ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ. ಅವಳು ಅಂತಹ ಸುಂದರಿ ಏನಲ್ಲಾ, ನಸು ಕಂದು ಬಣ್ಣದ, ಎತ್ತರವಲ್ಲದ ದೇಹ. ಕಾವ್ಯ ಕನ್ನಿಕೆಯಂತೋ ಅಲ್ಲವೇ ಅಲ್ಲ, ಆದರೂ ಅವಳೆಂದರೆ ಅವನಿಗೆ ಏನೋ ಒಂದು ಖುಷಿ, ಒಂದು ನೆಮ್ಮದಿ. ಅವಳೊಡನೆ ಮಾತನಾಡಲು ಒಂದು ಅವಕಾಶಕ್ಕಾಗಿ ಸದಾ ಹುಡುಕಾಟ. ಅವನನ್ನು ಕಂಡಾಗ ಅವಳು ಬೀರುವ ಮುಗುಳ್ನಗೆಗೆ ಇವನ ಒಳಮುಖ ಅರಳುತ್ತದೆ, ಆದರೆ ಅದನ್ನು ಅಷ್ಟೊಂದು ತೋರಿಸಿಕೊಳ್ಳುವುದಿಲ್ಲ. ಗಂಭೀರವಾಗಿ ಆಗುವ ಕೆಲಸದ ಬಗ್ಗೆ ಮಾತ್ರ ಮಾತನಾಡುತ್ತಾನೆ. ಅವಳು ವಿವರಣೆ ಕೊಡುವ ಹೊತ್ತಿನವರೆಗೂ ಅವಳನ್ನು ನೋಡುತ್ತಿರುತ್ತಾನೆ. ಅವಳಿಗೆ ಅವನು ತನ್ನನು ಆಸಕ್ತಿಯಿಂದ ನೋಡುವುದು ತಿಳಿಯುತ್ತದೆ. ಅವಳು ತನ್ನ ಉಡುಪನ್ನು ಸುಮ್ಮನೆ ಹಾಗೆ ಸರಿ ಮಾಡಿಕೊಳ್ಳುತ್ತಾಳೆ. ಅದು ಸೀರೆಯೊ, ಸಲ್ವಾರೋ ಆಗಿಲ್ಲದೇ ಟಿ-ಶರ್ಟ್ ಆದ್ದರಿಂದ ಅಲ್ಲಿ ಸರಿಮಾಡಿಕೊಳ್ಳಲು ಏನೂ ಇಲ್ಲದಿದ್ದರೂ, ಅದೇ ಶರ್ಟನ್ನು ಕೆಳಗೆ ಎಳೆದೋ, ಮೇಲೆ ಮಾಡೋ ಸರಿ ಮಾಡಿಕೊಂಡಂತೆ ಮಾಡುತ್ತಾಳೆ. ಅವಳಿಗೆ ಅವನ ಮೇಲೆ ಕೋಪವೇನೂ ಬರುವುದಿಲ್ಲ. ಹಾಗೆ ಮಾತನಾಡುತ್ತಲೇ ಇರುವಾಗ, ಅವರ ಮಾತಿಗಿಂತ ಹೆಚ್ಚಾಗಿ ಇಬ್ಬರ ಇರುವಿಕೆ ಪರಸ್ಪರರಿಗೆ ಖುಷಿ ಕೊಡುತ್ತದೆ. ಮಾತೆಲ್ಲ ಮುಗಿದರೂ ಯಾವೊದೋ ಮತ್ತೊಂದು ವಿಷಯವನ್ನು ಎತ್ತಿ ಅವ ಅಲ್ಲೇ ನಿಲ್ಲುವ ಪ್ರಯತ್ನ ಮಾಡಿದರೆ ಅವಳೂ  ಹಾಗೆಯೇ ಯಾವೊದೋ ಮತ್ತೊಂದು ವಿಷಯ ಎತ್ತಿ ಅವ ಇನ್ನೂ ಸ್ವಲ್ಪ ಹೊತ್ತು ತನ್ನ ಬಳಿಯೇ ನಿಂತಿರಲು ಬಯಸುತ್ತಾಳೆ. ಇಬ್ಬರೂ ಕಚೇರಿಯ ಸಂಗತಿಗಳನ್ನೇ ಮಾತನಾಡುತ್ತಾರೆ, ಅಕ್ಕಪಕ್ಕದವರಿಗೆ ಆ ಮಾತು ಕೇಳಿಸುತ್ತದೆ, ಕೇಳಿಸಿದರೂ ಅದು ಕಚೇರಿಯ ಸಂಬಂಧ ಪಟ್ಟ ಮಾತುಗಳಾದ್ದರಿಂದ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಇಬ್ಬರೂ ಮಾತನಾಡುತ್ತಿರುವುದೇ ಮುಖ್ಯವಾಗಿ, ವಿಷಯ ಗೌಣವಾಗುತ್ತದೆ.

ಅವಳು  ಸುಂದರಿ ಅಲ್ಲದಿದ್ದರೂ, ಅವನಿಗೆ ಆಕರ್ಷಕಳಾಗಿ ಕಾಣಿಸುತಾಳೆ. ಅವನಿಗೆ ಇಷ್ಟವಾಗಿರುವುದು ಅವಳ ಬುದ್ದಿವಂತಿಕೆ. ಅವಳ ಕೆಲಸದೊಗಿನ ಶ್ರದ್ದೆ, ಅವಳು ಅಚ್ಚುಕಟ್ಟಾಗಿ ಕೆಲಸ ಮಾಡುವ ವಿಧಾನ. ಎಂತಹ ಕೆಲಸವಾದರೂ ಲೀಲಜಾಲವಾಗಿ ಶೀಘ್ರವಾಗಿ ಮಾಡುತ್ತಾಳೆ. ಹೆಣ್ಣಿನ ಸೌಂದರ್ಯಕ್ಕಿಂತಲೂ ಅವಳ ಬುದ್ದಿವಂತಿಕೆಯೇ ಗಂಡಸರನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ಅವನ ನಂಬಿಕೆ. ಸೌಂದರ್ಯದಿಂದ ಉಂಟಾದ ಪ್ರೀತಿ ಹೆಚ್ಚು ದಿನ ಉಳಿಯುವುದಿಲ್ಲ, ಸಂಬಂಧ ಉಳಿಯುವುದು ವ್ಯಕ್ತಿತ್ವದಿಂದ ಎಂದು ಅವನು ಭಾವಿಸುತ್ತಾನೆ. ಸೌಂದರ್ಯಕ್ಕೆ ನಾಶವಿದೆ. ಆದರೆ ಬುದ್ದಿವಂತಿಕೆ, ವ್ಯಕ್ತಿತ್ವ ಬಹುಕಾಲ ಉಳಿಯುತ್ತದೆ ಎಂದು ತನ್ನ ಸ್ನೇಹಿತರಿಗೆ ಹೇಳುತ್ತಿರುತ್ತಾನೆ. ಇಬ್ಬರೂ ಅತೀ ಬುದ್ಧಿವಂತರು ಒಂದಾದರೆ ಅಲ್ಲಿ ಪ್ರೀತಿಗಿಂತ ಬುದ್ದಿಯ ಪ್ರದರ್ಶನ ಹೆಚ್ಚಿರುತ್ತದೆ ಎಂದು ಸ್ನೇಹಿತರು ವಾದಿಸಿದರೂ, ಬುದ್ದಿಯ ಜೊತೆ ವ್ಯಕ್ತಿತ್ವವೂ ಮುಖ್ಯ ಎಂದು ಅವನು ಹೇಳುತ್ತಾನೆ.

ಶ್ರೇಷ್ಠ ಮತ್ತು ಮೋಹನ ಬೆಂಗಳೂರಿನ ಒಂದು ಕಚೇರಿಯಲ್ಲಿ ಕೆಲಸಮಾಡುತ್ತಿದ್ದಾರೆ. ಬೇರೆ ಬೇರೆ ಡಿಪಾರ್ಟ್ಮೆಂಟ್ ಆದರೂ ಸ್ವಲ್ಪ ಹತ್ತಿರವೇ ಕುಳಿತು ಕೊಳ್ಳುತ್ತಾರೆ. ಮೊದಲು ಮೋಹನ ಶ್ರೇಷ್ಠಳನ್ನು ನೋಡಿದಾಗ ಅವನು ಅವಳ ಆಕರ್ಷಣೆಗೇನೂ ಒಳಗಾಗಿರಲಿಲ್ಲ. ಪಕ್ಕನೆ ಒಬ್ಬರನ್ನು ಆಕರ್ಷಿಸುವ ಸುಂದರಿಯೇನೂ ಅವಳಾಗಿರಲಿಲ್ಲ. ಆದರೆ ಅವಳ ಜೊತೆ ಮಾತನಾಡುತ್ತಾ, ಕೆಲಸ ಮಾಡುತ್ತಾ ಅವಳ ಅಸಾಧಾರಣ ಬುದ್ದಿವಂತಿಗೆ ಪರಿಚಯವಾಗುತ್ತಾ ಅವನ ಮನಸು ಅದನ್ನು ಆಸ್ವಾದಿಸತೊಡಗಿತ್ತು. ಕ್ರಮೇಣ ಅವಳ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದ. ಕಚೇರಿಯಲ್ಲಿ ಅನೇಕ ಕೆಲಸಗಳು ಒಟ್ಟಾಗಿ ಮಾಡುತ್ತಿದ್ದುರಿಂದ, ಇಡೀ ದಿವಸದಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿತ್ತು. ಹೀಗೆ ಹೆಚ್ಚಿನ ಸಮಯ ಕಳೆಯುತ್ತಾ ತಿಳಿಯದೆ ಅವಳ ಆಕರ್ಷಣೆಗೆ ಒಳಗಾಗಿದ್ದ.
 
ಅವರಿಬ್ಬರಿಗೂ ತಾವು ಮದುವೆ ಆಗಿದ್ದೇವೆ ಎಂದು ತಿಳಿದಿದೆ. ಯಾವತ್ತೂ ವೈಯಕ್ತಿಕ ವಿಷಯಗಳನ್ನು ಮಾತನಾಡಿದ್ದಿಲ್ಲ. ಹೊರಗಡೆ ಭೇಟಿಯಾಗಿದಿಲ್ಲ. ಹೊರಗಡೆ ಫೋನ್ ಮಾಡಿದ್ದಿಲ್ಲ. ಕಚೇರಿಯಲ್ಲಿ ಮಾತು, ಅದೂ ಹೆಚ್ಚು ಕೆಲಸಕ್ಕೆ ಬೇಕಾದ ಮಾತು ಮಾತ್ರ. ಯಾವೊತ್ತೂ ತನ್ನ ಇಷ್ಟವನ್ನು ಅವನಾಗಲಿ, ಅವಳಾಗಲಿ ವ್ಯಕ್ತಪಡಿಸಿದ್ದಿಲ್ಲ. ಯಾವುದೇ ಸಂವಹನವಾಹಕವಿಲ್ಲದೆ, ಅದು ಸಂವಹನವಾಗುತ್ತಿತ್ತು. ಅದು ಮಾತಿನಲ್ಲಿ ಬರುತ್ತಿರಲಿಲ್ಲ.

ಮೋಹನ ತನ್ನ ಹೆಂಡತಿ ಅನನ್ಯಳನ್ನು ಬಹಳ ಪ್ರೀತಿಸುತ್ತಾನೆ. ಅವಳನ್ನು ಇಷ್ಟಪಟ್ಟು ಮದುವೆಯಾಗಿದ್ದಾನೆ. ಮದುವೆಯಾಗಿ ಮೂರು ವರ್ಷಗಳಾಗಿವೆ. ಇನ್ನೂ ಮಕ್ಕಳಾಗಿಲ್ಲ. ಅನನ್ಯ ಮನೆಯ ಕೆಲಸಗಳೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾಳೆ. ಅವಳ ಸಹಾಯ ಅವನಿಗೆ ಎಲ್ಲಾ ರೀತಿಯಲ್ಲೂ ಸಿಗುತ್ತದೆ. ತನ್ನ ಆಫೀಸಿನ ಕೆಲಸದ ಜೊತೆ ಮನೆಯಲ್ಲೂ ಅವನಿಗೆ ಯಾವುದೇ ಕೆಲಸ ಮಾಡುವ ಅಗತ್ಯವೇ ಬರದ ಹಾಗೆ ನೋಡಿಕೊಳ್ಳುತ್ತಾಳೆ, ಆದರೂ ಅವನು ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ. ಕಚೇರಿಯ ಒತ್ತಡ ನಿವಾರಿಸುವ ಅವಳು ಒಂದು ಮದ್ದು ಅವನಿಗೆ. ಅವಳನ್ನು ತಬ್ಬಿದಾಗ ಮೈ ಮರೆಯುತ್ತಾನೆ.

ಹೀಗಿರುವಾಗ, ಈ ಒಂದು ಸಮಸ್ಯೆ ಅವನ ಬಾಳಿನಲ್ಲಿ ಅವತರಿಸಿದೆ. ಶ್ರೇಷ್ಠ ಆಗಾಗ ಮನಸ್ಸಿಗೆ ಬರುತ್ತಾಳೆ. ಕಚೇರಿಯಲ್ಲಿ ಅವಳನ್ನು ನೋಡುವ ಆಸೆಯೂ ಆಗುತ್ತದೆ, ಮಾತನಾಡುವ ಆಸೆಯಾಗುತ್ತದೆ. ಅದರ ಮುಂದೆ ಹೋಗುವ ಬಯಕೇನೂ ಆಗುವುದಿಲ್ಲ. ಕಚೇರಿಯ ಒತ್ತಡಕ್ಕೆ, ಯಾರ ಮೇಲಾದರೂ ಕೋಪಗೊಂಡಾಗ, ಯಾರಾದರೂ ತನ್ನ ಮೇಲೆ ಕೋಪಗೊಂಡಾಗ ಅವಳ ಹತ್ತಿರ ಹೋಗಿ ಮಾತನಾಡುವಾಗ ಮನಸು ನೆಮ್ಮದಿ ಕಂಡುಕೊಳ್ಳುತ್ತದೆ, ತಹಬದಿಗೆ ಬರುತ್ತದೆ, ಶಾಂತವಾಗುತ್ತದೆ. ಇನ್ನು, ಮನೆಯಲ್ಲೂ ಅವಳ ನೆನಪು ಬರಲು ಪ್ರಾರಂಭವಾದ ಮೇಲೆ ಅವನಿಗೆ ದಿಗಿಲು ಶುರುವಾಯಿತು. ಒಂದು ದಿನ ಕನಸಿನಲ್ಲಿ ಅವಳು ಮಮತೆಯಿಂದ ಕೆನ್ನೆ ಸವರಿದ್ದು ಕಂಡು ದಿಗ್ಗನೆದ್ದು ಕುಳಿತಿದ್ದ. ಛೆ ಇದು ಸರಿಯಲ್ಲ, ಸುಂದರವಾದ, ಪ್ರೀತಿಸುವ ಹೆಂಡತಿ ಇರುವಾಗ ಇದೆಂತಹ ಬಯಕೆ ಎಂದು ಅವನಿಗೆ ಅನಿಸುತ್ತದೆ. ಎಂತಹ ಸಂದರ್ಭ ಬಂದರೂ ತನ್ನವಳಿಗೆ ಮೋಸ ಮಾಡುವುದಿಲ್ಲ ಎಂದೂ ಅವನಿಗೆ ಗೊತ್ತಿದೆ, ಹೆಂಡತಿಯ ಬಿಟ್ಟು ಬೇರೆ ಹೆಣ್ಣಿನ ಸಹವಾಸಕ್ಕೆ ಹೋಗುವುದಿಲ್ಲ ಎನ್ನುವ ಖಚಿತತೆಯೂ ಇದೆ. ಧಾರಾವಾಹಿಗಳಲ್ಲಿಯೂ, ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿಯೂ, ಟಿವಿ ಆ್ಯಂಕರ್ ಯಾರಾದರೂ ಕಂಡಾಗ, ಯಾರಾದರೂ ಚೆನ್ನಾಗಿದ್ದರೆ ಹೆಂಡತಿಗೆ ಹೇಳುತ್ತಾನೆ. ಅವಳು ‘ಪರವಾಗಿಲ್ಲ ನೋಡಿ, ಜೊತೆಗೆ ಓಡಾಡಿ, ಆದರೆ ನನಗೆ ಹೇಳಬೇಡಿ ಅಷ್ಟೇ’ ಎಂದು ಛೇಡಿಸುತ್ತಾಳೆ. ಆದರೂ ಅವನಿಗೆ ಅಂತಹ ಬಯಕೆಯೇನೂ ಆಗುವುದಿಲ್ಲ.

ಶ್ರೇಷ್ಠ ಕನಸಲ್ಲಿ ಬಂದಾಗ, ಅವನು ತನ್ನ ಹೆಂಡತಿಯ ಮೇಲೆ ತಾನಿಟ್ಟಿರುವ ನಿಷ್ಠೆಯೆಲ್ಲಾ ಗಾಳಿಗೆ ತೂರಿಹೋಯಿತೆ ಅನಿಸಿತು. ಅಂದರೆ ತನ್ನ ಸುಪ್ತ ಮನಸಿನಲಿ ತಾನು ಅವಳನ್ನು ಬಯಸುತ್ತಿದ್ದೇನೆಯೇ ಅನಿಸಿ ಮತ್ತೂ ಗಾಬರಿಯಾಯಿತು. ಒಮ್ಮೆ ಹೆಂಡತಿಯನ್ನು ಪ್ರೀತಿಸುವಾಗ ಪಕ್ಕನೆ ಶೇಷ್ಠಳ ಮುಖ ತೇಲಿಹೋದಂತಾಗಿ ಅಪರಾಧ ಮೋನೋಭಾವದಿಂದ ಕುಗ್ಗಿಹೋಗಿದ್ದ. ಇದೆಂತೆಹ ಶಿಕ್ಷೆ ಎಂದುಕೊಂಡ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎನಿಸಿತು.

ಇದಕ್ಕೆ ಪರಿಹಾರವೆಂದರೆ, ಶೇಷ್ಠಳನ್ನು ಮುಖತಃ ನೋಡದೇ ಇರುವುದು ಎಂದುಕೊಂಡ. ಹೀಗಾಗಿ ಕಚೇರಿಗೆ ಹೋದಾಗ ಅವಳನ್ನು ಸ್ವಯಂ ನೋಡಲು ಹೋಗದೆ ಈ-ಮೇಲ್ ಮಾಡಲುತೊಡಗಿದ, ಏನಾದರು ಬೇಕಿದ್ದರೆ ಫೋನಿನಲ್ಲಿ ಮಾತನಾಡಲಾರಂಭಿಸಿದ. ಅಲ್ಲಲ್ಲಿ ಸಿಕ್ಕಾಗ ಹಾಯ್ ಹೇಳುತಿದ್ದ ಅಷ್ಟೇ ಹೊರತು ಹೆಚ್ಚು ಮಾತನಾಡುತ್ತಿರಲಿಲ್ಲ. ಅವಳೂ ಅವನು ತನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ ಅನಿಸಿ ಹೆಚ್ಚು ಮಾತನಾಡಲು ಹೋಗುತ್ತಿರಲಿಲ್ಲ. ಹಾಗಿದ್ದರೂ ಕಚೇರಿಯ ಮೀಟಿಂಗ್‌ಗಳಿಂದ ದಿನಕ್ಕೆ ಒಮ್ಮೆಯಾದರೂ ಸೇರಬೇಕಾಗಿತ್ತು, ಮಾತನಾಡಬೇಕಿತ್ತು.

ಹೀಗಿರಲು, ಮತ್ತೊಂದು ತೊಂದರೆ ಶುರುವಾಯಿತು. ಅದೆಂದರೆ ಅವರು ಧರಿಸುತ್ತಿದ್ದ ಬಟ್ಟೆಗಳ ಬಣ್ಣ. ಗೊತ್ತಿಲ್ಲದೆಯೇ ಅವರು ತೊಡುವ ಶರ್ಟಿನ ಬಣ್ಣ ಒಂದೇ ಇರುತ್ತಿತ್ತು. ಇದು ಕಾಕತಾಳೀಯ ಎಂದುಕೊಂಡರೂ ಅದು ಸುಮಾರು ಹದಿನೈದು ದಿನ ನಡೆಯಿತು. ಇದೆಂತಹ ಪೀಕಲಾಟ ಎನಿಸಿತು, ಇಬ್ಬರು ಅದನ್ನು ಗಮನಿಸಿದರೂ ಹೇಳಿಕೊಳ್ಳಲು ಹೋಗಿರಲಿಲ್ಲ. ಅಂದರೆ ತಮ್ಮಿಬ್ಬರ ರುಚಿ ಒಂದೇ ಎನಿಸಿತು. ಅವಳಲ್ಲಿರುವ ಎಲ್ಲಾ ಬಣ್ಣದ ಬಟ್ಟೆಗಳೂ ಇವನಲ್ಲಿದ್ದವು. ಕೆಲವು ಸಹೋದ್ಯೋಗಿಗಳು ಇದನ್ನು ಗಮನಿಸಿ ‘ಸೇಮ್ ಪಿಂಚ್’ ಎಂದಿದ್ದರೂ ಯಾರೂ ಅಷ್ಟು ದಿನಗಳವರೆಗೆ ಗಮನಿಸಿರಲಿಲ್ಲ. ಕೊನೆಗೆ, ಇದನ್ನು ಮುರಿಯಬೇಕು ಎಂದು ಅವನಿಗೆ ಅನಿಸಿತು. ಮರುದಿನ ಧರಿಸಲೆಂದು ಅಚಾನಕ್ಕಾಗಿ ಬಿಳಿ ಶರ್ಟ್ ತೆಗೆದುಕೊಂಡು ಧರಿಸಿದವ ಅದನ್ನು ತೆಗೆದು, ಕಪ್ಪು ಬಣ್ಣದ ಶರ್ಟ್ ತೊಟ್ಟುಕೊಂಡ. ಕಚೇರಿಗೆ ಬಂದಾಗ ನೋಡಿದರೆ ಅವಳು ಬಿಳಿ ಬಣ್ಣದ ಶರ್ಟ್ ತೊಟ್ಟಿದ್ದಳು. ಗೆದ್ದೇ ಎಂದುಕೊಂಡರೂ, ತಾನು ಮೊದಲು ಧರಿಸದ್ದು ಬಿಳಿಯ ಶರ್ಟ್ ಅಲ್ಲವೇ ಅನಿಸಿ ಭಯವಾಯಿತು. ಇಂತಹ ಒಂದು ಉಪಾಯದಿಂದ ದಿನಾ ಮೊದಲು ಒಂದು ಶರ್ಟ್ ತೆಗೆದರೂ, ಅದನ್ನು ಧರಿಸದೆ ಬೇರೆ ಶರ್ಟ್ ತೊಡಲಾರಂಭಿಸಿದ.

ಇಷ್ಟೆಲ್ಲಾ ಆದರೂ ಅವಳು ಮನಸ್ಸಿನಿಂದ ದೂರ ಹೋಗಲಿಲ್ಲ. ಬೆಳಿಗ್ಗೆ ಬಟ್ಟೆ ಧರಿಸುವಾಗ ನೆನಪಾಗುತ್ತಿದ್ದಳು. ಕಚೇರಿಯಲ್ಲಿ ಅವಳ ಮಾತು ದೂರದಿಂದ ಕೇಳಿದಾಗ ಮನಸು ಉಲ್ಲಸಿತವಾಗುತ್ತಿತ್ತು. ದೂರದಿಂದ ನೋಡಿದರೂ ತನ್ನ ಅರಿವಿಲ್ಲದೇ ಪುಳಕಗೊಳ್ಳುತ್ತಿದ್ದ. ಮನಸು ಅವಳ ಮುಗುಳುನಗೆಯನ್ನು ನೋಡಲು ಬಯಸುತ್ತಿತ್ತು.

ತಾನೇನೂ ತಪ್ಪು ಮಾಡುತ್ತಿಲ್ಲವಲ್ಲ, ತನಗೇಕೆ ಭಯ ಎಂದು ಎಷ್ಟೋ ಸಲ ಅನಿಸಿದ್ದಿದೆ. ಸುಮ್ಮನೆ ಮಾತನಾಡಿಸಿದರೆ, ನೋಡಿದರೆ ಯಾಕೆ ಅದಕ್ಕೆ  ಗಾಬರಿಗೊಳ್ಳಬೇಕು. ಅವಳ ಒಡನಾಟ ಮನಸಿಗೆ ಸುಖ ಕೊಡುತ್ತಿದ್ದರಿಂದ, ಮಾತನಾಡಿಸಿದರೆ ಏನೀಗ, ನಾನೇನೂ ಅವಳ ದೇಹವನ್ನು ಬಯಸುತ್ತಿಲ್ಲ, ಬರೀ ಮನಸು ಮಾತ್ರ, ಇದರಲ್ಲಿ ಹೆಂಡತಿಗೆ ಮೋಸವಿಲ್ಲವಲ್ಲ ಎಂದುಕೊಂಡರೂ, ಇದೊಂದು ಮಾನಸಿಕ ವ್ಯಭಿಚಾರ ಎನಿಸಿಕೊಳ್ಳುವುದೇ ಅನಿಸಿತು. ಹಾಗೆ ನೋಡಿದರೆ ಎಷ್ಟೋ ಜನ ಮಾನಸಿಕ ವ್ಯಭಿಚಾರಿಗಳೇ, ದಾರಿಯಲ್ಲಿ ಸುಂದರ ಹೆಣ್ಣನ್ನು ಕಂಡಾಗ ತುಟಿ ಸವರಿಕೊಳ್ಳುವವರಿಂದ ಹಿಡಿದು ಸಿನಿಮಾದಲ್ಲಿ ಕಂಡ ನಾಯಕಿಯನ್ನು ಎವೆಯಿಕ್ಕದೆ ನೋಡುವವರೆಗೆ ಎಲ್ಲರೂ ಮಾನಸಿಕ ವ್ಯಭಿಚಾರಿಗಳೇ, ಮನಸಿನಿಂದ ಅದು ಕ್ರಿಯೆಗೆ ಇಳಿದಾಗಲೇ ಅದು ಕೆಟ್ಟದ್ದು ಎಂದು ಅನಿಸಿ, ತಾನು ಮಾಡುತ್ತಿರುವುದು ತಪ್ಪೇನಲ್ಲ ಅನಿಸಿತು.

ಹೀಗಿರಲು, ಅನನ್ಯ ತವರು ಮನೆಗೆ ಹೊರಟಳು. ಅವಳ ಊರು ಮೈಸೂರು. ಅವಳನ್ನು ಕರೆದುಕೊಂಡು ಹೋಗಿ ರೈಲನ್ನು ಹತ್ತಿಸಿ ಮನೆಗೆ ಬಂದಾಗ ಮನೆ ಬಿಕೋ ಅನಿಸಿತು. ಹೆಂಡತಿ ಆಗಾಗ ತವರುಮನೆಗೆ ಹೋಗುವುದು ಸಾಮಾನ್ಯವಾದರೂ, ಅವಳು ಮನೆಯಲ್ಲಿ ಇಲ್ಲದಿದ್ದಾಗ ಏನೋ ಕಳೆದುಕೊಂಡ ಭಾವನೆ ಸದಾ ಉಂಟಾಗುತ್ತದೆ. ಸಾಯಂಕಾಲವಾಗುತ್ತಿತ್ತು, ಅಡುಗೆಯ ಅಗತ್ಯವಿರಲಿಲ್ಲ, ಹೆಂಡತಿ ಮಾಡಿಟ್ಟು ಹೋಗಿದ್ದಳು. ಅಡುಗೆಗೆ ಮೋಹನ ಸದಾ ಸಹಾಯ ಮಾಡುತ್ತಾನೆ. ಅದು ಅವನಿಗೆ ಖುಷಿಯ ವಿಷಯವೂ ಆಗಿತ್ತು.

ಊಟ ಮುಗಿಸಿ ಸ್ವಲ್ಪ ಹೊತ್ತು ಟಿವಿ ನೋಡಿ, ಬೇಸರಗೊಂಡು ಮಲಗಿಕೊಳ್ಳಲು, ಮಲಗುವ ಕೊನೆಗೆ ಹೋದಾಗ, ಹಾಸಿಗೆಯ ಮೇಲೆ ಹೆಂಡತಿಯ ದಿನಚರಿ ಕಾಣಿಸಿತು. ಅರೆ ದಿನಚರಿ ಮರೆತುಹೋಗಿದ್ದಾಳಲ್ಲ ಎಂದುಕೊಂಡ. ಹೆಂಡತಿಗೆ ದಿನಚರಿ ಬರೆಯುವ ಹವ್ಯಾಸವಿತ್ತು.

ಬೇರೆಯವರ ದಿನಚರಿ ಓದುವುದು ತಪ್ಪು ಎಂದು ತಿಳಿದಿದ್ದರೂ, ಏನು ಬರೆಯುತ್ತಾಳೆ ಎನ್ನುವ ಕುತೂಹಲ ಮೂಡಿತು. ನೋಡೋಣವೇ, ಬೇಡವೇ ಎಂದುಕೊಂಡರೂ ಕೊನೆಗೆ ನೋಡಿಯೇ ಬೀಡೋಣ ಅನಿಸಿತು. ದಿನಚರಿ ಪುಟಗಳನು ತಿರುಗಿಸಿದ. ಸುಮಾರು ಆರು ತಿಂಗಳು ಹಿಂದೆ ಆದ ಕೆಲವು ವಿಷಯಗಳಿದ್ದವು. ಇತ್ತೀಚಿಗೆ ಬರೆದಿರುವುದು ಏನಾದರೂ ಇದೆಯೇ ಎಂದು ನೋಡಿದ. ಸುಮಾರು ಎರಡು ತಿಂಗಳು ಹಿಂದೆ ಬರೆದಿದ್ದ ಒಂದು ವಿಷಯ ಕುತೂಹಲ ಮೂಡಿಸಿತು.

"ಅವನೆಂದರೆ ಪ್ರೀತಿಯೇನೂ ಇಲ್ಲ, ಆದರೆ ಏನೋ ಒಂದು ಆಕರ್ಷಣೆ ಇದೆ. ಅವನ ಜೊತೆ ಸ್ವಲ್ಪ ಹೊತ್ತು ಸಮಯ ಕಳೆಯೋಣ ಅನಿಸುತ್ತದೆ. ಸುಂದರವಾಗಿ ಮಾತನಾಡುತ್ತಾನೆ. ತುಂಬಾ ಸೊಗಸಾಗಿ ಎಲ್ಲ ವಿಷಯಗಳನ್ನು ವಿವರಿಸುತ್ತಾನೆ. ಅವನಿಂದ ಕೆಲಸವನ್ನು ಕಲಿತೆ."

"ಅರೆ ಇಬ್ಬರೂ ಈ ದಿನ ಒಂದೇ ಬಣ್ಣದ ಬಟ್ಟೆ ಧರಿಸಿ ಆಫೀಸ್ಗೆ ಬಂದಿದ್ದೆವಲ್ಲ , ಟೆಲಿಪತಿ ಅನ್ನೋದು ಏನಾದರೂ ಇದೆಯಾ, ಅವನು ಆಫೀಸಿಗೆ ಬೇಗ ಹೋಗುತ್ತಾನೆ, ನಾನು ಆಮೇಲೆ ಹೋಗುತ್ತೇನೆ, ಅವನು ಬೇಕಂತಲೇ ಹೇಗೋ ತಿಳಿದುಕೊಂಡು ಹಾಗೆ ಬಟ್ಟೆ ಧರಿಸಿ ಬರುವವನಲ್ಲ. ಅವನಿಗೆ ನನ್ನ ಬಗ್ಗೆ ಹೆಮ್ಮೆ ಇದೆ, ನನ್ನ ಬುದ್ದಿವಂತಿಕೆ ಅವನು ಇಷ್ಟಪಡುತ್ತಾನೆ, ಖಂಡಿತವಾಗಿ ನನ್ನನು ಕಂಡರೆ ಅವನಿಗೆ ಪ್ರೀತಿ ಪ್ರೇಮ ಇಲ್ಲ ಅನಿಸುತ್ತೆ, ಆದರೆ ಇಷ್ಟ ಇರಬಹುದು. ಈ ಇಷ್ಟ ಬೇರೆ ರೂಪಕ್ಕೆ ಬದಲಾದರೆ ಅಂದುಕೊಂಡು ಭಯ ಪಡುತ್ತೇನೆ.’’

"ಈ ದಿನ ಇದ್ದಕಿದ್ದ ಹಾಗೆ ಸೀರೆ ಉಡೋಣ ಅನಿಸಿ, ಸೀರೆ ಧರಿಸಿ ಆಫೀಸಿಗೆ ಹೋಗಿದ್ದೆ, ಅವನು ನನ್ನನ್ನು ಆಗಾಗ ನೋಡುತ್ತಿದ್ದ ಅನಿಸುತ್ತೆ, ಹತ್ತಿರ ಬಂದಾಗ ಅವನ ಕಣ್ಣಿನಲ್ಲಿ ಒಂದು ಮಿಂಚು  ಕಂಡೆ ಅನಿಸಿತು. ಹೌದು ನಾನು ಈ ದಿನ ಸುಂದರವಾಗಿ ಕಾಣಿಸುತ್ತಿದ್ದೆ. ಇವರು ಬೆಳಿಗ್ಗೆ ತಬ್ಬಿ ಮುತ್ತಿನ ಮಳೆ ಸುರಿಸಿದ್ದರು, ಮತ್ತೆ ರೆಡಿ ಆಗಬೇಕಾಯಿತು."

"ನನ್ನವರನ್ನು ನಾನು ತುಂಬಾ ಇಷ್ಟಪಡುತ್ತೇನೆ, ಅವರೂ ನನ್ನನ್ನು ತುಂಬಾ ಪ್ರೀತಿಮಾಡುತ್ತಾರೆ. ಹೀಗೆ ನನ್ನ ಮನ ಬೇರೆ ಏನೂ ಹುಡುಕಬಾರದು. ನಾನು ಈ ಆಕರ್ಷಣೆಯಿಂದ ತಪ್ಪಿಸಿಕೊಳ್ಳಬೇಕು, ಅದಕ್ಕೆ ಒಂದು ದಾರಿ ಹುಡುಕಬೇಕು, ಅದು ಎಂತಹ ದಾರಿ ಎಂದು ತಿಳಿಯುತ್ತಿಲ್ಲ, ಇದ್ದಕ್ಕಿದ್ದಹಾಗೆ ರಾಖಿ ಕಟ್ಟಿದರೆ ಅವನು ಏನು ಅಂದುಕೊಳ್ಳಬಹುದು. ಛೆ ತುಂಬಾ ನಾಟಕೀಯವಾಗಿರುತ್ತದೆ ಅನಿಸುತ್ತಿದೆ. ಬೇರೆ ದೃಷ್ಟಿಯಿಂದ ನೋಡುತ್ತಿದ್ದ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದೇ ಅದು ಸಾಧ್ಯವೇ, ಅದು ಆತ್ಮ ವಂಚನೆಯೇ, ಪ್ರಿಯತಮನನ್ನು ಸಹೋದರನಾಗಿ, ಸ್ನೇಹಿತನ್ನಾಗಿ ಭಾವಿಸಿಕೊಳ್ಳಲು ಸಾಧ್ಯವೇ? ಅದು ಯಾಕಾಗಬಾರದು? ಹುಳುವೊಂದು ಚಿಟ್ಟೆಯಾಗಿ ರೂಪಾಂತರಗೊಂಡಂತೆ ಒಂದು ವ್ಯಕ್ತಿಯ ಮೇಲಿನ ಭಾವನೆಯಿಂದ, ರೂಪಾಂತರಗೊಳ್ಳಬಹುದೇ. ರೂಪಾಂತರಗೊಂಡರೆ ಆಗುವ ತೊಂದರೆಗಳೇನು?, ರೂಪಾಂತರಗೊಂಡಮೇಲೆ ಮನಸಿನ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದು, ಅದುಮಿಟ್ಟುಕೊಳ್ಳುವುದಕ್ಕಿಂತ ಮನಸಿಗೆ ಬೇರೆ ಭಾವನೆಗಳು ಬರೆದಹಾಗೆ ನೋಡಿಕೊಳ್ಳುವುದು ಹೇಗೆ?"

"ಅಥವಾ ಎಂತಹ ಭಾವನೆಗಳು ಮೂಡಿದರೂ ಅದಕ್ಕೊಂದು ಮಿತಿ ಹಾಕಿಕೊಂಡು, ಅದರ ಸುಖವನ್ನು ಅನುಭವಿಸಿದರೆ ತಪ್ಪೇ. ಹಾಕಿದ ಗೆರೆ ದಾಟದಂತೆ ಎಚ್ಚರವಹಿಸಿ, ಆ ಕ್ಷಣದಲ್ಲಿ ಮಾತ್ರ ಜೀವಿಸಿ, ಅಲ್ಲೆಯೇ ಮರೆತು, ಮತ್ತೆ ಮತ್ತೆ ಅದನ್ನೇ ನೆನಪಿಸಿಕೊಳ್ಳದಂತೆ, ವರ್ತಮಾನದಲ್ಲಿ ಜೀವಿಸಿದರೆ ತಪ್ಪೇನು ಅನಿಸುತ್ತದೆ.

"ಎಲ್ಲಾ ಗೊಂದಲ, ಇವರ ಜೊತೆ ಮಾತನಾಡುವ ಅಂದರೆ ಅವರು ಮುಗ್ದರು, ನಾನಲ್ಲದೆ ಬೇರೆ ಹೆಣ್ಣನು ನೋಡದವರು. ಅದರ ಬಗ್ಗೆ ಅಷ್ಟೇನೂ ಯೋಚಿಸದವರು, ಇವರಿಗೆ ಇದೆಲ್ಲಾ ಅರ್ಥವಾಗುತ್ತದೋ ಇಲ್ಲವೋ, ಹೇಳಿದರೂ ನಿನಗೆ ಸರಿ ಅನಿಸಿದ್ದನ್ನು ಮಾಡು ಎನ್ನುವವರು"

"ಇರಲಿ ಒಂದು ದಾರಿ ಸಿಕ್ಕೇ ಸಿಗುತ್ತದೆ"

ದಿನಚರಿ ಅಲ್ಲಿಗೆ ಮುಗಿದಿತ್ತು. ನಿಧಾನವಾಗಿ ಪುಟಗಳನ್ನೆಲ್ಲಾ ಸರಿಪಡಿಸಿ, ದಿನಚರಿ ಎಲ್ಲಿತ್ತೋ ಅಲ್ಲಿಯೇ ಇಟ್ಟ.

ಇದ್ದಕಿದ್ದ ಹಾಗೆ ಹೆಂಡತಿಯಮೇಲೆ ಮಮತೆ ಉಕ್ಕಿ ಬಂತು. ಎಷ್ಟು ಒಳ್ಳೆಯವಳು ಅನಿಸಿತು, ಆದ್ದರಿಂದಲೇ ನನ್ನನು ಮುಗ್ದ ಎಂದು ತಿಳಿದುಕೊಂಡಿದ್ದಾಳೆ. ನಾನೇ ಅವಳಿಗೆ ಮೋಸಮಾಡುತ್ತಿದ್ದೇನೆ.

ಇಬ್ಬರು ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ ಅನಿಸಿತು. ಅವಳಿಗೆ ತೆರೆದುಕೊಳ್ಳಲು ದಿನಚರಿ ಬರೆಯುವ ಅಭ್ಯಾಸವಾದರೂ ಇದೆ, ನನಗೆ ಅದೂ ಇಲ್ಲ.  

ಅನನ್ಯ ಊರಿನಿಂದ ಬಂದಾಗ, ಮೊದಲು ಬೆಡ್ರೂಮಿಗೆ ಹೋಗಿ ನೋಡಿದ್ದು ತನ್ನ ದಿನಚರಿಯನ್ನು. ಅದು ತಾನು ಇಟ್ಟ ಜಾಗದಲ್ಲೇ ಇದೆ. ಅರೆ ಇವರು ಇದನ್ನು ನೋಡಲಿಲ್ಲವೇ, ಕೂತೂಹಲಕ್ಕಾದರೂ ಓದಲಿಲ್ಲವೇ. ಅವನ ಮೇಲೆ ನಂಬಿಕೆಯಿದ್ದರೂ, ಅವನು ಓದಲಿ ಎಂದೇ ಡೈರಿಯನ್ನು ಮನೆಯಲ್ಲಿ ಬಿಟ್ಟುಹೋಗಿದ್ದಳು. ತನ್ನ ಪಾಪಪ್ರಜ್ಞೆಯಿಂದ ಹೊರಬರಬೇಕಾದರೆ, ಗಂಡನಿಗೆ ಎಲ್ಲಾ ಹೇಳಬೇಕು ಅದೊಂದೇ ಮಾರ್ಗ, ಆದರೆ ಅವನಿಗೆ ಪಕ್ಕ ಕುಳಿತು ಹೇಳುವ ಧೈರ್ಯ ಸಾಲದಾಗಿತ್ತು. ಆದ್ದರಿಂದಲೇ ಡೈರಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಳು. ಮೋಹನನ ನಡವಳಿಕೆಯಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ, ಅವನು ಎಂದಿನಂತೆ ಇದ್ದ. ಅವನು ಡೈರಿ ಓದಿಲ್ಲ ಎಂದುಕೊಂಡು ಅವನ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ಆದರೂ, ಓದಿದ್ದರೆ ಚೆನ್ನಾಗಿತ್ತು ಎಂದುಕೊಂಡಳು.

ಇತ್ತ ಮೋಹನ, ಸಹಜವಾಗಿ ನಟಿಸುತ್ತಿದ್ದರೂ, ತಾನು ಡೈರಿ ಓದಿದ ವಿಷಯ ಅನನ್ಯಳಿಗೆ ಎಲ್ಲಿ ತಿಳಿದುಹೋಗುವುದೋ ಎಂಬ ಆತಂಕದಲ್ಲಿ ಇದ್ದ. ಹೆಣ್ಣು, ಗಂಡಿನ  ನಡವಳಿಕೆಯಲ್ಲಿನ ಬದಲಾವಣೆ, ಮನಸಿನ ಏರಿಳಿತ, ರಹಸ್ಯಗಳನ್ನು ತುಂಬಾ ಬೇಗನೆ ಕಂಡುಹಿಡಿಯುತ್ತಾಳೆ ಎಂದು ಅವನಿಗೆ ತಿಳಿದ ವಿಷಯವೇ ಆಗಿತ್ತು. ಅದು ಅವಳಿಗೆ ಪ್ರಕೃತಿದತ್ತವಾದ ಒಂದು ವರ.  ಆದ್ದರಿಂದಲೇ ಅವನಿಗೆ ಎಂದೂ ಸರ್ಪ್ರೈಸ್‌ ಮಾಡಲು ಆಗಿರಲಿಲ್ಲ. ತಾನು ಅವಳ ಹುಟ್ಟಿದ ಹಬ್ಬಕ್ಕೋ, ಪ್ರೇಮಿಗಳ ದಿನಕ್ಕೋ ಒಂದು ಹೂವು ತಂದು ಸರ್ಪ್ರೈಸ್‌ ಮಾಡೋಣ ಎಂದರೂ ಅದು ಅನನ್ಯಗಳಿಗೆ ಮೊದಲೇ ತಿಳಿದಿರುತ್ತದೆ. ಆದ್ದರಿಂದ ಅವಳಿಗೆ ಹೇಳೇ ಏನಾದರೂ ಉಡುಗೊರೆ ತರುತ್ತಾನೆ. ಆಭರಣಗಳಾದರೆ ಅವಳನ್ನು ಕರೆದುಕೊಂಡು ಹೋಗಿಯೇ ಕೊಡಿಸುತ್ತಾನೆ.

ಮೋಹನ, ಅನನ್ಯ ಇಬ್ಬರೂ ತೆರೆದುಕೊಳ್ಳದಿದ್ದರೂ, ಅವರವರ ಆಫೀಸಿನಲ್ಲಿ ಎಲ್ಲಾ ಮಾಮೂಲಿನಂತೆ ನಡೆಯುತಿತ್ತು. ಅನನ್ಯಳು ತಾನು ತುಂಬಾ ಅಲಂಕಾರಮಾಡಿಕೊಳ್ಳದೆ ಆಫೀಸಿಗೆ ಹೋಗಬೇಕು ಎಂದು ಬಯಸಿದರೆ, ಶ್ರೇಷ್ಠಳ ಧ್ವನಿ ನನ್ನ ಕಿವಿಗೆ ಬೀಳದಿರಲಿ ಅವಳು ತನ್ನ  ಎದುರಾಗದಿರಲಿ ಎಂದು ಮೋಹನ ಭಾವಿಸುತ್ತಾನೆ.

ಸಮಸ್ಯೆ ಬೇಗ ತೀರದಿದ್ದರೆ ಅದಕ್ಕೆ ಹೊಂದಿಕೊಳ್ಳಬೇಕು. ಇಲ್ಲವೇ ಸಮಸ್ಯೆಯನ್ನು ದೂರ ತಳ್ಳುವ ಸಾಧ್ಯತೆಯನ್ನು ಹುಡುಕಬೇಕು. ಇಬ್ಬರಿಗೂ ಹೇಗೆ ಸಮಸ್ಯೆಯನ್ನು ದೂರ ಮಾಡುವುದು ಎಂದು ತಿಳಿಯಲಿಲ್ಲ. ಅನನ್ಯ ಮನಸ್ಸಿನಲ್ಲಿ ಮಥನ ಪಡುವುದು ಮೋಹನನಿಗೆ ತಿಳಿಯುತ್ತಿತ್ತು. ಆದರೂ ಏನೂ ಹೇಳದಾದ. ಇಬ್ಬರೂ ಸಹಜವಾಗಿ ಇರಲು ಸದಾ ಪಯತ್ನಿಸುತ್ತಿದ್ದರು. ಎಂದಿನಂತೆ ತಬ್ಬಿಕೊಂಡು ಕುಳಿತು ಟಿವಿ ನೋಡುತ್ತಿದ್ದರು, ಆಗಾಗ ಮುತ್ತಿನಮಳೆ ಸುರಿಸುತ್ತಿದ್ದರು. ಇಂತಹ ಖುಷಿಯ ಸಮಯದಲ್ಲಿ ಶ್ರೇಷ್ಠಳ ನೆನಪು ಆಗದಿದ್ದನ್ನು ಮೋಹನ ಗಮನಿಸಿದ್ದ. ಮನೆಯಲ್ಲಿ ಪ್ರಜ್ಞಾ ಪೂರ್ವಕವಾಗಿ ಶ್ರೇಷ್ಠಳನ್ನು ಮರೆಯಲು ಪ್ರಯತ್ನಿಸುತ್ತಿದ್ದ. ಆದರೂ ಅದು ಅಷ್ಟು ಸುಲಭವಾಗಿರಲಿಲ್ಲ. ಆಫೀಸಿನಲ್ಲಿ ಅವಳಿಂದ ತಪ್ಪಿಸಿಕೊಳ್ಳಲು ಅಷ್ಟು ಆಗುತ್ತಿರಲಿಲ್ಲ. ಎಷ್ಟೋ ಸಲ ಸಹಜವಾಗಿ ತುಂಬಾ ಹೊತ್ತು ಮಾತನಾಡುತಿದ್ದರು. ಅದು ಅವನಿಗೆ ಖುಷಿಕೊಡುತ್ತಿತ್ತು.

ಅಂದು ಶುಕ್ರವಾರ, ಮೀಟಿಂಗ್ ನಡೆಯುತ್ತಿತ್ತು. ಯಾವೊದೋ ವಿಷಯದಮೇಲಿನ ಚರ್ಚೆ ವಾಗ್ವಾದಕ್ಕೆ ತಿರುಗಿತ್ತು. ಮೋಹನ ತನ್ನ ವಾದ ಮಂಡಿಸುತ್ತಿದ್ದ. ತಾನು ಹೇಳುತ್ತಿರುವುದು ಸರಿ ಎಂದು ಅವನಿಗೆ ಗೊತ್ತಿತ್ತು. ಬೇರೆಯವರೂ ತಮ್ಮ ವಾದ ಮಂಡಿಸುತ್ತಿದ್ದರು. ಶ್ರೇಷ್ಠಳೂ ಬೇರೆಯದೇ ವಾದ ಮಂಡಿಸುತ್ತಿದ್ದಳು. ಮೋಹನ ಬೇಸರದಿಂದ ತನ್ನ ಮಾತನ್ನು ಜೋರಾಗಿ ಕಿರುಚಿ ಹೇಳಿದ, ಅಷ್ಟೇ, ಶೇಷ್ಠ ಮೋಹನನ ಕಡೆ ತಿರುಗಿ,

"ಏ ಕುಳಿತುಕೊಳ್ರಿ ನೋಡಿದ್ದೇನೆ, ಏನು ದೊಡ್ಡ ಬುದ್ದಿವಂತ, ಸ್ಮಾರ್ಟ್ನೆಸ್ ತೋರೊಸೋಕೆ ಬರಬೇಡಿ, ನಾನು ತುಂಬಾ ವರ್ಷಗಳಿಂದ ನೋಡುತ್ತಿದ್ದೇನೆ, ನೀವೊಬ್ಬರೇ ಬುದ್ದಿವಂತರು ಅನ್ನೋತರ ಬೀಹೇವ್ ಮಾಡ್ತಿದ್ದೀರಾ, ನನಗೆ ಎಲ್ಲಾ ಗೊತ್ತು" ಎಂದು ಅಬ್ಬರಿಸಿದಳು.  

ಮೋಹನನ ತಲೆ ದಿಮ್ ಎಂದಿತು. ತಾನು ಹೇಳುತ್ತಿರುವುದು ಸರಿ ಎಂದು ಅಲ್ಲಿರುವ ಬಹಳ ಜನಕ್ಕೆ ಗೊತ್ತು, ಆದರೆ ತನಗೆ ಇಷ್ಟವಾಗುತ್ತಿರುವ ಹುಡುಗಿ ತನ್ನ ಅವಮಾನ ಮಾಡುತ್ತಿದ್ದಾಳೆ. ಅದೂ ಎಲ್ಲರ ಎದುರಿಗೆ, ಅಂದರೆ ತಾನು ಇಷ್ಟು ದಿನ ತಿಳಿದಿದ್ದೆಲ್ಲಾ ಸುಳ್ಳು, ಅವಳಿಗೆ ನಾನೂ ಕೂಡ ಒಬ್ಬ ಸಹೋದ್ಯೋಗಿ, ತಾನೇನೂ ವಿಶೇಷವಲ್ಲ, ತಾನು ತಿಳಿದಿದ್ದೆಲ್ಲಾ ಭ್ರಮೆ ಅಥವಾ ಊಹೆ. ಅವನಿಗೆ ಏಕಕಾಲದಲ್ಲಿ ದುಃಖ ಹಾಗೂ ಸಂತೋಷ ಉಂಟಾಯಿತು. ಇವಳಂತವಳಿಗೆ ಅಂತಹ ಮನ್ನಣೆ ಕೊಟ್ಟೆನಲ್ಲ ಎಂದು ದುಃಖವಾದರೆ, ಇವಳ ಮನಸ್ಸು, ಇವಳೆಂತಹವಳು ಎಂದು ತಿಳಿದಿದ್ದಲ್ಲದೆ, ಇನ್ನು ಇವಳ ನೆನೆಪೂ ಕೂಡ ನನಗಾಗುವುದಿಲ್ಲ ಎಂದು ಸಂತೋಷವಾಯಿತು. ಬೇಸರಕ್ಕಿಂತ ಸಂತೋಷ ಹೆಚ್ಚಾಗಿ, ಅವನ ಮುಖ  ಖುಷಿಯಿಂದ ಅರಳಿತು. ಅವನು ಶ್ರೇಷ್ಠಳ ಅಬ್ಬರಕ್ಕೆ ಬೇಸರಿಸದೆ ಖುಷಿಯಾದದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅವನು ಖುಷಿಯಿಂದ " ನಿಮಗೆ ಏನು ಸರಿ ಅನಿಸುತ್ತದೆಯೋ ಹಾಗೆ ಮಾಡಿ" ಎಂದು ಎದ್ದು ಹೊರನಡೆದ.

ಅವನ ದೊಡ್ಡ ಸಮಸ್ಯೆಯೊಂದು ಇಷ್ಟು ಸಲೀಸಾಗಿ ಕರಗಿಹೋಗಿದ್ದು ಅವನಿಗೆ ಆಶ್ಚರ್ಯವಾಗಿತ್ತು. ತನ್ನ ಜೀವನಕ್ಕೆ ಹೆಣ್ಣು ಎಂದರೆ ತನ್ನ ಹೆಂಡತಿ ಮಾತ್ರ, ಅವಳೇ ತನಗೆ ಎಲ್ಲಾ, ಅಂತವಳನ್ನು ಬಿಟ್ಟು ಈ ಕೆಟ್ಟ ಹೆಣ್ಣಿನ ನೆನಪು ಮಾಡಿಕೊಳ್ಳುತ್ತಿದ್ದೆನಲ್ಲ ಎಂದುಕೊಂಡ. ಇನ್ನೂ ಅರ್ಧದಿನ ಇದ್ದರೂ ಆಫೀಸಿನಿಂದ ಮನೆಗೆ ಬಂದುಬಿಟ್ಟ.

ಎಂತಹ ಸಂಬಂಧಗಳೂ ಅವಮಾನವನ್ನು ಭರಿಸುವುದಿಲ್ಲ. ಅವಮಾನ ದೊಡ್ಡದೇ ಆಗಬೇಕಾಗಿಲ್ಲ, ಒಂದು ಸಣ್ಣ ನಿರ್ಲಕ್ಷ್ಯ ಸಂಬಂಧಗಳನ್ನು ತುಂಡರಿಸಬಹದು. ಒಂದು ಸಣ್ಣ ಅಗೌರವ, ಅದೂ ತಾವು ಇಷ್ಟಪಡುವವರಿಂದ ಆದರೆ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಒಂದೊಂದು ಸಲ ಅವಮಾನಗಳು, ಕೋಪ ಹೇಗೋ ಹಾಗೆ ಜೀವನಪಾಠಗಳನ್ನು ಕಲಿಸುತ್ತವೆ. ದಂಪತಿ ವಿಚ್ಚೇದನ ಯಾವುದೋ ಸಣ್ಣ ಸಂಗತಿಯಿಂದಲೇ ಶುರುವಾಗುತ್ತದೆ. ದೇಹ ದೇಹಗಳನ್ನೇ ಹಂಚಿಕೊಳ್ಳುವಷ್ಟು ಹತ್ತಿರದ ಸಂಬಂಧ ಹೇಗೆ ಒಂದು ಸಣ್ಣ ಮಾತಿನಿಂದ ದೂರವಾಗುತ್ತದೆ. ದ್ವೇಷವಾಗಿ ಮಾರ್ಪಾಡಾಗುತ್ತದೆ, ತಿಳಿಯದು.  

ಮನೆಗೆ ಬಂದರೆ ಅನನ್ಯ ಮನೆಯಲ್ಲಿ ಕುಳಿತು ಯಾವೊದೋ ಪುಸ್ತಕ ಓದುತ್ತಿದ್ದಳು.

ಅವನು ಆಶ್ಚರ್ಯದಿಂದ "ಇಷ್ಟು ಬೇಗ ಬಂದುಬಿಟ್ಟಿದ್ದೀಯ" ಎಂದ

"ಯಾಕೋ ಖುಷಿ ಆಗುತ್ತಿತ್ತು, ಆದ್ದರಿಂದಲೇ ಬಂದುಬಿಟ್ಟೆ" ಎಂದವಳು ಎದ್ದು ಅವನನ್ನು ಅಪ್ಪಿಕೊಂಡಳು. ಆ ಅಪ್ಪುಗೆಯಲ್ಲಿ ಸ್ವರ್ಗಕಂಡಾಯಿತು ಮೋಹನಿಗೆ.

"ಬಟ್ಟೆ ಬದಲಿಸಿ ಬನ್ನಿ, ಒಳ್ಳೆಯ ಟೀ ಮಾಡುತ್ತೇನೆ" ಎಂದಳು.

ಅವನು ಬಟ್ಟೆ ಬದಲಾಯಿಸಲು ಮಲಗುವ  ಕೋಣೆಗೆ ಬಂದಾಗ ಅನನ್ಯಳ ದಿನಚರಿ ಪುಟ ತೆರೆದುಕೊಂಡು ಹಾಸಿಗೆಯಮೇಲೆ ಬಿದ್ದಿತ್ತು. ಹಾಗೇ ಕಣ್ಣಾಡಿಸಿದ, ಅಲ್ಲಿ ಹೀಗೆ ಬರೆದಿತ್ತು.  

"ಅವನು ನನ್ನನ್ನು ಅವಮಾನಗೊಳಿಸಿದ್ದು ಒಳ್ಳೆಯದೇ ಆಯಿತು, ಒಂದು ದೊಡ್ಡ ಸಮಸ್ಯೆ ತೀರಿದಂತಾಯಿತು".

ಜೀವನ ಇಷ್ಟೊಂದು ಕಾಕತಾಳೀಯವೇ ಎಂದುಕೊಂಡ. ಮನಸು ನಿರಾಳವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT