ಗಿರ್ ಗಿರ್... ಗಿರ್ರಂತ ಸುತ್ತುವ ಗಾಳಿ ಊರೆಲ್ಲಾ ಧೂಳೆಬ್ಬಿಸುತ್ತಿತ್ತು. ಗಾಳಿಯ ಸದ್ದು ಬಿಟ್ಟರೆ ಬಿಕೋ ಎನ್ನುವ ಮೌನ. ಮಟ ಮಟ ಮಧ್ಯಾಹ್ನ ಮನೆಗಳಲ್ಲಿ ಹೀಗೆ ಮೌನ ಆವರಿಸಿದ್ದು ಒಳ್ಳೇದಂತೂ ಅಲ್ಲವೆಂದು ಆತನಿಗೂ ಗೊತ್ತು. ಮುಂಜ್ ಮುಂಜಾನಿಂದ್ಲೂ ಹೆಂಗ ಕುಂತಾನ ಹಂಗಾ ಕುಂತಿದ್ದ. ಮನೆಯ ಬಾಗಿಲು ತೋಳಿಗೆ ಕಟ್ಟಿದ್ದ ಮಾವಿನ ತೋರಣ ಒಣಗಿ ಹೋಗಿದ್ದಕ್ಕೋ ಏನೋ ಸಪ್ಪಳ ಮಾಡುತ್ತಿತ್ತು. ಮಾತಿಲ್ಲ ...ಕತಿಯಿಲ್ಲ. ಸದಾ ಒಂದಿಲ್ಲೊಂದು ಸುದ್ದಿ ತೆಗೆದು ಮಾತಾಡುತ್ತಲೇ ಇದ್ದ ಬಡಿಗೇರ ನಾರಣಪ್ಪ ಹೀಗೆ ಮೌನವಾಗಿದ್ದನ್ನು ಯಾರೂ ಕಂಡವರಿಲ್ಲ.

ಬ್ಯಾಸಿಗಿ ಬಂತೆಂದರೆ ಸಾಕು, ನಾರಣಪ್ಪನ ಥರಾವರಿ ಬಂಡಿಗಾಲಿಗಳು ಸುತ್ತಲಿನ ಕುಮಾರಸ್ವಾಮಿ, ಗಾಳೆಮ್ಮ, ಬೇನಳ್ಳಿ ದುರ್ಗಮ್ಮ ಜಾತ್ರೆಗಳಲ್ಲಿ ನಿಂತ ಗಾಡಿಗಳ ಮೈ ಸವರಿ "ಬಡಿಗೇರ ನಾರಣಪ್ಪಂತಕ ಮಾಡಿಸಿಯಲಾ?"ಎಂದು ಅಭಿಮಾನ ತುಂಬಿ ಕೇಳುವುದು ತುಂಬಾ ಸಹಜವಾದ ಪ್ರಶ್ನೆಯಾಗಿ ಹೋಗಿತ್ತು. ನಾರಣಪ್ಪನಾದರೋ ಬಂಡಿಗಾಲಿ, ನೊಗದಿಂದ ಹಿಡಿದು ಸುತ್ತ ಕುಂತ ಜನರು ಹಿಡಿದುಕೊಳ್ಳಲು ಕಣಗಳನ್ನು ಸಹ ಕಲಾತ್ಮಕವಾಗಿರುವಂತೆ ತಯಾರಿಸುತ್ತಿದ್ದ. ಯಾರೂ ಹಿಂಗೆಂಗೆ ಮಾಡ್ಕೊಡು ನಾರಣಪ್ಪ ಅಂತ ಅಂದಿದ್ದಿಲ್ಲ. ಎಲ್ಲಾ ತನ್ನ ಮನಿ ಕೆಲಸವೆಂದೇ ಭಾವಿಸಿ ಮಾಡುತ್ತಿದ್ದ.

ಕೆಂಪು ಮಣ್ಣಿಗಿಂತಲೂ ಕಲ್ಲು ಭೂಮಿಯೇ ಹೆಚ್ಚಿದ್ದ ಹೊಲಗಳನ್ನು ಉತ್ತುವ, ಬಿತ್ತುವ ರಂಟೆ ಕುಂಟೆಯಂತಹ ಗಳೇವುಗಳೆಲ್ಲವು ಪದೇ ಪದೇ ರಿಪೇರಿಗೆ ಬರುತ್ತಿದ್ದವು. ಬಡ ಬ್ಯಾಸಾಯಗಾರರ ಎದೆ ಎಲುಬುಗಳು ಸಹ ಎಲ್ಲರಿಗೆ ಕಾಣುವಂತೆ ಇರುತ್ತಿದ್ದವು. ಅವುಗಳನ್ನು ನೋಡಿದಾಗಲೆಲ್ಲ'ಆ ಪರಮಾತುಮ ಎದೆಗೂಡನ್ನು ಎಷ್ಟ್ ಚೆಂದಾಗಿ ಹೊಂದಿಸ್ಯಾನ್ ನೋಡು'ಎಂದು ಮನದಲ್ಲಿಯೇ ಅಂದುಕೊಳ್ಳುತ್ತಿದ್ದ. ಪಾಪದ ರೈತರ ಈ ರಿಪೇರಿ ಕೆಲಸ ಏನಂತ ಹೇಳದೆ ಸುಮ್ಮನೆ ನಾರಣಪ್ಪನ ಅಂಗಳದಲ್ಲಿ ಬಿಟ್ಟು ಹೋದರೂ ಸಾಕಿತ್ತು, ಆತನೇ ಎಲ್ಲವನ್ನೂ ನೋಡಿ ರಿಪೇರಿ ಮಾಡಿ ಇಡುತ್ತಿದ್ದ. ಇದಕ್ಕೆಂದು ಯಾವ ರೊಕ್ಕ ಕೂಡ ಕೇಳುತ್ತಿದ್ದಿಲ್ಲ. ಅವರಾಗಿ ತಿಳಿದು ಸುಗ್ಗಿ ಕಾಲಕ್ಕೆ ನಾಕ್ ಕಾಳು ಕೊಟ್ಟರೆ ಕೂಳು. ಇಲ್ಲಾಂದ್ರೆ ಮನೆ ದೇವ್ರು ಮೌನೇಶ್ವರನಂತೆ ಮೌನಕ್ಕೆ ಜಾರಿಬಿಡುತ್ತಿದ್ದ.

ಹೀಗಿದ್ದ ಊರೆಂಬೋ ಊರಿಗೇನು ಬಂತೋ? ಸುತ್ತಲಿನ ಗುಡ್ಡದ ಕಲ್ಲು, ಮಣ್ಣು, ಧೂಳಿಗೂ ರೊಕ್ಕದ ನೋಟುಗಳು ಅಂಟಿಕೊಂಡಂತೆ ಕಾಣತೊಡಗಿತು. "ಯೇ ತಮಾ..ಉಂಡೋಗಿಯಂತೆ ಬಾರಪೋ...." ಎಂದು ಅವ್ವಂದಿರು ಕರೆದರೂ "ಟೇಮಿಲ್ಲವೋ..."ಎಂದು ಬರ್ರನೆ ಗಾಡಿ ತಿರುಗಿಸಿಕೊಂಡು ಹೋದ ಮಕ್ಕಳನ್ನು ನೋಡಿ ನಿಟ್ಟುಸಿರು ಬಿಡುವ ಅವ್ವಂದಿರಿದ್ದರು.

ರೊಕ್ಕಾ....!

ಎಲ್ಲಿ ನೋಡಿದರೂ ರೊಕ್ಕ, ರೊಕ್ಕಾ! ಇಂಥಾ ಟೈಮಿನಾಗ ನಾರಣಪ್ಪನತ್ರ ಏನು ಕೆಲಸ ಇದ್ದೀತೆಂದು ಬಡ ಬ್ಯಾಸಾಯದೋರು ಈಗ ಬಂದಾರು?

ಮಧ್ಯಾಹ್ನದ ಮೌನವನ್ನು ಸೀಳಿದ ಹಾಗೆ, "ಅಯ್ಯೋ....ಕೊಮಾರಸ್ವಾಮೀ ...ಕೊಮಾರಣ್ಣ... ಕೊಮಾರೀ... ಕೂಲಿ ನಾಲೀ ಮಾಡಿ ತಂದು, ನಿನಗ್ ಕಾಯಿ,ಕರ್ಪೂರ, ಧೂಪ, ದೀಪ ಹಚ್ಚಿದೆನೆಲ್ಲೋ...ಗಣಿ ಧಣಿಗಳ ಬಂಗಾರ ಬೆಳ್ಳಿನೆ ದೊಡ್ಡದಾತೇನೋ ನಿಂಗೆ?.. ನೀನು ನನ್ನ ಮಗಂಗೆ ಹಿಂಗ್ ಅನ್ಯಾಯ ಮಾಡ್ಬೋದೇನೋ?"ಎಂಬ ಕೂಗೂ,"ಬೇ ಮುದುಕಿ ಸುಮ್ಮಕಿರಬೇ"ಎಂಬ ಗದರಿಕೆಯೂ ಕೇಳಿಬರುತ್ತಿದೆ. ಗೂಳಿಯಂತಿದ್ದ ಮಗ, ನೆಲದ ಮೇಲೆ ನಿಶ್ಚಲವಾಗಿ ಬಿದ್ದಿರುವುದನ್ನು ಕಂಡು ಆಕೆ ಎದೆ ಎದೆ ಬಡಿದುಕೊಂಡು ಅಳುತ್ತಿರಬೇಕು. ಬೋಳುಗುಡ್ಡಗಳಿಗೆ ಅವಳ ಅಳು, ಸಾಪುಸುವಿಕೆಯ ಶಬ್ದಗಳು ಬಂಡೆಗಳಿಗೆ ಬಡಿದು ಮಾರ್ದನಿಸುತ್ತಲೇ ಇವೆ.

"ಯಾರ ಮನೇದದು?"

ನಾರಣಪ್ಪನ ದನಿ ಆಳದಿಂದ ಬಂದಂತಿತ್ತು.

"ಬಾರಕೇರ ಮನಿ, ಹನುಮಂತಣ್ಣನ ಮಗ ಡ್ರೈವರ್ ಮಂಜು" ಮನೆಯ ಒಳಗಿನ ಕತ್ತಲೆಯ ಗರ್ಭವನ್ನು ಸೀಳಿಕೊಂಡು ಬಂದ ನಾರಣಪ್ಪನ ಹೆಂಡತಿಯ ಮಾತು ಕೇಳಿಸಿತು.

ಮೊಹರಮ್ಮಿಗೆ ಇನ್ನು ಒಂದು ತಿಂಗಳು ಇರುವಾಗಲೇ "ಸಣಪ್ಪೋ ಈ ಸರ್ತಿ ಅಂತಿಂಥಾ ಹುಲಿ ಆಗ್ಬರ್ದು, ಹಂಗಾ ಬೀಗರು ಅದುರಿಡ್ದು ಹೋಗ್ಬಕು ನೋಡು"ಎನ್ನುವ ಉಮೇದಿನ ಹುಡುಗರ ಮೈಗೆ ಬಣ್ಣಬಣ್ಣದ ಹುಲಿಯ ಪಟ್ಟೆಗಳನ್ನು ಬಿಡಿಸುವುದು ಎಷ್ಟು ಚೆಂದ? ದೊಡ್ಡ ಹುಲಿ, ಮುದಿ ಹುಲಿ ಪೈಲ್ವಾನ್ ಹುಲಿ, ಮರಿ ಹುಲಿ....ಒಂದಾ ಎರಡಾ? ತಾನೇ ಚಿತ್ರಿಸಿದ ಹುಲಿಗಳು ಡಕ್ಕಣಕ ಡಕ್ಕಣಕ ಸದ್ದಿಗೆ ಕುಣಿಯುವಾಗ ಊರ ಜನ "ನಮ್ ನಾರಣಪ್ಪ ಚಿತ್ರ ಅಂದ್ರೇ ಚಿತ್ರ ಬುಡು, ಥೇಟ್ ಹುಲೀನೆ"ಎಂದು ಕೇಳುವುದೇ ಎಷ್ಟೊಂದು ಹಿತ.

ತುಂಡು ಲಂಗೋಟಿಯಲಿ ನಿಂತ ಹುಡುಗರ ಮೈಗೆ ತನ್ಮಯನಾಗಿ ಹುಲಿಯ ಗೆರೆಗಳು ಹುಡುಗರು ಮೈಮೇಲೆ ಮೂಡಿದಂತೆಲ್ಲಾ, ನಾರಣಪ್ಪನ ಮನಸ್ಸೂ ಅರಳುತ್ತಿತ್ತು. ಮನೆಯ ಹೊರಗೆ ಅಂಗಳದಲ್ಲಿ ಹರಡಿದ್ದ ಬಂಡಿಯ ಬಿಡಿ ಬಿಡಿ ಭಾಗಗಳು ಮೊಹರಮ್ಮು ಮುಗಿಯುವುದನ್ನೇ ಕಾಯುತ್ತಿರುವವರಂತೆ ಕಾಣಿಸುತ್ತಿದ್ದವು. ಅವತ್ತು ಅಲೈ ದೇವರು ಸಾಯುವ ದಿನ. ಮೊಹರಮ್ಮಿನ ಕೊನೆಯ ದಿನ. ಈ ಹಬ್ಬಕ್ಕೂ ಬುಡು ಬುಡುಕೀ ಕಾಲುವೆಗೂ ಮೊದಲಿಂದಲೂ ಏನೋ ಸಂಬಂಧವಿದೆ. ದೊಡ್ಡದಾದ ಕೆಂಡದುಂಡೆಗಳ ಹೊಂಡ ಇಲ್ಲೇ ಇರುವುದು. ಚಂಡ ಪ್ರಚಂಡ ಕೆಂಡಗಳ ಮೇಲೆ ದಿನವೂ ಹಾದು ಹೋಗುವವರಿಗೆ ಮೊಹರಮ್ಮಿನ ಕೆಂಡದ ಬೆಂಕಿ ಏನೇನೂ ಅಲ್ಲವೆಂಬುದು ನಿಜ.

ತಾಸು, ಎರಡು ತಾಸುಗಳಷ್ಟೆ, ನಂತರ ಬಂದವರಾರೂ ಇಲ್ಲಿ ನಿಲ್ಲುವುದಿಲ್ಲ. ಸ್ವಾಗತಿಸಿದ ಕತ್ತಲೆಯೇ, ವಿದಾಯವನ್ನೂ ಹೇಳುತ್ತದೆ. ಕತ್ತಲಿಗೆ ಹುಟ್ಟಿದ ಜೀವಿಗಳನ್ನು ಪೊರೆದು ಸಲಹುವ ಅವಳ ಮಕ್ಕಳೀಗ ಮೊಹರಮ್ಮಿನ ಹಬ್ಬದ "ಸೂರಾ...ಬೆಲ್ಲಾ ಮೆಣಸೂ.." ಎಂದು ರಾಗಬದ್ಧವಾಗಿ ಕೂಗುತ್ತಾ, ಸಿಲವಾರದ ಡಬರಿಗಳಲ್ಲಿ ಪೇರಿಸಿಟ್ಟುಕೊಂಡ ಪೇಪರಿನ ಪೊಟ್ಟಣಗಳನ್ನು ಹಿಡಿದು ಮಾರುತ್ತಾರೆ.

ಗೀರ್ ....ಗರ್ರ್...ಎಂದು ಸದ್ದು ಮಾಡುವ ಗಿರಗಿಟ್ಲೆ, ಪೀ...ಪೀ..ಎನ್ನುವ ಪೀಪೀಗಳು, ಕಲರ್ ಕಲರಿನ ಐಸ್ಗೀರಿ, ಬಣ್ಣ ಬಣ್ಣದ ರಿಬ್ಬನ್ನು, ಬಲೂನುಗಳನ್ನು ನೋಡುತ್ತಾ ನಿಂತ ಮಕ್ಕಳು, ಜನಸಂದಣಿಯಲ್ಲಿ ತಪ್ಪಿಸಿಕೊಂಡ ಮಕ್ಕಳ ಅಳು, ಎಲ್ಲವೂ ಒಂದು ರೀತಿಯ ಮಿಸಳಭಾಜಿಯಾಗಿ ವಿಚಿತ್ರವಾದ ಕಳೆ ತಂದುಬಿಡುತ್ತದೆ.

"ಹೋದ ಮೋರಮ್ ಹಬ್ಬಕ್ಕೆ ಇವರಪ್ಪ ಕೊತ್ತಪ್ಯಾಟಿಯಿಂದ ಬರ್ತಿದ್ನಲಪೋ ಆತ ಇದ್ದ ನೋಡಾಪ.."

"ನೀನ್ ನಮ್ಮ ಸರೋಜವ್ವನ್ ಮಗ ಅಲ್ಲೇನಪಾ? ನಿಮ್ಮಪ್ಪ ದುರ್ಗದನೊಪೋ...ನಿಮ್ಮಣ್ಣನ ಆಪ್ಪ ...., ಈ ಕಡೀಗಿ ಅದ್ಯಾವುದದೂ...ಸುಡುಗಾಡೂ ಊರೂ..ಹೆಸರೇ ನೆಪ್ಪಿಗೆ ಬರುವಲ್ದೂ...ಹ್ಞಾ...ಬಳ್ಳಾರಿ ಕಡೆಗಳುನಪೋ...."

ಎನ್ನುವ ಮಾತುಗಳು ಕೂಡಾ ಕೆಂಡದ ಜನ ಸುರಿದ ಉಪ್ಪಿಗೆ ಚಟಪಟ ಸದ್ದಿನಂತೆ ಕೇಳಿಸುತ್ತವೆ. ಅಣ್ಣನ ಅಪ್ಪ ದುರ್ಗದವನು, ತನ್ನ ಅಪ್ಪ ಬಳ್ಳಾರಿ ಕಡೆಯವನು ಎಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳದ ಹುಡುಗರು ಸುಮ್ಮನೆ ಪಿಳಿಪಿಳಿ ಕಣ್ಣು ಬಿಡುತ್ತಾರೆ.

ದೊಡ್ಡ ದೊಡ್ಡ ಮರದ ದಿಮ್ಮಿಗಳು ಧಗಧಗನೆ ಉರಿಯುವುದನ್ನೇ ನಾರಣಪ್ಪ ಎಷ್ಟೋ ಹೊತ್ತಿನವರೆಗೂ ಸುಮ್ಮನೆ ನೋಡುತ್ತಾ ಕುಳಿತುಬಿಡುತ್ತಾನೆ. ಮುಗಿಲೆತ್ತರಕ್ ಕೆ ಚಾಚುವ ಬೆಂಕಿಯ ಕೆನ್ನಾಲಿಗೆ, ಸುತ್ತಲೂ ನಿಂತು ನೋಡುವ, ಉಪ್ಪು ಹಾಕುವ ಜನರಿಗೆ ಉತ್ತರವೋ ಎಂಬಂತೆ ಚಟಪಟ ಸದ್ದು ಕೇಳಿಸುತ್ತದೆ.

ಶಾಪಗ್ರಸ್ತವಾದಂತಿರುವ ಬುಡು ಬುಡುಕೀ ಕಾಲುವಿ ಎಂಬ ಓಣಿಯೊಂದು ಮೊಹರಮ್ಮಿನ ದಿನ ಮಾತ್ರ ಹೀಗೆ ಜಾತ್ರೆಯ ಸಂಭ್ರಮವನ್ನು ಚರಗ ಚೆಲ್ಲಿದಂತೆ ಹರಡಿಬಿಡುತ್ತದೆ. ನ್ಯೂಸ್ ಪೇಪರಿನ ಪೊಟ್ಟಣಗಳಲ್ಲಿ ಒಂದಷ್ಟು ಮಂಡಕ್ಕಿ, ಬೆಲ್ಲಾ, ಮೆಣಸನ್ನು ಸೇರಿಸಿ "ಸೂರಾ..ಬೆಲ್ಲಾ....
.ಮೆಣಸೂ"ಎಂದು ಕೂಗುತ್ತ ಎಂಟಾಣೆಗೊಂದು ಪೊಟ್ಟಣ ಮಾರುವ ಓಣಿಯ ಹುಡುಗರ ಕಂಡು ಕೆಲವು ಗಂಡಸರು ಒಳಗೊಳಗೇ ಬೆವರುತ್ತಾರೆ. ತಮ್ಮ ಹೆಂಡತಿಗೆ ತಿಳಿಯದಂತೆ ಆ ಹುಡುಗರನ್ನು ಆಪಾದಮಸ್ತಕ ನೋಡುತ್ತಾರೆ.

ಮತ್ತೆ ಮತ್ತೆ ನೋಡುತ್ತಾರೆ.

ಹುಡುಗರೂ ಅಷ್ಟೆ.
ಮತ್ತೆ....
ಆ ದಿನ ಅವರಾರೂ ನಿದ್ದೆ ಕೂಡ ಮಾಡೋದಿಲ್ಲವೇನೋ.

ಹುಡುಗರು ಮಾತ್ರ ಅಪ್ಪಂದಿರ ಹಂಗಿಲ್ಲದೆ ಸೂರಾ...ಬೆಲ್ಲಾ..ಮೆಣಸೂ ಎಂದು ಕೂಗುತ್ತ ಮುಂದೆ ಸಾಗುತ್ತಾರೆ.
ರಾತ್ರಿಯೆಲ್ಲಾ ಧಗಧಗನೆ ಮುಗಿಲೆತ್ತರಕ್ಕೆ ಉರಿದ ದೊಡ್ಡದೊಡ್ಡ ದಿಮ್ಮಿಗಳು ಮೌನಕೆ ಜಾರಿ,ಬೂದಿಯಾದ ಮುಂಜಾನೆಗಳು ಮಾತ್ರ ಅವರ ಕನಸುಗಳನ್ನು, ಕನವರಿಕೆಗಳನ್ನೂ ಮತ್ತೆ ಮತ್ತೆ ನೆನಪಿಸದೆ ಬಿಡುವುದಿಲ್ಲ.

ಬಹು ಸೂಕ್ಷ್ಮಮತಿ ಮತ್ತು ಕರುಣಾಳುವಾದ ನಾರಣಪ್ಪನಿಗೆ ಸೂರಾ...ಬೆಲ್ಲ ಮೆಣಸಿನ ಹುಡುಗರನ್ನು ಕಂಡರೆ ವೇದನೆಯಾಗುತ್ತಿತ್ತು. ಹೋದವರ್ಷ ಹುಲಿಗಳಾಗಿ ಕುಣಿದವರು ಈ ವರ್ಷ ಸೂರಾ ಬೆಲ್ಲ ಮಾರುತ್ತಿದ್ದಾರೆ....ಮತ್ತೆ ಮುಂದಿನ ವರ್ಷ ಆ ಹುಡುಗರು....ಕಾಲಚಕ್ರ ಯಾರನ್ನು ಕೇಳಿ ತಿರುಗೀತು?

ಗಣಪತಿ ಹಬ್ಬದಲ್ಲಿ ಕೂಡ ಹೀಗೆಯೇ ಆಗುತ್ತಿತ್ತು. ವಿವಿಧ ಭಂಗಿಯ ಗಣಪನನ್ನು ಮಾಡುವ ನಾರಣಪ್ಪ,ಅಷ್ಟೇ ಅಂದವಾಗಿ ಕಲರ್ ಕೂಡಾ ಮಾಡುತ್ತಿದ್ದ.ಇಷ್ಟೆಲ್ಲ ಚಟುವಟಿಕೆಯಿಂದ ಇದ್ದ ನಾರಣಪ್ಪನಿಗೆ ಏನಾಯಿತೆಂದು ಹೇಗೆ ಹೇಳುವುದು?

ಇಂತಹ ಸೊಂಡೂರಿನ ಊರಿಗೆ ದೂರದ ತಮಿಳುನಾಡಿನಿಂದ ಬಂದವರ ಪೈಕಿ ಜಾನ್ ಕುಟುಂಬವೂ ಒಂದು ಆಗಿತ್ತು.. ಆಗಿನ ಸೆಂಟ್ರಲ್ ಗೌರ್ನಮೆಂಟಿನ ಕೆಳಗೆ ಬರುವ ಮೈನ್ಸ್ ಮಿನರಲ್ಸ್ ಕಂಪೆನಿಯೊಂದರಲ್ಲಿ ಪರಿಚಾರಕರಾಗಿದ್ದ ಜಾನ್ ತಂದೆಗೆ ಒಬ್ಬನೇ ಮಗನಾಗಿದ್ದ. ತನ್ನ ವಾರಿಗೆಯ ಜಾನ್ ಮಹತ್ವಾಕಾಂಕ್ಷಿಯಾಗಿದ್ದ. ಟಿಪ್ಪರ್ ತಗೊಂಡು ಮೈನಿಂಗ್ ಸಬ್ಲೀಜು ಅದೂ ಇದೂ ಎಂದು ಆರಾಮಾಗಿದ್ದವನು. ಬ್ಯಾಂಕುಗಳಲ್ಲಿ ಸಾಲವನ್ನೂ ಮಾಡಿದ್ದನಂತೆ. ಯಾರಿಗೂ ಕೇಡು ಬಯಸದ ಗೆಳೆಯನ ಸಾವು ನಾರಣಪ್ಪನಲ್ಲಿ ದಿಗ್ಭ್ರಮೆ ಮೂಡಿಸಿತ್ತು.

ಅದೊಂದು ಮಳೆಗಾಲದ ಮುಂಜಾನೆ ಗಣಿಧಣಿಗಳನ್ನೂ ಪೊಲೀಸರು ಹಿಡ್ಕೊಂಡು ಹೋದರಂತೆ ಎಂಬ ಸುದ್ದಿ ಕೇಳಿದ ದಿನದಿಂದಲೂ ಆತ ಮೌನಕ್ಕೆ ಶರಣಾಗಿದ್ದನಂತೆ. ಅಲ್ಲಿಯವರೆಗೂ ಸಣ್ಣಪುಟ್ಟ ಗುಡಿಗಳಲ್ಲಿದ್ದ ದೇವರುಗಳೂ ಧಣಿಗಳು ಹಾಕಿದ್ದ ಮೈಮೇಲಿನ ಒಡವೆಗಳು ಭಾರವಾಗತಡಗಿದವು. ಆತನಂತೆ ಆತನ ಮೂರ್ನಾಲ್ಕು ಗಾಡಿಗಳು ಸಹ ನಿಶ್ಯಬ್ದವಾಗಿ ನಿಂತಿದ್ದು ಏನೋ ಕೇಡುಗಾಲದ ಸಂದೇಶವನ್ನು ರವಾನಿಸುವಂತಿತ್ತು.

ಕಡಿದಾದ ಬೆಟ್ಟಗಳ ನಡುವೆ ಅವಿತುಕೊಂಡಿರುವನ ಹಾಗೆ ತೋರುವ ಗಂಡಿ ನರಸಿಂಹನನ್ನು, ಮತ್ತು ರಾಮನನ್ನು ನೆನೆಸಿಕೊಂಡು ತಿರುಗಾಡುವಂತೆ ಕಾಣುವ ವಾನರ ಸೇನೆ, ಟೂರಿಗೆಂದು ಬಂದವರಿಗೆಲ್ಲಾ ಇಲ್ಲೇ ನೋಡು, ಪುಟ್ಟಣ್ಣ ಕಣಗಾಲರು ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಗಳ ಶೂಟಿಂಗ್ ಮಾಡಿರೋದು ಇಲ್ಲಿಯೇ ಎಂದು ಹೇಳಿ ಕೈಚಾಚಿ ಭಿಕ್ಷೆ ಕೇಳುವ ಪುಟ್ಟ ಮಕ್ಕಳು.....ಇವೆಲ್ಲವೂ ಊರೊಂದರ ದುರಂತಕ್ಕೆ ಸಾಕ್ಷಿಯೆನ್ನುವಂತಿದ್ದವು.

ಗೆಳೆಯ ಜಾನ್ ಇಲ್ಲದೇ ಇದ್ದರೆ, ನಾರಣಪ್ಪ ತನ್ನದೇ ಊರಿನ ಪ್ರಕೃತಿಯನ್ನು ತಾನು ನೋಡಲು ಸಾಧ್ಯವಿರಲಿಲ್ಲ. ನಿಸರ್ಗಪ್ರಿಯ ಜಾನ್ ಫೋಟೋ ತೆಗೆಯೋದರಲ್ಲಿ ಸಂಡೂರಿನ ಯುವರಾಜ ಘೋರ್ಪಡೆಯವರಂತೆ ಎಕ್ಸ್ಫರ್ಟ್ ಆಗಿದ್ದ. ಮಣ್ಣು ಅಗೆದು ಮಾರಿ ಹೊಟ್ಟೆ ಹೊರೆಯುವ ಗಣಿ ಕೆಲಸವನ್ನು ಮಾಡಲು ಮನಸ್ಸಿಲ್ಲದಿದ್ದರೂ ಹೊಟ್ಟೆಪಾಡಿಗೆ ಅನಿವಾರ್ಯ ಕರ್ಮವಾಗಿತ್ತು. ಊರಿನ ಗಣಿ ಧಣಿಗಳ ಆಟಾಟೋಪ, ಸರ್ಕಾರಕ್ಕೆ ಲೆವಿ ನೀಡುವಲ್ಲಿ ತೋರುವ ವಂಚಕತನ, ಮನುಷ್ಯನ ಲೋಭಿತನಗಳನ್ನು ಎಳೆಎಳೆಯಾಗಿ ಹೇಳಬಲ್ಲಷ್ಟು ಸೂಕ್ಷ್ಮಮತಿಯಾಗಿದ್ದ. ಗಣಿಗಾರಿಕೆಯಿಂದ ಕಾಡಿನಲ್ಲಿ ಮರಗಿಡಗಳಿಲ್ಲದೆ ಬಯಲಾಗಿ ಹೋದ ಬಯಲೆಂಬೋ ಬಯಲಿನಲ್ಲಿ ಒಂಟಿಯಾಗಿ ನೀರು ಕುಡಿಯಲೆಂದು ಬಂದು ನಿಂತ ಚಿರತೆಯ ಆ ಆರ್ದ್ರ ನೋಟವನ್ನು, ಮತ್ತು ತೆರೆದ ಕಣ್ಣು ತೆರೆದಂತೆಯೇ ಉಸಿರು ನಿಲ್ಲಿಸಿದ ಪ್ರಾಣಿಗಳನ್ನು ಹೇಳುವಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಮನುಷ್ಯನ ಆಳದ ಲೋಭಿತನ, ದುಷ್ಟತನವನ್ನು ಎಳೆಎಳೆಯಾಗಿ ಜಗತ್ತಿನ ಮುಂದೆ ಸಾಕ್ಷಿಸಮೇತ ಇಡುವವವನಂತೆ ಜಾನ್ ಕಾಣಿಸುತ್ತಿದ್ದ. ಇತ್ತೀಚೆಗಂತೂ ನಾರಣಪ್ಪನಿಗೆ ಆತನ ಮಾತುಗಳೊಂದೂ ಅರ್ಥವಾಗುತ್ತಿರಲಿಲ್ಲ. ಗಣಿಗಾರಿಕೆಯ ಆರ್ಭಟದಿಂದ ಸೊಂಡೂರಿನ ಸುತ್ತಮುತ್ತಲಿನ ಹಳ್ಳಿಗಾಡಿನ ಪ್ರದೇಶಗಳಲ್ಲಿ ಜಾತ್ರೆ, ಪರಿಷೆಗಳೂ ಇಲ್ಲವಾಗಿದ್ದನ್ನು ನೋವಿನಿಂದಲೇ ಹೇಳುತ್ತಿದ್ದ.

"ನೋಡು, ಈ ಊರಿನಲ್ಲಿ ಕಲೆಯಿಲ್ಲ, ಸಾಹಿತ್ಯವಿಲ್ಲ......
ಇಂಥಾ ಊರಿನಲ್ಲಿ ಸಮಾಜವೇ ಇಲ್ಲ....ಹಾಗೆ ವಿಜ್ಞಾನವೂ ಇಲ್ಲ. ಇರುವುದೆಲ್ಲವೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಆವಿಷ್ಕರಿಸಿಕೊಂಡ ತಂತ್ರಜ್ಞಾನ ಮಾತ್ರ. ಇಂಥಾ ಸಮಾಜ ಮತ್ತು ವಿಜ್ಞಾನವೂ ಇಲ್ಲದ್ದರಿಂದಲೇ ಮನುಷ್ಯನ ಬದುಕು ಏಕಾಂತದ್ದೂ..ಬಡವಾದದ್ದೂ ಕೊಳಕಾದದ್ದೂ ಅಷ್ಟೇ ಅಲ್ಲದೆ, ಒರಟಾಗಿ ಹೋಯಿತು ನಾರಾಯಣ"ಎಂದಿದ್ದ.

ಗೆಳೆಯನ ಒಗಟಿನಂತಹ ಮಾತುಗಳಲ್ಲಿನ ಅರ್ಥವನ್ನು ಗ್ರಹಿಸಲಾರದೆ ನಾರಣಪ್ಪ ಪಿಳಿಪಿಳಿ ಕಣ್ಣು ಬಿಟ್ಟಿದ್ದ. ಅವತ್ತೇ ಕೊನೆ, ಮತ್ತೆ ಮಾತನಾಡಬೇಕೆಂದರೂ ಕೆಲಸದ ಭರಾಟೆಯಲ್ಲಿ ಗೆಳೆಯನನ್ನು ಮತ್ತೆ ಭೇಟಿಯಾಗಲೇ ಇಲ್ಲ.

ಈ ಮಧ್ಯೆ ಅದೇಕೋ ಏನೋ ಸಂಡೂರಿನ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಒಂದು ಪೆಟ್ಟಿಗೆಯನ್ನು ಮಾಡಲು ಹೇಳಿದರು. ಪೆಟ್ಟಿಗೆಯು ಗಟ್ಟಿ ಮುಟ್ಟಾಗಿರಬೇಕೆಂದು ಮತ್ತು ನೋಡಲು ಸುಂದರವಾಗಿರಬೇಕೆಂದೂ ಹೇಳಿದರು. ಅದರಂತೆ ಅಳತೆ ತೆಗೆದುಕೊಂಡ ನಾರಣಪ್ಪ ಮರದ ಹಲಗೆಗಳಿಂದ ಸುಂದರವಾದ ಪೆಟ್ಟಿಗೆಯನ್ನು ತಯಾರಿಸಿದ.
ಆದರೆ, ಜೀವದ ಗೆಳೆಯ ಜಾನನ ದೇಹವನ್ನು ಇದೇ ಪೆಟ್ಟಿಗೆಯಲ್ಲಿ ಹೊತ್ತು ತಾನು ಸಾಗುವೆನೆಂಬ ಸಣ್ಣ ಸುಳಿವೂ ಕೂಡ ನಾರಣಪ್ಪನಿಗೆ ಆಗ ಇರಲಿಲ್ಲ.

ಅಂದಿನಿಂದ ಆತ ಮೌನಕ್ಕೆ ಶರಣಾದ.ಈಗೀಗ ಸುಮ್ಮನೆ ಕಣ್ಣಾಡಿಸುತ್ತಾನೆ. ಇಲ್ಲವೇ ಕಣ್ಣೀರು ಸುರಿಸುತ್ತಾನೆ.

ಎತ್ತ ನೋಡಿದರೂ ಜನವೋ ಜನ. ಕೆಂಪು ಕೆಂಪು ಜನ. ಸಾಲಿ ಬಿಟ್ಟು ಲೋಡು ಮಾಡುವುದನ್ನು ಕಲಿತ ಮಕ್ಕಳಿಗೂ ಈಗ ಗಣಿ ಕೆಲಸವಿಲ್ಲ, ಮತ್ತೆ ಸಾಲಿಗೆ ಹೋಗಿರಿ ಎಂದು ಅವರಿಗೆ ಹೇಳುವವರಾದರೂ ಯಾರು?

ಬಸ್ಟ್ಯಾಂಡಿನಲ್ಲಿ ಕಾಪೀಸೀಮೆಗೆ ಹೊಂಟು ನಿಂತವರನ್ನು ನೀವು ಊರು ಬಿಟ್ಟು ಹೋಗಾದು ಬ್ಯಾಡ ಎಂದು ಹೇಳಿ ತಡೆಯುವವರಾದರೂ ಯಾರು?

ಪೆಟ್ಟಿಗೆ! ಪೆಟ್ಟಿಗೆ!!
ಎಷ್ಟು ಅಂದವಾದ ಪೆಟ್ಟಿಗೆ!
ತಾನೇ ತನ್ನ ಕೈಯಾರೆ ತಯಾರಿಸಿದ ಬಹು ಸುಂದರವಾದ ಶವಪೆಟ್ಟಿಗೆ!
ಅದೂ ಜೀವದ ಗೆಳೆಯನನ್ನು ಹೊತ್ತು!

ಹತ್ತಿರದ ಬಂಧುಗಳನ್ನು ಹೊತ್ತು ನಡೆಯುವುದು ಎಷ್ಟು ಕಷ್ಟ ಎಂಬುದು ಈ ಹೊತ್ತು ನಾರಣಪ್ಪನಿಗೆ ಅರ್ಥವಾಯಿತು.

ಓಹ್!ಎಷ್ಟೊಂದು ಕಷ್ಟ... ಕಷ್ಟ!
ಎಷ್ಟೊಂದು ಭಾರ!
ಹೆಜ್ಜೆ ಮುಂದಕ್ಕೆ ಹೋಗುತ್ತಿಲ್ಲ.
ಸ್ಮಶಾನ ದೂರ.....ಬಹುದೂರವಿರುವಂತೆ ಭಾಸವಾಗುತ್ತಿದೆ.

".....ಹೇಯ್! ಯಾರಾದ್ರೂ ಬ್ಯಾರೆಯವರು ಹೆಗಲು ಕೊಡ್ರಿ....ಇಲ್ಲಿ ನಾರಣಪ್ಪಗ ಒಜ್ಜೆ ಆದಂಗೈತೆ...ಪಾಪ ಯಜಮಾನ ಮನುಷ್ಯ!"
ಎಂದು ಯಾರೋ ಬಹುದೂರದಲ್ಲಿ ನಿಂತು ಹೇಳುತ್ತಿರುವುದು ಕೇಳಿಸುತ್ತಿದೆ.

ಸಂಡೂರಿನ ಗಣಿ ಗದ್ದಲದಲ್ಲಿ ಬ್ಯಾಸಾಯವನ್ನೇ ಆಶ್ರಯಿಸಿದ್ದ ರೈತರೆಲ್ಲ, ಕೆಂಪು ಮಣ್ಣಿನ ಸೈನಿಕರಂತೆ ಗಣಿ ಕೂಲಿ ಕಾರ್ಮಿಕರಾಗಿ ಹೋದ ಮೇಲೆ, ನಾರಣಪ್ಪನ ಬಡಗಿತನದ ಬಾಚಿ, ಉದ್ದಗೊಲ್ಡು, ಪಾಲಿಶ್ ಮಾಡುವ ಸಾಮಾನುಗಳೆಲ್ಲ ಕೆಲಸವಿಲ್ಲದೆ ಮೌನಕ್ಕೆ ಶರಣಾದವರಂತೆ ಕಾಣಿಸತೊಡಗಿದವು. ಇನ್ನು ನಾರಣಪ್ಪನಿಗಂತೂ ಇತ್ತ ಬ್ಯಾಸಾಯವೂ ಇಲ್ಲದೆ ಅತ್ತ ಗಣಿಗಾರಿಕೆಯು ಇಲ್ಲದೆ ಹಸಿವಿನಿಂದ ಮಲಗಿದಂತೆ ತೋರುವ ಊರಿನ ಅಗಾಧ ಮೌನ ಇನ್ನಿಲ್ಲದಂತೆ ಕಾಡತೊಡಗಿತು. ಸದಾ ಗಜಿಬಿಜಿಯಂತಿದ್ದ ಸಂಡೂರಿನ ಬೀದಿಗಳ ಒಂದೊಂದು ಸೆಕೆಂಡೂ ಕೂಡ ಶತಮಾನಗಳ ಅವಧಿಯಂತೆ ದೀರ್ಘವಾಗತೊಡಗಿತು. ತನ್ನ ಬಡಗಿತನದ ಯಂತ್ರಗಳು ಯಾವಾಗಲಾದರೂ ಕೈ ಕೊಟ್ಟರೆ ತಾನೇ ರಿಪೇರಿ ಮಾಡಿಕೊಳ್ಳುತ್ತಿದ್ದ ಬಡಿಗೇರ ನಾರಣಪ್ಪನಿಗೆ ಈಗೀಗ ತನ್ನ ದೇಹವೂ ಸರಿಯಿಲ್ಲ ಎಂದು ಅನಿಸತೊಡಗಿತು.

ಇದ್ದಕ್ಕಿದ್ದಂತೆ ಅದೊಂದು ದಿನ,ಕೈಯ್ಯಲ್ಲಿ ಹಿಡಿದಿದ್ದ ಕಟ್ಟಿಗೆಯ ರಿಪೀಸೊಂದು ಅಕಸ್ಮಾತ್ತಾಗಿ ಕೈ ತಪ್ಪಿ ಕೆಳಗೆ ಬಿದ್ದುಹೋಯಿತು.ಅಷ್ಟಕ್ಕೇ
"ಅಯ್ಯೋ....ನನ್ನ ಕೈ ದುರಸ್ತಿಗೆ ಬಂದಿದೆ. ಈ ಕೈ ತೆಗೆದು ಬೇರೆಯದನ್ನು ಕೂಡಿಸ್ಕಬಕು"
ಎಂದಿದ್ದನ್ನು ನಾರಣಪ್ಪ ತಮಾಷೆ ಮಾಡಿರಬೇಕು ಎಂದು ಕೇಳಿ ಸುಮ್ಮನಾಗಿದ್ದರು. ಜನ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಟಿಪ್ಪರಿನ ಗಾಲಿಯನ್ನು ಬಿಚ್ಚುವುದು, ಹೊಸ ಗಾಲಿ ಹಾಕುವ ಮೆಕ್ಯಾನಿಕ್, ಡಾಕ್ಟರನಂತೆ ಮತ್ತೆ ಆತ ಹಾಕುವ ಗಾಲಿಯು ಮನುಷ್ಯರ ಕಾಲುಗಳಂತೆಯೂ ತೋರಿದವು. ಅವನ್ನು ನೋಡುತ್ತಾ ಕುಳಿತ ನಾರಣಪ್ಪನ ತಲೆಯಲ್ಲಿ ಏನೇನೋ ವಿಚಾರಗಳು ಓಡಾಡತೊಡಗಿದವು.

ಒಂದು ಕಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಊರೆಂಬೋ ಊರಿನ ತುಂಬಾ ಲಾರಿ, ಟಿಪ್ಪರುಗಳ ಸಾಲು ಸಾಲುಗಳನ್ನು ನೋಡಿದ್ದ ನಾರಣಪ್ಪನಿಗೆ ತಾನೊಂದು ಊಹೆಯ ಲೋಕವೊಂದರಲ್ಲಿ ಸಂಚರಿಸತೊಡಗಿರುವೆನೆಂದು ಅನ್ನಿಸತೊಡಗಿತು. ಮನೆಯಲ್ಲಿ ತಾನು ಯಂತ್ರಗಳಿಂದಲೇ ನಡೆಸಲ್ಪಡಬೇಕು ಎಂದು ಸಣ್ಣ ಮಕ್ಕಳ ಹಾಗೆ ಹಟ ಹಿಡಿಯತೊಡಗಿದ.
ನಾರಣಪ್ಪನ ಈ ಸ್ಥಿತಿ ಕಂಡು, ಹುಲಿ ವೇಷ ಧರಿಸಿ ಈ ಬಾರಿ ಸಕ್ಕತ್ತಾಗಿಯೆ ಕುಣಿಯಬೇಕೆಂದು ಬಣ್ಣದ ಕನಸು ಕಂಡಿದ್ದ ಎಷ್ಟೋ ಹುಡುಗರಿಗೂ ನಾರಣಪ್ಪನ ಮನೋವೈಕಲ್ಯತೆಯಿಂದಾಗಿ ಈ ಬಾರಿ ನಿರಾಸೆಯಾಯಿತು. ಮನೆಯವರು ಸುತ್ತೂರಿನ ದೇವಾನುದೇವತೆಗಳಿಗೆಲ್ಲ ಹರಕೆ ಹೊತ್ತರು. ಊರ ಜನರು"ಹಿರೇ ಮನಷಾಪ....ಪಾಪ ಹಿಂಗಾಗಬಾರದಿತ್ತಪ"ಎಂದು ಲೊಚಗುಟ್ಟಿದರು.

ತೀವ್ರ ದೈಹಿಕ ಸಮಸ್ಯೆಯೇನೂ ಇಲ್ಲವೆಂದು ಬಳ್ಳಾರಿಯ ಡಾಕ್ಟರು ಹೇಳಿದರು. ಆದರೂ "ಒಮ್ಮೆ ಬೆಂಗಳೂರಿನ ನಿಮ್ಹಾನ್ಸ್ ಗೆ ಕರಕೊಂಡು ಹೋಗಿ ಬರ್ರಿ"ಎಂದು ಹೇಳಿದ್ದು ಕೇಳಿ ಮನೆಯವರಿಗೆ ದಿಗಿಲಾಯಿತು.
ಹೀಗಿರುವಾಗ ಅದೊಂದು ದಿನ ನಾರಣಪ್ಪ,ತನಗೆ ಉಸಿರಾಡಲು ಉಪಕರಣ ಹಾಕಿರೆಂದು ಹಠ ಹಿಡಿದು ಕುಳಿತಿದ್ದ. ಮತ್ತೊಂದು ದಿನ, ತನ್ನ ಕಣ್ಣುಗಳಿಗೆ ಏನೋ ಆಗಿದೆ. ಟ್ಯೂಬ್ ಲೈಟು, ಬಲ್ಬು ಫಿಕ್ಸ್ ಮಾಡಿಸಿರೆಂದು ಹೇಳುತ್ತಿದ್ದ. ಮತ್ತೊಂದು ದಿನ ಕಾಲುಗಳಿಗೆ ಗಾಲಿಗಳನ್ನು ಜೋಡಿಸಿರೆಂದು ಹೇಳುತ್ತಿದ್ದ.
ತನಗೆ ಏನೋ ಆಗಿದೆ. ಯಂತ್ರದಂತೆ ತಾನೂ ಕೂಡ ದುರಸ್ತಿಗೆ ಬಂದಿದ್ದೇನೆ ಎಂದು ಆತನಿಗೆ ಅನಿಸುತ್ತಿತ್ತು. ಊಟ ಮಾಡಿ ಎಂದರೂ ಮೊದಲು ಜೀರ್ಣ ಯಂತ್ರವೊಂದಕ್ಕೆ ತನ್ನನ್ನು ಜೋಡಿಸಬೇಕೆಂದು ವಿಚಿತ್ರವಾಗಿ ಗೊಣಗಿಕೊಳ್ಳುತ್ತಿದ್ದ.

ಎಂದೂ ಕೂಡ ಯಂತ್ರ ,ಮೆಶೀನು ಎಂದು ಹೋಗದ ಬಡಿಗೇರ ನಾರಣಪ್ಪನಿಗೆ ಹೀಗೆ ಆಯಿತಲ್ಲ ಎಂದು ಜನ ಮರುಗಿದರು.ಹೀಗೆ ಮರುಗಿದವರ ಪೈಕಿ ಬಹುತೇಕರು ಒಂದು ಕಾಲದ ಒಣ ಬ್ಯಾಸಾಯಗಾರರೆ ಆಗಿದ್ದರು.
ಯಂತ್ರಗಳು,ವಾಹನಗಳು,ಬೃಹತ್ ಗಾತ್ರದ ಕಂಟೇನರುಗಳು,ಮತ್ತು ಮೆಶೀನುಗಳಂತಾಗಿ ಹೋದ ಕೂಲಿಕಾರರನ್ನು ಕಂಡಿದ್ದ ನಾರಣಪ್ಪನಿಗೆ ಸ್ವತಃ ತನ್ನ ದೇಹವೂ ಒಂದು ಯಂತ್ರವಾಗಿರಬಾರದೇಕೆ?ಈ ಪ್ರಾಪಂಚಿಕ ದುಃಖ ದುಮ್ಮಾನ,ನೋವು ನಲಿವುಗಳಿಲ್ಲದ ಯಂತ್ರವಾಗಿರುವುದೇ ಹೆಚ್ಚು ಸುರಕ್ಷಿತವೆಂದು ಆತನಿಗೆ ಅನಿಸತೊಡಗಿತು.

ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿಕೊಂಡು ಬಂದು ಮಲಗಿದವರ ಎದೆಯಲ್ಲಿ ಹೆಂಡತಿ,ಮನೆ,ಮಕ್ಕಳು ಇವರ ಬದಲಾಗಿ ಅದೇ ಗುಡ್ಡದ ಕಲ್ಲು,ಮಣ್ಣು ,ಅದಿರು,ಧೂಳು,ಕೆಂಪು ಕೆಂಪಾದ ಮನುಜರು....ಸಿಗರೇಟು ಹಿಡಿದುಕೊಂಡು ನಿಂತ ಮೇಸ್ತ್ರಿ , ಢರ್ರ..ಬುರ್....ಎಂದು ಓಡಾಡುವ ಲಾರಿ,ಟಿಪ್ಪರುಗಳು ಜೀಪು....ಬರೀ ಇವೆ ಇಂಥವೆ ಕನಸುಗಳು!

ಸಾವಿರಾರು ಟಿಪ್ಪರುಗಳಲ್ಲಿ ತುಂಬಿಕೊಂಡ ಅದಿರು ಎಲ್ಲಿಗೆ ಹೋಗುತ್ತಿದೆ? ಇದರಿಂದೇನು ಪ್ರಯೋಜನ?ಮುಂಜಾನೆಯಿಂದ ರಾತ್ರೀವರೆಗೂ ಮಣ್ಣಾಗ ಕೆಲಸ....ಮಣ್ಣು...ಕೆಲಸ...ಮಣ್ಣು! ಇದ್ಯಾತರ ಜೀವನ ಎಂದು ಎಂದು ತಲೆಕೆಡಿಸಿಕೊಳ್ಳದ ಕೂಲಿಯವನ ಕಣ್ಣಲ್ಲಿ ನಗುವ ಗಾಂಧಿಯ ಗರಿಗರಿ ನೋಟುಗಳಿವೆ.ಎಷ್ಟೋ ರಾತ್ರಿಗಳಲ್ಲಿ ಕಣ್ಣು ಮುಚ್ಚಿದರೆ ಸಾಕು,ಟಿಪ್ಪರುಗಳು ಎದೆ ಮ್ಯಾಲೇ ಓಡಡಿದಂಗಾಗಿ ಮಧ್ಯರಾತ್ರಿಲೆ ಧಿಗ್ಗನೆ ಎದ್ದು ಕುಂದ್ರುತ್ತಿದ್ದ.ಅದೊಂದು ದಿನ,ಇಂಥದೇ ಕನಸೊಂದು ಬಡಿಗೇರ ನಾರಣಪ್ಪನ ತಲೆಯಲ್ಲಿ ಓಡಾಡುತಿರಬೇಕಾದರೆ,ಧುತ್ತನೆ ಸುಂದರ ಪೆಟ್ಟಿಗೆಯೊಂದು ಕಾಣಿಸಿತು.ಅರೇ!...ಈ ಪೆಟ್ಟಿಗೆಯನ್ನು ತಯಾರಿಸಿದ್ದು ನಾನೇ! ನಾನೇ ಮಾಡಿದ್ದು ಇದು!ನೋಡಿ,ಎಷ್ಟೊಂದು ಸುಂದರವಾಗಿದೆ ಮತ್ತು ಗಟ್ಟಿಮುಟ್ಟಾಗಿದೆ ಎಂದು ಹೆಮ್ಮೆಯಿಂದ ಯಾರಿಗಾದರೂ ಹೇಳಿಕೊಳ್ಳಬೇಕೆನಿಸಿತು.
ಅತ್ತಿತ್ತ ನೋಡಿದ.ಹತ್ತಿರದಲ್ಲಿ ಯಾರೂ ಕಾಣಿಸಲಿಲ್ಲ.
ದೂರದಲ್ಲಿ ಯಾರೋ ಪೆಟ್ಟಿಗೆಯನ್ನು ಹೊತ್ತು ನಡೆದಿದ್ದರು.ಕುತೂಹಲದಿಂದ ನಾರಣಪ್ಪ ಹತ್ತಿರ ಹೋಗಲು ಪ್ರಯತ್ನಿಸಿದ.

ಯಾರದ್ದೋ ಹೆಣ!

ಊರವರೆಲ್ಲಾ ಸೇರಿ ಹೊತ್ತು ನಡೆದಿದ್ದಾರೆ!
ಇನ್ನೂ ಹತ್ತಿರ ಹೋಗಿ ನೋಡಿದ
ಏನಾಶ್ಚರ್ಯ!

ಊರಿನದ್ದೇ ಹೆಣ!

ನಾರಣಪ್ಪ ಈಗ ರೋದಿಸುತ್ತಿಲ್ಲ.
ಆದರೆ ದಾರಿಯಲ್ಲಿ ಬಿದ್ದ ವೈರು ತುಂಡು ಯಾವುದೇ ಇರಲಿ. ತಕ್ಷಣ ಎತ್ತಿಟ್ಟುಕೊಳ್ತಾನೆ. ಯಾಕೆಂದರೆ... ಯಂತ್ರದ ಯಾವುದೇ ಅಂಗ ಹಾಳಾದರೆ ಮತ್ತೆ ಅದನ್ನು ಕಿತ್ತು, ಬೇರೆ ಬಿಡಿ ಭಾಗಗಳನ್ನು ಜೋಡಿಸಿಕೊಳ್ಳಲು ಸಾಧ್ಯವೆಂದು ಆತನಿಗನ್ನಿಸುತ್ತಿದೆ. ಅಂದರೆ ತನ್ನ ದೇಹಕ್ಕಿಂತಲೂ ಹೀಗೆ ಯಂತ್ರವಾಗಿರುವುದೇ ಲೇಸು ಎಂದು ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಹೇಳುತ್ತಿದ್ದಾನೆ.

ಮತ್ತೆ...ಸ್ವಲ್ಪ ಹೊತ್ತಿನ ನಂತರ ಬೋಳು ಗುಡ್ಡಗಳ ಕಡೆಗೆ ಮುಖ ಮಾಡಿ ಅಳುತ್ತಾನೆ.

ಕಥಾಗಾರರ ಪರಿಚಯ

ಬಿ.ಶ್ರೀನಿವಾಸ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ನ್ಯೂಕ್ಲಿಯರ್ ಫಿಸಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ದಾವಣಗೆರೆಯ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಮುಖ್ಯ ಆಡಳಿತ ಅಧಿಕಾರಿಯಾಗಿದ್ದಾರೆ. ಕಥೆ ಕವಿತೆ ಅನುವಾದ ಅಂಕಣ ಮುಂತಾದ ಸಾಹಿತ್ಯಿಕ ಬರವಣಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಪುಸ್ತಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.