ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಥ್ಯಾಂಕ್ಯೂ ಇನ್ಸ್‌ಪೆಕ್ಟರ್ ಮೇಡಂ’

Last Updated 24 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ತುಂಬಿದ ಬಸ್ಸಿನಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೂ ಇದ್ದರು. ಮಕ್ಕಳ ಕಲರವದ ಮಧ್ಯೆ ಕುಪ್ಪು ತನ್ನ ಗೆಳೆಯ ಜಾನಿಯ ಗಮನ ಸೆಳೆದ: ‘ಹಿಂದೆ ನೋಡು. ಗಡ್ಡದವರೇ ನಮ್ಮಪ್ಪ. ನನ್ನನ್ನು ಕಂಡರೆ ಬಿಡುವುದಿಲ್ಲ. ಕರೆದುಕೊಂಡು ಹೋಗ್ತಾರೆ. ಕೂಲಿಗೆ ಹಚ್ಚುತ್ತಾರೆ. ನನಗೆ ಇಷ್ಟವಿಲ್ಲ. ನಮ್ಮಮ್ಮನಿಗೂ ಇಷ್ಟ ಇಲ್ಲ. ಆದರೆ ನಮ್ಮಪ್ಪ ಬಿಡೋದಿಲ್ಲ. ಈಗೇನು ಮಾಡೋದು?’

‘ಒಂದು ಉಪಾಯ. ಸ್ಕೂಲಿನ ನಿಲ್ದಾಣದ ಹಿಂದಿನ ಸ್ಟಾಪ್‍ನಲ್ಲಿಯೇ ಇಳಿದುಬಿಡೋಣ’ ಎಂದ ಜಾನಿ.

ಕುಪ್ಪು ಮತ್ತು ಜಾನಿ ಒಂದು ನಿಲ್ದಾಣ ಮೊದಲೇ ಬಸ್ಸಿನಿಂದ ಇಳಿದು ಶಾಲೆಯ ದಿಕ್ಕಿನಲ್ಲಿ ನಡೆಯಲು ಆರಂಭಿಸಿದರು. ಕುಪ್ಪು ತನ್ನ ಬಗ್ಗೆ ಇನ್ನಷ್ಟು ಹೇಳಿದ: ‘ನಮ್ಮಪ್ಪ ನಮ್ಮಮ್ಮನಿಂದ ದುಡ್ಡು ಕಸಕೊಂಡು ಕುಡೀತಾರೆ. ನಮ್ಮಮ್ಮನ ಹೊಡೀತಾರೆ. ನಾನು ಸ್ಕೂಲಿಗೆ ಹೋಗೋದು ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ನನ್ನಿಂದ ಕೂಲಿ ಮಾಡಿಸಿ, ಆ ಹಣಾನೂ ತಗೋತಾರೆ. ನಮ್ಮಮ್ಮನಿಗೆ ನಾನು ಓದಬೇಕೆಂದು ತುಂಬ ಆಸೆ. ನಮ್ಮಪ್ಪನಿಗೆ ಅದು ಬೇಡ’.

ಜಾನಿ ಹೀಗೇ ಸುಮ್ಮನೆ ಹಿಂದೆ ನೋಡಿದ. ಕುಪ್ಪುವೂ ನೋಡಿದ. ಕುಪ್ಪುವಿನ ಅಪ್ಪ ಸ್ವಲ್ಪ ಹಿಂದೆ ಅವರನ್ನೇ ಹಿಂಬಾಲಿಸಿ ಬರುತ್ತಿದ್ದ. ಇಬ್ಬರಿಗೂ ಗಾಬರಿಯಾಯಿತು. ಶಾಲೆ ಮುಟ್ಟಲು ಇನ್ನೂ ಎರಡು ಕ್ರಾಸು ದಾಟಬೇಕಿತ್ತು. ಜಾನಿ ಹೇಳಿದ, ‘ಓಡು ಕುಪ್ಪು. ನನ್ನ ಹಿಂದೆ ಬಾ’. ಕುಪ್ಪು ಕಷ್ಟಪಟ್ಟು ತನ್ನ ಬ್ಯಾಗು ಹೊತ್ತುಕೊಂಡು ಓಡಿದ. ಜಾನಿ ಅವನ ಸಹಾಯಕ್ಕೆ ಬಂದ. ಕುಪ್ಪುವಿನ ಬ್ಯಾಗನ್ನೂ ಹೊತ್ತು ಕುಪ್ಪುವಿನ ಕೈ ಹಿಡಿದು ರಸ್ತೆ ದಾಟಿಸಿದ. ಇಬ್ಬರೂ ಒಂದು ಗಲ್ಲಿಯಲ್ಲಿ ನಿಂತರು. ಹಿಂದಕ್ಕೆ ನೋಡುತ್ತಲೇ ಇದ್ದರು. ಹಿಂದೆ ಯಾರೂ ಕಾಣಲಿಲ್ಲ. ಸಮಾಧಾನವಾಯಿತು. ಆದರೆ, ಕುಪ್ಪುವಿನ ಅಪ್ಪ ಅರೆಕ್ಷಣದಲ್ಲಿ ಎದುರಿನಲ್ಲೇ ಕಂಡರು.

‘ಜಾನಿ, ಇಲ್ಲೇ ಬಂದರು ನಮ್ಮಪ್ಪ’ ಅಂದ ಕುಪ್ಪು. ಇಬ್ಬರೂ ದಿಕ್ಕು ಬದಲಾಯಿಸಿ ಓಡಿದರು. ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೂ ಓಡಿದ. ಬಾಲಕರಿಬ್ಬರೂ ಮುಖ್ಯರಸ್ತೆಗೆ ಬಂದರು. ಕುಪ್ಪು ಅಪ್ಪನ ಕೈಗೆ ಸಿಕ್ಕಿಬಿದ್ದ. ಕುಪ್ಪುವಿನ ಅಂಗಿ ಹಿಡಿದು ಎಳೆದ. ಜಾನಿಯೂ ಬಿಡಲಿಲ್ಲ. ಕುಪ್ಪುವಿನ ಕೈಯನ್ನು ಹಿಡಿದೆಳೆದ. ‘ಏಯ್ ಮಗನೇ, ಎಲ್ಲಿ ಓಡಿ ಹೋಗ್ತೀಯ? ನಿಮ್ಮಪ್ಪ ನಾನು. ಬಾ ನನ್ನ ಹಿಂದೆ’ ಎಂದು ಜೋರಾದ ದನಿಯಲ್ಲಿ ಅರಚಿದರು ಕುಪ್ಪುವಿನ ಅಪ್ಪ.

ಕುಪ್ಪು ಅಸಹಾಯಕನಾದ. ಹಿಂದಿನಿಂದ ಕುಪ್ಪವನ್ನು ಎತ್ತಲು ಕುಪ್ಪುವಿನ ಅಪ್ಪ ಪ್ರಯತ್ನಿಸಿದರು. ‘ಬಿಡು, ನಾನು ಬರೋಲ್ಲ’ ಎಂದು ಚೀರಿದ ಕುಪ್ಪು. ‘ಬಿಡ್ರೀ, ಕುಪ್ಪೂನ ಬಿಡ್ರೀ. ನಾವು ಶಾಲೆಗೆ ಹೋಗಬೇಕು’ ಅಂದ ಜಾನಿ.

ಜಾನಿ ಪುಸ್ತಕದ ಚೀಲಗಳನ್ನು ರಸ್ತೆಯ ಪಕ್ಕ ಇಟ್ಟು, ಕುಪ್ಪುವಿನ ಅಪ್ಪನತ್ತ ಎಗರಿದ. ಕುರಚಲು ಗಡ್ಡದ ಕುಪ್ಪುವಿನ ಅಪ್ಪ ಜಾನಿಯನ್ನು ಬಲವಾಗಿ ತಳ್ಳಿದ. ಜನ ಸೇರಿದರು. ‘ಹೆಲ್ಪ್, ಹೆಲ್ಪ್, ಸಹಾಯ ಮಾಡಿ, ಸಹಾಯ ಮಾಡಿ’ ಎಂದು ಜೋರಾಗಿ ಜಾನಿ ಕೂಗಿದ. ಇವರ ಬಡಿದಾಟವನ್ನು ಕೆಲವರು ತಮ್ಮ ಮೊಬೈಲಿಂದ ಚಿತ್ರೀಕರಿಸುತ್ತಿದ್ದರು. ಕುಪ್ಪು ತಪ್ಪಿಸಿಕೊಳ್ಳಲು ಚಡಪಡಿಸುತ್ತಿದ್ದ. ‘ಬಿಡ್ರೀ ಕುಪ್ಪೂನ’ ಅನ್ನುತ್ತ ಜಾನಿ ಮತ್ತೆ ಕುಪ್ಪುವಿನಪ್ಪನ ಮೇಲೆರಗಿದ.

‘ಯಾವನಲೇ ನೀನು? ನನ್ನ ಮಗನ್ನ ಕರಕೊಂಡು ಹೋಗೋದಕ್ಕೆ ನಿನ್ನದೇನು ತಕರಾರು?’ ಎನ್ನುತ್ತ ಅಪ್ಪ ಜಾನಿಯನ್ನು ತಳ್ಳಿದ. ಕುಪ್ಪು ಅವರಪ್ಪನ ತೆಕ್ಕೆಯಲ್ಲಿದ್ದ. ಜಾನಿ ಅಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಹೇಳಿದ. ‘ಯಾರಾದ್ರೂ ಸಹಾಯ ಮಾಡಿ ಸಾರ್, ನನ್ನ ಸ್ನೇಹಿತ ಕುಪ್ಪು. ನಾವು ಶಾಲೆಗೆ ಹೊರಟಿದ್ದೇವೆ. ಕುಪ್ಪುವಿನಪ್ಪ ಅವನನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ದಯವಿಟ್ಟು ತಪ್ಪಿಸಿ. ನನ್ನ ಸ್ನೇಹಿತನನ್ನು ರಕ್ಷಿಸಿ ಸಾರ್’. ಯಾರೂ ಸಹಾಯಕ್ಕೆ ಬರಲಿಲ್ಲ. ಕುಪ್ಪುವನ್ನು ಅವರಪ್ಪ ಎಳೆದುಕೊಂಡು ಹೋಗುತ್ತಿದ್ದರು. ಮಧ್ಯೆ ಮಧ್ಯೆ ಕುಪ್ಪುವಿಗೆ ಬಾರಿಸುತ್ತಿದ್ದರು.

ಆ ವೇಳೆಗೆ ಪೊಲೀಸ್ ಇನ್‌ಸ್ಪೆಕ್ಟರ್‌ ಒಬ್ಬರು ಬೈಕಿನಲ್ಲಿ ಬಂದರು. ‘ಸರ್ ಸರ್’ ಎನ್ನುತ್ತ ಅವರನ್ನು ಜಾನಿ ನಿಲ್ಲಿಸಿದ. ಕುಪ್ಪುವಿನ ವಿಚಾರ ತಿಳಿಸಿದ. ಇನ್‌ಸ್ಪೆಕ್ಟರ್ ತಮ್ಮ ವಾಹನ ನಿಲ್ಲಿಸಿದರು. ಜಾನಿ ಕಷ್ಟಪಟ್ಟು ಎಲ್ಲವನ್ನೂ ಮತ್ತೆ ವಿವರಿಸಿದ. ‘ಎಲ್ಲಿ? ಯಾರು?’ ಎಂದು ಕೇಳಿದರು ಇನ್ಸ್‌ಪೆಕ್ಟರ್‌. ರಸ್ತೆಯ ಆ ಬದಿಗೆ ಕೈ ಮಾಡಿ ತೋರಿಸಿದ ಜಾನಿ. ಆದರೆ ಅಲ್ಲಿ ಯಾರೂ ಕಾಣಲಿಲ್ಲ! ಸಹನೆ ಕಳೆದುಕೊಂಡ ಇನ್‌ಸ್ಪೆಕ್ಟರ್ ಜಾನಿಯ ಮೇಲೆ ರೇಗಿ ತಮ್ಮ ವಾಹನದಲ್ಲಿ ಮರೆಯಾದರು.

ಮುಂದಿನ ಕ್ಷಣದಲ್ಲಿ ಕುಪ್ಪು ಅವನಪ್ಪನೊಂದಿಗೆ ರಸ್ತೆಯಂಚಿನಲ್ಲಿ ಕಾಣಿಸಿಕೊಂಡ. ಕುಪ್ಪು ಅಪ್ಪನ ಹಿಡಿತದಿಂದ ಪಾರಾಗಲು ಪ್ರಯತ್ನಿಸುತ್ತಿದ್ದ. ಆಗ ಜಾನಿಗೆ ಶಾಲೆಯಲ್ಲಿ ಹೇಳಿದ್ದ ಒಂದು ವಿಷಯ ನೆನಪಾಯಿತು. ಶಿಕ್ಷಕರು ಬರೆಸಿದ್ದ ಒಂದು ದೂರವಾಣಿ ಸಂಖ್ಯೆ ಅದು. ಮಕ್ಕಳ ಸಹಾಯವಾಣಿ 1098.

‘ಸಾರ್, ಪೊಲೀಸರಿಗೆ ಒಂದು ಫೋನ್ ಮಾಡಲ? ನನ್ನ ಸ್ನೇಹಿತನನ್ನ ಅವರಪ್ಪ ಕೂಲಿ ಮಾಡೋಕೆ ಎಳಕೊಂಡು ಹೋಗ್ತಿದಾನೆ, ಪ್ಲೀಸ್’ ಎಂದು ಜಾನಿ ಎದುರು ಕಾಣಿಸಿದ ಒಬ್ಬರಲ್ಲಿ ಕೇಳಿದ. ಅನುಮಾನದಿಂದ ಜಾನಿಯನ್ನು ನೋಡಿದರಾದರೂ, ಆ ವ್ಯಕ್ತಿ 1098ಗೆ ಡಯಲ್ ಮಾಡಿಕೊಟ್ಟರು. ಜಾನಿ ಧೈರ್ಯದಿಂದ ಫೋನಲ್ಲಿ ಎಲ್ಲವನ್ನೂ ಹೇಳಿದ. ತಾನಿರುವ ಜಾಗದ ವಿವರಗಳನ್ನೂ ಕೊಟ್ಟ. ಚೀಲಗಳನ್ನು ಹೊತ್ತುಕೊಂಡು ರಸ್ತೆ ದಾಟಿದ. ಆಟೋ ಒಂದು ಬಂದು ನಿಂತಿತು. ಕುಪ್ಪುವಿನ ಅಪ್ಪ ಹತ್ತಿಕೊಂಡರು. ಕುಪ್ಪವನ್ನೂ ಒಳಗೆ ಎಳೆದರು. ಅದೇ ಸಮಯಕ್ಕೆ ಜಾನಿ ಅಲ್ಲಿ ತಲುಪಿದ್ದ.

‘ಆಟೋ ಅಂಕಲ್, ಇವರು ಬಲಾತ್ಕಾರದಿಂದ ನನ್ನ ಸ್ನೇಹಿತನನ್ನು ಕರಕೊಂಡು ಹೋಗ್ತಿದಾರೆ’ ಎಂದ ಜಾನಿ. ‘ಅಪ್ಪ ಬೇಡಪ್ಪ. ನಾನು ಕೂಲಿಗೆ ಬರೋದಿಲ್ಲ. ನಾನು ಶಾಲೆಗೆ ಹೋಗಬೇಕು’ ಎಂದು ಕುಪ್ಪು ಅಂಗಲಾಚುತ್ತಿದ್ದ. ಆದರೆ, ಆಟೊ ಹೊರಟೇಬಿಟ್ಟಿತು. ಜಾನಿ ಆಟೊ ನಂಬರನ್ನು ಗಮನಿಸಲು ಪ್ರಯತ್ನಿಸಿದ. ಆಗಲಿಲ್ಲ. ಅದೇ ವೇಳೆಗೆ ಪೊಲೀಸ್ ಜೀಪು ಅಲ್ಲಿ ಬಂದಿತು. ‘ಯಾರ್‍ರೀ ಜಾನಿ? ಏನು ಸಮಾಚಾರ’ ಎಂದು ಇನ್ಸ್‌ಪೆಕ್ಟರ್‌ ಸುಜಾತಾ ಜೀಪಿನಿಂದಲೇ ಕೇಳಿದರು. ‘ಮೇಡಂ, ನನ್ನ ಸ್ನೇಹಿತನನ್ನು ಅವರಪ್ಪ ಕರೆದೊಯ್ಯುತ್ತಿದ್ದಾರೆ. ಅದೋ ಅಲ್ಲಿ, ಆಟೋದಲ್ಲಿ’ ಎಂದ ಜಾನಿ.

ಸುಜಾತ, ಜಾನಿಯನ್ನು ಕರೆದುಕೊಂಡು, ಕುಪ್ಪು ಮತ್ತು ಅವನ ಅಪ್ಪ ಇದ್ದ ಆಟೊ ಬಳಿ ಸಾಗಿದರು. ಪೊಲೀಸರಿಬ್ಬರು ಇಳಿದು ಕುಪ್ಪುವಿನ ಅಪ್ಪನನ್ನು ಹಿಡಿದು ನಿಂತರು. ಕುಪ್ಪು ಆಟೊದಿಂದ ಇಳಿದ! ಸಮಸ್ಯೆಯೇ ಬೇಡವೆಂದು ಆಟೋದವನು ಮರೆಯಾದ.

‘ಥ್ಯಾಂಕ್ಯು ಕಣೋ, ಜಾನಿ’ ಅಂದ ಕುಪ್ಪು.

‘ಡ್ರೈವರ್, ಈ ಇಬ್ಬರು ಹುಡುಗರನ್ನು ಶಾಲೆಗೆ ಬಿಟ್ಟು ಬನ್ನಿ’ ಎಂದರು ಸುಜಾತಾ. ‘ಥ್ಯಾಂಕ್ಯೂ ಇನ್ಸ್‌ಪೆಕ್ಟರ್‌ ಮೇಡಂ’ ಅಂದರು ಜಾನಿ ಮತ್ತು ಕುಪ್ಪು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT