ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ

ಕೆ.ಕೆ. ಗಂಗಾಧರನ್
Published : 24 ಆಗಸ್ಟ್ 2024, 22:30 IST
Last Updated : 24 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments
ಮೂಲ ತಮಿಳು: ವರಲೊಟ್ಟಿ ರೆಂಗಸ್ವಾಮಿ

"ಸರ್ ನಮಸ್ಕಾರ... ನನ್ನ ಹೆಸರು ಕುಮಾರ್... ನಾನು ನಿಮ್ಮ ಮಗಳು ಪ್ರಿಯಾಳನ್ನು...."
"ಓ.. ನೀನಾ ಅದು... ಬಾಪ್ಪ ಕೂತ್ಕೊ.."
ತನ್ನ ಪ್ರಿಯತಮೆಯ ತಂದೆ, ಕೂಗಾಡಬಹುದೆಂದು ಅವನೂ ಪ್ರತಿಯಾಗಿ ಕೂಗಾಡಲು ತಯರಾಗಿಯೇ ಬಂದಿದ್ದ. ಆದರೆ ಕುಮಾರ್‌ನನ್ನು ರಾಮಲಿಂಗಂ ಪ್ರೀತಿಯಿಂದಲೇ ಸ್ವಾಗತಿಸಿದರು. ಅದು ಅವನಲ್ಲಿ ಕೊಂಚ ಗಲಿಬಿಲಿಗೆ ಕಾರಣವಾಯಿತು. ಆದರೂ ಅವನು ಭಯದಿಂದಲೇ ಕುರ್ಚಿಯ ತುದಿಯಲ್ಲಿ ಕುಳಿತುಕೊಂಡ.
"ಏನಪ್ಪ ಮದುವೆಯ ಮಾತುಕತೆ ಪ್ರಾರಂಭಿಸಬಹುದಾ?"
"..........."
"ನನ್ನ ಮಗಳನ್ನು ಮದುವೆಯಾಗಲು ಕೇಳ್ಕೊಂಡು ತಾನೆ ನೀನು ಬಂದಿರೋದು.. ಅದರ ಬಗ್ಗೆ ಮಾತನಾಡೋಣ ಅಂತ ಹೇಳ್ದೆ.."
"..........."
"ಮಿಸ್ಟರ್ ಕುಮಾರ್ ನೀನು... ಐ ಆಂ ಸಾರಿ.. ನೀವು ಏನು ಕೆಲಸ ಮಾಡ್ಕೊಂಡಿದ್ದೀರಿ.. ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಇದ್ದೀರಿ.. ಎಲ್ಲಿ ನಿಮ್ಮ ವಾಸ.. ಕುಟುಂಬದ ಆಸ್ತಿ ಎಷ್ಟಿದೆ..? ಎಲ್ಲವನ್ನೂ ಸ್ವಲ್ಪ ವಿವರವಾಗಿ ಹೇಳಿ.."
"ಸರ್ ಅವೆಲ್ಲ ಪ್ರಿಯಾಳಿಗೆ ಗೊತ್ತಿರುವ ವಿಚಾರವೇ..."
"ಎಲ್ಲವೂ ಹೇಳಿದ್ದಾಳೆ.. ಆದರೆ ಅದನ್ನು ನಿಮ್ಮ ಬಾಯಿಯಿಂದಲೇ ಕೇಳಿಸ್ಕೊಂಡರೆ... ಮುಂದೆ ಮಾತನಾಡಲಿಕ್ಕೆ ಅನುಕೂಲವಾಗತ್ತೆ.."
ಸ್ವಲ್ಪ ಹೊತ್ತು ಕುಮಾರ್‌ಗೆ ಏನು ಹೇಳಬೇಕೆಂದೇ ತೋಚಲಿಲ್ಲ.
ನಗರದ ದೊಡ್ಡ ಉದ್ಯಮಿಗಳಲ್ಲಿ ಒಬ್ಬರು ರಾಮಲಿಂಗಂ. ಕುಮಾರ್ ಒಬ್ಬ ಕಾರು ಮೆಕ್ಯಾನಿಕ್. ರಾಮಲಿಂಗಂಗೆ ಒಬ್ಬಳೇ ಮಗಳು. ಹೆಸರು ಪ್ರಿಯಾ. ತನ್ನ ಮಾರುತಿ ಕಾರನ್ನು ಕುಮಾರ್ ಕೆಲಸ ಮಾಡುವ ವರ್ಕ್ ಶಾಪ್‌ಗೆ ಒಮ್ಮೆ ತೆಗೆದುಕೊಂಡು ಹೋದಾಗ ಅನಿರೀಕ್ಷಿತವಾಗಿ ಪ್ರೇಮಾಂಕುರವಾಯಿತು.
"ಸರ್ ನಾನು ಬೈಪಾಸ್ ರಸ್ತೆಲ್ಲಿರುವ ಕಣ್ಣಾ ಮೋಟಾರ್ಸ್‌ನಲ್ಲಿ ಮೆಕ್ಯಾನಿಕ್ಕಾಗಿದ್ದೇನೆ. ನನಗೆ ಐದು ವರ್ಷ ಸರ್ವೀಸ್ ಆಗಿದೆ. ಆದರೂ ಒಂದು ಗಂಟೆಯಲ್ಲಿ ಯಾವ ಕಾರನ್ನಾದರೂ ಪಾರ್ಟ್ ಬೈ ಪಾರ್ಟ್ ಕಳಚಿ ಮತ್ತೆ ಜೋಡಿಸಬಲ್ಲೆ. ಇಂಜಿನ್ ಸದ್ದು ಕೇಳಿದ ಕೂಡಲೇ ಅದರ ದೋಷವನ್ನು ಹೇಳಬಲ್ಲೆ. ಎಲ್ಲಾ ಕಳೆದು ನಾಲ್ಕು ಸಾವಿರ ರೂಪಾಯಿ ತಿಂಗಳಿಗೆ ಸಿಗುತ್ತದೆ. ನಾನು ಪಿಯುಸಿ ತನಕ ಓದಿದ್ದೇನೆ. ಇಪ್ಪತ್ಮೂರು ವರ್ಷದಿಂದ ಮನೆಯಲ್ಲಿ ನಾನು, ನನ್ನ ತಂದೆ, ತಾಯಿ, ಒಬ್ಬಳೇ ತಂಗಿ ಇದ್ದಾಳೆ. ತಂಗಿಗೆ ಗಂಡು ನೋಡ್ತಾ ಇದ್ದೀವಿ. ಅಪ್ಪ ತಹಸಿಲ್ದಾರ್ ಆಫೀಸ್‌ನಲ್ಲಿ ಪ್ಯೂನ್. ಈಗ ರಿಟೈರ್ಡ್ ಆಗಿದ್ದಾರೆ. ಪೆನ್ಷನ್ ಬರುತ್ತದೆ. ನಾವೀಗ ಚೋಕ ನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದೇವೆ. ಅದು ಸುಮಾರು ಐದು ನೂರು ಚದರ ಅಡಿ ಇದೆ.. ಇಷ್ಟು ಸಾಕಲ್ವಾ ಸರ್.. ಅಥವಾ ಇನ್ನೇನಾದರೂ..."

"ಇಲ್ಲಿ ನೋಡಪ್ಪ.. ಇಷ್ಟೆಲ್ಲ ಕೇಳಿದ ಮೇಲೆ, ಸಿನಿಮಾದಲ್ಲಿ ಹೇಳುವ ಡೈಲಾಗೇ ನಾನು ಹೇಳಬಹುದು. ನೀವು ಐನೂರು ಚದುರ ಅಡಿ ವಿಸ್ತೀರ್ಣವಿರುವ ಮನೆಯಲ್ಲಿ ಬಾಳಲು ಪಳಗಿದ್ದೀರಿ. ನನ್ನ ಮಗಳ ಬಾತ್ರೂಮ್ ಅದಕ್ಕಿಂತಲೂ ದೊಡ್ಡದಿದೆ. ನಿಮ್ಮ ಕುಟುಂಬದ ತಿಂಗಳ ವರಮಾನಕ್ಕಿಂತಲೂ ಹೆಚ್ಚು ನನ್ನ ಮಗಳ ಪೆಟ್ರೋಲ್ ಖರ್ಚು. ಅವಳನ್ಮು ಪ್ರೀತಿಸುವುದಕ್ಕಾಗಿ ಎಷ್ಟು ಹಣ ಬೇಕು ಕೇಳಿ.. ಕೊಡ್ತಿನಿ. ಅಂದರೆ ಅವಳನ್ನು ಬಿಟ್ಟುಬಿಡಿ ಅಂತ ನಾನು ಹೇಳ್ತಾ ಇಲ್ಲ. ಏಕೆ ಗೊತ್ತಾ... ನಾನೂ ನಿಮ್ಮ ವಯಸ್ಸಿನಲ್ಲಿ ತುಂಬಾ ಕಷ್ಟಪಟ್ಟಿರುವೆ. ಈಗ ನೀವು ತಕ್ಷಣ ಮದುವೆಯಾದರೆ, ಸರಿಯಾಗಿ ಮೂವತ್ತನೇ ದಿನ ನನ್ನ ಮಗಳು ನಿಮ್ಮ ಮನೆಯ ಅನುಕೂಲ ಸಾಲದೆಂದು ನನ್ನ ಮನೆಗೆ ಹಿಂತಿರುಗುತ್ತಾಳೆ. ಮನೆ ಅಳಿಯನಾಗಿ ಇರಲು ನೀವು ಒಪ್ಪಲಾರಿರಿ ಎಂದು ನಿಮ್ಮನ್ನು ನೋಡಿದರೆ ತಿಳಿಯುತ್ತದೆ. ಆದ್ದರಿಂದ ನನ್ನದೊಂದು ಕಂಡಿಷನ್ ಹೇಳ್ತಿನಿ, ಕೇಳ್ತಿರಾ..?"

"ಹೇಳಿ ಸರ್..."
"ನಾನು ನಿಮ್ಮ ಪ್ರೀತಿಯನ್ನು ಮುಕ್ತವಾಗಿ ಒಪ್ಪುತ್ತೇನೆ. ಆದರೆ, ಅದೇ ವೇಳೆಗೆ ನನ್ನ ಮಗಳು ಕಷ್ಟವಿಲ್ಲದೆ ಬಾಳಬೇಕೆಂಬುದು ತಂದೆಯಾಗಿ ನನ್ನ ಬಯಕೆ. ನಿಮಗೀಗ 23 ವರ್ಷ ವಯಸ್ಸು. ಅವಳಿಗೆ 20 ವರ್ಷ ವಯಸ್ಸು. ಅದ್ದರಿಂದ ನಿಮ್ಮ ಮದುವೆ ಇನ್ನೂ ಮೂರ್ನಾಲ್ಕು ವರ್ಷ ಮುಂದೆ ಹಾಕಿದರೆ ಏನೂ ತೊಂದರೆಯಾಗದು. ಆದರೆ ಅದೇ ವೇಳೆಗೆ ನೀವು ನಿಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು."
"ಸರ್, ನೀವು ಹೇಳುವುದು ನನಗೆ ಅರ್ಥವಾಗ್ತಿಲ್ಲ."
"ಸರಿ, ನಾನು ನಿಮಗೆ ಅರ್ಥ ಆಗುವ ರೀತಿ ಬಿಡಿಸಿ ಹೇಳ್ತಿನಿ. ನಿಮಗೆ ನಿಮ್ಮ ಮೇಲೆ ನಂಬಿಕೆ ಇದೆಯಲ್ಲವೇ? ನೀವು ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ವರಮಾನಕ್ಕೆ ಕೆಲಸ ಮಾಡ್ತಾ ಇದ್ದೀರಿ. ನೀವು ಕೆಲಸ ಬಿಟ್ಟು ಸ್ವಂತವಾಗಿ ಒಂದು ವರ್ಕ್‌ಶಾಪ್‌ ಇಡಿ."
"ನನಗೂ ಅಂತ ಕನಸು ಇದೆ ಸರ್. ಆದರೆ ಅದನ್ನು ಪ್ರಾರಂಭಿಸಲು ಬಂಡವಾಳ ಬೇಕಲ್ಲವೇ.. ಅದಕ್ಕಾಗಿ ಬ್ಯಾಂಕ್‌ಗೆ ಹೋಗಿ ಸಾಲ ಕೇಳ್ದೆ. ಅದಕ್ಕೆ ಆಧಾರ ಕೇಳಿದರು. ಆಧಾರ ಇದ್ದರೆ ಮಾತ್ರ ಸಾಲ ಕೊಡ್ತಿವೀಂತ ಹೇಳಿದ್ರು. ಈಗ ನೀವು ಕೊಡ್ತಿನೀಂತ ಹೇಳಬಹುದು. ಆದರೆ ಅದಕ್ಕೆ ನನ್ನ ಮನಸ್ಸು ಒಪ್ಪಬೇಕಲ್ಲ.."
"ಇಲ್ಲ ... ನಾನು ನಿಮಗೆ ಹಣವನ್ನು ಕೊಡುವುದಿಲ್ಲ. ಆದರೆ, ನಿಮಗೆ ಹಣ ಸಿಗುವ ರೀತಿಯಲ್ಲಿ ನಿಮ್ಮ ಬ್ಯಾಂಕ್ ಲೋನ್‌ಗೆ ಗ್ಯಾರಂಟಿ ನಿಲ್ತಿನಿ.. ಆಗ ನಿಮಗೆ ಖಂಡಿತವಾಗಿಯೂ ಲೋನ್ ಸಿಗತ್ತೆ.. ಗ್ಯಾರಂಟಿ ಕೂಡ ಸುಮ್ಮನೆ ಸಹಿ ಹಾಕುವುದಲ್ಲ.. ಮೂರನೇ ವರ್ಷದಿಂದ ನಿಮ್ಮ ವರ್ಕ್ ಶಾಪ್‌ನಲ್ಲಿ ನಾನೂ ಒಬ್ಬ ಪಾರ್ಟನರ್ ಆಗಿ, ಬಂಡವಾಳ ಹಾಕದೆ ಲಾಭದಲ್ಲಿ ಶೇಖಡ ಹತ್ತರಷ್ಟು ಶೇರುಗಳನ್ನು ಕೊಡಬೇಕು."
"ಸರಿ ಸರ್... ನನ್ನ ಒಪ್ಪಿಗೆ ಇದೆ.."
"ನೀವು ಮೂರು ವರ್ಷ ವರ್ಕ್ ಶಾಪ್ ನಡೆಸಿದ ನಂತರ ಮುಂದೆ ಮದುವೆಯ ಪ್ರಸ್ತಾಪ ಮಾಡಬಹುದು. ಅಲ್ಲಿಯ ತನಕ ನೀವು ಮಾತ್ರ ಪ್ರಿಯಾಳನ್ನು ಭೇಟಿಮಾಡಿ ಮಾತನಾಡಿಸಬಹುದು. ಆದರೆ, ಎಲ್ಲೆ ಮೀರಬಾರದು. ಅವಳನ್ನು ಸಿನಿಮಾ ಬೀಚುಗಳಿಗೆ ಕರೆದುಕೊಂಡು ಹೋಗುವುದನ್ನು ನಾನು ತಡೆಯಲಾರೆ. ಆದರೆ ಅವಳೊಂದಿಗೆ ಕೂಗಾಡಿ ಮೈಮರೆತು ವರ್ಕ್ ಶಾಪ್‌ ಕೆಲಸಕ್ಕೆ ತೊಂದರೆ ತಂದುಕೊಳ್ಳಬಾರದು. ಇದನ್ನು ನಾನು ಪ್ರಿಯಾಳ ಅಪ್ಪನಾಗಿ ಹೇಳ್ತಾ ಇಲ್ಲ.. ನಿಮಗಾಗಿ ಜಾಯಿಂಟ್ ಸಿಗ್ನೇಚರ್ ಹಾಕುವ ಕಾರಣದಿಂದ ಹೇಳ್ತಿದ್ದೀನಿ."
"ಸರ್, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞ. ನಾನು ಮುಂದೆ ಸಾಧಿಸಬಹುದೆಂಬ ಆತ್ಮವಿಶ್ವಾಸ ನನಗಿದೆ. ಸರಿ ಹಾಗಾದರೆ, ನಾನು ಲೋನ್ ಸಂಬಂಧವಾದ ಕೆಲಸಗಳನ್ನು ಪ್ರಾರಂಭಿಸಲೇ?"
"ಓ ಯಸ್... ಧಾರಾಳವಾಗಿ"
ರಾಮಲಿಂಗಂ ಅವನನ್ನು ಬೀಳ್ಕೊಟ್ಟರು.
ಮುಂದಿನ ತಿಂಗಳು ಕುಮಾರ್‌ಗೆ ಬ್ಯಾಂಕ್ ನಿಂದ ಸಾಲ ಮಂಜೂರು ಆಯಿತು. ತಕ್ಷಣ ಅವನು ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಊರಿನ ಒಂದೆಡೆ ಅವನು ವರ್ಕ್ ಶಾಪ್ ಪ್ರಾರಂಭಿಸಿದ. ಪ್ರಿಯಾಳು ಬಂದು ಅವನಿಗೆ ಪ್ರೋತ್ಸಾಹ ನೀಡಿದಳು.
ಕುಮಾರ್‌ಗೆ ಪ್ರಿಯಾಳೊಂದಿಗೆ ಹೊತ್ತು ಕಳೆಯಬೇಕೆಂಬ ಅದಮ್ಯ ಆಸೆ ಇತ್ತು. ಆದರೆ ಅದರಿಂದ ವರ್ಕ್ ಶಾಪ್ ಕೆಲಸಕ್ಕೆ ಚ್ಯುತಿ ಬಂದರೆ... ಆದ್ದರಿಂದ ಅವನು ಅವಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಅವಳನ್ನು ಕಂಡಾಗಲೆಲ್ಲ ಹುಸಿ ನಗೆ ನಕ್ಕು ಸುಮ್ಮನಾಗಿ ಬಿಡುತ್ತಿದ್ದ. ಅದೇ ವೇಳೆಗೆ ಬ್ಯಾಂಕ್‌ನ ಮ್ಯಾನೇಜರ್ ಬಂದರು. ಕುಮಾರ್ ಅವರನ್ನು ಉಪಚರಿಸಿ ಕೂರಿಸಿದ. ಬ್ಯಾಂಕ್ ನಿಂದ ಪಡೆದ ಹಣದಲ್ಲಿ ಯಾವುದಾದರೂ ದುಂದು ವೆಚ್ಚವಾಗಿಲ್ಲ ಎಂದು ನಿರೂಪಿಸಬೇಕು..
ಬೇರೆಯವರ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುವಾಗ ಒಂದು ಕಣ್ಣು ಕೆಲಸದ ಮೇಲೆ ಮತ್ತೊಂದು ಕಣ್ಣು ಗಡಿಯಾರದ ಮುಳ್ಳುಗಳ ಮೇಲಿರುತ್ತಿತ್ತು. ಆದರೆ ಈಗ ಕುಮಾರ್ ಗಡಿಯಾರವನ್ನೇ ಮರೆಯತೊಡಗಿದ. ಬಿಲ್ಲಿಗಿಂತಲೂ ಹೆಚ್ಚಿನ ಹಣ ಬಂದರೆ, ಕುಮಾರ್ ಆಗ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಆತನ ಸಹೋದ್ಯೋಗಿಗಳು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಗಾಡಿಯನ್ನು ಡೆಲಿವರಿ ಕೊಟ್ಟುಬಿಟ್ಟರೆ ಮುಖ ಕಿವುಚಿಕೊಳ್ಳುತ್ತಿದ್ದರು. ಕೆಲಸ ಮಾಡಿಸಿ ಗಾಡಿ ತೆಗೆದುಕೊಂಡು ಹೋದವರು ಮತ್ತೆ ಅದೇ ಕಂಪ್ಲೈಟ್‌ನೊಂದಿಗೆ ಬಂದರೆ ಗ್ರಾಹಕರ ಮೇಲೆ ಉರಿದುಬೀಳುತ್ತಿದ್ದರು. ಅದನ್ನು ಅರ್ಥ ಮಾಡಿಕೊಂಡ ಕುಮಾರ್ ಬಿಲ್ಲಿನಲ್ಲಿ ಕೊಂಚ ಹಣವನ್ನು ಸೇರಿಸಿ ಹಾಕುತ್ತಿದ್ದ. ಕೆಲಸದಲ್ಲೂ ತುಂಬ ಆಸಕ್ತಿ ತೋರುತ್ತಿದ್ದ. ಬಿಲ್ಲು ಸ್ವಲ್ಪ ಹೆಚ್ಚೆನಿಸಿದರೂ ಹೇಳಿದ ಸಮಯಕ್ಕೆ ಸರಿಯಾಗಿ ಗಾಡಿ ಡೆಲಿವರಿ ಕೊಡುತಿದ್ದ. ಈ ವಿಷಯದಲ್ಲಿ ವಾಡಿಕೆಯ ಗ್ರಾಹಕರು ಕುಮಾರ್‌ನ ಕುರಿತು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ಬಂದವರೊಂದಿಗೆಲ್ಲ ಕುಮಾರ್ ಮೃದುವಾಗಿ ನಡೆದುಕೊಳ್ಳುತ್ತಿದ್ದ. ಎಲ್ಲೂ ವಾದಿಸಲು ಹೋಗುತ್ತಿರಲಿಲ್ಲ.
"ಹಲೋ ಕುಮಾರ್.. ನಾನು ಪ್ರಿಯಾ ಮಾತನಾಡುತ್ತಿರುವುದು. ಸಂಜೆ ಸಿನಿಮಾಕ್ಕೆ ಎರಡು ಟಿಕೆಟ್ ಬುಕ್ ಮಾಡಿದ್ದೀನಿ. ಸಿನಿಮಾ ಮುಗಿದ ನಂತರ ತಾಜ್‌ನಲ್ಲಿ ಡಿನ್ನರ್. ಅಪ್ಪನಿಂದ ಪರ್ಮಿಷನ್ ತಗೊಂಡಿದ್ದೀನಿ. ನಿಮ್ಮನ್ನು ಎಲ್ಲಿ ಪಿಕ್‌ಅಪ್ ಮಾಡಬೇಕು ಹೇಳಿ.."

"ಏನು ಪ್ರಿಯಾ ಇದ್ದಕ್ಕಿದ್ದಂತೆ ಹೀಗೆ ಹೇಳಿದರೆ ಹೇಗೆ? ಮೊದಲೇ ಹೇಳಬಾರದಿತ್ತ. ಇಲ್ಲಿ ದೊಡ್ಡ ಆಕ್ಸಿಡೆಂಟ್‌ನ ಕೆಲಸ ಇದೆ. ವರ್ಕ್ ಶಾಪ್ವನಲ್ಲಿರುವವರೆಲ್ಲ ಓವರ್ ಟೈಮ್ ಮಾಡ್ತಿದ್ದಾರೆ. ಸಿನಿಮಾಕ್ಕೆ ಮುಂದಿನ ಭಾನುವಾರ ಹೋಗೋಣವೇ..?"

"ಏನು ಕುಮಾರ್ ನೀವು ಮಾಡೋದು ನಿಮಗೇ ನ್ಯಾಯಾಂತ ಅನ್ನಿಸ್ತದಾ..? ನೀವು ಹಳೆ ವರ್ಕ್ಸ ಶಾಪ್‌ನಲ್ಲಿ ಕೆಲಸ ಮಾಡ್ತಾ ಇರುವಾಗ ದಿನವೂ ಸಂಜೆ ಎರಡು ಗಂಟೆಗಳ ಕಾಲ ಒಟ್ಟಿಗೆ ಇರ್ತಿದ್ವಿ. ತುಂಬಾ ಹೊತ್ತು ಮಾತಾಡ್ತಾ ಇದ್ವಿ. ಸ್ವಂತ ವರ್ಕ್ ಶಾಪ್ ಇಟ್ಟಮೇಲೆ ಬದಲಾಗಿಬಿಟ್ರಿ. ನಾನು ಒಪ್ಕೊಂಡಿದಿನಿ. ಸಂಡೆ ಇವನಿಂಗ್ ನನಗೋಸ್ಕರ ರಿಸರ್ವ್ ಮಾಡಿ ಅಂತ ನಿಮ್ಮನ್ನು ಕೇಳ್ಕೊಂಡಿದ್ದೆ. ಈಗ ನೀವು ಅದನ್ನು ಬೇಡಾಂತಂದ್ರೆ ಏನರ್ಥ."
"ಇಲ್ಲ ಪ್ರಿಯಾ.. ಒಂದು ಕಷ್ಟದ ಕೆಲಸ ವಹಿಸಿಕೊಂಡಿದ್ದೀನಿ. ಇಂಜಿನನ್ನು ಕೆಳಗಿಳಿಸಿದ್ದೀನಿ. ಬುಧವಾರ ಡೆಲಿವರಿ ಕೊಡುವುದಾಗಿ ಹೇಳಿದ್ದೀನಿ. ಅದನ್ನು ಅವತ್ತು ಕೊಟ್ಟು ಬಿಟ್ಟರೆ ಹೇಳಿದ ಲೇಬರ್ ಚಾರ್ಜ್ ಕೊಡ್ತಿನೀಂತ ಕಸ್ಟಮರ್ ಭರವಸೆ ನೀಡಿದ್ದಾರೆ. ಇದೊಂದು ಸವಲಾಗಿ ಪರಿಗಣಿಸಿ ಕೆಲಸ ಸುರು ಮಾಡಿದ್ದೀನಿ. ಎರಡು ರಾತ್ರಿಗಳ ಕೆಲಸ ಮಾಡಿದರೆ ಮಾತ್ರ ಅದರ ಕೆಲಸ ಮುಗಿಯೋದು. ಆದ್ದರಿಂದ...."
"ಸರಿ ಹೋಗ್ಲಿ ರಾತ್ರಿ ಡಿನ್ನರ್ ಬೇಡಾಂತ ನಿರ್ಧರಿಸೋಣ. ಸಿನಿಮಾ ಮುಗಿದ ಕೂಡಲೇ ನಾನೇ ನಿಮ್ಮನ್ನು ವರ್ಕ್ಸ್ ಶಾಪ್‌ಗೆ ಡ್ರಾಪ್ ಮಾಡ್ತಿನಿ. ಓಕೆನಾ.."
"ಸಿನಿಮಾ ನೋಡ್ಲಿಕ್ಕೂ ಮೂರು ಗಂಟೆಗಳ ಕಾಲಾವಧಿ ಬೇಕು. ಅದೇ ಸಮಯದಲ್ಲಿ ನನ್ನ ಸಹೋದ್ಯೋಗಿಗಳು ಕೆಲಸ ಮಾಡ್ತಿರ್ತಾರೆ. ನಾನು ನಿನ್ನ ಜೊತೆ ಸಿನಿಮಾ ನೋಡ್ತಾ ಇರೋದು... ಬೇಡ ಪ್ರಿಯಾ.. ಈ ಸಂಡೆ ಯಾವ ಪ್ರೋಗ್ರಾಮೂ ಬೇಡ.. ಮುಂದಿನ ಸಂಡೆ ಗ್ಯಾರಂಟಿಯಾಗಿ...."
"ನೋ ಛಾನ್ಸ್ ಕುಮಾರ್... ಈ ಸಂಡೆ ನೀವು ಬರಲಿಲ್ಲಾಂದ್ರೆ ನಾನು ನಿಮ್ಮನ್ನು ನೋಡೋದೆ ಇಲ್ಲ.." ಹಾಗೆಂದು ಅವಳು ಫೋನನ್ನು ಟಕ್ಕೆಂದು ಕುಕ್ಕಿದಳು.
ಅಂದು ಹೇಗೋ ಅಂದು ಕುಮಾರ್ ಅವಳೊಂದಿಗೆ ಸಿನಿಮಾಗೆ ಹೋದ. ಆದರೆ ಪ್ರಿಯಾಳ ಬಗ್ಗೆ ಅವನು ತೀವ್ರವಾಗಿ ಯೋಚಿಸತೊಡಗಿದ.
ಕುಮಾರ್‌ಗೆ ಕ್ರಮೇಣ ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚುತ್ತಾ ಹೋದವು. ದೊಡ್ಡ ಕಾರು ಕಂಪನಿಯವರು ತಮ್ಮ ಕಾರಿನ ರಿಪೇರಿಗಳನ್ನು ಕುಮಾರ್‌ಗೆ ವಹಿಸಿಕೊಟ್ಟರು. ಅದಕ್ಕಾಗಿ ಸಾಕಷ್ಟು ಉಪಕರಣಗಳನ್ನು ಕೊಳ್ಳಬೇಕಾಯಿತು. ಅದಕ್ಕೆ ತಕ್ಕುದಾದ ಕೆಲಸಗಾರರನ್ನ ಕೆಲಸಕ್ಕೆ ತೆಗೆದುಕೊಂಡ. ಬ್ಯಾಂಕ್‌ನಿಂದ ಎರಡನೇ ಸಾಲವೂ ದೊರೆಕಿತು. ಪಕ್ಕದೂರಿನ ಸ್ಥಳವನ್ನು ಬಾಡಿಗೆಗೆ ಪಡೆದುಕೊಂಡು ತನ್ನ ವರ್ಕ್ ಶಾಪ್ ಅನ್ನು ವಿಸ್ತರಿಸಿಕೊಂಡ. ಸ್ವಂತ ಉದ್ಯೋಗ ಪ್ರಾರಂಭಿಸಿ ಎರಡು ವರ್ಷಗಳಾದವೆಂದು ಅವನಿಗೆ ನಂಬಲಿಕ್ಕೆ ಸಾಧ್ಯವಾಗಲಿಲ್ಲ. ಇನ್ನೊಂದು ವರ್ಷ ಮಾತ್ರ ಉಳಿದಿದೆ ರಾಮಲಿಂಗಂ ತನಗೆ ನೀಡಿದ ಕಾಲಾವಧಿ ಮುಗಿಯಲು. ಆಮೇಲೆ ಮದುವೆ ಮಾತುಕತೆ, ಮದುವೆ... ಇತ್ಯಾದಿ. ಜವಾಬ್ದಾರಿ ಕೆಲಸದ ಒತ್ತಡಗಳು ಏರಿದಂತೆ ಮದುವೆಯ ಮೇಲಿನ ಆಸಕ್ತಿ ಕಡಿಮೆಯಾಗತೊಡಗಿತು.

"ಕುಮಾರ್, ಈಗ ತಾನೆ ವರ್ಕ್ ಶಾಪ್ ದೊಡ್ಡದಾಗಿ ಬೆಳೆದಿದೆ. ಯಾವಾಗ ನೋಡಿದರೂ ಬೇರೆ ಬೇರೆ ರೀತಿಯ ಕಾರುಗಳು ಬಂದು ನಿಲ್ತವೆ. ಇನ್ನು ಮುಂದೆ ನೀವು ಯಾಕೆ ಖಾಕಿ ಡ್ರೆಸ್ ಹಾಕಿ ಬೇರೆಯವರ ತರ ಕಷ್ಟಪಡಬೇಕು. ಟಿಪ್ ಟಾಪ್ಪಾಗಿ ಪ್ಯಾಂಟು ಷರ್ಟು ಟೈ ಕಟ್ಕೊಂಡು ಅಕೌಂಟ್ ರೂಮಿನಲ್ಲಿ ಕುಳಿತು ಹಣ ಯಾಕೆ ಎಣಿಸಬಾರದು. ಖಾಕಿ ಡ್ರೆಸ್ ಹಾಕಿ, ಮೈಯೆಲ್ಲ ಗ್ರೀಸ್ ಮೆತ್ತಿಕೊಂಡರೆ ರಾಮಲಿಂಗಂನಂತಹ ಉದ್ಯಮಿಗೆ ನೀವು ಅಳಿಯಾಂತ ಹೇಳಲು ಹೇಗೆ ಸಾಧ್ಯ?" ಪ್ರಿಯಾ ನಗುತ್ತಲೇ ಹೇಳಿದಳು.
ಆದರೆ ಕುಮಾರ್ ಗೆ ಅವಳ ಮಾತುಗಳು ಸುತಾರಂ ಇಷ್ಟವಾಗಲಿಲ್ಲ.
"ಕುಮಾರ್ ಹುಟ್ಟಿದ ದಿನದ ಶುಭಾಶಯಗಳು.. ತಗೋಳ್ಳಿ ನನ್ನ ಪುಟ್ಟ ಗಿಫ್ಟ್.."
"ಥ್ಯಾಂಕ್ಸ್ ಪ್ರಿಯಾ"

ಅದೊಂದು ಪುಟ್ಟ ಹೋಟೆಲ್ ಅವರಿಬ್ಬರೂ ಅಲ್ಲಿ ಕುಳಿತಿದ್ದರು.
ಅವಳು ಕೊಟ್ಟಂತಹ ಪೊಟ್ಟಣದಲ್ಲಿ ಏನಿದೆಯೆಂದು ಅವನು ನೋಡಲಿಲ್ಲ. ಅವಳ ಬಲವಂತಕ್ಕೆ ಅದನ್ನು ಬಿಚ್ಚಿದ. ಬಣ್ಣಗಳ ಕಾಗದದ ಮಧ್ಯಯಿಂದ ಒಂದು ಟೈಟಾನಿಕ್ ವಾಚ್ ಹೊರಬಂತು. ಅದರ ಬೆಲೆ ಸುಮಾರು ಎರಡು ಸಾವಿರ ರೂಪಾಯಿಗಳಿರಬಹುದು. ಕುಮಾರ್‌ಗೆ ನಗು ಬಂದು ಬಿಟ್ಟಿತು.

"ಏಕೆ ಕುಮಾರ್ ನಗ್ತಿದ್ದೀರಲ್ಲ? ವಾಚ್ ಇಷ್ಟವಾಗಲಿಲ್ವಾ..? ಬೇರೆ ಬೇಕಾದರೆ ಚೇಂಜ್ ಮಾಡೋಣ.. ಮೂರೂವರೆ ಸಾವಿರ ರೂಪಾಯಿದು ನೋಡಿದ್ದೆ..ಆದರೆ ಅದಕ್ಕಿಂತಲೂ ಇದೇ ವಾಸಿಯೆನಿಸಿತು.."
"ಇಲ್ಲ ಪ್ರಿಯಾ ಈ ವಾಚಿನ ಡಿಸೈನ್, ಶೇಪ್ ಎಲ್ಲ ಚೆನ್ನಾಗಿದೆ... ಎರಡು ಸಾವಿರ ರೂಪಾಯಿಗಳನ್ನು ನಾವು ಸಂಪಾದಿಸಬೇಕೆಂದರೆ, ಕಾರಿನ ಇಂಜಿನ್ ಇಳಿಸಿ ಮೇಜರ್ ಕೆಲಸ ಮಾಡಬೇಕು. ನಾವು ಏಳು ಜನ ಸೇರಿ ಇಡೀ ಒಂದು ದಿನ ಕೆಲಸ ಮಾಡಿದ್ರೇನೆ ಎರಡು ಸಾವಿರ ರೂಪಾಯಿಗಳ ಬಿಲ್ಲು ಮಾಡಲು ಸಾಧ್ಯ. ಅದು ನೆನೆದು ನಗು ಬಂದುಬಿಡ್ತು.. ಅಷ್ಟೆ.."
"ಏನು ಕುಮಾರ್ ನೀವು, ಅಂತಸ್ತಿನ ವ್ಯತ್ಯಾಸವನ್ನು ಚುಚ್ಚಿ ಹೇಳ್ತಾ ಇದ್ದೀರಾ.. ನೀವು ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ಇಷ್ಟೇ ಬೆಲೆ ಬಾಳೋದು ಕೊಡೋದಿಕ್ಕೆ ಸಾಧ್ಯನಾ..ಅಂತ ಯೋಚಿಸ್ತಿದ್ದೀರಾ? ಛೇ..ಛೇ.. ನಾನು ಹಾಗೆಲ್ಲ ನಿರೀಕ್ಷಿಸಲಾರೆ ಕುಮಾರ್.."
ಅಂದು ರಾತ್ರಿ ಎಷ್ಟೇ ಹೊರಳಾಡಿದರೂ ಅವಳಿಗೆ ನಿದ್ರೆ ಬರಲಿಲ್ಲ.
ಎರಡು ದಿನಗಳ ನಂತರ ರಾಮಲಿಂಗಂರವರ ಮನೆಯ ಮುಂದೆ ಉದ್ದನೆಯ ಕಾರೊಂದು ಬಂದು ನಿಂತಿತು. ಅದರಿಂದ ಕುಮಾರ್ ಹೊರಕ್ಕೆ ಇಳಿದ. ಅವನನ್ನು ನೋಡಿದ ಕೂಡಲೇ ಮನೆಯಿಂದ ರಾಮಲಿಂಗಂ ಹೊರಬಂದರು.
"ಬಾಪ್ಪ ಕೂತ್ಕೊ, ಬ್ಯುಸಿನೆಸ್ ಚೆನ್ನಾಗಿ ನಡಿತೀದೆ ಅಂತ ಕೇಳ್ಪಟ್ಟೆ. ಬ್ಯಾಂಕ್ ಮ್ಯಾನೇಜರ್ ಕೂಡ ಹೇಳಿದರು. ಬ್ಯಾಂಕ್ ಕಂತುಗಳನ್ನು ಅಡ್ವಾನ್ಸಾಗಿಯೇ ಕಟ್ತಿಯಂತೆ. ನನಗಂತು ತುಂಬಾ ಸಂತೋಷವಾಯಿತು ಕುಮಾರ್.."
"ಸರ್ ತಗೋಳಿ ನಿಮ್ಮ ಪಾರ್ಟ್‌ನರ್‌ ಶಿಪ್ ಪತ್ರ. ನೀವು ಹೇಳಿದಂತೆ ನಿಮ್ಮನ್ನು ಹತ್ತು ಪರ್ಸೆಂಟ್ ಪಾರ್ಟ್‌ನರ್‌ರನ್ನಾಗಿ ಮಾಡಿದ್ದೇನೆ. ಇನ್ನೊಂದು ವಿಷಯ ಸರ್, ಈ ತನಕ ವರ್ಕ್ ಶಾಪ್ ಗೆ ಹೆಸರು ಇಟ್ಟಿರಲಿಲ್ಲ. ಈಗ ನನ್ನ ಹೆಸರನ್ನೇ ಇಟ್ಟು 'ಕುಮಾರ್ ವರ್ಕ್ಸ್ ಶಾಪ್' ಅಂತ ಹೇಳ್ತಾ ಇದ್ರಿ. ಈಗ ನಾವು ಇಬ್ಬರೂ ಜಂಟಿಯಾಗಿ ಇದರ ಓನರ್ ಆದಾಗ "ರಾಮಲಿಂಗಂ ಆಟೋ ವರ್ಕ್‌ಶಾಪ್‌" ಅಂತ ಹೆಸರಿಟ್ಟಿದ್ದೇನೆ. ಈ ಪಾರ್ಟನರ್ ಶಿಪ್ ಪತ್ರದಲ್ಲಿ ದಯವಿಟ್ಟು ರುಜು ಹಾಕಿ ಸರ್.."
"ಏನಪ್ಪ ಇದೆಲ್ಲ..?" ರಾಮಲಿಂಗಂ ಗಟ್ಟಿ ಧ್ವನಿಯಲ್ಲಿ ವಿಚಾರಿಸಿದರು.
"ಏನೂ ಇಲ್ಲ ಸರ್... ನೀವು ಹೇಳಿದಂತೆ ನಡ್ಕೊಂಡಿದಿನಿ.”
"ನೋಡಪ್ಪ ಮಾಡೊದಿಕ್ಕಿಂತಲೂ ಕೆಲಸ ಮಾಡಿಸೋದು ಕಷ್ಟ. ನಿಜ ಹೇಳಲಾ... ನಿನ್ನಿಂದ ಈ ಕೆಲಸ ಸಾಧ್ಯವಿಲ್ಲಾಂತ ಅಂದ್ಕೊಂಡಿದ್ದೆ. ನಿನ್ನನ್ನು ಹೇಗಾದರೂ ನನ್ನ ಮಗಳಿಂದ ದೂರ ಮಾಡಬೇಕೂಂತ್ಲೆ ನಾನೀ ಸೆಲ್ಫ್ ಎಂಪ್ಲಾಯ್ಮೆಂಟ್ ಕಂಡಿಷನ್ ಹಾಕಿದ್ದು. ಆದರೆ, ನೀನು ಯಶಸ್ವಿಯಾದೆ. ಮದುವೆಗೆ ಇನ್ನೂ ಒಂದು ವರ್ಷ ಕಾಯಬೇಕೂಂತ್ತಿಲ್ಲ. ಕೂಡಲೇ ನಿನ್ನ ಅಪ್ಪ ಅಮ್ಮನ ಬರಹೇಳಿ ಮದುವೆ ವಿಚಾರ ಮಾತನಾಡೋಣ. ಏನಂತಿಯಾ..?"
"ಸರ್ ಅದರ ಬಗ್ಗೆ ಮಾತನಾಡೋಣಾಂತ್ಲೆ ಬಂದೆ. ಯಾವ ತಿಳುವಳಿಕೆಯೂ ಇಲ್ಲದೆ ಇದ್ದಾಗ ನಾನು ನಿಮ್ಮ ಮಗಳು ಪ್ರಿಯಾಳ ಮೇಲೆ ಆಸೆ ಪಟ್ಟೆ. ಅವಳೂ ಆಗ ವಯಸ್ಸಿಗೆ ಬಂದವಳಾಗಿದ್ದಳು. ಅದಕ್ಕೆ ನನ್ನ ಪ್ರೇಮಪಾಶಕ್ಕೆ ಸಿಕ್ಕಿಬಿದ್ದಳು. ಮಿಕ್ಕಿದಂತೆ ನಮ್ಮಿಬ್ಬರ ನಡುವೆ ಯಾವ ಹೊಂದಾಣಿಕೆಯೂ ಕಾಣೆ. ಇದನ್ನು ನಾನು ಯಾವುದೇ ಕೀಳರಿಮೆಯಿಂದ ಹೇಳ್ತಿಲ್ಲ. ಈಗ ಪ್ರಿಯಾಳಿಗೆ ಇರೋದನ್ನು ಇನ್ನು ಹತ್ತು ವರ್ಷದೊಳಗೆ ನಾನು ಒದಗಿಸಬಹುದು. ಆದರೆ ಈ ಹತ್ತು ವರ್ಷಗಳು ನನ್ನ ಬದುಕಿನ ಅತ್ಯಮೂಲ್ಯ ಕಾಲಘಟ್ಟ. ಅಂತಹ ಸಮಯದಲ್ಲಿ ನನ್ನ ಹೆಂಡತಿಯಾಗುವವಳು ನನ್ನನ್ನು ಚೆನ್ನಾಗಿ ಅರಿತುಕೊಳ್ಳಬೇಕು. ನನಗೆ ಅವಳು ಯಾವುದೇ ತ್ಯಾಗಕ್ಕೂ ಸಿದ್ದಳಾಗಬೇಕು. ಆದರೆ ನಿಮ್ಮ ಮಗಳು ತಾನೊಬ್ಬ ಕೋಟ್ಯಾಧಿಪತಿಯ ಮಗಳೆಂದೇ ಅಂದುಕೊಡಿದ್ದಾಳೆ. ಅವಳಿಗೆ ಆ ಅನುಕೂಲತೆ ಇಲ್ಲದೆ ಬಾಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವಿಬ್ಬರು ಮದುವೆಯಾದರೆ, ಜಗಳವಾಡಿ ಬೇರೆಯಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸಾಮಾನ್ಯವಾಗಿ ಸಾಮಾನ್ಯ ಹೆಣ್ಣು ಮಗಳೊಬ್ಬಳು ನನ್ನ ಹೆಂಡತಿಯಾಗುವುದು ಸೂಕ್ತ.

ಅಂತೆಯೇ ಪ್ರಿಯಾಳನ್ನು ತುಂಬಾ ಅನುಕೂಲವಿರುವ ಗಂಡನ್ನು ಹುಡುಕಿ ಮದುವೆ ಮಾಡಿಸಿದರೆ ಒಳ್ಳೆಯದು. ಪ್ರಿಯಾಳಿಂದ ಬೇರೆಯಾಗೋದು ಬಹಳ ಕಷ್ಟವೆನಿಸುತ್ತದೆ. ಅವಳಿಲ್ಲದ ಜೀವನ ನಾನು ಊಹಿಸಲೂ ಸಾಧ್ಯವಿಲ್ಲ. ಆದರೆ ನಮ್ಮಿಬ್ಬರ ಭವಿಷ್ಯದ ಬದುಕು ಚೆನ್ನಾಗಿರಬೇಕೆಂಬುದೇ ನನ್ನ ಆಶಯ. ಆದ್ದರಿಂದಲೇ ಇಂತಹ ತೀರ್ಮಾನಕ್ಕೆ ಬಂದಿರೋದು. ನೀವು ಇದನ್ನೆಲ್ಲ ಪ್ರಿಯಾಳಿಗೆ ಹೇಳಿ ಅರ್ಥಮಾಡಿಸಬೇಕು. ಇದು ನಿಮ್ಮ ಜವಾಬ್ದಾರಿ ಕೂಡ.”
ಕುಮಾರ್ ಒಮ್ಮೆಗೆ ಹೊರಬಿದ್ದು ನಡೆಯತೊಡಗಿದ. ಅವನು ಹೋಗುತ್ತಿರುವುದನ್ನು ನೋಡುತ್ತಾ ನಿಂತು ಬಿಟ್ಟರು, ರಾಮಲಿಂಗಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT