ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ವಂದನಾ ಶಾಂತುಇಂದು
Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಪಾರಿವಾಳಗಳ ಗೂಡಿನಂಥ ಗುಡಿಸಲುಗಳು, ಅವುಗಳ ಅಕ್ಕಪಕ್ಕ ಹಾರುವ ಪಾರಿವಾಳಗಳ ಮರಿಗಳಂತೆ ಆದಿವಾಸಿ ಮಕ್ಕಳು ಮತ್ತು ನಾಲ್ಕೂ ಕಡೆ ಹಬ್ಬಿದ ಪಾವಾಗಢದ ಪರ್ವತಗಳಿಂದಾಗಿ ಜಾಂಬುಘೋಡಾದ ಕಾಡು ವಿಶಾಲ ಬಾವಿಯಂತೆ ತೋರುತ್ತಿತ್ತು. ಆದಿವಾಸಿ ಆಶ್ರಮದ ಸಂಚಾಲಕಿ ಸಿಂಧು ಅರಳಿದ ಮುತ್ತುಗದ ಮರವನ್ನು ಎವೆಯಿಕ್ಕದೆ ನೋಡುತ್ತಿದ್ದು, ಅವಳು ಜಲದೇವತೆಯಂತೆ ಕಾಣ ಬರುತ್ತಿದ್ದಳು.

“ಅಕ್ಕಾ...ಅಂಚೆ...”

ಧ್ವನಿಯನ್ನು ಕೇಳಿದ ಸಿಂಧು ಹಿಂದಿನ ಬೇಲಿಯಿಂದ ಮುಂದಿನ ಬಾಗಿಲಿಗೆ ಬಂದಳು. ಅವಳ ಹೆಸರಿಗೆ ಪತ್ರ ಬಂದಿತ್ತು! ಇಷ್ಟು ವರ್ಷಗಳ ನಂತರ ಇದು ಮೊದಲ ಬಾರಿಗೆ ಸಂಭವಿಸಿತ್ತು. ಅವಳು ಪತ್ರವನ್ನು ತೆಗೆದುಕೊಂಡಳು.

“ನನ್ನ ಪೂಜ್ಯ ತಂದೆ ಶ್ರೀ ದ್ವಾರಿಕಾದಾಸ್ ಮಥುರಾದಾಸ್ ಜೋಶಿಯವರು ಸ್ವರ್ಗಸ್ಥರಾಗಿದ್ದಾರೆ. ಲೌಕಿಕ ಸಂಸ್ಕಾರಗಳೆಲ್ಲವೂ ಮುಗಿದಿವೆ. ನಿನಗೆ ವಿಷಯ ತಿಳಿಸಬೇಕೆಂಬುದು ನನ್ನ ತಂದೆಯವರ ಆಸೆಯಾಗಿತ್ತು; ಅವರು ನಿನಗೆ ಅವರ ಪುಸ್ತಕಗಳನ್ನು ಕೊಟ್ಟು ಹೋಗಿದ್ದಾರೆ...ಇಷ್ಟವಿದ್ದರೆ ಬಂದು ತೆಗೆದುಕೊಂಡು ಹೋಗುವುದು.”

-ಕಾವೇರಿ ಜೋಶಿ

*****

ಪಾರಿವಾಳಗಳ ರೆಕ್ಕೆಗಳ ಬಡಿತದಂಥ ಕಾಲ ಅವಳೊಳಗೆ ಫಡಫಡವೆಂದು ಸದ್ದು ಮಾಡಿತು. ಕಾವೇರಿಯ ಮಾತುಗಳು ಅವಳಿಗೆ ಗಾಜಿನ ಗೋಲಿಗಳಂತೆ ಭಾಸವಾಯಿತು; ಇಂಥ ಗೋಲಿಗಳೊಂದಿಗೆ ಬಾಲ್ಯದಲ್ಲಿ ಇಬ್ಬರು ಸಹೋದರಿಯರು ಆಡುತ್ತಿದ್ದರು. ಕಾವೇರಿ ಗೋಲಿಯಾಟದಲ್ಲಿ ನಿಪುಣೆಯಾಗಿದ್ದಳು. ಅವಳೇ ಸದಾ ಗೆಲ್ಲುತ್ತಿದ್ದಳು. ಗೋಲಿಗಳನ್ನು ಮುಷ್ಟಿಯಲ್ಲಿ ಹಿಡಿದು ಸಿಂಧುವಿನ ಕಿವಿಗಳ ಬಳಿ ಸದ್ದು ಮಾಡುತ್ತಿದ್ದಳು.
“ಅಪ್ಪಾ...!” ಅವಳಿಗೆ ತನ್ನ ನಾಲಿಗೆಯಲ್ಲಿ ಜೀವವಿಲ್ಲವೆಂದು ಅನ್ನಿಸಿತು. ಅವಳು ಜೋಕಾಲೆಯಲ್ಲಿ ಕೂತಳು. ಜೋಕಾಲಿ ಹಿಂದಕ್ಕೆ ಹೋಯಿತು...

“ಸಿಂಧು, ನೀನೇನು ಹೇಳುತ್ತಿದ್ದೀಯ, ಗೊತ್ತ ನಿನಗೆ?”

“ಹೂಂ, ನಾನು ಎಚ್ಚರಲ್ಲಿಯೇ ಇದ್ದೇನೆ. ನಾನು ನಿಮ್ಮ ಮಗಳು, ಯೋಚನೆ ಮಾಡದೆ ಮಾತಾಡಲ್ಲ.”

“ಇಲ್ಲ, ಇದು ಸಾಧ್ಯವಿಲ್ಲ.” ದ್ವಾರಿಕಾದಾಸರು ಜುಟ್ಟು ಕಟ್ಟಿಕೊಳ್ಳುತ್ತಾ ಹೇಳಿದರು.

“ಇದನ್ನು ನೀವು ಹೇಳ್ತಿದ್ದೀರ! ಏನಾದರು ಕಾರಣ?”

“ಪ್ರತಿಯೊಂದಕ್ಕೂ ಕಾರಣ ಇರಲ್ಲ.”

“ಅವನ ವಿದ್ವತ್ತಿನ ಬಗ್ಗೆ ಏನಾದರು ಸಂದೇಹ?”

“ಇಲ್ಲ, ಸಂದೇಹವಿಲ್ಲ. ಆದರೆ...”

ತಂದೆಯವರ ಮಾತಿನಲ್ಲಿದ್ದ ದೃಢತೆಯಿಂದ ಸಿಂಧು ಎರಡು ಕ್ಷಣ ಕಂಪಿಸಿದಳು, ನಂತರ ಸುಧಾರಿಸಿಕೊಂಡು ಹೇಳಿದಳು, “ಆದರೆ ಇದೇ ಆಗುವುದಿದೆ...”

ತಂದೆಯವರು ತನ್ನ ಮಾತನ್ನು ಕೊನೆಯದೆಂದು ತಿಳಿಯಲು ಇದು ಸಾಹಿತ್ಯದ ಸಿದ್ಧಾಂತವಲ್ಲ ಎಂಬುದನ್ನು ಸಿಂಧು ಅರ್ಥ ಮಾಡಿಕೊಂಡಳು. ಹೀಗಾಗಿ ಅವಳು ಸಹ ತನ್ನ ಧ್ವನಿಯನ್ನು ಎತ್ತರಿಸಿದಳು. ಅಪ್ಪ ಸ್ವಲ್ಪ ಮೆದುವಾಗಿ ಹೇಳಿದರು, “ನೋಡು ಸಿಂಧು, ಇದು ಜೀವಮಾನದ ಪ್ರಶ್ನೆ. ಇಂಥ ಮಹತ್ವದ ನಿರ್ಣಯವನ್ನು ಭಾವಾವೇಶದಲ್ಲಿ ತೆಗೆದುಕೊಳ್ಳಬಾರದು. ನಾವು ಆ ಬಗ್ಗೆ ಶಾಂತಿಯಿಂದ ಚರ್ಚಿಸೋಣ, ಈಗ ನೀನು ಸಣ್ಣವಳಲ್ಲ.”

“ನಾನೇನೂ ಯೋಚಿಸಬೇಕಿಲ್ಲ. ನಾನು ನನ್ನ ತೀರ್ಮಾನವನ್ನು ಹೇಳಿದ್ದೇನೆ, ಅದೇ ಕೊನೆಯದು.”

“ನಾನು ಹೀಗಾಗಲು ಬಿಡಲ್ಲ...ನಿನ್ನದೊಂದು ತೀರ್ಮಾನ ನನ್ನ ಮತ್ತು ನನ್ನ ಪೂರ್ವಿಕರ ಮಾನವನ್ನು ಮಣ್ಣುಪಾಲು ಮಾಡಲು ನಾನೆಂದೂ ಬಿಡುವುದಿಲ್ಲ, ಅವನ್ಯಾರು ಅಂತ ಗೊತ್ತಾ? ನನಗೇನಾದರೂ ಗೊತ್ತಿದ್ದರೆ...ಅವನಿಗೆ...” ದ್ವಾರಿಕಾದಾಸರಿಗೆ ತಮ್ಮ ಅಜ್ಜ-ಮುತ್ತಜ್ಜ ಹೇಳುತ್ತಿದ್ದ ಮಾತುಗಳನ್ನು ಹೇಳಲು ಕಷ್ಟವಾಗುತ್ತಿತ್ತು.

ಸಿಂಧುಗೆ ವಿದ್ಯುತ್ ಶಾಕ್ ಹೊಡೆದಂತಾಯಿತು. ಅವಳು ತಂದೆಯವರ ‘ಬೇಡ’ ಎಂಬುದಕ್ಕೆ ಕಾರಣ ಇದಿರಬಹುದೆಂದು ಅವಳು ಯೋಚಿಸಲು ಸಹ ಸಾಧ್ಯವಿರಲಿಲ್ಲ. ತನಗೇಕೆ ತನ್ನ ತಂದೆಯವರ ಈ ವ್ಯಕ್ತಿತ್ವ ಕಾಣ ಬರಲಿಲ್ಲ? ಈ ಯುದ್ಧ ಸುಲಭವಲ್ಲ ಎಂಬುದು ಅವಳಿಗೆ ಅರ್ಥವಾಯಿತು. ಅವಳು ಸಿಟ್ಟು ಮತ್ತು ದುಃಖವನ್ನು ನುಂಗಿಕೊಂಡು ಹೇಳಿದಳು, “ಅಪ್ಪಾ! ನನಗೆ ನೀರವ್ ಎಲ್ಲವನ್ನೂ ಹೇಳಿದ್ದಾನೆ. ಅವನ ಅದೃಷ್ಟ ನೋಡಿ, ಮನಸ್ಸಿಗೆ ಇಷ್ಟವಾದ ಹುಡುಗಿ ಎದುರಿಗೆ ಪ್ರೇಮವನ್ನು ವ್ಯಕ್ತಪಡಿಸಿದರೆ, ಪ್ರೀತಿಯ ಪ್ರಚಂಡ ಪ್ರವಾಹದಲ್ಲಿ ಕೊಚ್ಚಿ ಹೋಗುವುದಕ್ಕೆ ಬದಲು ಗಟ್ಟಿಯಾಗಿ ನಿಲ್ಲಬೇಕಾಗುತ್ತಿದೆ. ತನ್ನನ್ನೇ ಸೀಳಿಕೊಂಡು ಜಾತಿಯನ್ನು ಹೇಳಬೇಕಾಗುತ್ತಿದೆ. ಜೀವನದಲ್ಲಿ ಇದಕ್ಕಿಂತ ದೊಡ್ಡ ವಿಡಂಬನೆ ಇನ್ನೇನಿರಲು ಸಾಧ್ಯ?”

“ಆ ಬದ್ಮಾಶ್ ನಿನ್ನನ್ನು ಪುಸಲಾಯಿಸಿದ...!”

ವಂಶಜ: 2

“ಅಪ್ಪಾ! ಇಂಥ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ತಂದೆ ಹೇಳುವ ಮಾತುಗಳು ನಿಮ್ಮ ಬಾಯಿಯಿಂದ ಬರುವುದು ಶೋಭೆ ತರುವುದಿಲ್ಲ. ನೀರವ್ ಅಲ್ಲ, ನಾನು ಪ್ರಸ್ತಾವ ಮಾಡಿದ್ದೆ ಎಂಬುದನ್ನು ನೀವು ಕೇಳಿಲ್ಲ?”

“ಸಿಂಧು, ಹೀಗೆ ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ? ನಮ್ಮ ಸಂಸ್ಕಾರ ಎಲ್ಲಿ...ನಮ್ಮ ಸಂಸ್ಕೃತಿ ಎಲ್ಲಿ! ಇದೆಲ್ಲವೂ ಪಶ್ಚಿಮೀಕರಣದ ಪರಿಣಾಮ...ನೀನೂ ಅದರ ಹಿಡಿತಕ್ಕೆ ಒಳಗಾದೆಯಾ?”

“ಅಪ್ಪಾ, ಈಗ್ಯೆ ಕೆಲವು ದಿನಗಳ ಹಿಂದೆ ನೀವು ನಿಮ್ಮ ಭಾಷಣದಲ್ಲಿ, ‘ಇಡೀ ವಿಶ್ವದಲ್ಲಿ ಶ್ರೇಷ್ಠ ಪ್ರೇಮ-ಪತ್ರವಿರುವುದಾದರೆ, ಅದು ರುಕ್ಮಿಣಿ ಕೃಷ್ಣನಿಗೆ ಬರೆದ ಪತ್ರ’ ಎಂದು ಹೇಳಿದ್ದಿರಿ. ರುಕ್ಮಿಣಿ ಪಶ್ಚಿಮದ ಹಿಡಿತಕ್ಕೆ ಒಳಗಾಗಿರಲಿಲ್ಲ ಎಂಬುದು ನಿಮಗೆ ತಿಳಿದಿರಬೇಕು...?”

“ಸಿಂಧು...”

ಅವಳು ಮಾತನಾಡದೆ, ಕಿಟಕಿಗಳನ್ನು ಮುಚ್ಚಲು ಬಂದು ಅಲ್ಲಿಯೇ ನಿಂತಳು. ತೆಂಗಿನಮರಗಳ ಹಿಂದಿನಿಂದ ಕಾಣಿಸುತ್ತಿದ್ದ ಹುಣ್ಣಿಮೆಯ ಚಂದ್ರ ಅವಳಿಗೆ, ರುಕ್ಮಿಣಿ ಶ್ರೀಕೃಷ್ಣನಿಗೆ ಬರೆದ ಭೋಜಪತ್ರದಂತೆ ಕಂಡಿತು. ಅವಳು ಚಂದ್ರನನ್ನು ನೋಡುವುದರಲ್ಲಿ ಮಗ್ನಳಾದಳು. ಅವಳ ಕಿವಿಗಳಲ್ಲಿ ನೀರವ್‌ನ ಮಾತುಗಳು ಪ್ರತಿಧ್ವನಿಸಿದವು. “ಸಿಂಧು, ನೀನು ಸಿಂಧುವಾಗಿದ್ದೀಯ. ಪ್ರಚಂಡ ಸಿಂಧು... ಯಾರ ಧ್ವನಿಯನ್ನು ಹತ್ತಿಕ್ಕಲು, ಬಾಯಿಗೆ ಬಟ್ಟೆ ಕಟ್ಟಲಾಗಿದೆಯೋ ಹಾಗೂ ಈ ಸಿಂಧು ಕಣಿವೆಯ ಸಂಸ್ಕೃತಿಯಲ್ಲಿ ಯಾರ ಪ್ರತಿ-ಘೋಷಣೆಯೇ ಬರಬಾರದು ಎಂಬುವವರಿಗೆ ಹಾಗೂ ಆ ಸಮಾಜಕ್ಕೆ ನಾನು ಪ್ರತಿನಿಧಿಯಾಗಿದ್ದೇನೆ. ಆಸೇತು ಹಿಮಾಲಯದ ಮೇಲೆ ಅವರ ಪಾದಚಿಹ್ನೆ ಇರಬಾರದೆಂದು ಅವರ ಬೆನ್ನ ಮೇಲೆ ಭಾರ ಹೇರಲಾಯಿತು. ನಾನು ಅಂಥ ಸಮಾಜದಿಂದ ಬರುತ್ತೇನೆ, ನೀವು ನಾದಬ್ರಹ್ಮನ ಉದ್ಗಾತಾ ಋಷಿಗಳ ಉತ್ತರಾಧಿಕಾರಿಣಿ! ನಮ್ಮ ಹೊಂದಾಣಿಕೆ ಹೇಗಾಗಲು ಸಾಧ್ಯ, ಸಿಂಧು? ಮತ್ತೆ...ನಾನು ಸಮುದ್ರವಲ್ಲ, ನಾನು ಉರಿಯುವ ರೇಗಿಸ್ತಾನ, ಅಲ್ಲಿ ಮರೀಚಿಕೆಯನ್ನು ಹೊರತುಪಡಿಸಿ ಬೇರೇನೂ ಸಿಗುವುದಿಲ್ಲ.”

“ನೀರವ್...ಪ್ಲೀಸ್, ಹೀಗೆ ಮಾತನಾಡಬೇಡ.” ಸಿಂಧು ನೀರವನ ಹೆಗಲನ್ನು ಹಿಡಿದಳು. ಅವಳ ತುಟಿಗಳು ಕಂಪಿಸುತ್ತಿದ್ದವು. ನೀರವನ ಕೈ ಸಹ ಸಿಂಧುವಿನ ಹೆಗಲ ಮೇಲೆ ಬಂತು. ಅವನು ಸ್ವಲ್ಪ ಬಾಗಿದ...ಅವನ ಕಣ್ಣುಗಳೆದುರು ಮರೀಚಿಕೆ ನರ್ತಿಸಿತು, ಅವನು ದೂರಕ್ಕೆ ಹೋದ.

ಸಿಂಧು ಸಮಾಧಿಗೆ ಹೋದಂತಿತ್ತು. ಆಗಲೇ ಅವಳಿಗೆ ನೀರವ್‌ನ ಧ್ವನಿ ಕೇಳಿಸಿತು, “ಸಿಂಧು, ನೀನು ಬುದ್ಧಿ ಮತ್ತು ಸೌಂದರ್ಯದ ಒಡತಿ ಸಾಕ್ಷಾತ್ ರುಕ್ಮಿಣಿಯಂತಿದ್ದೀಯ. ರುಕ್ಮಿಣಿಯ ಪ್ರೀತಿಯನ್ನು ಕೃಷ್ಣನೇ ಸಂಭಾಳಿಸಲು ಸಾಧ್ಯವಾಯಿತು. ನಾನು...ನಾನು...ಕೃಷ್ಣನಲ್ಲ.”

ನೀರವ್ ಅಲ್ಲಿಂದ ವೇಗವಾಗಿ ಹೊರಟು ಹೋದ. ಸಿಂಧು ನೋಡುತ್ತಲೇ ನಿಂತಳು. ಅವನನ್ನು ತಡೆಯದಾದಳು, ಏಕೆಂದರೆ ಅವಳೇ, ಅವಳಲ್ಲಿರಲಿಲ್ಲ.

ಗಾಳಿಯ ಹೊಡೆತಕ್ಕೆ ಕಿಟಕಿ ಮುಚ್ಚಿತು. ತಾನು ತಂದೆಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ನೆನಪಿಸಿಕೊಂಡು ಹಿಂದಕ್ಕೆ ಹೊರಳಿದಳು. ದ್ವಾರಿಕಾದಾಸರು ತಮ್ಮ ಕೋಣೆಗೆ ಹೋಗಿದ್ದರು. ಜೋಕಾಲಿ ಮೆಲ್ಲ-ಮೆಲ್ಲನೆ ತೂಗುತ್ತಿತ್ತು, ಅಂದರೆ ಅಪ್ಪ ಇದೀಗ ತಾನೇ ಎದ್ದು ಹೋಗಿದ್ದರು. ಸಿಂಧು ಕೋಣೆಯೆಡೆಗೆ ನೋಡಿದಳು, ಬಾಗಿಲು ಮುಚ್ಚಿತ್ತು. ಅವಳ ದೃಷ್ಟಿ ಕೊಠಡಿಯಲ್ಲಿದ್ದ ಟೇಬಲ್ ಮೇಲೆ ಹರಿಯಿತು. ಅಮ್ಮ-ಅಜ್ಜಿಯ ಫೋಟೋ ಎದುರು ಪಾರಿಜಾತದ ಹೂವುಗಳಿದ್ದವು. ಎದುರಿನ ಗೋಡೆಯಲ್ಲಿ ಅಜ್ಜನ ನೀಳಕಾಯದ ಫೋಟೋ ತೂಗುತ್ತಿತ್ತು. ಸಿಂಧುಗೆ ಸದಾ, ಅಜ್ಜ ಫೋಟೋದಲ್ಲಿ ಕುಳಿತು ಮನೆಯ ಆಡಳಿತವನ್ನು ನಡೆಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು. ಅಮೆರಿಕಾದ ವ್ಯಾಮೋಹದಲ್ಲಿ ಗ್ರಾಜುಯೇಟ್ ಅದ ತಕ್ಷಣ ಮದುವೆಯಾಗಿದ್ದ ತಂಗಿ ಕಾವೇರಿ ನೆನಪಾದಳು. ಕಾವೇರಿ ವಿವಾಹವಾದ ನಂತರ ‘ಜೋಶಿ ಜಾನಿ’ ಎಂದು ಎರಡು ಅಡ್ಡ ಹೆಸರುಗಳನ್ನಿಟ್ಟುಕೊಂಡಿದ್ದಳು. ಈ ತೋರ್ಪಡಿಕೆಯನ್ನು ನೋಡಿ ಸಿಂಧುಗೆ ನಗು ಬರುತ್ತಿತ್ತು. ಅವಳು ಕಾವೇರಿಯನ್ನು ಇದರರ್ಥವೇನೆಂದು ಕೇಳುತ್ತಿದ್ದಳು, “ಈ ಎರಡು ಅಡ್ಡ ಹೆಸರನ್ನಿಟ್ಟುಕೊಂಡ ನಂತರವೂ, ನಿನ್ನ ಗುರುತೇನು? ಅಮ್ಮನನ್ನು ಗುರುತಿಸಿದೆಯಾ? ನಾವು ನಮ್ಮ ತಾಯಿಯ ಮಕ್ಕಳಲ್ಲವೇ? ನಮ್ಮಲ್ಲಿ ಮಗಳು ತಂದೆಯಿಂದ ಹಾಗೂ ಮಗ ತಾಯಿಯಿಂದ ಗುರುತಿಸಲ್ಪಡುತ್ತಿದ್ದರು. ಇದೇ ನಮ್ಮ ಸಂಸ್ಕೃತಿ. ಹೊಸದೇನಾದರು ಮಾಡಬೇಕೆಂದಿದ್ದರೆ, ಹೀಗೆ ಏನಾದರು ಮಾಡಬೇಕು.” ಕಾವೇರಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ, ಆಗ ಅವಳು ಸಿಂಧುಗೆ ಹಳೆಯ ಕಂದಾಚಾರದವಳು ಎಂದು ಹೇಳಿ ವ್ಯಂಗ್ಯವಾಡುತ್ತಿದ್ದಳು.

ದ್ವಾರಿಕಾದಾಸರು ತಮ್ಮ ಕೋಣೆಯ ಕಿಟಕಿಯಿಂದ ಕಾಣುಸುತ್ತಿದ್ದ ಚಂದ್ರನನ್ನು ನೋಡುತ್ತಿದ್ದರು. ವಾತಾವರಣ ಬಾನಾಡಿಯ ಧ್ವನಿಯಿಂದ ಪ್ರತಿಧ್ವನಿಸುತ್ತಿತ್ತು. ಈ ಧ್ವನಿಯ ನಡುವೆ ಅವರಿಗೆ ಹುಣ್ಣಿಮೆಯ ಚಂದ್ರ, ಬಾನಾಡಿಯ ಮೊಟ್ಟೆಯಂತೆ ಕಂಡ. ಅದು ಬಾನಾಡಿ ಅಲ್ಲ, ತಾವೇ ಖುದ್ದು ಆಗಸದಲ್ಲಿ ಸುತ್ತುಹಾಕುತ್ತಿದ್ದೇವೆ ಎಂದು ಅನ್ನಿಸಿತು. ಅವರಿಗೆ, ಅದು ಬಾಲ್ಯದಲ್ಲಿ ಓದಿದ್ದ ಆ ಪದ್ಯ ನೆನಪಾಯಿತು, “ಟರ್ ರೇ ಟಿಡೋಡಿ ಸಾಗರನಾ ತೀರೆ...ಸಾಗರ್ ಮಾರಾ ಇಂಡಾ ಡುಬಾಡಿ ದೆ...!” ತಮ್ಮ ಸಂಸ್ಕಾರವೆಂಬ ಮೊಟ್ಟೆಯನ್ನು ಅವರ ಸಮುದ್ರದಂಥ ಮಗಳು ಮುಳುಗಿಸಲು ಹೊರಟಿದ್ದಾಳೆ ಎಂದು ಅನ್ನಿಸಿತು. ಬಾನಾಡಿಯಂತೆ ಅವರ ಒಂದು ಕಾಲು ಮೇಲಾಯಿತು, “ಇಲ್ಲ...ಇಲ್ಲ...ನಾನು ಹೀಗಾಗಲು ಬಿಡಲ್ಲ, ಎಂದಿಗೂ ಬಿಡಲ್ಲ...”

ಬೆಳಿಗ್ಗೆ ದ್ವಾರಿಕಾದಾಸರು ಸೋಫಾದಲ್ಲಿ ನಿದ್ರಿಸುತ್ತಿದ್ದ ಸಿಂಧುವಿನ ತಲೆಯನ್ನು ನೇವರಿಸುತ್ತಾ ಅವಳನ್ನು ಎಬ್ಬಿಸಿದರು. ಸಿಂಧು ಕಣ್ಣುಗಳನ್ನು ಬಿಡುವಷ್ಟರಲ್ಲಿ ಅವರು ಅಡುಗೆ ಮನೆಗೆ ಹೋಗಿದ್ದರು. ಸಿಂಧು ಮುಖ ತೊಳೆದು ಅಡುಗೆ ಮನೆಗೆ ಬಂದಳು. ವಿ.ಸಿ.ಡಿ. ಯಲ್ಲಿ ‘ವೈಷ್ಣವ್ ಜನ ತೋ ತೇಣೆ ರೇ ಕಹಿಯೆ ಜೇ ಪೀಡ್ ಪರಾಯಿ ಜಾಣೆ ರೇ...’ ಹಾಡು ಬರುತ್ತಿತ್ತು. ಸಿಂಧು ಅದನ್ನು ನಿಲ್ಲಿಸಿದಳು. ಅದನ್ನು ದ್ವಾರಿಕಾದಾಸರು ನೋಡಿದರು. ತಂದೆಯ ಕಣ್ಣುಗಳಲ್ಲಿ ಮೂಡಿದ ‘ಏಕೆ?’ ಎಂಬ ಶಬ್ದವನ್ನು ಅವಳು ಓದಿದಳು.

“ಅಪ್ಪಾ...ನೀವು ಕರ್ಮಕಾಂಡವನ್ನು ವಿರೋಧಿಸುತ್ತೀರಲ್ಲ? ನರಸಿಂಹ ಮೆಹತಾರನ್ನು ಅಭ್ಯಾಸ ಬಲದಂತೆ ವಿವಶರಾಗಿ ನಿತ್ಯ ಕೇಳುವುದು ಸಹ ಕರ್ಮಕಾಂಡವಾಗುತ್ತದೆ ತಾನೇ?”

“ಸಿಂಧು!...ಇನ್ನೂ ತಲೆಯಿಂದ ಭೂತ ಹೋಗಲಿಲ್ವ?”

“ಅಪ್ಪಾ, ಅದು ಭೂತವಲ್ಲ, ಅದು ಜೀವನ-ರಸ, ಅದರ ಅಮಲು ನನಗೇರಿದೆ.”

“ಆ ಅಮಲು ಇಳಿಯುತ್ತೆ, ಆಗ ನಿನಗೆ ವಾಸ್ತವಿಕತೆಯ ಅರಿವಾಗುತ್ತದೆ, ಆಗ ತುಂಬಾ ಪಶ್ಚಾತ್ತಾಪ ಪಡ್ತೀಯ.”

ವಂಶಜ: 3

“ಆದರೆ ಈಗ ನಿಮ್ಮ ಬಗ್ಗೆಯಿದ್ದ ಹೆಮ್ಮೆಯ ಅಮಲು ಇಳಿದಿದೆ...ವಾಸ್ತವಿಕತೆ ಕಹಿಯೂ ಅಲ್ಲ, ಏನೂ ಅಲ್ಲ. ನೀವು ತಿನ್ನುವ ಮತ್ತು ಜಗಿಯುವ ಹಲ್ಲುಗಳು ಬೇರೆ-ಬೇರೆ, ಅದರ ಕುಟುಕು ನನ್ನ ಭಾವನೆಗಳನ್ನು ಕಿವುಡಾಗಿಸಿದೆ. ಜಾತಿ, ಮೇಲು-ಕೀಳು ಭಾವನೆಗಳು ದೇಶವನ್ನು ಟೊಳ್ಳು ಮಾಡಿದೆ, ಅದರಿಂದಾಗಿಯೇ ದೇಶ ಗುಲಾಮಗಿರಿಯನ್ನು ಅನುಭವಿಸಬೇಕಾಯಿತು, ಧಮಾಂತರದ ಪ್ರವೃತ್ತಿ ಹೆಚ್ಚಿತು, ಇದರ ಪರಿಣಾಮಗಳನ್ನು ಇಂದು ನಾನು ಅನುಭವಿಸುತ್ತಿದ್ದೇವೆ, ಹೀಗಂತ ನೀವು ಅದೆಷ್ಟೋ ಬಾರಿ ಸಾರ್ವಜನಿಕವಾಗಿ ಹೇಳಿದ್ದೀರ. ಆದರೆ ನಿಜ ಜೀವನದಲ್ಲಿ ಹೀಗೆ! ನಿಮ್ಮ ಈ ತೋರ್ಪಡಿಕೆ ನಿಮಗೇ ನಾಚಿಕೆಯೆನಿಸುವುದಿಲ್ಲವೇ?”

ತಮ್ಮ ಸ್ವಾಭಿಮಾನಕ್ಕೆ ಬಿದ್ದ ಹೊಡೆತದಿಂದ ದ್ವಾರಿಕಾದಾಸರು ರೇಗಿದರು. ಮುಷ್ಟಿಯಲ್ಲಿದ್ದ ಸಿಟ್ಟು ನಾಲಿಗೆಗೆ ಬಂತು, “ಸಿಂ...ಧು...ನೀನು ಮಿತಿ ಮೀರಿದ್ದೀಯ, ನಿನ್ನ ತಂದೆಯನ್ನು ‘ಪಾಖಂಡಿ’ [ಧರ್ಮದ ಸೋಗುಗಾರ] ಎನ್ನಲು ನಿನಗೆ ನಾಚಿಕೆಯಾಗುವುದಿಲ್ಲವೇ? ಇದನ್ನೆಲ್ಲಾ ಎಲ್ಲಿಂದ ಕಲಿತಿದ್ದೆ ಅಂತ ನನಗೊತ್ತಿಲ್ವ? ಸಂಘದಂತೆ ಸಹವಾಸ. ನಾವು ಯಾರು ಎಂಬುದನ್ನು ಮರೆತೆಯಾ? ಎಲ್ಲಿದೆ ನಮ್ಮ ಗೋತ್ರ? ಎಲ್ಲವನ್ನು ಅವನು ಮತ್ತು ನೀನು ಮರೆತಿರಿ. ನಾವು ...ವೇದಾಂತಿ...ಸಮಾಜವನ್ನು ಸುಸಂಸ್ಕೃತರನ್ನಾಗಿ ಮಾಡುವವರು, ನಾವು...”
“ಅಪ್ಪಾ, ಇಂದು ನೀವು ಮಾತನಾಡುತ್ತಿರುವುದು ‘ಅಹಂ ಬ್ರಹ್ಮಾಸ್ಮಿ’ ಆಯ್ತು. ಇದರ ನಂತರ ಒಂದು ವೇಳೆ ‘ತತ್ವಮಸಿ’ ಬರದಿದ್ದರೆ, ಅದು ಅಹಂಕಾರವಾಗುತ್ತದೆ ಎಂದು ನೀವು ಕಲಿಸಿದ್ದೀರ. ಅಹಂಕಾರ ಸರ್ವನಾಶದ ಮೂಲ...”

“ಸಾಕ್...ಸಾಕು. ತುಂಬಾ ಆಯ್ತು...ಮುಂದೆ...”

ಬಾಗಿಲ ಗಂಟೆ ಬಾರಿಸಿತು. ಬಾಗಿಲನ್ನು ತೆರೆಯಲು ಸಿಂಧು ಎದ್ದು ನಿಂತಳು, ಆಗಲೇ ದ್ವಾರಿಕಾದಾಸರು ಅವಳನ್ನು ತಡೆದರು, “ನಾನು ತೆರೆಯುತ್ತೇನೆ. ನೀರವ್‌ನನ್ನು ನಾನೇ ಕರೆಸಿದ್ದೇನೆ.” ಸಿಂಧುಗೆ ಖುಷಿಯಾಯಿತು. ಹೆದರಿಕೆಯೂ ಆಯಿತು. ಎದುರಿಗೆ ನೀರವ್ ನಿಂತಿದ್ದ, ತನಗೆ ರುಕ್ಮಿ ಎಂದು ಹೇಳಿ ಕಳವಳಗೊಳಿಸುವ ನೀರವ್! ನಿನ್ನೆಯ ಘಟನೆಯಿಂದ ಅಪರಿಚಿತನಾಗಿದ್ದ ನೀರವ್, ಅಭ್ಯಾಸಬಲದಂತೆ ಹೇಳಿದ, “ಚಹಾಕ್ಕೆ ನನ್ನ ಕಾಯುತ್ತಿದ್ದೀರ?”

ಅನೇಕ ಬಾರಿ ದ್ವಾರಿಕಾದಾಸರು ಭಾನುವಾರದ ನೀರವ್‌ನನ್ನು ಬೆಳಿಗ್ಗೆಯೇ, ತಮ್ಮ ಕಾಲೇಜಿನ ಕೆಲಸಗಳಿಗೆ ಸಹಾಯ ಮಾಡಲು ಕರೆಯಿಸಿಕೊಳ್ಳುತ್ತಿದ್ದರು. ನೀರವ್ ಸಂತೋಷದಿಂದ ಬರುತ್ತಿದ್ದ. ಬೆಳಿಗ್ಗೆಯ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೆ ಜೊತೆಯಲ್ಲಿರುತ್ತಿದ್ದ. ದ್ವಾರಿಕಾದಾಸರು ಪ್ರಾಂಶುಪಾಲರಾಗಿದ್ದ ಕಾಲೇಜಿನಲ್ಲಿ ನೀರವ್ ಲೆಕ್ಚರರ್ ಆಗಿದ್ದ. ಸಿಂಧು ಬೇರೆ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಳು. ಕೆಲಸದೊಂದಿಗೆ ಜಗತ್ತಿನ ಸಾಹಿತ್ಯದ ಬಗ್ಗೆ ಚರ್ಚಿಸಲಾಗುತ್ತಿತ್ತು. ಭಾನುವಾರದ ಪೂರ್ಣಾಹುತಿ ಸಿಂಧುವಿನ ಗಜಲ್‌ನಿಂದ ಆರಂಭವಾಗುತ್ತಿತ್ತು. ಕಳೆದ ಭಾನುವಾರದಂದು ಸಿಂಧು ಹಾಡಿದ್ದಳು:

ಗಮ್ ಬಢೆ ಆ ರಹೇ ಹೈಂ, ಕಾತಿಲ್ ನಿಗಾಹೋಂ ಕೀ ತರಹ್,

ತುಮ್ ಛುಪಾ ಲೋ ಮುಝೆ ಐ ದೋಸ್ತ್, ಗುನಾಹೋಂ ಕೀ ತರಹ್

ಸಿಂಧುಗೆ ಆಶ್ಚರ್ಯವಾಯಿತು, “ನೀ...ನೀನು, ನೀವು ಕೂರಿ...ನಾನು...ಈಗ್ಲೇ...”

“ಚಾಹಾ ಮಾತ್ರ ಏಕೆ?” ದ್ವಾರಿಕಾದಾಸರ ಧ್ವನಿಯಲ್ಲಿ ಫೂತ್ಕಾರವಿತ್ತು.

ಈ ವಿಷಮಯ ವಾತಾವರಣದಿಂದ ನೀರವ್‌ನನ್ನು ಪಾರುಮಾಡಲು ಸಿಂಧು ಬಯಸುವಂತೆ ಸಿಂಧು ಅವನನ್ನು ಬಾಗಿಲೆಡೆಗೆ ತಳ್ಳುತ್ತಾ ಹೇಳಿದಳು, “ನೀರವ್, ನೀವಿಲ್ಲಿಂದ ಹೋಗಿ...” ತಾನು ಯಾವ ಬಾಯಿಯಿಂದ ತಂದೆಯವರ ಕಪಟತನವನ್ನು ಬಹಿರಂಗ ಪಡಿಸುವುದು? ಈಗ ವಿಕಟ ಪರಿಸ್ಥಿತಿ ಉದ್ಭವವಾಗಿತ್ತು. ಅವಳಿಗೆ ತಂದೆಯವರು ಈ ರೀತಿಯಲ್ಲಿ ಕೆಳಮಟ್ಟಕ್ಕಿಳಿಯುತ್ತಾರೆ ಎಂಬ ಕಲ್ಪನೆ ಸಹ ಇರಲಿಲ್ಲ.

ನೀರವ್ ವಾತಾವರಣವನ್ನು ಕೂಡಲೇ ಅರಿತುಕೊಂಡ. ಏನಾಗಿರಬಹುದೆಂಬುದನ್ನು ಸಹ ಅರ್ಥ ಮಾಡಿಕೊಂಡ. ಅವನ ಕಿವಿಗಳಿಗೆ ನಾಯಿಗಳ ಬೊಗಳಾಟ ಕೇಳಿಸಿತು. ಅವನು ಚಿಂತಾಕ್ರಾಂತನಾಗಿ ಅತ್ತ-ಇತ್ತ ನೋಡಿದ. ಅವನು ತನ್ನ ಗುರು ಗೊಂಬೆಯಂತೆ ನಿಂತಿರುವುದನ್ನು ನೋಡಿದ. ತನ್ನ ಕೈಯ ಬೆರಳುಗಳು ಕಂಪಿಸುತ್ತಿವೆ ಎಂದು ಅನ್ನಿಸಿತು. ಅವನು ಮುಷ್ಟಿ ಕಟ್ಟಿದ. ಹಳೆಯ ಪ್ರಶ್ನೆ ಮೂಡಿತು. ದ್ವಾರಿಕಾದಾಸರು ಎರಡು ಹೆಜ್ಜೆ ಹಿಂದಕ್ಕೆ ಸರಿದರು. ಸಿಂಧು ನಡುವೆ ಬಂದಳು, “ನೀರವ್, ಪ್ಲೀಸ್...ನೀವು ಹೋಗಿ.”

ನೀರವ್ ಸಿಂಧುವನ್ನು ನೋಡಿದ. ಸಿಂಧುವಿನ ಕಣ್ಣುಗಳು ತುಂಬಿ ಬಂದಿದ್ದವು. ಎರಡು ಕ್ಷಣ ತಾನು ಆ ಕಣ್ಣೀರಿನಲ್ಲಿ ಮುಳುಗುತ್ತೇನೆ ಎಂದು ಅನ್ನಿಸಿತು...ಆದರೆ ಕೂಡಲೇ ಸಂಭಾಳಿಸಿಕೊಂಡ, “ಸಿಂಧು, ನನಗೆ ಪರಿಣಾಮ ತಿಳಿದಿತ್ತು. ಅದಕ್ಕೇ ಅಷ್ಟು ಆಘಾತವಾಗಲಿಲ್ಲ...ಹೋಗಲಿ. ಸಂಪ್ರದಾಯದ ಸರಪಳಿಗಳನ್ನು ಮುರಿಯುವುದು ಅಷ್ಟು ಸುಲಭವಲ್ಲ. ಬ್ಲಡ್ ಟ್ರಾನ್ಸ್ಫ್ಯೂಜ್ ಆಗಬಹುದು, ಆದರೆ ಸಂಸ್ಕಾರಗಳ ಟ್ರಾನ್ಸ್ಫ್ಯೂಜನ್...?”

ನೀರವ್ ದ್ವಾರಿಕಾದಾಸರೆಡೆಗೆ ಹೊರಳಿದ. ದ್ವಾರಿಕಾದಾಸರು ಸಮಯದ ಲಾಭ ಪಡೆದರು, “ಒಬ್ಬರ ನಂಬಿಕೆಯನ್ನು ಜೀವಂತವಾಗಿಡುವುದು ಸಹ...ಅಷ್ಟೇ ಕಷ್ಟ. ನೀವು ಅದರಲ್ಲಿ ಯಶಸ್ವಿಯಾಗಿಲ್ಲ, ಶ್ರೀಮಾನರೇ. ಓದುವ ಬಗ್ಗೆ ನಿಮಗಿರುವ ಶ್ರದ್ಧೆಯನ್ನು ನೋಡಿ, ನಿಮ್ಮನ್ನು ನಾನು ಈ ನಗರಕ್ಕೆ ಕರೆತಂದೆ, ಆಗ ನೀವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಿರಿ. ನಂತರದ ವೃತ್ತಾಂತವನ್ನು ನಿಮಗೆ ಹೇಳುವ ಅಗತ್ಯವಿಲ್ಲ, ನಿಮಗೆಲ್ಲವೂ ನೆನಪಿರಲೇ ಬೇಕು...ಇಂದು...” ದ್ವಾರಿಕಾದಾಸರು ಮೌನ ವಹಿಸಿದರು. ಮುಂದೆ ಹಾಲಾಹಲವಿದೆ, ಅದರ ಒಂದು ಹನಿಯೇ ಸಾಕು ಎಂಬುದು ಅವರಿಗೆ ತಿಳಿದಿತ್ತು. ಅವರು ಟಿಟ್ಟಿಭದಂತೆ ತಮ್ಮದೊಂದು ಕಾಲನ್ನು ಮೇಲಕ್ಕೆತ್ತಿದರು.

ಸಮಯ ಸಿಲುಕಿದೆ ಎಂದು ಸಿಂಧುಗೆ ಅನ್ನಿಸಿತು. ನೀರವನಿಗೆ ಸಮಯ ಹಿಂದಕ್ಕೆ ಹೋಗುತ್ತಿದೆ ಎಂದು ಅನ್ನಿಸಿತು. ದೂರದಿಂದ ಕೇಳಿ ಬರುತ್ತಿದ್ದ ನಾಯಿಯ ಧ್ವನಿ ಈಗ ತೀವ್ರವಾಗಿತ್ತು, ನಾಯಿ ಕಿವಿಯ ಬಳಿಯೇ ಬೊಗಳುತ್ತಿದೆಯೆಂದು ಅನ್ನಿಸುತ್ತಿತ್ತು. ಅವನು ನಾಯಿಯ ಬಾಯಿಯನ್ನು ಮುಚ್ಚಿಸುವಂತೆ ಹೇಳಿದ, “ಸಾರ್, ನಾನೇನನ್ನೂ ಮರೆತಿಲ್ಲ. ನಿಮ್ಮ ಕೃಪೆ, ಪ್ರೀತಿ ಎಲ್ಲವೂ ನನಗೆ ನೆನಪಿವೆ. ಆದರೆ ನಾನು ವಿಶ್ವಾಸಘಾತುಕತನ ಮಾಡಿಲ್ಲ ಎಂಬುದನ್ನು ಖಂಡಿತ ನೆನಪಿಡಿ. ನಾನು ನನ್ನ ಪೂರ್ವಿಕರಿಗಿಂತ ಹೆಚ್ಚು ಅದೃಷ್ಟವಂತ ಎಂಬುದು ನನಗೆ ಗೊತ್ತಿದೆ. ನನಗೆ ನನ್ನ ಗುರುಗಳು ಎದುರು ಕೂರಿಸಿಕೊಂಡು ಬೋಧಿಸಿದ್ದಾರೆ. ಸಾರ್, ನಾನು ಮತ್ತೊಮ್ಮೆ ಗುರು-ದಕ್ಷಿಣೆ ಕೊಡಲು ಸಿದ್ಧನಿದ್ದೇನೆ, ನೀವು ಕೇಳಿ...”

“ಇಲ್ಲ...ಇಲ್ಲ...ನೀರವ್ ಇಂಥ ತಪ್ಪು ಮಾಡಬೇಡ. ಗುರು-ದಕ್ಷಿಣೆಯ ಇತಿಹಾಸ ಸರಿಯಿಲ್ಲ...” ಸಿಂಧು ತವಕಿಸಿದಳು.

ವಂಶಜ : 4

ದ್ವಾರಿಕಾದಾಸರು ಟಿಟ್ಟಿಭದಂತೆ ನಡೆಯುತ್ತಾ ಎರಡು ಹೆಜ್ಜೆ ಮುಂದೆ ಬಂದರು. ನಂತರ ಸಿಂಧುವನ್ನು ನೋಡಿದರು. ಅವರ ದೃಷ್ಟಿಯಲ್ಲಿ ಕಠೋರತೆಯಿತ್ತು. ಸಿಂಧು ಹೇಳಿದಳು, “ಅಪ್ಪಾ, ಪ್ಲೀಸ್...ನೀವೂ ಸಹ...”

“ನಾನು ನಿನ್ನ ಮಾತು ಕೇಳಬೇಕಿಲ್ಲ, ಹುಡುಗಿ! ನೀನು ನನ್ನ ನಂಬಿಕೆಗೆ ಆಘಾತ ಮಾಡಿದ್ದೀಯ. ಯಾರನ್ನು ನಾನು ವಿದುಷಿ ಎಂದು ತಿಳಿಯುತ್ತಿದ್ದನೋ ಅವಳು...ಇಂಥ ಕೆಟ್ಟ ಮನಸ್ಸಿನವಳು ಎಂದು ನಾನು ಕನಸಿನಲ್ಲೂ ಯೋಚಿಸಲಾರೆ ಎನ್ನುವಂತೆ ಮಾಡಿದ್ದೀಯ. ಕಾವೇರಿ ಎಲ್ಲಿ...ನೀನೆಲ್ಲಿ! ಅವಳು ಮದುವೆ ಮಾಡಿಕೊಂಡು ಅಮೆರಿಕಾಕ್ಕೆ ಹೋದಳು, ಆದರೂ ಅವಳು ಭಾರತೀಯ ಸಂಸ್ಕೃತಿಯನ್ನು ಬಿಡಲಿಲ್ಲ. ನೀನು ಪೀಳಿಗೆಗಳಿಂದ ಸಾಗಿ ಬರುತ್ತಿದ್ದ ಮರ್ಯಾದೆಗೆ ಕಳಂಕ ಹಚ್ಚಲು ಬಯಸುತ್ತಿದ್ದೀಯ.” ಈಗ ಅವರು ನೀರವ್ ಕಡೆಗೆ ಹೊರಳಿದರು, “ನೀನೇನು ಕೊಡಬಲ್ಲೆ, ನನಗೆ? ನಾನು ನಿನ್ನಲ್ಲಿ ಯಾಚಿಸಬೇಕೆ?”

“ಹೌದು ಸಾರ್! ಅದು ನಿಮ್ಮ ಅಸಹಾಯಕತೆಯ ಇತಿಹಾಸ, ಸಾರ್...” ನೀರವ್ ಬಯಸದಿದ್ದಾಗ್ಯೂ ಅವನ ಬಾಯಿಯಿಂದ ಈ ವ್ಯಂಗ್ಯದ ಮಾತು ಹೊರಟಿತು.

ಸತ್ಯವನ್ನು ಅರಗಿಸಿಕೊಳ್ಳುವಂತೆ ದ್ವಾರಿಕಾದಾಸರು ಸ್ವಲ್ಪ ಹೊತ್ತು ಮೌನವಾಗಿ ನಿಂತಿದ್ದರು, ನಂತರ ಯೋಚಿಸಿ ಹೇಳಿದರು, “ನೀನಿಲ್ಲಿಂದ ಹೊರಟು ಹೋಗು. ನಾನು ಬದುಕಿರುವವರೆಗೆ...”

“ಖಂಡಿತ ಸಾರ್, ಆದರೆ ಒಂದು ಮಾತನ್ನು ಅವಶ್ಯವಾಗಿ ಹೇಳಲು ಬಯಸ್ತೀನಿ, ನಿಮಗಿಷ್ಟವಿಲ್ಲದಿದ್ದಾಗ್ಯೂ ಹೇಳಲು ಬಯಸ್ತೀನಿ. ನಾನು ನಿತ್ಯ ಬೆಳಿಗ್ಗೆ ಬಂದು ಸಿಂಧುವಿನ ನೀಳ ಕೇಶಗಳಿಗೆ ಎರಡು ಜಡೆಗಳನ್ನು ಹೆಣೆಯುತ್ತಿದ್ದೆ, ಅಂದಿನಿಂದಲೇ ನಾನು ಸಿಂಧುವನ್ನು ಪ್ರೀತಿಸುತ್ತಾ ಬಂದಿದ್ದೇನೆ, ಆದರೆ ನಾನೆಂದೂ ಸಿಂಧುಗೆ ಹೇಳಲಿಲ್ಲ, ಏಕೆಂದರೆ ನಮ್ಮ ರಕ್ತದಲ್ಲಿ ಬೆರೆತಿದ್ದ ಭಯ ನಮ್ಮನ್ನು ತಡೆಯುತ್ತಿರುತ್ತದೆ, ಆ ಭಯ ಇನ್ನೊಮ್ಮೆ ನಿಜವೆಂದು ಸಾಬೀತಾಯಿತು, ಸಾರ್.” ಇಷ್ಟು ಹೇಳಿ ನೀರವ್ ದಢದಢ ಬಾಗಿಲೆಡೆಗೆ ಹೊರಳಿದ.

“ನೀರವ್ ನಿಲ್ಲು, ನಾನೂ ಬರ‍್ತೀನಿ.” ಸಿಂಧು ಓಡಿ ಬಂದಳು.

“ಬೇಡ ಸಿಂಧು, ನಾನು ಕೊಡುವ ದಕ್ಷಿಣೆ ಎಂದರೆ, ನಾನು ನಿನ್ನಿಂದ ದೂರವಾಗಬೇಕು. ನನ್ನ ಸರ್‌ಗೆ ಇದು ನನ್ನ ಕೊಟ್ಟ ಮಾತಾಗಿದೆ. ಸಾರ್ ಅವರ ಅನೇಕ ಉಪಕಾರ ನನ್ನ ಮೇಲಿದೆ. ಮತ್ತೆ... ಕೊಟ್ಟ ಮಾತಿನ ವಿಷಯದಲ್ಲಿ ರಘುಕುಲ ಮಾತ್ರವಲ್ಲ ನಿಷಾದ-ಕುಲದ ರೀತಿಯೂ ಇದೇ ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮತ್ತೆ...” ನೀರವ್ ಎರಡು ಕ್ಷಣ ಸಿಂಧುವನ್ನು ನೋಡುತ್ತಾ ನಿಂತ. ನಂತರ ಕೂಡಲೇ ಹೊರಟು ಹೋದ. ಸಿಂಧು ನೋಡುತ್ತಲೇ ನಿಂತು ಬಿಟ್ಟಳು. ನಿನ್ನೆ ರಾತ್ರಿ ಭೋಜಪತ್ರದಂತೆ ಕಾಣ ಬರುತ್ತಿದ್ದ ಚಂದ್ರನ ಪಿಂಡವನ್ನು ಮಾಡಿ ಯಾರೋ ಅವಳ ಮುಖಕ್ಕೆ ಎಸೆದಂತಾಯಿತು.

ತಮ್ಮ ಗೆಲುವಿನಿಂದ ಖುಷಿಗೊಂಡ ದ್ವಾರಿಕಾದಾಸರು ತಮ್ಮ ಮನದ ಭಾವನೆಯನ್ನು ಮರೆಮಾಚಿಕೊಂಡು ಸಿಂಧುವಿನ ಬಳಿಗೆ ಬಂದು ಪ್ರೀತಿಯಿಂದ ಹೇಳಿದರು, “ನೋಡು ಸಿಂಧು, ಏನಾದರು ಅರ್ಥವಾಯ್ತ? ನನ್ನ ಮುಗ್ಧ ಮಗಳೇ...”

ಸಿಂಧುಗೆ ತನ್ನ ಮಾರ್ಗದಲ್ಲಿ ಬೆಟ್ಟವೇ ಕುಸಿದು ಬಿತ್ತು, ಈಗ ತಾನು ಮಾರ್ಗವನ್ನು ಬದಲಾಯಿಸುವುದು ವಿವಶತೆಯಾಗಿದೆ ಎಂದು ಅನ್ನಿಸಿತು. ಯಾರನ್ನು ತಾನು ಸಮುದ್ರವೆಂದು ತಿಳಿದಿದ್ದಳೋ, ಅವನು ತನ್ನನ್ನು ಮರುಭೂಮಿಯಲ್ಲಿ ಒದ್ದಾಡುವಂತೆ ತ್ಯಜಿಸಿ ಕೊಚ್ಚಿ ಹೋದ. ಅವಳು ಏನೋ ಯೋಚಿಸಿ ಹೇಳಿದಳು, “ಎಲ್ಲವನ್ನೂ ನೋಡಿದೆ...ಇನ್ನು ನಾನೂ ಹೋಗ್ತೀನಿ.”

“ಸಿಂಧು...ನಿನ್ನ ತಂದೆಯನ್ನು ಬಿಟ್ಟು ಎಲ್ಲಿಗೆ ಹೋಗ್ತೀಯಾ ಮಗಳೇ? ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ...ನಿನ್ನೆದುರು ಉಜ್ವಲ ಭವಿಷ್ಯವಿದೆ. ನಿನ್ನ ಸಂಸ್ಕೃತ ಕಾವ್ಯ-ಸಂಗ್ರಹಕ್ಕೆ ರಾಷ್ಟ್ರ ಪತಿಗಳಿಂದ ಪುರಸ್ಕಾರ ಲಭಿಸುವುದಿದೆ. ಎಲ್ಲಾ ವ್ಯವಸ್ಥೆಯಾಗಿದೆ. ಇನ್ನೇನೂ ಬೇಡ. ನಿನ್ನ ಮತ್ತು ನನ್ನ ಸಂಬಂಧ...ಸದಾ ಕಾಲಕ್ಕೂ ಮುಗಿದು ಹೋಗುವುದು. ನೆನಪಿಟ್ಟುಕೋ.”

“ಅಪ್ಪಾ, ಸಂಬಂಧಗಳು ನಾವು ಹೇಳುವುದರಿಂದ ಮುಗಿದು ಹೋಗುವುದಿಲ್ಲ, ಆರಂಭವೂ ಆಗುವುದಿಲ್ಲ. ನಾನು ನಿಮ್ಮ ಮಗಳು ಹಾಗೂ...ನೀರವನ ಪ್ರೇಯಸಿಯಾಗಿರುವೆ, ಇದು ನನಗೆ ಶಾಶ್ವತ ಸತ್ಯ...ನಾನು ನಿಮ್ಮಿಬ್ಬರಿಗೆ ಲಭಿಸಲೋ ಅಥವಾ ಇಲ್ಲವೋ..ಆದರೆ ನೀವಿಬ್ಬರೂ ಸೇರಿ ನನ್ನ ದಾರಿಯನ್ನು ನನಗೆ ತೋರಿಸಿದಿರಿ. ಆದರೆ ಅದನ್ನು ನಾನು ಒಪ್ಪಿದಾಗ ಮಾತ್ರ ತಾನೇ? ನಾನಿನ್ನು ಬರ‍್ತೀನಿ...”

*****

ಕಚ್ಛದ ರಣ ಬಿಸಿಲಿನಲ್ಲಿ ಸಿಂಧು ಆ ಪತ್ರವನ್ನು ನೋಡುತ್ತಿದ್ದಳು, ಆಗ ಪತ್ರವನ್ನು ಕೊಟ್ಟ ಹುಡುಗ ಮರಳಿ ಬಂದು ಹೇಳಿದ, “ಅಕ್ಕಾ, ಅತಿಥಿಗಳು...”

ಸಿಂಧು ಅವನನ್ನು ನೋಡಿದಳು, ಅವನ ಹಿಂದೆ ಯಾರೋ ನಿಂತಿದ್ದರು. ಬಾವಿಯ ಗೋಡೆಗಳನ್ನು ಒಡೆದು, ಬೆಳೆಯಲು ಪ್ರಯತ್ನಿಸುತ್ತಿದ್ದ ಅಶ್ವತ್ಥ ಮರದಂತೆ ನೀರವ್ ಎದುರಿಗೆ ನಿಂತಿದ್ದ. ಸಿಂಧುಗೆ ಶ್ರೀಮದ್ಗೀತಾದ ಶ್ಲೋಕವೊಂದು ನೆನಪಾಯಿತು, ‘ಅಶ್ವತ್ಥಃ ಸರ್ವ ವೃಕ್ಷಾಣಾ...’ ಅದರೊಂದಿಗೇ, ನೀರವ್ ಅವಳಿಗೆ ರುಕ್ಮಿಣಿ ಎಂದಿದ್ದು ನೆನಪಾಗಿ, ಅವಳ ಕಣ್ಣುಗಳು ತುಂಬಿ ಬಂದವು. ಅವಳು ಎರಡು ಹೆಜ್ಜೆ ಮುಂದೆ ಬಂದಳು... ನೀರವ್‌ನ ಮಾತುಗಳು ನೆನಪಾದವು, “ನಾನು ಕೃಷ್ಣನಲ್ಲ...ನಾನು ಕೃಷ್ಣ...ಅಲ್ಲ...” ಅವಳು ನಿಂತಳು, ಮುಂದೆ ಹಾಕಿದ್ದ ಹೆಜ್ಜೆಗಳಿಂದ ಹಿಂದಕ್ಕೆ ಹೋದಳು. ನಂತರ ಒಮ್ಮೆಲೆ ಸುಧಾರಿಸಿಕೊಂಡು ಹೇಳಿದಳು, “ಸೋಮು! ಅತಿಥಿಗಳನ್ನು ಅತಿಥಿಗಳ ಕೊಠಡಿಯಲ್ಲಿ ಕೂರಿಸು, ನಾನಲ್ಲಿಗೆ ಬರುತ್ತೇನೆ.”

ಅವಳು ಪತ್ರವನ್ನು ಹರಿದು ಅದನ್ನು ಚೂರು-ಚೂರು ಮಾಡಿ ಗಾಳಿಗೆ ಹಾರಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT