ್ಷದ ನಚಿಕೇತನನ್ನು ಈಗ ಅವಳೇ ಸಾಕುತ್ತಿದ್ದಾಳೆ. ನಮ್ಮಿಬ್ಬರ ವೈರಾಗ್ಯದ ನಡುವೆ ಮಗು ಅನಾಥವಾಗಬಾರದೆಂದು ಅವನನ್ನು ಅವಳೇ ತನ್ನ ಜೊತೆಗಿಟ್ಟುಕೊಂಡು ಸಲಹುತ್ತಾಳೆ. ನಾಳೆ ಮಗ ದೊಡ್ಡವನಾಗಿ ನಮ್ಮಿಬ್ಬರ ಸಂಬಂಧದ ಬಗ್ಗೆ ಅಸೂಯೆ ಪಟ್ಟರೆ? ಅವನ ಹುಟ್ಟಿನ ಕುರಿತಾಗಿ ಪ್ರಶ್ನೆಗಳೆತ್ತರೆ? ಇಲ್ಲಾ ನನ್ನ ನಿರ್ಧಾರ ಅಚಲವಾಗಿದೆ. ಯಾವ ಒತ್ತಡಕ್ಕೂ ಮಣಿಯದೆ ಸುಮಳಿಂದ ವಿಚ್ಛೇದನ ಪಡೆಯುವುದೇ ಬಹುತೇಕ ನನಗಿರುವ ಒಂದೇ ದಾರಿ. ಆದರೆ ಯಾಕೋ ಅದು ಅಷ್ಟು ಸುಲಭವಾಗಿ ಕಾಣುತ್ತಿಲ್ಲ ಎನಿಸಿತು. ವಿಚ್ಚೇದನದ ಪ್ರಶ್ನೆ ಎತ್ತಿದಾಗಿನಿಂದ ಸುಮಾಳ ವರ್ತನೆಯೇ ಬದಲಾಗಿದೆ. ಅವಳು ಯಾವುದೇ ಕಾರಣಕ್ಕೂ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸುವ ಲಕ್ಷಣಗಳಿಲ್ಲ ಎಂಬುದು ಅವಳ ನಡವಳಿಕೆಗಳಿಂದ ಗೊತ್ತಾಗುತ್ತಿದೆ. ಅಡುಗೆ ಮನೆ ಸೇರಿರುವ ಅವಳನ್ನು ಕರೆದು ಮಾತನಾಡಿಸಿ ಮದುವೆಯ ವೇಳೆ ಆದ ಒಪ್ಪಂದವನ್ನು ಅವಳಿಗೆ ಮನದಟ್ಟು ಮಾಡಿಸಿ ನಾಳೆಗೆ ನನ್ನ ದಾರಿಯನ್ನು ಸುಗಮಗೊಳಿಸಿಕೊಳ್ಳಬೇಕೆಂದುಕೊಂಡೆ ಯಾಕೋ ಅವಳ ಹೆಸರು ಕೂಗಲು ಗಂಟಲು ಒಣಗಿದಂತಾಯಿತು.

ಸುಮ ನನ್ನೊಟ್ಟಿಗೆ ಓದಿಕೊಂಡ ಹುಡುಗಿ. ಬೇಗೂರಿನ ಸರ್ಕಾರಿ ಶಾಲೆಯಲ್ಲಿ ಇಬ್ಬರು ಪ್ರಾಥಮಿಕ ಶಿಕ್ಷಣ ಮುಗಿಸಿ ಚಾಮರಾಜಪೇಟೆಯ ಮದ್ದಾನೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಮತ್ತು ಕಾಲೇಜುಗಳನ್ನು ಒಟ್ಟಿಗೆ ಓದಿಕೊಂಡವರು. ಮದ್ದಾನೇಶ್ವರ ಪ್ರೌಢಶಾಲೆ ಸ್ವಾಮೀಜಿಯೊಬ್ಬರಿಗೆ ಸೇರಿದ ಸಂಸ್ಥೆಯಾಗಿತ್ತು. ಸ್ವಾಮೀಜಿಗೆ ನಾನು ಎಂದರೆ ಪ್ರಾಣ. ಅದರಲ್ಲು ನನ್ನ ಅಪ್ಪ ಸ್ವಾಮೀಜಿಗೆ ಬಹಳ ಆತ್ಮೀಯರಾಗಿದ್ದರಿಂದ ಇಡೀ ಸಂಸ್ಥೆಯಲ್ಲಿ ನನಗೆ ವಿಶೇಷವಾದ ಗೌರವವಿತ್ತು. ಓದಿನಲ್ಲು ಎಲ್ಲರಿಗಿಂತ ಒಂದು ಕೈ ಮಿಗಿಲೇ ಇದ್ದ ನನ್ನ ಮೇಲೆ ಸ್ವಾಮೀಜಿಯಷ್ಟೇ ಅಲ್ಲದೆ ಪ್ರಿನ್ಸಿಪಾಲ್ ಷಣ್ಮುಖಪ್ಪನವರಿಗೂ ಬಹಳ ಪ್ರೀತಿಯಿತ್ತು. ‘ಪ್ರಸಾದ್ ಜೀವನದಲ್ಲಿ ನೀನು ಬಹಳ ದೊಡ್ಡ ವ್ಯಕ್ತಿಯಾಗ್ತೀಯಾ ಕಣಯ್ಯಾ’ ಎಂದು ಷಣ್ಮುಖಪ್ಪ ಸರ್ ಸದಾ ನನ್ನ ಬೆನ್ನುತಟ್ಟುತ್ತಿದ್ದರು.

ಚಾಯರಾಜಪೇಟೆಗೆ ಹತ್ತಿರದಲ್ಲೇ ಇದ್ದ ಭೀಮನಬೀಡು ನಮ್ಮೂರು. ಆ ಊರಿಗೆ ಯಾಕೆ ಆ ಹೆಸರು ಬಂತೋ ಗೊತ್ತಿಲ್ಲ. ಆದರೆ ಒಂದು ಹಳ್ಳಿ ಎಂದರೆ ಎಷ್ಟು ಸೊಗಸು ಎನ್ನುವಷ್ಟರ ಮಟ್ಟಿಗೆ ಅದು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ದಾರಿ ಇಕ್ಕೆಲಗಳಲ್ಲೆಲ್ಲಾ ಚಿಗುರಿ ನೆರಳಾಗಿರುತ್ತಿದ್ದ ಹೊಂಗೆ ಮತ್ತದರ ಹೂವಿನ ಘಮಲು, ಊರಿನ ಬಗಲಲ್ಲೇ ಹರಿದು ಹೋಗುತ್ತಿದ್ದ ಝರಿ, ಅದರ ಪಕ್ಕದಲ್ಲೇ ತಲೆ ಎತ್ತಿ ನಿಂತಿದ್ದ ಬೃಹದಾಕಾರದ ಆಲದಮರಗಳು, ಅದಕ್ಕೆ ಉಯ್ಯಾಲೆ ಬಿಡಿದುಕೊಂಡು ಸದಾ ಜೀಕುತ್ತಿದ್ದ ಮಕ್ಕಳ ಹಿಂಡು, ಗಾಳಿ ಬೆಳಕಿಗೆ ಕೊರತೆಯಾಗಿರದಂತೆ ಕಟ್ಟಿರುತ್ತಿದ್ದ ಕಲ್ಲು ಕಂಬದ ಮನೆಗಳು. ಒಟ್ಟಿನಲ್ಲಿ ಊರೆಂದರೆ ಭೀಮನಬೀಡು ಎನ್ನುವಷ್ಟರ ಮಟ್ಟಿಗೆ ಅದು ಹೆಸರುವಾಸಿಯಾಗಿತ್ತು. ಊರಿನ ಮೊದಲನೆ ಸಾಲಿನಲ್ಲೇ ಇದ್ದುದು ನಮ್ಮ ಮನೆ, ಎಂಟು ಕಂಬದ ತೊಟ್ಟಿ ಮನೆಯಲ್ಲಿ ಅಪ್ಪ ಮರದ ಕುರ್ಚಿ ಹಾಕಿ ಕೊಂಡು ಸದಾ ಹಜಾರದಲಿ ಕುಳಿತಿರುತ್ತಿದ್ದರು. ಇದ್ದ ಐದು ಎಕರೆ ಜಮೀನಿಗೆ ಹುರುಳಿ ಬಿತ್ತುತ್ತಿದ್ದರಿಂದ ಮನೆಯ ತುಂಬಾ ಹುರುಳಿ ಮೂಟೆಗಳು ಸಾಲಾಗಿ ಜೋಡಿಸಿದ್ದವು. ಅಮ್ಮ ದಿನಾ ಬೆಳಿಗ್ಗೆ ಸಂಜೆ ದೀಪದ ಆರತಿ ತಂದು ಆ ಹುರುಳಿ ಮೂಟೆಗಳಿಗೆ ನಮಸ್ಕರಿಸಿದ ನಂತರವೇ ಅವಳ ಇತರೆ ಕಾಯಕ ಶುರುವಗುತ್ತಿತ್ತು.

ಅಪ್ಪನಿಗೆ ನಾವಿಬ್ಬರೇ ಮಕ್ಕಳು. ಅಕ್ಕಳನ್ನು ಬೇಗೂರಿಗೆ ಮದುವೆ ಮಾಡಿಕೊಟ್ಟಿದ್ದರು. ಮನೆಯಲ್ಲಿ ನಾನು ಅಪ್ಪ, ಅಮ್ಮ ಮೂವರೆ. ಒಬ್ಬನೇ ಮಗ ಎಂದು ನನ್ನನ್ನು ಅಪ್ಪ ಅತಿ ಸಲುಗೆಯಿಂದಲೇ ಬೆಳೆಸಿದ್ದರು. ಅಕ್ಕನಿಗೂ ಮಕ್ಕಳಾಗಿಲ್ಲದಿದ್ದರಿಂದ ಅವಳು ನನ್ನನ್ನು ಬೇಗೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ಶಾಲೆಗೆ ಓದಲು ಹಾಕಿದ್ದಳು. ಸುಮ ಬೇಗೂರಿನ ಹುಡುಗಿಯೇ. ನೋಡಲು ರೂಪವಂತೆಯಾಗಿಯೇ ಇದ್ದ ಅವಳು ಸಮಾಜದಿಂದ ಅಷ್ಟೇ ಅಲ್ಲದೆ ತನ್ನ ಮನೆಯವರಿಂದಲೇ ತಿರಸ್ಕಾರಕ್ಕೊಳಗಾಗಿದ್ದಳು. ಶಾಲೆಯಲ್ಲು ಯಾರನ್ನೂ ಬೆರೆಯದೆ ಏಕಾಂಗಿಯಾಗಿ ಇರುತ್ತಿದ್ದ ಸುಮ ಅಲ್ಲೂ ಇತರರಿಂದ ತಿರಸ್ಕಾರಗೊಂಡು ಯಾತನೆ ಅನುಭವಿಸುತ್ತಿದ್ದಳು. ಸದಾ ಒಂಟಿಯೆಂದೇ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದ ಸುಮ ಕುರಿತಾಗಿ ನನಗೆ ಅನುಕಂಪ ಮೂಡುತ್ತಿತ್ತು. ಬೇಗೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಚಾಮರಾಜಪೇಟೆಗೆ ವರ್ಗವಾಗುವುದರೊಳಗೆ ಸುಮ ಮತ್ತಷ್ಟು ರೂಪವಂತೆಯಾಗಿ ಹೋಗಿದ್ದಳು. ಅವಳ ಆಚಾರ ವಿಚಾರ ಉಡುಗೆ ತೊಡುಗೆಗಳು ಬದಲಾಗಿ ಹೋಗಿದ್ದವು. ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ಸುಮ ಕಾಲೇಜಿಗೆ ಕೇಂದ್ರಬಿಂದುವಂತಾಗಿದ್ದಳು. ಅಲ್ಲೂ ಅವಳು ಅನುಭವಿಸುತ್ತಿದ್ದ ಒಂಟಿಯೆಂಬ ಯಾತನೆ ನನಗೆ ಆಗಾಗ್ಗೆ ಅಯ್ಯೋ ಎನಿಸುವಂತಾಗುತ್ತಿತ್ತು. ದಿನಕಳೆದಂತೆ ಅವಳ ಮೇಲಿನ ಅನುಕಂಪವೋ ಅಥವಾ ಸಮಾಜದಿಂದ ತಿರಸ್ಕೃತಗೊಂಡ ಅವಳ ಮೇಲೆ ಕನಿಕರವೋ ಅಥವಾ ಪ್ರೇಮದ ಒಂದು ಎಳೆಯ ಸೆಳೆತವೋ ನಿಧಾನಕ್ಕೆ ನಾನು ಅವಳೆಡೆಗೆ ಆಕರ್ಷಿತನಾಗುವಂತಾಗಿತ್ತು. ಪ್ರೇಮ ಕುರುಡು ಎನ್ನುತ್ತಾರೆ. ಈಗ ನಿಜಕ್ಕೂ ನನಗೆ ಅದು ಗೋಚರವಾಗತೊಡಗಿತು. ಕಾಲೇಜಿನಲಿ ಯಾರನ್ನೂ ಸೇರದ ಸುಮ ನಿಧಾನಕ್ಕೆ ನನ್ನನ್ನು ಅಚ್ಚಿಕೊಳ್ಳಲಾರಂಭಿಸಿದಳು. ಪ್ರೇಮದ ಸೆಳೆತವೊಂದು ನನಗೆ ಅರಿವಿಲ್ಲದಂತೆ ನನ್ನನ್ನು ಆವರಿಸಲಾರಂಭಿಸಿತ್ತು. ಸುಮಾಳಿಗು ನನ್ನೊಟ್ಟಿಗಿನ ಸಲುಗೆ ಆತ್ಮೀಯವೆನಿಸಿರಬೇಕಷ್ಟೆ, ತಿರಸ್ಕೃತ ಮನಸ್ಸಿಗೊಂದು ಆಸರೆ ಸಿಕ್ಕಂತೆನಿಸಿರಬೇಕಷ್ಟೇ. ಅವಳು ನನ್ನನ್ನು ಬಲವಾಗಿ ಹಚ್ಚಿಕೊಳಲಾರಂಭಿಸಿದಳು.

ಕಾಲೇಜು ಮುಗಿಯುವ ವೇಳೆಗಷ್ಟೇ ಸುಮ ನನ್ನ ಮುಂದೆ ತನ್ನ ಪ್ರೇಮವನ್ನ ನಿವೇದಿಸಿಕೊಂಡಳು. ಪ್ರಸಾದ್, ಊರು, ಸಮಾಜ ಅಷ್ಟೇ ಏಕೆ ನನ್ನ ಹೆತ್ತವರಿಂದಲೇ ನಾನು ತಿರಸ್ಕಾರಗೊಂಡೆ. ಬದುಕು ಸಾಕು ಎನ್ನಿಸುವಷ್ಟರಲ್ಲಿ ಓಯಾಸೀಸ್ನಂತೆ ನೀನು ನನಗೆ ಸಿಕ್ಕಿದೆ. ನೀನು ಒಪ್ಪುತ್ತೀಯ ಎಂಬ ಯಾವ ಭರವಸೆಯೂ ನನ್ನಲ್ಲಿ ಇಲ್ಲ. ಆದರೂ ಎಲ್ಲಾ ಸಂಕೋಚ ಬಿಟ್ಟು ಕೇಳ್ತಾ ಇದೀನಿ. ವಿಲ್ ಯೂ ಮ್ಯಾರಿ ಮೀ ?’ ಎಂದಳು. ಒಂದು ಕ್ಷಣಕ್ಕೆ ಮನಸ್ಸು ಆಘಾತಕ್ಕೊಳಗಾಯಿತು. ಕಣ್ಣುಗಳು ಒಮ್ಮೆಗೆ ನಡುಗಲಾರಂಭಿಸಿದವು. ಆವೇಶದ ಬಿರುಗಾಳಿಯೊಂದು ಎದೆ ಸವರಿ ಕಂಪಿಸಿ ಹೋದ ಅನುಭವ ಆದಂತಾಯಿತು. ತಲೆ ತಗ್ಗಿಸಿ ನಿಂತಿದ್ದವನು ಒಮ್ಮೆ ಮುಖವೆತ್ತಿ ಅವಳ ಕಣ್ಣುಗಳನ್ನೇ ದಿಟ್ಟಿಸಿದೆ. ದಿಟ್ಟ ಬೇಸಿಗೆಯಲಿ ನದಿಯೊಂದು ಹೊಮ್ಮಳಿಸಿ ನುಗ್ಗುವಂತೆ ಅವಳ ಕಣ್ಣುಗಳಿಂದ ನೀರು ಸೋರಿ ಹೋಗುತ್ತಿತ್ತು. ಆಂತರ್ಯದ ಪ್ರೇಮ ನನ್ನೊಳಗೂ ಹುಟ್ಟಿಕೊಂಡಿದ್ದರೂ ನಾನು ಎಂದಿಗೂ ಅದನ್ನು ವ್ಯಕ್ತಪಡಿಸಿರಲಿಲ್ಲ. ಅಥವಾ ಅದು ಅವಳಿಗೆ ಅನುಭವವಾಗುವ ರೀತಿ ನಾನು ನಡೆದೂಕೊಂಡಿರಲಿಲ್ಲ. ಆದರೆ ಈಗ ನಾನು ಬಲೆಯೊಳಗೆ ಬಿದ್ದ ಮೀನಿನಂತಾಗಿದ್ದೆ. ಅವಳ ನಿವೇದನೆಗೆ ಏನು ಉತ್ತರ ಹೇಳಬೇಕೆಂಬ ಗೊಂದಲದಲ್ಲಿ ಒಂದು ಕ್ಷಣ ಒದ್ದಾಡಿಹೋಗಿದ್ದೆ. ಆಕಾಶದಲ್ಲಿದ್ದ ಮೋಡದ ತುಣುಕುಗಳು ಒಂದೊಂದೇ ತಲೆಯ ಮೇಲೆ ಬಿದ್ದು ಗುದ್ದಿದ ಹಾಗೆ ತಲೆ ಭಾರವಾಗಿ ಹೋಗಿತ್ತು. ‘ವಿಲ್ ಯೂ ಗಿವ್ ಮಿ ಸಮ್ ಟೈಮ್’ ಎಂದೆ. ‘ವೈ ನಾಟ್’ ಎಂದಳು. ನಡುಗುತ್ತಿದ್ದ ಕಾಲುಗಳನ್ನು ಒಂದೊಂದಾಗಿ ಎತ್ತಿ ಇಡುತ್ತಾ ಸೀದಾ ಊರಿನ ಕಡೆ ನಡೆದೆ ಕತ್ತಲಿನ ಬಾನಿನಲಿ ಗ್ರಹಣ ಹಿಡಿದ ಚಂದಿರ ನಿಧಾನವಾಗಿ ಮುಚ್ಚಿಹೋಗುತ್ತಿತ್ತು.

ನನ್ನ ಮನಸ್ಸಿನ ತುಂಬಾ ಈಗ ಸುಮ ಇಟ್ಟ ಪ್ರಶ್ನೆಗಳೆ ಪುಂಖಾನುಪುಂಖವಾಗಿ ಚುಚ್ಚಲಾರಂಭಿಸಿದ್ದವು. ಮನೆಯ ಬಾಗಿಲು ತೆರೆದು ರೂಮಿನ ಒಳಹೊಕ್ಕೆ. ಅಮ್ಮ ‘ಪ್ರಸಾದ ಕೈಕಾಲು ತೊಳೆದು ಊಟಕ್ಕೆ ಬಾಪ್ಪ’ ಎಂದು ಕೂಗಿದ ಹಾಗಾಯಿತು. ಯಾಕೋ ಅಷ್ಟೂ ರುಚಿಸುತ್ತಿದ್ದ ಅಮ್ಮನ ಕೈ ಅಡಿಗೆ ಇಂದು ರುಚಿಕಳೆದ ಅನುಭವವಾಯಿತು. ಅಪ್ಪ ಹಜಾರದಲಿ ಮರದ ಚೇರಿನಲಿ ಕೂತು ಅರ್ಜುನ ಬೃಹನ್ನಳೆ ರೂಪ ತಾಳಿದ ಮಹಾಭಾರತದ ಸಂದೊಂದನು ಮುನಿಯನಿಗೆ ಹೇಳುತ್ತಿದ್ದುದು ಕಿವಿ ತಾಕಿತು.

ಯಾವುದೋ ಒಂದು ಪ್ರೇಮದ ಸೆಳೆತ ಸುಮಳೆಡೆಗೆ ನನಗೆ ನನಗರಿವಿಲ್ಲದಾಗೆ ಹುಟ್ಟುಕೊಂಡದ್ದೂ ನಿಜ. ಅದು ಒಂದು ಅಸಹಜ ಕ್ರಿಯೆ, ನಾನು ಸುಮಳನ್ನು ಮದುವೆಯಾದರೆ ಅಥವಾ ಅಂತಹ ಒಂದು ನಿರ್ಧಾರವನ್ನು ಮಾಡಿಬಿಟ್ಟರೆ ಈ ಸಮಾಜದ ಮುಂದೆ ನನ್ನ ಮರ್ಯಾದೆಯ ಪಾಡೇನು? ನಿಜಕ್ಕೂ ಈ ಸಮಾಜವಾಗಲಿ ಅಥವಾ ನನ್ನ ಓರಿಗೆಯವರಾಗಲಿ ಅಥವಾ ಈ ಊರು, ನನ್ನ ಅಪ್ಪ, ಅಮ್ಮರಾಗಲಿ ಇದಕ್ಕೆ ಸಮ್ಮತಿ ನೀಡುತ್ತಾರೆಯೇ..? ನಾನೇನಾದರು ಸುಮಳನ್ನು ಮದುವೆಯಾದರೆ ಅವಳು ತಿರಸ್ಕೃತಗೊಂಡ ಹಾಗೆ ಅವಳೊಟ್ಟಿಗೆ ನನ್ನನ್ನು ಎಲ್ಲರೂ ತಿರಸ್ಕಾರಗೊಳಿಸಿಬಿಟ್ಟರೆ..? ನನ್ನ ಮುಂದೆ ಈಗ ನೂರು ಸವಾಲುಗಳು ಎದುರಿಗೆ ನಿಂತು ಛಾಟಿ ಬೀಸುವಂತಾದವು.

ಒಂದು ವೇಳೆ ನಾನು ಎಲ್ಲವನ್ನು ಧಿಕ್ಕರಿಸಿ ಸುಮಳನ್ನು ಮದುವೆಯಾದರೆ ಎಲ್ಲಿಯೂ ನಿಲುಕದ ಅವಳಿಗೆ ಒಂದು ಆಸರೆಯಾದಂತಾಗುವೆ. ಆರಿ ಹೋದಂತಿರುವ ಅವಳ ಬದುಕಿಗೆ ಒಂದು ಕಂದೀಲು ಹಚ್ಚಿ ಬೆಳಕು ನೀಡಿದಂತಾಗುತ್ತದೆ. ಎಲ್ಲರಿಂದಲೂ ದೂರ ಉಳಿದು ಏಕಾಂತವಾಗಿರುವ ಅವಳಿಗೆ ಒಂದು ಬದುಕು ರೂಪಿಸಿದ ಸಾರ್ಥಕತೆ ನನ್ನಲ್ಲುಳಿದರೆ ಅಷ್ಟೇ ಸಾಕು. ಜಗತ್ತು ಈ ಸಮಾಜ ನನ್ನನು ನೋಡುವ ರೀತಿ ನಿಜಕ್ಕೂ ನನಗೆ ದಿಗ್ಭ್ರಮೆಯನ್ನೇ ಮೂಡಿಸುತ್ತದೆ. ಆದರೆ ಅದನ್ನು ಮೆಟ್ಟಿ ಅವಳಿಗೊಂದು ಭರವಸೆ ನೀಡಿ ಅವಳ ಬಾಳಿಗೆ ಹೂವಂತಾಗುವ ಅವಕಾಶ ನನ್ನ ಮುಂದಿದೆ. ನನಗೀಗ ಈ ಎರಡರ ನಡುವೆ ದ್ವಂದ್ವವೊಂದು ಆವರಿಸಿಕೊಂಡಿತು. ನಾಳೆ ಅವಳಿಗೆ ಒಂದು ನಿರ್ಧಾರವನ್ನ ತಿಳಿಸಲೇಬೇಕು. ಅದು ಧನಾತ್ಮಕವಾದರೆ ಅವಳಿಗಾಗುವ ಆನಂದ ಏನಾಗಿರಬಹುದೆಂದು ಊಹಿಸಿಕೊಂಡೆ. ಮನಸ್ಸು ನಿಶ್ಚಲವಾಯಿತು.

ದ್ವಂದ್ವಗಳಲ್ಲಿ ಆಯ್ಕೆ ನನಗೆ ಬಹುತೇಕ ಕಠಿಣವೆನಿಸತೊಡಗಿತು. ಸಮಾಜ ಎಲ್ಲವನ್ನು ಅಳೆದು ತೂಗುತ್ತದೆ. ಒಳ್ಳೆಯದರಲ್ಲು ಹುಳುಕು ಹುಡುಕುತ್ತದೆ. ಸಮಾಜದ ಅನಿಸಿಕೆಗಳಿಗೆ ಕಿವಿಯಾದರೆ ಅದು ಬದುಕಾಗಲಾರದು. ಯಾರು ಏನೇ ಅನ್ನಲಿ, ಸಮಾಜ ಸುಮಳೊಟ್ಟಿಗೆ ನನ್ನನ್ನು ತಿರಸ್ಕರಿಸಿಬಿಡಲಿ ಚಿಂತೆಯಿಲ್ಲ. ಆದರೆ ನಡೆಯಲಾಗದ ಘಟನೆಯೊಂದಕ್ಕೆ ನಾನೇ ಸಾಕ್ಷಿಯಾಗಬೇಕು. ನನ್ನ ನಿರ್ಧಾರ ಇತಿಹಾಸದ ಪುಟಗಳಲಿ ಅಚ್ಚೊತ್ತುಬಿಡಲಿ. ಸುಮಳಿಗೆ ಅನುಮತಿ ನೀಡುವುದೇ ಸರಿ ಎನಿಸಿತು.

ಕಾಲೇಜಿನ ಕೊನೆಯ ದಿನ ಸಭಾಂಗಣದಲಿ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿತ್ತು. ಎಲ್ಲರೂ ಸ್ಟೇಜಿನಲಿ ನಡೆಯುತ್ತಿದ್ದ ಕಾರ್ಯಕ್ರಮದಲಿ ಮುಳುಗಿ ಹೋಗಿದ್ದರು. ಸುಮ ಮಾತ್ರ ನನ್ನ ಬರುವಿಕೆಯನೇ ಕಾಯುತ್ತಾ ಕೊನೆಯ ಬೆಂಚಿನಲಿ ಬಿಟ್ಟ ಕಣ್ಣು ಬಿಟ್ಟ ಹಾಗೆ ಕುಳಿತಿದ್ದಳು. ಸೀದಾ ಸಭಾಂಗಣದ ಒಳ ನಡೆದು ಸುಮಳ ಪಕ್ಕದಲೆ ಕುಳಿತೆ. ಅವಳ ಕಣ್ಣುಗಳು ಆತುರಗೊಂಡಿದ್ದವು. ತುಟಿ ಒಣಗಲಾರಂಭಿಸಿತು. ನನ್ನ ನಿರ್ಧಾರಕ್ಕಾಗೆ ಕಾಯ್ದು ಕೂತಿರುವ ಚಾತಕ ಪಕ್ಷಿಯಂತೆ ಸುಮ ಕಾಣಲಾರಂಭಿಸಿದಳು. ನಡುಗುತ್ತಿದ್ದ ಅವಳ ಕೈಯ್ಯನ್ನೊಮ್ಮೆ ಭದ್ರವಾಗಿ ಹಿಡಿದು ‘ಆನ್ ಒನ್ ಕಂಡಿಷನ್ ಐ ಅಗ್ರಿ ಟು ಮ್ಯಾರಿ ಯೂ’ ಎಂದೆ. ಯಾವುದೋ ಜಲಪಾತದಲಿ ಮುಳುಗುತ್ತಿರುವಾಗ ಬದುಕಿಕೊಳ್ಳಲು ಗರಿಕೆಯೊಂದು ಸಿಕ್ಕಂತೆ ಅವಳೂ ತಲೆಯ ಮೇಲೆ ಕೈಯಿಟ್ಟು ಕುಳಿತಳು.

ಕಣ್ಣಿನಿಂದ ಆನಂದಭಾಷ್ಪದ ಹನಿಗಳು ಜಿನುಗಲಾರಂಬಿಸಿದವು. ಆವೇಗ ತಾಳಲಾರದೆ ‘ಏನದು ಕಂಡೀಷನ್?’ ಎಂದಳು. ಈ ಜಗತ್ತಿನಲ್ಲಿ, ಈ ಸಮಾಜದಲ್ಲಿ ನಮ್ಮಿಬ್ಬರದು ಒಂದು ವಿಶೇಷವಾದ ಮದುವೆ, ನನ್ನ ನಿನ್ನ ನಿರ್ಧಾರ ಒಂದು ಐತಿಹಾಸಿಕವಾದದ್ದು. ಸಮಾಜ ಇದನ್ನು ಧಿಕ್ಕರಿಸಬಹುದು ಎಂಬ ಚಿಂತೆಯಿಲ್ಲದೆ ನಿನ್ನನ್ನು ನಾನು ಮದುವೆಯಾಗುತ್ತಿದ್ದೇನೆ. ಒಂದು ವೇಳೆ ನಮ್ಮ ಜೀವನದಲಿ ಯಾವಾಗಲಾದರೂ ಏರುಪೇರಾದಲ್ಲಿ ಅಥವಾ ಇಬ್ಬರಿಗೂ ಸರಿಹೊಂದದಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ನಿನ್ನಿಂದ ನಾನು ದೂರಾಗಲು ನೀನು ಸದಾ ಸಿದ್ಧಳಿರಬೇಕು’ ಎಂದೆ. ಸುಮ ಒಂದು ಕ್ಷಣ ದಂಗಾದಳು. ನನ್ನ ಕಂಡೀಷನ್ ಅವಳಿಗೆ ಆಘಾತವನ್ನ ತಂದರೂ ‘ಓಕೆ ಪ್ರಸಾದ್ ಥ್ಯಾಂಕ್ಸ್ ಫಾರ್ ಎವರಿತಿಂಗ್, ನಿನಗೆ ಇಷ್ಟವಾಗುವ ರೀತಿಯಲ್ಲೇ ಬದುಕು ಸಾಗಿಸುವೆ. ನಿನಗೆ ನೋವಾಗದ ಹಾಗೆ ಸದಾ ನಿನ್ನ ಕಾಪಿಟ್ಟುಕೊಳ್ಳುವೆ, ಬಿ ಹ್ಯಾಪಿ’ ಎಂದಳು.

ಈಗ ಈ ವಿಷಯವನ್ನ ಅಪ್ಪನ ಮುಂದೆ ಪ್ರಸ್ತಾಪಿಸಿ ಅವರಿಂದ ಒಪ್ಪಿಗೆ ಪಡೆಯುವುದು ಬಹಳ ಕಷ್ಟದ ಕೆಲಸ. ಜಗತ್ತಿನ ಎಲ್ಲಾ ಮೂರ್ಖರಂತೆ ನಾನು ಮೂರ್ಖನಾಗಲಾರೆ. ಅಪ್ಪನಿರಲಿ ಯಾವ ವ್ಯಕ್ತಿಯೂ ನಮ್ಮ ಮದುವೆಗೆ ಸಮ್ಮತಿ ಸೂಚಿಸಲಾರ. ಸಮಾಜದ ಮರ್ಯಾದೆಯ ಪ್ರಶ್ನೆಯನ್ನು ಖಂಡಿತಾ ಅಲ್ಲಿ ತೇಲಿಬುಡುತ್ತಾರೆಂಬ ಎಲ್ಲಾ ಸುಳಿವುಗಳು ಇದ್ದರೂ ಯಾಕೋ ಅಪ್ಪನಿಗೆ ವಿಷಯ ತಿಳಿಸದೆ ಹೀಗೆ ಮದುವೆಯಾಗುವುದು ಸರಿ ಕಾಣಲಿಲ್ಲ. ಆದದ್ದು ಆಗಲಿ ಅಪ್ಪನಿಗೆ ವಿಷಯ ಮುಟ್ಟಿಸುವುದೇ ಸರಿ. ಸುಮ ಅಪ್ಪನಿಗೆ ಗೊತ್ತಿಲ್ಲದವಳೇನಲ್ಲ. ಅಪ್ಪ ಆಗಾಗ್ಗೆ ಅಕ್ಕನ ಮನೆಗೆ ಬೇಗೂರಿಗೆ ಹೋಗಿ ಬರುತ್ತಿದ್ದರಿಂದ ಸುಮಳ ಪರಿಚಯವಿದ್ದೇ ಇದೆ ಎಂದು ಅಪ್ಪ ಹಜಾರದಲ್ಲಿ ಕುಳಿತಿದ್ದಲ್ಲಿಗೆ ಮೆಲ್ಲನೆ ಅಡಿಯಿಟ್ಟೆ. ಮರದ ಚೇರಿನಲಿ ಅಮ್ಮ ಸುತ್ತಿಕೊಡುತ್ತಿದ್ದ ವೀಳ್ಯೆದೆಲೆಗಳನ್ನು ತಿನ್ನುತ್ತಾ ಅಪ್ಪ ಕುಳಿತಿದ್ದರು. ಸೀದಾ ಹೋಗಿ ಅಪ್ಪನ ಕಾಲ ಬಳಿ ಕೂತು ‘ಅಪ್ಪಾ ನಾನೊಂದು ಭಯಾನಕವಾದ ನಿರ್ಧಾರಕ್ಕೆ ಬಂದಿದ್ದೇನೆ. ಬಹುಶಃ ಇದು ನಿಮಗೆ ಸಹ್ಯವಾಗದಿರಬಹುದು. ಅಥವಾ ಸಮಾಜಕ್ಕೂ ಇದು ಒಂದು ತಿರಸ್ಕೃತ ವಿಷಯವಾಗಿರಬಹುದು. ಆದರೆ ನನ್ನ ನಿರ್ಧಾರ ಅಚಲವಾಗಿದೆ. ನಾನು ಎಲ್ಲವನು ಅಳೆದು ತೂಗಿ ಕೊನೆಗೆ ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನಿದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕ್ಷಮಿಸಿ ಎಂದೆ. ಅಪ್ಪನ ಸಿಟ್ಟು ಅದಾಗಲೆ ಅರ್ಧ ನೆತ್ತಿಗೇರಿತ್ತು. ಅಮ್ಮ ನನ್ನ ಮಾತುಗಳನ್ನು ಕೇಳಿ ಚಿಂತೆಗಚ್ಚಿ ಕೂತಳು. ಅಪ್ಪ ಕೋಪದಲೆ ‘ಏನದು ಅಂತ ನಿನ್ನ ಘನಂದಾರಿ ನಿರ್ಧಾರ ? ಎಂದರು. ತಡಮಾಡದೆ ಸುಮಳ ಮದುವೆ ವಿಚಾರವಾಗಿ ಎಲ್ಲವನ್ನು ಹೇಳಿದೆ. ಅಪ್ಪನ ಕಣ್ಣುಗಳು ಕೆಂಡವನ್ನೇ ಸುರಿಯುತ್ತಿವೆಯೋ ಎನ್ನುವಂತೆ ಕಾರಲಾರಂಭಿಸಿದ್ದವು. ಅಂತಹ ಕೆಂಡದ ಕಣ್ಣುಗಳನ್ನು ನುಂಗಿಕೊಂಡು ಅಪ್ಪ ನಗಾಡಲಾರಂಭಿಸಿದರು. ನನ್ನ ನಿರ್ಧಾರ ಅವರಲ್ಲಿ ಕೋಪ, ಈರ್ಷೆ, ಅಸಹನೆ ಎಲ್ಲವನ್ನು ಒಟ್ಟಿಗೆ ತಳುಕು ಹಾಕಿಕೊಂಡಂತೆ ಉರಿಯಲಾರಂಭಿಸಿತ್ತು.

‘ಹೌದು ಅಪ್ಪ, ನನ್ನ ನಿರ್ಧಾರ ಅಂತಿಮವಾಗಿದೆ’ ಎಂದೆ. ಅಪ್ಪ ಸಿಟ್ಟಿನಲಿ ಸಿಡಿಯಲಾರಂಭಿಸಿದರು. `ಅಲ್ಲಾ ಕಣೋ ಹಲ್ಕಾ ನನ ಮಗನೆ ಒಬ್ಬ ಮಗ ಅಂತ ಪ್ರೀತಿಯಿಂದ ಸಾಕಿದ್ರೆ ಈಗ ನೀನೆ ನಿರ್ಧಾರ ತೆಗೆದುಕೊಳ್ಳೋ ಹಾಗ್ ಆಗ್ಬಿಟ್ಯಾ? ನಿನ್ನ ನಿರ್ಧಾರ ಎಂತ ಪರಿಣಾಮ ಬೀರುತ್ತೆ ಅನ್ನೋ ಸಣ್ಣ ಪರಿಜ್ಞಾನ ಇದ್ಯಾ ನಿಂಗೆ? ಇದನ್ನ ಸಮಾಜ ಒಪ್ಪುತ್ತೇನೋ ? ಜೀವನದಲ್ಲಿ ನೀನು ಸುಖವಾಗಿ ಇರೋಕಾಗುತ್ತೇನೋ ? ಮನೆತನದ ಮಾನ ಮರ್ಯಾದೆ ಹರಾಜಿಗ್ ಬರಲ್ವಾ ? ವಂಶ ಬೆಳಗೋಕೆ ಇರೋನು ನೀನೊಬ್ನೆ ನಮ್ಗೆ. ಮುಂದಿನ ವಂಶ ಬೆಳೆಯೋದ್ ಬ್ಯಾಡ್ವಾ. . . . ಅಪ್ಪ ಹೀಗೆ ಕೆಂಡಾಮಂಡಲವಾಗಿ ಬೈಯ್ಯಲಾರಂಭಿಸಿದ್ದರೆ, ಅಮ್ಮ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟಳು.

ಕೋಪ ತಣ್ಣಗಾದ ಮೇಲೆ ಅಪ್ಪ ನನ್ನ ಮನಸ್ಸು ಬದಲಾಯಿಸಲು ಏನೆಲ್ಲಾ ಕಸರತ್ತು ಮಾಡಿದರು. ಬದಲಾಗದ ನನ್ನ ನಿರ್ಧಾರದಿಂದ ಅಪ್ಪ ಮತ್ತಷ್ಟು ಉಗ್ರರಾದರು. ‘ಜೀವನದಲ್ ಹಾಳಾಗೋಗ್ತೀಯಾ ಹೋಗು. ಅವಳ್ನೇನಾದ್ರು ಮದುವೆ ಅನ್ಕೊಂಡು ಆದೆ ಈ ಮನೇಲಿ ಜಾಗ ಇಲ್ಲ ನಿನಗೆ, ಈಗ್ಲೆ ಮನೆ ಬಿಟ್ ಕಡದು ಕಣ್ಣಗ್ ಕಾಣ್ದೆ ಇರೋ ಹಾಗ್ ಹೊರಟ್ಬಿಡು’ ಅಪ್ಪನ ಈ ಮಾತುಗಳು ನಿರೀಕ್ಷಿತವೇ ಆಗಿದ್ದವು. ಸ್ವಾಮೀಜಿಗೂ ವಿಷಯ ತಿಳಿಸಿ ಅವರಿಂದಲೂ ಬುದ್ದಿ ಹೇಳಿಸುವ ಕೆಲಸ ಅಮ್ಮ ಅದಾಗಲೇ ಮಾಡಿದ್ದರು. ಆದರೂ ನಾನು ಬದಲಾಗದ್ದು ಅಪ್ಪನಿಗೆ ಜೀವವೇ ಹೋದಂತಾಗಿತ್ತು.

ಒಮ್ಮೆ ಮನೆಗೆ ಬಂದಿದ್ದ ಪ್ರಿನ್ಸಿಪಾಲ್ ಷಣ್ಮುಖಪ್ಪನವರು ‘ಜೀವನದಲ್ಲಿ ದೊಡ್ಡ ಸಾಧನೆ ಮಾಡ್ತೀಯ ಅಂದ್ಕೊಂಡಿದ್ದೆ. ಘನಾಂದಾರಿ ಸಾಧನೇನೆ ಮಾಡ್ತಿದೀಯ ಬಿಡಪ್ಪ’ ಎಂದು ಹೀಯಾಳಿಸಿ ಹೋಗಿದ್ದರು. ಮೂಲೆಯಲ್ಲಿ ಜೋಡಿಸಿದ್ದ ಹುರುಳಿ ಮೂಟೆಗೆ ನಮಸ್ಕರಿಸಿ ಬಾಗಿಲ ಹೊಸ್ತಿಲ ಬಳಿ ಬಂದೆ. ಅಮ್ಮ ಎದುರಾದಳು. ಅತ್ತು ಅತ್ತು ಕಣ್ಣೀರೆ ಬತ್ತಿಹೋಗಿದ್ದ ಅವಳ ಕಣ್ಣುಗಳಲ್ಲೀಗ ನೋವಿನ ಬುಗ್ಗೆಗಳು ಸಿಡಿಯಲಾರಂಭಿಸಿದ್ದವು. ‘ಪ್ರಸಾದು ಏನೋ ನಿನ್ ಅವಸ್ಥೆ, ಇದೆಲ್ಲಾ ನಮ್ಗಾಗ್ಬರಲ್ಲ ಕಣೋ ದಯವಿಟ್ಟು ನಿನ್ ನಿರ್ಧಾರ ಬದಲಾಯ್ಸೋ, ನಿನ್ ಹೀಗೆ ಮನೆ ಬಿಟ್ ಹೋದ್ರೆ ವಯಸ್ಸಾದ್ ನಮ್ ಕಥೆ ಏನೋ, ಇದೆಲ್ಲಾ ಆದ್ರೆ ನಾವ್ ಬದ್ಕಿರ್ತೀವಿ ಅನ್ಕೊಂಡ್ಯಾ` ಎಂದು ಅಂಗಲಾಚಿ ಬೇಡಲಾರಂಭಿಸಿದಳು. ನನ್ನ ಕಣ್ಣುಗಳಿಂದಲೂ ನೀರು ನಿಧಾನಕ್ಕೆ ಜಾರಿ ಹೋಗುತ್ತಿತ್ತು. ಅವಳನ್ನೊಮ್ಮೆ ತಬ್ಬಿ ಸಂತೈಸಿ ಹೊಸ್ತಿಲಾಚೆ ಕಾಲಿಟ್ಟೆ. ಅಮ್ಮ ‘ಪ್ರಸಾದು.. ’ ಎಂದು ಕೂಗಿದ ಕೂಗು ಹಜಾರದ ಹಟ್ಟಿಯಲಿ ಪ್ರತಿಧ್ವನಿಸಿ ಕೇಳುತ್ತಿತ್ತು.

ಮಾರನೆಗೆ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮದುವೆಯಾಗುವುದೆಂದು ತೀರ್ಮಾನವಾಯಿತು. ನನ್ನ ನಿರ್ಧಾರದಿಂದ ಬೇಸರಿಸಿಕೊಂಡ ಯಾವ ಸ್ನೇಹಿತರು ನನ್ನ ಮದುವೆಗೆ ಹಾಜರಾಗಲಿಲ್ಲ. ಆದರೆ ಈ ವಿಷಯದ ಕುರಿತು ಸದಾ ಮೌನಿಯಾಗೆ ಇದ್ದ ಅಕ್ಕ ನಮ್ಮೊಟ್ಟಿಗಾದಳು. ಅವಳ ಹಾಜರಿ ನನಗೂ ಅಚ್ಚರಿಯನ್ನುಂಟುಮಾಡಿತ್ತು. ದೇವಸ್ಥಾನದಲಿ ಹಾರ ಬದಲಾಯಿಸಿ ರಿಜಿಸ್ಟಾರ್ ಆಫೀಸಿನಲ್ಲಿ ಒಂದು ಶುಭಲಗ್ನದಲಿ ಸುಮಳ ಕೊರಳಿಗೆ ತಾಳಿ ಕಟ್ಟಿದ್ದೆ. ಸಾಕ್ಷಿಗೆ ಅಕ್ಕನೇ ಸಹಿ ಹಾಕಿದ್ದಳು. ವಾಸಕ್ಕೆ ಚಾಮರಾಜಪೇಟೆಯಲ್ಲಿ ಒಂದು ಬಾಡಿಗೆ ಮನೆ ಪಡೆಯುವುದೆಂದು ತೀರ್ಮಾನಿಸಿದ್ದೆವು. ಆದರೆ ಎಷ್ಟು ಅಲೆದರು ಅಷ್ಟು ಸುಲಭಕ್ಕೆ ಮನೆ ದಕ್ಕಲಿಲ್ಲ. ಹೋದಲ್ಲೆಲ್ಲಾ ಮುಖ ನೋಡಿದ ಕೂಡಲೆ ಮನೆ ಖಾಲಿ ಇಲ್ಲ ಎಂದು ರೆಡಿಮೆಡ್ ಉತ್ತರ ಸುಲಭವಾಗಿ ಸಿಗುತ್ತಿತ್ತು. ಕೊನೆಗೆ ಹೇಗೋ ತನ್ನ ಮನಸ್ಸು ಕರಗಿಸಿ ಸಾವಿತ್ರಮ್ಮ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ನೀಡಿದಳು. ‘ತಿಂಗ್ಳಾ ತಿಂಗ್ಳಾ ಕರೆಟ್ಟಾಗೆ ಬಾಡ್ಗೆ ಕೊಟ್ಬುಡ್ಬೇಕು ಪ್ರಸಾದು’ಎಂಬ ಕಂಡೀಷನಿನೊಂದಿಗೆ ಸಾವಿತ್ರಮ್ಮ ಮನೆಯ ಕೀಲಿ ಕೈಗಿತ್ತಿದ್ದಳು. ಹೇಗೋ ಅವರಿವರನ್ನ ಹಿಡಿದು ಇನ್ಸೂರೆನ್ಸ್ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ನನಗೆ ಸಂಸಾರ ನಡೆಸಲು ಅಷ್ಟೊಂದು ತಾಪತ್ರಯ ಎನಿಸಲಿಲ್ಲ.

ಹೀಗೆ ಐದು ವರ್ಷಗಳ ಕಾಲ ಸಂಸಾರ ನಡೆಸಿಕೊಂಡಿದ್ದ ನಮ್ಮ ಮನೆಗೆ ಅಕ್ಕ ಅಚಾನಕ್ಕಾಗಿ ಒಮ್ಮೆ ಭೇಟಿಕೊಟ್ಟಿದ್ದಳು. ಅವಳ ಸಲಹೆಯಂತೆ ನಂಜನಗೂಡಿನ ಅನಾಥಾಶ್ರಮದಿಂದ ಮಗುವೊಂದನ್ನು ದತ್ತು ಪಡೆಯುವುದೆಂದು ತೀರ್ಮಾನಿಸಿ ಒಂದು ವರ್ಷವಾಗಿದ್ದ ಎಳೆಯ ಗಂಡು ಮಗುವೊಂದನ್ನು ದತ್ತು ಸ್ವೀಕರಿಸಿ ನಂಜುಂಡೇಶ್ವರನ ಸನ್ನಿಧಿಯಲ್ಲೇ ‘ನಚಿಕೇತ’ ಎಂದು ನಾಮಕರಣ ಮಾಡಿ ಮನೆ ತುಂಬಿಸಿಕೊಂಡಿದ್ದೆವು. ಇಷ್ಟರಲ್ಲಾಗಲೆ ಅಮ್ಮ ನನ್ನದೇ ಕೊರಗಿನಲ್ಲಿ ಹಾಸಿಗೆ ಹಿಡಿದು ತೀರಿಕೊಂಡಳೆಂಬ ಸುದ್ದಿ ಬಂದಿತ್ತು. ಆದರೆ ಊರಿಗೆ ಹೋಗುವುದಾಗಲಿ ಅಪ್ಪನನ್ನು ಎದುರಿಸುವುದಾಗಲಿ, ಸಮಾಜದ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಲಿ ನನ್ನಿಂದ ಸಾಧ್ಯವಾಗಲಿಲ್ಲ. ಅಮ್ಮಳನ್ನು ಮಣ್ಣು ಮಾಡಲು ನಾನು ಹೋಗಲೇ ಇಲ್ಲ.

ನಚಿಕೇತ ಬಂದಾಗಿನಿಂದ ನನ್ನ ಮತ್ತು ಸುಮಳ ಸಂಬಂಧ ಹಳಸುತ್ತಾ ಹೋಯಿತು. ಯಾವುದೋ ಸಣ್ಣ ವೈರಾಗ್ಯದ ಎಳೆ ನಮ್ಮಿಬ್ಬರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು. ನಮ್ಮಿಬ್ಬರ ಜಗಳದಲಿ ಕೂಸು ಬಡವಾಗಬಾರದೆಂದು ಅಕ್ಕ ‘ನಚಿಕೇತ’ ನನ್ನು ಸುಮಳ ವಿರೋಧದ ನಡುವೆಯೂ ತಾನೇ ಸಾಕುವುದಾಗೆ ಎತ್ತಿಕೊಂಡು ಹೋಗಿದ್ದಳು. ಊರಿನ ಕಂಬದ ಮನೆ, ನನ್ನದೇ ಚಿಂತೆಯಲಿ ಪ್ರಾಣಬಿಟ್ಟ ಅಮ್ಮ, ಏಕಾಂಗಿಯಾಗಿ ಕುಗ್ಗಿ ಹೋದ ಅಪ್ಪ ಇವುಗಳನ್ನೆಲ್ಲಾ ನೆನೆದಾಗಲೆಲ್ಲಾ ಸುಮಳ ವಿರುದ್ಧ ನನಗೆ ವೈರಾಗ್ಯ ದ್ವಿಗುಣವಾಗುತ್ತಾ ಹೋಯಿತು. ಇದರಲ್ಲಿ ಸುಮಳ ಯಾವುದೇ ತಪ್ಪು ಇರದಿದ್ದರೂ ನಾನು ಮೊದಲೇ ಕಂಡೀಷನ್ ಹಾಕಿದಂತೆ ವಿಚ್ಚೇದನ ಪಡೆಯಲು ತೀರ್ಮಾನಿಸಿದ್ದು ಸುಮಳಿಗು ಆಶ್ಚರ್ಯವನ್ನುಂಟುಮಾಡಿತ್ತು.

ಟೀಪಾಯಿಯ ಮೇಲಿಟ್ಟಿದ್ದ ಕಾಫಿ ಆರಿಹೋಗಿ ನೊಣವೊಂದು ಬಿದ್ದು ಅಲುಗಾಡುತ್ತಿತ್ತು. ಅಡುಗೆ ಮನೆಯಲ್ಲಿ ಸೇರಿದ್ದ ಸುಮಳನ್ನು ಕರೆದು ಸೋಫಾದ ಮೇಲೆ ಕುಳಿತುಕೊಳ್ಳಲು ತಿಳಿಸಿದೆ. ತಲೆ ಬಗ್ಗಿಸಿಕೊಂಡೇ ಬಂದ ಸುಮ ನನ್ನ ಪಕ್ಕದಲ್ಲೇ ಕುಳಿತುಕೊಂಡಳು. ವಿಷಯವನ್ನು ಮತ್ತೆ ಪ್ರಸ್ತಾಪಿಸುವುದು ನನಗೆ ನಿಜಕ್ಕೂ ಸಂಕಟದ ಕೆಲಸವೇ ಆಗಿಹೋಗಿತ್ತು. ಹೇಗೋ ಮನಸ್ಸನ್ನು ಗಟ್ಟಿ ಮಾಡಿ ‘ಸುಮ, ಲಾಯರ್ ಜಗದೀಶ್ ಫೋನ್ ಮಾಡಿದ್ದರು. ನಾಳೆ ಫ್ಯಾಮಿಲಿ ಕೋರ್ಟಿನಲಿ ಹಿಯರಿಂಗ್ ಇದೆ. ನಿನಗೆ ಗೊತ್ತಲ್ಲ ವಿಚ್ಛೇದನಕ್ಕೆ ಇಬ್ಬರ ಸಮ್ಮತಿಯೂ ಬೇಕು. ಅದರ್ವೈಸ್ ಇಟ್ ಈಸ್ ನಾಟ್ ಪಾಸಿಬಲ್, ಆ ಕಂಡೀಷನಿತ್ತೇ ನಾನು ನಿನ್ನನ್ನು ಮದುವೆಯಾದದ್ದು, ಬಹುಶಃ ನಿನಗೆ ನೆನಪಿದೆ ಎಂದೇ ಭಾವಿಸುತ್ತೇನೆ. ಎಂದೆ ತಲೆತಗ್ಗಿಸೇ ಕುಳಿತಿದ್ದ ಸುಮ ‘ಹ್ಞೂ’ ಎಂದಷ್ಟೆ ಹೇಳಿ ಸುಮ್ಮನಾದಳು. ಅವಳಲ್ಲೇ ಹುಟ್ಟಿಕೊಂಡ ನೋವುಗಳು ಅವಳನ್ನೇ ಕಿತ್ತು ತಿನ್ನುತ್ತಿವೆಯೋ ಎನ್ನುವಂತೆ ಮುಖ ಬಿರಿದುಹೋಗಿತ್ತು.

ಕೋರ್ಟ್ ಹಾಲಿನಲಿ ಅದಾಗಲೆ ಜನ ಸೇರಿದ್ದರು. ಜಡ್ಜ್ ಸಾಹೇಬರು ತಮ್ಮ ಆಸ್ಥಾನದಲ್ಲಿ ಆಸೀನರಾಗಿದ್ದರು. ಕಟಕಟೆಯ ಎರಡು ಬದಿಗಳಲ್ಲಿ ನನ್ನ ಮತ್ತು ಸುಮಳಿಗೆ ಲಾಯರ್ ಜಗದೀಶ್ ವಿಚಾರಣೆ ಆರಂಭಿಸಿದ್ದರು.

ವಿಚಾರಣೆ ನಡೆದ ಕೆಲಹೊತ್ತಿನ ನಂತರ ಲಾಯರ್ ಜಗದೀಶ್ ಅವರು ‘ಯುವರ್ ಹಾನರ್ ಇದೊಂದು ವಿಶೇಷ ಪ್ರಕರಣ. ಚಿಕ್ಕ ವಯಸ್ಸಿನಲ್ಲೇ ಅವನು ಅವಳಾಗಿ ಬದಲಾಗಿ ಹೋಗಿರುವ ಸುಮ ಒಬ್ಬ ತೃತೀಯ ಲಿಂಗಿ. ಯಾವ ಸಮಾಜ ನಿಕೃಷ್ಟವಾಗಿ ಕಾಣತೊಡಗಿತ್ತೋ, ಯಾವ ಸಮಾಜ ತಿರಸ್ಕಾರಭಾವದಿಂದ ಹೀಯಾಳಿಸತೊಡಗಿತ್ತೋ ಅಂತಹ ತೃತೀಯಲಿಂಗಿಗೆ ಒಂದು ಬದುಕುಕೊಟ್ಟು ಅವಳೂ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ, ಇಡೀ ಸಮಾಜವೇ ಎದುರು ನಿಂತರೂ ಹೆದರದೆ ಆಕೆಗೂ ಒಂದು ಬಾಳು ಕೊಟ್ಟ ಪ್ರಸಾದ್ನದು ಒಂದು ಐತಿಹಾಸಿಕ ನಿರ್ಧಾರವಾಗಿತ್ತು. ಇವರ ಮದುವೆ ಸಮಾಜಕ್ಕೊಂದು ಮಾದರಿಯಾಗಿತ್ತು. ಇವರಿಬ್ಬರೂ ‘ನಚಿಕೇತ್’ ಎಂಬ ಒಂದು ಗಂಡು ಮಗುವನ್ನು ದತ್ತು ಪಡೆದಿದ್ದಾರೆ. ನಾಳೆ ಇವರ ವಿಚ್ಛೇದನದಿಂದ ಆ ಮಗು ಅನಾಥವಾಗಬಾರದು. ಸಮಾಜಕ್ಕೆ ಮಾದರಿಯಾದ ಈ ವಿಶೇಷವಾದ ಪ್ರಕರಣ ವಿಚ್ಛೇದನದೊಂದಿಗೆ ಅಂತ್ಯವಾಗಬಾರದು. ದಯಮಾಡಿ ಇವರಿಗೆ ಯೋಚಿಸಲು, ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಲು ಒಂದು ವಾರ ಕಾಲಾವಕಾಶ ನೀಡಬೇಕೆಂದು ಬೇಡಿಕೆ ಇಟ್ಟರು. ‘ಪ್ರಸಾದ್ ಮತ್ತು ಸುಮ ನಿಮ್ಮ ನಿರ್ಧಾಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬದುಕು ಒಂದೇ ಬಾರಿ. ಅದನ್ನು ವ್ಯರ್ಥ ಮಾಡಿಕೊಳ್ಳಬೇಡಿ. ನಿಮಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ’ ಎಂದು ಅಂದಿನ ಕಲಾಪವನ್ನು ಜಡ್ಜ್ ಸಾಹೇಬರು ಮುಕ್ತಾಯಗೊಳಿಸಿದ್ದರು.

ಮತ್ತೆ ದ್ವಂದ್ವ ನನ್ನನ್ನಾವರಿಸಿಕೊಳ್ಳಲಾರಂಭಿಸಿತು. ಕಟಕಟೆಯಲಿ ನಿಂತಿದ್ದ ಸುಮಳನ್ನೊಮ್ಮೆ ದಿಟ್ಟಿಸಿದೆ. ಕಣ್ಣಾಲಿಗಳ ಜಿನುಗಿಸುತ್ತಾ ಅವಳು ತಲೆತಗ್ಗಿಸಿ ನಿಂತಳು. ಸತ್ತು ಹೋದ ಅಮ್ಮ, ಮೂಲೆ ಸೇರಿದ ಅಪ್ಪ, ಕಂಬದ ಮನೆ ಎಲ್ಲ ಒಮ್ಮೆಗೆ ಮನಸು ಘಾಸಿಗೊಳಿಸಲಾರಂಭಿದವು. ಪ್ರೇಕ್ಷಕರ ಗ್ಯಾಲರಿಯಲ್ಲಿ ಅಕ್ಕಳ ತೊಡೆ ಮೇಲೆ ಕುಳಿತಿದ್ದ ನಚಿಕೇತ ‘ಅಮ್ಮಾ’ ಎನ್ನುತ್ತಾ ಸುಮಾಳತ್ತ ಓಡಲಾರಂಭಿಸಿದ. ಅವನ ಹೆಜ್ಜೆ ಗುರುತುಗಳಲ್ಲಿ ನನ್ನ ಹೃದಯ ಒಡೆದು ಬಿದ್ದಂತೆ ಭಾಸವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.