ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಶಬರಿ ಕಾದಿದ್ದು ಯಾರಿಗಾಗಿ?

Published 3 ಜೂನ್ 2023, 23:44 IST
Last Updated 3 ಜೂನ್ 2023, 23:44 IST
ಅಕ್ಷರ ಗಾತ್ರ

ಡಾ. ಜ್ಯೋತಿ

ನಾನು ಹೀಗೆ ರಾತ್ರಿ ಹಗಲು  ಕಾಯಲು ಆರಂಭಿಸಿ ನಲ್ವತ್ತು ವಸಂತಗಳೇ  ಕಳೆದುಹೋದವು. ವರುಷಗಳು ಉರುಳಿಹೋದುದೇ ಗೊತ್ತಾಗಲಿಲ್ಲ. ಆಗ, ಮೈಯಲ್ಲಿ ಚೈತನ್ಯವಿತ್ತು. ಗುರುಗಳ ಹಿತವಚನ ಪಾಲಿಸಬೇಕೆನ್ನುವ ಭಕ್ತಿ, ನಂಬಿಕೆ, ಗೌರವವಿತ್ತು. ಆದರೆ...ಈ ಕಾಯುವ ಕೆಲಸವನ್ನು ಇಷ್ಟೊಂದು ದೀರ್ಘ ಕಾಲ ನಡೆಸಿಕೊಂಡು ಹೋಗಬೇಕೆನ್ನುವ ಅರಿವಿರಲಿಲ್ಲ. ಗುರುಗಳ ಕೊನೆಯ ಮಾತೆಂದು ಪ್ರಶ್ನಿಸದೇ ಒಪ್ಪಿಕೊಂಡೆ. ಅದು ಹೇಗೆ ಅಷ್ಟೊಂದು ನಿಖರವಾಗಿ 'ನಲ್ವತ್ತು' ಎಂದು ಹೇಳುತ್ತಿದ್ದೇನೆ ಅಂದುಕೊಂಡಿರಾ... ನನ್ನ ಬಳಿ ಅದಕ್ಕೊಂದು ದಾಖಲೆಯಿದೆ. ಪ್ರೀತಿಯ ಗುರುಗಳಾದ ಮಾತಂಗ ಋಷಿಗಳು ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಅವರ ನೆನಪಿಗಾಗಿ, ಒಂದು ಜಂಬು ನೇರಳೆ ಹಣ್ಣಿನ ಗಿಡವನ್ನು ನೆಟ್ಟಿದ್ದೆ. ಜಂಬು ನೇರಳೆಯೇ ಏಕೆಂದರೆ, ಅದು ಅವರು ಬಹಳ ಇಷ್ಟಪಟ್ಟು ತಿನ್ನುವ ಹಣ್ಣಾಗಿತ್ತು. ಅನಂತರ ಗೊತ್ತಾಯಿತು ಇದು ರಾಮನಿಗೂ ಕೂಡ ಬಲು ಪ್ರಿಯವಾದ ಹಣ್ಣು. ಎಲ್ಲಾ ಕಾಕತಾಳೀಯ.

ಈ ಗಿಡ ನೆಡುವ ಸಂಪ್ರದಾಯವನ್ನು ಗುರುಗಳ ಪ್ರತಿ ವರ್ಷಾಂತಿಕದಲ್ಲಿಯೂ ಮುಂದುವರಿಸುತ್ತಾ ಬಂದೆ. ಅದರ ಪರಿಣಾಮ, ಈಗ ನನ್ನ ಗುಡಿಸಲ ಸುತ್ತಲೂ ಒಟ್ಟು ನಲ್ವತ್ತು ಜಂಬು ನೇರಳೆ ಗಿಡ ಮರಗಳಿವೆ. ಅವುಗಳಲ್ಲಿ ಹಲವಾರು ಮರಗಳು,  ಸ್ವಾದಭರಿತ ಹಣ್ಣುಗಳನ್ನು ಬಿಟ್ಟು, ಆಶ್ರಯಕ್ಕೆ ಬರುವ ಹಕ್ಕಿ, ಕೀಟ, ಹುಳುಗಳಿಗೆ ನೀಡುತ್ತಾ, ನನ್ನ ಗುರುಗಳಂತೆ ಸೇವೆ ಮಾಡುತ್ತಿವೆ. ಒಟ್ಟಿನಲ್ಲಿ, ನನ್ನ ಗುರುಗಳು ಸ್ವರ್ಗವಾಸಿಯಾಗಿ  ಮತ್ತು ಅದರೊಂದಿಗೆ ನಾನು ಒಬ್ಬಂಟಿಯಾಗಿ ಈ ಗುಡಿಸಲಲ್ಲಿ ವಾಸಿಸುತ್ತಾ, ನಲ್ವತ್ತು ವರ್ಷಗಳೇ ಕಳೆದುಹೋದವು. ಈ ಸುದೀರ್ಘ ಒಂಟಿ ಪಯಣದ ನೆನಪುಗಳು ಕೆಲವೊಮ್ಮೆ ಮರುಕಳಿಸುವುದುಂಟು. ಆಗ, ಸ್ವಲ್ಪ ಹೊತ್ತು ಅಲ್ಲಿಯೇ ಕಳೆದುಹೋಗಿ ಬಿಡುತ್ತೇನೆ.

ಈ ನಲ್ವತ್ತು ವರ್ಷಗಳಲ್ಲಿ, ಏಕತಾನದ ದೈನಂದಿನ ಚಟುವಟಿಕೆಗಳ ಪುನರಾವರ್ತನೆ ಬಿಟ್ಟರೆ, ಬೇರೆ ಏನೂ ವಿಶೇಷ ಬಾಹ್ಯ ಘಟನೆಗಳು ನಡೆದಿಲ್ಲವೆನ್ನಬಹುದು. ಆದರೆ, ಈ ಒಂಟಿ ಜೀವನ ಪಯಣದಲ್ಲಿ ನನ್ನೊಳಗೆ ಸಾಕಷ್ಟು ಬದಲಾವಣೆಗಳು ಆಗಿ, ನಾನು ಇನ್ನಷ್ಟು ಗಟ್ಟಿಯಾಗಿರುವುದಂತೂ ನಿಜ. ನನ್ನ ದಿನಚರಿ ಹೆಚ್ಚು ಕಡಿಮೆ ಹೀಗೆಯೇ ಇತ್ತು- ಸೂರ್ಯ ಉದಯವಾಗುವ ಹೊತ್ತಿಗೆ ಕಾಡು ಕೋಳಿಗಳ ಸಮೂಹ  ಗುಡಿಸಲ ಸುತ್ತಲೂ ಆವರಿಸಿ, "ಕೊಕ್ಕೋ... ಕೊಕ್ಕೋ..." ಎಂದು ನನ್ನ ಎಬ್ಬಿಸುವುದು. ಇದು, ಅವುಗಳಿಗೆ  ಹಸಿವಾಗಿದೆ ಎನ್ನುವುದಕ್ಕೆ ನನಗೆ ಕೊಡುವ ಮುನ್ಸೂಚನೆ. ಅವುಗಳು  ನನ್ನ ಬೊಗಸೆಯಿಂದ ಕಾಳುಗಳನ್ನು ತಿಂದು ತಿಂದು ಕೊಬ್ಬಿ ಹೋಗಿ ಸೋಮಾರಿಗಳಾಗಿ ಬಿಟ್ಟಿವೆ. ನಾನು ಸೂಕ್ಷ್ಮವಾಗಿ ನನ್ನ ಸುತ್ತಲಿನ ಪರಿಸರ ಗಮನಿಸಿ ಅರಿತುಕೊಂಡಂತೆ ಅನ್ಯ ಜೀವಿಗಳಲ್ಲೂ ಮನುಷ್ಯನಂತೆಯೇ ಅವಲಂಬನೆಗೆ ಜೋತುಬೀಳುವ ಖಯಾಲಿ ಇದೆ. ಒಮ್ಮೆ, ತಮ್ಮನ್ನು ನೋಡಿಕೊಳ್ಳುವವರು ಇನ್ಯಾರೋ ಇದ್ದಾರೆ ಅನ್ನುವ ಭರವಸೆ ಬಂದುಬಿಟ್ಟರೆ, ಸೋಮಾರಿತನ ತಾನಾಗಿಯೇ ಆವರಿಸಿಕೊಂಡು ಬಿಡುತ್ತದೆ.

ಆದರೆ... ಈ ಅವಲಂಬನೆ ಎಷ್ಟು ದಿನ? ನಾನಿಲ್ಲದ ದಿನಗಳಲ್ಲಿ ಅವು ಬದುಕು ಮುಂದುವರಿಸಬೇಕಲ್ಲವೇ? ಎಷ್ಟೋ ಬಾರಿ ಅಂದುಕೊಂಡಿದ್ದುಂಟು. ಈ ಪರಾವಲಂಬನೆ ಮನುಷ್ಯನ ಹುಟ್ಟುಗುಣವೇ? ನಮ್ಮ ಸಂಬಂಧಗಳೆಲ್ಲವೂ ಹೆಚ್ಚುಕಡಿಮೆ ಅವಲಂಬನೆಯ ಅಡಿಪಾಯದ ಮೇಲೆ ಕೆಲಸ ಮಾಡುತ್ತವೆ. ಯಾರಾದರೂ ಸತ್ತರೆ, ಅವರ ಅವಲಂಬಿತರ ಕುರಿತಾಗಿ ಅನುಕಂಪ ಸೂಚಿಸುವುದು ಸಾಮಾನ್ಯ ದೃಶ್ಯ.  ಆದ್ದರಿಂದ, ನಾಳೆಯಿಂದಲೇ ಈ ಹಕ್ಕಿಗಳಿಗೆ ಕಾಳು ಹಾಕುವುದನ್ನು ನಿಲ್ಲಿಸಿಬಿಡಬೇಕು ಎಂದು ಹಲವಾರು ಸಲ   ಅಂದುಕೊಂಡಿದ್ದಿದೆ. ಆದರೆ, ಆ ನಾಳೆ  ಇಂದಿಗೂ ಬರಲಿಲ್ಲ. ಪ್ರತಿ ದಿನ ಅವುಗಳ ಪ್ರೀತಿಯ ಕರೆ ಕೇಳಿ ಕಣ್ತೆರೆಯುವಾಗ, ಹೃದಯ ಮೃದುವಾಗಿ, ನಿರ್ಧಾರ ಪುನಃ ಮುಂದೂಡಲ್ಪಡುತ್ತದೆ.

ಹೀಗೆ, ಮಲಗಿದ್ದಾಗ ಸೊಟ್ಟಗಾದ ಕೈಕಾಲುಗಳನ್ನು ಸೆಟೆದುಕೊಳ್ಳುತ್ತಾ ನಿಧಾನವಾಗಿ ಏದ್ದು, ಸಾವರಿಸಿಕೊಳ್ಳುತ್ತಾ ಕುಳಿತುಕೊಂಡು ತಲೆಗೂದಲನ್ನು ಮುಡಿ ಕಟ್ಟಿ,  ನೆಲಕ್ಕೆ ಕೈ ಇಟ್ಟು ಎದ್ದುನಿಂತು  ಮೂಲೆಯಲ್ಲಿನ ಊರುಗೋಲು ಹಿಡಿದು ಹೆಜ್ಜೆ ಹಾಕುತ್ತಾ, ಮುಷ್ಟಿಯಷ್ಟು  ಕಾಳನ್ನು ಹಿಡಿದುಕೊಂಡು ಹೊರನಡೆದು, ಕಾಯುತ್ತಿರುವ ಕೋಳಿಗಳಿಗೆ ಹಾಕುತ್ತ, ಒಂದು ಕ್ಷಣ ಅವುಗಳನ್ನೇ ಪ್ರೀತಿಯಿಂದ ನೋಡುತ್ತಾ ನಿಂತುಕೊಂಡು, ನಂತರ ಕಣ್ಣಳತೆಯ ದೂರದ ಪಂಪಾಸರೋವರಕ್ಕೆ ಇಳಿದು, ಹಲ್ಲುಜ್ಜಿ, ಕೈಕಾಲು ಮುಖ ತೊಳೆಯುವುದರೊಂದಿಗೆ ನನ್ನ ದಿನಚರಿ ಆರಂಭವಾಗುತ್ತದೆ. ನನ್ನ ಗುಡಿಸಲ  ಸುತ್ತ ಕಾಳಜಿಯಿಂದ ಬೆಳೆಸಿದ ರಸವತ್ತಾದ ಜಂಬು ನೇರಳೆ ಹಣ್ಣುಗಳಲ್ಲಿ, ದಿನಕ್ಕೆ ಬೇಕಾಗುವಷ್ಟನ್ನು ಆಯ್ದು ಬುಟ್ಟಿಯಲ್ಲಿ ತುಂಬಿಸಿಕೊಂಡು ತಂದು, ಮುಂಜಾನೆಯಲ್ಲೊಮ್ಮೆ, ಮುಸ್ಸಂಜೆಯಲ್ಲೊಮ್ಮೆ ತಿನ್ನುವುದನ್ನು ಬಿಟ್ಟರೆ, ಮಾಡಲು ಮತ್ತೇನೂ ವಿಶೇಷ ಕೆಲಸವಿರುವುದಿಲ್ಲ.

ಕೆಲವೊಮ್ಮೆ ಮಾತ್ರ, ಬಾಯಿ ಇನ್ನೇನೋ ವಿಭಿನ್ನ ರುಚಿ ಕೇಳಿದರೆ, ಅಂಗಳದ ಮೂಲೆಯಾಚೆಗೆ ಬೆಳೆಸಿರುವ ಯಾವುದಾದರೂ ಗಡ್ಡೆಗಳನ್ನು ಅಗೆದು ತೆಗೆದು, ಮೊಗ್ಗನ್ನು ಅಲ್ಲಿಯೇ ನೆಟ್ಟು, ಗಡ್ಡೆಯನ್ನು ತೊಳೆದು ಬೇಯಿಸಿಯೋ, ಸುಟ್ಟೋ  ತಿಂದು ನೀರು ಕುಡಿಯುತ್ತೇನೆ. ವಯೋ ಸಹಜವಾಗಿ ಕಳೆದ ಕೆಲವು ವರುಷಗಳಿಂದ ನನಗೆ ಹಸಿವು ಕಡಿಮೆಯಾಗುತ್ತಿದೆ, ಬಾಯಿ ರುಚಿ ಕಳೆದು ಹೋಗುತ್ತಿದೆ. ಜೊತೆಗೆ, ನಿಶ್ಶಕ್ತಿಯೂ ಆವರಿಸುತ್ತಿದೆ, ಕಣ್ಣು ಮಂಜಾಗುತ್ತಿದೆ. ಹಾಗಾಗಿ, ವಿಶ್ರಾಂತಿಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ದೇಹ  ಗಟ್ಟಿಯಿರುವಾಗ, ಕಾಡಲ್ಲಿ ಅಲೆದು ಸುತ್ತಾಡಿ ಹಣ್ಣಿನ ಬೀಜಗಳು, ಧಾನ್ಯಗಳು, ಗಡ್ಡೆಗಳು, ಇತ್ಯಾದಿಗಳನ್ನು ಆರಿಸಿಕೊಂಡು ಬಂದು ನನ್ನ ಗುಡಿಸಲ ಸುತ್ತಲೂ ಮಣ್ಣಿನಲ್ಲಿ ಊರಿ ಗಿಡ ಮಾಡಿ ಜೋಪಾನವಾಗಿ ಬೆಳೆಸಿದ್ದರಿಂದ, ಇಂದು ಹೊಟ್ಟೆಪಾಡಿಗೆ ಹೆಚ್ಚು ಅಲೆದಾಡಬೇಕಾಗಿಲ್ಲ. ಇಲ್ಲದಿದ್ದಲ್ಲಿ, ಈ ಒಂಟಿ ಮುದುಕಿಗೆ ಯಾರು ಆಸರೆ? 

ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ದಿನದ ಉಳಿದ ಸಮಯದಲ್ಲಿ ನಾನು ಮಾಡುವುದಿಷ್ಟೇ- ದೂರದಲ್ಲಿ ಕುತೂಹಲದಿಂದ ನೋಡುತ್ತಾ, ಅನಂತರ ಅಂಜಿಕೆಯಿಂದಲೇ ಹತ್ತಿರ ಬಂದು, ನಿಧಾನವಾಗಿ ಧೈರ್ಯದಿಂದ ನನ್ನ ಸ್ಪರ್ಶಿಸುತ್ತಾ ಆಟವಾಡುವ ಜಿಂಕೆ, ಅಳಿಲು, ಮೊಲ,  ವೈವಿಧ್ಯಮಯ ಕಲರವದ ಹಕ್ಕಿಗಳು, ಮತ್ತು ಹಸು ಕರುಗಳ ಮೈಸವರುತ್ತಾ ಮರಗಳ ನೆರಳಲ್ಲಿ ಹುಲ್ಲಿನ ಮೇಲೆ ವಿಶ್ರಮಿಸುತ್ತಾ, ಮೇಲಿನ ನೀಲಿ ಆಕಾಶವನ್ನು ನೋಡುವುದು. ಈ ಆಕಾಶದಲ್ಲಿ ಕ್ಷಣ ಕ್ಷಣವೂ ವಿಭಿನ್ನ ಕಲಾಕೃತಿಗಳು ಮೂಡುತ್ತಿರುತ್ತವೆ, ಮರೆಯಾಗುತ್ತಿರುತ್ತವೆ. ಬಣ್ಣಗಳು ಬದಲಾಗುತ್ತವೆ, ಚಿತ್ರಗಳು ಬದಲಾಗುತ್ತವೆ, ಆದರೆ, ಕಲಾಕಾರ ಒಬ್ಬನೇ ಇರಬಹುದೇನೋ? ಕಾಡಿನಲ್ಲಾಗಲಿ, ಆಕಾಶದಲ್ಲಾಗಲಿ, ಎಲ್ಲರಿಗೂ, ಎಲ್ಲದಕ್ಕೂ ಮುಕ್ತ ಅವಕಾಶಗಳಿವೆ. ಆದರೆ,  ಮನುಷ್ಯ ಲೋಕ ಮಾತ್ರ, ನಿಷ್ಟುರದ ಬೇಲಿಗಳನ್ನು ಹಾಕಿಕೊಂಡು ಬದುಕಲ್ಲಿ ಇಲ್ಲದ ಗೊಂದಲ ಸೃಷ್ಟಿಸುತ್ತದೆ. ನಾನು ಬೇಡರ ಜಾತಿಯ ಹೆಣ್ಣುಮಗಳು ಎಂಬ ಏಕೈಕ ಕಾರಣಕ್ಕೆ  ಸುತ್ತಲಿನ ಎಲ್ಲಾ ಆಶ್ರಮದವರು ನನ್ನ ದೂರವಿಟ್ಟರು. ಆಗ, ನನಗೆ ಆಶ್ರಯ ಕೊಟ್ಟವರು ಮಾತಂಗ ಋಷಿಗಳು ಮಾತ್ರ.

ನಾನೀಗ,  ನನ್ನ ಕೌಟುಂಬಿಕ ಹಿನ್ನೆಲೆಯ ಕುರಿತು ನಿಮಗೆ ಒಂದು ಮಾತು ಹೇಳಲೇ ಬೇಕು. ಕೆಳಜಾತಿಯ ಹೆಣ್ಣುಮಗಳೊಬ್ಬಳು ಮೇಲ್ಜಾತಿಯವರ ಪಾರುಪತ್ಯದ ಆಶ್ರಮ ಸೇರಿದ್ದು ಹೇಗೆ, ಎನ್ನುವ ಕುತೂಹಲ ನಿಮಗಿರಬಹುದು. ನನ್ನ ಮೂಲ ಹೆಸರು ಶಮನ. ನಾನು ಶಬರಿ ಬುಡಕಟ್ಟು ಜನಾಂಗಕ್ಕೆ ಸೇರಿದವಳು. ನನ್ನಪ್ಪ ನಮ್ಮ ಬುಡಕಟ್ಟಿನ ಮುಖಂಡನಾಗಿದ್ದ. ಪ್ರಾಣಿಗಳನ್ನು ಬೇಟೆಯಾಡುವುದು ನಮ್ಮ ಮುಖ್ಯ ಕಸುಬಾಗಿತ್ತು. ಸಮುದಾಯದ ಸಂಪ್ರದಾಯ, ಆಚರಣೆ, ಸಂಸ್ಕ್ರತಿಗೆ ತದ್ವಿರುದ್ಧವಾಗಿ, ನನಗೆ ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ವಿಪರೀತ ದಯೆ, ಪ್ರೀತಿಯಿತ್ತು. ಪ್ರತಿದಿನ ಪ್ರಾಣಿಗಳ ರಕ್ತಸಿಕ್ತ ದೇಹ, ಅವುಗಳು ಉಸಿರು ಬಿಡುವಾಗ ಹೊಡೆದುಕೊಳ್ಳುವ ಎದೆಬಡಿತ, ಆಕ್ರಂದನ, ಕಣ್ಣಿಂದ ಸೂಸುವ ನೀರು, ನೋವು, ಮತ್ತು ಕತ್ತರಿಸಿದಾಗ ಹೊರಚಿಮ್ಮುವ ರಕ್ತ, ಇದನ್ನೆಲ್ಲಾ ನೋಡುವಾಗ ಹೊಟ್ಟೆ ತೊಳೆಸಿದಂತಾಗುತ್ತಿತ್ತು. ಇದರಿಂದಾಗಿ,  ನನ್ನ ಜನರಿಗೆ ನಾನು ಹೊರಗಿನವಳಂತೆ ಕಂಡೆ. ನನಗಿಂದೂ ಅರ್ಥವಾಗಿಲ್ಲ, ನಾನೇಕೆ ಹೀಗೆ ನನ್ನವರಿಗಿಂತ ಭಿನ್ನವಾಗಿ ಯೋಚಿಸುತ್ತಿದ್ದೆ? 

 ವರುಷಗಳು ಕಳೆದು ಮದುವೆ ವಯಸ್ಸಿಗೆ ಬಂದೆ. ನಾನೇನೂ ಬಹಳ ಸುಂದರಿಯಾಗಿರಲಿಲ್ಲ. ಆದರೆ, ಒಬ್ಬ ಸಮುದಾಯ ನಾಯಕನ ಮಗಳಾದ್ದರಿಂದ, ನನ್ನ ಮದುವೆಗೆ ಗಂಡು ಹುಡುಕುವುದು ಕಷ್ಟವಾಗಲಿಲ್ಲ. ತಕ್ಷಣ  ವರ ಸಿಕ್ಕಿದ. ಮದುವೆ ನಿಶ್ಚಯವಾಯಿತು. ನನ್ನಪ್ಪ, ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಬೇಕೆಂದುಕೊಂಡು ಒಂದು ಸಾವಿರ ಕುರಿ ಮೇಕೆಗಳನ್ನು ಕೂಡಿ ಹಾಕಿ, ಬಂಧುಬಳಗಕ್ಕೆ ಭರ್ಜರಿ ಭೋಜನದ  ವ್ಯವಸ್ಥೆ ಮಾಡಬೇಕೆಂದುಕೊಂಡ. ನನಗೆ ಅವುಗಳ ಅಳುವ ಸದ್ದು ಕೇಳಿ ಮನಸ್ಸು ವಿಚಲಿತವಾಯಿತು, ಯಾರಲ್ಲೂ ಹೇಳಿಕೊಳ್ಳಲಾಗದೆ ಹೃದಯ ಒದ್ದಾಡಿತು. ಮದುವೆಯ ಹಿಂದಿನ ರಾತ್ರಿಯಿಡೀ ಆಲೋಚನೆ ಮಾಡಿದೆ-ಒಂದು ವೇಳೆ ಮದುವೆ ನಡೆಯದಿದ್ದರೆ, ಈ ಪ್ರಾಣಿಗಳು ಬದುಕುತ್ತವೇನೋ. ಈ ಬೃಹತ್ ಪ್ರಮಾಣದ ರಕ್ತಪಾತಕ್ಕೆ ನಾನು ಕಾರಣವಾಗಬೇಕೇ? ಹೇಗೆ ಇದನ್ನು ತಡೆಯುವುದು?... 

ಇನ್ನೊಂದು ಬಹಳ ಮುಖ್ಯವಾದ ವಿಚಾರವೆಂದರೆ, ಹೇಳಿಕೇಳಿ ನನಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ನಾನು ಬೇಡವೆಂದರೆ  ಹೆತ್ತವರು ಸುಮ್ಮನಿರುತ್ತಾರೆಯೇ? ಆಯ್ಕೆ ನನಗೆ ಬಿಟ್ಟಿದ್ದರೆ, ನನ್ನಿಷ್ಟದಂತೆ, ಯಾವುದೇ ಕಟ್ಟುಪಾಡುಗಳಿಲ್ಲದ ಸ್ವತಂತ್ರ ಜೀವನ ನಡೆಸುತ್ತಿದ್ದೆ.  ಸಾಂಸಾರಿಕ ಜೀವನ ನನ್ನ ಪ್ರಾಶಸ್ತ್ಯವಾಗಿರಲಿಲ್ಲ. ಇದನ್ನು ಪ್ರಾಪ್ತಿ ಮಾಡಿಕೊಳ್ಳಲೆಂದೇ ಜನರು ಆಶ್ರಮವಾಸಿಯಾಗುತ್ತಾರೆಂದು ಕೇಳಿದ್ದೆ. ಆದರೆ, ಹೆಣ್ಣುಮಕ್ಕಳಿಗೆ ಇದು ಸಾಧ್ಯವೇ? ನಾನ್ಯಾಕೆ ಪ್ರಯತ್ನಿಸಬಾರದು, ಎಂದೆನಿಸಿತು. ನನ್ನ ಕಾಲದಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಬದುಕುವುದು ಸುಲಭವಾಗಿರಲಿಲ್ಲ. 

ಬೆಳಿಗ್ಗೆಯಾದರೆ, ಈ ಸಾವಿರ ಕುರಿ ಮೇಕೆಗಳ ಆರ್ತನಾದದ ನಡುವೆ ನನ್ನ ಮದುವೆಯ ಸಂಭ್ರಮದ ಸದ್ದು. ಯೋಚಿಸಿ, ಅಂತೂ ಒಂದು ನಿರ್ಧಾರಕ್ಕೆ ಬಂದು ಎದ್ದು ಕುಳಿತೆ. ಹೊರಗೆ ಕತ್ತಲು. ಬೆಳಗಾಗುವುದಕ್ಕೆ ಇನ್ನೂ ಸ್ವಲ್ಪ ಹೊತ್ತು ಬಾಕಿಯಿತ್ತು. ನನ್ನವರೆಲ್ಲಾ ಮಲಗಿದ್ದರು. ಹತ್ತಿರದಲ್ಲಿ ಅಮ್ಮನ ಉಸಿರಾಟದ ಸದ್ದು ಕೇಳಿಸುತ್ತಿತ್ತು. ಅವಳಿಗೆಂದೂ ನಾನು ಅರ್ಥವಾಗಿರಲಿಲ್ಲ. ಹಾಗಾಗಿ, ಯಾವುದೇ ವ್ಯಾಮೋಹಗಳಿಲ್ಲದೆ ಬಿಡುಗಡೆ ಪಡೆಯುವುದು ಮನಸ್ಸಿಗೆ ಕಷ್ಟವಾಗಲಿಲ್ಲ. ಸದ್ದಿಲ್ಲದೇ ಹೊರ ನಡೆದೆ, ಒಮ್ಮೆಯೂ ತಿರುಗಿ ನೋಡದೆ. ಹೋಗುವುದು ಯಾವ ಕಡೆಯೆಂದು  ತಿಳಿದಿರಲಿಲ್ಲ. ದಕ್ಷಿಣದ ಕಡೆಗಿರುವ ಕಾಲುದಾರಿಯಲ್ಲಿ ಜನರು ಆಗಾಗ ನಡೆದಾಡುವುದನ್ನು ನೋಡಿದ್ದೆ. ಆದ್ದರಿಂದ, ಆ ದಾರಿಯಲ್ಲಿಯೇ  ನಡೆಯುತ್ತಾ ಮುಂದುವರಿದೆ. ನನ್ನಂತಹ ಎಳೆವಯಸ್ಸಿನ ಹೆಣ್ಣುಮಗಳು  ಹೀಗೆ ಒಬ್ಬಳೇ ಬಹಳ ಹೊತ್ತು ಅಲೆದಾಡುವುದು ಸರಿಯಲ್ಲ, ಯಾವುದಾದರೊಂದು ಸೂಕ್ತ ಆಶ್ರಮ ಸೇರಿ, ಅಲ್ಲಿ ವಿದ್ಯಾಭ್ಯಾಸ ಮಾಡಿ ಗುರು ಸೇವೆ ಮಾಡುತ್ತಾ ಜೀವಿಸುತ್ತೇನೆ, ಎಂದು ನಿರ್ಧರಿಸಿದೆ. 

ನಾನು, ಮೊದಲ ಬಾರಿಗೆ ನನ್ನ ಸಮುದಾಯದ ಹೊರಗಿನವರೊಂದಿಗೆ ವ್ಯವಹರಿಸುತ್ತಿದ್ದೇನೆ. ಅದೊಂದು ಬೇರೆಯೇ ಪ್ರಪಂಚವೆಂದು ಆಗ ನನಗೆ  ಪ್ರಾಯೋಗಿಕವಾಗಿ ಅರ್ಥವಾಯಿತು. ಆಶ್ಚರ್ಯವೆಂದರೆ, ಯಾವ ಆಶ್ರಮದವರೂ ನನ್ನನ್ನು ಸೇರಿಸಿಕೊಳ್ಳಲಿಲ್ಲ. ಎಲ್ಲರೂ, ನನ್ನ ಜಾತಿ ಮತ್ತು ಮನೆತನದ ಹಿನ್ನೆಲೆ ಕೇಳಿ ನಿರಾಕರಿಸಿದರು. ನನಗಿಂತ, ನನ್ನ ಆಸಕ್ತಿಗಿಂತ ನನ್ನ ಹಿನ್ನೆಲೆ ಅವರಿಗೆ ಬಲುಮುಖ್ಯವಾಗಿತ್ತು. ನನ್ನ ಜನರೊಂದಿಗೆ ವಾಸಿಸುವಾಗ, ನನಗೆ ಜಾತಿಯಲ್ಲಿ ಮೇಲು ಕೆಳಗಿದೆ ಎಂದು ತಿಳಿದಿರಲಿಲ್ಲ. ಮನುಷ್ಯರೆಲ್ಲಾ ಒಂದೇ ಅಂದುಕೊಂಡಿದ್ದೆ. ಆದರೆ, ಹೊರ ಜಗತ್ತಿನಲ್ಲಿ ಮನುಷ್ಯರನ್ನು ಜಾತಿಯ ಹೆಸರಿನ ಆಧಾರದಲ್ಲಿ ಮೇಲೆ, ಕೆಳಗೆ ಎಂದು ವಿವಿಧ ಸ್ತರಗಳನ್ನು ಮಾಡಿ ವಿಂಗಡಿಸುತ್ತಾರೆ ಮತ್ತು ಕೆಳಜಾತಿಯವರಿಗೆ ಬ್ರಹ್ಮಜ್ಞಾನ ಗಳಿಸುವ ಅವಕಾಶವಿಲ್ಲ, ಅದೇನಿದ್ದರೂ ಮೇಲ್ಜಾತಿಯವರಿಗೆ ಮಾತ್ರ ಮೀಸಲು, ಎಂಬ ಜ್ಞಾನೋದಯವಾಯಿತು. ಒಂಟಿ ಹೆಣ್ಣುಮಗಳು ಹೀಗೇಕೆ ಇಷ್ಟು ಸ್ವತಂತ್ರವಾಗಿ ವರ್ತಿಸುತ್ತಿದ್ದಾಳೆ, ಎಂದು ಸಂಶಯದಿಂದ ನೋಡಿದರು. ಆದರೂ, ನನ್ನ ನಿರ್ಧಾರ ಬದಲಿಸಲಿಲ್ಲ. ಪಯಣ ಮುಂದುವರಿಸಿದೆ. ಅಲೆದು ಅಲೆದು ಸುಸ್ತಾಗಿ ಋಷ್ಯಶೃಂಗದ ಮಾತಂಗ ಋಷಿಗಳ ಆಶ್ರಮಕ್ಕೆ ಕಾಲಿಟ್ಟೆ. ಅವರಲ್ಲಿ ನಾನು ಜ್ಞಾನರ್ಜನೆಯ ಒತ್ತಾಸೆಯನ್ನು ಹಂಚಿಕೊಂಡೆ, ಪ್ರಾರ್ಥಿಸಿದೆ. ಅವರು ನನಗೆ ಆಶ್ರಯ  ನೀಡಿದ್ದು ಮಾತ್ರವಲ್ಲ, ಶಿಷ್ಯೆಯಾಗಿ ಸ್ವೀಕರಿಸಿದರು. ಆ ಕಾಲದಲ್ಲಿ ಅವರು ತೆಗೆದುಕೊಂಡಿದ್ದು ಒಂದು ಕ್ರಾಂತಿಕಾರಿ ನಿರ್ಧಾರವಾಗಿತ್ತು. ಬಹುಶಃ, ವಿದ್ಯಾರ್ಜನೆಗಾಗಿ ಆಶ್ರಮ ಸೇರಿದ ಕೆಳಜಾತಿಯ ಮೊದಲ ಹೆಣ್ಣು ನಾನಾಗಿರಬಹುದು.   

ಗುರುಗಳು ಸಾವಧಾನದಿಂದ ನನ್ನ ಸಂದರ್ಶನ ಮಾಡಿದರು:

"ಮಗಳೇ, ನಿನ್ನ ಹೆಸರೇನು? ಯಾವ ಊರಿನವಳು?"

ನಾನು ಹೇಳಿದೆ:

"ನನ್ನ ಹೆಸರು ಶಮನ. ನಾನು ಶಬರಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳು."

ಮಾತಂಗ ಋಷಿಗಳು ನಸುನಕ್ಕು ಹೇಳಿದರು:

"ಇಂದಿನಿಂದ ನಿನ್ನ ಹೆಸರು 'ಶಬರಿ'. ಇದೇ  ನಿನ್ನ ಅಸ್ಮಿತೆಯಾಗಲಿ. ಯಾರು ನಿನ್ನ ಸಮುದಾಯದ ಹಿನ್ನೆಲೆಯನ್ನು ಹೀಯಾಳಿಸಿ ವಿದ್ಯಾಭ್ಯಾಸ ನಿರಾಕರಿಸಿದರೋ, ಅವರೆಲ್ಲ ನಿನ್ನ ಆ ಹೆಸರಿನಿಂದಲೇ ಗುರುತಿಸುವ  ಕಾಲ ಬಂದೇ ಬರುತ್ತದೆ. ನೀನು ಧೈರ್ಯವಾಗಿ ಬದುಕು."

ಅಂದಿನಿಂದ ನನ್ನ ಹೆಸರು ಶಬರಿ ಎಂದಾಯಿತು.

ಗುರುಗಳಿಗೆ ಜಾತಿ ಮತ್ತು ಲಿಂಗದ ತಾರತಮ್ಯವಿರಲಿಲ್ಲ. ನಾನು ಅಲ್ಲಿಯೇ ಉಳಿದುಕೊಂಡು ಆಶ್ರಮದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು, ಅಕ್ಷರಾಭ್ಯಾಸ ಮಾಡಿಕೊಂಡು ನೆಮ್ಮದಿ ಕಂಡುಕೊಂಡಿದ್ದೆ ಎನ್ನಬಹುದು.  ನನ್ನ ಇರುವಿಕೆಯಿಂದಾಗಿ, ಗುರುಗಳನ್ನು ಭೇಟಿ ಮಾಡಲು ಬರುತ್ತಿದ್ದ ಮೇಲ್ಜಾತಿಯವರು ಬರುವುದನ್ನು ನಿಲ್ಲಿಸಿದರು, ಗುರುಗಳನ್ನು ತಮ್ಮಲ್ಲಿಗೆ ಆಹ್ವಾನಿಸುವುದನ್ನು ಕೂಡ ಕಡಿಮೆ ಮಾಡಿದರು. ಆದರೆ, ಗುರುಗಳು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಎಂದಿನಂತೆ ಶಾಂತವಾಗಿಯೇ ಇದ್ದರು. 

ಆದರೆ, ಎಲ್ಲದಕ್ಕೂ ಒಂದು ಅಂತ್ಯವಿದೆಯಲ್ಲವೇ?  ನನ್ನ ನೆಮ್ಮದಿಗೂ ಒಂದು ಪೂರ್ಣವಿರಾಮ ಬಿತ್ತು. ವಯೋವೃದ್ಧರಾಗಿದ್ದ ಗುರುಗಳು ತಮ್ಮ ಅಂತ್ಯದ ಸೂಚನೆಯನ್ನು ಮನ ಗಂಡು ನನ್ನನ್ನು ಪಕ್ಕಕ್ಕೆ ಕರೆದು ಹೇಳಿದರು:

"ಮಗಳೇ ಶಬರಿ, ನಾನು ಈ ಲೋಕ ತ್ಯಜಿಸುವ ಸಮಯ ಸನ್ನಿಹಿತವಾಗುತ್ತಿದೆ. ನಿನಗೆ ಏನಾದರೂ ಕೇಳುವುದಿದ್ದರೆ ಹೇಳು. ಉತ್ತರಿಸಲು ಪ್ರಯತ್ನಿಸುತ್ತೇನೆ."

ನನಗೆ ದಿಗ್ಭ್ರಮೆಯಾಯಿತು, ಏನು ಹೇಳಬೇಕೆಂದು ತೋಚಲಿಲ್ಲ. ಮಾತು ಹೊರಡಲಿಲ್ಲ. ಬದುಕೇ ಸ್ಥಗಿತಗೊಂಡಂತೆ ಅನ್ನಿಸಿತು. ಹಾಗೆಯೇ ಕುಸಿದು ಕುಳಿತೆ.

ನಿಧಾನವಾಗಿ ಸಾವರಿಸಿಕೊಳ್ಳುತ್ತಾ ಅವರ ಸುಕ್ಕುಗಟ್ಟಿದ ಕೈ ಹಿಡಿದು ಉಸುರಿದೆ:

"ಗುರುಗಳೇ, ನನಗೆ ಇನ್ನು ಈ ಲೋಕದಲ್ಲಿ ಉಳಿದುಕೊಳ್ಳಲು ಇಷ್ಟ ಇಲ್ಲ. ಇದ್ದು ಸಾಧಿಸುವುದೇನಿದೆ? ನಾನೂ ನಿಮ್ಮೊಂದಿಗೆ ಪರಲೋಕಕ್ಕೆ ಬರುತ್ತೇನೆ. ನೀವು ಹೋದ ಮೇಲೆ ಇಲ್ಲಿನ ಜನರು ಈ ಆಶ್ರಮದಿಂದಲೇ ನನ್ನನ್ನು ಹೊರಗೆ ಕಳುಹಿಸಿ ಬಿಡಬಹುದು. ನನ್ನಿಂದ ಅದನ್ನೆಲ್ಲಾ ಒಬ್ಬಳೇ ನಿಭಾಯಿಸಲು ಸಾಧ್ಯವಿಲ್ಲ."  

ಗುರುಗಳ ಮುಖದಲ್ಲಿ ವಿಷಾದವಿತ್ತು. ಹಿಡಿದಿದ್ದ ನನ್ನ ಕೈಯನ್ನು ಗಟ್ಟಿಯಾಗಿಸಿ ಪಿಸು ನುಡಿದರು:

"ಮಗಳೇ…ಚಿಂತಿಸಬೇಡ. ಏನೂ ತೊಂದರೆಯಾಗುವುದಿಲ್ಲ. ಉಳಿದವರೆಲ್ಲಾ ಬಿಟ್ಟು ಹೋದರೂ ನೀನೊಬ್ಬಳೇ ಇರು. ನೀನೇ ಇದರ ವಾರಸುದಾರಳು ನಿನ್ನ ಆತ್ಮವನ್ನು ಹತ್ಯೆಮಾಡುವ ಆಲೋಚನೆ ಬೇಡ. ಮುಂದೊಂದು ದಿನ ನಿನ್ನನ್ನು ಹುಡುಕಿಕೊಂಡು ಶ್ರೀ ರಾಮನೇ ಈ ಆಶ್ರಮಕ್ಕೆ ಬರುತ್ತಾನೆ. ಅವನನ್ನು ಸ್ವಾಗತಿಸಿ ಸತ್ಕಾರ ಮಾಡು. ಆಗ ನಿನ್ನ ಕರ್ಮಫಲವೆಲ್ಲಾ ಮುಗಿದುಹೋಗುತ್ತದೆ. ಅನಂತರ, ನೀನು ಇಚ್ಚಿಸಿದರೆ ದೇಹ ತ್ಯಾಗ ಮಾಡಬಹುದು. ದೇಹವನ್ನು ವ್ರತಃ ತ್ಯಜಿಸಬಾರದು. ಮನುಷ್ಯ ಜನ್ಮ ಶ್ರೇಷ್ಠವಾದುದು."

ಆದರೂ, ಈ ಅನಿಶ್ಚಿತ ಧೀರ್ಘ ಕಾಯುವಿಕೆಗೆ ನಾನು ಮಾನಸಿಕವಾಗಿ ಸಿದ್ಧಳಿರಲಿಲ್ಲ. ಗುರುಗಳಿಗೆ ಅದನ್ನೇ ಹೇಳಿದೆ. ಆದರೆ, ಅವರು ನನ್ನ ಮಾತನ್ನು ಒಪ್ಪಿಕೊಳ್ಳಲಿಲ್ಲ, ಬದಲಾಗಿ ನಾನು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲವೆಂದು ಭಾಷೆ ತೆಗೆದುಕೊಂಡರು. ಅವರ ಮೇಲಿನ ಗೌರವದಿಂದ ನಾನು ಒಪ್ಪಿಕೊಳ್ಳಲೇ ಬೇಕಾಯಿತು. ಅನಂತರವೇ, ಅವರು ನಿರಾಳರಾಗಿ ಪ್ರಾಣತ್ಯಾಗ ಮಾಡಿದ್ದು.

 ಅವರು ಗತಿಸಿದ ನಂತರ, ನಿರೀಕ್ಷೆಯಂತೆ ಆಶ್ರಮ ಖಾಲಿಯಾಗಿ  ನಾನು ಒಂಟಿಯಾದೆ. ಅಂದಿನಿಂದ ನನ್ನ ಜೊತೆಗಾರರೆಂದರೆ ಈ ಪ್ರಾಣಿಪಕ್ಷಿಗಳು. ಕಾಲ ಕಳೆದಂತೆ, ಆಶ್ರಮವು ತನ್ನ ಗತಕಾಲದ ವೈಭವ ಕಳೆದುಕೊಂಡು ನನ್ನ ಗುಡಿಸಲಾಗಿ ಪರಿವರ್ತನೆಯಾಯಿತು. ಪ್ರತಿ ವರ್ಷ  ಮಳೆಗಾಲಕ್ಕೆ ಮೊದಲು, ಸೂರಿಗೆ ಹೊದಿಕೆ ಹಚ್ಚಿ ಭದ್ರಗೊಳಿಸಲು ನನ್ನೊಬ್ಬಳಿಂದ ಸಾಧ್ಯವಾಗಲಿಲ್ಲ. ಅಗತ್ಯ ಬಿದ್ದಾಗ ನನಗೆ ತೋಚಿದಂತೆ ಅದನ್ನು ಸರಿಪಡಿಸುತ್ತಾ ಕಾಲ ಕಳೆದೆ. ಈ ಬದಲಾವಣೆಗಳಿಗೆ ನಾನೇನೂ ಬೇಸರಗೊಳ್ಳಲಿಲ್ಲ. ಬಾಯಾರಿದರೆ ಪಂಪ ಸರೋವರಕ್ಕೆ ಇಳಿದು, ಬೊಗಸೆಯಲ್ಲಿ ನೀರನ್ನು ತುಂಬಿಕೊಂಡು ಆಸ್ವಾದಿಸುವುದು.  ಸೂರ್ಯ ಮುಳುಗಿದ ಮೇಲೆ ಗುಡಿಸಲ ಬಾಗಿಲಿಗೆ ಕದವಿಟ್ಟು, ಒಳಗೆ ದೀಪದ ಬೆಳಕಿನಲ್ಲಿ ಒಂದಿಷ್ಟು ಹಣ್ಣು ತಿಂದು, ಮೂಲೆಯಲ್ಲಿ ಚಾಪೆ ಬಿಡಿಸಿಕೊಂಡು, ದೀಪ ಆರಿಸಿ, ಕತ್ತಲಲ್ಲಿ ಕೈಕಾಲು ಚಾಚಿ ಮಲಗಿದರೆ ಪುನಃ ಎಚ್ಚರವಾಗುವುದು, ಹಕ್ಕಿಗಳ ಕರೆಗೆ. 

ಗುಡಿಸಲ ಪಕ್ಕದಲ್ಲಿ ಸದಾ ನೀರು ತುಂಬಿರುವ ಪಂಪ ಸರೋವರದ  ಕಥೆ ಇನ್ನೂ ವಿಶಿಷ್ಟವಾದುದು. ಇದನ್ನು ಕೆಂಪು ನೀರಿನ ಕೊಳವೆಂದು, ನನ್ನಿಂದಾಗಿ ಕರೆಯಲಾರಂಭಿಸಿದರು. ಕೆಂಪೆಂದರೆ ಕಲುಷಿತ ನೀರೆಂದು ಅರ್ಥ. ನನ್ನ ಸ್ಪರ್ಶದಿಂದ ಅದು ಕಲುಷಿತವಾಗಿದೆ, ಎಂದು ಅಲ್ಲಿನ ಜನರು ಹೇಳತೊಡಗಿದರು. ನಾನು ಆಶ್ರಮಕ್ಕೆ ಕಾಲಿಟ್ಟ ದಿನವದು. ಜಾತಿ ಪದ್ದತಿಯ ನಿಬಂಧನೆಗಳು ಗೊತ್ತಿರಲಿಲ್ಲ. ಆಶ್ರಮದಲ್ಲಿ ಪ್ರವೇಶ ಸಿಕ್ಕಿದ  ಖುಷಿಯಲ್ಲಿ, ಗುರುಗಳ ಸೇವೆ ಮಾಡಲೆಂದು ಕೊಡ ಹಿಡಿದು ನೀರು ತರಲೆಂದು ಸಮೀಪದ ಪಂಪ ಸರೋವರಕ್ಕೆ ಇಳಿದೆ. ಇದನ್ನು ನೋಡಿದ ಅಕ್ಕ ಪಕ್ಕದ ಆಶ್ರಮವಾಸಿಗಳು ಜೋರಾಗಿ ಕಿರುಚಿಕೊಂಡರು. ನನಗೆ ಭಯವಾಯಿತು. ಏನಾದರೂ ಮೊಸಳೆ ಆಕ್ರಮಣವಾಗುತ್ತಿದೆಯೆಂದು ನನ್ನನ್ನು ಎಚ್ಚರಿಸುತ್ತಿದ್ದಾರೆಯೇ... ಬೇರೆ ಆಶ್ರಮಗಳ ಹಲವಾರು ಶಿಷ್ಯಂದಿರು  ನನ್ನತ್ತ ಓಡೋಡಿ ಬಂದು ಬೈದ ಮೇಲೆ ವಿಷಯ ತಿಳಿದು, ಅವರ ಅಜ್ಞಾನದ ಪರಮಾವಧಿಯ ಕುರಿತು ಅನುಕಂಪ ಮೂಡಿ ಜಿಗುಪ್ಸೆ ಹುಟ್ಟಿತು. ಏನೂ ಓದಿರದ ನನಗಿರುವ ಸಾಮಾನ್ಯ ಪ್ರಜ್ಞೆ, ಈ ವಿದ್ಯಾವಂತ  ಗುರುಕುಲವಾಸಿಗಳಿಗಿಲ್ಲವಲ್ಲ, ಎಂದೆನಿಸಿತು- ನಾನು ಬೇಡರ ಜಾತಿಯವಳಾದ್ದರಿಂದ, ಮುಟ್ಟಬಾರದವಳು. ಮೇಲ್ಜಾತಿಯವರು ಉಪಯೋಗಿಸುವ ನೀರನ್ನು ನನಗೆ ಮುಟ್ಟುವ ಹಕ್ಕಿಲ್ಲ.

ನಾನು ಮುಟ್ಟಿದ್ದರಿಂದ ನೀರು ಮಾಲಿನ್ಯವಾಗಿದೆ, ಎಂದರು. ಆದರೆ, ಅವರ  ಬೆದರಿಕೆಗೆ ನಾನು ಹೆದರಲಿಲ್ಲ. ಕೊಡದಲ್ಲಿ ಸಂಗ್ರಹಿಸಿದ ನೀರನ್ನು ಹಿಡಿದುಕೊಂಡು ನಡೆಯಲಾರಂಭಿಸಿದೆ. ಆಗ, ನನ್ನ ಮೇಲೆ ಕಲ್ಲಿನ ಮಳೆ ಸುರಿಯಲಾರಂಭಿಸಿತು. ಹಿಂದೆ ತಿರುಗಿ ನೋಡಿದರೆ ಒಬ್ಬ ವಯೋವೃದ್ಧ ಗುರುಗಳು. ಅವರೇನು  ಬ್ರಹ್ಮ ಜ್ಞಾನ ಸಾಧಿಸಿರಲು ಸಾಧ್ಯ? ನನ್ನ  ಕಾಲಿಗೆ ಬಡಿದ ಕಲ್ಲಿಂದ ದೊಡ್ಡ ಗಾಯವಾಗಿ ರಕ್ತ ಹರಿದು, ಅದು ಸರೋವರದ ನೀರಿನಲ್ಲಿ ಬೆರೆತುಹೋಯಿತು.  ಆಗ ಇನ್ನಷ್ಟು ಮಂದಿ ಬೊಬ್ಬೆಯಿಟ್ಟರು. ಇನ್ನು, ಈ ನೀರು ಶುದ್ದೀಕರಿಸಲಾಗದಷ್ಟು ಮಾಲಿನ್ಯವಾಗಿದೆ. ನಾವಿನ್ನು ಇದನ್ನು ಬಳಸಲು ಅಸಾಧ್ಯ, ಎಂದು ಮುಖ ಸಿಂಡರಿಸಿಕೊಂಡು, ನನ್ನತ್ತ ಬೆನ್ನು ತಿರುಗಿಸಿ ಶಾಪ ಹಾಕುತ್ತಾ ಜಾಗ  ಖಾಲಿ ಮಾಡಿದರು.   

ನಾನು ಆತಂಕದಲ್ಲೇ  ಆಶ್ರಮಕ್ಕೆ ವಾಪಸ್ಸಾದೆ. ನನ್ನಿಂದಾಗಿ ಗುರುಗಳು ಇನ್ನೊಮ್ಮೆ ಸ್ವಜಾತಿಯವರ ಆಕ್ರೋಶ ಎದುರಿಸಬೇಕಾಯಿತು. ಒಂದು ಕೆಳಜಾತಿಯ ಹೆಣ್ಣು ಮಗಳ ಕೋರಿಕೆಯನ್ನು ಈಡೇರಿಸಲು ಹೋಗಿ, ಗುರುಗಳು  ಜಾತಿಭ್ರಷ್ಠರಾದರು. ನಾನು ಬಂದವಳೇ, ಗುರುಗಳ ಕಾಲಿಗೆ ಎರಗಿ ಒಂದೇ ಉಸುರಲ್ಲಿ ಹೇಳಿದೆ:

"ಕ್ಷಮಿಸಿ ಗುರುಗಳೇ, ನಾನು ಪಂಪ ಸರೋವರಕ್ಕೆ ಕಾಲಿಡಬಾರದೆಂದು ತಿಳಿದಿರಲಿಲ್ಲ. ನನ್ನ ಸ್ಪರ್ಶದಿಂದ ನೀರು ಮಾಲಿನ್ಯವಾಗಿದೆಯಂತೆ. ಇನ್ನು ಮುಂದೆ ಬೇರೆ ಆಶ್ರಮದವರ್ಯಾರು ಅದನ್ನು ಉಪಯೋಗಿಸುವುದಿಲ್ಲವೆಂದು ಹೇಳುತ್ತಿದ್ದಾರೆ. ಅಯ್ಯೋ… ನನಗೆ ಭಯವಾಗುತ್ತಿದೆ. ನನ್ನಿಂದಾಗಿ ನೀವು  ಬಹಿಷ್ಕಾರಕ್ಕೆ ಒಳಗಾಗುತ್ತೀರಿ.  ನಾನು ಇಲ್ಲಿಂದ  ಹೋಗುತ್ತೇನೆ. ನೀವು ನನ್ನನ್ನು ಆಶ್ರಮಕ್ಕೆ ಸೇರಿಸಿಕೊಂಡಿದ್ದಕ್ಕೆ ಕೃತಜ್ಞತೆಗಳು.  ಆದರೆ, ನನ್ನಿಂದಾಗಿ ನೀವು ತೊಂದರೆಗೆ ಒಳಗಾಗಬಾರದು. "

ಮಾತಂಗ ಋಷಿಗಳು ಒಮ್ಮೆ ನನ್ನನ್ನೇ ದಿಟ್ಟಿಸಿ ನೋಡಿದರು.  ನನ್ನ ಕಾಲಿನಿಂದ ಇನ್ನೂ ರಕ್ತ ಒಸರುತ್ತಿದ್ದುದನ್ನು ನೋಡಿ, ಆತಂಕದಿಂದ ಕೇಳಿದರು:

 "ಮಗಳೇ, ಏನಿದು ರಕ್ತ ಸುರಿಯುತ್ತಿದೆಯಲ್ಲ?"

ನಾನು ಗುರುಗಳಲ್ಲಿ ನಡೆದ ವಿಷಯವನ್ನು ವಿವರವಾಗಿ ಹೇಳಿಕೊಂಡೆ. ತಕ್ಷಣ, ಅವರು ಮಾತಿನಲ್ಲಿ ಪ್ರತಿಕ್ರಿಯಿಸಲಿಲ್ಲ. ಬದಲಾಗಿ, ತನ್ನ ಶಲ್ಯದ ಒಂದು  ತುದಿಯನ್ನು ಹರಿದು ನನ್ನ ಕಾಲಿಗಾದ ಗಾಯಕ್ಕೆ ಕಟ್ಟಿದರು. 

ಒಂದು ಕ್ಷಣ ಸಾವರಿಸಿ ಹೇಳಿದರು, " ಮಗಳೇ,  ನೀನು ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಇಲ್ಲೇ ಇರು. ವಿದ್ಯೆ ಕಲಿಯಲು ಆಸಕ್ತಿ ತೋರುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಜಾತಿಯೆಂದರೇನು? ಎಲ್ಲಾ ಜಾತಿಯವರು ಒಂದೇ ಗಾಳಿಯನ್ನು ಉಸಿರಾಡುತ್ತಾರೆ. ಅಂದರೆ, ಗಾಳಿ,  ಉಸಿರಿನ ಮೂಲಕ ಬರಿ ಮನುಷ್ಯರು ಮಾತ್ರವಲ್ಲ, ಎಲ್ಲಾ ಜೀವಿಗಳು ಮತ್ತು ಹಸಿರು ಗಿಡ ಮರಗಳನ್ನು ಒಂದು ಮಾಡುತ್ತದೆ.  ಅಗ್ನಿ ಭೇದ ಭಾವವಿಲ್ಲದೆ ಎಲ್ಲರಿಗೂ ಬೆಳಕು ನೀಡುತ್ತದೆ ಮತ್ತು ಸುಡುತ್ತದೆ. ಮಳೆ, ಎಲ್ಲರ ಮೇಲೂ ಸಮಾನವಾಗಿ ಸುರಿಯುತ್ತದೆ. ನಾವೆಲ್ಲಾ, ಒಂದೇ  ನೆಲದ ಮೇಲೆ ನಡೆದಾಡುತ್ತೇವೆ. ನಮ್ಮನ್ನು ಸಲಹುವ ಪ್ರಕೃತಿಗೆ ಇಲ್ಲದ ಭೇದ ಭಾವ ನಮಗ್ಯಾಕೆ? ಈ ಭೂಮಿಯಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ, ಸಕಲ ಜೀವಿಗಳೂ ಸಮಾನರು. ಜಾತಿಯ ಹೆಸರಲ್ಲಿ ಕಿತ್ತಾಡುವವರು ಬ್ರಹ್ಮ ಜ್ಞಾನ ಸಾಧಿಸಲಾರರು. ಅಲ್ಪಮತಿಯರೊಂದಿಗೆ ನಮಗೇನು ಕೆಲಸ? ನೀನು ಇಲ್ಲಿದ್ದು ಕಲಿಯಬೇಕಾದುದರ ಕಡೆಗೆ ಗಮನಹರಿಸು."

 ಅಷ್ಟು ಹೇಳಿ ಗುರುಗಳು ನನಗೆ ಒಳ ಹೋಗಲು ಕೈಸನ್ನೆಯಲ್ಲೇ ಸೂಚಿಸಿದರು. ನಾನು ಮುಗಿದಿದ್ದ ಕೈಯನ್ನು ಹಾಗೆಯೆ ಹಿಡಿದುಕೊಂಡು ಮೌನವಾಗಿ ಒಳನಡೆದೆ. 

ಆಮೇಲೆ  ನಾನು ಹಿಂದಿರುಗಿ ನೋಡಿದ್ದಿಲ್ಲ. ಆಶ್ರಮದ ಎಲ್ಲಾ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ. ಕೆಲವು ಜಾತಿವಾದಿ ಶಿಷ್ಯಂದಿರು ಏನೇನೊ  ನೆಪ ಹೇಳಿ ಆಶ್ರಮ ಬಿಟ್ಟು ಹೋದರು. ಆದರೆ ನನಗೆ ಅಂದಾಜಾಗಿ ಹೋಗಿತ್ತು, ಅವರೆಲ್ಲಾ  ನನ್ನಿಂದಾಗಿ ಜಾಗ ಖಾಲಿ ಮಾಡಿದ್ದೆಂದು.  

ನಾನು ಕಳೆದ ನಲವತ್ತು ವರ್ಷಗಳಿಂದ ಕಾಯುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಪ್ರತಿದಿನ ಅತಿಥಿ ಸತ್ಕಾರಕ್ಕೆ ಆಯ್ದ ಹಣ್ಣುಗಳನ್ನು ಒಪ್ಪವಾಗಿ ಜೋಡಿಸಿಡುತ್ತಿದ್ದೇನೆ. ಆಮೇಲೆ ಸಂಜೆಯ ಹೊತ್ತಿಗೆ ನಾನೇ  ತಿಂದು ನೀರು ಕುಡಿಯುತ್ತಿದ್ದೇನೆ. ದಿನಾ ಕಾಯುತ್ತಾ ಕಾಯುತ್ತಾ, ದೃಷ್ಟಿ ಮಂಜಾಗಿದೆ, ಹಣೆಯಲ್ಲಿ ಮತ್ತು ಕಣ್ಣ ಸುತ್ತ ಸುಕ್ಕು ಆವರಿಸಿದೆ. ಮೊಣಕಾಲಲ್ಲಿ ಮತ್ತು ಬೆನ್ನ ಹುರಿಯಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದೆ.  ನಡೆದು ನಡೆದು ಪಾದಗಳು  ಬಿರುಕು ಬಿಟ್ಟಿವೆ. ಕೋಲಿನ ಸಹಾಯವಿಲ್ಲದೆ ಒಂದು ಹೆಜ್ಜೆ ಮುಂದಿಡಲು ಅಸಾಧ್ಯವಾಗಿದೆ. ಈ ಮಧ್ಯೆ, ಜನರ ನೇರ ಸಂಪರ್ಕವಿಲ್ಲದೇ ನಲ್ವತ್ತು ವರ್ಷಗಳಾದವು. ಹಾಗಂತ,  ನಾನೇನೂ ಜನವಸತಿ ಇಲ್ಲದ ದಟ್ಟ ಅರಣ್ಯದಲ್ಲಿ ವಾಸವಾಗಿಲ್ಲ. ಅಕ್ಕ ಪಕ್ಕದ ಆಶ್ರಮಗಳಲ್ಲಿ ಗುರುಕುಲಗಳಿವೆ. ಸಾಕಷ್ಟು ಜನರು ಓಡಾಡುವುದನ್ನು ನೋಡುತ್ತಿರುತ್ತೇನೆ.

ಅಲ್ಲಿ ಹೋಮ ಹವನಗಳು ನಡೆಯುತ್ತಿರುತ್ತವೆ. ಸಮಾರಾಧನೆಗಳ ಭೋಜನದ ಘಮಘಮ ವಾಸನೆ ಯಾವಾಗಲೂ  ಮೂಗನ್ನು ಅರಳಿಸುತ್ತಿರುತ್ತವೆ. ಅಲ್ಲಿ, ಉಳಿದ ಆಹಾರ ಪದಾರ್ಥಗಳನ್ನು ಹಸುಕರುಗಳಿಗೆ ಹಾಕುತ್ತಾರೆಯೇ ಹೊರತು, ಪಕ್ಕದಲ್ಲಿಯೇ ಇರುವ ಈ ಮುದುಕಿಗೆ ಒಂದಿಷ್ಟು ನೀಡಬಹುದಿತ್ತೇನೋ ಎಂದು ಯೋಚಿಸುವುದಿಲ್ಲ. ಹೋಗಲಿ ಬಿಡಿ. ನನಗೇನೂ ಅಂತಹ  ಅಭಿಲಾಷೆಗಳು ಉಳಿದಿಲ್ಲ. ಮಾತನಾಡಲು ಜನರೇ ಬೇಕೆಂದಿಲ್ಲ. ಪ್ರಾಣಿಪಕ್ಷಿಗಳು ಮಾತಿಗೆ ಸ್ಪಂದಿಸುತ್ತವೆ.  ಅಷ್ಟು ಸಾಕಲ್ಲವೇ? ನನಗೆ ಪ್ರಾಪಂಚಿಕ ಕಟ್ಟುಪಾಡುಗಳ ಹಂಗಿಲ್ಲದೆ ಹಲವಾರು ವರುಷಗಳಾದವು. ಒಂದಿಷ್ಟು ಜ್ಞಾನ ಸಂಪಾದನೆ ಮಾಡಬೇಕೆಂದು ಪರಿತಪಿಸುತ್ತಿದ್ದ ಕಾಲವೊಂದಿತ್ತು. ಅದು ಗುರುಗಳ ಸಾವಿನೊಂದಿಗೆ ಅಂತ್ಯವಾಯಿತು. ಅನಂತರ ನಾನೇನಾದರೂ ಅರಿತುಕೊಂಡಿದ್ದರೆ, ಅದು ಪ್ರಕೃತಿಯನ್ನು ಸೂಕ್ಶ್ಮವಾಗಿ ಗಮನಿಸುವುದರ ಮೂಲಕ. ಪ್ರಕೃತಿ ನನಗೆ ಸಾಕಷ್ಟು ಜೀವನಪಾಠವನ್ನು ಕಲಿಸಿದೆ. ಈ ಕಲಿಕೆ, ಮನುಷ್ಯ ಲೋಕದ ಶಿಕ್ಷಣಕ್ಕಿಂತ  ಶ್ರೇಷ್ಠವಾದುದ್ದು, ಎಂದು ನನಗೆ  ಇತ್ತೀಚೆಗೆ ಹೆಚ್ಚು ಸ್ಪಷ್ಟವಾಗುತ್ತಿದೆ.

ಗುಡಿಸಲ ಮುಂದಿನ ಮಣ್ಣಿನ ದಿಣ್ಣೆಯಲ್ಲಿ ಕುಳಿತವಳಿಗೆ, ಕಾಲುಗಳನ್ನು ಸುತ್ತು ಹಾಕುವ ಬೆಕ್ಕಿನ ಮರಿಯ ಹಿತವಾದ ಸ್ಪರ್ಶ ಮನಸ್ಸಿಗೆ ಮುದ ನೀಡಿತು. ಹಿಂತಿರುಗಿ, ಮುರಿದು ಹೋದ ಗುಡಿಸಲಿನತ್ತ ಒಮ್ಮೆ ದೃಷ್ಟಿ ಹಾಯಿಸಿದೆ. ಒಂದು ಕಾಲದಲ್ಲಿ, ಈ ಆಶ್ರಮ, ಜಾತಿ ಮತ್ತು ಲಿಂಗ ಸಮಾನತೆ ಕಾಯ್ದುಕೊಂಡಿತ್ತು. ದೇವತಾ ಸ್ವರೂಪರಾದ ಮಾತಂಗ ಋಷಿಗಳು ಇಲ್ಲಿ ವಾಸವಾಗಿದ್ದರು. ಆಗ, ಗುರುಗಳು, ಜನರ ಗೋತ್ರ, ಕುಟುಂಬ, ಮೂಲ, ಆರ್ಥಿಕ ಸ್ಥಿತಿಗತಿ ಇತ್ಯಾದಿಗಳ ವಿಚಾರಣೆ ಮಾಡದೇ, ಒಳಗೆ ಕರೆದು ಉಪಚರಿಸುತ್ತಿದ್ದರು. ಆದ್ದರಿಂದಲೇ, ನಾನಿಲ್ಲಿ ಬಂದು ನೆಲೆ ಕಾಣಲು  ಸಾಧ್ಯವಾಯಿತು.

ಕಳೆದ ಹಲವು ದಿನಗಳಿಂದ  ಒಂದೇ ಸಮನೆ ಆಲೋಚನೆ ಬರುತ್ತಿದೆ- ಅರೆ, ಇಲ್ಲಿ ನಾನೊಬ್ಬಳೇ ಉಳಿದುಕೊಂಡು  ಏನು ಮಾಡುತ್ತಿದ್ದೇನೆ?  ಹಗಲಿರುಳು ನಾನು ಕಾಯುತ್ತಿರುವುದು ಯಾರಿಗಾಗಿ? ಅಂದು, ಗುರುಗಳು ಯಾಕೆ ನನಗೆ ಈ ರೀತಿ ಕಾಯಲು ಹೇಳಿದರು? ಒಂದು ವೇಳೆ ಹಾಗೆ ಹೇಳಿಲ್ಲದಿದ್ದಲ್ಲಿ, ನಾನು ಇಷ್ಟು ವರ್ಷ ಬದುಕಿರುತ್ತಿದ್ದೇನೆಯೇ?   

ಅಲ್ಲ, ನಾನು ಇರುವ ಪರಿಸರವಾದರೂ ಎಂತಹದ್ದು? ನನ್ನ ಅಚಲ ವಿಶ್ವಾಸ ಮತ್ತು ಗುರುವಿನ ಮಾತು ಮೀರದೆ ಅದನ್ನು ನಮ್ರತೆಯಿಂದ ಪಾಲಿಸಬೇಕೆಂಬ ಇಚ್ಛೆಇಲ್ಲದಿದ್ದರೆ, ನನಗಿಲ್ಲಿಇಷ್ಟು ವರ್ಷ ಬದುಕಲು  ಆಗುತ್ತಿತ್ತೇ? ಅಂದು ನಾನು ಗುರುಗಳ ಮಾತನ್ನು ಪ್ರಶ್ನಿಸದೇ ಒಪ್ಪಿಕೊಂಡೆ. ಆದರೆ, ನಾನು ಅದರ ಕುರಿತು ಇನ್ನಷ್ಟು ವಿವರ, ಕಾಯುವ ಮಹತ್ವ ಅವರ ಬಾಯಿಂದಲೇ ಕೇಳಿ ತಿಳಿದುಕೊಳ್ಳಬೇಕಿತ್ತು, ಅನ್ನಿಸುತ್ತಿದೆ. ನಾನ್ಯಾಕೆ ಅಂದು ಕೇಳಲಿಲ್ಲ?... 

ನಲ್ವತ್ತು ವರ್ಷಗಳಿಂದ  ಒಬ್ಬ ವ್ಯಕ್ತಿಯ ಆಗಮನಕ್ಕಾಗಿ ಕಾಯುವುದೆಂದರೆ ಸಾಮಾನ್ಯವೇ? ಆ ವ್ಯಕ್ತಿ ಬಹಳ ಘನವಂತನೇ ಇರಬೇಕು. ಯಾರಿರಬಹುದು ಈ ರಾಮ? ನನ್ನ ಗುರು ಮಾತಂಗರಿಂದಲೂ ಶ್ರೇಷ್ಠನೇ? ಇದ್ದಿರಬಹುದು. ಇಲ್ಲದಿದ್ದಲ್ಲಿ, ಗುರುಗಳೇಕೆ ನನ್ನಲ್ಲಿ ರಾಮನ ಆಗಮನದವರೆಗೆ ಕಾದು, ಆ ನಂತರ ಬೇಕಿದ್ದರೆ ಪ್ರಾಣ ತ್ಯಾಗಮಾಡು ಅಂದರಲ್ಲ… “ರಾಮ ಈ ಹಾದಿಯಲ್ಲಿ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ. ಅವನನ್ನು ಭೇಟಿಯಾದ ನಂತರ, ನಿನ್ನ ಈ ಮನುಷ್ಯ ಜನ್ಮಕ್ಕೆ ಒಂದು ಅರ್ಥಪೂರ್ಣ ಅಂತ್ಯ.”  ಎಂದು ಹೇಳಿ ಕಣ್ಮುಚ್ಚಿ ಕೊಂಡರು. ನನ್ನಲ್ಲಿದ್ದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಕೊಂಡವು.

ಇತ್ತೀಚೆಗೆ, ನನಗೆ ಸಿಕ್ಕಿದ ದೂರದೂರಿನ ಒಬ್ಬ ವೇದಾಂತಿಗಳು  ಹೇಳಿದ ಮಾತೆಂದರೆ, “ಮನುಷ್ಯ ತನ್ನ ಕೊನೆಯ ಕ್ಷಣದವರೆಗೆ ಶುಭದಿನಗಳಿಗಾಗಿ ಕಾಯುತ್ತಿರುತ್ತಾನೆ. ಅದೊಂದೇ ಅವನನ್ನು ಮುನ್ನೆಡೆಸುವ ದಾರಿದೀಪ. ಕಾಯುವುದು ನಿಂತರೆ, ಉಸಿರು ನಿಂತಂತೆ. ಹಾಗಾಗಿ, ಕಾಯುವುದು ಅನಿವಾರ್ಯ.”  

ಹಾಗಿದ್ದರೆ, ರಾಮನ ಆಗಮನ ಒಂದು ನೆಪವೇ? ನಾನು ಸಾಯಬಾರದೆಂದು ಗುರುಗಳು ಹೀಗೆ ನನ್ನನ್ನು ತಮ್ಮ ಮಾತಿನಿಂದ ಬಂಧಿಸಿದರೆ? ಸಾವು ಮನುಷ್ಯನ ಜೀವನಕ್ಕೆ ಅನಿವಾರ್ಯವೆಂದರೆ, ಎಂದು ಸತ್ತರೂ ಒಂದೇ ಅಲ್ಲವೇ? ಅಂದು ಮತ್ತು ಇಂದಿಗೆ ಏನಾದರೂ ವ್ಯತ್ಯಾಸವಿದೆಯೇ? ಈ ಅವಧಿಯಲ್ಲಿ ನನ್ನಲ್ಲಿ ಸಾಕಷ್ಟು ಪ್ರಭುದ್ದತೆ, ಸ್ವಾವಲಂಬನೆ, ಸಮಾಜಮುಖಿ ಆಲೋಚನೆಗಳು ಹೆಚ್ಚಾಗಿರುವುದಂತೂ ಸತ್ಯ. ಇಂದು ನನ್ನೆದುರು ನಿಲ್ಲುವ ರಾಮನಿಗೆ ತನ್ನ ಕಾಲಘಟ್ಟ ಮೀರಿದ ಒಬ್ಬ  ಪ್ರಭುದ್ದ ಹೆಂಗಸಾಗಿ ನಾನು ಕಂಡರೆ ಆಶ್ಚರ್ಯವಿಲ್ಲ. ಒಂದು ಹಳ್ಳಿಗಾಡಿನ ಒಂಟಿ ಮುದುಕಿ ಇಷ್ಟೊಂದು ಧೈರ್ಯವಂತ ಸಬಲೆಯಾಗಿರಲು ಸಾಧ್ಯವೇ? ಎಂದು ರಾಮನಿಗೆ ಆಶ್ಚರ್ಯವಾಗಬಹುದು.

ಒಂದು ವೇಳೆ, ನಾನು ಬಹು ನಿರೀಕ್ಷೆಯಿಂದ ಕಾಯುತ್ತಿರುವ ರಾಮ ಬಂದು ಹೋದ ಮೇಲೆ ಸಾರ್ಥಕತೆಯ ಭಾವ ಮೂಡಿ, ಅನಂತರ ಬದುಕುವ ಆಸೆ ಇಂಗಿ ಹೋಗಬಹುದೇ? ನಾನು ಇಚ್ಚಾಶಕ್ತಿಯಿಂದ ಈ ಲೋಕ ತ್ಯಜಿಸಿ, ನಾನು ಇಲ್ಲಿಯವರೆಗೆ ಮಾಡಿರಬಹುದಾದ ಸತ್ಕಾರ್ಯಗಳ ಫಲದಿಂದ, ಈಗಾಗಲೇ ಸ್ವರ್ಗವಾಸಿಯಾಗಿರುವ ಗುರುಗಳನ್ನು ಭೇಟಿಯಾಗಬಹುದೇ? ನಾನೀಗ ಕಾಯುತ್ತಿರುವ ರಾಮನ ಭೇಟಿಗಿಂತ, ಅನಂತರ ನಾನು ಯಾವ ನಿರ್ಧಾರ ತೆಗೆದುಕೊಳ್ಳಬಹುದು, ಎನ್ನುವ ಕುತೂಹಲ  ಹೆಚ್ಚು ಕಾಡತೊಡಗಿತು. 

ಅಂತೂ, ಒಂದು ದಿನ ರಾಮ ಬಂದ. ಅದು ನನಗೆ ಹೇಗೆ ಗೊತ್ತಾಯಿತೆಂದರೆ, ಅಂದು ಪಂಪ ಸರೋವರದ ದಡದಲ್ಲಿ ಸಾಕಷ್ಟು ಆಶ್ರಮವಾಸಿಗಳು ಒಟ್ಟು ಸೇರಿದ್ದರು. ಅವರ ಮಾತಿನ ಸದ್ದು ನನ್ನ   ಗುಡಿಸಲವರೆಗೂ ಕೇಳಿಸುತ್ತಿತ್ತು.  ನಾನು ಕೂಡ ಕುತೂಹಲ ತಡೆಯಲಾರದೆ ದಡದ ಹತ್ತಿರ ಹೋಗಿ, ಜನರಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಿದೆ. ಅಲ್ಲಿ, ಇಬ್ಬರು ಯುವಕರನ್ನು ನೋಡಿದೆ. ಅವರು ಅಣ್ಣ ತಮ್ಮನಂತೆ ಕಾಣುತ್ತಿದ್ದಾರೆ. ಬಹುಶಃ, ಅವರೇ ರಾಮ ಲಕ್ಷ್ಮಣರಿರಬೇಕು. ನನ್ನ ಜೀವನದಲ್ಲೆಂದೂ ಇಷ್ಟೊಂದು ಜನಜಂಗುಳಿ ನೋಡಿರಲಿಲ್ಲ. ಜನರೆಲ್ಲಾ ಅವರನ್ನು ಸುತ್ತುವರಿದಿದ್ದರು ಮತ್ತು  ನಾಮುಂದು ತಾಮುಂದು ಎಂಬಂತೆ ರಾಮಲಕ್ಷ್ಮಣರನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಲು ಪೈಪೋಟಿ ಮಾಡುತ್ತಿದ್ದರು. ಈ ಮಧ್ಯೆ, ಒಬ್ಬ ಹಿರಿಯರು, ರಾಮನಲ್ಲಿ ಕೇಳಿಕೊಂಡರು:

"ರಾಮ, ನೀನು ಇಲ್ಲಿಗೆ ಕಾಲಿಟ್ಟಿರುವುದರಿಂದ ನಮ್ಮ ಈ ಕ್ಷೇತ್ರ  ಪವಿತ್ರವಾಯಿತು. ಈಗ, ನೀನು ಇನ್ನೊಂದು ಉಪಕಾರ ಮಾಡಬೇಕು. ಈ ಪಂಪಾಸರೋವರದ ನೀರು ಅಪವಿತ್ರವಾಗಿರುವುದರಿಂದ, ನಾವು ಅದನ್ನು ಹಲವಾರು ವರ್ಷಗಳಿಂದ ಉಪಯೋಗಿಸುತ್ತಿಲ್ಲ. ನಿನ್ನ ಸ್ಪರ್ಶದಿಂದ ಈ ನೀರು ಶುದ್ದೀಕರಣಗೊಂಡು ಬಳಸಲು ಯೋಗ್ಯವಾಗಬಹುದು. ದಯವಿಟ್ಟು, ನಿನ್ನ ಕೈಗಳಿಂದ ಅದನ್ನೊಮ್ಮೆ ಸ್ಪರ್ಶಿಸು." 

ರಾಮ ತಕ್ಷಣ ಕೇಳಿದ:

"ಈ ನೀರನ್ನು ಅಪವಿತ್ರ ಮಾಡಿದವರು ಯಾರು?”

ನನ್ನ ಹತ್ತಿರ ನಿಂತಿದ್ದ ಕೆಲವರು ನನ್ನತ್ತ ಕೆಕ್ಕರಿಸಿ ನೋಡಿದರು. ನನಗೆ ಇರುಸು ಮುರುಸಾಯಿತು. ಅಯ್ಯೋ, ಈ ಹಳೆಯ ಕಥೆಯನ್ನು ಇನ್ನೂ ಮರೆತಿಲ್ಲವಲ್ಲ  ಜನರು, ಎಂದೆನಿಸಿತು. 

ಅದಕ್ಕೆ, ಆ  ಹಿರಿಯರು ನನ್ನ ಜೋಪಡಿಯತ್ತ ಕೈತೋರಿಸಿ ಉತ್ತರಿಸಿದರು. "ಅಲ್ಲಿ ಒಂದು ಆಶ್ರಮವಿದೆ. ಬಹಳ ಹಿಂದೆ ಅಲ್ಲಿದ್ದ ಮಾತಂಗ ಋಷಿಗಳು, ಒಬ್ಬ ಕೆಳಜಾತಿಯ ಬುಡಕಟ್ಟು ಹೆಣ್ಣು ಮಗಳಿಗೆ ಪ್ರವೇಶ ನೀಡಿದರು. ಅವಳು ಈ ನೀರನ್ನು   ಮುಟ್ಟಿ ಅಪವಿತ್ರಗೊಳಿಸಿದಳು.”

ರಾಮ ಕೇಳಿದ: "ಅವಳ ಹೆಸರೇನು?"

ಆ ಹಿರಿಯರು ಗಲಿಬಿಲಿಗೊಂಡು, ಪಕ್ಕದಲ್ಲಿದ್ದ ಇನ್ನೊಬ್ಬರಲ್ಲಿ ಕೇಳಿ ತಿಳಿದುಕೊಂಡು, "ಶಬರಿ" ಎಂದರು. ರಾಮನ ಮುಖದಲ್ಲಿ ಮಂದಹಾಸ ಮೂಡಿತು. ಅವನು ತನ್ನ ತಮ್ಮನತ್ತ ಒಮ್ಮೆ ನೋಡಿ ಹೇಳಿದ:

 "ನಾವು ಅವಳನ್ನು ಬೇಟಿಯಾಗಲೆಂದೇ ಇಲ್ಲಿಯವರೆಗೆ ಬಂದಿದ್ದು. ಅವಳು ಇಲ್ಲಿ ಇರುವುದು ಬಹಳ ಸಂತೋಷ. ಅವಳ ಆಶ್ರಮದ ದಾರಿ ತೋರಿಸಿ."  

ಆ ಹಿರಿಯರು ಪುನಃ ಕೇಳಿದರು: "ಮತ್ತೆ, ನೀರು?..."

ರಾಮ ನಗುತ್ತಾ ಉತ್ತರಿಸಿದ:

"ಅವಳು ಸಾಧ್ವಿ. ಅವಳ ಸ್ಪರ್ಶದಿಂದ ನೀರು ಪಾವನವಾಗುತ್ತದೆಯೇ ಹೊರತು, ಅಪವಿತ್ರವಾಗುವುದಿಲ್ಲ."

 ಅವರೆಲ್ಲಾ ನಿರಾಶೆಗೊಂಡರು. ನಾನು ಗಡಿಬಿಡಿಯಲ್ಲಿ ನನ್ನ ಗುಡಿಸಲಿನತ್ತ ಧಾವಿಸಿದೆ. ಏದುಸಿರು ಬಿಡುತ್ತಾ ಸೀದಾ ಒಳಗೆ ಓಡಿ, ಸತ್ಕಾರಕ್ಕೆ ಏನಿದೆಯೆಂದು ನೋಡಿದೆ. ಸಂಜೆ ತಿನ್ನಲು ತಂದಿಟ್ಟಿದ್ದ ಕೆಲವು ಜಂಬು ನೇರಳೆ ಹಣ್ಣುಗಳಿದ್ದವು. ಈಗ ಹಣ್ಣುಗಳು ಧಾರಾಳವಾಗಿ ಸಿಗದ ಚಳಿಗಾಲವಾದ್ದರಿಂದ, ಅಲ್ಲಿದ್ದ ಹಣ್ಣುಗಳ ಗುಣಮಟ್ಟವೇನೂ ಚೆನ್ನಾಗಿರಲಿಲ್ಲ. ಆದರೆ, ಕಾಡಲ್ಲಿ ಏನಾದರೂ ಸಿಗಬಹುದೇ ಎಂದು ಹುಡುಕಿ ತರಲು ಸಮಯವಿರಲಿಲ್ಲ. ಅವರು ಹಿಂದೆಯೇ ಬರುತ್ತಿರಬಹುದು. ಮೂಲೆಯಲ್ಲಿ ಸುತ್ತಿ ಇಟ್ಟಿದ್ದ ಹರಿದ ಚಾಪೆಯನ್ನೇ ತಂದು, ಹೊರಗೆ ಜಗುಲಿಯಲ್ಲಿ ಹಾಸಿದೆ. ಅಷ್ಟರಲ್ಲಿ ನಿರೀಕ್ಷೆಯಂತೆ ಅವರು ನನ್ನ ಮುಂದೆ ಮುಗುಳುನಗುತ್ತಾ ನಿಂತಿದ್ದರು. ನಾನು ಕಾಲುತೊಳೆಯಲು ನೀರು ಕೊಟ್ಟೆ. ಅವರು ಕಾಲು ತೊಳೆದುಕೊಂಡು ಬಂದು ನಾನು ಹಾಸಿದ್ದ ಚಾಪೆಯ ಮೇಲೆ ಕುಳಿತರು. ನೋಡಿದರೆ ವಿಪರೀತ ದಣಿವಾದಂತೆ ಕಂಡರು. ಕುಡಿಯಲು ನೀರು ಕೊಟ್ಟೆ. ಒಂದು ತಟ್ಟೆಯಲ್ಲಿ, ನಾನು ತೆಗೆದಿಟ್ಟಿದ್ದ ಹಣ್ಣುಗಳನ್ನು ಜೋಡಿಸಿಟ್ಟು ಅವರ ಮುಂದಿಟ್ಟೆ. 

ರಾಮನ ಮುಖ ಅರಳಿತು. ನನ್ನತ್ತ ನೋಡಿ ಹೇಳಿದ:

"ವಾಹ್! ಜಂಬು ನೇರಳೆ ಹಣ್ಣು. ನನಗೆ ಬಹಳ ಇಷ್ಟ." 

ನಾನು ಸಂತೋಷದಿಂದ ಉತ್ತರಿಸಿದೆ:

"ನನ್ನ ಗುರು ಮಾತಂಗ ಋಷಿಗಳಿಗೂ ಬಹಳ ಇಷ್ಟವಾಗಿತ್ತು. ಅವರ ನೆನಪಿನಲ್ಲಿ ಜಂಬು ನೇರಳೆ ಗಿಡಗಳನ್ನು ಬೆಳೆಸಿದೆ. ನಿನಗೂ ಇಷ್ಟವಾಗಿದ್ದು ಸಂತೋಷ. ಆದರೆ, ರುಚಿ ಹೇಗಿದೆಯೋ ಗೊತ್ತಿಲ್ಲ. ಈಗ ಈ ಹಣ್ಣು ಬಿಡುವ ಋತು ಅಲ್ಲ. ಆದ್ದರಿಂದ, ಹೇಗಿದೆಯೆಂದು ಪರೀಕ್ಷಿಸಿ ಕೊಡುತ್ತೇನೆ. ದಯವಿಟ್ಟು,  ಕ್ಷಮೆಯಿರಲಿ."

ನಾನು ಅವರ ಉತ್ತರಕ್ಕೆ ಕಾಯದೇ ಆತುರದಲ್ಲಿ, ಒಂದೊಂದೇ ಹಣ್ಣುಗಳನ್ನು ಕೈಗೆತ್ತಿಕೊಂಡು ತುದಿಯಲ್ಲಿ ಕಚ್ಚಿ ರುಚಿಯಾಗಿದೆಯೇ ಎಂದು ಪರೀಕ್ಷಿಸಿ ಅವರ ಮುಂದಿಡುತ್ತಾ ಬಂದೆ. ನನಗೆ ಶಿಷ್ಟಾಚಾರಕ್ಕಿಂತ ನಾನು ಕೊಡುವ ಹಣ್ಣು ಚೆನ್ನಾಗಿರಬೇಕು ಎನ್ನುವುದು  ಮುಖ್ಯವಾಗಿತ್ತು. ಹಾಗಾಗಿ, ಅವರೆದುರು ಕಚ್ಚಿ ನೋಡಲು ಹಿಂಜರಿಯಲಿಲ್ಲ. ರಾಮ ಏನೂ ಅಪಾರ್ಥಮಾಡಿಕೊಳ್ಳದೆ ಅವುಗಳನ್ನು ಸ್ವೀಕರಿಸಿ ಆಸ್ವಾದಿಸಿದ. ಅವನ ತಮ್ಮನಿಗೆ ಮಾತ್ರ ನನ್ನ  ಸತ್ಕಾರ ಇಷ್ಟವಾದಂತೆ ಕಾಣಲಿಲ್ಲ. ತಿನ್ನಲು ಹಿಂದೆ ಮುಂದೆ ನೋಡಿದ. ಅಣ್ಣನ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ಅದಕ್ಕೆ ಉತ್ತರವಾಗಿ ರಾಮ ಸುಮ್ಮನೆ ನಕ್ಕನಷ್ಟೇ. ಏನೂ ಹೇಳಲಿಲ್ಲ. ನನ್ನ ಸತ್ಕಾರಕ್ಕೆ ರಾಮ ಕೈಜೋಡಿಸಿ ವಂದನೆ ಅರ್ಪಿಸಿದ. ಲಕ್ಷ್ಮಣನೂ ಅಣ್ಣನನ್ನು ಅನುಸರಿಸಿದ. ನಾನು ಅವರ ಪಯಣದ ಉದ್ದೇಶವನ್ನು ಕೇಳಿದೆ. ರಾಮ, ತನ್ನ ಹೆಂಡತಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದಾನೆ, ಅವರನ್ನು ಹುಡುಕುತ್ತಾ ಇಲ್ಲಿಯವರೆಗೆ ಬಂದಿರುವುದಾಗಿ ಹೇಳಿದ.  ಇನ್ನು ಪಯಣ ಮುಂದುವರಿಸಬೇಕಾಗಿದೆ, ಎಂದು ಹೇಳಿ ಎದ್ದು ನಿಂತ. ನಾನು ರಾಮನಲ್ಲಿ, ನಿಮಗೆ ಜನರ ಸಹಾಯ ಬೇಕಾಗಬಹುದು,  ಹತ್ತಿರದ ಕಿಷ್ಕಿಂದೆಯ  ರಾಜ ಸುಗ್ರೀವ ಮತ್ತು ಅವನ ಆಪ್ತರಕ್ಷಕ ಹುನುಮಂತನ ಸಹಾಯ ಪಡೆಯುವುದು ಸೂಕ್ತವೆಂದು, ಅವರಿರುವ ಜಾಗದ ಕುರಿತು ವಿವರಣೆ ಕೊಟ್ಟು, ಅಲ್ಲಿಗೆ ಹೋಗಲು ದಾರಿ ತೋರಿಸಿದೆ. ಅವರು ನನಗೆ ಪುನಃ ನಮಸ್ಕರಿಸಿ  ಹೊರಟು  ನಿಂತರು. 

 ರಾಮಲಕ್ಷ್ಮಣರು ಹೋದ ನಂತರ ನಾನು, ಸುಮಾರು ಹೊತ್ತು ಹಾಗೆಯೇ ಸುಮ್ಮನೆ ಕುಳಿತಿದ್ದೆ. ಇಂದಿಗೆ ನನ್ನ ಜೀವನ ಮುಕ್ತಾಯವೆನ್ನಬಹುದೇ? ಇನ್ನೇನೂ ಮಾಡಲಿಕ್ಕಿಲ್ಲವೇ? ಯಾಕೋ ಗುರುಗಳ  ನೆನಪು ಕಾಡತೊಡಗಿತು. ಅವರಿಗೆ ಕೊಟ್ಟ ಮಾತು ಇಂದು ತೀರಿತು. ಇನ್ನು ನಾನು ಬದುಕನ್ನು ಮುಂದುವರಿಸಬೇಕೇ ಅಥವಾ ಇಹಲೋಕ ತ್ಯಜಿಸಬೇಕೇ? ಒಂದು ದೀರ್ಘ ಕಾಲದ ಗುರಿ ಸಾಧಿಸಿದ ಮತ್ತು ಅದರಿಂದ ಮನಸ್ಸಿಗೆ ತೃಪ್ತಿ ಸಿಕ್ಕ ಅನುಭವ. 

ಆಂತರ್ಯದ ಧ್ವನಿ, ಇನ್ನು ಯಾವುದಾದರೂ ಹೊಸ ಗುರಿ ಇಟ್ಟುಕೊಂಡು, ತೆರೆದ ಮನಸ್ಸು ಮತ್ತು ಹೃದಯದೊಂದಿಗೆ ಸದಾ ವರ್ತಮಾನದಲ್ಲಿ ಬದುಕಬೇಕೆಂದು ಪಿಸುಗುಟ್ಟಿತು. ಅರಿವಿಲ್ಲದೆ ಮುಖದಲ್ಲಿ ಮಂದಹಾಸ ಮೂಡಿತು. ಒಂದು ಕಾಲದಲ್ಲಿ, ಮನಸ್ಸು ದುರ್ಬಲವಾಗಿದ್ದಾಗ ತನ್ನ ಹಿತನುಡಿಯಿಂದ ಬದುಕಲು ಪ್ರೇರಣೆ ನೀಡಿದ  ಗುರುಗಳಿಗೆ  ಮನಸ್ಸಿನಲ್ಲಿಯೇ ಒಂದು ಕೃತಜ್ಞತೆ ಹೇಳಿದೆ. ಇಂದು ರಾಮ, ನನ್ನನ್ನು ಬಹಳ ಗೌರವದಿಂದ  ನಡೆಸಿಕೊಂಡ. ನನಗಾಗಿ ಮೇಲ್ಜಾತಿಯವರನ್ನು ನಿರ್ಲಕ್ಷಿಸಿ, ನನ್ನ ಆತಿಥ್ಯ ಸ್ವೀಕರಿಸಿದ. ಅವನ ಈ ನೆಡೆ, ನನ್ನನ್ನು  ಇಲ್ಲಿಯವರೆಗೆ ಕೆಟ್ಟದಾಗಿ  ನಡೆಸಿಕೊಂಡ ಸ್ಥಳೀಯ ಮೇಲ್ಜಾತಿಯವರನ್ನು ಮನಸ್ಸಿನಲ್ಲಿಯೇ ಕ್ಷಮಿಸುವ ಔದಾರ್ಯವನ್ನು, ನನ್ನೊಳಗೆ ಮೂಡಿಸಿತು. ಒಮ್ಮೆ ಯೋಚಿಸಿದರೆ, ಬದುಕು ವಿಸ್ಮಯವೆನಿಸುತ್ತದೆ- ನಾನೆಲ್ಲೋ ಹುಟ್ಟಿದೆ. ಅಲ್ಲಿನ ಜೀವನಕ್ಕೆ ಹೊಂದಾಣಿಕೆಯಾಗದೆ ಊರೂರು ಅಲೆದು ಇಲ್ಲಿ ಬಂದು ನೆಲೆ ಕಂಡುಕೊಂಡೆ. ಇಲ್ಲಿ ಬೇರು ಬಿಟ್ಟು ನೆಮ್ಮದಿ ಕಂಡುಕೊಳ್ಳುವ ಹೊತ್ತಿಗೆ ಗುರುಗಳ ಅನಿವಾರ್ಯ ಅಗಲಿಕೆಯಾಯಿತು.  ಬಹುಶಃ, ಗುರುಗಳಿಗೆ ಅರ್ಥವಾಗಿರಬೇಕು- ಇವಳಿಗೆ ಒಂದು ದೀರ್ಘ ಕಾಲದ ಗುರಿಯಿರದಿದ್ದರೆ, ಕಳೆದು ಹೋಗುತ್ತಾಳೆ. ಹಾಗಾಗಿ, ನನಗೆ ಕಾಯಲು ಹೇಳಿರಬೇಕು. 

ಆದ್ದರಿಂದ, ನನಗೆ ಈಗ ಅರ್ಥವಾಗುತ್ತಿರುವುದು ಇಷ್ಟೇ. ರಾಮ ಇಲ್ಲಿ ಬರಿ ನೆಪ ಮಾತ್ರ. ಜೀವನದ ಅನಿಶ್ಚತತೆ, ಏಳು ಬೀಳುಗಳ ನಡುವೆ ದಡ ಸೇರುವವರೆಗೆ ನಾವು ಈಸುತ್ತಲೇ ಇರಬೇಕು. ಈ ಬದುಕಿನ ಪಯಣದ ಅನುಭವಗಳನ್ನು ಪ್ರತಿ ಕ್ಷಣವೂ ಮನಸಾರೆ ಆಸ್ವಾದಿಸಬೇಕು. ರಾಮನ ಆಗಮನದ ಖುಷಿಯನ್ನು, ಮತ್ತು  ಮೇಲ್ಜಾತಿಯವರ ತಿರಸ್ಕಾರದ ನೋವನ್ನು, ಒಂದೇ ತಕ್ಕಡಿಯಲ್ಲಿ ತೂಗುವ ವಿಕಸಿತ ಪ್ರಜ್ಞೆ ಬೆಳೆಸಿಕೊಳ್ಳುದನ್ನು ಕಲಿತವಳಷ್ಟೆ ಇತಿಹಾಸ ಸೃಷ್ಟಿಸಬಹುದು, ಎಂದು ಗೊತ್ತಾಗಿದೆ. 

ಯೋಚಿಸುತ್ತಾ ಕುಳಿತವಳಿಗೆ ಕತ್ತಲಾಗುತ್ತ ಬಂದುದು ಗೊತ್ತಾಗಲಿಲ್ಲ. ಎದ್ದು ಗುಡಿಸಲ ಒಳಗೆ ಹೋಗಿ  ದೀಪ ಹಚ್ಚಬೇಕು. ಹಸಿದ ಹೊಟ್ಟೆಗೆ ಒಂದಿಷ್ಟು ಹಣ್ಣುಗಳನ್ನು ನೀಡಬೇಕು. ಆನಂತರ,  ಮಲಗುವ ಸಿದ್ಧತೆ ಮಾಡಿ, ದಿನದ ಘಟನಾವಳಿಗಳನೊಮ್ಮೆ ಮರುಕಳಿಸುತ್ತಾ ನಿದ್ರೆ ಮಾಡಿ ನಾಳೆ ಮತ್ತೆ ಏಳಲೇಬೇಕು. ಇಂದು ರಾಮ ಬಂದ ಮತ್ತು ಹೋದ. ನಾಳಿನ ಸೂರ್ಯ ಇನ್ಯಾರನ್ನು/ಏನನ್ನು  ತರುವನೋ, ಕಾದು ನೋಡಬೇಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT